ಪಂಡಿತ ಪಾಮರರ ನಡುವಿನ ತೂಗು ಸೇತುವೆ
-ಗುರುಪ್ರಸಾದ್ ಕಾಗಿನೆಲೆ
ಸಮಶೀತೋಷ್ಣ
ನಮ್ಮ ಸೃಜನಶೀಲ ಸಂವೇದನೆಗಳನ್ನು ಹುಟ್ಟಿಸುವುದು ಯಾವುದು? ಬೆಳೆಸುವುದು ಯಾವುದು. ಈ ಸಂವೇದನೆಗಳ ಹುಟ್ಟಿಗೂ ಬೆಳವಣಿಗೆಗೂ ಒಂದು ಸಾವಯವ ಸಂಬಂಧವಿದೆಯಾ? ಈ ಹುಟ್ಟು ಮತ್ತು ಬೆಳವಣಿಗೆ ಒಂದು ಪ್ರಯತ್ನಪೂರ್ವಕ ಕ್ರಿಯೆಯಾ? ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳುವುದು “ಸೃಜನ” ಹೇಗೆ ಆಗುತ್ತದೆ.
ಹುಟ್ಟಾ ಯಾರೂ ಸಾಹಿತಿಯಾಗುವುದಿಲ್ಲ. ಆದರೆ, ಈ ಬರೆಯುವ ಗೀಳು ಹೇಗೋ ಶುರುವಾಗುತ್ತದೆ.
“ಪೂರ್ತಿಯೊಣಗದ ಚಡ್ಡಿ ಹಸಿಹಸಿ
ಸಿಕ್ಕಿಸಿಕೊಂಡು ಬೂರಸು ಕೊಡೆಯೆತ್ತಿ
ಜುಳುಜುಳು ಕೆಸರು ತಂಪುಪಾದ॒
ಹೆಗಲಿಗಂಟಿದ ಪಾಟಿಚೀಲ… ಹೊತ್ತು
ಶಾಲೆ ಹೊರಟ ಕೇರಿಹಿಂಡು ಹಿಂಡು
–
ದಾರಿಯಿಕ್ಕೆಲದಲ್ಲೂ ಗಟಾರ ಕೊಚ್ಚುತ್ತಿರುವ
ಥಂಡಾ ಥಂಡಾ ಚಾ-
ನಿನ್ನೇತನಕ ಹಾರಾಡುತ್ತಿದ್ದ ಟೂರಿಂಗ್
ಟಾಕೀಸಿನ ತಂಬು ಒಮ್ಮೆಗೇ ಸ್ತಬ್ಧ”
–
ಈ ತರ. ಮುಗ್ಢತೆ, ಬೆರಗು, ನಮ್ಮ ಪ್ರಪಂಚದ ಸಣ್ಣಸಣ್ಣ ಆದರೆ ಗಟ್ಟಿವಿವರಗಳು ಮತ್ತು ನಮ್ಮನ್ನು ಕಾದ, ಪೊರೆದ ಭಾವಗಳ ನೆನವರಿಕೆಯಿಂದ ಹುಟ್ಟಬಹುದು, ಮೊದಮೊದಲ ಕವಿತೆ. ಇಲ್ಲಿ ಬುದ್ಧಿವಂತಿಕೆಯಿಲ್ಲ, ನೋಡಿದ್ದನ್ನು ಪ್ರಾಮಾಣಿಕವಾಗಿ ಸುಮ್ಮನೇ ಹಂಚಿಕೊಳ್ಳಬೇಕೆನ್ನಿಸಿದೆ. ಸಂಭ್ರಮದ ವಿವರಗಳನ್ನು ಹೇಳಬೇಕೆನಿಸಿದೆ.
ಆದರೆ, ಇದು ಹೇಗೆ ಶುರುವಾಯಿತು ಎನ್ನುವುದು ನಮಗೆ ಯಾಕೆ ಮುಖ್ಯವಾಬೇಕು?
* * *
ಸಾಹಿತಿಗಳೆಂದರೆ ಬೇರೆ ಯಾವುದೋ ಲೋಕದವರು ಅಥವಾ ಬೇರೆ ಯಾರಿಗೂ ಗೊತ್ತಿರದದ್ದು ಇವರಿಗೆ ಗೊತ್ತಿರುವುದರಿಂದಲೇ ಅವರು ಏನನ್ನೋ ಸೃಷ್ಟಿಸಬಲ್ಲರು ಎಂಬ ಭಾವನೆ ನಮ್ಮಲ್ಲಿರುವುದನ್ನು ನಾವು ನೋಡುತ್ತೇವೆ. ಹಾಗಾಗಿಯೇ ಒಬ್ಬ ಕವಿಯನ್ನು ಜಾಗತೀಕರಣದ ಹಪಾಪಿಗಳ ಬಗ್ಗೆ ಒಂದು ಲೇಖನ ಬರೆದುಕೊಡಿ ಎಂತಲೋ ಅಥವಾ ಒಬ್ಬ ಕತೆಗಾರನನ್ನು ಅಮೆರಿಕಾದ ಎಕಾನಮಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂತಲೋ ಕೇಳುವ ಪರಿಪಾಠ ನಮ್ಮಲ್ಲಿದೆ. ಇವರು ಸಾಹಿತಿಗಳಲ್ಲವೇ? ಇಷ್ಟು ಚೆನ್ನಾಗಿ ಕತೆ ಬರೆಯುತ್ತಾರೆ ಇವರಿಗೆ ಎಲ್ಲ ವಿಷಯವೂ ಗೊತ್ತಿರಲೇಬೇಕು, ಅಲ್ಲವೇ? ಅದು ಹಾಗಿರಲಿ ಹೀಗೆ ಕೇಳಿದ ತಕ್ಷಣ ಕವಿ ಅಥವಾ ಬರಹಗಾರ ಎನ್ನಿಸಿಕೊಂಡವನು ಕೂಡ ಹೇಗೋ ಒಂದಿಷ್ಟು ವಿಷಯ ಸಂಗ್ರಹಿಸಿಕೊಂಡು ಬರೆದುಬಿಡಬಹುದು ಎಂದುಕೊಂಡು ಬರೆಯುವ ರೂಢಿಯೂ ನಮ್ಮಲ್ಲಿದೆ.
ಇಲ್ಲಿ ಸೃಜನಶೀಲ ಸಾಹಿತ್ಯಕ್ಕೂ ಚಿಂತನ ಸಾಹಿತ್ಯಕ್ಕೂ ಇರುವ ವ್ಯತ್ಯಾಸವನ್ನು ಬರೆಯುವವರು ಅರ್ಥಮಾಡಿಕೊಳ್ಳಬೇಕು. ಸೃಜನಶೀಲ ಬರವಣಿಗೆಗೆ ಬೇಕಾದ ನಮ್ಮ ಸಂವೇದನೆಗಳನ್ನು ಗಟ್ಟಿಯಾಗಿ ಬೆಳೆಸುವುದು ನಮ್ಮ ಬಾಲ್ಯ. ಬಾಲ್ಯದಲ್ಲಿ ನಾವು ಅಣ್ಣಾವ್ರ ಸಿನೆಮಾ ನೋಡಿರುತ್ತೇವೆಯೋ, ಲಿಂಡಾ ಗುಡ್‌ಮನ್, ಟಾಮ್ ಸಾಯರ್ ಓದಿರುತ್ತೇವೆಯೋ, ಭೈರಪ್ಪನವರ ಕಾದಂಬರಿಗಳನು ಓದಿರುತ್ತೇವೋ ಅಥವಾ ಗಂಗಾಧರ ಚಿತ್ತಲರನ್ನು ಓದಿರುತ್ತೇವೆಯೋ ಅನ್ನುವುದು ಅವರವರಿಗೆ ಬಿಟ್ಟಿದ್ದು. ಆದರೆ ನಮ್ಮ ಸೃಜನಕ್ರಿಯೆಯನ್ನು ರೂಪಿಸುವುದು ಮುಖ್ಯವಾಗಿ ಬಾಲ್ಯದ ಈ ಓದು ಮತ್ತು ನಾವು ಬೆಳೆದ ಪರಿಸರ. ನಂತರದ ನಮ್ಮ ಓದು,ಅನುಭವಗಳು ಇದನ್ನು ಪೋಷಿಸಬಹುದು ಅಥವಾ ಪೂರಾ ಒಡೆದು ಚೂರುಚೂರು ಮಾಡಬಹುದು ( ಈ ಛಿದ್ರಕ ಕ್ರಿಯೆಯೇ ಸೃಜನವಾಗಬಹುದು). ಆದರೆ ಈ ಸೃಜನಕ್ರಿಯೆಯ ಮೂಲ ಧಾತು ಮತ್ತು ನೆಲೆಗಟ್ಟು ಮಾತ್ರ ಬಾಲ್ಯವೇ.
ಬೆಳೆಯುತ್ತಾ ಬೆಳೆಯುತ್ತಾ ಇದ್ದಕ್ಕಿದ್ದಹಾಗೆ ನಾವು ನಮ್ಮ ಓದಿನ ಬಗ್ಗೆ, ನಮ್ಮ ಸಂವೇದನೆಗಳ ಬಗ್ಗೆಯೇ ಕ್ರಿಟಿಕಲ್ ಆಗುತ್ತೇವೆ. ನಮ್ಮ ಓದು, ಗ್ರಹಿಕೆ ಸರಿಯಿದೆಯೇ ಎಂದು ನೋಡಿಕೊಳ್ಳಲು ಡಿ ಆರ್ ನಾಗರಾಜ್‌ರನ್ನು ಓದುತ್ತೇವೆ, ಜಿಡ್ಡು ಕೃಷ್ಣಮೂರ್ತಿಯವರನ್ನು ಓದುತ್ತೇವೆ, ಆಶೀಸ್ ನಂದಿ, ಅಮಾರ್ತ್ಯ ಸೇನ್ ಇನ್ನೂ ಹೀಗೇ ಇನ್ನೊಂದಿಷ್ಟು ಜನ ಬುದ್ಧಿವಂತರನ್ನು ಓದಿ ನಮ್ಮ ಸಂವೇದನೆಗಳು ಚೂಪಾಗಿದೆ ಎಂದುಕೊಳ್ಳುತ್ತೇವೆ. ಟ್ರಿಕಲ್ ಡೌನ್ ಎಕನಾಮಿಕ್ಸ್, ಪೋಸ್ಟ್ ಮಾಡ್ರನಿಸಮ್, ಜಾಗತೀಕರಣ, ಗ್ಲೋಬಲ್ ವಾರ್ಮಿಂಗ್, ಡಿಕನ್‌ಸ್ಟ್ರಕ್ಷನ್-ಹೀಗೆ ಜಗತ್ತಿನ ಎಲ್ಲ ಉಸಾಬರಿಗಳ ಬಗ್ಗೆ ಮಾತಾಡಲು ತೊಡಗುತ್ತೇವೆ. ಇಲ್ಲವೇ ಬರೆಯಲೂ ತೊಡಗುತ್ತೇವೆ.
ಸೃಜನಶೀಲ ಬರಹ ಮತ್ತು ಸೃಜನೇತರ ಬರಹಕ್ಕೆ ಇರುವ ವ್ಯತ್ಯಾಸವನ್ನು ಒಬ್ಬ ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಸಮಸ್ಯೆ ಬರುವುದು ಕತೆ ಕಾದಂಬರಿ ಕವನ ಬರೆದುಕೊಂಡಿದ್ದವ ಇದ್ದಕ್ಕಿದ್ದ ಹಾಗೆ ಈ “ನಾನ್ ಫಿಕ್ಷನ್” ಅನ್ನುವ ಪ್ರಕಾರಕ್ಕೆ ಕೈಯಾಡಿಸಿದಾಗ. ಪ್ರಬಂಧ ಬರೆಯುವಾಗ ಆತನ ಕಥನಕ್ರಿಯೆ ಜಾಗ್ರತವಾಗಿಬಿಡುತ್ತದೆ. ಕಥೆ ಬರೆಯುವಾಗ ವೈಚಾರಿಕತೆ ತಲೆ ಹಾಕುತ್ತದೆ. ಕಥೆ, ಕಾದಂಬರಿಗಳಲ್ಲಿ ವೈಚಾರಿಕತೆ ಇರಬಾರದೆಂದಲ್ಲ. ಅದು ಕಥೆಯ ಭಾಗವಾಗಿ ಬಂದರೆ ಓದುವುದಕ್ಕೆ ಕಿರಿಕಿರಿಯಾಗುವುದಿಲ್ಲ. ಆದರೆ, ಕತೆಯ ಮುಖ್ಯವಾಹಿನಿಯನ್ನು ಬಿಟ್ಟು ಈ ವೈಚಾರಿಕತೆ ತನ್ನಂತಾನೇ ನಿಂತುಬಿಟ್ಟರೆ ರಸ್ತೆಯ ಮಧ್ಯೆ ಒಂದು ದೊಡ್ಡ ಕಲ್ಲು ಅಡ್ಡ ಬಂದಂತೆ ಭಾಸವಾಗುತ್ತದೆ. ಕಥನ ಕುತೂಹಲಿಗಳು ಇದನ್ನು ಬಳಸಿಕೊಂಡು ಮುಂದೆ ಹೋಗುತ್ತಾರೆ. ಈ ಕಲ್ಲಿನ ಶಿಲ್ಪ ಅಂದವಿದೆಯೆಂದು ಅದನ್ನು ಅನುಭವಿಸುವವರು ಅದನ್ನೇ ನೋಡುತ್ತಾ ಮೈಮರೆಯುತ್ತಾ ನಿಂತರೂ ಅದು ಕತೆಯ ಓಟಕ್ಕೆ ಅಥವಾ ಆ ಕಲ್ಲಿನ ಸೌಂದರ್ಯಕ್ಕೆ ಒಟ್ಟು ತಡೆಯನ್ನೇ ಉಂಟುಮಾಡುತ್ತದೆ.
ಇನ್ನಷ್ಟು
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು