ಡಬ್ಬಿ ಪ್ರೀತಿಯ ಅಮ್ಮ
ಸುಶ್ರುತ ದೊಡ್ಡೇರಿ
ಮೊನ್ನೆ ಬೆಂಗಳೂರಿಗೆ ಬಂದಿದ್ದ ಅಪ್ಪನನ್ನು ವಾಪಸು ಕಳುಹಿಸುವ ರಾತ್ರಿ ಅಮ್ಮನಿಗೆ ಫೋನಿನಲ್ಲಿ “ಅಪ್ಪನ್ ಹತ್ರ ಏನಾದ್ರೂ ಕೊಟ್ ಕಳ್ಸವಾ ಅಮ್ಮಾ?” ಅಂತ ಕೇಳಿದರೆ ಅವಳು ನಿರಾಳವಾಗಿ “ಏನೂ ಬ್ಯಾಡ. ಆದ್ರೆ ಹೋದ್ಸಲ ನೀನು ಉಪ್ಪಿನ್ಕಾಯಿ, ತುಪ್ಪ ತುಂಬಿಕೊಂಡು ಹೋಗಿದ್ದ ಡಬ್ಬಿ ವಾಪಸ್ ಕಳ್ಸು. ಹೊತ್ಗಂಬರ್ಲಿ ಅಪ್ಪ!” ಎಂದಳು. ಮೊಬೈಲಿನ ವಾಲ್ಯೂಮು ಸ್ವಲ್ಪ ಜಾಸ್ತಿಯೇ ಇದ್ದುದರಿಂದ ಅವಳು ಹೇಳಿದ್ದು ಅಪ್ಪನಿಗೂ ಕೇಳಿಸಿತಿರಬೇಕು, “ನೋಡು, ನಾನು ಆರಾಮಾಗ್ ಬರವು ಅನ್ನೋದು ಸ್ವಲ್ಪನೂ ಇಲ್ಲೆ ಅವ್ಳಿಗೆ. ಯಾವಾಗ್ ನೋಡಿದ್ರೂ ಡಬ್ಬೀದೇ ಚಿಂತೆ!” ಎಂದ ಅಪ್ಪ. ನಾನು ಜೋರಾಗಿ ನಕ್ಕೆ.
ನಾನು ಪ್ರತಿ ಸಲ ಊರಿಗೆ ಹೊರಡುವ ಹಿಂದಿನ ದಿನ ಅಮ್ಮನಿಗೆ ಫೋನ್ ಮಾಡಿ ಇಲ್ಲಿಂದ ಏನಾದ್ರೂ ತರಬೇಕಾ ಅಂತ ಕೇಳಿದರೆ ಅವಳು ಹೇಳುವುದು ಒಂದೇ: “ಡಬ್ಬಿ ವಾಪಸ್ ತಗಂಬಾ ಸಾಕು”. ನನ್ನ ಅಮ್ಮನಿಗೆ ಡಬ್ಬಿಗಳ ಮೇಲೆ ಪ್ರೇಮ! ಹಾಗೆ ನೋಡಿದರೆ ಈ ಡಬ್ಬಿಯೆಂಬುದು ಎಲ್ಲಾ ಗೃಹಿಣಿಯರ ಪ್ರೀತಿಗೆ, ಪೊಸೆಸಿವ್ನೆಸ್ಗೆ ಒಳಗಾಗಿರುವ ವಸ್ತು. ಅಡುಗೆಮನೆಯ ಶೆಲ್ಫು-ನಾಗಂದಿಗೆಯ ಮೇಲೆ ಬೆಪ್ಪಣ್ಣಗಳಂತೆ ಸಾಲಾಗಿ ಕುಳಿತುಕೊಂಡಿರುವ ಇವುಗಳಲ್ಲಿ ಅದೆಂತಹ ಆಕರ್ಷಣೆಯಿದೆಯೋ, ಯಾರಿಗೆ ಏನನ್ನೇ ತುಂಬಿ ಕಳುಹಿಸುವುದಿದ್ದರೂ ಕೊಡುವಾಗ “ಡಬ್ಬಿ ಒಂದು ವಾಪಸ್ ಕಳ್ಸೋದು ಮರೀಬೇಡಿ” ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.
ಮೊದಲೆಲ್ಲ ನಮ್ಮ ಮನೆಯಲ್ಲಿ ತಗಡಿನ ಡಬ್ಬಿಗಳಿದ್ದವು. ನಾನು ಮಗುವಾಗಿದ್ದಾಗ ತಂದಿದ್ದ ಒಂದು ನೆಸ್ಟಮ್ಮಿನ ಡಬ್ಬಿಯಂತೂ ಅದೆಷ್ಟು ವರ್ಷಗಳ ಕಾಲ ಇತ್ತು ಎಂದರೆ, ನಾನು ದೊಡ್ಡವನಾಗಿ, ಇಂಗ್ಲೀಷ್ ಓದಲು-ಬರೆಯಲು ಕಲಿತು, ಆ ಡಬ್ಬಿಯ ಮೇಲೆ ಬರೆದಿದ್ದ ‘ನೆಸ್ಟಮ್’ ಎಂಬ ಶಬ್ದವನ್ನು ಓದಿದಾಗ ಅಮ್ಮ “ಹೂಂ, ಅದು ನೀ ಪಾಪು ಆಗಿದ್ದಾಗ ತಂದಿದ್ದು. ಒಂದು ಚಮಚ ನೆಸ್ಟಮ್ ತಿನ್ಸಕ್ಕರೆ ಎಷ್ಟ್ ಕಾಟ ಕೊಡ್ತಿದ್ದೆ ಗೊತ್ತಿದಾ? ದನವಿನ್ ಕರ, ಬೆಕ್ಕಿನ್ ಮರಿ, ಚಂದ್ರ, ಪೋಲೀಸು -ಎಲ್ಲವಕ್ಕೂ ಒಂದೊಂದು ಚಮಚ ತಿನ್ಸಿದ್ ಮೇಲೇ ನೀನು ತಿಂತಿದ್ದಿದ್ದು!” ಎನ್ನುತ್ತಿದ್ದಳು. ಮಗುವಾಗಿದ್ದ ನನ್ನನ್ನೆತ್ತಿಕೊಂಡು ಅಮ್ಮ, ಒಂದು ಕೈಯಲ್ಲಿ ನೆಸ್ಟಮ್ ಖಾದ್ಯದ ಬಟ್ಟಲನ್ನು ಹಿಡಿದು, ಕೊಟ್ಟಿಗೆ, ಅಂಗಳ, ರಸ್ತೆಯನ್ನೆಲ್ಲಾ ಸುತ್ತುತ್ತಿದ್ದ ಚಿತ್ರವನ್ನು ಕಲ್ಪಿಸಿಕೊಂಡು ನಾನು ಖುಶಿ ಪಡುತ್ತಿದ್ದೆ. ಅದೇ ಚಿತ್ರದ ನೆನಪಿನ ಲಹರಿಯಲ್ಲಿರುತ್ತಿದ್ದ ಅಮ್ಮ, “ಅರ್ಧ ನೆಸ್ಟಮ್ ಡಬ್ಬಿ ನಿನ್ನ ಮುಖ-ಮುಸುಡಿಗೆ ಬಡಿಯಕ್ಕೇ ಆಯ್ದು ಬಿಡು!” ಎಂದು ನಗುತ್ತಿದ್ದಳು. ಹೀಗೆ, ನಮ್ಮನೆಯ ಅಡುಗೆ ಮನೆ ನಾಗಂದಿಗೆ ಮೇಲೆ ಕೊತ್ತುಂಬರಿ ಕಾಳನ್ನು ಅರ್ಧದವರೆಗೆ ತುಂಬಿಸಿಕೊಂಡು ಮುಗುಮ್ಮಾಗಿ ಕೂತಿದ್ದ ಆ ನೆಸ್ಟಮ್ ಡಬ್ಬಿ, ಆಗಾಗ ಅಮ್ಮನಿಗೆ ಸಿಹಿಸಿಹಿ ನೆನಪನ್ನೂ ನನಗೆ ಕಲ್ಪನೆಯನ್ನೂ ತುಂಬಿಕೊಡುವಲ್ಲಿ ಯಶಸ್ವಿಯಾಗುತ್ತಿತ್ತು.
ಈ ತಗಡಿನ ಡಬ್ಬಿಗಳ ಸಮಸ್ಯೆಯೆಂದರೆ, ಇವುಗಳ ಒಡಲಲ್ಲಿ ಏನಿದೆ ಅಂತ ಪ್ರತಿ ಸಲ ಮುಚ್ಚಳ ತೆಗೆದೇ ನೋಡಬೇಕು. ಹೀಗಾಗಿ ನಾನು, ಆಯಾ ಡಬ್ಬಿಗಳ ಮೇಲೆ ಆಯಾ ವಸ್ತುವಿನ ಹೆಸರನ್ನು ಬರೆದ ಪಟ್ಟಿ ಅಂಟಿಸಿರುತ್ತಿದ್ದೆ. ಆದರೆ ಪಟ್ಟಿ ಕಿತ್ತು ಹೋದ ಡಬ್ಬಿಗಳದೇ ಸಮಸ್ಯೆ. ಅಮ್ಮನಾದರೆ ಕೈಯಲ್ಲಿ ಹಿಡಿದು ಕುಲುಕಿದಾಗ ಬರುವ ಶಬ್ದದಿಂದಲೇ ಒಳಗಿರುವುದು ಕಡಲೆ ಬೇಳೆಯೋ ಉದ್ದಿನ ಬೇಳೆಯೋ ಅಂತ ಪತ್ತೆ ಮಾಡುತ್ತಿದ್ದಳು. ಆದರೆ ಅಮ್ಮ ‘ರಜೆ’ಯಲ್ಲಿದ್ದಾಗ ಅಡುಗೆ ಮಾಡುವ ಪಾಳಿಯನ್ನು ವಹಿಸಿಕೊಳ್ಳುತ್ತಿದ್ದ ಅಪ್ಪನಿಗೆ ಇದು ಗೊತ್ತಾಗುತ್ತಿರಲಿಲ್ಲ. ಸಾಸಿವೆ ಕಾಳಿಗೂ ತೊಗರಿ ಬೇಳೆಗೂ ವ್ಯತ್ಯಾಸ ಗುರುತಿಸುವುದು ಸುಲಭ; ಆದರೆ ಒಂದೇ ಸೈಜಿನ – ಒಂದೇ ತೂಕದ ಬೇಳೆಗಳ ನಡುವಿನ ಶಬ್ದವ್ಯತ್ಯಾಸ ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ಹೆಚ್ಚುಕಮ್ಮಿ ಶಬ್ದವೇದಿ ಕಲಿತವರಷ್ಟೇ ಜಾಣ್ಮೆ ಬೇಕು.
ಇತ್ತೀಚಿನ ಟಿಪ್ಪಣಿಗಳು