ಕೆ ವಿ ಅಕ್ಷರ ‘ಪ್ರಜಾವಾಣಿ ಸಾಪ್ತಾಹಿಕ ಪುರವಣಿ’ಗೆ ಬರೆದ ಲೇಖನ ‘ಹರಾಜು – ಹರಕೆ’ ಬಗ್ಗೆ ‘ಅವಧಿ’ ನಡೆಸಿದ ಚರ್ಚೆ ನೀವು ಓದಿದ್ದೀರಿ. ಇತ್ತೀಚಿನ ದಿನಗಳಲ್ಲಿ ‘ಅವಧಿ’ಯಲ್ಲಿ ಅತಿ ಹೆಚ್ಚು ಜನ ಓದಿದ, ಚರ್ಚಿಸಿದ ಅಂಕಣ ಇದು. ಈ ಲೇಖನದ ಬಗ್ಗೆ ವಿಮರ್ಶಿಸಿದ, ಕಾಮೆಂಟಿಸಿದ ಎಲ್ಲರಿಗೂ ‘ಅವಧಿ’ ಯ ಪ್ರೀತಿ ಇದೆ.
ಈ ಮಧ್ಯೆ ಶಿವಮೊಗ್ಗದ ‘ಅಹರ್ನಿಶಿ ಪ್ರಕಾಶನ’ದ ಕೆ ಅಕ್ಷತಾ ಅವರು ಶಿವಸುಂದರ್ ಬರೆದ ಲೇಖನವನ್ನು ಕಳಿಸಿಕೊಟ್ಟಿದ್ದಾರೆ. ಅಕ್ಷರ ಅವರ ಲೇಖನವನ್ನು ಇನ್ನೊಂದು ದಿಕ್ಕಿನಿಂದ ವಿಮರ್ಶಿಸುವ ಈ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಇದರೊಂದಿಗೆ ಈ ವಿಷಯದ ಕುರಿತ ಚರ್ಚೆ ಇಲ್ಲಿ ಮುಕ್ತಾಯವಾಗುತ್ತದೆ. ಆದರೂ ಓದುಗರ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ ಎಂಬ ನಂಬಿಕೆ ನಮ್ಮದು.
ಇನ್ನೊಂದು ವಿಷಯದೊಂದಿಗೆ ಇನ್ನೊಮ್ಮೆ ನಿಮ್ಮ ಮುಂದೆ ಬರುತ್ತೇವೆ. ಥ್ಯಾಂಕ್ ಯು
-ಶಿವಸುಂದರ್
ಚಿತ್ರ: ಕೆಂಡಸಂಪಿಗೆ
ಕಳೆದ ವಾರದ ಸಾಪ್ತಾಹಿಕದಲ್ಲಿ ಕೆ.ವಿ ಅಕ್ಷರ ಅವರು ಬರೆದ ಹರಕೆ-ಹರಾಜು-ಯಾವುದು ಸಹಜ?ಯಾವುದು ಅವಮಾನ ಎಂಬ ಲೇಖನವನ್ನು ಓದಿ ನನ್ನಂಥ ಹಲವರ ಮನಸ್ಸಿಗೆ ಘಾಸಿಯೇ ಆಗಿದೆ. ಸುಬ್ರಹ್ಮಣ್ಯದ ದೇವಾಲಯವೊಂದರಲ್ಲಿ ಹರಕೆದಾರರು ಎಂಜಲೆಲೆಗಳ ಮೇಲೆ ಹೊರಳಾಡಿದ್ದನ್ನು ಸಮಾಜವನ್ನು ಕಾಡುತ್ತಿರುವ ಪಿಡುಗು ಎಂದು ಬಣ್ಣಿಸಿದ ಮಾಧ್ಯಮಗಳು ನಮ್ಮ ಕ್ರಿಕೆಟ್ ಆಟಗಾರರನ್ನು ಎಮ್ಮೆದನಗಳ ರೀತಿ ಹರಾಜು ಹಾಕಿದ್ದನ್ನು ಮಾತ್ರ ಅಪಮಾನವೆಂದು ಭಾವಿಸದೇ ಇರುವುದಕ್ಕೆ ನಮ್ಮ ಚಿಂತನೆಯು ವಸಾಹತುಶಾಹಿ ಪ್ರಭಾವದಿಂದ ಕಳಚಿಕೊಳ್ಳದೇ ಇರುವುದು ಕಾರಣವೆಂದು ಅಕ್ಷರ ಆರೋಪಿಸುತ್ತಾರೆ. ಬರೀ ಇಷ್ಟೆ ಆಗಿದ್ದರೆ ಈ ಲೇಖನದ ಬಗ್ಗೆ ಹೆಚ್ಚಿನ ತಕರಾರೇನೂ ಇರುವ ಅಗತ್ಯವಿರಲಿಲ್ಲ. ಆದರೆ ನಂತರದಲ್ಲಿ ಅವರು ಅವಮಾನ ಹಾಗೂ ಸಹಜ ವಿದ್ಯಮಾನಗಳ ನಡುವಿನ ವ್ಯತ್ಯಾಸವನ್ನು ವಿಷದ ಪಡಿಸಲು ಬಳಸಿರುವ ರೂಪಕ ಮತ್ತದರ ವ್ಯಾಖ್ಯಾನಗಳು ಲೇಖನದ ಹಿಂದಿರುವ ಅಮಾನವೀಯ ಕುತರ್ಕಗಳನ್ನು ಹೊರಹಾಕುತ್ತದೆ.
ಹರಕೆ ಮತ್ತು ಹರಾಜಿನಲ್ಲಿ ಯಾವುದು ಅವಮಾನ ಮತ್ತು ಯಾವುದು ಸಹಜ ವಿದ್ಯಮಾನ ಎಂಬುದನ್ನು ಖಡಾಖಂಡಿತವಾಗಿ ತೀರ್ಮಾನಿಸುವ ತರಾತುರಿಯಿಂದ ಈ ಟಿಪ್ಪಣಿಯನ್ನು ಬರೆದಿಲ್ಲ ಎಂದು ಅಡಿಟಿಪ್ಪಣಿಯ ರೀತಿಯಲ್ಲಿ ಅವರು ಬರೆದುಕೊಂಡಿದ್ದರೂ ಇಡೀ ಲೇಖನ ಎಂಜಲೆಲೆಯ ಮೇಲೆ ಹೊರಳಾಡುವ ಹರಕೆಗಳಲ್ಲಿ ಸಂಕೇತಗೊಂಡಿರುವ ಭಾರತೀಯ ಸಮಾಜದ ಹಲವು ಆಚರಣೆಗಳನ್ನು ಅಪಮಾನ ಎಂದು ಭಾವಿಸುವುದು ವಸಾಹತುಶಾಹಿ ತಿಳವಳಿಕೆಯ ಪರಿಣಾಮ ಎಂದು ದೂಷಿಸುತ್ತದೆ ಮತ್ತು ಅವೆಲ್ಲಾ ಸಹಜ ವಿದ್ಯಮಾನಗಳೆ ಎಂಬ ಸೂಚನೆಯನ್ನೂ ಕೊಡುತ್ತವೆ. ಅದೇ ರೀತಿ ಉನ್ನತ ಸ್ಥಾನದಲ್ಲಿ ಕಾಲಮೇಲೆ ಕಾಲು ಹಾಕಿ ಕೂತವನ ಎದಿರು ಇತಿಹಾಸದುದ್ದಕ್ಕೂ ತಲೆಬಾಗಿಯೇ ನಿಂತ ಸ್ಥಿತಿಯನ್ನು ಎಲ್ಲಿಯತನಕ ಕೆಳಗೆ ನಿಂತವನು ಅಪಮಾನ ಎಂದು ಭಾವಿಸುವುದಿಲ್ಲವೋ ಅಲ್ಲಿಯತನಕ ಅದನ್ನು ಅಪಮಾನ ಎಂದು ಭಾವಿಸಲಾಗದು ಎಂಬ ಫರ್ಮಾನನ್ನೂ ಸಹ ಹೊರಡಿಸುತ್ತದೆ.
ಈ ಚಿಂತನಾ ಧಾಟಿ ಅಂಬೇಡ್ಕರ್, ಫುಲೆ, ದಲಿತ ಚಳವಳಿ, ರೈತ-ಕಾರ್ಮಿಕ ಚಳವಳಿಗಳೆಲ್ಲದರ ಸಾಮಾಜಿಕ ಪ್ರಯತ್ನವನ್ನು ಮತ್ತು ದಲಿತರಿಗೆ ಮತ್ತು ಇತರ ಶೊಷಿತ ಜನಾಂಗಗಳಿಗೆ ತಂದುಕೊಟ್ಟ ಆತ್ಮಾಭಿಮಾನವನ್ನೇ ಪರೋಕ್ಷವಾಗಿ ಪ್ರಶ್ನೆಗೊಳಪಡಿಸುತ್ತದೆ. ಹಾಗೂ ಬ್ರಾಹ್ಮಣಶಾಹಿ ದಮನಕಾರಿ ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಗಳನ್ನು ಪರೋಕ್ಷವಾಗಿ ಸಮರ್ಥಿಸಿಬಿಡುತ್ತವೆ.
ಇತ್ತೀಚಿನ ಟಿಪ್ಪಣಿಗಳು