ಸೀಟ್ ಬೇಕಾ ಸೀಟ್
-ಸಂದೀಪ್ ಕಾಮತ್
ಕಡಲತೀರ
ಬೆಂಗಳೂರಿನ ಜನರಿಗೆ ಯಾವಾಗ ತುಂಬಾ ಖುಷಿಯಾಗುತ್ತೆ ಅಂತ ಒಮ್ಮೆ ಕೇಳಿ ನೋಡಿ.ಎಲ್ಲರ ಉತ್ತರ ಒಂದೇ ಆಗಿರುತ್ತೆ.’ ಬಿ.ಎಂ.ಟಿ.ಸಿ ಬಸ್ ನಲ್ಲಿ ಸೀಟ್ ಸಿಕ್ಕಾಗ !’ ನೀವು ಮಂಗಳೂರಿನವರೋ ಅಥವ ಗದಗದವರೋ ಆಗಿದ್ರೆ ಈ ಮಾತು ಕೇಳಿ ಒಮ್ಮೆ ಪುಸಕ್ಕನೆ ನಕ್ಕರೂ ನಗಬಹುದು.ಆದರೆ ಬೆಂಗಳೂರಿನ ಬಸ್ ಗಳಲ್ಲಿ ಪ್ರಯಾಣಿಸಿ ಅಭ್ಯಾಸ ಇದ್ದರೆ ನೀವು ನಗೋದು ಸಾಧ್ಯವೇ ಇಲ್ಲ ಅಂತ ನನಗೆ ಗೊತ್ತು.
ಬಹುಷ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸೀಟ್ ಸಿಕ್ಕಿದಾಗ ಕೂಡಾ ಅಷ್ಟು ಖುಷಿಯಾಗಿರಲ್ಲ,ಅಷ್ಟು ಖುಷಿ ಬಿ.ಎಮ್.ಟಿ.ಸಿ ಬಸ್ ನಲ್ಲಿ ಸೀಟ್ ಸಿಕ್ಕಾಗ ಆಗುತ್ತೆ.ನೀವು ಧಡೂತಿ ವ್ಯಕ್ತಿ ಆಗಿದ್ದಲ್ಲಿ ಬಹುಷ ಮೀಸೆ ಅಡಿಯಲ್ಲಿ ನಗುತ್ತಿರಬಹುದು ,’ನನ್ನಂಥ ಧಡೂತಿ ವ್ಯಕ್ತಿಗೆ ಸೀಟ್ ಸಿಗೋದು ಏನ್ ಮಹಾ ಕಷ್ಟ .ನಾಲ್ಕು ಜನರನ್ನು ಒಂದೇ ಕೈಯಲ್ಲಿ ಎತ್ತಿ ಬಿಸಾಕಿ ಸೀಟ್ ಪಡ್ಕೊಳ್ತೀನಿ ’ ಅಂತ.ಆದ್ರೆ ತಮಾಷೆ ಇರೋದು ಅಲ್ಲೇ ಸ್ವಾಮಿ ! ಜನ ನಿಮ್ಮ ಕೈಗೆ ಸಿಕ್ಕಿದ್ರೆ ತಾನೇ ಬಿಸಾಕೋದು ?ಅವರು ಪುಸಕ್ಕನೆ ನಿಮ್ಮ ಕಾಲ ಕೆಳಗಿಂದ ತೂರಿ ಸೀಟ್ ಪಡೆದಿಲ್ಲ ಅಂದ್ರೆ ಆಮೇಲೆ ಹೇಳಿ.
ಸುಮಾರು ಏಳು ವರ್ಷಗಳಿಂದ ಬೆಂಗಳೂರಿನಲ್ಲಿ ಸೀಟ್ ಗಾಗಿ(ಬಸ್ ನಲ್ಲಿ!) ಯಡಿಯೂರಪ್ಪನವರಷ್ಟೇ ಕಷ್ಟ ಪಟ್ಟಿರೋದ್ರಿಂದ ಬಹುಷ ನನ್ನ ಅನುಭವ ಹಂಚಿಕೊಂಡರೆ ನಿಮಗೆ ಸಹಾಯವಾಗಬಹುದೇನೋ?ಆದರೆ ಒಂದೇ ಒಂದು ಕಂಡೀಶನ್ ! ಬಸ್ ನಲ್ಲಿ ನಾನೇನಾದ್ರೊ ನಿಮಗೆ ಸಿಕ್ಕರೆ ನನಗೆ ಸೀಟು ಬಿಟ್ಟುಕೊಡಬೇಕು.ನನ್ನ ಮೇಲೆ ನನ್ನ ತಂತ್ರಗಳನ್ನು ಪ್ರಯೋಗಿಸಬಾರದು!
ಮೊದಲೇ ಹೇಳಿದ ಹಾಗೆ ತೆಳ್ಳಗಿದ್ದರೆ ಮಾತ್ರ ಇಲ್ಲಿರುವ ತಂತ್ರಗಳನ್ನು ಉಪಯೋಗಿಸಬಹುದು.ಹಾಗಾಗಿ ನೀವೇನಾದ್ರೂ ಸ್ಥೂಲಕಾಯಿಯಾಗಿದ್ದಲ್ಲಿ ದಯವಿಟ್ಟು ಈ ಲೇಖನದ ಬದಲು ’ತೆಳ್ಳಗಾಗೋದು ಹೇಗೆ ?’ ಅನ್ನೋ ಲೇಖನವನ್ನು ಮೊದಲು ಓದಿ.ಸೀಟ್ ನಲ್ಲಿ ಆರಾಮಾಗಿ ಕುಳಿತು ಪ್ರಯಾಣ ಮಾಡಬೇಕೆಂದರೆ ತುಸು ತಯಾರಿ ಬೇಕಾಗುತ್ತೆ.ಬಸ್ ಸ್ಟ್ಯಾಂಡ್ ನಲ್ಲಿ ಕಲ್ಲುಬೆಂಚು ಹಾಕಿದ್ದಾರೆ ಅಂತ ನೀವೇನಾದ್ರೂ ಅದರಲ್ಲಿ ಕುಳಿತು ಹೋಗೋ ಬರೋ ಹುಡುಗಿಯರ ಅಂದ ಸವೀತಾ ಇದ್ರೆ ರಾತ್ರಿ ಇಡೀ ಬಸ್ ಸ್ಟ್ಯಾಂಡ್ ನಲ್ಲೇ ಕೂತಿರ್ಬೇಕಾದೀತು ಹುಷಾರ್ !
ನಿಮ್ಮ ಬಸ್ಸು 22ನೇ ಪ್ಲ್ಯಾಟ್ ಫಾರ್ಮ್ ಬರೋದಾದ್ರೆ ನೀವು ಅದಕ್ಕಿಂತ ಎರಡು ಪ್ಲ್ಯಾಟ್ ಫಾರ್ಮ್ ಮುಂಚೆ ನಿಂತಿರ್ಬೇಕು.ಬಸ್ ಮೆಜೆಸ್ಟಿಕ್ ಆ ಪ್ಲ್ಯಾಟ್ ಫಾರ್ಮ್ ಮುಂದೆ ಬಂದ ತಕ್ಷಣ ನಿಮ್ಮ ದೃಷ್ಟಿ ಕೇವಲ ಬಾಗಿಲಿನ ಮೇಲಿಟ್ಟು ಅದರ ಹಿಂದೆಯೇ ಓಡೋಡಿ ಬನ್ನಿ.ಬಸ್ ನೋಡುವ ಅಗತ್ಯವೇ ಇಲ್ಲ.ಯಾಕಂದ್ರೆ ಬಾಗಿಲಿನ ಜೊತೆ ಬಸ್ ಬಂದೇ ಬರುತ್ತೆ ಅಲ್ವೇ? ಬಸ್ ಸಂಪೂರ್ಣ ನಿಂತ ತಕ್ಷಣ ಥಟ್ ಅಂತ ಹತ್ತೋಕೆ ಹೋಗಬೇಡಿ.ಮೊದಲು ಇಳಿಯುವವರಿಗೆ ಜಾಗ ಮಾಡಿ ಕೊಡಿ.ಇಳಿಯುವವರ ಶಾಪ ಏನಾದ್ರೂ ತಗುಲಿ ಬಿಟ್ರೆ ನೀವು ಜೀವನ ಪರ್ಯಂತ ಬಸ್ ನಲ್ಲಿ ನಿಂತುಕೊಂಡೇ ಹೋಗುವ ಪರಿಸ್ಥಿತಿ ಬರಬಹುದು!ಹಾಗಂತ ಆರಾಮಾಗಿದ್ದಲ್ಲಿ ನಿಮ್ಮನ್ನೂ ಅವರು ಎಳೆದುಕೊಂಡು ಹೋಗುವ ಸಂಭವವಿದೆ.ಯಾವ ಕಾರಣಕ್ಕೂ ಬಾಗಿಲ ಕಂಬಿ ಬಿಡಕೂಡದು.ಎಲ್ಲರೂ ಇಳಿದ ತಕ್ಷಣ ಚಕ್ ಅಂತ ಹತ್ತಿ ಓಡಿ ಹೋಗಿ ಸೀಟ್ ಹಿಡಿದುಕೊಳ್ಳಿ.ನಾನೇ ಮೊದಲಿರುವುದರಿಂದ ಸೀಟ್ ಸಿಕ್ಕೇ ಸಿಗುತ್ತೆ ಅನ್ನೋ ಅಹಂ ಬೇಡ.ಹೆಂಗಸರ ಹಾಗೇ ಕಾಣಿಸುವ ಕೆಲವು ಗಂಡಸರು ಹೆಂಗಸರಿಗಾಗಿ ಮೀಸಲಿರುವ ಮುಂಬಾಗಿಲಿನಿಂದ ಹತ್ತಿ ನಿಮಗಿಂತ ಮುಂಚೆ ಸೀಟ್ ಆಕ್ರಮಿಸುವ ಸಾಧ್ಯತೆಗಳೂ ಇವೆ.ಹಾಗಾಗಿ ಮೊದಲು ನೀವೇ ಹತ್ತಿದರೂ ಸೀಟ್ ಸಿಗುವ ತನಕ ವಿರಮಿಸಬೇಡಿ.ಕೆಲವರಿಗೆ ಖಾಲಿ ಸೀಟ್ ನೋಡಿದ ತಕ್ಷಣ ತಮ್ಮನ್ನು ತಾವು ನಂಬಲೇ ಆಗದೇ ,ತಮ್ಮ ಕೈಯನ್ನು ಚಿವುಟಿ ನೋಡಿ,ಆನಂದಭಾಷ್ಪ ಸುರಿಸುವಷ್ಟರಲ್ಲಿ ಸೀಟ್ ಬೇರೊಬ್ಬರ ಪಾಲಾಗಿರುವ ನಿದರ್ಶನಗಳೂ ಇವೆ!
ಖಾಲಿ ಸೀಟ್ ನೋಡಿ ಖುಶಿಯಾದರೂ ಸ್ಥಿತಪ್ರಜ್ಞರಾಗಿದ್ದರೆ ಸ್ವಲ್ಪ ಒಳ್ಳೆಯದು.
ಇಷ್ಟೆಲ್ಲಾ ಸರ್ಕಸ್ ಮಾಡಿದರೂ ಕೆಲವೊಮ್ಮೆ ಸೀಟ್ ತಪ್ಪೋದುಂಟು.ಕಾರಣ – ಈ ಉತ್ತರಭಾರತದ ಕೆಲವು ಕಾರ್ಮಿಕರು ನಮಗಿಂತ ತೆಳ್ಳಗಿರೋದ್ರಿಂದ ಮಾಮೂಲಿ ಬಾಗಿಲು ಬಿಟ್ಟು ಬಸ್ ನ ಕಿಟಕಿಯಿಂದಲೇ ತೂರಿ ಸೀಟ್ ಹಿಡಿಯೋದುಂಟು.ಆದರೆ ನೀವು ಈ ರೀತಿ ಮಾಡೋದು ಬೇಡ.ಕರ್ನಾಟಕದ ಘನತೆ ಗೌರವ ಕಾಪಾಡೋದು ನಮ್ಮ ಆದ್ಯ ಕರ್ತವ್ಯ.ಈ ರೀತಿ ಏನಾದ್ರೂ ಆಗಿ ಸೀಟ್ ಮಿಸ್ ಆದ್ರೆ ನೀವು ಕೊರಗೋದೇನೂ ಬೇಡ.ಇನ್ನೊಂದು ಉಪಾಯ ಇದೆ,ಅದೇನಂದ್ರೆ ಬಸ್ ನಲ್ಲಿ ಮುಂದಿನ ಒಂದೆರಡು ಸ್ಟಾಪ್ ನಲ್ಲಿ ಇಳಿಯುವವರನ್ನು ಗುರುತಿಸೋದು!ಒಂದೆರಡು ವಾರ ಗಮನಿಸಿದರೆ ಇಂಥ ಪ್ರಯಾಣಿಕರನ್ನು ಗುರುತಿಸುವುದು ಕಷ್ಟ ಏನಲ್ಲ.ಬಸ್ ಒಳಗೆ ಒಂದು ಸಲ ಕಣ್ಣು ಹಾಯಿಸಿ ನೋಡಿ.ಯಾವಾನಾದ್ರೂ ತನ್ನ ಕಿಸೆಯಿಂದ ಏನನ್ನಾದ್ರೂ ಹುಡುಕ್ತಾ ಇದ್ದಾನೆ ಅಂದ್ರೆ ಅವನ ಬಳಿ ನಿಲ್ಲಲೇ ಬೇಡಿ.ಭಯ ಪಡಬೇಡಿ ಅವನೇನೂ ಬಾಂಬ್ ಹುಡುಕ್ತಾ ಇಲ್ಲ,ಅವನು ಇಯರ್ ಫೋನ್ ಹುಡುಕ್ತಾ ಇರ್ತಾನೆ ಅಷ್ಟೆ.ಅದನ್ನು ಒಮ್ಮೆ ಕಿವಿಗೆ ಹಾಕಿ ಮೊಬೈಲ್ ನಲ್ಲಿ ಎಫ್.ಎಮ್ ರೇಡಿಯೋ ಕೇಳ್ತಾ ಕೂತರೆ ಸ್ಟಾಪ್ ಬಂದ ಮೇಲಷ್ಟೇ ತೆಗೆಯೋದು ಅವನು.ಇದು ದೂ.ಪ್ರ(ದೂರ ಪ್ರಯಾಣಿಕ)ರ ಲಕ್ಷಣ.
ಹೀಗೆ ಬಸ್ ಒಳಗಡೆ ಕಣ್ಣು ಹಾಯಿಸ್ಬೇಕಾದ್ರೆ ಯಾರಾದ್ರೂ ಹಾಯ್ ಬೆಂಗಳೂರು,ಲಂಕೇಶ್ ,ಗೃಹಶೋಭ(ಗಂಡಸರೂ ಓದ್ತಾರೆ!)ಥರ ಪತ್ರಿಕೆ ಏನಾದ್ರೂ ಬಿಚ್ಚತೊಡಗಿದರೆ ಅವರೂ ದೂ.ಪ್ರಗಳು ಅಂದುಕೋಬೇಕು.ಕೆಲವು ಸಾಹಿತ್ಯಾಭಿಮಾನಿಗಳು ಮುಂದಿನ ಸ್ಟಾಪ್ ನಲ್ಲಿ ಇಳಿಯುವುದಾದರೂ ಒಂದೇ ಒಂದು ಪುಟ ಓದಿ ಮುಗಿಸೋಣ ಅನ್ನಿಸಿ ಪತ್ರಿಕೆ ಓದೋದೂ ಉಂಟು! ಆದ್ರೆ ಅಂತವರ ಸಂತತಿ ಕಡಿಮೆ.
ಬಸ್ ನಲ್ಲಿ ಯಾರಾದ್ರೂ ಸೀಟ್ ನ ತುದಿಯಲ್ಲಿ ಕುಳಿತು ಪದೇ ಪದೇ ಕಿಟಕಿಯಿಂದ ಹೊರಗೆ ನೋಡ್ತಾ ಇದ್ರೆ ಅವರು ಮುಂದಿನ ಸ್ಟಾಪ್ ನಲ್ಲಿ ಇಳಿಯುವ ಸಾಧ್ಯತೆಗಳು ಹೆಚ್ಚು.ಅಂಥವರ ಪಕ್ಕ ನಿಂತುಕೊಂಡರೆ ನಿಮಗೆ ಸೀಟ್ ಸಿಗೋ ಅವಕಾಶಗಳು ಹೆಚ್ಚು.ಆದರೆ ಒಮ್ಮೆ ಏನಾಯ್ತು ಅಂದ್ರೆ ಒಬ್ಬ ಸೀಟ್ ತುದಿಯಲ್ಲಿ ಕೂತು ಪದೇ ಪದೇ ಕಿಟಕಿಯ ಹೊರಗೆ ನೋಡ್ತಾ ಇದ್ದ.ಅದೂ ಸಾಲದು ಅನ್ನೋ ಹಾಗೆ ಪದೇ ಪದೇ ನಿಂತುಕೊಳ್ತಾ ಇದ್ದ.ನಾನು ಇವನೇನೋ ಈಗ ಇಳಿತಾನೆ ಅಂದುಕೊಂಡು ಕಾದಿದ್ದೇ ಬಂತು.ಅವನು ಇಳಿದದ್ದು ನನ್ನದೇ ಸ್ಟಾಪ್ ನಲ್ಲಿ ಮುಕ್ಕಾಲು ಘಂಟೆ ಪ್ರಯಾಣದ ನಂತರ!.ನನಗೂ ತಲೆ ಕೆಟ್ಟು ಹೋಗಿ ಕೇಳೇ ಬಿಟ್ಟೆ ’ಏನ್ ಸಾರ್ ಪದೇ ಪದೇ ಸ್ಟಾಪ್ ಬಂತಾ ಅಂತ ನೋಡ್ತಾ ಇದ್ರಲ್ವ ಬೆಂಗಳೂರಿಗೆ ಹೊಸಬರಾ ?’ ಅಂತ.ಅದಕ್ಕೆ ಆಸಾಮಿ ’ಇಲ್ಲ ಸಾರ್ ಇಪ್ಪತ್ತು ವರ್ಷದಿಂದ ಇಲ್ಲೇ ಇದ್ದೀನಿ ನನಗೆ ಜಾಸ್ತಿ ಹೊತ್ತು ಕೂತ್ಕೊಳ್ಳೋಕೆ ಆಗಲ್ಲ ಸ್ವಲ್ಪ ಪರ್ಸನಲ್ ಪ್ರಾಬ್ಲೆಮ್ ಇದೆ ’ ಅನ್ನೋದಾ!
ಒಂದೆರಡು ಸಲ ಎಡವಟ್ಟಾದ್ರೂ ಬಹುತೇಕ ಸಂದರ್ಭಗಳಲ್ಲಿ ಸೀಟ್ ಸಿಗೋದು ಗ್ಯಾರಂಟಿ ಕಣ್ರಿ.ಆದ್ರೆ ಬಸ್ ಹಿಂದೆ ಓಡ್ಬೇಕಾದ್ರೆ ಸ್ವಲ್ಪ ಹುಶಾರಾಗಿ ಓಡಿ.ಚಕ್ರದ ಕೆಳಗೇನಾದ್ರೂ ಬಿದ್ದು ಗಿದ್ದು ಆಮೇಲೇ ಯಮಲೋಕದಲ್ಲಿ ಸೀಟ್ ಸಿಗೋ ಥರ ಆಗಬಾರದು ನೋಡಿ.
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು