-ಸೂರಿ
ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 5
ಸೋಮವಾರ. ನಾಗರಾಜರಾಯರು ಹೇಳಿದಂತೆ ಹಳೇಬೀಡು ಸುಂದರರಾಯರು ಮುಂದಿನ ವಾರ ನಾಗಭೂಷಣನನ್ನ ಕಂಡರು. ’ಇನ್ನೂ ಕೇಸು ಫೈಲು ರೆಡೀ ಮಾಡಿಲ್ಲ. ಯಿನ್ನೊಂದೈದಾರು ದಿಸಾ ಆಗ್ತವೆ. ಆಮೇಲೆ ಬರ್ರಿ’ ಅಂದ ನಾಗಭೂಷಣನ ಮಾತಿಗೆ ತಲೆ ಹಾಕಿ ಹಳೇಬೀಡು ಸುಂದರರರಾಯರು ನಾಗಭೂಷಣನಿಗೆ ಬೆನ್ನು ಮಾಡಿದರು.
ನಾಗರಾಜರಾಯರು ಕುಚೋದ್ಯಕ್ಕೆ ಹಾಗೆ ಹೇಳಿದ್ದೋ, ಅಥವಾ ನಾಗರಾಜರಾಯರು ಕೊಟ್ಟಿದ್ದನ್ನು ಈ ನಾಗಭೂಷಣ ಕಸಿದುಕೊಳ್ಳುವ ಹುನ್ನಾರದಲ್ಲಿದ್ದಾನೋ ಎನ್ನುವ ಜಿಜ್ಞಾಸೆಯಲ್ಲಿದ್ದಾಗಲೇ ನಾಗಭೂಷಣನ ಪದಗಳು ಕಿವಿಗೆ ತಾಕಿದವು. ’ರಾಯ್ರೇ, ಕರೀಕೋಟಿದ್ಯಾ?’ ಹಳೇಬೀಡು ಸುಂದರರಾಯರ ಹೆಜ್ಜೆಗಳು ಆಸೆಯಿಂದ, ಯಾವುದೋ ಭರವಸೆಯಿಂದ ಮುಗ್ಗರಿಸಿದವು. ಪಕ್ಕದ ಟೇಬಲ್ಲನ್ನು ಹಿಡಿದು ಸಾವಳಿಸಿಕೊಂಡು ಇತ್ತ ತಿರುಗಿ, ’ಇದೇ’ ಅಂದರು. ’ರೆಡಿ ಮಾಡ್ಕಳಿ. ಮುಂದಿನ ಶನಿವಾರ ಬರ್ರಿ. ಫೈಲು ಕೊಡ್ತೀನಿ. ಮೇಲಿನ ಸೋಮವಾರ ಯಜಮಾನ್ರನ್ನು ನೋಡಿ ಬ್ರೀಫಿಂಗ್ ತಗಳಿ.’
ಅದೆಷ್ಟೋ ವರ್ಷಗಳಿಂದ ಕಿಲುಬು ಹತ್ತಿದ್ದ ಹಳೇಬೀಡು ಸುಂದರರಾಯರ ನಸೀಬಿಗೆ ಇವತ್ತು ‘ಹಳೇಬೀಡು ಸುಂದರರಾಯ‘ ಎನ್ನುವ ಹೆಸರು ನೆನಪಾದಂತಿತ್ತು. ತುಟಿಗಳನ್ನು ಎಡಾಬಲಾ ಹರಿದೇ ಹೋಗುವಷ್ಟು ಅಗಲಿಸಿ ಮುಖದ ತುಂಬಾ ನಗು ಹರಡಿಸಿಕೊಂಡು, ಬಣ್ಣದ ರಂಗೋಲಿ ಬಿಟ್ಟಂತೆ ಮುಖಕ್ಕೆ ಬಣ್ಣ ತಂದುಕೊಂಡು ಹಳೇಬೀಡು ಸುಂದರರಾಯರು ಹೊರಟರು.
ಯಾವ ವೇಗದಲ್ಲಿ ಹೊರಟರೂ ಅಂದರೆ ತಮ್ಮ ಕಾಲುಗಳು ನೆಲಕ್ಕೆ ತಾಗುತ್ತಿವೆಯೋ ಇಲ್ಲವೋ ಎಂದು ತಾವೇ ಅನುಮಾನಕ್ಕೆ ಬಿದ್ದರು. ಇಳಿವ ಹತ್ತು ಮೆಟ್ಟಿಲುಗಳು ಆರಕ್ಕೆ ಇಳಿದಂತಿತ್ತು. ಮೇ ತಿಂಗಳ ಸೋಮವಾರ ಮಧ್ಯಾಹ್ನದ ದಾವಣಗೆರೆಯ ರಣಬಿಸಿಲೂ ಹಳೇಬೀಡು ಸುಂದರರಾಯರ ಪಾಲಿಗೆ ಬೆಳದಿಂಗಳಾಗಿತ್ತು.
ಮನೆ ಮುಟ್ಟಿದವರೇ ಹಳೇಬೀಡು ಸುಂದರರಾಯರು ಎರಡು ಹಾಸಿಗೆ ಸುರುಳಿಗಳ ಕೆಳಗೆ ಗೋಡೆಗೆ ಒತ್ತಿ ಇಟ್ಟಿದ್ದ ಟ್ರಂಕನ್ನು ಎಳೆದು ತೆಗೆದರು. ತೆಗೆದು ಒಳಗಿದ್ದ ಸಕಲವನ್ನೂ ಹೊರಗೆ ತೆಗೆದರು.
ಒಂದೆರಡು ಪ್ಯಾಂಟುಗಳು. ಧೂಳು ಧೂಳಾಗುತ್ತಿದ್ದ ಒಂದೆರಡು ಫೈಲುಗಳು. ಬೂಸಲು ಹತ್ತಿದ್ದ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಡಚಿಟ್ಟಿದ್ದ ಮಾರ್ಕ್ಸ್ ಕಾರ್ಡುಗಳು, ಕುಮುಲೇಟೀವ್ ಸರ್ಟಿಫಿಕೇಟು, ಮತ್ತಿನ್ನಾವುದೋ ಒಂದಿಷ್ಟು ಪೇಪರ್ ಕಸಗಳು.
ಥಣ್ಣಗಾಗಿದ್ದ ಒಂದೆರಡು ಟೆರಿಕಾಟ್ ಶರ್ಟುಗಳು. ಒಂದು ತಗಡಿನ, ಯಾವುದೋ ಬ್ಯಾಂಕಿನ ಹುಂಡಿ (ಹುಂಡಿಯನ್ನು ಅಲ್ಲಾಡಿಸಿ ನೋಡಿದ್ದಕ್ಕೆ, ಆಳದಲ್ಲೆಲ್ಲೋ ಒಂದಿಷ್ಟು ಕಾಸುಗಳ ಲೊಳಲೊಳ ಸದ್ದಾಯಿತು.) ಕೊನೆಗೂ ಆ ಟ್ರಂಕಿನ ಆಳದಲ್ಲಿ, ಪ್ರಜಾಮತದ ಮುಖಪುಟಗಳ ನಡುವೆ ಹುದುಗಿದ್ದ, ಅವರು ಅವಸರದಲ್ಲಿ ಹುಡುಕುತ್ತಿದ್ದ ವಸ್ತು ಕೈಗೆ ಸಿಕ್ಕಿತು. ಹನುಮಂತನಿತ್ತ ಚೂಡಾಮಣಿಯನ್ನು ಸೀತಾದೇವಿ ಯಾವ ಜೋಪಾನದಲ್ಲಿ ಕೈಗೆತ್ತಿಕೊಂಡು ಕಣ್ಣಿಗೊತ್ತಿಕೊಂಡಳೋ ಅದೇ ಜೋಪಾನದಲ್ಲಿ ಹಳೇಬೀಡು ಸುಂದರರಾಯರು ಆ ವಸ್ತುವನ್ನು ತೊಡೆಯ ಮೇಲಿಟ್ಟುಕೊಂಡು, ಹೊದಿಸಿದ್ದ ಪ್ರಜಾಮತದ ಮುಖಪುಟದ ಹಾಳೆಯನ್ನು ನಿಧಾನವಾಗಿ ಸುಲಿದರು.
ಮೊದಲು ಎಡ ಪಕ್ಕದ ಮಡಿಕೆಯನ್ನು ಸುಲಿದರು. ನಂತರ ಬಲದ ಪಕ್ಕ. ನಂತರ ಮೇಲೆ. ಆಮೇಲೆ ಕೆಳಗೆ. ಅಲ್ಲಿತ್ತು ಆ ಕೋಟು. ಕೈಗಳನ್ನೂ, ಮೈಯ್ಯನ್ನೂ ಅರ್ಧ ಹಿಂದೆ ಮಡಿಚಿಕೊಂಡು ಹಳೇಬೀಡು ಸುಂದರರಾಯರ ತೊಡೆಯ ಮೇಲೆ ಮಲಗಿತ್ತು. ಹಗುರಾಗಿ ಅದರ ಮೇಲೆ ಕೈಯ್ಯಾಡಿಸಿದರು. ನೋಡಿದರು. ಅದರ ಪೂರ್ಣ ರೂಪ ನೋಡಲು ರೂಮಿನಲ್ಲಿದ್ದ ಬೆಳಕು ಸಾಲದು ಅನಿಸಿತು. ಜೋಪಾನವಾಗಿ ಅದನ್ನು ಕೈಗೆತ್ತಿಕೊಂಡು ಕಿಟಿಕಿಯ ಪಕ್ಕ ನಡೆದರು.
ಮುಂದುವರೆಯುವುದು…
ಇತ್ತೀಚಿನ ಟಿಪ್ಪಣಿಗಳು