ಭಾನುವಾರ ಬೆಳಗ್ಗೆ ೧೦-೩೦ ಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಬಿಡುಗಡೆ, ಖಂಡಿತಾ ಬನ್ನಿ ಅನ್ನುತ್ತಿದ್ದಾರೆ ಜೋಗಿ-
ಆವ ರೂಪದೊಳು ಬಂದರೂ ಸರಿಯೇ
ಶೋಭಾರಾಣಿಗೆ ಭಿಕ್ಷುಕರನ್ನು ಕಂಡರೆ ಭಯ. ಮನೆ ಮುಂದೆ ನಿಂತು `ಅಮ್ಮಾ’ ಅಂತ ಯಾರೇ ಕೂಗಿದರೂ ಸರಿಯೇ, ಶೋಭಾ ಕೈಲಿದ್ದ ಕೆಲಸ ಬಿಟ್ಟು ಒಂದು ರುಪಾಯಿಯನ್ನೋ ಒಂದಷ್ಟು ಹಣ್ಣನ್ನೋ ಹಳೇ ಬಟ್ಟೆಯನ್ನೋ ಕೊಟ್ಟು ಕಳುಹಿಸುತ್ತಾಳೆ. ಒಂದೆರಡು ಸಲ ಮನೆ ತುಂಬ ನೆಂಟರಿದ್ದಾಗಲೋ, ಸ್ನಾನ ಮಾಡುತ್ತಿರುವಾಗಲೋ ಭಿಕ್ಷುಕ ಬಂದು ಕರೆದಾಗ ಶೋಭಾ ಒಳಗೊಳಗೇ ಚಡಪಡಿಸಿದ್ದಿದೆ. ಅವರಿಗೆ ಏನೂ ಕೊಡಲಿಕ್ಕಾಗಲಿಲ್ಲವಲ್ಲ ಎಂಬ ಪಾಪಪ್ರಜ್ಞೆಯಲ್ಲೇ ಇಡೀ ದಿನ ಕಳೆದದ್ದಿದೆ.
ಶೋಭಾಳಿಗೆ ಬೇಡುವವರ ಮೇಲೆ ಪ್ರೀತಿ ಏನಿಲ್ಲ. ಅವಳು ಸಣ್ಣ ಹುಡುಗಿಯಾಗಿದ್ದಾಗ ಅಮ್ಮ ರುಕ್ಮಿಣಿ ಅವಳಿಗೆ ದಿನಕ್ಕೊಂದು ಕತೆ ಹೇಳುತ್ತಿದ್ದರು. ಮಹಾ ದೈವಭಕ್ತೆಯಾಗಿದ್ದ ರುಕ್ಮಿಣಿ ಹೇಳುತ್ತಿದ್ದದ್ದೆಲ್ಲ ದೈವಭಕ್ತಿಯ ಕತೆಗಳನ್ನೇ. ಸುದಾಮ ಕೃಷ್ಣನಿಗೆ ಅವಲಕ್ಕಿ ಕೊಟ್ಟದ್ದು, ಜಿಪುಣ ಪುರಂದರದಾಸರ ಅಂಗಡಿಗೆ ವಿಠ್ಠಲ ಯಾವುದೋ ರೂಪದಲ್ಲಿ ಬಂದದ್ದು, ವ್ಯಾಸರಾಯರ ಶಿಷ್ಯರಾದ ವಾದಿರಾಜರಿಗೆ ಹರಿ ಕುದುರೆಯ ರೂಪಲ್ಲಿ ಹಯವದನನಾಗಿ ಕಾಣಿಸಿಕೊಂಡದ್ದು, ಸತಿ ಸಕ್ಕೂಬಾಯಿಗೆ ಭಗವಂತ ಕಾಣಿಸಿದ್ದು, ಸಿರಿಯಾಳನ ಮನೆಗೆ ಹಸಿದ ಹೊಟ್ಟೆಯಲ್ಲಿ ಶಿವ ಬಂದದ್ದು- ಹೀಗೆ ಹರಿಹರರಿಬ್ಬರ ಕತೆಗಳನ್ನೂ ರುಕ್ಮಿಣಿ ಹೇಳಿ ಶೋಭಾರಾಣಿಯನ್ನು ದೈವಭಕ್ತಿಸಂಪನ್ನನಾಗಿ ಮಾಡಿದ್ದಳು. ಆ ಕತೆಗಳೆಲ್ಲ ಅವಳ ಮನಸ್ಸಿನಲ್ಲಿ ಹೇಗೆ ಕೂತುಬಿಟ್ಟಿದ್ದವು ಎಂದರೆ, ಯಾವ ಭಿಕ್ಷುಕ ಬಂದರೂ ಅವನು ದೈವಸ್ವರೂಪಿಯೇ ಯಾಕಾಗಿರಬಾರದು ಎಂಬ ಅನುಮಾನ ಅವಳಲ್ಲಿ ಮೊಳೆಯುತ್ತಿತ್ತು. ಎಷ್ಟೋ ಸಲ ಭಿಕ್ಷೆ ಹಾಕುವಾಗ ಅವಳು ಜೋಳಿಗೆ ಮುಂದೆ ಚಾಚಿದವರ ಮುಖವನ್ನೇ, ಅಲ್ಲಿ ದೈವಕಳೆ ಕಂಡರೂ ಕಂಡೀತೇನೋ ಎಂಬ ಆಸೆಯಿಂದ ಗಮನಿಸುತ್ತಿದ್ದದ್ದೂ ಉಂಟು. ಯಾವತ್ತೂ ಅವಳಿಗೆ ಅಂಥದ್ದೇನೂ ಕಂಡಿರಲಿಲ್ಲ. ಹೆಚ್ಚಿನ ಭಿಕ್ಷುಕರು ಸೋಮಾರಿಗಳ ಥರ, ಕೊಲೆಗಡುಕರ ಥರ, ಕಳ್ಳರ ಥರ ಕಾಣಿಸುತ್ತಿದ್ದರು. ಆದರೂ, ಅವರು ಭಿಕ್ಷುಕರಲ್ಲವೇ ಅಲ್ಲ, ವೇಷ ಮರೆಸಿಕೊಂಡ ಮಹಾಮಹಿಮರು ಎಂದು ನಂಬುವುದನ್ನು ಮಾತ್ರ ಅವಳು ನಿಲ್ಲಿಸಿರಲಿಲ್ಲ.
ಆವತ್ತೂ ಹಾಗೆಯೇ ಆಯ್ತು . ಶೋಭಾರಾಣಿ ಸ್ನಾನಕ್ಕೆ ಹೋಗಿದ್ದಳಷ್ಟೇ. ಗೇಟು ಸದ್ದಾಯಿತು. ಯಾರೋ ಆರ್ತತೆ ಮತ್ತು ಗಾಂಭೀರ್ಯ ಬೆರೆತ ದನಿಯಲ್ಲಿ ಭಿಕ್ಷ ಹಾಕೀಮ್ಮಾ ಅಂದದ್ದು ಕೇಳಿಸಿತು. ಸ್ನಾನಕ್ಕೆ ಇಳಿದಿರದೇ ಇದ್ದರೆ ಶೋಭಾ ಅವನನ್ನು ಬರಿಗೈಲಿ ಕಳಿಸುವ ಧೈರ್ಯ ಮಾಡುತ್ತಿರಲಿಲ್ಲ. ಅವನು ಇನ್ನೂ ಕಾಯುತ್ತಿರಬಹುದಾ, ಹೋಗಿರಬಹುದಾ ಎಂಬ ಕಾತರದಲ್ಲಿ ಅವಳು ಬೇಗ ಸ್ನಾನ ಮುಗಿಸಿದ್ದಳು, ತಲೆಯನ್ನೂ ಸರಿಯಾಗಿ ಒರೆಸಿಕೊಳ್ಳದೇ ಹೊರಗೆ ಬಂದು ನೋಡಿದರೆ ಅವನು ಹೊರಟು ಹೋಗಿದ್ದ. ಗೇಟಿನ ಸಮೀಪ ಬಂದು ಬೀದಿಯನ್ನು ಹಣಿಕಿ ಹಾಕಿದರೆ, ರಸ್ತೆಯ ಕೊನೆಯ ತಿರುವಲ್ಲಿ ತಂಬೂರಿ ಮತ್ತು ಭಿಕ್ಷಾಪಾತ್ರೆ ಹಿಡಕೊಂಡ ಎತ್ತರದ ಮನುಷ್ಯನೊಬ್ಬ ಮರೆಯಾಗುವುದರಲ್ಲಿದ್ದ. ಜೋರಾಗಿ ಕೂಗಿ ಅವರನ್ನು ವಾಪಸ್ಸು ಕರೆಸಿಕೊಂಡು ಭಿಕ್ಷೆ ಹಾಕಲೇಬೇಕು ಎಂಬ ಆಸೆಯನ್ನು ಶೋಭಾರಾಣಿ ಕಷ್ಟಪಟ್ಟು ತಡೆದುಕೊಂಡಳು.
ಇಂಥದ್ದೇ ಗಾಬರಿ ಅವಳಿಗೆ ಫೋನ್ ಬಂದಾಗಲೂ ಆಗುತ್ತದೆ. ತನ್ನ ಮೊಬೈಲಿಗೆ ಬಂದ ಪ್ರತಿಕರೆಯನ್ನೂ ಅವಳು ತಪ್ಪದೇ ಸ್ವೀಕರಿಸುತ್ತಾಳೆ. ಮಿಸ್ಡ್ ಕಾಲ್ಗಳಿಗೆ ತಪ್ಪದೆ ಉತ್ತರಿಸುತ್ತಾಳೆ. ಎಷ್ಟೋ ಸಲ ಅದು ರಾಂಗ್ ನಂಬರ್ ಆಗಿರುತ್ತದೆ. ಕೆಲವರಿಗೆ ತಾವು ಫೋನ್ ಮಾಡಿದ್ದೇ ಮರೆತುಹೋಗಿರುತ್ತದೆ. ಮತ್ತೆ ಕೆಲವು ಪರಿಚಿತರು `ಯಾಕೋ ಮಾಡ್ದೇರಿ, ಮರೆತೇ ಹೋಯ್ತು’ ಎಂದು ಯಾವ ಭಾವಾವೇಶವೂ ಇಲ್ಲದೇ ಹೇಳಿ ಅವಳನ್ನು ಸಿಟ್ಟಿಗೆಬ್ಬಿಸುತ್ತಾರೆ. ಅವರು ಹೇಳಬೇಕಾಗಿದ್ದ ಯಾವುದೋ ಮಾಹಿತಿ ತಪ್ಪಿಹೋಯಿತು ಎನ್ನುವ ಸಂಕಟ ಅವಳನ್ನು ಬಾಧಿಸುತ್ತಲೇ ಇರುತ್ತದೆ.
ಅವಳ ಈ ಚಾಳಿಯನ್ನು ನರಹರಿ ಗೇಲಿ ಮಾಡುವುದಿದೆ. ಅವಳು ಯಾವುದೋ ಒಂದು ದುರ್ಬಲ ಗಳಿಗೆಯಲ್ಲಿ ತನಗೆ ಭಿಕ್ಷುಕರ ಬಗ್ಗೆ ಯಾಕೆ ಅಷ್ಟೊಂದು ಭಯ ಎನ್ನುವುದನ್ನು ನರಹರಿಗೆ ಹೇಳಿಬಿಟ್ಟಿದ್ದಳು. ನರಹರಿ ಅದನ್ನು ಕೇಳಿಸಿಕೊಂಡು ಗಂಟೆಗಟ್ಟಲೆ ನಕ್ಕಿದ್ದ. ಅವಳ ಫೋನ್ ಪ್ರೀತಿಯೂ ಅವನಿಗೆ ಗೊತ್ತು. ನಡುರಾತ್ರಿ ಬರುವ ಸಿಂಗಲ್ ರಿಂಗ್ ಮಿಸ್ ಕಾಲ್ಗಳನ್ನೂ ನಿರ್ಲಕ್ಷ್ಯಮಾಡದ ಅವಳ ಬಗ್ಗೆ ಅವನಿಗೆ ಅನುಕಂಪವೂ ಇತ್ತು. ಎಷ್ಟೋ ಸಲ ಅವನು `ಯಾಕೆ ಹೀಗೆ ಎಲ್ಲವನ್ನೂ ಅತಿಯಾಗಿ ಮಾಡ್ತೀಯ ಹೇಳು. ಫೋನ್ ಮಾಡಿದವರು ಅವರಿಗೆ ಅಗತ್ಯವಿದ್ದರೆ ಮತ್ತೆ ಮಾಡುತ್ತಾರೆ. ನೀನೇ ಮೇಲೆ ಬಿದ್ದು ಮಾಡೋ ಅಗತ್ಯ ಏನಿದೆ. ಹೆಚ್ಚಿನವರು ಮಾಡೋದಕ್ಕೆ ಬೇರೆ ಕೆಲಸ ಇಲ್ಲದೇ ಫೋನ್ ಮಾಡುತ್ತಾರೆ. ಹಾಗೆ ಫೋನಲ್ಲೇ ಏನೋ ಒಂದು ಪವಾಡ ನಡೆದುಬಿಡೋದಿಲ್ಲ. ನೀನು ಮಾಡೋದು ನೋಡಿದ್ರೆ ಶ್ರೀಕೃಷ್ಣನೋ ಶ್ರೀಮನ್ನಾರಾಯಣನೋ ಫೋನ್ ಕೂಡ ಮಾಡಬಹುದು ಅಂದುಕೊಂಡಿರೋ ಹಾಗಿದೆ’ ಎಂದು ಅವಳನ್ನು ಛೇಡಿಸುತ್ತಿದ್ದ. ಅವನು ಹೇಳುವಾಗ ಅದು ಸರಿ ಅನ್ನಿಸುತ್ತಿತ್ತು. `ಇನ್ಮೇಲೆ ನಂಗೆ ಫೋನೇ ಬೇಡ’ ಅಂತ ಅವಳು ಫೋನನ್ನು ಅವನ ಕೈಗೆ ಕೊಟ್ಟುಬಿಡುತ್ತಿದ್ದಳು. ಅವನು ಅದನ್ನು ಆಫ್ ಮಾಡಿ ಪಕ್ಕಕ್ಕೆ ಎಸೆಯುತ್ತಿದ್ದ. ಅದು ಪ್ರಜ್ಞಾಹೀನ ಸ್ಥಿತಿಗೆ ಹೋದ ಅರ್ಧಗಂಟೆಗೆಲ್ಲ ಅವಳ ದೈವಪ್ರಜ್ಞೆ ಜಾಗೃತವಾಗುತ್ತಿತ್ತು. `ಯಾಕೆ ಬೇಕು ರಗಳೆ. ಅಮ್ಮ ಫೋನ್ ಮಾಡಬಹುದು. ಯಾರೋ ಗೆಳೆಯರಿಗೋ ಸಂಬಂಧಿಕರಿಗೋ ತೊಂದರೆ ಆಗಬಹುದು. ಅಕ್ಕ ನಮ್ಮನೆಗೆ ದಾರಿ ಸಿಗದೇ ಇಲ್ಲೆಲ್ಲೋ ಅಲೀತೀರಬಹುದು. ಯಾವುದೋ ಕೊರಿಯರ್ ಅಂಗಡಿಯವರು ನಮ್ಮನೆ ದಾರಿ ಕೇಳ್ತಾ ಫೋನ್ ಮಾಡಬಹುದು’ ಎಂದೆಲ್ಲ ಯೋಚಿಸಿ ಫೋನ್ ತಂದು ಆನ್ ಮಾಡಿ ತಲೆದಿಂಬಿನ ಪಕ್ಕ ಇಟ್ಟುಕೊಳ್ಳುತ್ತಿದ್ದಳು. ಅವಳ ಫೋನಿಗೆ ಮಿಸ್ಡ್ ಕಾಲ್ ಅಲರ್ಟ್ ಆಕ್ಟಿವೇಟ್ ಆಗಿದ್ದರಿಂದ ಆಫ್ ಮಾಡಿದಾಗ ಫೋನ್ ಮಾಡಿದ್ದು ಕೂಡ ತಿಳಿಯುತ್ತಿತ್ತು. ಒಂದರ್ಧ ಗಂಟೆ ಸ್ವಿಚಾಫ್ ಮಾಡಿಟ್ಟಾಗಲೂ ಐದೋ ಆರೋ ಕರೆಗಳು ಮಿಸ್ಸಾಗಿರುತ್ತಿದ್ದವು. ಅವರಿಗೆ ಪೋನ್ ಮಾಡಿ ಯಾರು ಏನು ಎಂದು ವಿಚಾರಿಸಿಕೊಳ್ಳದ ಹೊರತು ಅವಳಿಗೆ ಸಮಾಧಾನ ಆಗುತ್ತಿರಲಿಲ್ಲ. ಹೀಗಾಗಿ ಫೋನ್ ಆಫ್ ಮಾಡುವುದು ನಿರರ್ಥಕ ಎಂಬ ತೀರ್ಮಾನಕ್ಕೆ ನರಹರಿ ಬಂದುಬಿಟ್ಟಿದ್ದ.
ಇತ್ತೀಚಿನ ಟಿಪ್ಪಣಿಗಳು