ನೇಮಿಚಂದ್ರ ಹೇಳುತ್ತಾರೆ: ನಾನು ನಿಮ್ಮ ಅಭಿಮಾನಿ

ನಾವು ‘ಕಾಣದ’ ಜಗತ್ತಿಗೆ ಕನ್ನಡಿ…

ಇಸವಿ 2004. ‘ಉದಯವಾಣಿ’ ಸಾಪ್ತಾಹಿಕದಲ್ಲಿ ನನ್ನ ‘ಬದುಕು ಬದಲಿಸಬಹುದು’ ಅಂಕಣ ಬರುತ್ತಿದ್ದ ಸಮಯ. ಶಿಡ್ಲಘಟ್ಟದಿಂದ ಮಲ್ಲಿಕಾರ್ಜುನ ಅವರು ಒಂದು ಪತ್ರ ಬರೆದಿದ್ದರು. ‘ಪೇಪರ್ ಹಾಕುವ ಹುಡುಗನಿಂದ ನಮ್ಮ ಮನೆಯ ಹತ್ತಿರ ಯಾರು ಉದಯವಾಣಿ ತರಿಸುತ್ತಾರೆ ಎಂದು ವಿಚಾರಿಸಿ, ಅವರ ಮನೆಗೆ ಹೋಗಿ, ಅಟ್ಟ ಏರಿ ಭಾನುವಾರದ ಪ್ರತಿಗಳನ್ನು ಹುಡುಕಿ ತಂದೆ, ಈಗ ಪ್ರತಿ ಭಾನುವಾರ ಉದಯವಾಣಿ ತರಿಸುತ್ತಿರುವೆ…’ ಅವರ ಅಷ್ಟೆಲ್ಲ ಪರಿಶ್ರಮಕ್ಕೆ ನನ್ನ ಲೇಖನಗಳು ಖಂಡಿತಾ ಅರ್ಹವಲ್ಲ ಎಂಬ ಅರಿವಿದ್ದ ನನಗೆ ಅಳುಕಾಗಿತ್ತು, ಬರೆಯುವ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿತ್ತು. ಪತ್ರದೊಡನೆ ಅವರೊಂದು ‘ಸೀಡಿ’ ಕಳುಹಿಸಿದ್ದರು. ಅದರಲ್ಲಿ ಅವರು ತೆಗೆದ ಸುಂದರ ಛಾಯಾಚಿತ್ರಗಳಿದ್ದವು. ಅವರ ತೋಟದಲ್ಲೇ ತೆಗೆದ ಹೂಗಳು, ಹಕ್ಕಿಗಳು, ಚಿಟ್ಟೆಗಳು, ಕೀಟಗಳು! ನಮ್ಮ ಮನೆಯಂಗಳದ ಮನದಂಗಳದ ಅದ್ಭುತ ಲೋಕವನ್ನು ತೆರೆದಿಟ್ಟರು. ನನಗೆ ಮಲ್ಲಿಕಾರ್ಜುನ್ ಅವರ ಪರಿಚಯವಾದದ್ದು ಹೀಗೆ.

ಅದರಾಚೆ ನನಗೂ – ಅವರಿಗೂ ಕೊಂಡಿಯಾದವರು ಕಾಮತರ ಕುಟುಂಬ. ನನಗೆ ಪ್ರಿಯವಾದ ನನ್ನ ಫೋಟೋಗಳೆಂದರೆ, ಕೃಷ್ಣಾನಂದ ಕಾಮತರು ತೆಗೆದದ್ದು ಮತ್ತು ಮಲ್ಲಿಕಾರ್ಜುನ್ ಅವರು ತೆಗೆದಿರುವುದು. ಅವರು ಚಿತ್ರಗಳಿಗಷ್ಟೆ ಅಲ್ಲ, ಚಿತ್ರದಲ್ಲಿ ಸೆರೆಹಿಡಿದ ವ್ಯಕ್ತಿಗಳಿಗೂ ಜೀವ ಮತ್ತು ಬಣ್ಣ ತುಂಬುತ್ತಾರೆ. ಕಾಮತರ ಮನೆಗೆ ಹೋದಾಗೆಲ್ಲ ಅವರು ಹಿಡಿದ ನೂರಾರು ಚಿತ್ರಗಳನ್ನು ಬೆರಗಿನಿಂದ ನೋಡುತ್ತಿದ್ದೆ. ನಮಗೆ ಕಾಣದ ಜಗತ್ತು ಅವರಿಗೆ ಕಂಡ ರೀತಿಗೆ ಅಚ್ಚರಿ. ಮಲ್ಲಿಕಾರ್ಜುನ್ ಅವರ ಚಿತ್ರಗಳನ್ನು ನೋಡುವಾಗ ಅದೇ ಬೆರಗು, ವಿಸ್ಮಯ ಅನುಭವಕ್ಕೆ ಬರುತ್ತದೆ. ಕಾಮತರ ದಿಟವಾದ ಉತ್ತರಾಧಿಕಾರಿ ಮಲ್ಲಿಕಾರ್ಜುನ್ ಅವರು.

ಅಂದು ನನ್ನ ಕಾದಂಬರಿ ‘ಯಾದ್ ವಶೇಮ್’ನ ಬಿಡುಗಡೆಯ ಸಂದರ್ಭ. ಮಲ್ಲಿಕಾರ್ಜುನ್ ತಮ್ಮ ಪ್ರೀತಿಯ ಅಮ್ಮನನ್ನು ಕಳೆದುಕೊಂಡು ಹೆಚ್ಚು ಸಮಯವಾಗಿರಲಿಲ್ಲ. ಈ ಬಿಡುಗಡೆಯ ಸಮಯದಲ್ಲಿ ನಮ್ಮೊಡನಿದ್ದ ನನ್ನಮ್ಮನ ಅದೆಷ್ಟೋ ಚಿತ್ರಗಳನ್ನು ಸಹಜ ಸುಂದರವಾಗಿ ಮಲ್ಲಿಕಾರ್ಜುನ್ ಅವರು ಸೆರೆಹಿಡಿದು ನನಗೆ ಕಳುಹಿಸಿದ್ದರು. ಇಂದು ಅಮ್ಮ ಇಲ್ಲ, ಆದರೆ ಮೈಸೂರು ಮನೆಯಲ್ಲಿ ಗೋಡೆಯ ಮೇಲಿನ ಫೋಟೋ ಫ್ರೇಮ್ನಿಂದ ನಗುತ್ತಿರುವ ಮಲ್ಲಿಕಾರ್ಜುನ್ ‘ಸೆರೆಹಿಡಿದ’ ಅಮ್ಮನ ಸುಂದರ ಮುಖ ‘ನಾನೆಲ್ಲಿ ಹೋಗಿದ್ದೇನೆ, ಇಲ್ಲೇ ಇದ್ದೇನಲ್ಲ’ ಎನ್ನುತ್ತಿದೆ.

ಕಾಣಲು ಬರೀ ಕಣ್ಣು ತೆರೆದಿದ್ದರೆ ಸಾಲದು. ಕಾಣಲು ಮನಸ್ಸು ಬೇಕು. ಆಸಕ್ತಿ, ಕುತೂಹಲ, ಜೀವನಪ್ರೀತಿ ಎಲ್ಲವೂ ಬೇಕು. ಅಂತಹ ತೆರೆದ ಮನಸ್ಸಿನ ‘ಚಿತ್ರಕಾರ’ ಮಲ್ಲಿಕಾರ್ಜುನ್. ನಮ್ಮ ಸುತ್ತಮುತ್ತಲಿನ ಜೀವಜಗತ್ತಿಗೆ ಕಣ್ಣು ತೆರೆಸಿದ್ದಾರೆ. ಕಣ್ಣಿದ್ದರೂ ನಾವು ಕಾಣದಿದ್ದ ಈ ಜಗತ್ತಿನ ಬಣ್ಣಗಳಿಗೆ, ಸೋಜಿಗಗಳಿಗೆ, ಕೌತುಕಗಳಿಗೆ ಕನ್ನಡಿ ಹಿಡಿದಿದ್ದಾರೆ. ‘ಅರೆಕ್ಷಣದ ಅದೃಷ್ಟ’ ಓದುಗರಾದ, ಕಾಣುಗರಾದ ನಮ್ಮದು. ಇವು ‘ಅದೃಷ್ಟ’ ಮಾತ್ರದಿಂದ ತೆಗೆದ ಚಿತ್ರಗಳಲ್ಲ. ಅದೃಷ್ಟ ಕೂಡ ಆಕಸ್ಮಿಕವಾಗಿ ಆಗಮಿಸುವುದಿಲ್ಲ. ಇಲ್ಲಿ ನಾವು ಕಾಣುವ ‘ಅದೃಷ್ಟ’, ಸಿದ್ಧ ಮನಸ್ಸಿಗೆ, ಧ್ಯಾನಸ್ಥ ಮನಸ್ಸಿಗೆ ಮಾತ್ರ ಸಿದ್ಧಿಸಬಲ್ಲದು. ಇವು ನಿರಾಯಾಸವಾಗಿ ತೆಗೆದ ಚಿತ್ರಗಳಲ್ಲ ಎಂದು ನೋಡಿದೊಡನೆ ಕಾಣಬಲ್ಲಿರಿ. ಈಶ್ವರೀಬಳ್ಳಿಯ ಎಲೆಯನ್ನು ತಿನ್ನುತ್ತಿದ್ದ ‘ಚಾಕೊಲೇಟ್ ಬಣ್ಣದ ಕೇಸರಿ ಆಂಟೆನಾ’ ಹೊಂದಿದ ಹುಳವನ್ನು ಗುರುತಿಸಿ ಮನೆಗೆ ತಂದು, ಡಬ್ಬದಲ್ಲಿ ಕಾಪಾಡಿ, ಅದಕ್ಕೆ ದಿನವೂ ಎಲೆಯನ್ನು ತಂದು ಹಾಕಿ, ಅದು ಕೋಶಾವಸ್ಥೆಗೆ ಹೋಗುವ ಪರಿಯನ್ನು ವೀಕ್ಷಿಸಿ, ಹೊಳೆವ ಬಣ್ಣದ ಚಿಟ್ಟೆಯಾಗಿ ಹೆರಿಗೆ ಆಗುವವರೆಗೆ ಕಾದು – ಈ ಎಲ್ಲ ಹಂತಗಳ ಚಿತ್ರಗಳನ್ನು ಸೆರೆಹಿಡಿದು ಕೊಡುವುದು ‘ಅರೆಕ್ಷಣದ ಅದೃಷ್ಟ’ದಿಂದ ಸಾಧ್ಯವಿಲ್ಲ. ಇಲ್ಲಿಯ ಚಿತ್ರಗಳಲ್ಲಿ ಅವರ ಸಹನೆ, ಪರಿಶ್ರಮ, ‘ಕಾಣುವ’ ಕಣ್ಣು, ಸೂಕ್ಷ್ಮ ಮನಸ್ಸು, ತಂತ್ರ, ಕೈಚಳಕ ಮಾತ್ರವಲ್ಲ, ಕಂಡ ಜಗತ್ತನ್ನು ಚಿತ್ರಗಳಲ್ಲಿ ಮತ್ತು ಆತ್ಮೀಯ ವಿವರಣೆಗಳ ಮೂಲಕ ನಮ್ಮ ‘ಅನುಭವ’ಕ್ಕೆ ತರುವ ಪರಿ ಇಲ್ಲಿದೆ. ದಿಟವಾಗಿ ನೋಡಿದರೆ ‘ಅದೃಷ್ಟ’ ಓದುಗರಾದ ನಮ್ಮದು. ಅವರ ಅಷ್ಟೆಲ್ಲ ಪರಿಶ್ರಮ, ಸೃಜನಶೀಲತೆ, ಚಿತ್ತೈಕಾಗ್ರತೆ, ತನ್ಮಯತೆಯ ಫಲವಾದ ಈ ಪುಸ್ತಕವನ್ನು ನಿರಾಯಾಸವಾಗಿ ‘ಕಾಣುವ – ಓದುವ’ ಅದೃಷ್ಟ ನಮ್ಮದು.

ಮಲ್ಲಿಕಾರ್ಜುನ್ ಚಿತ್ರ ಬರೆದಷ್ಟೆ ಚಂದವಾಗಿ ಪತ್ರ ಬರೆಯಬಲ್ಲರು ಎಂದು ತಿಳಿದಿತ್ತು. ಅಷ್ಟೇ ಆತ್ಮೀಯವಾಗುವ ಪ್ರಬಂಧಗಳನ್ನು ಬರೆಯುವುದು ಇತ್ತೀಚೆಗೆ ಅವರ ‘ಬ್ಲಾಗ್’ ಓದುತ್ತಾ ಅರಿವಿಗೆ ಬಂತು. ಮಲ್ಲಿಕಾರ್ಜುನ್ ಅವರು ಈ ಪುಸ್ತಕದ ಮೂಲಕ ಹೊಸದೊಂದೇ ಚಿತ್ರಪ್ರಬಂಧ ಪ್ರಕಾರಕ್ಕೆ ಹುಟ್ಟುಹಾಕಿದ್ದಾರೆ. ಅದ್ಭುತ ಚಿತ್ರಗಳೊಡನೆ, ಲವಲವಿಕೆಯ ಅನುಭವ ಕಥನವಿದೆ, ಭಾರವಾಗದ ವೈಜ್ಞಾನಿಕ ವಿವರಗಳಿವೆ, ಕುತೂಹಲದ ಕಣ್ಣಿದೆ. ಈ ಪುಸ್ತಕವನ್ನು ಪ್ರತಿಯೊಬ್ಬ ಪ್ರಾಧ್ಯಾಪಕರೂ, ಪೋಷಕರೂ, ವಿದ್ಯಾರ್ಥಿಗಳೂ ಓದಬೇಕು ಎಂಬುದು ನನ್ನ ಆಸೆ. ನಮ್ಮ ಎಳೆಯ ಮಕ್ಕಳೆದುರು ಸುತ್ತಲಿನ ಜೀವಜಗತ್ತನ್ನು ತೆರೆದಿಡುವ ಪರಿಯನ್ನು ಕಲಿಸುತ್ತದೆ, ಪರಿಸರ ಪ್ರೀತಿಯನ್ನು ಕಲಿಸುತ್ತದೆ. ಕಲಿಯುವ ಕ್ರಿಯೆಯನ್ನು ಸಹಜ ಸಂತಸ ಅನುಭವವಾಗಿಸಬಲ್ಲ ಪುಸ್ತಕವಿದು.

ನಾವು ‘ಕಾಣದ’ ಅದ್ಭುತ ಜಗತ್ತಿಗೆ ನಮ್ಮ ‘ಕಣ್ಣು ತೆರೆಸಿದ’ ಮಲ್ಲಿಕಾರ್ಜುನ್ ಅವರಿಗೆ ಏನು ಹೇಳಲಿ? ‘ನಾನು ನಿಮ್ಮ ಅಭಿಮಾನಿ’ ಎಂದು ಮಾತ್ರ ಹೇಳಬಲ್ಲೆ.

-ನೇಮಿಚಂದ್ರ

(ಮುನ್ನುಡಿ)

ನಿಮ್ಮ ಟಿಪ್ಪಣಿ ಬರೆಯಿರಿ