ಗಾಳಿ ಬೆಳಕು
ನಟರಾಜ್ ಹುಳಿಯಾರ್
ನೀವು ಇತ್ತೀಚಿಗೆ ಬರೆದ ಕವಿತೆಗಳಲ್ಲಿ ಹಳೆಯ ರೊಚ್ಚು ಇಲ್ಲವಲ್ಲ? ಎಂದರು ಒಬ್ಬರು. ನಿಮ್ಮ ಕವಿತೆಗಳ ಬೆಂಕಿಯ ಗುಣ, ಬಡಿದೆಬ್ಬಿಸುವ ಗುಣ ಎಲ್ಲಿ ಮರೆಯಾಯಿತು? ಎಂದರು ಇನ್ನೊಬ್ಬರು. ನೀವು ಎಂ.ಎಲ್.ಸಿ ಆದಮೇಲೆ ನಿಮ್ಮ ಕಾವ್ಯ ತನ್ನ ಶಕ್ತಿ ಕಳೆದುಕೊಂಡಿದೆ ಎಂದು ಮತ್ತೊಬ್ಬರು ಹೇಳಿಕೆ ಕೊಟ್ಟರು.
ಅವರೆಲ್ಲ ಕನ್ನಡ ಅಧ್ಯಾಪಕರು, ರಿಫ್ರೆಶರ್ ಕೋರ್ಸ್ ಒಂದರಲ್ಲಿ ‘ಕವಿಯೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಲಿತಕವಿ ಸಿದ್ಧಲಿಂಗಯ್ಯನವರು ಓದಿದ್ದ ಈಚಿನ ಕವಿತೆಗಳಿಗೆ ಆ ಅಧ್ಯಾಪಕರು ಪ್ರತಿಕ್ರಿಯಿಸುತ್ತಿದ್ದರು. ಅವತ್ತು ಸಿದ್ಧಲಿಂಗಯ್ಯವನವರು ಓದಿದ ಕವಿತೆಗಳು ಕೊಂಚ ಮೆಲುದನಿಯ, ಕವಿ ತನ್ನೊಳಗೇ ಮಾತಾಡಿಕೊಳ್ಳುತ್ತಿದ್ದ ಕವಿತೆಗಳಾಗಿದ್ದವು. ಅವುಗಳ ಜೊತೆಗೇ ಅವರು ಒಂದರೆಡು ಹಳೆಯ ಕವಿತೆಗಳನ್ನೂ ಓದಿದ್ದರು. ಆದರೆ ಅವನ್ನು ಹಿಂದಿನ ಆವೇಶದಲ್ಲಿ ಓದದೆ ಕೊಂಚ ಮೆಲುದನಿಯಲ್ಲಿಯೇ ಓದಿದ್ದರು.

ಓದುಗರ ಪ್ರತಿಕ್ರಿಯಗಳನ್ನು ಕೇಳಿಸಿಕೊಂಡ ಸಿದ್ಧಲಿಂಗಯ್ಯ, ಒಂದು ಕಾಲಕ್ಕೆ ಹಸಿವು ಹಾಗೂ ಬಡತನ ನನ್ನ ತೀವ್ರವಾದ ಅನುಭವವಾಗಿತ್ತು. ಆಗ ಆ ಅನುಭವಕ್ಕೆ ತಕ್ಕ ಕವಿತೆಗಳನ್ನು ಬರೆದೆ. ಆದರೆ ಹಸಿವೊಂದೇ ಮುಖ್ಯ ಅನುಭವವಾಗದೇ ಇರುವ ನನ್ನ ಇಂದಿನ ಸ್ಥಿತಿಯಲ್ಲಿ ಎದುರಾಗುತ್ತಿರುವ ಹೊಸ ಅನುಭವ, ಕಾಳಜಿಗಳನ್ನಾಧಾರಿಸಿದ ವಸ್ತುಗಳನ್ನು ಕುರಿತು ಇವತ್ತು ಬರೆಯುತ್ತಿದ್ದೇನೆ ಅನ್ನಿಸುತ್ತೆ ಎಂದರು.
ಆದರೆ ಕವಿಯ ಬದಲಾದ ಇಮೇಜನ್ನು ಒಪ್ಪಲು ಆ ಓದುಗರು ಸಿದ್ಧರಿರಲಿಲ್ಲ.. ಕವಿ ಅಥವಾ ಲೇಖಕನೊಬ್ಬ ಬೆಳದಂತೆ ಅವನ ಆಸಕ್ತಿಯ ಕೇಂದ್ರಗಳು ಹಾಗೂ ವಸ್ತುಗಳು ಕೂಡ ಬದಲಾಗುತ್ತಿರುತ್ತವೆ ಎಂಬ ಅಂಶವನ್ನು ಪರೀಕ್ಷಿಸಿ ನೋಡಲು ಆ ಸಾಹಿತ್ಯದ ಅಧ್ಯಾಪಕರುಗಳು ತಯಾರಿರಲಿಲ್ಲವೆಂಬುದು ಅಚ್ಚರಿಯುಂಟುಮಾಡಿತ್ತು. ಸೂಕ್ತ ವಿಮರ್ಶಾ ಪರಿಕರಗಳ ಮೂಲಕ ಸಿದ್ಧಲಿಂಗಯ್ಯನವರ ಅಂದಿನ ಕಾವ್ಯ ಮತ್ತು ಇಂದಿನ ಕಾವ್ಯವನ್ನು ಹೋಲಿಸಿ ಅವರ ಈಚಿನ ಕಾವ್ಯ ಸತ್ವ ಕಳೆದುಕೊಂಡಿದೆ ಎಂಬ ತೀರ್ಮಾನಕ್ಕೆ ಅವರು ಬಂದಿದ್ದರು. ‘ಹೊಲೆ ಮಾದಿಗರ ಹಾಡು’ ಬರೆದಾಗ ಅದನ್ನು ಓದಿ ಬೆಳೆದ ಅವರ ವಾರಗೆಯ ಅಧ್ಯಾಪಕರು ಅಲ್ಲಿಂದಾಚೆಗೆ ಬೆಳೆಯಲು ನಿರಾಕರಿಸಿದಂತಿತ್ತು.
ಇನ್ನಷ್ಟು
12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು