ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆಗೆ ವೇದಿಕೆ.
ಪ್ರಜಾವಾಣಿ ‘ಸಾಪ್ತಾಹಿಕ ಪುರವಣಿ’ಯಲ್ಲಿ ಕೆ ವಿ ಅಕ್ಷರ ಅವರ ‘ಹರಕೆ ಹರಾಜು’ ಲೇಖನ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ. ಅಕ್ಷರ ಬರೆದಿರುವ ಈ ಲೇಖನ ಯಾವ ದಿಕ್ಕಿನಲ್ಲಿದೆ ಎಂದು ಆಶ್ಚರ್ಯವಾಗುತ್ತಿದೆ. ಮಡೆ ಸ್ನಾನದಂತಹ ಆಚರಣೆಯನ್ನೂ, ಕ್ರಿಕೆಟ್ ಆಟಗಾರರ ಹರಾಜನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗಿದೆ.
ಈ ಲೇಖನದೆಅ ಬಗ್ಗೆ ಪುರುಷೋತ್ತಮ ಬಿಳಿಮಲೆ ಹಾಗೂ ಜೋಗಿ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಕ್ಷರ ಅವರ ಲೇಖನದ ಬಗ್ಗೆಯೂ, ಬಿಳಿಮಲೆ, ಜೋಗಿ ಅಭಿಪ್ರಾಯದ ಬಗ್ಗೆಯೂ ನಿಮ್ಮ ಅಭಿಪ್ರಾಯ ಕಳಿಸಿ
ಅಕ್ಷರ ಅವರ ಲೇಖನ ಓದಿ ತುಂಬಾ ನಿರಾಶೆಯಾಯಿತು. ‘ಹರಾಜಿನ ಸುದ್ದಿಗೆ ಹೋಲಿಸಿದರೆ, ಹರಕೆಯ ಸುದ್ದಿಯು ಅದು ಸಂಭವಿಸಿದ ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ.’ ಎಂಬ ಅವರ ಮಾತುಗಳು ಆಘಾತಕಾರಿಯಾಗಿದೆ. ಅವಮಾನವನ್ನು ಕೇವಲ ಬೌದ್ಧಿಕ ಅಹಂಕಾರದಲ್ಲಿ ವಿವರಿಸುವ ಮತ್ತು ಗ್ರಹಿಸುವ ಈ ಬಗೆಯ ಬರೆಹ, ಮಾನವನ ಘನತೆಯನ್ನು ಹಣದ ಮೂಲಕ ವಿವರಿಸುವ ಮಿತಿಗೆ ಒಳಪಟ್ಟಿದೆ. ಇದು ಪ್ರತಿಗಾಮಿ ಪರಂಪರೆಯನ್ನು ನಾಜೂಕಾಗಿ ಸಂರಕ್ಷಿಸುವ ಹೊಸ ವಿಧಾನ. ಬತ್ತಲೆ ಸೇವೆ ನಿಂತು ಹೋದಂತೆ ಎಂಜಲು ಎಲೆಯಮೇಲೆ ಹೊರಳುವುದು ನಿಲ್ಲಬೇಕು.
-ಪುರುಷೋತ್ತಮ ಬಿಳಿಮಲೆ
++
ಅಕ್ಷರ ಅನಿಸಿಕೆ ಇಷ್ಟವಾಯಿತು.
ಇವತ್ತು ಯಾವುದು ಮೂಢನಂಬಿಕೆ, ಯಾವುದು ಅವಮಾನ, ಯಾವುದು ಶ್ರೇಷ್ಠ ಅನ್ನುವುದನ್ನು ನಿರ್ಧಾರ ಮಾಡುವುದು ಪತ್ರಿಕೆಗಳು ಮತ್ತು ಚಾನಲ್ಲುಗಳು. ಮೀಡಿಯಾಕ್ಕೆ ಆ ಹಕ್ಕು ಕೊಟ್ಟವರು ಯಾರು? ಮೀಡಿಯದಲ್ಲಾದರೂ ಅಂಥ ನಿರ್ಧಾರ ಕೈಗೊಳ್ಳಬಹುದಾದ ಸ್ವೋಪಜ್ಞರು ಇದ್ದಾರಾ? ಇದು ಕಂದಾಚಾರ, ಇದು ಅಂಧಶ್ರದ್ಧೆ, ಇದು ಮೌಢ್ಯ ಎಂದು ಒದರಿ ಅವೂ ಕೂಡ ಸುಮ್ಮನಾಗುತ್ತವೆ. ಮೀಡಿಯಾಗಳಿಗೆ ಅವು ಆ ಕ್ಷಣಕ್ಕೊಂದು ಸುದ್ದಿ ಮಾತ್ರ.
ಒಂದು ಆಚರಣೆಯನ್ನು ಎಷ್ಟು ಮಂದಿ ಎಷ್ಟು ವರ್ಷದಿಂದ ಮಾಡುತ್ತಾ ಬಂದಿದ್ದಾರೆ. ಅವರಿಗೆ ಅದರಿಂದ ಯಾವ ಪ್ರಯೋಜನ ಆಗಿದೆ. ಮಾನಸಿನ ನೆಮ್ಮದಿ ಎಷ್ಟು ಸಿಕ್ಕಿದೆ, ದೈಹಿಕವಾಗಿ ಅನುಕೂಲ ಏನೇನಾಗಿದೆ. ನಿಜಕ್ಕೂ ಅದರಿಂದ ಉಪಯೋಗ ಇದೆಯಾ ಅನ್ನುವುದನ್ನು ಮನೋವಿಜ್ಞಾನಿಗಳೂ, ವಿಜ್ಞಾನಿಗಳೂ, ಸಮಾಜಶಾಸ್ತ್ರಜ್ಞರೂ ಸೇರಿಕೊಂಡು ಅಧ್ಯಯನನ ನಡೆಸಿ ತೀರ್ಮಾನಿಸಬೇಕು. ಅಂಥ ಪ್ರಯತ್ನ ಎಲ್ಲಿ ನಡೆಯುತ್ತಿದೆ.
ಮೊನ್ನೆ ಯಾವುದೋ ಚಾನಲ್ಲಿನಲ್ಲಿ ಉತ್ತರ ಕರ್ನಾಟಕದ ಯಾವುದೋ ಹಳ್ಳಿಯ ಜಾತ್ರೆಯಲ್ಲಿ ಮಗುವನ್ನು ಅಷ್ಟೆತ್ತರದಿಂದ ಕೆಳಗೆಸೆಯುವ ಆಚರಣೆ ಪ್ರಸಾರವಾಗುತ್ತಿತ್ತು. ವೈದ್ಯರೊಬ್ಬರು ಮಕ್ಕಳನ್ನು ಅಷ್ಟು ಎತ್ತರದಿಂದ ಎಸೆಯುವುದು ಅಪಾಯಕಾರಿ ಎಂದು ಹೇಳಿಕೆ ಕೊಡುತ್ತಿದ್ದರು. ಅದರ ಪರಿಣಾಮಗಳ ಬಗ್ಗೆ ಅವರಿಗ ಗೊತ್ತಿತ್ತೇ, ಎಷ್ಟೋ ವರ್ಷಗಳಿಂದ ನಡೆಯುತ್ತಿರುವ ಆಚರಣೆ ಅದು. ಐವತ್ತು ವರ್ಷದ ಹಿಂದೆ ಹಾಗೆ ಎಸೆಯಲ್ಪಟ್ಟವರು ಯಾರು, ಅವರು ಹೇಗಿದ್ದಾರೆ. ಅವರ ಮೇಲೆ ಅದರಿಂದ ಯಾವ ದುಷ್ಪರಿಣಾಮ ಆಗಿದೆ ಅನ್ನೋದನ್ನು ಅಧ್ಯಯನ ಮಾಡುತ್ತೀರಾ.. ಇಲ್ಲ, ಹೋಗಲಿ ಈ ವರ್ಷ ಮೇಲಿಂದ ಕೆಳಗೆ ಎಸೆಯದ ಒಂದೇ ಒಂದು ಮಗು ಮುಂದಿನ ಒಂದು ವರ್ಷದಲ್ಲಿ ಏನೇನೋ ಸಮಸ್ಯೆ ಎದುರಿಸಿತು ಎಂದು ಫಾಲೋ ಅಪ್ ಮಾಡಿದ್ದೀರಾ. ಅದೂ ಇಲ್ಲ. ಆ ಕ್ಷಣದ ತೆವಲಿಗ ಆಚರಣೆಗಳು ಮತ್ತು ಸಂಪ್ರದಾಯಗಳು ಬಲಿಯಾಗುತ್ತಿವೆ.
ನಾವು ಏನು ಮಾಡಬೇಕು, ಯಾವುದು ಮೌಢ್ಯ, ಯಾವುದು ಸತ್ಯಂಪ್ರದಾಯ, ನಾನು ಹೇಗೆ ನಡೆದುಕೊಳ್ಳಬೇಕು, ಯಾರನ್ನು ಪೂಜಸಬೇಕು ಅನ್ನುವುದನ್ನು ಮೀಡಿಯಾ ನಿರ್ಧಾರ ಮಾಡುವಂತಾಗಿರುವುದು ಇಂದಿನ ಮುಖ್ಯ ಸಮಸ್ಸೆ. ಇದರಿಂದಾಗಿ ಪ್ರತಿಯೊಂದೂ ಮೀಡಿಯಾವನ್ನು ಓಲೈಸುವ ಕ್ರಿಯೆಯಷ್ಟೇ ಆಗಿಬಿಟ್ಟಿದೆ. ಚಿಂತನೆಯಲ್ಲಾಗಲೀ, ಕ್ರಿಯೆಯಲ್ಲಾಗಲೀ ಒರಿಜಿನಾಲಿಟಿ ಕಾಣಿಸದು.
ನನಗೆ ಪತ್ರಿಕೆ ಬೇಕಾಗಿರುವುದು ಸುದ್ದಿಗೆ ಮಾತ್ರ. ನನ್ನನ್ನು ತಿದ್ದುವುದಕ್ಕೋ ಬುದ್ಧಿವಂತನನ್ನಾಗಿ ಮಾಡುವುದಕ್ಕೋ ಅಲ್ಲ. ಈಗಿನ ಪತ್ರಿಕರ್ತರು, ಅದರಲ್ಲೂ ಇಂಗ್ಲಿಷ್ ಪತ್ರಕರ್ತರು ತಾವು ಸರ್ವಜ್ಞರು ಅಂದುಕೊಂಡಂತಿದೆ. ಆದರೆ, ನಾವು ಪತ್ರಕರ್ತರು ನೆನಪಿಬೇಕಾದ ಸಂಗತಿಯೊಂದಿದೆ. ಚರಿತ್ರೆಯಲ್ಲಿ ದಾಖಲಾಗುವುದು ಕ್ರಿಯೆಯೇ ಹೊರತು, ಮಾತಲ್ಲ. ಮಹಾತ್ಮ ಗಾಂಧಿ ದಂಡಿ ಮಾರ್ಚ್ ಮಾಡಿದ್ದಷ್ಟೇ ಮುಖ್ಯ ಅದನ್ನು ಯಾರು ವರದಿ ಮಾಡಿದರು ಅನ್ನುವುದಲ್ಲ.
–ಜೋಗಿ
12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು