-ಎಂ ಎಸ್ ಪ್ರಭಾಕರ
ಕಾಮರೂಪಿ

ಸನ್ ಸಾವಿರದೊಂಭೈನೂರನಲವತ್ತೆಂಟನೇ ಇಸವಿ ಏಪ್ರಿಲ್ ನಲ್ಲಿ ಅಪ್ಪ ತನ್ನ ಅರವತ್ಮೂರನೇ ವಯಸ್ಸಿನಲ್ಲಿ ತೀರಿಕೊಂಡ. ಅಮ್ಮ ಅಪ್ಪನಿಗಿಂತಾ ಹತ್ತು ವರುಷ ಸಣ್ಣವಳು. ಆಗ ನನಗಿನ್ನೂ ಹನ್ನೆರಡು ತುಂಬಿರಲಿಲ್ಲ.
ಅಪ್ಪ ಸತ್ತಮೇಲೆ ಕೆಲವು ತಿಂಗಳುಗಳು ಅಮ್ಮ ನೋಡಲು ಎಂದಿನಂತೆಯೇ ಇದ್ದಳು. ಐವತ್ತಕ್ಕೆ ಮೀರಿದ ಸಣಕಲು ಹೆಂಗಸು. ಎಂದಿನಂತೆ ಅಗ್ಗದ ಬೆಲೆಯ ಸೀರೆ, ರವಿಕೆ. ಆದರೂ ಕೆಲವು ಬದಲಾವಣೆಗಳು ನನ್ನ ಗಮನಕ್ಕೆ ಬಂದಿದ್ದವು. ಕತ್ತಿನ ಸುತ್ತ ಕರೀಮಣಿ ಸರ ಮತ್ತು ಮಾಂಗಲ್ಯ ಇರಲಿಲ್ಲ. ವಾಲೆಮೂಗುತಿಗಳಿರಲಿಲ್ಲ. ಹಣೆಯ ಮೇಲೆ ಕುಂಕುಮದ ಬೊಟ್ಟು ಇರಲಿಲ್ಲ. ಕೆನ್ನೆಯ ಮೇಲೆ ಅರಿಸಿನದ ನುಣುಹೊಳಪು ಇರಲಿಲ್ಲ. ಮುಂಗೈನ ಬಳೆಗಳು ಮತ್ತು ಕಾಲುಂಗರಗಳು ಇರಲಿಲ್ಲ. ಆದರೆ ಇವುಗಳ ಅರ್ಥವೇನು ಅನ್ನುವುದು ಸ್ಪಷ್ಟವಾಗಿರಲಿಲ್ಲ.
ಆದರೆ ಒಂದು ದಿನ ಎಲ್ಲವೂ ಸ್ಪಷ್ಟವಾದವು. ಕತ್ತಲು ಕತ್ತಲಿನಲ್ಲೇ ಅಮ್ಮ, ನಮ್ಮ ಮನೆಯಲ್ಲಿ ನಮ್ಮಗಳ ಸೇವೆಯಲ್ಲೇ ಜೀವನ ಸವೆಸಿದ್ದ ಬಾಲ್ಯವಿಧವೆ ಸೋದರತ್ತೆ ಕುಟ್ಟಿ ಮತ್ತು ಪರಿಚಯವಿದ್ದ ಮತ್ಯಾರೋ ಇಬ್ಬರ ಜೊತೆ ಎರಡು ಮೈಲಿ ದೂರದಲ್ಲಿದ್ದ ಅಂತರಗಂಗೆ ಬೆಟ್ಟಕ್ಕೆ ಹೊರಟರು. ಅವರುಗಳು ಹೊರಡುವ ಗಡಿಬಿಡಿಯಲ್ಲಿ ನನಗೆ ಎಚ್ಚರ ಆಯಿತು. ಆದರೆ ಇದು ಏಕೆ ವಯಸ್ಸಿಗೆ ಬಂದವರು ಮಾತ್ರ ಬೆಟ್ಟಕ್ಕೆ ಹೋಗುತ್ತಿದ್ದಾರೆ, ನನ್ನನ್ನು ಯಾಕೆ ಕರೆದುಕೊಂಡು ಹೋಗುತ್ತಿಲ್ಲ ಅಂತ ಅನ್ನಿಸಿತು. ನಾನೂ ಬರಲಾ ಅಂದು ಕೇಳುವುದಕ್ಕೆ ಭಯ. ಯಾರಾದರೂ ಎಲ್ಲಾದರೂ ಹೊರಟಾಗ ಎಲ್ಲಿಗೆ ಹೋಗುತ್ತಿದ್ದೀರಿ ಅಥವಾ ನಾನೂ ಬರಲಾ ಅಂತ ಕೇಳುವುದು ಅಪಶಕುನ ಅಂತ ಇನ್ನೂ ಸಣ್ಣವನಾಗಿದ್ದಾಗಲೇ ದೊಡ್ಡವರು ಮನದಟ್ಟು ಮಾಡಿದ್ದರು.
ಅವರೆಲ್ಲಾ ಮನೆಗೆ ವಾಪಸಾಗುವ ಹೊತ್ತಿಗೆ ಮಧ್ಯಾನ್ಹ ಆಗಿತ್ತು. ಮನೆಯ ಮೆಟ್ಟಲಮೇಲೆ ನಿಂತಿದ್ದವನಿಗೆ ಅವರುಗಳು ಬರುತ್ತಿದ್ದದು ಐವತ್ತು ಗಜ ದೂರದಲ್ಲಿದ್ದಾಗಲೇ ಕಾಣಿಸಿತು. ಅಮ್ಮನನ್ನು ತಬ್ಬಿಕೊಳ್ಳಲು ಓಡಿ ಓಡಿ ಹೋದಾಗ ಸೋದರತ್ತೆ ದೂರ ಇರು, ಮುಟ್ಟಬೇಡ, ನಿನ್ನ ಅಮ್ಮ ಈಗ ಮಡಿ ಹೆಂಗಸು, ಮಡಿಯಲ್ಲಿದ್ದಾಳೆ ಅಂತ ಗದರಿಸಿದಳು.
ಕುಳ್ಳಿ ಅಮ್ಮ ಇನ್ನೂ ಕುಗ್ಗಿಬಿಟ್ಟಿದ್ದಾಳೆ ಅನ್ನಿಸಿತು. ಕೆಂಪುಮಣ್ಣಿನ ಬಣ್ಣದ ಸೀರೆ, ರವಿಕೆ ಇಲ್ಲದ ಎದೆ, ತಲೆಯಮೇಲೆ ಕೆಂಪು ಸೀರೆಯ ಸೆರಗು, ಎಲ್ಲಾ ಸೋದರತ್ತೆಯಂತೆ. ಸರಿಯಾಗಿ ಗಮನಿಸಿದಾಗ ಬೋಳು ತಲೆಯೂ ಗಮನಕ್ಕೆ ಬಂತು. ಅಮ್ಮ ಈಗ ಮಡಿಹೆಂಗಸು.
ಇನ್ನಷ್ಟು
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು