ಆಧ್ಯಾತ್ಮಿಕ ಯಾತ್ರೆಯ ವಿಜ್ಞಾನಿ-ಮಣಿ ಭೌಮಿಕ್
-ಕೆ ಪುಟ್ಟಸ್ವಾಮಿ

ಕನ್ನಡದ ಓದುಗರಿಗೆ ಇತ್ತೀಚೆಗೆ ತಾನೆ ಪರಿಚಿತವಾಗಿರುವ ಡಾ. ಮಣಿಲಾಲ್ ಭೌಮಿಕ್ ಬೆಂಗಳೂರಿಗೆ ಬರುತ್ತಿದ್ದಾರೆ. ತಮ್ಮ ಕೋಡ್ ನೇಮ್ ಗಾಡ್ ಮತ್ತು ಕಾಸ್ಮಿಕ್ ಡಿಟೆಕ್ಟಿವ್ಗಳ ಕನ್ನಡ ಅವತರಣಿಕೆಗಳನ್ನು ಬಿಡುಗಡೆ ಮಾಡಲು ಸ್ವತಃ ಕ್ಯಾಲಿಫೋನರ್ಿಯಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರ ಕೃತಿಗಳಂತೆಯೇ ಮಣಿಲಾಲ್ ಭೌಮಿಕ್ ಅವರ ಜೀವನ ಯಾತ್ರೆಯೂ ಅತ್ಯಂತ ರೋಚಕ ಗಾಥೆ.
ಪಶ್ಚಿಮ ಬಂಗಾಳದ ತಮ್ಲುಕ್ ಪ್ರಾಂತ್ಯದ ಕುಗ್ರಾಮವೊಂದರಲ್ಲಿ ಜನಿಸಿದ ಮಣಿಲಾಲ್ ಹುಟ್ಟಿನೊಡನೆಯೇ ಹೋರಾಟ ಆರಂಭಿಸಿದವರು. ಬಡತನವನ್ನೆ ಉಂಡು ಮಲಗುವ ಗ್ರಾಮವದು. ತಲೆಯ ಮೇಲೊಂದು ಸೂರು, ಕೊಟ್ಟಿಗೆಯಲ್ಲೊಂದು ಹಸು ಇದ್ದವನೇ ಶ್ರೀಮಂತ. ಮಣಿಯ ತಂದೆ ಗುಣಧರ ಭೌಮಿಕ್ ಶಾಲಾ ಶಿಕ್ಷಕನಾದರೂ, ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಹೆಚ್ಚು ಕಾಲ ಭೂಗತರಾಗಿದ್ದವರು. ಅಂಥ ಸನ್ನಿವೇಶದಲ್ಲಿ ರಾತ್ರಿಯೊಡನೆ ಸಂಜೆ ಕರಗುವ ಒಂದು ದಿನ ಗುಣಧರ ಭೌಮಿಕ್ನ ಹೆಂಡತಿಗೆ ಹೆರಿಗೆಯಾಯಿತು. ಧೂಳಿನ ನೆಲಕ್ಕೆ ಬಿದ್ದ ಮೈಲಿಗೆಯ ಮಗು ರಾತ್ರಿಯೆಲ್ಲ ಅಲ್ಲಿಯೇ ಹೊರಳಾಡಿತು. ಸಂಪ್ರದಾಯದಂತೆ ಹೊಕ್ಕುಳ ಬಳ್ಳಿ ಕತ್ತರಿಸಲು ಅಂದು ಹರಿಜನ ಮಹಿಳೆ ಸಿಗಲಿಲ್ಲ. ಅವಳು ಕತ್ತರಿಸದೆ ಮಗು ಬಾಣಂತಿಯು ಅಲುಗಾಡುವಂತಿಲ್ಲ. ಕೊನೆಗೂ ಬಿದಿರಿನ ಸೀಳಿನಿಂದ ಹೊಕ್ಕುಳ ಬಳ್ಳಿಯನ್ನು ಹರಿಜನ ಮಹಿಳೆ ಕತ್ತರಿಸಿ ಮುಕ್ತಿ ದೊರಕಿಸಿದಾಗ ಚುಮು ಚುಮು ನಸುಕಿನ ಬೆಳಕು. ರಾತ್ರಿಯಿಡಿ ಅಲುಗಾಡದೇ ಕುಳಿತ ತಾಯಿ ಲಲಿತಾಳ ಗರ್ಭಕೋಶ ಜಾರಿ ಮುಂದೆ ಹತ್ತು ವರ್ಷ ಕಾಲ ಗರ್ಭವತಿಯಾಗಲೇ ಇಲ್ಲ.
ಬಾಲಕನ ಬದುಕು ಬಡತನ, ದಾರಿದ್ರ್ಯದ ಜೊತೆ ಸಾಮಾಜಿಕ ಅಸಮಾನತೆ ಮತ್ತು ಅಪಮಾನುಷ ಪರಿಸರದಲ್ಲೇ ಕಳೆಯಿತು. ಭೂಗತನಾದ ತಂದೆಯನ್ನು ಅರಸಿ ಬಂದ ಪೊಲೀಸರ ದೌರ್ಜನ್ಯ; ನಲವತ್ತರ ದಶಕದ ಭೀಕರ ಚಂಡಮಾರುತ; ಆ ಪ್ರವಾಹದಲ್ಲಿ ಕೊಚ್ಚಿ ಹೋಗದೆ ಮೂರು ದಿನಗಳ ಕಾಲ ಮನೆಯ ಮೂಡಿನಲ್ಲೇ ಕಳೆದ ದಾರುಣತೆ; ಗದ್ದೆಯ ಬಯಲಿನಲ್ಲಿ ತೇಲಾಡುವ ಹೆಣಗಳು; ಚಂಡಮಾರುತವನ್ನು ಅನುಸರಿಸಿ ಬಂದ ಭೀಕರ ಬರಗಾಲ-ಹೀಗೆ ಸಂಕಷ್ಟಗಳ ಸರಣಿಯನ್ನು ಎದುರಿಸಿ ಉಳಿದದ್ದು ಒಂದು ದೊಡ್ಡ ಪವಾಡ. ತನ್ನ ಪಾಲಿನ ರೊಟ್ಟಿಯನ್ನು ಮೊಮ್ಮಗನಿಗೆ ಕೊಟ್ಟು ಹಸಿವಿನಿಂದಲೇ ಕಣ್ಮುಚ್ಚಿದ ಅಜ್ಜಿಯ ನಿಷ್ಕಾಮ ಬದುಕು, ಹತ್ತಿರದಿಂದ ಕಂಡ ಗಾಂಧೀಜಿಯ ದೃಢ ಸಂಕಲ್ಪ, ಮತ್ತು ಸ್ವಾತಂತ್ರ್ಯಕ್ಕಾಗಿ ಬಲಿದಾನವಾದ ಮಾತಂಗಿನಿ ಎಂಬ ವಿಧವೆಯು ತೋರಿದ ಪ್ರೀತಿ ಆ ದಾರಿದ್ರ್ಯದಲ್ಲಿಯೂ ಆತನನ್ನು ಗಟ್ಟಿಗೊಳಿಸಿದವು. ಚಂದ್ರನಿಲ್ಲದ ರಾತ್ರಿಯ ಕಪ್ಪು ಆಗಸದಲ್ಲಿ ಹೊಳೆವ ನಕ್ಷತ್ರಗಳ ರಾಶಿಯನ್ನು ಕಾಣುತ್ತಾ ಅಲ್ಲಿನ ಅರಮನೆಗಳ ದ್ವಾರದಲ್ಲಿರುವ ರಾಕ್ಷಸರನ್ನು ಕೊಂದು ಕೋರೈಸುವ ಅರಮನೆಯಲ್ಲಿ ಬದುಕು ಸಾಗಿಸುವ ಕನಸುಗಳಷ್ಟೇ ಆತನ ಬದುಕಿಗೆ ಭರವಸೆಯಾಗಿದ್ದವು.
ತನ್ನ ಬಳಿ ಬರುವ ಎಲ್ಲವನ್ನೂ ಸೆಳೆಯುವ ಬ್ಲಾಕ್ ಹೋಲ್ಗಳಂತೆ ಮಾನವೀಯತೆಯನ್ನೆಲ್ಲ ನುಂಗಿ ನೊಣೆಯಬಲ್ಲ ಬಡತನ ಮತ್ತು ದಾರಿದ್ರ್ಯದಿಂದ ಬಿಡುಗಡೆ ಹೊಂದಲು ವಿದ್ಯೆಯೊಂದೇ ದಾರಿಯೆಂದು ನಂಬಿ ಅದರಂತೆ ಎಲ್ಲ ಸಂಕಷ್ಟಗಳನ್ನು ಗೆದ್ದ ಮಣಿ ಭೌಮಿಕ್ ಉನ್ನತ ಸಂಶೋಧನೆಗಾಗಿ ಅಮೆರಿಕಾಗೆ ಬಂದಿಳಿದಾಗ ಜೇಬಿನಲ್ಲಿ ಇದ್ದದ್ದು ಒಂದು ಡಾಲರ್ ಮಾತ್ರ. ಆದರೆ ತನ್ನ ಅಪ್ರತಿಮ ಪ್ರತಿಭೆಯಿಂದ ಸಂಶೋಧನೆಯಲ್ಲಿ ಪಳಗಿ ಕೊನೆಗೆ ಲಸಿರ್ ಕಣ್ಣಿನ ಚಿಕಿತ್ಸೆಯಲ್ಲಿ ಬಳಸುವ ಲೇಸರ್ ಕಿರಣಗಳನ್ನು ಕಂಡುಹಿಡಿವ ವೇಳೆಗೆ ಆತ ಅಮೆರಿಕಾದ ಭೋಗದಲ್ಲಿ ಲೀನವಾಗಿದ್ದ. ತನ್ನ ಶ್ರಮ ಮತ್ತು ವ್ಯವಹಾರ ಕುಶಲತೆಯಿಂದ ಅಪಾರ ಆಸ್ತಿ. ಹಣ ಸಂಚಯನ ಮಾಡಿದ ಭೌಮಿಕ್ ಸುಖವನ್ನು ಮೊಗೆ ಮೊಗೆದು ಕುಡಿದ. ರೊನಾಲ್ಡ್ ರೀಗನ್, ಬಿಲ್ ಕ್ಲಿಂಟನ್ನಿಂದ ಹಿಡಿದು ಅಮೆರಿಕಾದ ಎಲೈಟ್ ವರ್ಗದ ಪ್ರಸಿದ್ಧರೆಲ್ಲರನ್ನೂ ಆಹ್ವಾನಿಸಿ ಮೇಜವಾಗಿ ನಡೆಸಿದ. ಶ್ರೀಮಂತ ಬಡಾವಣೆಗಳೆಂದು ಕರೆಸಿಕೊಂಡ ಬೆಲ್ಏರ್, ಬೆವಲರ್ಿ ಹಿಲ್ಸ್, ಕ್ಯಾಲಿಫೋನರ್ಿಯಾದಲ್ಲಿ ಅರಮನೆಗಳಂಥ ಬಂಗಲೆಗಳನ್ನು ಕೊಂಡ. ಚಲನಚಿತ್ರ ತಾರೆಯರ ಸಖ್ಯ ಬೆಳೆಸಿದ. ಅಮೆರಿಕಾದ ಭೋಗಲಾಲಸೆಯಲ್ಲಿ ಮುಳುಗಿದ್ದ ಭೌಮಿಕ್ ಇದ್ದಕ್ಕಿದ್ದಂತೆ ತನ್ನ ಬೇರುಗಳನ್ನು ಅರಸಿ ಹೊರಟ. ಈ ಹೊರಳು ದಾರಿಯಲ್ಲಿ ಆತ ಆಧ್ಯಾತ್ಮ ಮತ್ತು ವಿಜ್ಞಾನವನ್ನು ಬೆಸೆಯುವ ಚಿಂತನೆಯನ್ನೇ ಆರಂಭಿಸಿದರು. ಸಾಂಸ್ಥಿಕ ಧರ್ಮದಿಂದ ವಿಭಿನ್ನವಾದ ಭಾರತೀಯ ಮತ್ತು ಇತರೆ ದೇಶಗಳ ಚಿಂತಕರು ಹುಟ್ಟಿ ಹಾಕಿದ ಆಧ್ಯಾತ್ಮವು ಕಲ್ಪಿಸಿಕೊಳ್ಳುವ ದೇವರ ಪರಿಕಲ್ಪನೆಗೂ, ವಿಜ್ಞಾನವು ಮಂಡಿಸುವ ವಿಶ್ವ ಸೃಷ್ಟಿ ಮತ್ತು ಅದರ ವಿನ್ಯಾಸಕ್ಕೂ ಸಾಮ್ಯವಿದೆಯೆಂಬುದು ಅವರ ನಂಬಿಕೆ. ಈ ನಂಬಿಕೆಯ ಬೆನ್ನು ಹತ್ತಿ ರಚಿಸಿದ ಕೃತಿಯೇ ಕೋಡ್ ನೇಮ್ ಗಾಡ್ ಪೆಂಗ್ವಿನ್ ಸಂಸ್ಥೆ ಪ್ರಕಟಿಸಿದ ಈ ಪುಸ್ತಕ ಅನೇಕ ವಾರಗಳ ಕಾಲ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿತ್ತು. ಈ ಪುಸ್ತಕವನ್ನು ಅವರು ವಿಜ್ಞಾನಿಯೊಬ್ಬನ ಆಧ್ಯಾತ್ಮಿಕ ಯಾತ್ರೆ ಎಂದು ಕರೆದುಕೊಂಡಿದ್ದಾರೆ.
ಎಳೆಯ ಮಕ್ಕಳಿಗೆ ವಿಶ್ವವನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ ಕಾಸ್ಮಿಕ್ ಡಿಟೆಕ್ಟಿವ್ ಮತ್ತೊಂದು ಯಶಸ್ವೀ ಕೃತಿ. ಎಳೆಯ ಓದುಗರನ್ನು ಪತ್ತೇದಾರರನ್ನಾಗಿಸಿ, ಅವರು ವಿಶ್ವ ರಹಸ್ಯವನ್ನು ಅರಿಯಲು ಸುಳಿವು ನೀಡುತ್ತಾ, ಅಲ್ಲಲ್ಲಿ ಮಾರ್ಗದರ್ಶನ ನೀಡುತ್ತಾ ಮಣಿ ಅವರು ಅಪೂರ್ವ ಪ್ರಯೋಗವನ್ನು ನಾವಿಲ್ಲಿ ನೋಡಬಹುದು. ನಕ್ಷತ್ರ ಲೋಕ, ಗ್ಯಾಲಕ್ಸಿ, ನೆಬುಲಾ, ಸೂರ್ಯನ ಪರಿವಾರದ ಬಳಿಗೆ ಕರೆದೊಯ್ದು ಬ್ರಹ್ಮಾಂಡದ ವಿವಿಧ ಭಾಗಗಳನ್ನು, ವಿಶ್ವದ ರಹಸ್ಯವನ್ನು ಅರಿಯಲು ಸಾಧನಗಳನ್ನು ಮಣಿ ನೀಡುತ್ತಾರೆ. ಹಾಗಾಗಿ ಇದೊಂದು ಶುಷ್ಕ ವೈಜ್ಞಾನಿಕ ಕೃತಿಯಾಗದೆ ಸಾಮಾನ್ಯ ಓದುಗರೂ ಅರ್ಥ ಮಾಡಿಕೊಳ್ಳುವ ಪರಿಭಾಷೆಯಲ್ಲಿ ರಚನೆಗೊಂಡಿದೆ. ಇದರ ಮಹತ್ವವನ್ನು ಗಮನಿಸಿಯೇ 2009ರ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷದ ಅಧಿಕೃತ ಪುಸ್ತಕವೆಂದು ಇದನ್ನು ಘೋಷಿಸಲಾಗಿದೆ.
* * * * * * * * * * * *
ಇನ್ನೂ ಹೆಚ್ಚಿನ ಓದಿಗೆ- ಇಲ್ಲಿ ಭೇಟಿ ಕೊಡಿ
12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು