ಹೋದ ಶ್ರಾವಣದಲ್ಲಿ ಗೋಡೆಗಳು ಇಷ್ಟು ಹಸಿಯಾಗಿರಲಿಲ್ಲ..
27 ಸೆಪ್ಟೆಂ 2009 7 ಟಿಪ್ಪಣಿಗಳು
in ಬಾ ಕವಿತಾ
ಗೆಳೆಯ ಸೂರಿ ಕವಿತೆಗೆ ಒಲಿದಿದ್ದಾರೆ. ‘ನಾತಲೀಲೆ’ ಕಥೆಗಳನ್ನು ಬರೆದ, ಕಾದಂಬರಿ ಬರೆದ, ನಾಟಕ
ಬರೆದು ನಿರ್ದೇಶಿಸಿ ಸುಖವಾಗಿದ್ದ ಈ ಟಿ ವಿ ಯ ಮುಖ್ಯಸ್ಥ ಸೂರಿ ಕವಿತೆಯತ್ತ ಮುಖ ಮಾಡಿ ನಿಂತಿದ್ದಾರೆ. ಗುಲ್ಜಾರ್ ಬೆನ್ನು ಹಿಡಿದು ಅವರು ಬರೆದ ಕವಿತೆ ಇಲ್ಲಿದೆ. ತಮ್ಮ ಮೊದಲ ಕವಿತೆಯನ್ನು ‘ಅವಧಿ’ಯೊಂದಿಗೆ ಹಂಚಿಕೊಂಡಿದ್ದಕ್ಕೆ ನಮಗೆ ಖುಷಿ ಇದೆ.
-ಸೂರಿ
ಯಾವುದೋ ಗಾಳಿಯ ಹೊಡೆತವಿರಬೇಕು
ಗೋಡೆಯ ಮೇಲಿನ ಚಿತ್ರವನ್ನು
ಓರೆ ಮಾಡಿ ಬಿಟ್ಟಿದೆ.
–
ಹೋದ ಶ್ರಾವಣದಲ್ಲಿ ಗೋಡೆಗಳು
ಇಷ್ಟು ಹಸಿಯಾಗಿರಲಿಲ್ಲ.
ಅದೇಕೋ ಈ ಸಾರಿ ಗೋಡೆಗಳೆಲ್ಲ ಒದ್ದೆ.
ಹಸಿಯ ಮುದ್ದೆ.
ಉದ್ದಗಲಕ್ಕೂ ಸೀಳಿದಂತೆ ಗೆರೆಗಳು.
ಹಸಿಯ ಪಸೆ ಗೋಡೆಗುಂಟ
ಗೆರೆ ಗೆರೆಯಾಗಿ ಇಳಿಯುತ್ತದೆ
ಒಣ ಕೆನ್ನೆಯ ಮೇಲೆ ಹಸಿ ಕಣ್ಣೀರು ಇಳಿದಂತೆ.
–
ಸೋನೆ ಮಳೆ ಪಿಸುಗುಡುತ್ತಿತ್ತು
ಛಾವಣಿಯ ಮೇಲೆ.
ತನ್ನ ಪುಟ್ಟ ಬೆರಳಲ್ಲಿ
ಕಿಡಕಿಯ ಗಾಜಿನ ಮೇಲೆ
ಗೆರೆ ಗೆರೆಯಾಗಿ ಸಂದೇಶವನ್ನು ಬರೆಯುತ್ತಿತ್ತು.
ಈಗ ಬಿಕ್ಕುತ್ತ ಬೆಳಕಿಂಡಿಯ ಹೊರಗೆ
ಮುಸುಗಿಟ್ಟು ಕೂತಿದೆ.
–
ನಡುಹಗಲುಗಳು ಈಗ
ಕಾಯಿಗಳಿರದ ಚದುರಂಗದ ಖಾಲಿ ಹಾಸಿನಂತಿವೆ.
ದಾಳ ಹಾಕುವವರಿಲ್ಲ.
ಕಾಯಿ ನಡೆಸುವವರಿಲ್ಲ.
–
ಈಗ ದಿನ ಬೆಳಗಾಗುವುದೂ ಇಲ್ಲ.
ಕತ್ತಲಾಗುವುದೂ ಇಲ್ಲ.
ಎಲ್ಲ ನಿಶ್ಚಲ ನಿಂತಿವೆ.
–
ಅದೇನು ಗಾಳಿಯ ಹೊಡೆತವೇನು?
ಗೋಡೆಯ ಮೇಲಿನ ಚಿತ್ರವನ್ನು
ಓರೆ ಮಾಡಿದೆ.
ಇತ್ತೀಚಿನ ಟಿಪ್ಪಣಿಗಳು