ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.

ಜಿ ಎನ್ ಮೋಹನ್

ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ ಸಮ್ಮೇಳನ. ನಾನು ಮಾತನಾಡುತ್ತಾ ಮಾಧ್ಯಮ ಲೋಕ ಹೇಗೆ ‘ಏಕ’ ಸಂಸ್ಕೃತಿಯನ್ನು ಬಿತ್ತುತ್ತಿದೆ ಎಂಬುದರ ಬಗ್ಗೆ ಕಳವಳಪಡುತ್ತಿದ್ದೆ. ಹೀಗೇಕೆ ಆಗುತ್ತಿದೆ? ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ನಾನೇ ಉತ್ತರ ಹುಡುಕುತ್ತಾ ಇದ್ದೆ.
ಆಗಲೇ ನಾನು ಮಾಧ್ಯಮ ರಂಗದ ಒಳಗೆ ಹೇಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಏಕರೀತಿಯ ಸಂವೇದನೆಗೆ ಮಾತ್ರ ಜಾಗ ಸಿಗುತ್ತಿದೆ ಎನ್ನುವುದನ್ನು ವಿವರಿಸುತ್ತಿದ್ದೆ. ಎಲ್ಲಿಯವರೆಗೆ ನಮ್ಮ ನ್ಯೂಸ್ ರೂಂಗಳು ಎಲ್ಲಾ ರೀತಿಯ ಜಾತಿ, ಎಲ್ಲಾ ರೀತಿಯ ಧರ್ಮ, ಎಲ್ಲಾ ಪ್ರದೇಶಗಳಿಗೆ ನೆಲೆ ಒದಗಿಸುವುದಲ್ಲವೋ ಅಲ್ಲಿಯವರೆಗೆ ಅದು ಏಕ ದೃಷ್ಟಿಕೋನವನ್ನು ಮಾತ್ರ ಹರಡುತ್ತಾ ಸಮಾಜ ವಿರೋಧಿಯಾಗುವ ಅಪಾಯವಿದೆ ಎಂದೆ.

ಹಾಗೆ ನಾನು ಇನ್ನೂ ಹೇಳಿ ಮುಗಿಸಿರಲಿಲ್ಲ, ಸಭಾಂಗಣದಲ್ಲಿ ಗುಜು ಗುಜು ಶುರುವಾಯಿತು. ಮಾತು ಮಥಿಸಲಾರಂಭಿಸಿದ್ದರು. ಆಗತಾನೆ ಪತ್ರಿಕೋದ್ಯಮ ಶಿಕ್ಷಣ ಪೂರೈಸಿ, ಮಾಧ್ಯಮ ಸಂಶೋಧನೆ ನಡೆಸುತ್ತಾ, ಪತ್ರಿಕೋದ್ಯಮವನ್ನು ಕಲಿಸುತ್ತಾ ಇದ್ದ ತರುಣನೊಬ್ಬ ಎದ್ದು ನಿಂತು, ಸಿಟ್ಟಿನಿಂದ ‘ಅಂದರೆ ನಿಮ್ಮ ಮಾತಿನ ಅರ್ಥ ಮಾಧ್ಯಮ ಅನುಭವ ಮಂಟಪ ಆಗಬೇಕು ಅಂತಾನಾ..?’ ಎಂದು ಪ್ರಶ್ನಿಸಿದ.

ತಕ್ಷಣ ನನಗೆ ನೆನಪಿಗೆ ಬಂದಿದ್ದು ದೇವನೂರು ಮಹಾದೇವ.

ಫ಼ ಗು ಹಳಕಟ್ಟಿ ಅವರ ‘ಶಿವಾನುಭವ ಶಬ್ದಕೋಶ’ ಓದಿದ ದೇವನೂರು ಮಹಾದೇವ ಅವರು ವಚನಕಾರರ ಬಗ್ಗೆ ಮಾತನಾಡುತ್ತಾ ಹೋಗಿರುವುದು ನನ್ನೊಳಗಿನ ಕಣ್ಣನ್ನು ಖಂಡಿತಾ ತೆರೆಸಿತ್ತು. “ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ; ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು. ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ. ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು” ಎನ್ನುತ್ತಾ ಪ್ರತಿಯೊಬ್ಬ ವಚನಕಾರರಿಗೂ ಅವರ ಪ್ರಜ್ಞೆಯೇ ದೇವರಾಗಿತ್ತು ಎನ್ನುತ್ತಾರೆ. ಪ್ರಜ್ಞೆಯೇ ದೇವರು ಎಂದುಕೊಂಡಾಗಲೇ ಕಷ್ಟಗಳ ಸರಮಾಲೆ ಆರಂಭವಾಗುವುದು. ನೆತ್ತಿಯ ಮೇಲೆ ಸುಡುವ ಬೆಂಕಿ ಇಟ್ಟುಕೊಂಡಂತೆ. ತಮ್ಮ ಪ್ರಜ್ಞೆಯದುರು ಅವರು ಸುಳ್ಳು ಹೇಳಲು ಸಾಧ್ಯವೇ ಆಗುವುದಿಲ್ಲ. ಈ ಕಷ್ಟಕ್ಕೆ, ಇಕ್ಕಟ್ಟಿಗೆ ವಚನಕಾರರು ಮುಖಾಮುಖಿಯಾದರು ಎನ್ನುತ್ತಾರೆ.

ಹೌದಲ್ಲಾ, ಮಾಧ್ಯಮ ಎನ್ನುವುದು ಸುಳ್ಳು ಹೇಳಲಾಗದ, ಕಪಟ ಕುತಂತ್ರ ಅನುಸರಿಸಲಾಗದ ಪ್ರಜ್ಞೆಯನ್ನು ನೆತ್ತಿಯ ಮೇಲೆ ಇಟ್ಟುಕೊಳ್ಳುವ ಅನುಭವ ಮಂಟಪ ಯಾಕಾಗಬಾರದು? ಪ್ರತಿ ನಿತ್ಯ ತನ್ನ ಪ್ರಜ್ಞೆಗೆ, ಅಂತಃಸಾಕ್ಷಿಗೆ ಮುಖಾಮುಖಿಯಾಗುವ ಪರಿಸ್ಥಿತಿ ಮಾಧ್ಯಮಗಳಿಗೆ ಎದುರಾದರೆ ದೇವನೂರರೇ ಹೇಳುವ ಹಾಗೆ ಬಂಡೆಯ ಮೇಲೂ ಚಿಗುರೊಡೆಯಬಹುದಾದ ಕಾಲ ಬರುತ್ತದೇನೋ..

ದೇವನೂರು ಅವರ ಬಗ್ಗೆ, ಅವರ ಬರಹದ ಬಗ್ಗೆ ನಾನು ಗೆಳೆಯರೊಂದಿಗೆ ಪದೇ ಪದೇ ಚರ್ಚಿಸಿದ್ದೇನೆ. ಅವರ ಪ್ರಸ್ತುತತೆ ಏನು ಎನ್ನುವುದನ್ನು ನಿಕಷಕ್ಕೊಡ್ಡಿದ್ದೇವೆ. ನನಗಂತೂ ಅವರು ಇಂತಹ ಪ್ರಜ್ಞೆಯಾಗಿ, ಅಂತಃಸಾಕ್ಷಿಯಾಗಿಯೇ ಕಂಡಿದ್ದಾರೆ. ಹಿಂದೆ ಒಮ್ಮೆ ‘ಮಾಲು, ಬಾಲು’ ಸಾಹಿತ್ಯ ಚಿತ್ರರಂಗವನ್ನು ಬಿರುಗಾಳಿಯಂತೆ ಅವರಿಸಿಕೊಳ್ಳುತ್ತಿದ್ದ ಕಾಲದಲ್ಲಿ ‘ಇಂತಹ ಸಾಹಿತ್ಯ ಹೇಗೆ ಸಾಧ್ಯ?’ ಎಂದು ಚಿತ್ರ ಸಾಹಿತಿಯೊಬ್ಬರನ್ನು ಪ್ರಶ್ನಿಸಿದ್ದೆ. ಅವರು ‘ನಮ್ಮೊಳಗೊಬ್ಬ ಪೊಲೀಸು, ನಮ್ಮೊಳಗೊಬ್ಬ ನ್ಯಾಯಾಧೀಶ ಇರುತ್ತಾನೆ. ಅವನನ್ನು ಕೊಂದುಕೊಂಡ ಕ್ಷಣ ಇಂತಹ ಸಾಹಿತ್ಯ ಹುಟ್ಟುತ್ತದೆ’ ಎಂದಿದ್ದರು. ನನಗೆ ದೇವನೂರು ಹಾಗೆ ಕಂಡಿದ್ದಾರೆ. ನಮ್ಮೊಳಗಿನ ಪೊಲೀಸ್, ನಮ್ಮೊಳಗಿನ ನ್ಯಾಯಾಧೀಶ, ನಮ್ಮೊಳಗಿನ ಅಂತಃಸಾಕ್ಷಿಯಾಗಿ.

ದೇವನೂರು ನನಗೆ ತೀರಾ, ತೀರಾ ಹತ್ತಿರವಾಗಿರುವುದು ಅವರ ಸಾಹಿತ್ಯಕ್ಕಿಂತಲೂ ಹೆಚ್ಚು ಅವರ ಚಿಂತನೆಗಳ ಮೂಲಕ. ಬಹುಷಃ ನಾನು ನಡೆದುಬಂದ ದಶಕಗಳು ಎದುರಿಸುತ್ತಿದ್ದ ಬಿಕ್ಕಟ್ಟುಗಳಿತ್ತಲ್ಲಾ, ಅದಕ್ಕೆಲ್ಲಾ ದೇವನೂರು ಒಂದು ರೀತಿಯಲ್ಲಿ ಉತ್ತರ ಒದಗಿಸುತ್ತಾ ಹೋಗಿದ್ದರು. ನಾವು ಎದುರಿಸುತ್ತಿದ್ದ ಪ್ರಶ್ನೆಗಳು ಅವರ ಪ್ರಶ್ನೆಗಳೂ ಆಗಿತ್ತು. ಇಥಿಯೋಪಿಯಾದ ಹಸಿವಿನ ಸಾವುಗಳಿಂದ ಹಿಡಿದು ಕಾನ್ಶಿರಾಂ, ಮಾಯಾವತಿ ಬಿಜೆಪಿ ಜೊತೆ ಕೈಗೂಡಿಸಿದ್ದರವರೆಗೆ, ಕನ್ನಡ ಸಾಹಿತ್ಯ ಪರಿಷತ್ ನಿಂದ ಹಿಡಿದು ಕೋಣ ಬಲಿಯವರೆಗೆ…

ಅದೇಕೋ ಗೊತ್ತಿಲ್ಲ. ಬಹುಷಃ ನಾನು ಒಡನಾಡಿದ ಸಂಘಟನೆಗಳ ಪರಿಣಾಮವಿರಬೇಕು, ನಾನು ಅಂತರಾಷ್ಟ್ರೀಯ ವಿದ್ಯಮಾನಗಳಿಗೆ ತೆರೆದುಕೊಳ್ಳುತ್ತಾ ಹೋದೆ.

ಹಾಗೆ ತೆರೆದುಕೊಳ್ಳವುದು ಎಂದರೆ ಗ್ಲೋಬಿನ ಉದ್ದಗಲದ ನೋವುಗಳಿಗೆ ಮೈಯಾಗುವುದು ಎಂದೇ ಅರ್ಥ. ವಿಯೆಟ್ನಾಂ, ಲೆಬನಾನ್, ದಕ್ಷಿಣ ಆಫ್ರಿಕಾ, ಸೋವಿಯತ್ ದೇಶ, ಕ್ಯೂಬಾ, ರೊಮೇನಿಯಾ.. ಹೀಗೆ ಎಷ್ಟೊಂದು ದೇಶಗಳು ನನ್ನೊಳಗೆ ಅರಳಿ ನಿಲ್ಲುತ್ತಿದ್ದವು. ಅಗಲೇ ಒಡೆದು ಕಂಡಿದ್ದು ಇಥಿಯೋಪಿಯಾದ ಸಾವು. ಪತ್ರಿಕೆಗಳು ಹದ್ದುಗಳ ಹಿಂಡು ಮೂಳೆ ಚಕ್ಕಳೆಗಳ ದೇಹಗಳನ್ನು ಕುಕ್ಕುತ್ತಿರುವ ದೃಶ್ಯಗಳನ್ನು ಹೊತ್ತು ಬರುತ್ತಿದ್ದವು. ಒಡಲು ಹಸಿವಿನ ಕುಂಡವಾಗಿ ಹೋಗಿತ್ತು. ಆಗಲೇ ಪ್ರಜಾವಾಣಿಯ ದೀಪಾವಳಿ ವಿಶೇಷಾಂಕ ‘ಮನವ ಕಾಡುತಿದೆ’ ಎನ್ನುವ ಅಂಕಣವನ್ನು ರೂಪಿಸಿತ್ತು. ಹತ್ತಾರು ಬರಹಗಾರರನ್ನು ಮಾತನಾಡಿಸಿ ಅವರ ಮನವನ್ನು ಕಾಡುತ್ತಿರುವುದೇನು ಎಂದು ಕೇಳಿತ್ತು. ದೇವನೂರು ಹೇಳಿದ್ದರು, ನಾಲ್ಕೇ ನಾಲ್ಕು ಸಾಲುಗಳಲ್ಲಿ- “ದಿನ ಸವಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತಾರೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ..”. ದೇವನೂರು ಮಹಾದೇವ ನನ್ನ ಮನವನ್ನು ಈ ಕಾರಣಕ್ಕಾಗಿಯೇ ಕಾಡಿದ್ದರು.

ಚೆನ್ನಾಗಿ ನೆನಪಿದೆ. ನಾನು ದೇವನೂರನ್ನು ಭೇಟಿಯಾದದ್ದು ನರಗುಂದದಲ್ಲಿ. ನನ್ನಣ್ಣನ ಪುಸ್ತಕದ ಕಪಾಟಿನಲ್ಲಿ.

ಆಗಿನ್ನೂ ರೈತರ ಮೇಲೆ ಗೋಲಿಬಾರ್ ಆಗಿರಲಿಲ್ಲ. ಆದರೆ ನರಗುಂದ, ನವಲಗುಂದದಲ್ಲಿ ಹೆಜ್ಜೆ ಹಾಕಿದರೆ ಸಾಕು ಅದರ ಒಡಲೊಳಗೆ ಹೊರಳುತ್ತಿದ್ದ ಒಂದು ತಳಮಳವನ್ನು ಖಂಡಿತಾ ಗುರುತಿಸಬಹುದಿತ್ತು. ನನ್ನ ಅಣ್ಣ ಅಲ್ಲಿ ಕೃಷಿ ಅಧಿಕಾರಿ. ನನ್ನ ಅಣ್ಣನ ಪುಸ್ತಕದ ಕಪಾಟಿಗೆ ಕೈಹಾಕಿದಾಗ ಆ ಪುಸ್ತಕ ನನ್ನನ್ನು ಗಕ್ಕನೆ ಹಿಡಿದು ನಿಲ್ಲಿಸಿತ್ತು. ಪುಸ್ತಕದ ತುಂಬಾ ಹರಡಿಕೊಂಡಿದ್ದ ಮುಖ. ಅದು ಶಾಂತವಾಗಿತ್ತು ಎಂದು ಹೇಳಲಿ ಹೇಗೆ? ಆ ಮುಖ ಆ ಕ್ಷಣಕ್ಕೆ ನನಗೆ ಪಕ್ಕಾ ನರಗುಂದದ ಒಡಲೊಳಗಿನ ತಳಮಳದ ಮುಖದಂತೆ ಕಂಡಿತ್ತು. ಆ ಮುಖದ ಮೇಲೆ ಕೈಯಲ್ಲಿ ಬರೆದಂತೆ ‘ದ್ಯಾವನೂರು’ ಎನ್ನುವ ಹೆಸರು.

ನೆಲಮನೆ ಪ್ರಕಾಶನ ನನಗೆ ದೇವನೂರು ಮಹಾದೇವರನ್ನು ಪರಿಚಯಿಸಿದ್ದು ಹೀಗೆ. ಆ ಪುಸ್ತಕದ ರೀತಿಯೇ ತಾನು ಅಧೋಲೋಕದ ಅಕಾವ್ಯವನ್ನು ಹೊತ್ತು ನಿಂತಿದ್ದೇನೆ ಎಂದು ಸಾರಿಬಿಟ್ಟಿತ್ತು. ದೇವನೂರು ತಮ್ಮ ಅಮಾಸನನ್ನೂ, ಸಾಕವ್ವನನ್ನೂ, ದುಪ್ಟಿ ಕಮಿಷನರ್ ನನ್ನೂ, ಜೋತಮ್ಮಗಳನ್ನೂ ಕೈಹಿಡಿದುಕೊಂಡು ಸೀದಾ ನನ್ನೊಳಗೆ ನಡೆದುಕೊಂಡು ಬಂದುಬಿಟ್ಟಿದ್ದರು. ಅವರು ಹೀಗೆ ನಡೆದುಕೊಂಡು ಸುಖಾಸುಮ್ಮನೆ ಬರಲಿಲ್ಲ. ನನ್ನೊಳಗೆ ತಲ್ಲಣದ ಮಳೆಗೆರೆದರು. ನಾನು ನೋಡಿಯೂ ಗೊತ್ತಿಲ್ಲದ, ಅದುವರೆಗೆ ಕೇಳಿಯು ಗೊತ್ತಿರದ, ಅನುಭವಿಸಿಯೇ ಇರದ ಒಂದು ಲೋಕವನ್ನು ನನಗೆ ದಾಟಿಸಿದ್ದರು.

ಹೀಗೆ ಹೇಳುವಾಗಲೂ ಮತ್ತೆ ದೇವನೂರರ ಮಾತಿಗೆ ಮರಳುತ್ತಿದ್ದೇನೆ. “ನಾವು ಮಾಡಬೇಕಾದದ್ದು ಕ್ರಾಂತಿ. ಕ್ರಾಂತಿ ಸಾಹಿತ್ಯದಿಂದ ಅಗದು. ಕೈಲಾಗದವ ಬರೆದುಕೊಳ್ಳುತ್ತಾನೆ… ಇತ್ಯಾದಿ ಚರ್ಚೆ ಕೇಳಿದ್ದೇನೆ”, ಎನ್ನುತ್ತಾ ಸಾಹಿತ್ಯ ಉಂಟುಮಾಡುವ ಪರಿಣಾಮವನ್ನು ವಿವರಿಸುತ್ತಾ ಹೋಗುತ್ತಾರೆ. “ನಮ್ಮ ಪಂಚಮ ಪತ್ರಿಕೆಯ ಕೆಲವು ಅನುಭವಗಳನ್ನು ಓದಿ ಸಂವೇದನಾಶೀಲ ಬ್ರಾಹ್ಮಣರೊಬ್ಬರು ಒಂದು ಕಾಗದ ಬರೆದಿದ್ದರು. ಅದರಲ್ಲಿ ಅವರು ‘ಇದುವರೆಗೂ ವಿಚಾರದ ಮಟ್ಟದಲ್ಲಿ ದಲಿತರ ಪರ ಇದ್ದೆ. ಈಗ ‘ಪಂಚಮ’ದಲ್ಲಿ ಪ್ರಕಟವಾಗುತ್ತಿರುವ ಅನುಭವ ಓದುತ್ತಾ ಅವು ನನ್ನವೂ ಆದವು. ನಾನು ದಲಿತನಾಗಿ ತಳಮಳಿಸುತ್ತಾ ಚಿಂತೆಗೀಡಾದೆ’ ಎಂಬರ್ಥದಲ್ಲಿ ಬರೆದಿರುವರು. ಅಂದರೆ ವಿಚಾರದಿಂದ ದಲಿತರ ಪರ ಆಗುವವನು, ಸಾಹಿತ್ಯ ಉಂಟುಮಾಡುವ ಅನುಭವದಿಂದ ದಲಿತ ಸ್ಥಿತಿಯನ್ನು ಅನುಭವಿಸುತ್ತಾನೆ. ಗಾಯ ಎಂಬುವುದು ವಿಚಾರವಾದರೆ, ಗಾಯದ ಅನುಭವವನ್ನು ಭಾಷೆಯಲ್ಲಿ ಮೂಡಿಸುವುದು ಸಾಹಿತ್ಯವಾಗುತ್ತದೆ. ಈ ಅನುಭವಿಸುವಿಕೆಯು ಸಮೀಪಗೊಳಿಸುತ್ತದೆ. ಹಾಗೂ ಕಲಾವಿದ ಸ್ವಭಾವದಲ್ಲೇ ‘ನಿನ್ನೊಳಕ್ಕೆ ನಾನು ಹೋಗಿ ನಿನ್ನನ್ನು ಅನುಭವಿಸುವ’ ಗುಣವಿರುತ್ತದೆ. ಇದು ಸಮಾಜ ಬದಲಾವಣೆ ಬಯಸುವ ನಮಗೆ ಅತ್ಯಗತ್ಯ”. ಹಾಹಾಗೆಯೇ ದೇವನೂರು ಅವರು ನನ್ನೊಳಗೆ ತಮ್ಮ ಕಥಾ ಲೋಕದ ಎಲ್ಲಾ ಪಾತ್ರಗಳನ್ನು ನುಗ್ಗಿಸಿ ಗಾಯದ ಅನುಭವವನ್ನು ಮೂಡಿಸುತ್ತಾ ಹೋದರು.

ದ್ಯಾವನೂರರ ಲೋಕದ ‘ದುಪ್ಟಿ ಕಮಿಷನರ್’ ನನ್ನೇ ಬಹುತೇಕ ಹೋಲುತ್ತಿದ್ದ ನಮ್ಮನ್ನು ಅಲುಗಾಡಿಸಿ ಹಾಕಿದ್ದು ‘ಒಡಲಾಳ’. ಅದು ನಮ್ಮ ಒಡಲಾಳದ ಕಥೆಯು ಹೌದು. ಅವರು ದ್ಯಾವನೂರಲ್ಲಿ, ನಾವು ಬೆಂಗ್ಳೂರಲ್ಲಿ ನೋವನ್ನು ಹೆಕ್ಕುತ್ತಾ ಇದ್ದೆವೇನೋ. ಅವರ ಕೃತಿ ಎಷ್ಟು ನಮ್ಮನ್ನು ಹಿಂಡಿತ್ತೋ ಅಷ್ಟೇ ಸಮರ್ಥವಾಗಿ ಹಿಂಡಿದ್ದು ಸಿಜಿಕೆ ನಾಟಕ. ಕಡಲೆಕಾಯಿ ಕಳ್ಳತನ ಬಗೆದು ನೋಡಲು ಬರುವ ಪೊಲೀಸರು ಮಡಿಕೆ ಚೂರು ಚೂರು ಮಾಡುವುದನ್ನೂ, ಸಿಜಿಕೆ ಆ ಮಡಿಕೆಯೊಳಗೆ ಮೊಟ್ಟೆಗಳಿರಿಸಿ ಅದರ ಲೋಳೆ ನಾಟಕದ ದೃಶ್ಯ ಮುಗಿದರೂ ಸೋರುತ್ತಾ ಒಂದು ವಿಷಾದ ಹಂಚುವುದನ್ನೂ ಅನುಭವಿಸಿದ್ದೇವೆ. ಸಾಕವ್ವನ ಭಾರವಾದ ಹೆಜ್ಜೆಯೊಳಗೆ ನಮ್ಮ ಹೆಜ್ಜೆಗಳೂ ಸೇರಿಹೋಗಿದೆ.

ದೇವನೂರರ ಸಾಹಿತ್ಯದ್ದು ಒಂದು ಸೂಕವಾದರೆ ಅವರ ಚಿಂತನೆಗಳದ್ದೇ ಇನ್ನೊಂದು ತೂಕ. ನಾನು ಸದಾ ಮುಖಾಮುಖಿಯಾಗುತ್ತಾ ಹೋದದ್ದು ಅವರ ಚಿಂತನೆಗಳ ಜೊತೆಗೇ. ಅಯೋಧ್ಯೆಯ ಕಾರಣಕ್ಕಾಗಿ ರಥ ಯಾತ್ರೆ ಆರಂಭಿಸಿ ಇಡೀ ದೇಶಕ್ಕೆ ಕೊಳ್ಳಿ ಇಡುತ್ತಿದ್ದ ದಿನಗಳು ಅವು. ಎಲ್ಲೋ ದೂರದಲ್ಲಿ ಮಾತ್ರ ಕೋಮು ಗಲಭೆಯಾಗುತ್ತವೆ ಎಂದು ನಂಬಿದ್ದ ಕಾಲದಲ್ಲಿ ನಮ್ಮ ಮನೆ ಬಾಗಿಲಿಗೇ ಬಂದ ಗಲಭೆಗಳು ನಮ್ಮನ್ನು ತಲ್ಲಣಿಸಿ ಹಾಕಿತ್ತು. ಕಣ್ಣೆದುರಿಗೇ ಒಂದು ಕೋಮು ರಾಜಕೀಯ ತಳ ಊರುತ್ತಾ, ಸ್ಥಿರವಾಗುತ್ತಾ, ಪ್ರಬಲವಾಗುತ್ತಾ, ದೇಶದ ಮುನಸ್ಥಿತಿ ಬದಲಾಯಿಸುತ್ತಾ ಹೋಗುತ್ತಿದ್ದುದನ್ನು ಕಂಡು ಅದನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎಂದು ತಲ್ಲಣಿಸಿದ್ದೆವು ದೇವನೂರು ಅವರು ನಮಗೆ ಆಸರೆಯಾಗಿ ಒದಗಿದ್ದು ಆಗಲೇ.

ದಾಸ್ತೋವಸ್ಕಿಯ ‘ಕ್ರೈಮ್ ಅಂಡ್ ಪನಿಶ್ ಮೆಂಟ್ ‘ ಕೃತಿಯ ಮೂಲಕ ಸ್ಪಷ್ಟವಾಗಿ ಈ ರಾಜಕಾರಣದ ಹಿಂದಿನ ರಾಜಕಾರಣವನ್ನು ಬಿಡಿಸಿಡುತ್ತಾ ಹೋದರು. ಆ ಕಾದಂಬರಿಯ ನಾಯಕ ರೋಡಿಯಾನ್ ಎರಡು ಕೊಲೆ ಮಾಡುತ್ತಾನೆ. ಒಂದು ಕೊಲೆ ಸಂಚು ಹೂಡಿ ಮಾಡಿದ ಕೊಲೆ, ಇನ್ನೊಂದು ಆ ಕೊಲೆ ಮಾಡುವಾಗ ನೋಡಿದ ಸಾಕ್ಷಿಯದ್ದು. ಒಂದು ಪ್ರಜ್ಞಾಪೂರ್ವಕವಾಗಿ ಮಾಡಿದ ಕೊಲೆಯಾದರೆ, ಇನ್ನೊಂದು ಅಪ್ರಜ್ಞಾಪೂರ್ವಕವಾಗಿ ಮಾಡಿದ್ದು. ಆದರೆ ಪ್ರಜ್ಞಾಪೂರ್ವಕವಾಗಿ ಮಾಡಿದ ಕೊಲೆಯ ಬಗ್ಗೆ ವಿಹ್ವಲಗೊಳ್ಳುವ ಆತ ಇನ್ನೊಂದು ಕೊಲೆಯ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. “ಈ ಕಾದಂಬರಿಯ ಎಲ್ಲಾ ವಿವರಗಳನ್ನು ಮರೆತರೂ ಈ ವಿಲಕ್ಷಣ ನನ್ನ ಮನದಲ್ಲಿ ಉಳಿಯಿತು. ಕೊಲೆ, ಹಿಂಸೆಯನ್ನು ಪ್ರಜ್ಞಾಪೂರ್ವಕವಾಗಿ ಯೋಜನೆ ಮಾಡಿ ಮಾಡುವುದಕ್ಕೂ, ಉದ್ಧೇಶರಹಿತವಾಗಿ ಕೊಲೆ ಹಿಂಸೆ ಆಗುವುದಕ್ಕೂ ಇರುವ ಅಗಾಧ ವ್ಯತ್ಯಾಸವನ್ನು ಅದು ನನಗೆ ಮನಗಾಣಿಸಿತ್ತು. ಉದ್ಧೇಶರಹಿತ ನೂರು ಕೊಲೆಗಳ ಮುಂದೆ, ಕೊಲೆ-ಹಿಂಸೆಯನ್ನು ತಾತ್ವಿಕಗೊಳಿಸಿದ ಒಂದೇ ಕೊಲೆ ಸಮ ಸಮ ಅನಿಸಿಬಿಟ್ಟಿತು”.

ಸಮಾಜದೊಳಗಿನ ಒಂದು ಹೊಸ ಚಲನೆಯನ್ನು ಇಡೀ ದೇಶ ತನ್ನದಾಗಿಸಿಕೊಳ್ಳಲು ನಿರೀಕ್ಷಿಸುತ್ತಿದ್ದಾಗಲೇ ಬಿಎಸ್ಪಿ ಬಿಜೆಪಿಯ ಜೊತೆ ಒಪ್ಪಂದ ಮಾಡಿಕೊಂಡು ಅಧಿಕಾರದ ಗದ್ದುಗೆಗೇರಿಬಿಟ್ಟಿತ್ತು. ಇದು ನಮ್ಮೊಳಗಿನ ಒಂದು ಆಶಾವಾದಕ್ಕೆ ಬಿದ್ದ ಪೆಟ್ಟು. ಸಮಾಜದ ಸ್ವಾಸ್ಥ್ಯಕ್ಕೆ ಒಂದು ಮದ್ದಿದೆ ಎಂದು ನಾವು ನೋಡುತ್ತಿರುವಾಗಲೇ ಅದು ವಿಷವೂ ಆಗಿಬಿಡಬಹುದು ಎನ್ನುವ ಆತಂಕಕ್ಕೆ ತಳ್ಳಿತ್ತು. ಇದನ್ನು ಅರ್ಥಮಾಡಿಕೊಳ್ಳುವ ದಾರಿಗಳನ್ನು ಹುಡುಕುತ್ತಿದ್ದಾಗ ಅದೇ ದೇವನೂರು ನೆರವಿಗೆ ಬಂದರು. ಈ ಹಿಂದೆ ಅಯೋಧ್ಯ ಸಂದರ್ಭದಲ್ಲಿ ಹೇಳಿದ್ದನ್ನು ಇನ್ನಷ್ಟು ವಿಸ್ತರಿಸಿದರು. ಇನ್ನಷ್ಟು ಸ್ಪಷ್ಟಗೊಳಿಸಿದರು. “ಬ್ರಾಹ್ಮಣ ರಾಜಕೀಯ ಮಾಡುವ ವ್ಯಕ್ತಿಗಿಂತ ಬ್ರಾಹ್ಮಣ್ಯ ರಾಜಕೀಯವನ್ನು ತಾತ್ವಿಕಗೊಳಿಸಿದ ರಾಜಕಾರಣ ದುಷ್ಟ ಎಂಬುದರ ಅರಿವು ನಮಗಿರಬೇಕು. ಉದಾ: ಒಬ್ಬ ವ್ಯಕ್ತಿ ಸಾಂದರ್ಭಿಕವಾಗಿ ಒಂದು ಕೊಲೆ ಮಾಡಿದರೆ ಆತ ತಲೆತಗ್ಗಿಸಿ ನಡೆಯಬಹುದು, ಪಶ್ಚಾತ್ತಾಪ ಪಡಬಹುದು, ನರಳಬಹುದು. ಇನ್ನೊಂದು ಕೊಲೆ ಮಾಡದಿರಬಹುದು. ಅದೇ ವ್ಯಕ್ತಿ ಬಂದು ತತ್ವಕ್ಕಾಗಿ ಎಂದು ಕೊಲೆ ಮಾಡಿದ್ದರೆ ಆಗ ಆತ ತಲೆ ಎತ್ತಿ ನಡೆಯುತ್ತಾನೆ. ಅವನಲ್ಲಿ ಪಶ್ಚಾತ್ತಾಪ ಇರುವುದಿಲ್ಲ. ಆತ ನರಳುವುದಿಲ್ಲ. ಮುಂದಿನ ಕೊಲೆಗಾಗಿ ಹಸನ್ಮುಖನಾಗಿ ಹಾತೊರೆಯುತ್ತಾನೆ. ಸಾಂದರ್ಭಿಕವಾಗಿ ಅಸಮಾನತೆಯನ್ನು ಆಚರಿಸುವವನಿಗಿಂತ, ಅಸಮಾನತೆಯನ್ನು ತಾತ್ವಿಕಗೊಳಿಸುವವನು ಸಾವಿರಾರು ಪಾಲು ದುಷ್ಟ ಎಂಬ ಎಚ್ಚರ ನಮಗಿರಬೇಕು…”

ಬಿಎಸ್ಪಿ ಪಕ್ಷವು ಹೊಂದಾಣಿಕೆಯ ಪರವಾಗಿ ಸಾಕಷ್ಟು ವಾದಗಳನ್ನು ಮಂಡಿಸುತ್ತಿದ್ದಾಗ ದೇವನೂರು ಒಂದೇ ಪ್ರಶ್ನೆ ಕೇಳುತ್ತಾರೆ- “ಡಾ. ಅಂಬೇಡ್ಕರ್ ತನ್ನ ಕಟು ವ್ಯಕ್ತಿತ್ವಕ್ಕೆ, ಆದರ್ಶಗಳಿಗೆ ತಿಲಾಂಜಲಿ ಬಿಟ್ಟು ಅವಕಾಶವಾದಿ ಹೊಂದಾಣಿಕೆ ರಾಜಕೀಯ ಮಾಡಿದ್ದರೆ ಏನಾಗುತ್ತಿತ್ತು? ಅವರು ಸತ್ತ ದಿನವೇ ಸತ್ತು ಹೋಗುತ್ತಿದ್ದರು”. ರಾಜಕೀಯ ಎನ್ನುವುದನ್ನು ಮೂರ್ಖನ ಕೊನೆಯ ಮನೆ ಎಂದು ಹೇಳುತ್ತಾ ರಾಜಕೀಯವನ್ನೇ ಸಿನಿಕತನದಿಂದ ನೋಡುವವರ ಬಗ್ಗೆ ನನಗಂತೂ ಅಸಮಧಾನವಿತ್ತು. ಅದಕ್ಕೆ ಕಾರಣ ನಾನು ಸಂವಹನ ಕೋರ್ಸ್ ಧಿನಗಳಲ್ಲಿ ಓದಿದ್ದ ಸೀನ್ ಮ್ಯಾಕ್ಬ್ರೈಡ್ ನ ‘ಮೆನಿ ವಾಯ್ಸಸ್, ಒನ್ ವರ್ಲ್ಡ್’ ಸಹಾ ಕಾರಣವಾಗಿತ್ತು. ನೊಬೆಲ್ ಪ್ರಶಸ್ತಿ ಪಡೆದ ಮ್ಯಾಕ್ ಬ್ರೈಡ್ ಸುದ್ದಿಯ ಅಮೇರಿಕೀಕರಣದ ವಿರುದ್ಧ ಜಗತ್ತಿನ ಎಲ್ಲೆಡೆ ಸಂಚರಿಸಿ ಮಾಧ್ಯಮ ಹೇಗೆ ಸಮಾಜ ಬದಲಾವಣೆ ತರುತ್ತದೆ ಎನ್ನುವ ನೋಟ ಮಂಡಿಸುತ್ತಲೇ ರಾಜಕಾರಣ ಎನ್ನುವುದು ಹೇಗೆ ಸಮಾಜದ ಬದಲಾವಣೆಯ ಭಾಗ ಎನ್ನುವುದನ್ನು ಹೇಳುತ್ತಾ ಹೋಗಿದ್ದರು. ಹಾಗಾಗಿ ನಾನಂತೂ ರಾಜಕೀಯವನ್ನು ಸಿನಿಕವಾಗಿ ನೋಡಲು ಸಿದ್ಧನಿರಲಿಲ್ಲ. ಮತ್ತೆ ಆ ವೇಳೆಗೆ ನೆರವಿಗೆ ಬಂದದ್ದು ದೇವನೂರು. “ರಾಜಕೀಯ ಮಾಡುವ ಛಾತಿ ನನಗೆ ಇಲ್ಲದಿರಬಹುದು. ಆದರೆ ರಾಜಕೀಯದ ಮಹತ್ವವನ್ನು ನಾನು ಕಡೆಗಣಿಸುತ್ತಿಲ್ಲ” ಎನ್ನುತ್ತಾರೆ.

ನಕ್ಸಲೀಯರ ಬಗ್ಗೆ ಒಂದು ರೀತಿಯ ಮೃದು ಮನಸ್ಸನ್ನು ಹೊಂದಿದ್ದ ಹೋರಾಟಗಾರರ ಮಧ್ಯೆ ನನಗೆ ಒಂದು ಅಂತರ ಇದ್ದೇ ಇತ್ತು. ಇದಕ್ಕೆ ನಾನು ಬೆಳೆದ ಚಿಂತನಾ ಕ್ರಮವೂ ಕಾರಣ ಇದ್ದಿರಬಹುದು ಪೊಲೀಸರಿಗೆ ಗುಂಡಿಕ್ಕಿದ ಅಜಿತಾಳ ಬಗ್ಗೆಯಂತೂ ಎಲ್ಲರೂ ಮೆಚ್ಚಿ ಮಾತನಾಡುವಾಗ ನಾನು ಅದರಿಂದ ದೂರವೇ ಉಳಿದಿದ್ದೆ. ಕಾರಣ ಸಂವಿಧಾನದ ಚೌಕಟ್ಟಿನೊಳಗೇ ಬದಲಾವಣೆ ತಂದುಕೊಳ್ಳುವ ದಾರಿಗಳು ಇರುವುದನ್ನು ನನ್ನ ಕಲಿಕಾ ಕೇಂದ್ರಗಳ ತೋರಿಸಿಕೊಟ್ಟಿದ್ದವು. ದೇವನೂರು ಅವರು ಇದಕ್ಕೂ ಉತ್ತರ ಒದಗಿಸಿದರು. “ಅಜಿತಾ ಮತ್ತು ಅಕೆಯ ಗುಂಪು ಮಾಡಿದ್ದು ಸರಿಯೂ ತಪ್ಪೋ ಎಂಬ ಗೊಂದಲದಲ್ಲಿದ್ದೆ. ನನ್ನ ಪೋಲೀಸ್ ಕಾನ್ಸ್ಟೇಬಲ್ ಆಗಿದ್ದುದೂ ನನ್ನ ಅಪ್ಪ ಅಜಿತಾಳಿಂದ ಕೊಲೆಯಾಗಿದ್ದರೆ ಅಜಿತಾ ನನಗೆ ಹೇಗೆ ಕಾಣಿಸುತ್ತಿದ್ದಳು ಎಂಬ ಉಹೆಯೂ ಇದೆಲ್ಲದರೊಡನೆ ನನ್ನ ಮನಸ್ಸಿಗೆ ಬರುತ್ತಿತ್ತು”.

ಇಂತಹದ್ದೇ ಪ್ರಶ್ನೆಗಳು ನನಗೆ ಎದ್ದದ್ದು ನವರಾತ್ರಿಯ ಸಂದರ್ಭದಲ್ಲಿ. ದಸರಾ ಸಂದರ್ಭದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರಧಾನ ಭಾಷಣ ಮಾಡಿದ ಹಂಪ ನಾಗರಾಜಯ್ಯ ಅವರು ‘ದಸರೆ ಎನ್ನುವುದು ಆರ್ಯರು ದ್ರಾವಿಡರನ್ನು ಸಂಹಾರ ಮಾಡಿದ ಕಥೆ. ಅಂತಹದರಲ್ಲಿ ದ್ರಾವಿಡರಾದ ನಾವು ದಸರೆಯನ್ನು ವಿರೋಧಿಸಬೇಕೇ ಹೊರತು ಆಚರಿಸುವುದು ತಪ್ಪು’ ಎಂದಿದ್ದರು. ಹೊಸ ಪಾಠವೊಂದು ನಮಗೆ ಸಿಕ್ಕಿತ್ತು. ನಾನು ಅಲ್ಲಿಂದ ಗುಲ್ಬರ್ಗಾಗೆ ಹೋದೆ. ಅಲ್ಲಿ ಕೋಣಗಳ ಬಲಿ. ನೂರಾರು ಕೋಣಗಳನ್ನು ಹಾಡಗಹಲೇ ಕೊಂದು ಹಾಕುವ ಆಚರಣೆಗಳು ನನ್ನೊಳಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಆಗಲೇ ದೇವನೂರು ಮಾತನಾಡಿದ್ದು. “ದಲಿತರಾದ ನಮ್ಮಲ್ಲಿ ಮಾರಮ್ಮನಿಗೆ ಕೋಣ ಬಲಿ ಕೊಡುವ ಪದ್ದತಿ ಇತ್ತು, ಈ ಪದ್ದತಿಯ ಹಿಂದೆ ಇರುವ ಕಥೆ ಏನೆಂದರೆ ಒಬ್ಬ ಅಸ್ಪೃಶ್ಯನು ಬ್ರಾಹ್ಮಣ ಕನ್ಯೆಯನ್ನು ಪ್ರೀತಿಸುತ್ತಾನೆ. ಬ್ರಾಹ್ಮಣ ಎಂದು ಸುಳ್ಳು ಹೇಳಿ ವಂಚಿಸಿ ಆಕೆಯನ್ನು ಮದುವೆಯಾಗುತ್ತಾನೆ. ಮುಂದೆ ತಾನು ಮದುವೆಯಾದಾತ ಅಸ್ಪ್ರಶ್ಯ ಎಂದು ಆ ಬ್ರಾಹ್ಮಣಿಗೆ ತಿಳಿದಾಗ ಆಕೆ ಕುಪಿತಳಾಗಿ ಅಗ್ನಿ ಪ್ರವೇಶ ಮಾಡುತ್ತಾ ‘ಜಾತಿ ಸುಳ್ಳು ಹೇಳಿ ನನ್ನನ್ನು ಕೆಡಿಸಿದ ಪ್ರಯುಕ್ತ ಆ ಅಸ್ಪ್ರಶ್ಯ ಕೋಣವಾಗಿ ಹುಟ್ಟಲಿ. ಆ ಕೋಣವನ್ನು ನನಗೆ ಬಲಿ ಕೂಡಲಿ’ ಎಂದು ಶಾಪ ಕೊಡುತ್ತಾಳೆ. ಇದು ಕಥೆ. ಕೋಣವಾದ ತಮ್ಮವನನ್ನೇ ನಮ್ಮವರು ಬಲಿ ಕೊಡುತ್ತಾ, ಅಷ್ಟೇ ಅಲ್ಲ ತಿಂದು ಬಂದಿದ್ದಾರೆ. ಇಂದು ಕೋಣ ಬಲಿಯು ಮಾಂಸ ಮಾತ್ರವಾಗಿರಬಹುದು. ಆದರೆ ಹಿಂದೆ, ನಮ್ಮವರನ್ನು ನಮ್ಮಿಂದಲೇ ಕೊಲ್ಲಿಸುವುದನ್ನು ಈ ಕತೆ ಮಾಡಿಸಿತ್ತು. ವರ್ಣಸಂಕರವನ್ನು ತಡೆದಿತ್ತು”.

ಧರ್ಮಸ್ಥಳದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೇ ಕಾರಣವಾಗಿ ಬಂಡಾಯ ಸಾಹಿತ್ಯ ಸಂಘಟನೆ ಮೂಡಿ ಬಂದಾಗ ‘ಹೀಗೇಕೆ?’ ಎಂದು ಅನಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎಂದು ಪ್ರಯತ್ನಿಸುತ್ತಿರುವಾಗ ದೇವನೂರರು “ಸಾಹಿತ್ಯ ಪರಿಷತ್ತು, ಅದಕ್ಕಿರುವ ರಚನೆಯಲ್ಲಿ ಎಂದೂ ನಮ್ಮಂಥವರ ಆಸೆಗಳನ್ನು ಮುಟ್ಟಲಾರದು. ನಮ್ಮ ಆಸೆಗಳ ಪೂರೈಕೆಗಾಗಿ ಅದರ ಕಡೆ ನೋಡುವುದೇ ತಪ್ಪು, ಮೂರ್ಖತನ ಇತ್ಯಾದಿ. ಪರಿಷತ್ ನಿಲುಗಡೆಯಾದ ಸಾಹಿತ್ಯವನ್ನು ಮೆರೆಸುತ್ತ ಬಂದಿದೆ. ಅದರಿಂದ ಆಗುವುದು ಅದೇನೆ. ನಮಗೆ ಬೇಕಾಗಿರುವುದು ನಡಿಗೆ” ಎಂದಿದ್ದರು.

ನನ್ನನ್ನು ಮ್ಯಾಕ್ಬೆತ್ ಓದು ಆವರಿಸಿಕೊಂಡಿದ್ದ ದಿನಗಳು. ರಾಮಚಂದ್ರ ದೇವರ ಅನುವಾದ ಅದು. ಇಡೀ ಅರೇಬಿಯಾದ ಸುಗಂಧ ದ್ರವ್ಯಗಳೆಲ್ಲವೂ ನನ್ನ ಕೈಯಿನ ಕಲೆಗಳನ್ನು ಹೋಗಲಾಡಿಸಲಾರದೇ ..? ಎಂದು ಲೇಡಿ ಮ್ಯಾಕ್ಬೆತ್ ನಿಡುಸುಯ್ಯುತ್ತಾಳೆ. ಆ ರಕ್ತದ ಕಲೆ, ತೊಳೆದರೂ ಹೋಗದ ರಕ್ತದ ಕಲೆಗಳು ನನ್ನ ಮನಸ್ಸನ್ನು ತಟ್ಟಿ ನಿಂತುಬಿಟ್ಟಿತ್ತು. ಆಗಲೇ ದೇವನೂರು ತಮ್ಮ ‘ಕುಸುಮಬಾಲೆ’ ಹುಟ್ಟಿದ್ದರ ಪ್ರೇರೇಪಣೆ ಏನು ಅಂತ ಹುಡುಕುತ್ತಾ ಇದ್ದರು. ಅಂದಾಜಾಗಿ ಅವರ ಮುಂದೆ ಮೂರು ಪ್ರೇರೇಪಣೆಗಳಿದ್ದವು. ಅದರಲ್ಲಿ ಒಂದು ಅವರ ದಲಿತ ಸ್ನೇಹಿತನೊಬ್ಬನ ಕೊಲೆ. “ದಲಿತ ಸಂಘಟನೆಯಲ್ಲಿದ್ದ ದಲಿತನ ಕೊಲೆ. ಆತ ಕೊಲೆಯಾದ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದಲ್ಲಿದ್ದ ಗೋಡೆಗಳಿಗೆ ಸುಣ್ಣ ಬಳಿಯಲಾಗಿತ್ತು. ಅಲ್ಲಿದ್ದ ಒಬ್ಬ ಮುದುಕಿ ನೀವು ಎರಡು ದಿನ ಮುಂಚೆ ಬಂದಿದ್ದರೆ ರಕ್ತದ ಕಲೆಗಳನ್ನು ನೋಡಬಹುದಿತ್ತು ಎಂದಳು. ಆ ಕ್ಷಣ ನನಗೆ ‘ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ರಕ್ತದ ಕಲೆಗಳು ಉಳಿಯುವುದಿಲ್ಲವೇ?’ ಅನ್ನಿಸಿ ಅದು ಒಳಗೇ ಬೆಳೆಯತೊಡಗಿತು” ಎನ್ನುತ್ತಾರೆ.

ನನ್ನೊಳಗೆ, ನನ್ನ ದಾರಿಯುದ್ದಕ್ಕೂ ಎದ್ದ ಎಷ್ಟೊಂದು ಪ್ರಶ್ನೆಗಳಿವೆ. ಆ ರಕ್ತದ ಕಲೆ, ಆ ಅಜಿತಾ, ಆ ಕಾನ್ಶಿರಾಂ, ಆ ಹೊಂದಾಣಿಕೆ, ಆ ಷೇಕ್ಸ್ಪಿಯರ್, ಆ ಕೋಣ ಬಲಿ, ಆ ಸಾಹಿತ್ಯ ಪರಿಷತ್ತು, ಆ ಇಥಿಯೋಪಿಯಾ, ಆ ಜಾರ್ಜ್ ಫ಼ರ್ನಾಂಡಿಸ್, ಆ ರಾಜಕೀಯ, ಆ ಅಯೋಧ್ಯೆ, ಆ ರಾಮ, ಆ ಶರಣರು, ಆ ಅನುಭವ ಮಂಟಪ, ಹಾಗೆ ಆ ಎಲ್ಲಕ್ಕೂ ದೇವನೂರು ಉತ್ತರವಾಗಿದ್ದಾರೆ. ನನ್ನಲ್ಲಿ ಇನ್ನೂ ಪ್ರಶ್ನೆಗಳಿವೆ ಆ ಅಮೇರಿಕಾ, ಆ ನೀರಿನ ವ್ಯವಹಾರ, ಆ ತೈಲದ ವಹಿವಾಟು, ಆ ಒಳಮೀಸಲಾತಿ, ಆ ರೈತ ಸಂಘ, ಆ ಕಡಿದಾಳುಶಾಮಣ್ಣ, ಆ ದಶಕ, ಆ ದೇವರಾಜ ಅರಸು, ಆ ಪಂಪ, ಆ ಲಂಕೇಶ್, ಆ ಇಂಗ್ಲೀಷ್, ಆ ರೈತ ಆತ್ಮಹತ್ಯೆ, ಆ ಇರಾಕ್ ಯುದ್ಧ, ಆ ಮಠಗಳು, ಆ ಅಹಿಂದ, ಆ.. ಹೀಗೆ ಏನೇನೋ..

ದೇವನೂರು ಅವರು ‘ಕುಸುಮಬಾಲೆ’ ಕೃತಿಯಲ್ಲಿ ರೂಪಿಸಿದ ಜೋತಮ್ಮಗಳ ಕಥೆಗೆ ಬರುತ್ತೇನೆ. “ರಾತ್ರಿ ದೀಪಗಳನ್ನು ಆರಿಸಿದ ನಂತರ ಈ ದೀಪಗಳ ಆತ್ಮಗಳು ಹಳ್ಳಿಯ ಒಂದು ಸ್ಥಳದಲ್ಲಿ, ಮರವೊಂದರ ಕೆಳಗಿರುವ ಮಂಟಪದಲ್ಲಿ ಸೇರಿ ತಂತಮ್ಮ ಮನೆಗಳಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಹಂಚಿಕೊಳ್ಳುತ್ತವೆ ಎನ್ನುವುದು ಈ ಕಥೆ. ಜನಪದ ಕಥೆಯಲ್ಲಿ ಇದನ್ನು ತಮಾಷೆಗೆಂದು ಬಳಸಲಾಗಿದೆ. ಆದರೆ ನಿಜವನ್ನು ನುಡಿಸುವ ಆತ್ಮವಾಗಿ ನನಗೆ ಇದು ಕಾಣಿಸಿತು” ಎನ್ನುತ್ತಾರೆ ದೇವನೂರು.

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು!

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. ಅವನೀಂದ್ರನಾಥ್ ರಾವ್ ಅವರು ತರೀಕೆರೆಯವರ ಬೆನ್ನು ಬಿದ್ದರು.

ಮೊನ್ನೆ ಈದ್ ಮಿಲಾದ್ ಹಬ್ಬದ ಶುಭ ಘಳಿಗೆಯಲ್ಲಿ ಮುಂಜಾನೆ ಎರಡು ಕನಸು ಕಂಡಿದ್ದೆ.

ಒಂದು ಮಾಜಿ ರಾಷ್ಟ್ರಪತಿ, ಕವಿ, ತಂತ್ರಜ್ಞ, ಮಹಾನ್ ನಾಯಕ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಶ್ರೇಷ್ಠ ಮಾನವತಾವಾದಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್ ಅವರ ‘ಸಂವತ್ಸರ ಉಪಾನ್ಯಾಸ’ ಆಲಿಸುವುದು.

ಎರಡನೆಯದು ಹಿಂದಿನ ದಿನ ಸಾಧ್ಯವಾಗದ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ, ಕನ್ನಡದ ಪ್ರಸಿದ್ಧ ಬರಹಗಾರ ರಹಮತ್ ತರೀಕೆರೆ ಅವರನ್ನು ಕಂಡು ಮಾತನಾಡಿಸುವುದು.

ಪ್ರಶಸ್ತಿ ಪ್ರಧಾನ ಸಮಾರಂಭದ ದಿನ ಸಂಜೆಯ ಚಹಾ ಕೂಟದಲ್ಲಿ ತರೀಕೆರೆ ಅವರು ಕಾಣಿಸಲಿಲ್ಲ.

ಬಳಿಕ ಸಭಾಂಗಣದಲ್ಲಿ ಮೇಲೆ ವೇದಿಕೆಯ ಎಡ ಭಾಗದಲ್ಲಿ ಅವರನ್ನು ಕಂಡೆ.

ದೇಶದ 24 ಮಂದಿ ಪ್ರಶಸ್ತಿ ವಿಜೇತರನ್ನು ಸ್ವಾಗತಿಸುತ್ತಾ ಈಗಿನ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕನ್ನಡಿಗ ಅಗ್ರಹಾರ ಕೃಷ್ಣಮೂರ್ತಿ ಅವರು ‘ನನ್ನ ಭಾಷೆಯ , ಕನ್ನಡದ ರಹಮತ್ ತರೀಕೆರೆ ಈ ಬಾರಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು’ ಎಂದಾಗ ಸಭಾಂಗಣ ಹರ್ಷೋದ್ಗಾರದಿಂದ ಚಪ್ಪಾಳೆ ತಟ್ಟಿತು.

ಮೊನ್ನೆ ಸಾಹಿತ್ಯ ಅಕಾಡೆಮಿಯು ‘ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್’ ನಲ್ಲಿ ‘ಸಂವತ್ಸರ ಉಪಾನ್ಯಾಸ’ ಏರ್ಪಡಿಸಿತ್ತು.

ದೇಶದ ಶ್ರೇಷ್ಠ ಸಾಹಿತಿ ಅಥವಾ ಓರ್ವ ಚಿಂತಕರಿಂದ ಉಪಾನ್ಯಾಸವನ್ನು ಕೊಡಿಸುವುದು ಇದರ ಉದ್ದೇಶ. ರಹಮತ್ ತರೀಕೆರೆ ಅವರು ಖಂಡಿತವಾಗಿ ಅಲ್ಲಿಗೆ ಬರುತ್ತಾರೆ ಎಂಬ ನಂಬಿಕೆ ನನಗಿತ್ತು. ಆದರೆ ತರೀಕೆರೆ ಕಾಣಿಸಲಿಲ್ಲ. ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ಎಲ್.ಹನುಮಂತಯ್ಯ ಅವರ ಭೇಟಿ ಆತ್ಮೀಯವಾಗಿತ್ತು. ಅವರಿಬ್ಬರ ನಡುವೆ ಕುಳಿತು ಡಾ. ಕಲಾಮ್ ಅವರ ಉಪಾನ್ಯಾಸ ಕೇಳಿದೆ. ಪಕ್ಕದಲ್ಲಿ ಒರಿಯಾದ ಶ್ರೇಷ್ಠ ಸಾಹಿತಿ ಸೀತಾಕಾಂತ ಮಹಾಪಾತ್ರ ಕುಳಿತಿದ್ದರು.

ಸೂಜಿಗಲ್ಲಿನಂತೆ ಸೆಳೆದ, ಮುಗ್ದ, ಆದರೆ ಪ್ರಖರ ಚಿಂತನೆಯ ಡಾ ಕಲಾಮ್ ಉಪಾನ್ಯಾಸ ಎಲ್ಲರನ್ನು ಮೈಮರೆಯುವಂತೆ ಮಾಡಿತು. ತಿರುವಳ್ಳುವರ್ ಅವರ ‘ತಿರುಕ್ಕುರಲ್’ ನನ್ನನ್ನು ಗಾಢವಾಗಿ ಪ್ರಭಾವಿಸಿದೆ ಎಂದು ಡಾ. ಕಲಾಮ್ ನುಡಿದರು. ಪ್ರತಿಯೊಬ್ಬರೂ ‘ಮನೆ ಗ್ರಂಥಾಲಯ’ ಹೊಂದಲು ನೆರೆದವರನ್ನು ಅವರು ಪ್ರಮಾಣ ಮಾಡಿಸಿದರು. ಡಾ. ಕಲಾಮ್ ಉಪಾನ್ಯಾಸ ಮುಗಿಸಿ ಹೊರಡುತ್ತಿದ್ದಂತೆ ಅಬಾಲ ವೃದ್ದರಾಗಿ ಜನರು ಅವರನ್ನು ಸ್ಪರ್ಶಿಸಲು ಮುಗಿಬೀಳುತ್ತಿದ್ದರು. ಹೊರಗೆ ಪತ್ನಿಯೊಡನೆ ತರೀಕೆರೆ ನಿಂತಿರುವುದನ್ನು ಕಂಡೆ. ನನ್ನ ಊಹೆ ನಿಜವಾಗಿತ್ತು.ನನ್ನ ಪರಿಚಯ ಮಾಡಿಕೊಂಡೆ. ‘ಅವನೀಂದ್ರನಾಥ್ ನೀವು ಗ್ರಂಥಪಾಲಕರಲ್ಲವೆ, ನಿಮ್ಮ ಬಗೆಗೆ ತಿಳಿದಿದ್ದೇನೆ ‘ಎಂದವರು ಹೇಳಿದಾಗ ನನಗೆ ಅಚ್ಚರಿಯಾಯಿತು.

ರಹಮತ್ ತರೀಕೆರೆ ಅವರು ಅಕಾಡೆಮಿ ಅಧ್ಯಕ್ಷ ಸುನೀಲ್ ಗಂಗೋಪಾಧ್ಯಾಯ ಅವರಿಂದ ಪ್ರಶಸ್ತಿ ಸ್ವೀಕರಿಸುವುದು

ನಿಮ್ಮ ಪ್ರಶಸ್ತಿವಿಜೇತ ‘ಕತ್ತಿಯಂಚಿನ ದಾರಿ’ ಕೃತಿಯ ಪ್ರಕಾಶಕ ನ.ರವಿ ಕುಮಾರ್ ನನಗೆ ಗೊತ್ತು. ನನ್ನ ಮೊದಲ ಪುಸ್ತಕ ‘ಸಮಯ ಸಂದರ್ಭ’ ವನ್ನು ಅವರೇ ಪ್ರಕಟಿಸಿದ್ದರು ಎಂದು ಹೇಳಿದೆ. ಅದಾಗಲೇ ಡಾ. ಅಬ್ದುಲ್ ಕಲಾಮ್ ಅವರ ಉಪಾನ್ಯಾಸ ಮತ್ತು ಆಕರ್ಷಣೆಯಿಂದ ಹೊರ ಬಂದಿರದ ತರೀಕೆರೆ ‘ಓರ್ವ ಮಾಜಿ ರಾಷ್ಟ್ರಪತಿ ಈ ಬಗೆಯಲ್ಲಿ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ಅಚ್ಚರಿಯ ಸಂಗತಿ’ ಎಂದು ಉದ್ಗರಿಸಿದರು.

ಬೆಳಿಗ್ಗೆ ಅಕಾಡೆಮಿ ಹಮ್ಮಿಕೊಂಡಿದ್ದ ‘ರೈಟರ್ಸ್ ಮೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತರೀಕೆರೆ ಸಂಜೆ ವಿಶ್ರಾಂತಿ ಪಡೆಯಲು ಬಯಸಿದ್ದರಂತೆ. ಪತ್ನಿಯ ಒತ್ತಾಯದ ಮೇರೆಗೆ ಕಲಾಮ್ ಉಪಾನ್ಯಾಸ ಕೇಳಲು ಬಂದಿದ್ದಾಗಿ ನನ್ನಲ್ಲಿ ಹೇಳಿದರು. ಹಾಗಿಲ್ಲದೆ ಹೋಗಿದ್ದರೆ ಈ ಅವಕಾಶ ತಪ್ಪಿಹೋಗುತ್ತಿತ್ತು ಎಂದು ತರೀಕೆರೆ ಪತ್ನಿಯ ಸ್ಪೂರ್ತಿಯನ್ನು ನೆನೆದರು. ನಂತರ ರಾತ್ರಿ ‘ಪ್ರೆಸ್ ಕ್ಲಬ್’ನವರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಲು ತರೀಕೆರೆ ಪತ್ನಿಯೊಡನೆ ಹೆಜ್ಜೆ ಹಾಕಿದರು.

ತರೀಕೆರೆ ಅವರಿಗೆ ಬೀಳ್ಕೊಟ್ಟ ಬಳಿಕ ಒಂದು ದೃಶ್ಯ ಮನದಲ್ಲಿ ಮರುಕಳಿಸುತಿತ್ತು. ಉಪಾನ್ಯಾಸದ ಬಳಿಕ ಯುವಕನೋರ್ವ ‘ಭಾರತ 2020ರ ವೇಳೆಗೆ ಸೂಪರ್ ಪವರ್’ ರಾಷ್ಟ್ರ ಆಗುವ ಬಗೆ ಹೇಗೆ ಎಂದು ಡಾ. ಕಲಾಮ್ ಅವರಿಗೆ ಸವಾಲು ಹಾಕಿದ್ದ. ಆಶಾವಾದಿಯಾದ ಡಾ. ಕಲಾಮ್ ನೆರೆದವರಿಗೆ ಪ್ರಮಾಣ ಮಾಡಲು ಹೇಳಿದರು. ಅದು ಹೀಗಿತ್ತು.

‘ಐ ಕ್ಯಾನ್ ಡು ಇಟ್

ಯು ಕ್ಯಾನ್ ಡು ಇಟ್

ಇಂಡಿಯಾ ಕ್ಯಾನ್ ಡು ಇಟ್ ‘

ಮುಂಜಾನೆ ಕಂಡಿದ್ದ ನನ್ನೆರಡೂ ಕನಸುಗಳು ಸಾಕಾರಗೊಂಡಿದ್ದವು.

ಅದು ಸರಿ, ಇದೇನಿದು??

ಏನಿದು? ಇದೇನಿದು??

9,17,819…

ಏನಿದು?

ನಾವಡರ ಇನ್ನೂ ಒಂದು ಕಥೆ

ಅರವಿಂದ ನಾವಡ

ಕೂಸಿನ ಕೈಯಲ್ಲಿ ಐಸ್ ಕ್ಯಾಂಡಿಯಿತ್ತು. ಆ ಕ್ಯಾಂಡಿಗೆ ನೀರಿನ ಹನಿಯಾಗಿ ಭೂಮಿಯನ್ನು ಮುತ್ತಿಕ್ಕುವ, ಮುಟ್ಟುವ ಹಂಬಲ. ಈಕೆಯ ನಾಲಗೆಗೋ ತನ್ನೊಳಗೆ ಹೀರಿಕೊಂಡು ಬಿಡಬೇಕೆಂಬ ಸ್ವಾರ್ಥದ ಚಪಲ. ಪ್ರತಿ ಬಾರಿಯೂ ನಾಲಗೆಯೇ ಗೆಲ್ಲುತ್ತಿತ್ತು…ಒಂದೇ ಒಂದು ಬಾರಿ ಗೆಲ್ಲಲು ಹವಣಿಸುತ್ತಿದ್ದ ಕ್ಯಾಂಡಿ ಸೋಲುತ್ತಲೇ ಇತ್ತು.

ಭೂಮಿಯೂ ಅಷ್ಟೇ, ತನ್ನೊಡಲಿಗೆ ಬೀಳುವ ಹನಿಯ ಧರಿಸಲು ಬಾಯಿ ತೆರೆದೇ ನಿಂತಿತ್ತು. ಕೂಸು ಮಾತ್ರ ಅವಕಾಶ ಕೊಡಲೇ ಇಲ್ಲ !

ಏನಿದು? ಇದೇನಿದು??

9,17,478

ಏನಿದು?

ಬಿ ಸುರೇಶ ನೋಡಿದ ಸಿನೆಮಾ

ನೆನ್ನೆ ಕಿಮಿ ಕಿ ಡುಕ್ ನಿರ್ದೇಶನದ ಕ್ರೊಕಡೈಲ್ ಎಂಬ ಹೆಸರಿನ ಚಿತ್ರ ನೋಡಿದೆ. ಆನಂದವಾಯಿತು.

 

ಅರವಿಂದ ನಾವಡ ಕಥೆ

ಅರವಿಂದ ನಾವಡ

ಚೆಂದದ ಗೊಂಬೆಗೆ ಮಗುವೊಂದು ಕೇಳಿತಂತೆ, “ನಿನಗೆ ಅಮ್ಮ ಇಲ್ವಾ?’. ಅದಕ್ಕೆ ಗೊಂಬೆ ಹೇಳಿತಂತೆ, “ಇದ್ದಾಳೆ…ಆದ್ರೆ ಕರೆದ್ರೆ ಬರೋಲ್ಲ” ಅಂತ…ಸುಮ್ಮನಿರದ ಮಗು ಕೂಗಿತು ‘ಅಮ್ಮಾ…”. ಈ ಮಗುವಿಗೆ ತನ್ನ ಅಮ್ಮನ ಪರೀಕ್ಷೆ ಮಾಡೋ ಹುಚ್ಚು

ಪಾಕ ವಿಧಾನ : ಪಡೆಯಿರಿ ಬಹುಮಾನ …

ಕೃಷಿ ಮಾಧ್ಯಮ ಕೇಂದ್ರ ಸಿರಿಧಾನ್ಯ ಬಳಕೆಯ ಪಾಕವಿಧಾನಗಳಿಗೆ ಬಹುಮಾನ ನೀಡಲು ಉದ್ದೇಶಿಸಿದೆ. ಸಾವಿ, ರಾಗಿ, ನವಣೆ, ಸಜ್ಜೆ, ಅರ್ಕಾ, ಊದಲು, ಕೊರ್ಲು, ಬರಗ ಮುಂತಾದ ಸಿರಿಧಾನ್ಯಗಳಿಂದ ತಯಾರಿಸುವ ಸಾಂಪ್ರದಾಯಿಕ ಮತು ಹೊಸ ಅಡುಗೆಗಳನ್ನು ದಾಖಲಿಸುವ ಮತ್ತು ಅವನ್ನು ಪ್ರಚುರಪಡಿಸುವ ಉದ್ದೇಶದೊಂದಿದೆ ಭಾರತೀಯ ಸಿರಿ ಧಾನ್ಯಗಳ ಜಾಲ(ಮಿಲೆಟ್ ನೆಟ್‌ವರ್ಕ್ ಆಫ್ ಇಂಡಿಯಾ, ‘ಮಿನಿ’)ದ ಸಹಯೋಗದೊಂದಿಗೆ ಈ ಬಹುಮಾನ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದುವರೆಗೆ ಒರಟುಧಾನ್ಯಗಳೆಂದು ಕಡೆಗಣಿಸಲ್ಪಟ್ಟಿರುವ, ಆದರೆ ಅಪಾರ ಪೌಷ್ಟಿಕಾಂಶಗಳ ಆಗರವಾಗಿರುವ ಮತ್ತು ಆಹಾರ ಭದ್ರತೆಗೆ ಪೂರಕವಾಗಿರುವ ಈ ಆಹಾರಧಾನ್ಯಗಳನ್ನು ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪಾಕವಿಧಾನ ದಾಖಲಾತಿ, ಪ್ರಚಾರವೂ ಸೇರಿದೆ.

ಆಸಕ್ತರು ಸಿರಿಧಾನ್ಯಗಳಿಂದ ತಯಾರಿಸುವ ಅಥವಾ ಅವುಗಳ ಬಳಕೆಯನ್ನೊಳಗೊಂಡ ಯಾವುದೇ ಬಗೆಯ ಅಡುಗೆಯ ಬಗ್ಗೆ ವಿವರ ಕಳಿಸುವಂತೆ ಕೋರಿಕೆ. ಅಂತಹ ಅಡುಗೆಗಳು ಸಾಂಪ್ರದಾಯಿಕವಾಗಿರಬಹುದು ಅಥವಾ ಹೊಸ ಅಡುಗೆಯಾಗಿರಬಹುದು. ಸಾಂಪ್ರದಾಯಿಕ ವಿಶೇಷ ಅಡುಗೆಗಳಿಗೆ ಆದ್ಯತೆ. ಪ್ರವೇಶಗಳನ್ನು ಕಳುಹಿಸುವಾಗ ಅಡುಗೆಗೆ ಬೇಕಾಗುವ ಸಾಮಗ್ರಿಗಳು, ಪಾಕ ವಿಧಾನ, ಆರೋಗ್ಯದ ದೃಷ್ಟಿಯಲ್ಲಿ (ರುಚಿ, ಶಕ್ತಿ, ಸತ್ವ, ಋತುಮಾನಕ್ಕನುಗುಣವಾಗಿ ಸೇವನೆ, ತಾಳಿಕೆ) ಅದರ ಮಹತ್ವ, ರಾಜ್ಯದ ಯಾವ ಭಾಗದಲ್ಲಿ ಈ ಅಡುಗೆ ಜನಪ್ರಿಯ ಇತ್ಯಾದಿ ವಿವರಗಳನ್ನು ನಮೂದಿಸಬೇಕು. ಜತೆಗೆ ಪ್ರವೇಶ ಕಳುಹಿಸುವವರ ಪುಟ್ಟ ಪರಿಚಯ (ಹೆಸರು, ಉದ್ಯೋಗ, ವಿಳಾಸ ಹಾಗೂ ಸಿರಿಧಾನ್ಯಗಳ ಕುರಿತು ಆಸಕ್ತಿಯ ಕಾರಣ) ಬರೆದಿರಬೇಕು. ಆಯ್ದ 10 ಪಾಕವಿಧಾನಗಳಿಗೆ ಬಹುಮಾನ ನೀಡಲಾಗುವುದು. ಎಲ್ಲ ಉತ್ತಮ ಪಾಕವಿಧಾನಗಳ ವಿವರವನ್ನು ಸಿರಿಧಾನ್ಯ ಕುರಿತ ಪುಸ್ತಕದಲ್ಲಿ ಪ್ರಕಟಿಸಲಾಗುವುದು.

ಪ್ರವೇಶಗಳನ್ನು ಕಳುಹಿಸಬೇಕಾದ ವಿಳಾಸ: ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, ನಾಲ್ಕನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ – 580 008. ಪ್ರವೇಶ ತಲುಪಲು ಕೊನೆಯ ದಿನಾಂಕ: ಮಾರ್ಚ್ 20, 2011.

 

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ

ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ ಯಾಕೆ ಮುಖ್ಯವಾಗಿ ಕಂಡಿತು ಎಂದರೆ , ಈಗ ಬರೆಯುವ ಅನೇಕ ಕನ್ನಡ ಕವಿಗಳು ತಾವೇ ಮೊದಲ ಬಾರಿ ಕಾವ್ಯ ಬರೆಯುತ್ತಿರುವವರು ಎಂಬಂತೆ ಬರೆಯುತ್ತಾರೆ.

ಕನ್ನಡ ಕಾವ್ಯ ಪರಂಪರೆಯ ಪರಿಚಯವೇ ಅವರಿಗಿಲ್ಲ! ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ನನಗೆ ಕಂಡದ್ದು ಹಿಂದುತ್ವದ ವಿರುದ್ಧ ನೀವು ತೆಗೆದುಕೊಂಡ ಸ್ಪಷ್ಟವಾದ ನಿಲುವು. ಇದು ಕೂಡ ಈಗ ಕನ್ನಡ ‘ಬುದ್ದಿ ಜೀವಿಗಳಲ್ಲಿ’ ಅಪರೂಪವಾಗುತ್ತಿದೆ. ಹಿಂದೂ ಧರ್ಮದುರಂಧರರ ಬಗ್ಗೆ ನಿಮ್ಮ ವ್ಯಗ್ರತೆ , ವ್ಯಂಗ್ಯಗಳು ನನಗೆ ತುಂಬಾ ಇಷ್ಟವಾದವು. ಹಿಂದುತ್ವದ ವಿರುದ್ಧ ನಾವೆಲ್ಲರೂ ನಮಗೆ ಸಾಧ್ಯವಿರುವ ನೆಲೆಗಳಲ್ಲಿ ಹೋರಾಟ ಮಾಡುವ ಅಗತ್ಯವಿದೆ. ಇಲ್ಲವಾದರೆ ಅದು ನಮ್ಮನ್ನು ಹಂದಿಗಳನ್ನಾಗಿ ಮಾಡುತ್ತದೆ .

Previous Older Entries