ಮಣಿಕಾಂತ್ ಬರೆದಿದ್ದಾರೆ: ಚಂದಕ್ಕಿಂತ ಚೆಂದ ನೀನೆ ಸುಂದರ..

6213_1079515355773_1462958320_30205965_5660699_n

-ಎ ಆರ್ ಮಣಿಕಾಂತ್

ಚಿತ್ರ: ಸ್ಪರ್ಶ  ಗೀತರಚನೆ: ಇಟಗಿ ಈರಣ್ಣ.

ಸಂಗಿಇತ: ಹಂಸಲೇಖ  ಗಾಯನ: ಪಂಕಜ್ ಉದಾಸ್

sparsha

ಚಂದಕ್ಕಿಂತ ಚೆಂದ ನೀನೆ ಸುಂದರ…

ಚೆಂದಕ್ಕಿಂತ ಚೆಂದ ನೀನೇ ಸುಂದರ

ನಿನ್ನ ನೋಡ ಬಂದ ಬಾನಚಂದಿರ

ಅಂದ ಚೆಂದವು ನೀನೇ ಅಂದೆನು

ಚೆಂದ ಅಂದ ಅಂದ ಚೆಂದ

ಚೆಂದುಳ್ಳಿ ಚೆಲುವೆ ಓ ನನ್ನ ಒಲವೆ ||ಪ ||

ನಗುವ ಹೂ ನಗೆ ನಗುವ ಆ ಬಗೆ

ನಗುವೇ ನಾಚಿತು ನಾಚಿ ನಕ್ಕಿತು

ನಗುವ ಈ ಬಗೆ ಬೇಕು ಹೂವಿಗೆ

ಕಲಿಸು ಹೂವಿಗೆ ನಿನ್ನ ಹೂ ನಗೆ

ನಗುವೆ ಅಂದ ನಗುವೆ ಚಂದ

ಈ ನಗುವೆ ಚೆಂದ ನಿನ ನಗುವೆ ಅಂದ ||1||

ಪ್ರೇಮದ ಅರ್ಥವ ಹುಡುಕುತ ನಿಂತೆನು

ನಿನ್ನಯ ಸ್ಪರ್ಶದಿ ಅರ್ಥವಾ ಕಂಡೆನು

ಅರಳು ಮಲ್ಲಿಗೆ ಅರಳಿ ನಿಂತಿತು

ನನ್ನೀ ಹೃದಯದಿ ಪ್ರೇಮವರಳಿತು

ಇಲ್ಲು ನೀನೆ ಎಲ್ಲೂ ನೀನೆ

ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೆ ||2||

ನನ್ನ ಉಸಿರಲಿ ನಿನ್ನ ಹೆಸರಿದೆ

ನಿನ್ನ ಹೆಸರಲೆ ನನ್ನ ಉಸಿರಿದೆ

ನಿನ್ನ ಹೆಸರಲೇ ಉಸಿರು ಹೋಗಲಿ

ಉಸಿರು ಉಸಿರಲಿ ಹೆಸರೇ ನಿಲ್ಲಲಿ

ನೀನೇ ಉಸಿರು ನೀನೇ ಹೆಸರು

ಓ ನನ್ನ ಉಸಿರೆ ಬಾ ಬಾರೇ ಹಸಿರೆ ||3||

ಎರಡು ತಿಂಗಳ ಹಿಂದೆ ಓದುಗಮಿತ್ರರೊಬ್ಬರು ಫೋನ್ ಮಾಡಿ ಆಗ್ರಹದ ದನಿಯಲ್ಲಿ ಹೇಳಿದರು: `ಸ್ಪರ್ಶ’ ಚಿತ್ರದ `ಚಂದಕಿಂತ ಚಂದ ನೀನೇ ಸುಂದರ’ ಹಾಡಿನ ಬಗ್ಗೆ ಬರೀರಿ ಸಾರ್. ಈ ಹಾಡಿನ ಬಗ್ಗೆ ಬರೀತೀರ ಅಂತಾನೇ ಇನ್ಮೇಲೆ ಪ್ರತಿ ಗುರುವಾರ ಕಾಯ್ತಾ ಇರ್ತೀವಿ. ನಿರಾಸೆ ಮಾಡಬೇಡಿ…’

ಆ ಹಾಡು ಬರೆದವರು ಕವಿ ಇಟಗಿ ಈರಣ್ಣ ಎಂದು ಗೊತ್ತಿತ್ತು. ಆದರೆ ಅವರ ಪರಿಚಯವಿರಲಿಲ್ಲ. ಅವರ ಫೋನ್ ನಂಬರ್ ಇರಲಿಲ್ಲ. ವಿಳಾಸವೂ ಇರಲಿಲ್ಲ. ಅವರು ಬರೆದ ಹಾಡಿನ ಹಿಂದೆ `ಒಂದು ಕಥೆ ಇದೆಯೋ ಇಲ್ಲವೋ’ ಎಂದು ಗೊತ್ತೂ ಇರಲಿಲ್ಲ. ಆದರೆ ಈ ಹಾಡು ಕೇಳಿದಾಗೆಲ್ಲ ಸಂತೋಷದಿಂದ ಕುಣಿಯುವ ಆಸೆಯಾಗುತ್ತಿತ್ತು. ರೇಡಿಯೊದಲ್ಲಿ, ಟಿ.ವಿ.ಯಲ್ಲಿ ಆವಾಗಾವಾಗ ಈ ಹಾಡು ಕೇಳಿದರೆ, ಮರುಕ್ಷಣವೇ ಒನ್ಸ್ಮೋರ್ ಎಂದು ಕೂಗುವ ಮನಸಾಗುತ್ತಿತ್ತು.

ನಂತರದ ದಿನಗಳಲ್ಲಿ ಈ ಹಾಡು ಹಳೆಯ ಗೆಳತಿಯ ಪಿಸುಮಾತಿನಂತೆ, ಗೆಜ್ಜೆ ಸದ್ದಿನಂತೆ, ಮುಗುಳ್ನಗುವಿನಂತೆ, ಹುಸಿಮುನಿಸಿನಂತೆ, `ಅವಳ’ ಮೈಯ ಘಮದಂತೆ ಬಿಡದೆ ಕಾಡಿದಾಗ- ಪ್ರಿಯ ಮಿತ್ರ ಧನಂಜಯ ಕುಲಕಣರ್ಿಯವರಿಗೆ ಎಲ್ಲವನ್ನೂ ಹೇಳಿಕೊಂಡೆ. `ಈ ಹಾಡು ಬರೆದವರನ್ನು ಹೇಗಾದ್ರೂ ಪತ್ತೆಹಚ್ಚಬೇಕಲ್ಲ? ಸಹಾಯ ಮಾಡಿ ಸಾರ್’ ಎಂದು ಕೇಳಿಕೊಂಡೆ.

ಅವರು ಮರುಕ್ಷಣವೇ- `ಏ ದಡ್ಡಾ, ನಮ್ಮ ಇಟಗಿ ಈರಣ್ಣೋರು ಗೊತ್ತಿಲ್ವೇನು ನಿನಗ? ಇಲ್ಲೇ ಹೊಸಪ್ಯಾಟ್ಯಾಗ ಲೆಕ್ಚರರ್ ಆಗ್ಯಾರ. ಮುಂದಿನ ವಾರ ನಾನೇ ಹೋಗಿ ಮಾತಾಡಿಸಿಕೊಂಡು ಬರ್ತೇನೆ. ಆ ಹಾಡು ಹುಟ್ಟಿದ ಸಮಯಕ್ಕ ಒಂದು ಕಥೀ ಅಂತೇನಾದ್ರೂ ಇದ್ರ ಅದನ್ನೂ ಕೇಳಿಕೊಂಡು ಬರ್ತೇನಂತ. ನೀ ಆರಾಮಿರು’ ಎಂದರು. ಅಷ್ಟೇ ಅಲ್ಲ; ಮೂರು ವಾರಗಳ ನಂತರ ಇಟಗಿ ಈರಣ್ಣ ಅವರನ್ನು ಕಂಡು ಎಲ್ಲ ವಿವರ ಪಡೆಯುವಲ್ಲಿ ಯಶಸ್ವಿಯಾಗಿಯೂಬಿಟ್ಟರು.

ಇಲ್ಲಿ ಇಟಗಿ ಈರಣ್ಣ ಅವರ ಬಗ್ಗೆ ನಾಲ್ಕು ಮಾತು: ಮೆಲು ಮಾತು, ಮಗು ಮನಸು, ಸರಳತೆ, ಸಜ್ಜನಿಕೆಗೆ ಇನ್ನೊಂದು ಹೆಸರಾಗಿರುವ ಈರಣ್ಣ ಬಳ್ಳಾರಿ ಜಿಲ್ಲೆ ಹಿರೇಹಡಗಲಿಯವರು. ಅನಿವಾರ್ಯ ಕಾರಣಗಳಿಂದ ಬಾಲ್ಯದಲ್ಲಿಯೇ ಮುಂಬಯಿ ತಲುಪಿ, ಅಲ್ಲಿನ ರೈಲು ನಿಲ್ದಾಣದಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮುಂದುವರಿಸಿದ ಅವರು, ಹಿಂದಿ, ಉದರ್ು, ಮರಾಠಿ, ಬಂಗಾಳಿ, ಇಂಗ್ಲಿಷ್, ಭೋಜ್ಪುರಿ, ಬಿಹಾರಿ ಭಾಷೆಗಳಲ್ಲಿ ಎಕ್ಸ್ಪಟರ್್ ಎನ್ನಿಸಿಕೊಂಡರು. ಮುಂದೆ, ಕನ್ನಡ ಎಂ.ಎ. ಓದಲೆಂದು ಧಾರವಾಡಕ್ಕೆ ಬಂದಾಗ, ಅವರ ಬದುಕಿನ ದಿಕ್ಕೇ ಬದಲಾಯಿತು. ವರಕವಿ ಬೇಂದ್ರೆಯವರಿಂದ ತುಂಬ ಪ್ರಭಾವಿತರಾಗಿದ್ದ ಈರಣ್ಣ, ಬೇಂದ್ರೆಯವರಂತೆಯೇ ಪದಗಳೊಂದಿಗೆ ಸರಸವಾಡುವ ಕಲೆಯಲ್ಲಿ ಪಳಗಿದರು. ಗಜಲ್ ರಚನೆಗೆ ಮುಂದಾದರು. ಪ್ರೇಮ, ಸ್ನೇಹ, ವಿಷಾದವನ್ನು ಗಜಲ್ಗಳಲ್ಲಿ ಮಾಲೆಯಂತೆ ಪೋಣಿಸಿಕೊಟ್ಟು ಕೆಲವೇ ದಿನಗಳಲ್ಲಿ `ಗಜಲ್ ಈರಣ್ಣ’ ಎಂದೇ ಹೆಸರಾಗಿಹೋದರು.

ಇಂಥ ಈರಣ್ಣನವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ? `ಸ್ಪರ್ಶ’ ಚಿತ್ರಕ್ಕೆ ಹಾಡು ಬರೆದದ್ದು ಹೇಗೆ ಎಂಬ ಕುತೂಹಲದ ಪ್ರಶ್ನೆಗೆ ಈರಣ್ಣ ಅವರು ಉತ್ತರಿಸಿದ್ದು ಹೀಗೆ:

`ನಾನು ಪಿಕ್ಚರ್ ನೋಡೋದು ಬಿಟ್ಟು 25 ವರ್ಷ ಆತು. ಇಂಥ ನಾನು `ಸ್ಪರ್ಶ’ ಸಿನಿಮಾಕ್ಕ ಹಾಡುಬರೆದದ್ದು ಎಷ್ಟು ಖರೇನೋ ಅಷ್ಟ ಆಕಸ್ಮಿಕಾನೂ ಹೌದು. ಈ ಸಂದರ್ಭ ಒದಗಿಬಂದದ್ದು ಹೀಂಗ- ಸುನೀಲ್ಕುಮಾರ್ ದೇಸಾಯಿ ಅವರು, ಶಾಯರಿಗಳನ್ನು ಇಟಗೊಂಡೇ ಒಂದು ಸಿನಿಮಾ ಮಾಡಬೇಕಂತ ನಿಧರ್ಾರ ಮಾಡಿದರಂತ. ಈ ನೆಪದಾಗ ಕನ್ನಡದೊಳಗೆ ಅಷ್ಟು ಚಂದಾಗಿ ಶಾಯರಿ ಬರೆಯೋರು ಯಾರದಾರ ಅಂತ ಹುಡುಕಾಟಕ್ಕ ಶುರುಮಾಡ್ಯಾರ. ಆಗ ಯಾರೋ ಪುಣ್ಯಾತ್ಮರು ದೇಸಾಯಿ ಅವರಿಗ ನನ್ನ ಹೆಸರನ್ನು ಹೇಳಿದ್ರಂತ. ಇದೆಲ್ಲ 1999ರ ಮಾತು. ಆಗಿನ್ನೂ ಈಗಿನ ಥರಾ ಮೊಬೈಲ್ ಫೋನಿನ ಹಾವಳಿ ಇರಲಿಲ್ಲ. ನನ್ನ ಹೆಸರು ಹೇಳಿದ್ದವರು- `ಈರಣ್ಣ ಬಳ್ಳಾರಿ ಸೀಮ್ಯಾಗ ಅದಾರ. ಅವರು ಕಾಲೇಜಿನ್ಯಾಗ ಲೆಕ್ಚರರ್ ಆಗ್ಯಾರ ನೋಡ್ರಿ’ ಎಂದಿದ್ದರಂತೆ. ಅದನ್ನೇ ಹಿಡಕೊಂಡ ದೇಸಾಯಿಯವರು, ಬಳ್ಳಾರಿ, ಹೊಸಪೇಟೆ, ವಿಜಯನಗರ ಕಾಲೇಜು… ಇಲ್ಲೆಲ್ಲ ಹುಡುಕಿ, ಕಡೆಗೂ ನನ್ನನ್ನು ಹಿಡಿದೇಬಿಟ್ಟರು. `ಸ್ಪರ್ಶ’ ಹೆಸರಿನ ಸಿನಿಮಾ ತಗೀತಿದೀನ್ರಿ ಸರ. ನನಗ ನಮನಮೂನಿ ಶಾಯರಿ ಬೇಕ್ರಿ’ ಎಂದರು.

ಅವರ ಮಾತಿಗೆ ಒಪ್ಪಿಕೊಂಡೆ. ಸೀದಾ ಬೆಂಗಳೂರಿಗೆ ಬಂದೆ. ನಟ ಸುದೀಪ್, ತಮ್ಮ ಮನೆಯ ಪಕ್ಕದ ಮನೆಯಲ್ಲೇ ಉಳಿಯಲಿಕ್ಕೆ ವ್ಯವಸ್ಥೆ ಮಾಡಿದ್ರು. ಸಿನಿಮಾದ ಕೆಲಸ ಶುರುವಾಯ್ತು. ದೇಸಾಯಿಯವರು ಯಾವ ಸಂದರ್ಭಕ್ಕ ಬೇಕಂತಾರೋ ಆಗೆಲ್ಲ ಒಂದು ಶಾಯರಿ ಬರೆದು ಕೊಡ್ತಿದ್ದೆ. ಟೈಮು ಸಿಕ್ಕಾಗ ನಾವಿಬ್ರೂ ಅದೂ ಇದೂ ಅಂತ ಹರಟಿಕೊಂತಾ ಕೂಡತಿದ್ವಿ. ಅದೊಂದು ದಿನ ದೇಸಾಯರು- `ಸರ್, ಈ ಸಿನಿಮಾಕ್ಕ ನೀವೊಂದು ಹಾಡನ್ನು ಯಾಕೆ ಬರೀಬಾರ್ದು?’ ಎಂದರು. `ಅದಕ್ಕೇನಂತ್ರೀ ಸರ, ಬರೀತೇನರೀ. ಸನ್ನಿವೇಶ ಹೇಳ್ರಿ’ ಎಂದೆ. ಆಗ ದೇಸಾಯಿ ಅವರು- `ನಾಯಕ, ನಾಯಕಿ ಊಟಿಗೆ ಕುಟುಂಬ ಸಮೇತ ಹೋಗಿರ್ತಾರೆ. ಅಲ್ಲಿ ಕುಟುಂಬದವರ ಕಣ್ತಪ್ಪಿಸಿ ಇಬ್ಬರೇ ಬೇರೆ ಹೋಗಿರುತ್ತಾರೆ. ಆಗ ಸಿಕ್ಕ ಏಕಾಂತದಲ್ಲಿ ನಾಯಕಿಗೆ ತನ್ನ ಪ್ರೀತಿಯನ್ನು ವಿವರಿಸುತ್ತಾ ನಾಯಕ ಹೇಳುವ ಹಾಡು ಇದಾಗಬೇಕು. ಕಣ್ಣಿಗೆ ಕಾಣದ ವಸ್ತುಗಳ ವರ್ಣನೆ ಈ ಹಾಡಲ್ಲಿ ಬರಬೇಕು. ಇದನ್ನು ಪಂಕಜ್ ಉದಾಸ್ ಕೈಲಿ ಹಾಡಿಸಬೇಕು ಅಂತ ಆಸೆಯಿದೆ’ ಅಂದರು.

`ಪಂಕಜ್ ಉದಾಸ್ ಹಾಡ್ತಾರೆ ಅಂದಮೇಲೆ ಅದು ಗಜಲ್ ಥರಾ ಇರಲಿ ಸರ್’ ಎಂದೆ. ದೇಸಾಯಿ ಒಪ್ಪಿದರು. ಹಿಂದೆಯೇ- `ಈ ಹಾಡಿಗೆ ಹಂಸಲೇಖಾ ಆಗಲೇ ಟ್ಯೂನ್ ಮಾಡಿದ್ದಾರೆ. ವಾರದಲ್ಲಿ ಪಂಕಜ್ ಉದಾಸ್ ಬರ್ತಾರೆ. ಅಷ್ಟರೊಳಗೆ ಹಾಡು ಬೇಕು’ ಅಂದರು. ನಂತರದ ನಾಲ್ಕೈದು ದಿನ ಅದೆಷ್ಟೇ ತಲೆಕೆಡಿಸಿಕೊಂಡರೂ ಹಾಡಿನ ಒಂದೇ ಒಂದು ಸಾಲೂ ಹೊಳೆಯಲಿಲ್ಲ. ಪಂಕಜ್ ಉದಾಸ್ ಬರೋಕೆ ಇನ್ನು ಒಂದೇ ದಿನ ಬಾಕಿಯಿತ್ತು. ಈ ಹಾಡಿನ ಸಾಲೇ ಹೊಳೀತಿಲ್ಲ. ಏನ್ಮಾಡೋದು ಎಂದು ಅದೊಂದು ರಾತ್ರಿ ಬೆಂಗಳೂರಿನ ಮಹಡಿ ಮನೆಯ ಟೆರೇಸ್ನಲ್ಲಿ ನಿಂತು ಚಿಂತಿಸುತ್ತಿದ್ದಾಗ- ಪಕ್ಕದ ಮನೆಯ ಹೆಂಗಸೊಬ್ಬಳು ಅಳುತ್ತಿದ್ದ ಮಗುವನ್ನು ಎತ್ತಿಕೊಂಡು ಅದಕ್ಕೆ ಆಗಸದ ಚಂದ್ರನನ್ನು ತೋರಿಸುತ್ತಾ- `ನೀನು ಚಿನ್ನ, ನೀನು ಬಂಗಾರ, ನೀನೇ ಅಪರಂಜಿ, ಸುಮ್ನಿರು ಕಂದಾ’ ಎಂದಳು. ಹಿಂದೆಯೇ `ಚಂದ್ರನಿಗಿಂತ ನೀನೇ ಚಂದಕ್ಕಿದೀಯ ಚಿನ್ನಾ’ ಎಂದು ಮುದ್ದಾಡಿದಳು. ತಕ್ಷಣವೇ ನಮ್ಮ ಮನೆಯಲ್ಲಿ ಹಿಂದೊಮ್ಮೆ ನಡೆದ ಘಟನೆ ನೆನಪಿಗೆ ಬಂತು. ಅದೊಂದು ರಾತ್ರಿ ಚಂದ್ರನ ಬೆಳಕು ಹೆಂಚಿನ ಮನೆಯ ಕಿಂಡಿಯಿಂದ ಮಲಗಿದ್ದ ನನ್ನ ಮಗನ ಮೇಲೆ ಬಿತ್ತು. ಅದನ್ನು ಕಂಡು ನನ್ನ ಹೆಂಡತಿ- `ನೋಡ್ರಿ, ಹಾಲು ಬೆಳದಿಂಗಳಾಗ ನನ್ ರಾಜ ಎಷ್ಟು ಮುದ್ದಾಗಿ ಕಾಣ್ಲಿಕ್ಕತ್ತಾನ ನೋಡ್ರಿ’ ಎಂದು ಖುಷಿಯಿಂದ ಉದ್ಗರಿಸಿದ್ದಳು.

ಇನ್ನಷ್ಟು

ಮೀಡಿಯಾ ಪದ್ಯ

newspaper5.img_assist_custom

ಜಿ ಎಸ್ ಎಸ್ ಬರೆದ ಮೀಡಿಯಾ ಪದ್ಯ

ಹೊರದಾರಿ

ಭೇಟಿ ಕೊಡಿ- ಮೀಡಿಯಾ ಮೈಂಡ್


ಮುಂಗಾರುಮಳೆ ಸಹಿಸಿಕೊಳ್ಳಬಹುದು, ಚಳಿಯ ಜತೆ ಚೆಲ್ಲಾಟ ಕಷ್ಟ..

ಚಳಿಯ ರಾತ್ರಿ-‘ಥರ ಥರ’

-ವಿನಾಯಕ ರಾಮ್ ಕಲಗಾರು

cinima vruttantaನಟ ಗಣೇಶ್ ನಡೆದರೂ ಸುದ್ದಿಯಾಗುತ್ತೆ. ಸುಮ್ಮನಿದ್ದರೂ ಫ್ಲ್ಯಾಷ್ ನ್ಯೂಸ್ ಆಗುತ್ತದೆ. ಆದರೆ ಆತ ಅಂದು ಚಳಿಗಾಳಿಗೆ ಸಿಕ್ಕಿ ಪಟ್ಟಪಾಡು ಅಷ್ಟಿಷ್ಟಲ್ಲ. ಆದರೆ ಅದು ಇಂದು ಸುದ್ದಿಯಾಗಿದೆ. ಏಕೆಂದರೆ ಗಣೇಶ್ ಇಂದು ಗೋಲ್ಡನ್ ಸ್ಟಾರ್ ಅದೇನೆಂಬುದು ಇಲ್ಲಿದೆ.

ಬಿಸಿಬಿಸಿ ಬೋಂಡ ತಿನ್ನುತ್ತಾ, ಕಾಫಿ ಕುಡಿಯುತ್ತಾ, ಎರಡೆರಡು ಹೊದಿಕೆ ಹೊದ್ದುಕೊಂಡು ಬೆಚ್ಚಗೆ ಮನೆಯಲ್ಲಿ ಕುಳಿತು ಚಳಿ ಚೆಂದ ಎನ್ನುವುದೇನೋ ಸರಿ. ಆದರೆ ಒಂದಲ್ಲ ಒಂದು ಬಾರಿ ಕೊರೆವ ಚಳಿಗೆ ನಿರಾಯುಧರಾಗಿ ಸಿಕ್ಕು ಒದ್ದಾಡಿರುತ್ತೇವೆ ಅಲ್ಲವೇ? ಅಂಥ ಅನುಭವ ಹೇಳಿ ಎಂದು ಕೇಳಿದಾಗ ನಟ ಗಣೇಶ್ ನಮ್ಮ ಈ ‘ಚಳಿಗಾಲದ ಅಧಿವೇಶನ’ದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಚಳಿ ಹುಡುಗಾಟವಲ್ಲ!

1ganesh06copy

ಅವು ಕಾಮಿಡಿ ಟೈಮ್ ದಿನಗಳು. ಅಂದು ಚುಮುಚುಮು ಚಳಿ. ಎದೆಯಲ್ಲಿ ಐಸ್ ಇಟ್ಟ ಅನುಭವ ನೀಡುವ ಚಿಲ್ಡ್ ಗಾಳಿ. ತೆಳಗಿನ ಟೀ ಶಟರ್್, ಪ್ಯಾಂಟ್ನಲ್ಲಿದ್ದೆ. ಕೈ ಥರಥರ ನಡುಗುತ್ತಿತ್ತು. ಗುಟ್ಟಳ್ಳಿ ಸಮೀಪದ ಬಸವನಗುಡಿ ರಸ್ತೆಯಲ್ಲಿ 60 ಕಿ.ಮೀ. ವೇಗದಲ್ಲಿ ಬೈಕ್ ಓಡುತ್ತಿತ್ತು. ಭಾನುವಾರವಾದ್ದರಿಂದ ಇಡೀ ಬೆಂಗಳೂರು ನಿದ್ರಾವಸ್ಥೆ ತಲುಪಿತ್ತು. ರಸ್ತೆ ಖಾಲಿ ಖಾಲಿ. ಅಲ್ಲಲ್ಲಿ ಶ್ವಾನದೇವ ತನ್ನ ಖಯಾಲಿ ಶುರುಮಾಡಿದ್ದ. ಕೈ ನಡುಕ ಹೆಚ್ಚಾಯಿತು. ಎದೆಬಡಿತ ಅದಕ್ಕೆ ಸರಿಯಾಗಿ ತಾಳ ಹಾಕಿತ್ತು.

ಬೈಕ್ ಇದ್ದಕ್ಕಿದ್ದಂತೆ ಧಸಕ್ ಅಂತ ನಿಂತಿತು. ಏನೋ ನೆನಪಾಗಿ, ಆ ಚಳಿಯಲ್ಲೂ ಹಣೆ ಒಮ್ಮೆ ಬಿಸಿಯಾಯಿತು. ಬೆವರಿನ ಹನಿ ಬೆನ್ನ ಒದ್ದೆ ಮಾಡಿತು. ಪಕ್ಕದ ರೂಮಿನ ಗೆಳೆಯ ನಾಗಶೇಖರ (ಅರಮನೆ ನಿದರ್ೇಶಕ) ಹಿಂದಿನ ದಿನ ಬೈಕ್ ಒಯ್ದಿದ್ದ. 2ಲೀ. ಪೆಟ್ರೋಲ್ನಲ್ಲಿ ಒಂದೂವರೆ ಖಾಲಿ ಮಾಡಿದ್ದ.

ಏನು ಮಾಡಬೇಕು ಎಂದೇ ತೋಚಲಿಲ್ಲ. ನಾಯಿಗಳು ತಮ್ಮ ಪಾಡಿಗೆ ತಾವು ರಾಗ ಎಳೆಯುತ್ತಿದ್ದವು. ಇದೆಯಲ್ಲಾ ನಟರಾಜ ಸವರ್ಿಸ್…ತಳ್ಳು ಶಿವಾ ತಳ್ಳು… ಮನೆ ಬರಲು ಇನ್ನೂ 1 ಕಿ.ಮೀ. ಇತ್ತು. ಚಳಿ ಮಹಾರಾಜ ನನ್ನ ಅಸಹಾಯಕತೆ ನೋಡಿ, ಹೀಯಾಲಿಸುತ್ತಿದ್ದ. ಹೇಗೋ ಗಾಡಿ ದೂಡಿಕೊಂಡು ಅಂತೂ ಇಂತು ಮನೆ ತಲುಪಿದೆ. ಮನೆಯಲ್ಲಿ ನನ್ನನ್ನು ಬಿಟ್ಟರೆ ಮತ್ಯಾರೂ ಇರಲಿಲ್ಲ. ಅಪ್ಪ ಅಮ್ಮ ದೂರದ ನೆಲಮಂಗಲ ಸಮೀಪದ ಹಳ್ಳಿಯಲ್ಲಿದ್ದರು.

ಉಸ್ಸಪ್ಪಾ ಎಂದು ನಿಟ್ಟುಸಿರು ಬಿಟ್ಟು, ಪ್ಯಾಂಟ್ ಜೇಬಿಗೆ ಕೈ ಹಾಕಿದೆ. ಆದರೆ ಅಲ್ಲಿ ಕೀಲಿ ಕೈ ಇರಲಿಲ್ಲ. ಈ ಮಧ್ಯೆ ಮೈ ತನ್ನ ಪಾಡಿಗೆ ತಾನು ಮುಲುಮುಲು ಎನ್ನುತ್ತಿತ್ತು. ಮತ್ತೊಮ್ಮೆ ಎಲ್ಲಾ ಕಿಸೆಗಳನ್ನೂ ತಡಕಾಡಿದೆ. ಏನಾಗಿರಬಹುದು ಎಂದು ಯೋಚಿಸುವಷ್ಟರಲ್ಲಿ ಐದು ನಿಮಿಷದ ಹಿಂದೆ ನಡೆದಿದ್ದು ನೆನಪಿಗೆ ಬಂತು… ಬೈಕ್ ದೂಡಿಕೊಂಡು ಬರುವಾಗ ಚಳಿಗಾಳಿ ಕಿವಿಗೆ ಅಪ್ಪಳಿಸುತ್ತಿತ್ತು. ಜೇಬಿನಲ್ಲಿದ್ದ ಕಚರ್ಿಫ್ ತೆಗೆದು, ಕಿವಿ ಸಮೇತ ತಲೆಗೆ ಸುತ್ತಿಕೊಂಡೆ. ರಸ್ತೆಯಲ್ಲಿ ಏನೋ ಬಿದ್ದ ಸಪ್ಪಳ ಕೇಳಿಸಿತ್ತು. ಚಳಿಯ ಹೊಡೆತಕ್ಕೆ ಹೈರಾಣಾಗಿದ್ದ ನಾನು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ….. ನೆನಪಾಗಿದ್ದೇ ತಡ, ಮತ್ತೆ ರಸ್ತೆಗಿಳಿದು ಕೊನೆಗೂ ಕೀಲಿ ಕೈ ಹುಡುಕಿ ತಂದೆ. ಹಿಂದಿರುಗುವಾಗ ಸಾಲುಗಟ್ಟಿ ನಿಂತಿದ್ದ ರಸ್ತೆ ದೀಪಗಳಿಗೆ ಥ್ಯಾಂಕ್ಸ್ ಹೇಳಿದೆ. ಮರುದಿನ ಎದ್ದು ಮುಖ ತೊಳೆಯಲೂ ಶಕ್ತಿ ಇರಲಿಲ್ಲ. ಬೆಳಗಾಗುವಷ್ಟರಲ್ಲಿ ಚಳಿಜ್ವರ ಆವರಿಸಿಬಿಟ್ಟಿತ್ತು….!

ಮುಂಗಾರುಮಳೆಯನ್ನಾದರೂ ಸಹಿಸಿಕೊಳ್ಳಬಹುದು. ಈ ಚಳಿಯ ಜತೆ ಮಾತ್ರ ಚೆಲ್ಲಾಟ, ಹುಡುಗಾಟ ಆಡುವುದು ಕಷ್ಟ!