ಪ್ರಕಾಶ್ ರೈ ಆಟೋಗ್ರಾಫ್

ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್ ನಮ್ಮೂರ ಹುಡುಗ. ಆತನ ಅಭಿನಯದ ಬಗ್ಗೆ ಈಗಾಗಲೇ ಎಲ್ಲರೂ ಸರ್ಟಿಫಿಕೆಟ್ ಕೊಟ್ಟಾಗಿದೆ. ಕಾಂಚೀವರಂ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಕಾಶ್ ರೈಗೆ ಅಭಿನಂದನೆ.

ಡಿ ಜಿ ಮಲ್ಲಿಕಾರ್ಜುನ್ ಅವರ ಅಪರೂಪದ ಆಟೋಗ್ರಾಫ್ ಸಂಗ್ರಹದಿಂದ ಒಂದು ನಿಮಗಾಗಿ- .

PRaj

ಅಕ್ಕಿ ಆರಸಕೋತ ನಮ್ಮ ಪಾಠ

ಶ್ರೀದೇವಿ ಕಳಸದ-

’ಸುಲಭಾ.. ನನ್ನ ಸಂಸಾರ ದೊಡ್ಡದು, ಪ್ರಶಸ್ತಿಗಳೂ ದೊಡ್ಡು, ಜಡ್ಡೂ ದೊಡ್ಡದು. ದೇವ್ರು ದುಃಖಾನೂ ದೊಡ್ಡದ ಕೊಟ್ಟಬಿಟ್ಟ ನೋಡವಾ. ತಾಯಿ ಮುಂದ ಮಗಳ ಹೋಗಬಾರದವಾ ಹೋಗಬಾರದು’ ಅಂತ ಮ್ಯಾಲಿಂದ ಮ್ಯಾಲೆ ಕಣ್ಣೀರ ಹಾಕಾವ್ರು.
————————————————————————————-
ಡಾ. ಸುಲಭಾ ದತ್‌ ನೀರಲಗಿ ಕಿತ್ತೂರಿನ ಕಾಲೇಜೊಂದರಲ್ಲಿ ಸಂಗೀತ ಉಪನ್ಯಾಸಕಿ. ಗುರು ಗಂಗೂಬಾಯಿ ಹಾನಗಲ್‌ ಅವರನ್ನು ನೆನೆದದ್ದು ಹೀಗೆ…
————————————————————————————-

ಅಕ್ಕಿ ಆರಸಕೋತ, ಮೊಮ್ಮಗಳಿಗೆ ಹೆರಳ ಹಾಕ್ಕೋತ, ಮಜ್ಜಿಗಿ ಕಡಕೋತ, ಬರಾವ್ರ ಹೋಗಾವ್ರಿಗಿ ಮಾತಾಡಕೋತ, ಆಜೂ-ಬಾಜೂ ಮನ್ಯಾವ್ರ ಜೊತಿ ಹರಟಿ ಹೊಡ್ಕೋತ ನಮ್ಮ ಪಾಠ ನಡೀತಿತ್ತು. ಎದರಾ-ಬದರಾ ಕೂತು ಯಾವತ್ತೂ ಪಾಠಾನ ಮಾಡ್ಲಿಲ್ಲ. ಅಡಗಿ ಮನ್ಯಾಗರ ಇರ್‍ಲಿ, ಅಂಗಳದಾಗರ ಇರ್‍ಲಿ, ಹಾಡೂದೆಲ್ಯರ ಒಂದೀಟ ತಪ್ಪ ಆತಂದ್ರ ಸಾಕೂ ಖೋಲೀತನಕ ಬಂದು ಹಂಗಲ್ಲ ಹಿಂಗ ಅಂತ ಹೇಳಿ ಮತ್ತ ಹೋಗ್ಬಿಡ್ತಿದ್ರು.

ಕರ್ನಾಟಕ ವಿಶ್ವವಿದ್ಯಾಲದೊಳಗ ಎಂಎ ಮಾಡೂಮುಂದ ಅವ್ರು ನಮಗ ಗೆಸ್ಟ್‌ ಲೆಕ್ಚರರ್‌ ಆಗಿ ಬರ್‍ತಿದ್ರು. ಸಿಲಾಬಸ್ಸಿಗೆ ಇದ್ದಷ್ಟ ಹೇಳಿ ಹೋಗ್ತಿದ್ರು. ಆದ್ರ ನನಗ್ಯಾಕೋ ಅವ್ರ ಹತ್ರನ ಕಲೀಬೇಕು ಅಂತ ಭಾಳ ಅನ್ನಸ್ತಿತ್ತು. ಮುಂದ ಒಂದ್‌ ದಿವ್ಸ ಅವ್ರ ಶಿಷ್ಯಾಳನೂ ಆದೆ. ಮೊದ್ಲೇಕ ಅವ್ರ ಮನೀಗ್‌ ಹೋದಾಗ ನೋಟ್‌ಬುಕ್‌ ನೋಡಿ, ’ನೀ ನೋಟ್‌ಬುಕ್‌ನ್ಯಾಗ ಬರಕೊಂಡ್ರ ಅದು ಅದರಾಗ ಉಳೀತದ. ತಲಿಯೊಳಗ ಬರ್‍ಕೊಬೇಕು’ ಅಂತಂದ್ರು. ಆವತ್ತಿಂದ ನಾ ನೋಟ್‌ಬುಕ್ಕ ಒಯ್ಯೂದ ಬಿಟ್ಟಬಿಟ್ಟೆ.1
ಮೊದಲೆಲ್ಲಾ ಅವ್ರಂದ್ರ ಅಂಜಿಕಿ, ಇತ್ತಿತ್ತಲಾಗಿ ನಮ್‌ ಜೊತಿ ಸ್ವಲ್ಪ ಸಲಿಗಿಂದ ಇರ್‍ತಿದ್ರು. ಕಲಸೂ ವಿಷಯಕ್ಕ ಮಾತ್ರ ರಿಜಿಡ್‌. ಮದ್ಲೇಕ ನನಗ ’ತೋಡಿ’ ಹೇಳ್ಕೊಟ್ರು. ಹೆಚ್ಚೂಕಮ್ಮಿ ಒಂದವರ್ಷದ ತನಕಾನೂ ಅದ ರಾಗದಾಗ. ಮಂದ್ರ ಮಧ್ಯ ಸಪ್ತಕದಾಗ ಎರಡೆರಡ ತಾಸ ಹೇಳಿಕೊಡ್ತಿದ್ರು. ಅಗೆಲ್ಲಾ ನನಗ ಬ್ಯಾಸರಾಗ್ತಿತ್ತು. ಒಮ್ಮೊಮ್ಯಂತೂ ಹೊಟ್ಟಿ ನೋವು ಬಂದಂಗ ಆಗೂದು. ಯಾವಾಗರ ಮುಗಸ್ತಾರಪ್ಪಾ ಅಂತ ಅನ್ಸೂದು. ಒಮ್ಯಂತೂ ತಿಂಗಳಾನಗಟ್ಟಲೆ ಮ್ಯಾಲಿನ ಷಡ್ಜದ ತನಕ ಹೋಗಲೇ ಇಲ್ಲ (ಆಲಾಪದ ಮೂಲಕ ಸ್ವರದಿಂದ ಸ್ವರಕ್ಕೆ ನಿಧಾನ ಕ್ರಮಿಸುವುದು ಕಿರಾಣಾ ಘರಾಣಾದ ವೈಶಿಷ್ಟ್ಯಗಳಲ್ಲೊಂದು). ಒಳಗ ಹೋಗ್ಯಾರ ಬಾ ಅಂತ ಹೇಳಿ ಷಡ್ಜಕ್ಕ ಏನರ ಸ್ವರಾ ಹಚ್ಚೀದ್ರ ಸಾಕು ಹೊಳ್ಳಿ ಬಂದಬಿಡಾವ್ರು.

ಹಾಂ… ಅಂದ್ಹಂಗ ಅವ್ರಿಗೆ ಒಬ್ಬರ ಇಸ್ಪೀಟ್‌ ಆಡ್ಕೋತ ಕೂಡೂ ಖಯಾಲಿ ಇತ್ತು. ಇತ್ತ ನಾವು ಹಾಡ್ಕೋತ ಕೂಡಬೇಕು ಅವ್ರು ಒಬ್ರ ಇದ್ರಂದ್ರ ಇಸ್ಪೀಟ್‌ ಆಡ್ಕೋತ ಕೂಡಾವ್ರು. ಮತ್ತ ಅವ್ರ ಇಲ್ಲಂದ್ರನೂ ಅವರ ಮನೀಗ್‌ ಹೋಗಿ ಪ್ರಾಕ್ಟೀಸ್‌ ಮಾಡ್ಕೋತ ಕೂಡ್ರಿದ್ವಿ. ಇನ್ನ ನನ್ನ ಲಗ್ನದ ವಿಚಾರ ಬಂದಾಗ, ನಮ್ಮ ಮನೀಯವ್ರಿಗೆಲ್ಲ ಕರಿಸಿ ಹೇಳಿದ್ರು-’ನೋಡ್ರಿ ಅಕಿ ಧ್ವನಿ ಭಾಳ ಚುಲೋ ಅದ. ಅಕಿನ್ನ ಬಿಡಸಬ್ಯಾಡ್ರಿ’ ಅಂತ. ಹಂಗ ಮುಂದ ನೌಕ್ರಿ ಬಂದ ವೇಳ್ಯಾಕನೂ, ’ಯಾಕ ನಿನಗ ನೌಕ್ರಿ ಗೀಕ್ರಿ? ಸುಮ್ನ ಪ್ರಾಕ್ಟೀಸ್‌ ಮಾಡು. ಇದು ದೇವರ ದೇಣಗಿ ಅದ’ ಅಂತಂದ್ರು. ಆದ್ರ ನಾ ನೌಕ್ರಿಗೆ ಹೋಗೂದನ್ನ ಬಿಡಲಿಲ್ಲ. ಮುಂದ ಅವ್ರಿಗೇ ಮನವರಿಕಿ ಆತು. ಇಕಿ ಪ್ರಾಕ್ಟೀಸ್‌ ಬಿಡೂದಿಲ್ಲ ಅನ್ನೂದು.

ಆಗಾಗ ಹಿಂದಿಂದೆಲ್ಲಾ ನೆನಪ ತಕ್ಕೊಂಡ ಕೂಡ್ತಿದ್ರು. ಕಾರ್ಯಕ್ರಮಕ್ಕ ಅಂತ ಹೋದಲ್ಲೆಲ್ಲಾ, ಮೂರು ಮಕ್ಕಳನ್ನ ಕಟ್ಕೊಂಡ್‌ ಪಾಳೀ ಬರೂತನಕಾ ಬೆಳ್ಳಬೆಳತನಕಾ ಕಾಯ್ಕೋತ ಕೂಡ್ತಿದ್ದದ್ದು, ಉತ್ತರ ಭಾರತದ ಕಡೆ ಟ್ರೇನಿನ್ಯಾಗ ಪ್ರಯಾಣ ಮಾಡೂವಾಗ ಕೈಯ್ಯಾಗ ರೊಕ್ಕಾ ಇಲ್ಲದ, ಹೊಟ್ಟೆ ಕಟ್ಕೊಂಡ್‌ ತ್ರಾಸ್‌ ಪಟ್ಟಿದ್ದು ಒಂದ ಎರಡ….
ಅಕ್ಕಾವ್ರು ವಕೀಲರಿಗೆ ಎರಡನೇಹೆಂಡತಿ ಆಗಿ ಹೋದಾವ್ರು. ಮನೀ ಬಾಳೇಕ ತೊಂದ್ರಿ ಏನಿಲ್ಲ ಅಂದ್ರೂ ತನ್ನ ಮಕ್ಕಳನ್ನ ತಾನ ಸಾಕಬೇಕು ಅನ್ನೂ ಸ್ವಾಭಿಮಾನ ಅವ್ರಲ್ಲಿತ್ತು. ಆಗಾಗ ಹೇಳ್‌ಆವ್ರು ’ ನೋಡವಾ, ನಾ ಎಂದೂ ರೊಕ್ಕದ ಮಾರಿ ನೋಡಿ ಕಲಸೂವಾಕಿ ಅಲ್ಲಾ..’ ಅಂತ.

ನಂದವತ್ತ ಆಕಾಶವಾಣ್ಯಾಗ ಆಡಿಶನ್‌ ಇತ್ತು. ಅವ್ರಂದ್ರ ಇಷ್ಟ ಹೆದರ್‍ತಿದ್ದೆ.. ಆದ್ರ ಅವತ್ತವ್ರು ಬಂದು ಸ್ಟುಡಿಯೋನ್ಯಾಗ ಬಂದು ಕೂತಬಿಟ್ರು. ನನ್ನ ಮಾರಿ ನೋಡಿದಾವ್ರನ, ’ನಾ ಇದ್ದದ್ದಕ್ಕ ಇಕಿ ಯಾಕೋ ಗಾಬ್ರಿಯಾಗ್ಯಾಳ, ನಾಳೆ ಆಡಿಶನ್‌ ಮಾಡ್ರಿ ಇಕೀದು’ ಅಂತ ಆಕಾಶವಾಣಿಯವ್ರಿಗೆ ಹೇಳಿದ್ರು. ಮತ್ತ ಮರದಿನಾ ಆಡಿಶನ್‌ ಆತು. ನನ್ ಗೊತ್ತಿಲ್ಲದನ ನಾ ಹೆಂಗ ಹಾಡ್ತೇನಿ ಅಂತ ಕೇಳಿಸ್ಕೊಳ್ಳಲಿಕ್ಕೆ ಆಕಾಶವಾಣಿಗೆ ಬಂದಿದ್ದನ್ನ ಆಮ್ಯಾಲ ಹೇಳಿದ್ರು.

ಕಿಟ್ಟಕ್ಕಾರು ತೀರ್‍ಕೊಂಡ್‌ಮ್ಯಾಲಂತೂ ಭಾಳ ತ್ರಾಸ ಮಾಡ್ಕೊತಿದ್ರು. ’ಸುಲಭಾ.. ನನ್ನ ಸಂಸಾರ ದೊಡ್ಡದು, ಪ್ರಶಸ್ತಿಗಳೂ ದೊಡ್ಡು, ಜಡ್ಡೂ ದೊಡ್ಡದು. ದೇವ್ರು ದುಃಖಾನೂ ದೊಡ್ಡದ ಕೊಟ್ಟಬಿಟ್ಟ ನೋಡವಾ. ತಾಯಿ ಮುಂದ ಮಗಳ ಹೋಗಬಾರದವಾ ಹೋಗಬಾರದು’ ಅಂತ ಮ್ಯಾಲಿಂದ ಮ್ಯಾಲೆ ಕಣ್ಣೀರ ಹಾಕಾವ್ರು.
ಸ್ವರದ ಆನಂದಾನ ಮೊದಲ ನಾವ ತಗೊಬೇಕು. ಆಮ್ಯಾಲ ಅಲ್ಲೇನ ಕೇಳೂವಾವ್ರಿಗೂ ಅದರ ಆನಂದಾ ದಕ್ಕೂದು ಅಂತ ಆಗಾಗ ಹೇಳ್ತಾ ಹೋಗೇಬಿಟ್ರು ನಮ್ಮಕ್ಕಾ…