ಇವತ್ತು ಮೂರು ಪುಸ್ತಕ ಕೊಂಡು ತಂದೆ. ಅದರಲ್ಲಿ ಒಂದು ಓದಿ ಮುಗಿಸಿದೆ. ಇನ್ನೆರಡು ನಾಳೆ ಓದಬೇಕು ಅಂದುಕೊಂಡಿದ್ದೇನೆ ಅಂತ ಹಿರಿಯ ಮಿತ್ರ ಬಿ. ಸುರೇಶ ಬರೆದುಕೊಳ್ಳುತ್ತಾರೆ. ಮೊನ್ನೆಮೊನ್ನೆಯಷ್ಟೇ ಅವರು ಪುಟ್ಟಕ್ಕನ ಹೈವೇ ಸಿನಿಮಾ ಮುಗಿಸಿ ಬಂದಿದ್ದಾರೆ. ಆ ಖುಷಿಗೋ ಅಷ್ಟೂ ದಿನ ತನುಮನಗಳನ್ನು ಆ ಚಿತ್ರದಲ್ಲಿ ತೊಡಗಿಸಿಕೊಂಡ ಹುರುಪಿಗೋ ಒಂದಷ್ಟು ಓದು, ಅಲ್ಲಿ ಇಲ್ಲಿ ಸುತ್ತಾಟ, ಪುಸ್ತಕ ಬಿಡುಗಡೆಯಲ್ಲಿ ಒಂದಷ್ಟು ಗೆಳೆಯರೊಂದಿಗೆ ಹರಟೆ. ಮತ್ತೆ ಹೊಸ ಚಿತ್ರಕತೆ ಮಾಡುತ್ತಾ, ಮತ್ತೊಂದು ನಾಟಕ ಬರೆಯುತ್ತಾ, ಸುರೇಂದ್ರನಾಥ್ ನಾಟಕದಲ್ಲಿ ನಟಿಸುತ್ತಾ ಸುರೇಶ್ ದಿನಗಳು ಕಳೆದುಹೋಗುತ್ತವೆ. ಬೇಂದ್ರೆ ಆಡಾಡ್ತಾ ಆಯುಷ್ಯ ಅಂದಿದ್ದು ಇದನ್ನೇ ಇರಬೇಕು.
ಇಂಥವರು ನನ್ನಲ್ಲಿ ಹೊಟ್ಟೆಕಿಚ್ಚು ಹುಟ್ಟಿಸುತ್ತಾರೆ. ಕಿರಿಯ ಮಿತ್ರರಾದ ಅಪಾರ ರಘು, ಚೇತನ್ ನಾಡಿಗೇರ್ ಮುಂತಾದವರು ಇವತ್ತು ಇಂಥದ್ದೊಂದು ಸಿನಿಮಾ ನೋಡಿದೆ ಅಂತ ಹೇಳುತ್ತಲೇ ಇರುತ್ತಾರೆ. ಗೆಳೆಯರಾದ ಮಂಜುನಾಥ ಸ್ವಾಮಿ, ವಸುಧೇಂದ್ರ ಮತ್ತು ನನ್ನ ಹಿರಿಯ ಮಿತ್ರರಾದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮುಂತಾದವರೆಲ್ಲ ತಿಂಗಳಿಗೆ ಒಂದಾದರೂ ಪ್ರವಾಸ ಹೋಗುತ್ತಾರೆ. ಫೋನ್ ಮಾಡಿದಾಗೆಲ್ಲ ಯಾವುದೋ ಬೆಟ್ಟದಲ್ಲಿದ್ದೇವೆಂದೋ ನದಿ ತೀರದಲ್ಲಿದ್ದೇವೆಂದೋ ಹೇಳುತ್ತಲೇ ಇರುತ್ತಾರೆ.
ಬಿಡುಗಡೆ ಎಷ್ಟು ಸರಳ. ಒಂದು ದಿನದ ಮಟ್ಟಿಗೆ ಫೋನ್ ಸ್ವಿಚಾಫ್ ಮಾಡಿ, ಯಾವ ಭಯವೂ ಇಲ್ಲದೇ ಒಂದು ಫಿಶಿಂಗ್ ಕ್ಯಾಂಪಿಗೋ ಮತ್ತೆಲ್ಲಿಗೋ ಹೋಗಿ ಬರುವುದು ಸಾಧ್ಯವಾದರೆ ಅಂದುಕೊಳ್ಳುತ್ತಲೇ ಕಾಲ ಕಳೆದುಹೋಗುತ್ತದೆ. ಮತ್ತದೇ ಬೆಳಗು, ಮತ್ತದೇ ಮಧ್ಯಾಹ್ನ, ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ.
ಮೊನ್ನೆ ಮೂಡಿಗೆರೆಯಲ್ಲಿರುವ ತೇಜಸ್ವಿಯವರ ಮನೆಗೆ ಹೋಗಿಬಂದಾಗ ಮನಸ್ಸು ನಿರಾಳವಾಯಿತು. ಪೂರ್ಣಚಂದ್ರ ತೇಜಸ್ವಿಯವರಿಲ್ಲದ ಮನೆ. ರಾಜೇಶ್ವರಿ ಅಮ್ಮ ಆಪ್ತವಾಗಿ ಮಾತಾಡಿಸಿದರು. ತೋಟ ತೋರಿಸಿದರು. ತೇಜಸ್ವಿಯವರು ಖುಷಿಗೆಂದು ನಿರ್ಮಿಸಿದ್ದ ಪುಟ್ಟ ಜಲಪಾತ ಈ ವರುಷದ ಮಳೆಗೆ ಹಾಳಾಗಿದ್ದನ್ನು ತೋರಿಸಿದರು. ಮನೆ ಮುಂದಿನ ಕೆರೆಯಲ್ಲಿ ಎಂದಿನಂತೆ ಹಂಸ, ಕೊಕ್ಕರೆಗಳು ಈಜುತ್ತಿದ್ದವು. ಮನೆಯೊಳಗೆ ತೇಜಸ್ವಿಯವರು ಬಳಸುತ್ತಿದ್ದ ಟೇಬಲ್ಲು ಬಟ್ಟೆ ಹೊದ್ದುಕೊಂಡು ಕೂತಿತ್ತು.
ಇತ್ತೀಚಿನ ಟಿಪ್ಪಣಿಗಳು