ಬಾ ಹುಲಿಕಲ್ ನೆತ್ತಿಗೆ-11
-ಪ್ರೊ. ಶಿವರಾಮಯ್ಯ
ಈ ದೊಡ್ಡ ನಿಂಗಪ್ಪ ಕವಿ ಬೇರೆ. ಸಾಹಿತಿಗಳನ್ನು ಕಂಡರೆ ಭಯಭಕ್ತಿಗೌರವ. ಆತನ ಊಟೋಪಚಾರ ಆರಂಭವಾಯಿತು. ಹೊತ್ತೊತ್ತಿಗೆ ಸರಿಯಾಗಿ ಕಾಫಿ, ತಿಂಡಿ, ಮುದ್ದೆ ಊಟವನ್ನು ಮನೆಯಿಂದಲೇ ಮಾಡಿತಂದು ಬನ್ನಿಸಾರ್, ಉಣ್ಣಿಸಾರ್ ಎನ್ನುವನು. ನಾವೇನಾದರೂ ‘ಸಾಕಪ್ಪ’ ಎಂದರೂ ಬಿಡದೆ ‘ಏ ಊಟ ಮಾಡಿಸಾರ್’ ಎಂದು ಬಲವಂತ ಮಾಡಲು ಹೊರಟನು. ನಾನು ‘ನಾರಾಯಣಸ್ವಾಮಿಗೆ ಹೊಟ್ಟೆ ಬರ್ತಾ ಇದೆ; ಅನ್ನ ಕಡಿಮೆ ಹಾಕು ಅನ್ನುತ್ತಿದ್ದೆ.
ಆದರೆ ನನ್ನ ಮಾತಿಗೆ ಮೂರುಕಾಸಿನ ಕಿಮ್ಮತ್ತು ಕೊಡದೆ ಆತ ಅನ್ನ ಬಡಿಸುತ್ತಿದ್ದ. ಇನ್ನೂ ವಿಚಿತ್ರ ಎಂದರೆ ನಾವು ಬೆಂಗಳೂರಿಗೆ ಹಿಂದಿರುಗುವ ಹಿಂದಿನ ದಿನ ಇರಬೇಕು; ಬಸವಲಿಂಗಯ್ಯನವರು ಅವರ ಮನೆಗೆ ಊಟಕ್ಕೆ ಕರೆದಿದ್ದರು. ಅಲ್ಲಿ ನಾವು ಊಟಕ್ಕೆ ಕುಳಿತಿದ್ದೆವು; ನನಗೆ ದೊಡ್ಡ ನಿಂಗಪ್ಪನಿಂದ ಪೋನ್ ಬಂತು ‘ಏನು’ ಎಂದರೆ ‘ನೀವು ನಾರಾಯಣ ಸ್ವಾಮಿ ಉಣ್ಣುವಾಗ ಕಂಟ್ರೋಲ್ ಮಾಡಬೇಡಿಸಾರ್, ಅವರು ಚೆನ್ನಾಗಿ ಊಟ ಮಾಡಲಿ’ ಎನ್ನಬೇಕೆ! ಹೀಗಿತ್ತು ದೊಡ್ಡನಿಂಗಪ್ಪನ ಊಟೋಪಚಾರದ ಸೇವೆ.
(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)
ಮೈಸೂರು ಎಂದರೆ ಸೊಳ್ಳೆಗಳ ಸಾಮ್ರಾಜ್ಯ. ಅದರ ಬ್ರೀಡಿಂಗ್ಸೆಂಟರ್ ಕುಕ್ಕರ ಹಳ್ಳಿಕೆರೆ. ಅಂಥ ಕೆರೆಗೆ ಅಂಟಿಕೊಂಡೇ ಇರುವ ರಂಗಾಯಣ. ಮದುಮಗಳು ನಾಟಕವನ್ನು ಇಡೀ ರಾತ್ರಿ ಕುಕ್ಕರಹಳ್ಳಿಕೆರೆಯ ಕಾಡಿನಲ್ಲಿ ಆಡಿಸಲಾಗುತ್ತದೆ ಎಂದಾಗಲೇ ನಾನು ಬೆರಗು-ಭಯಗಳಿಂದ ಕಂಗೆಟ್ಟು ಹೋಗಿದ್ದೆ. ಬೆರಗು ಯಾಕೆಂದರೆ ಬಸವಲಿಂಗಯ್ಯನವರು ಮಾಡ ಹೊರಟಿರುವ ರಂಗಭೂಮಿಯ ಸಾಹಸಯಾತ್ರೆ ಕಲ್ಪಿಸಿಕೊಂಡು. ಭಯ ಯಾಕೆಂದರೆ ಕುಕ್ಕರಹಳ್ಳಿಯ ಈ ಸೊಳ್ಳೆ ಗಾಡಿನಲ್ಲಿ ಈ ನಿದರ್ೆಶಕರು ರಾತ್ರಿ ಸುಮಾರು 9 ಗಂಟೆಗಳ ಕಾಲ ನಮ್ಮನ್ನು ಹೇಗೆ ಕೂರಿಸುತ್ತಾರಪ್ಪಾ ಎಂದು.
ಇತ್ತೀಚಿನ ಟಿಪ್ಪಣಿಗಳು