-ಜಿ.ಎನ್.ರಂಗನಾಥರಾವ್

ಪ್ರಿಯ ಎಚ್ಚೆಸ್ವಿ
ವಿಸ್ಮಯ, ಬೆರಗು, ವಿಚಲತೆಯಿಂದ ನಮ್ಮನ್ನು ಆವರಿಸುವ “ಎಚ್ಚೆಸ್ವಿ ಅನಾತ್ಮಕಥನ” ಓದಿ ಮುಗಿಸಿದಾಗ ನನ್ನ ಹೈಸ್ಕೂಲ್ ವರೆಗಿನ ಬಾಲ್ಯದ ದಿನಗಳನ್ನು ಮತ್ತೆ ಬದುಕಿದಂತಾಯಿತು. ಒಂದು ಕಾಡುವ ಅನುಭವವಾಯಿತು. ಒಂದು ರೀತಿಯಲ್ಲಿ ಇಟ್ ವಾಸ್ ಎ ಸಾರ್ಟ್ ಆಫ್ ರೀ-ಲೀವಿಂಗ್ ಮೈ ಪಾಸ್ಟ್ ಅಂಡ್ ಮೈ ರೂರಲ್ ಸರೌಂಡಿಂಗ್ಸ್.
ಶುದ್ಧ ಅಂತಃಕರಣದಲ್ಲಿ ಅದ್ದಿ ಬರೆದ ನಿಮ್ಮ ಅನಾತ್ಮಕಥನ ಮನುಷ್ಯ ಪ್ರೀತಿಯ ನಿರ್ಮಲ ರೂಪಕ. ಮಾನವೀಯ ಮಿಡಿತಗಳ ನಿರಂತರ ಅನ್ವೇಷಿಯಾದ ನಿಮ್ಮ ಇಲ್ಲಿನ ಬರಹಗಳು ನಿಮ್ಮದೇ ಆದ ಮಾನದಂಡದಿಂದ ನೋಡಿದಾಗ, ನಮಗೆ ಕಾಡುವ ಅನುಭವವಾಗಿ ಲಭಿಸುವ ನೋಟ ’ಮನುಷ್ಯನ ಅಖಂಡ ಪ್ರತಿಮೆಯ’ಜಗತ್ತು. ಈ ಜಗತ್ತಿನೊಂದಿಗೆ ನೀವು ನಡೆಸಿರುವ ಅನುಸಂಧಾನ ನಮ್ಮೆಲ್ಲರ ಬದುಕಿನ ಅನನ್ಯ ಪುನರ್ ಸೃಷ್ಟಿ.
ಮನುಷ್ಯ ಸಂಬಂಧಗಳನ್ನು ಕರಸ್ಥಳಕ್ಕೆ ಆವಾಹಿಸಿ, ಅವರವರ ದ್ರವ್ಯ, ಅವರವರ ಹತಾರಗಳ ಮುಖೇನವೇ ಆಪ್ತನೆಲೆಯಲ್ಲಿ ಅನಾವರಣಗೊಳಿಸುತ್ತಾ ಮುಖಾಬಿಲೆಮಾಡಿಸುವ ನಿಮ್ಮ ಪರಿ ಡಿ.ವಿ.ಜಿಯವರ ಜ್ಞಾಪಕಚಿತ್ರಶಾಲೆಯನ್ನು ನೆನಪಿಗೆ ತರುವ ರೀತಿಯದು.
ನಿಮ್ಮ ಭೀಮಜ್ಜಿ, ತಿಪ್ಪಂಭಟ್ಟರು, ಪುಟ್ಟಜ್ಜ, ಪಿಳ್ಳೆ ಪಂಡಿತರು ಮೊದಲಾದವರು ವಿಸ್ಮಯ, ಬೆರಗುಗಳಲ್ಲಿ ನಮ್ಮನ್ನು ತೇಲಿಸಿ ಮುಳುಗಿಸಿದರೆ, ನೀನೆಲ್ಲಿ ಈಗ?, ಮೂರ್ತಿಗೆ ಕೊನೆಯ ಪತ್ರ ಕರುಳ ಹಿಂಡಿದವು. ಲಿವರ್ನಲ್ಲಿ ಉತ್ಪತ್ತಿಯಾಗುವ ರಾಸಾಯನಿಕದಿಂದ ಬುದ್ಧಿಭ್ರಮಣೆಯಾಗುವುದೆಂಬಂಥ ಸಂಗತಿಗಳು, ನಿಮ್ಮ ದೊಡ್ಡಜ್ಜಿಯಿಂದ ಲೇಖನಿ ಪೆನ್ನು ಹಿಡಿಯದಂತೆ ದೇವರ ಮುಂದೆ ಪ್ರತಿಜ್ಞೆ ಮಾಡಿಸಿದ ನಿಮ್ಮ ಅಜ್ಜನ ಆ ಕಾಲ ಇವೆಲ್ಲವೂ ಕ್ವೈಟ್ ಡಿಸ್ಟರ್ಬಿಂಗ್.
ಮೈಸೂರು ಅನಂತಸ್ವಾಮಿಯವರನ್ನು ಕುರಿತ ಮಧ್ಯರಾತ್ರಿಯ ಫೋನು, ಹೊನ್ನೆ ಸೊಪ್ಪು-ಅಣ್ಣೆಸೊಪ್ಪು-ತಂಗಡಿ ಹೂವಿನ ಟೀ ನನ್ನ ಕಳೆದುಹೋದ ಬದುಕನ್ನು ಮತ್ತೆ ಬದುಕುವಂತೆ ಮಾಡಿದ ಬರಹಗಳು. ಸೊಪ್ಪಿನ ಬಸ್ಸಾರು, ರಾಗಿ ಮುದ್ದೆ, ಸೊಪ್ಪಿನ ಪಲ್ಯಗಳು, ಹೊಟ್ಟೆ ತುಂಬಿಸುತ್ತಿದ್ದ ಸೊಪ್ಪುಗಳು, ಕಾಫಿ ಪುಡಿ-ಟೀಪುಡಿಗೆ ಕಾಸಿಲ್ಲದ ಬಡತನವನ್ನು ಮರೆಸುತ್ತಿದ್ದ ತಂಗಡಿ ಹೂವಿನ ಟೀಯ ಪರಿಮಳ, ಅನ್ನ ನಾಳಕ್ಕೆ ಸುಖೋಷ್ಣ ಮುದ ನೀಡುತ್ತಿದ್ದ ರಾಗಿ ಮುದ್ದೆ, ಮೇಲೊಂದು ಸಾರೋ, ನೆಲಗಡಲೆ ಚಟ್ನಿಯೋ(ನೀವು ಅದೃಷ್ಟವಂತರು, ಹೆಬ್ಬೆರಳೂರಿ ಮಾಡಿದ ಗುಂಡಿಯ ತುಂಬ ಕಾಸಿದ ತುಪ್ಪದ ಸವಿ ಕಂಡವರು)-ಇವೆಲ್ಲಾ ನಿಮ್ಮ ಅನಾತ್ಮಕಥನದಲ್ಲಿ ನಾನು ಓದಿಕೊಂಡ ನನ್ನ ಬದುಕಿನ ಕೆಲವು ಪುಟಗಳು…
ಆಟೋಬಯಾಗ್ರಫಿ ಈಜ್ ಸಮ್ತಿಂಗ್ ಹಿಡನ್ ಅನ್ನೋನ್ ವಿದಿನ್ ಅವರ್ ಸೆಲ್ವ್ಸ್ ಅಂತಾರಲ್ಲ ಅದೇ ಈ ಅನಾತ್ಮಕಥನ. ಈ ನಿಮ್ಮ-ನಮ್ಮೊಳಗಣ ಮುಚ್ಚುಳ ಹಾಕಿದ ಅನ್ನೋನ್ ಗಳಿಗೆ ಕನ್ನ ಹಾಕಿದ ನಿಮ್ಮ ಧೈರ್ಯ ಮೆಚ್ಚಲೇಬೇಕು. ಅಭಿನಂದನೆಗಳು.
ಕನ್ನ ಹಾಕಿದ್ದಕ್ಕೆ ಶಿಕ್ಷೆ ಆಗಬೇಕಲ್ಲವೇ?
ಶಿಕ್ಷೆ ಏನಂದಿರಾ?
ಈ ಕನ್ನಗಾರಿಕೆ ಮುಂದುವರೆಸಿ.
ಇಂತು ನಿಮ್ಮ ವಿಶ್ವಾಸಿ
ಜಿ.ಎನ್.ರಂಗನಾಥರಾವ್
12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು