ಇಂದು ವೈದೇಹಿ ಮೆರವಣಿಗೆ..

ಕನ್ನಡದ ಸೂಕ್ಷ್ಮ ಮನಸ್ಸುಗಳಲ್ಲಿ ಮುಖ್ಯರಾದವರು ವೈದೇಹಿ. ಎಂ ಬಿ ಸಿಂಗ್ ರಿಂದಾಗಿ ವೈದೇಹಿ ಎಂದು ಮರು ನಾಮಕರಣಕ್ಕೆ ಒಳಪಟ್ಟ ಈ ಜಾನಕಿ ಕನ್ನಡದ ಹಲವು ಮನಸ್ಸುಗಳನ್ನು ತಮ್ಮ ಬರಹದ ಮೂಲಕ ತಣಿಸಿದ್ದಾರೆ. ವೈದೇಹಿ ಒಳಗೆ ಬೆರಗು ಲೋಕಕ್ಕೆ ಒಡ್ಡಿಕೊಳ್ಳುವ ಒಂದು ಮನಸ್ಸು ಇನ್ನೂ ಇದೆ. ಗಣಿಗಾರಿಕೆ ನಿಲ್ಲಿಸಿ ಎಂದು ಗಟ್ಟಿಯಾಗಿ ಹೇಳುವ ದನಿ ಇದೆ., ವರ್ಷಾನುಗಟ್ಟಲೆ ಬರೆದ ಆತ್ಮ ಕಥೆಗೂ ನಿನಗೂ ಸಂಬಂಧವಿಲ್ಲ ಎನ್ನುವವರ ಜೊತೆ ಕಾದುವ ಮನಸ್ಸಿದೆ. ಗೌರಿ, ಮಂಗಳೆಯೆಂಬ ಗೋವುಗಳ ನಡುವೆ ಜಂಜಾಟಗಳನ್ನು ಇಲ್ಲವಾಗಿಸಿಕೊಳ್ಳುವ ಲೋಕವನ್ನು ಕಟ್ಟಿಕೊಳ್ಳುವುದೂ ಗೊತ್ತಿದೆ.

ಈ ಎಲ್ಲಾ ಕಾರಣಕ್ಕೂ ಹಾಗೂ ನಾಳೆ ರಾಜ್ಯೋತ್ಸವ ಎನ್ನುವ ಕಾರಣಕ್ಕೂ, ನುಡಿಸಿರಿಯ ಮೊದಲ ಮಹಿಳಾ ಅಧ್ಯಕ್ಷರು ಎಂಬ ಕಾರಣಕ್ಕೂ ಹೀಗೆ ಸುಮ್ ಸುಮ್ನೆ ಒಂದಷ್ಟು ನೆಪ ಹಿಡಿದುಕೊಂಡು ವೈದೇಹಿಯ ಮೆರವಣಿಗೆ ನಡೆಸಿದ್ದೇವೆ. ಯಥಾಪ್ರಕಾರ ನಿಮ್ಮ ಓದಿಗಾಗಿ-

ವೈದೇಹಿಗೊಂದು ‘ಅಕ್ಷತಾ’ ಪತ್ರ

ಸ್ವಗತವಾಗಿ ಕಾಡುವ `ಸೌಗಂಧಿ’

ವೈದೇಹಿ,

ನಿಮ್ಮನ್ನು ಹಾಗೆ ಹೆಸರು ಹಿಡಿದು ಕರೆಯೋದೆ ಚೆಂದ. ಮೇಡಂ ಅಂತ ಕರೀಬಹುದೇನೋ ಆದರೆ ವೈದೇಹಿ ಅನ್ನುವಾಗ ಒಂದು ಭಾವ ಸ್ಪುರಿಸುತ್ತದಲ್ಲ ಅದು ನಿಮ್ಮನ್ನು ಮೇಡಂ ಅಂತ ಕರೆದಾಗ ವ್ಯಕ್ತ ಆಗೋದೇ ಇಲ್ಲ. ಕೆಲವು ಹೆಸರುಗಳೇ ಹಾಗೇ ಮುಕ್ಕಾಗಿಸದೇ, ಅರ್ಧ ಮಾಡದೇ ಅಥವಾ ಬೇರೆ ವಿಶೇಷಣ ಏನೂ ಸೇರಿಸದೇ ಕರೆದರೆ ಚೆನ್ನ. ಅಂಥದರ ಪಟ್ಟಿಯಲ್ಲಿ ನಿಮ್ಮ ಹೆಸರೇ ಮೊದಲು ವೈದೇಹಿ.

ನಾನು ಹುಟ್ಟುವ ಮೊದಲೇ ನಿಮ್ಮ ಮೊದಲ ಕಥಾ ಸಂಕಲನ `ಗಿಡ ಮರ ಬಳ್ಳಿ’ ಬಂದಾಗಿತ್ತು. ಸಾಹಿತ್ಯದ ಓದನ್ನು ಸುರು ಮಾಡುವ ಹೊತ್ತಿಗೆ ನೀವು ಕತೆ-ಕವಿತೆ-ನಾಟಕ ಎಲ್ಲ ಪ್ರಕಾರದಲ್ಲೂ ಬರೆದು ಹೆಸರು ಮಾಡಿದ್ದಿರಿ. ನೀನಾಸಂನಲ್ಲಿ ನಿಮ್ಮನ್ನು ಮೊದಲು ಕಂಡಾಗ ನಾನು ಎರಡನೇ ಬಿಎ ಓದುತ್ತಿದ್ದೆ ಜೊತೆಗೆ ಕವಿ- ಕತೆಗಾರರೆಂದರೆ ನಮ್ಮಂಥವರು ನೋಡಲು ಸಾಧ್ಯವೇ ಇಲ್ಲದವರು. ಅವರೇನಿದ್ದರೂ ಪತ್ರಿಕೆ ಪುಸ್ತಕಗಳಲ್ಲಿ ಫೋಟೊ ಮೂಲಕವೇ ಕಾಣಿಸಿಕೊಳ್ಳುವಂಥವರು ಎಂಬ ನನ್ನ ಕಲ್ಪನೆ ನಿಧಾನಕ್ಕೆ ದೂರವಾಗುತ್ತಿದ್ದ ಹೊತ್ತದು.

ಅದಾಗಲೇ ನಿಮ್ಮ ಮೊದಲ ಕಥಾ ಸಂಕಲನವೂ ಸೇರಿದಂತೆ ಅಂತರಂಗದ ಪುಟಗಳು, ಗೋಲ ಸಂಕಲನಗಳನ್ನು ಮತ್ತು ಲಂಕೇಶ್ ಪತ್ರಿಕೆಯಲ್ಲಿ ಜಾತ್ರೆ ಕುರಿತ ಲೇಖನಗಳನ್ನು ಓದಿದ್ದೆ. ನಿಮ್ಮ `ಅಡುಗೆ ಮನೆಯ ಹುಡುಗಿ’ ನಮಗೆ ಪಿಯುಸಿಯಲ್ಲಿ ಪಠ್ಯವಾಗಿತ್ತು. `ಮುರಿಯುತ್ತ ಮೆಣಸಿನ ಚೊಟ್ಟು ಆಕಾಶದ ಸದ್ದಿಗೆ ಕಿವಿಯ ತೆರೆದಿಟ್ಟು ಕಳೆಯುವಳು ಆಯುಷ್ಯ ಷಂಚಿ ಬೊಟ್ಟುಬೊಟ್ಟು’ ಅನ್ನುವ ಕೊನೆಯ ಸಾಲುಗಳಂತೂ ಸೈಯೇ ಸೈ ಅವು ಸೇರಿದಂತೆ ಇಡೀ ಪದ್ಯವೇ ಬಾಯಿ ಪಾಠವಾಗಿ ಹೋಗಿತ್ತು. ಆ ಪದ್ಯವನ್ನು ಹಲವು ಸಾರಿ ಹೇಳಿಕೊಂಡೆವು.

ಅದು ನಮ್ಮದೇ ಸ್ಥಿತಿ ಅಂತ ಮನದಟ್ಟಾಗಿತ್ತಾದರೂ ಅಡುಗೆ ಮನೆ ಹುಡುಗಿಯ ದುಸ್ಥಿತಿಗೆ ನಾವು ಮರುಗಿದೆವು. ಅವಳ ನೋವಿಗೆ ನಾವು ಕರಗಿದೆವು. ಅಂಥದೊಂದು ಪದ್ಯ ಬರೆದ ನಿಮ್ಮನ್ನು ನೀನಾಸಂನಲ್ಲಿ ನೋಡಿ ಕಣ್ತುಂಬಿಕೊಂಡೆ.

ಮೂರು ವರ್ಷದ ಹಿಂದೆ ಆಶಾದೇವಿ ಮೇಡಂ ಕರೆದು ವೈದೇಹಿ ನಾಳೆ ಶಿವಮೊಗ್ಗಕ್ಕೆ ಬರ್ತಾ ಇದ್ದಾರೆ. ನಾನು ಇರೋದಿಲ್ಲ. ಅವರಿಗೆ ಇಲ್ಲಿ ಏನೋ ಕೆಲ್ಸ ಇದೆಯಂತೆ ನೀನು ಅವರ ಜೊತೆ ಹೋಗಿ ಬಾ ಅಂದ್ರು. ಮರುದಿನ ನಾನು ಕುವೆಂಪು ರಂಗಮಂದಿರಕ್ಕೆ ನಿಮ್ಮನ್ನು ಕಾಣಲು ಹೋದೆ. ನೀವು ನಗೆಮೊಗದಲ್ಲೇ ರಂಗ ಮಂದಿರದ ಬಾಗಿಲ ಬಳಿ ಎದಿರಾದಿರಿ.  ನಾವಿಬ್ಬರೂ ನೆಹರೂ ರಸ್ತೆಯಲ್ಲಿ  ನಡೆದೇ ಹೊರಟೆವು. ನೀವು ಪ್ರತಿಯೊಂದು ಅಂಗಡಿ-ಮುಂಗಟ್ಟುಗಳನ್ನು ಕಣ್ಣಲ್ಲಿ ತುಂಬಿಸಿಕೊಂಡು ನಡೆಯುತ್ತಿದ್ದಿರಿ. ಶಿವಮೊಗ್ಗೆಯ ಸೊಸೆ ನೀವು… ಇದೆಲ್ಲ ನಾನು ನಡೆದಾಡಿದ ರಸ್ತೆಯೇ, ದುರ್ಗಿ ಗುಡಿಗೆ ಏನಾರೂ ಬೇಕಂದ್ರೆ ನಾವು ಬರ್ತಾ ಇದ್ದದ್ದು ಎಂದು ಸಂಭ್ರಮಿಸಿದಿರಿ.

ಒತ್ತಾಯದಿಂದ ನಿಮ್ಮ ಗೆಳತಿಯ ಮನೆಗೆ `ನಿನಗೊಬ್ಬ ಅಪೂರ್ವ ಸುಂದರಿಯನ್ನು ತೋರಿಸ್ತೇನೆ ಬಾ ‘ಅಂತ್ಹೇಳಿ ಕರೆದುಕೊಂಡು ಹೋದ್ರಿ. ಒಳಗೊಂಚೂರು ಗುಮಾನೀನೂ ಇಟ್ಕಳದೇ ಎಷ್ಟು ಸರಳ-ಸುಲಲಿತವಾಗಿ ಪದ-ವಾಕ್ಯಗಳನ್ನು ಕಟ್ಟೋಕೆ ಸಾಧ್ಯವಾಗತ್ತೆ ವೈದೇಹಿ ನಿಮಗೆ!.

ಬಂಗಲೆ ಮನೆ, ಚೆಂದದ ಕೈತೋಟ, ಮನೆಯೊಳಗೆ ನೀಟಾಗಿ ಜೋಡಿಸಿದ ಪೀಠೋಪಕರಣಗಳು ಎಲ್ಲದರ ನಡುವೆ ನಿಮ್ಮ ಗೆಳತಿಯಿದ್ದರು. ಮಕ್ಕಳು ವಿದೇಶದಲ್ಲಿದ್ದಾರೆ. ಗಂಡ ದೊಡ್ಡ ಉದ್ಯಮಿ, ಹೆಚ್ಚಾಗಿ ಕೆಲಸದ ನಿಮಿತ್ತ ಬೆಂಗಳೂರಿನಲ್ಲೆ ಇರುತ್ತಾರೆ ಎಂದರು. ನೀವು ಹೇಳಿದ ಹಾಗೆ ಆಕೆ ನಿಜಕ್ಕೂ ಸುಂದರಿಯಾಗಿದ್ದರು ಮತ್ತು ಅಂಥ ಏಕಾಕಿತನವನ್ನೂ ಅವರು ಗಾಢವಾದ ನಿರ್ಲಿಪ್ತತೆಯಿಂದ ಸಂಭಾಳಿಸುತ್ತಿರುವಂತೆ ಕಂಡಿತು. `ನಡೆದಾಡುವ ಕಾವ್ಯ’ ಎಂದು ಅವರನ್ನು ನೀವು ಬಣ್ಣಿಸಿದ್ದು ಅರ್ಥಪೂರ್ಣವಾಗಿತ್ತು. ಅವರ ಹೆಸರು ಸುಮಿತ್ರಾ.  ನಿರ್ಲಿಪ್ತತೆಗೆ ಇನ್ನೊಂದು ಹೆಸರೇ ಸುಮಿತ್ರೆ… ಆ ನಿಮ್ಮ ಗೆಳತಿ ಸುಮಿತ್ರಾ ನನಗೆ ನಿಮ್ಮ ಯಾವುದೇ ಕತೆಯ ಪಾತ್ರದಂತೆ ತೋರಲಿಲ್ಲ. ಬದಲಿಗೆ ರಬೀಂದ್ರ ನಾಥ ಟಾಗೋರರ ಗಾಢ ವಿಷಾಧವೇ ಮೈವೆತ್ತಿದಂತ (ಅಂಥ ವಿಷಾದದಲ್ಲೂ ಆಕೆಯ ವ್ಯಕ್ತಿತ್ವವಿರಲಿ, ಸೌಂದರ್ಯ ಕೂಡ ಚೂರೂ ಮಸುಕಾಗದಂಥ) ನಾಯಿಕೆಯರಂತೆ ಕಂಡರು. ಆದರೆ ನನ್ನನ್ನು ಮಧ್ಯೆ ಕೂರಿಸಿಕೊಂಡು ಅಕ್ಕ ಪಕ್ಕ ಕೂತು ಒತ್ತಾಯ ಮಾಡುತ್ತಾ ಸೇವಿಗೆ ಬಾತ್ ಕೊಟ್ಟು ಉಪಚರಿಸುವ ಹೊತ್ತಿನಲ್ಲಿ ಮಾತ್ರ ನೀವಿಬ್ಬರೂ ಗೆಳತಿಯರು ಒಂದೆ ಆಗಿ ಕಾಣುತ್ತಿದ್ದಿರಿ.

More

ವೈದೇಹಿ ಯಾಕೆ ಆಪ್ತರಾಗುತ್ತಾರೆ..?

ವೈದೇಹಿ ಯಾಕೆ ಆಪ್ತರಾಗುತ್ತಾರೆ ಎಂದು ಒರೆಗೆ ಹಚ್ಚುವ ಲೇಖನ ಇಲ್ಲಿದೆ.

ವೈದೇಹಿ ಕಥೆಗಳನ್ನು ಇಂಗ್ಲಿಷ್ ಅಂಗಳಕ್ಕೆ ನಡೆಸಿಕೊಂಡು ಹೋಗಿರುವ ಬಾಗೇಶ್ರೀ ಬರೆದಿದ್ದಾರೆ. ಓದಿ-

ವೈದೇಹಿಗೆ ಪ್ರಶಸ್ತಿ ಸಿಕ್ಕ ಸುದ್ದಿ ಕೇಳಿ ತುಂಬಾ ಖುಶಿ. ಅವರು ನಮ್ಮೂರವರು ಅಂತ ಸ್ವಲ್ಪ extra ಖುಶಿ. ಅವರ best ಕಥೆಗಳಲ್ಲಿ ಗಾಢವಾಗಿರುವುದು ದ.ಕ.ದ ಮಣ್ಣಿನ ವಾಸನೆಯೇ ಆದರೂ ಅವರು ಸುಮಾರು ವರ್ಷ ಶಿವಮೊಗ್ಗದಲ್ಲಿ  ಇದ್ದದ್ದರಿಂದ ನಮ್ಮೂರವರು ಅಂತಲೂ ಅಂದುಕೊಂಡರೆ factually incorrect ಅಂತೂ ಅಲ್ಲ. (ಈಗ ನಾವು ಸುನಿತಾ ವಿಲಿಯಮ್ಸ್ ನಮ್ಮ ದೇಶದವಳು ಅಂತ ಜಂಬ ಪಟ್ಟುಕೊಳ್ಳುವುದಿಲ್ಲವಾ, ಹಾಗೆ!)

ಮುಂಚಿನಿಂದಲೂ ವೈದೇಹಿ ಕತೆಗಳ ಬಗ್ಗೆ ನನಗೆ ವಿಶೇಷ ಆಕರ್ಷಣೆ. ಮ್ಯಾಗಜೀನುಗಳ ದೀಪಾವಳಿ, ಯುಗಾದಿ ವಿಶೇಷಾಂಕಗಳಲ್ಲಿ, ಲಂಕೇಶ್ ಪತ್ರಿಕೆಯಲ್ಲಿ ಪ್ರಕಟ ಆಗುತ್ತಿದ್ದ ಕತೆಗಳನ್ನು ಕಾದು ಓದುತ್ತಿದ್ದೆ. ಪ್ರತಿ ಓದುಗನಿ/ಳಿಗೂ ಇಷ್ಟ ಅನ್ನಿಸುವ ಹತ್ತಿಪ್ಪತ್ತು ಬರಹಗಾರರಿರಬಹುದು. ಆದರೆ ತುಂಬ ಆಪ್ತ ಅನ್ನಿಸುವ, ಮನಸ್ಸನ್ನು ತಟ್ಟುವ ಅಥವಾ ‘ವಾವ್’ ಅನ್ನಿಸಿ ಮೈ ನಿಮಿರೇಳಿಸುವ ಬರಹಗಾರರು ಕೆಲವರೇ. ನನ್ನ ಮಟ್ಟಿಗೆ ವೈದೇಹಿ ಆಪ್ತ ಅನ್ನಿಸುವ categoryಗೆ ಸೇರಿದವರು. ನೆರುಡಾನ “I want to do with you what spring does with the cherry trees” ಥರದ ಸಾಲುಗಳು, ಜಯಂತ್ ಕಾಯ್ಕಿಣಿಯ ಗದ್ಯದ ಕೆಲ ಪದ್ಯದಂತ turns of phrase, ದೇವನೂರರ magical ಅನ್ನಿಸುವ ಭಾಷೆಯ ಓಘ  ‘ವಾವ್’ ಅನ್ನಿಸುವ categoryಯವು.

ಹೀಗೆ ಕೆಲವರು ಮಾತ್ರ ಯಾಕೆ ಆಪ್ತ ಆಗುತ್ತಾರೆ ಅಥವ ಯಾಕೆ ನಮ್ಮಲ್ಲಿ ‘ವಾವ್’ ಅನ್ನುವ ಉದ್ಗಾರ ಹುಟ್ಟಿಸುತ್ತಾರೆ? ಈ ಬಗೆಯ ಜಿಜ್ನಾಸೆಯೇ ಒಂದು ಅರ್ಥದಲ್ಲಿ  ಆಪ್ತತೆ ಅನ್ನುವ conceptಗೆ, ಮೈ ನಿಮಿರೇಳುವ ಅನುಭವಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಹೊರಡುವ ಪಯಣ ಅನ್ನಿಸಬಹುದು. ಆದರೆ “ಇಷ್ಟ “, “ಆಪ್ತ” ಹೀಗೆ ಸುಮ್ಮ ಸುಮ್ಮನೆ ಒಂದೊಂದು ಪದಗಳನ್ನು ಹಾಗೆ ಒಗೆದು ಸುಮ್ಮನಿದ್ದುಬಿಡುವುದು ಪದ್ಯ, ಗದ್ಯ ಯಾವುದನ್ನೂ ಬಗೆವ ಬಗೆಯೇ ಅಲ್ಲ ಅಂತ ಮೊದಲ ಸಾಹಿತ್ಯದ ಪಾಠ ಹೇಳಿಕೊಟ್ಟ ನಮ್ಮ ಮನು ಚಕ್ರವರ್ತಿ ಮೇಷ್ಟ್ರನ್ನು ನೆನೆದು ವೈದೇಹಿ ಯಾಕೆ ನನಗೆ ಆಪ್ತ ಅನ್ನುವ ಪ್ರಶ್ನೆಯನ್ನು ಬಹಳ belated ಆಗಿ ಕೇಳಿಕೊಳ್ಳುತ್ತಿದ್ದೇನೆ.

ಪೂರ್ಣ ಓದಿಗೆ : ಬಾಗೇಶ್ರೀ

ವೈದೇಹಿಯ ಹಲವು ಮುಖಗಳು

ಪುಸ್ತಕದೊಡನೆ ಆಡುತ್ತಲೇ ಬೆಳೆದ ರಂಗನಾಥನ್ ಕಟ್ಟಿದ ಪ್ರೀತಿಯ ಸಂಸ್ಥೆ ಪ್ರೀಮಿಯರ್ ಬುಕ್ಸ್ ಕಂಪನಿ

ಪ್ರಿಸಂ ನಲ್ಲಿದ್ದು ನಂತರ ತಮ್ಮದೇ ‘ನುಡಿ ಪುಸ್ತಕ’ ಎಂಬ ಪ್ರಕಾಶನ ಕಟ್ಟಿದವರು ರಂಗನಾಥನ್.  ಅದರ ವತಿಯಿಂದ ವೈದೇಹಿ ವಾಚಿಕೆಯನ್ನು ಹೊರತಂದಿದ್ದಾರೆ. ಟಿ  ಪಿ ಅಶೋಕ್ ಸದಭಿರುಚಿಯ ಈ ವಾಚಿಕೆಯನ್ನು ರೂಪಿಸಿಕೊಟ್ಟಿದ್ದಾರೆ.

ಈ ವಾಚಿಕೆಯ ಬಿಡುಗಡೆ ಹಾಗೂ ಸಂವಾದಕ್ಕೆ ಬಂದಿದ್ದ ನಮ್ಮ ಪ್ರೀತಿಯ ಲೇಖಕಿ ವೈದೇಹಿ ಅವರ ಹಲವು ಮುಖಗಳು ಇಲ್ಲಿವೆ .

ಚಿತ್ರಗಳು: ಡಿ ಸಿ ನಾಗೇಶ್

ವೈದೇಹಿ: ಬಹುಮುಖಿ ಭಯದ ಸುತ್ತ…

ವೈದೇಹಿ ಅಂದರೆ ಥೇಟ್ ಅವರ ಕಥೆಗಳಿದ್ದಂತೆ. ನೇರ, ಸರಳ, ಅಷ್ಟೇ ನಿಗೂಢ. ಹೆಣ್ಣಿನ ಸಂಕಟ, ತುಮುಲ, ದ್ವಂದ್ವಗಳನ್ನು ಅವರು ಕಥೆಯಲ್ಲಿ ಎಷ್ಟು ಆಳವಾಗಿ ಹೇಳುತ್ತಾರೋ ಮಾತನಾಡುವಾಗಲೂ ಆ ನೋವನ್ನು ಅಷ್ಟೇ ಢಾಳಾಗಿ ಹೊರಗೆಡವುತ್ತಾರೆ.

ವೈದೇಹಿಯವರ ‘ಇರುವಂತಿಗೆ’ಯೊಳಗೆ The Sunday Indian( ಟಿಎಸ್‌ಐ ) ಪ್ರವೇಶಿಸಿದಾಗ ಕರಾವಳಿಯ ಸುಡುವ ಧಗೆ. ಆದರೆ ವೈದೇಹಿ ಹರಟಲು ಆರಂಭಿಸಿದಾಗ ಧಗೆ ಮಾಯವಾಗಿ ಆತ್ಮೀಯತೆಯ ತಂಪು ಹರಡಿತು. ಇಲ್ಲಿ ವೈದೇಹಿ ತಮ್ಮ ಅನುಭವಕ್ಕೆ ಬಂದ ಭಯದ ವಿವಿಧ ಮುಖ ಅನಾವರಣಗೊಳಿಸಿದ್ದಾರೆ.

ಡಿ.ಎಸ್. ಶ್ರೀಕಲಾ

ಬಹಳ ಹಿಂದಿನ ಮಾತು. ನಮ್ಮ ಹತ್ತಿರದ ಬಂಧು ಒಬ್ಬರಿಗೆ ಚಿಕ್ಕಂದಿನಲ್ಲಿ ಕಾಯಿಲೆ ಆಗಿ ಮೆದುಳಿನ ಚುರುಕುತನ ಹೋಗಿಬಿಟ್ಟಿತ್ತು. ಮದುವೆ ಆದರೂ ದಾಂಪತ್ಯ ಸರಿ ಬರದೆ ಪತಿ ಇನ್ನೊಂದು ಮದುವೆ ಆದ. ಇನ್ನೊಂದು ಮದುವೆ ಆದರೂ ಮೊದಲಿನವಳನ್ನು ಬಿಟ್ಟು ಹಾಕಲಿಲ್ಲ. ಅವಳು ಸ್ವಲ್ಪ ಕಾಲ ಗಂಡನ ಮನೆಯಲ್ಲಿ, ಸ್ವಲ್ಪ ಕಾಲ ತಾಯಿಯ ಮನೆಯಲ್ಲಿ ಕಳೆಯುತ್ತ ಇಡೀ ಜೀವನ ಸವೆಸಿ ಹೊರಟು ಹೋದಳು. ನನಗೆ ಸದಾಕಾಲ ನೆನಪಿರೋದು ಅವಳಲ್ಲಿನ ಭಯ. ಕತ್ತಲೆಯ ಭಯ, ಮೆಟ್ಟಿಲಿಳಿಯಲು ಹತ್ತಲು ಭಯ, ತನ್ನ ಸಂಗಡ ಯಾರೂ ಇಲ್ಲವಾದರೆ ಭಯ, ತನ್ನಿಂದ ಯಾವ ಕೆಲಸ ಮಾಡಲೂ ಆಗದೆಂಬ ಭಯ. ಒಟ್ಟಾರೆ ಯಾವುದಕ್ಕೂ ಮೊದಲು ಅವಳಿಗೆ ಅಡ್ಡ ಬರುತ್ತಿದ್ದುದು ಏನೋ ಒಂದು ಬಗೆಯ ಭಯ. ಕೊನೆ ತನಕವೂ ಅದು ಅವಳನ್ನು ಬಿಟ್ಟು ಹೋಗಲಿಲ್ಲ.

ಈ ಭಯ ಹೇಗಿತ್ತೆಂದರೆ ನಿತ್ಯದ ಬದುಕಿನ ಒತ್ತಡದಲ್ಲಿ ಮುಳುಗಿಕೊಂಡಿರುವವರಿಗೆ ಬೇಕೆಂದೆ ಅವಳು ಭಯ ನಟಿಸುತ್ತಾಳೋ ಅಂತ ಅನಿಸುವ ಹಾಗೆ. ಅವಳು ಹೊಕ್ಕು ಹೊರಡುವ ಮನೆಯವರಿಗೆ ಅವಳು ಬರುತ್ತಾಳೆ ಎಂದರೆ ಅವಳಿಗೆ ಬೇಸರ ಮಾಡಿಸದೆ, ಮನೆಮಂದಿಗೂ ಕಿರಿಕಿರಿಯಾಗದಂತೆ ಅಷ್ಟು ದಿನಗಳನ್ನು ನಿಭಾಯಿಸೋದು ಹೇಗೆ, ತಮ್ಮಿಂದಾದೀತೆ ಅದು ಎಂಬ ದೊಡ್ಡ ಭಯಾತಂಕ ಆವರಿಸುತಿತ್ತು. ಎಂದರೆ ಒಂದು ಭಯದಿಂದ ಉತ್ಪಾದಿತವಾದ ಇನ್ನೊಂದು ಬಗೆಯ ಭಯ ಅದು. ಅವಳ ಕಡೆಗೆ ತಮ್ಮ ವರ್ತನೆ ಹೇಗೆ ತಿರುಗೀತೆಂದು ತಮಗೇ ತಿಳಿಯಲಾರದೆ ಆವರಿಸುವ ಅವ್ಯಕ್ತ ಭಯ. ಎಷ್ಟೋ ಸಲ ಅವಳು ನಟಿಸುತ್ತಿದ್ದಾಳೋ, ಸಹಾನುಭೂತಿಗಾಗಿ ಹಪಹಪಿಸುತ್ತಾಳೊ ಅಂತ ಚರ್ಚೆಯಾಗಿದ್ದಿದೆ, ಭಯದ ನೆಪದಲ್ಲಿ ಉಂಟುಮಾಡುವ ಕಿರಿಕಿರಿಗಳ ಸುಖ-ದುಃಖ ವಿನಿಮಯವಾಗಿದ್ದಿದೆ. ಅದೊಂದು ನಗೆಯ ವಿಷಯವಾಗಿಯೂ ವಿಷಾದದ ವಿಷಯವಾಗಿಯೂ ಅವಳ ಕಾಲಾನಂತರವೂ ಸಸೆಯಲ್ಪಡುತ್ತಿದೆ. ಮನುಷ್ಯನ ದೈನಂದಿನ ಬದುಕು ಎಷ್ಟು ಕಠಿಣವಾಗಿರುತ್ತದೆ!

ಇನ್ನೊಬ್ಬರನ್ನು ಒಂದು ಮಿತಿಗಿಂತ ಹೆಚ್ಚು ಹೊತ್ತು ತಾಳಿಕೊಳ್ಳಲು ಎಡೆ ಕೊಡದೆ, ಅದಕ್ಕೆ ಬೇಕಾಗುವ ಮಾನಸಿಕ ವ್ಯವಧಾನವನ್ನೂ ನೀಡದೆ ಇರುವ ಬದುಕಿನ ಇಕ್ಕಟ್ಟಿನಿಂದಾಗಿಯೇ ವ್ಯಕ್ತಿಯ ಗುಣಕ್ಕೆ ವಿವಿಧ ಬಣ್ಣ ಬರುತ್ತದಷ್ಟೆ. ಯಾರಿಗೂ ಯಾವುದಕ್ಕೂ ವ್ಯಕ್ತಿಜೀವನದಲ್ಲಿ ಒಂದು ಅಗೋಚರವಾದ ನಿಗದಿತ ಗೆರೆಮೀರಿ ಜಾಗವೇ ಇಲ್ಲ. ತಂತಮ್ಮ ಬದುಕಿನ ಒಳಗೆ ಹೋದಂತೆಲ್ಲ ಅವಳಂಥ ಅಸಹಜ ವ್ಯಕ್ತಿತ್ವಗಳನ್ನು ಬಿಡಿ, ಸಹಜ ವ್ಯಕ್ತಿಗಳನ್ನೂ ನಿಭಾಯಿಸುವ ಧೈರ್ಯ ಕುಸಿಯುತ್ತ ಹೋಗುವ ಕ್ರಮವೇ ವಿಚಿತ್ರ ಅಲ್ಲವೆ. ಅಂಥ ಭಯದ ಆಕೆ ತನ್ನನ್ನು ಬೇಕೆಂದೇ ಕೆಣಕಲು ಬಂದವರಿಗೆ ಅವರು ಹಿರಿಯರಾಗಲೀ, ಗಂಡಸರೇ ಆಗಲೀ ಯಾವ ಭಯವಿಲ್ಲದೆ ವಾಚಾಮಗೋಚರ ಬಯ್ಯುತಿದ್ದಳು, ನಿರ್ಭಯವಾಗಿ!

More

ಕಿರುಚ ಬ್ಯಾಡ್ರಿ ಭಾವನ !:-) ವೀಕ್ಷಕರು ಹೆದರಿ ಕೊಳ್ತಾರೆ :-)

ಈಟೀವಿಯಲ್ಲಿ  ನಿರೂಪಕ ರಮೇಶ್  ಸಹ  ಅತ್ಯುತ್ತಮ  ರೀತಿಯ ನಿರೂಪಣೆ ನೀಡುತ್ತಿದ್ದಾರೆ.  ಭಾವನ ಈಗ ಉದಯ ವಾಹಿನಿಯಲ್ಲಿ ತಮ್ಮ ಛಾಪು ತೋರಿಸಲು ಪ್ರಯತ್ನ ಪಡ್ತಾ ಇದ್ದಾರೆ,ಆದರೆ ಅದ್ಯಾಕೋ ಆ ನಿರೂಪಕಿ ಕೂಗಾಟಕ್ಕೆ-ಕಿರುಚಾಟಕ್ಕೆ ಆದ್ಯತೆ ಕೊಡ್ತಾ ಇರ್ತಾರೆ. ನಿರೂಪಕಿ ಹಾಗೆಲ್ಲ ಕಿರುಚಾಡ  ಬಾರದು ಭಾವನ. ಬಂದ ಸ್ಪರ್ಧಿಗಳು ಬದಲಾಗ್ತಾ ಇರ್ತಾರೆ ಆದರೆ ನಿರೂಪಕರು ಮಾತ್ರ ಒಬ್ಬರೇ ಇರ್ತಾರೆ, ಕೆಲವು ಸಂದರ್ಭಗಳಲ್ಲಿ ಹೊರೆತು ಪಡಿಸಿ! ಕಿರುಚ ಬ್ಯಾಡ್ರಿ ಭಾವನ !:-)  ವೀಕ್ಷಕರು ಹೆದರಿ ಕೊಳ್ತಾರೆ 🙂

ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್

ಮಣಿಕಾಂತ್ ಬರೆಯುತ್ತಾರೆ: ಕರಿಹೈದನೆಂಬೋರು ಮಾದೇಶ್ವರಾ…

ಮಾದೇಶ್ವರನ ಹಾಡಲ್ಲಿ ಮೂವರು ಸಂಗೀತ ನಿರ್ದೇಶಕರ ದನಿಯಿದೆ

ಕರಿಹೈದನೆಂಬೋರು ಮಾದೇಶ್ವರಾ…

ಚಿತ್ರ: ಕಾಕನ ಕೋಟೆ. ಗೀತೆರಚನೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್

ಸಂಗೀತ: ಅಶ್ವತ್ಥ್-ವೈದಿ.  ಗಾಯನ: ಬಿ.ವಿ. ಕಾರಂತ.

ಕೋರಸ್: ಜಿ.ಕೆ. ವೆಂಕಟೇಶ್, ಸಿ. ಅಶ್ವತ್ಥ್

ಕರಿಹೈದನೆಂಬೋರು ಮಾದೇಶ್ವರಾ

ಮಾದೇಶ್ವರಗೇ ಶರಣು ಮಾದೇಶ್ವರ

ಮಾದೇಶ್ವರಗೇ ಶರಣು ಮಾದೇಶ್ವರ

ಮಾದೇಶ್ವರ ಗೇ ಶರಣು ಮಾದೇಶ್ವರ ||ಪ||

ಕರಿಹೈದನವ್ವನಾ ಹೆಸರೆಂದು ನಿಲ್ಲಲಿ

ಅವನ ಬಳಿ ಎಂದೆಂದು ಒಳ್ಳಿದನು ಮೆಲ್ಲಲಿ

ಅವನ ಹೆತ್ತಾ ಕಾಡು ಎಂದೆಂದೂ ಚಿಗುರಲಿ ||೧||

ಅವನ ಬಳಿ ಎಂದೆಂದು ಮಿಕ್ಕಿರಲಿ ಹೊಗರಲಿ

ಅವನ ಹಾಡಿಗಳಿರಲಿ ಎಂದೆಂದು ಸೊಗದಲಿ

ಅವನ ಬಳಿಗೆಂದೆಂದು ನಗೆಯಿರಲಿ ಮೊಗದಲಿ ||೨||

ಅವನ ಹೊಗಳುವ ಹಾಡು ಎಂದೆಂದು ಹಾಡಲಿ

ಅವನ ಬಳಿ ಎಂದೆಂದು ಹಬ್ಬವನು ಮಾಡಲಿ

ಕರಿಹೈದ ನಪ್ಪಾಜಿ ಮಾದೇಶ್ವರಾ

ಮಾದೇಶ್ವರಗೆ ಶರಣು ಮಾದೇಶ್ವರಾ ||೩||

ಮೊದಲು ನಾಟಕವಾಗಿ ಜನಮನ್ನಣೆಗಳಿಸಿ, ನಂತರ ಚಲನ ಚಿತ್ರವಾಗಿಯೂ ಯಶಸ್ವಿಯಾದ ಸಿನಿಮಾಗಳ ಪಟ್ಟಿ ದೊಡ್ಡದಿದೆ. ‘ವಸಂತಸೇನಾ’ ‘ಭಕ್ತ ಪ್ರಹ್ಲಾದ’  ‘ಸದಾ ರಮೆ’ ಸಂಪತ್ತಿಗೆ ಸವಾಲ್…’ ಇವೆಲ್ಲ ಮೊದಲು ರಂಗಭೂಮಿಯಲ್ಲಿ ಮಿಂಚಿ ನಂತರವೇ ಬೆಳ್ಳಿ ತೆರೆಯ ಮೇಲೂ ಬೆಳಗಿದ ಸಿನಿಮಾಗಳು. ಈ ಸಾಲಿಗೆ ಸೇರುವ ಇನ್ನೊಂದು ಸಿನಿಮಾ – ಕಾಕನ ಕೋಟೆ.

ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನಲ್ಲಿರುವ ಒಂದು ಸ್ಥಳ ಕಾಕನ ಕೋಟೆ. ಅದು ಮಲೆನಾಡು ಪ್ರದೇಶ. ಅದರ ಸುತ್ತಮುತ್ತಲ ಪ್ರದೇಶವನ್ನು ಕಾಕನಕೋಟೆ ಕಾಡು ಎಂದು ಕರೆಯು ತ್ತಾರೆ. ದಶಕಗಳಿಗೂ ಹಿಂದೆ ಅಲ್ಲಿ ಹೆಚ್ಚಾಗಿ ಕಾಡು ಕುರುಬರೇ ವಾಸಿಸುತ್ತಿದ್ದರಂತೆ.

ಈ ಜನ ಆಗ ಹೆಗ್ಗಡದೇವನ ಕೋಟೆಯಲ್ಲಿದ್ದ ಹೆಗ್ಗಡೆಯವರಿಗೆ ಕಪ್ಪ ಕೊಡಬೇಕಿತ್ತಂತೆ. ಅದೊಮ್ಮೆ ಕಪ್ಪ ಸಲ್ಲಿಕೆಯ ವಿಚಾರವಾಗಿಯೇ ಕಾಡು ಕುರುಬರ ನಾಯಕ ಕಾಕ ಎಂಬಾತನಿಗೂ ಹೆಗ್ಗಡೆಯವರಿಗೂ ವೈಮನಸ್ಸು ಉಂಟಾಯಿತಂತೆ. ಆ ಸಂದರ್ಭದಲ್ಲಿ ಮೈಸೂರನ್ನು ಆಳುತ್ತಿದ್ದ ದೊರೆ ರಣರ ಕಂಠೀರವ ನರಸರಾಜ ಒಡೆಯರ್. ಒಂದು ಆಕಸ್ಮಿಕ ಸಂದರ್ಭದಲ್ಲಿ  ಮಹಾರಾಜರ ಪ್ರಾಣ ಉಳಿಸುವ ಮೂಲಕ ಅವರ ಒಲವುಗಳಿಸಿದ್ದ ಕಾಕ, ಮಹಾರಾಜರ ಸಹಾಯ ಪಡೆದು ತನ್ನ ಜನರನ್ನು ಕಪ್ಪ ಸಲ್ಲಿಕೆಯ ಸಂಕಟದಿಂದ ಪಾರುಮಾಡಿದನಂತೆ. ಇದಿಷ್ಟೂ ಕಾಕನ ಕೋಟೆ ಚಿತ್ರದ ಕಥಾವಸ್ತು.

More

‘ನುಡಿಸಿರಿ’ ಚಿತ್ರ ಕಲೆಯ ಅನಾವರಣ ….

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ -2010 ರಲ್ಲಿ ಪ್ರದರ್ಶನಗೊಂಡ ಚಿತ್ರ ಕಲೆಯ ಒಂದು ನೋಟ ಇಲ್ಲಿದೆ …

ಚಿತ್ರಗಳು : mangalorean.com

ಕಾಂತಾವರ ಪುರಸ್ಕಾರ …

ಇಲ್ಲೂ ನೋಡಿ :invitations Blog

The age of passwords!…

ಸತೀಶ್  ಆಚಾರ್ಯ

Previous Older Entries

%d bloggers like this: