ಬ್ಯೂಟಿ ಪಾರ್ಲರ್ ಕೆಲಸವನ್ನು ಯಾಕೆ ಎಳೆತಂದಿರಿ ?

‘ನೆಲ್ಸನ್ ಮಂಡೇಲರಿಗೆ ಕ್ಷೌರ ಮಾಡುವಾಸೆ’ ಎಂಬ ಅವಧಿ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ‘ದೇಸಿಮಾತು’ ಎಂಬ ಬ್ಲಾಗ್ ಬಗ್ಗೆ ಗಮನ ಸೆಳೆದಿವೆ. ದೇಸಿಮಾತು ಸಮಕಾಲೀನ ಆಗುಹೋಗುಗಳತ್ತ ಬೆಳಕು ಚೆಲ್ಲುತ್ತಿದೆ.

ಪತ್ರಕರ್ತ ದಿನೇಶ್ ಕುಮಾರ್ ಅವರು ತಮ್ಮನ್ನು ಬಣ್ಣಿಸಿಕೊಳ್ಳುವುದು ಹೀಗೆ- ಹುಟ್ಟಿದ್ದು ಸಕಲೇಶಪುರ ಎಂಬ ಪುಟ್ಟ ಊರು. ಮಲೆನಾಡಿನ, ಮಳೆಹಾಡಿನ ನಡುವೆ ಹೇಮದಂಡೆಯಲ್ಲಿ ಬೆಳೆದವನು. ಸದ್ಯಕ್ಕೆ ‘ಇಂದು ಸಂಜೆ ಎಂಬ ಪತ್ರಿಕೆಯ ಸಂಪಾದಕ. ಬರೆಯುವುದು ಹವ್ಯಾಸ ಎನ್ನುವುದಕ್ಕಿಂತಲೂ ಬದುಕುವ ಕ್ರಿಯೆ. ಸದ್ಯಕ್ಕೆ ಇಷ್ಟು ಸಾಕು…

ಪ್ರಜಾವಾಣಿ ಹೀಗೇಕಾಯ್ತು ಎನ್ನುವುದರಿಂದ ಹಿಡಿದು ಸಕಲೇಶಪುರ ಯಾಕೆ ಅಭಿವೃದ್ಧಿಯಾಗಲಿಲ್ಲ ಎನ್ನುವವರೆಗೆ ಇವರ ಬರಹಗಳು ಹರಡಿಕೊಂಡಿವೆ. ಮಂಡೇಲರಿಗೆ ಕ್ಷೌರ ಲೇಖನಕ್ಕೆ ಮಾತು ಕೂಡಿಸಲಿರುವ ಒಂದು ಲೇಖನ ಇಲ್ಲಿದೆ- 

ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಸಂತೋಷ್ ಹೆಗಡೆಯವರೇ,

ತಾವು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಭ್ರಷ್ಟ ಅಧಿಕಾರಿಗಳ ಗುಂಡಿಗೆ ನಡುಗುತ್ತಿದೆ. ಹಿಂದಿನ ಲೋಕಾಯುಕ್ತರು ಲೋಕಾಯುಕ್ತ ಸಂಸ್ಥೆ ಎಂಬುದೊಂದು ಇದೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಭ್ರಷ್ಟಾಚಾರದ ವಿರುದ್ಧ ತಮ್ಮದೇ ಆದ ವಿಧಾನದಲ್ಲಿ ಜನಜಾಗೃತಿ ಮೂಡಿಸಿದ್ದರು. ತಾವು ಇನ್ನೂ ಒಂದು ಹೆಜ್ಜೆ ಮುಂದು ಹೋಗಿದ್ದೀರಿ. ಸಣ್ಣ ಪುಟ್ಟ ಅಧಿಕಾರಿಗಳ ಜತೆಗೆ ದೊಡ್ಡ ತಿಮಿಂಗಲಗಳನ್ನೂ ನಿಮ್ಮ ಬಲೆಗೆ ಕೆಡವಿಕೊಂಡಿರಿ. ಪರಿಣಾಮವಾಗಿ ಐಎಎಸ್-ಐಪಿಎಸ್ ಅಧಿಕಾರಿಗಳೂ ಲೋಕಾಯುಕ್ತ ಸಿಂಡ್ರೋಮ್‌ಗೆ ಒಳಗಾಗಿದ್ದಾರೆ. ‘ನನ್ನ ಸರದಿ ಯಾವಾಗ? ಎಂಬುದೇ ಜನಸಾಮಾನ್ಯರ ದುಡ್ಡು ತಿಂದು ಕೊಬ್ಬಿರುವ ಅಧಿಕಾರಗಳ ಪ್ರಶ್ನೆಯಾಗಿದೆ. ರಾತ್ರಿ ಕನಸಿನಲ್ಲಿಯೂ ನೀವು ಅವರನ್ನು ಕಾಡುತ್ತಿದ್ದೀರಿ.

ಇದೆಲ್ಲವೂ ಸರಿ, ಈ ವಿಷಯ ಕುರಿತು ಇಲ್ಲಿ ನಾನು ಪ್ರಸ್ತಾಪಿಸುತ್ತಿಲ್ಲ. ನಾನು ಹೇಳಲು ಹೊರಟಿರುವುದು ನಿಮ್ಮ ಸಾಧನೆ, ವೃತ್ತಿಗೆ ಸಂಬಂಧಪಡದ ವಿಷಯ. ತಾಳ್ಮೆಯಿಂದ ಪರಾಂಬರಿಸಬೇಕು ಎಂಬುದು ನನ್ನ ವಿನಂತಿ.

ಸೆಪ್ಟೆಂಬರ್ ೧೨ರ ಪ್ರಜಾವಾಣಿ ಪತ್ರಿಕೆಯ ಮೂರನೇ ಪುಟದಲ್ಲಿ ತಮ್ಮ ಹೇಳಿಕೆಯೊಂದು ಪ್ರಕಟಗೊಂಡಿದೆ. ಅದರ ಮೊದಲ ಪ್ಯಾರಾ ಹೀಗಿದೆ: “ ಸರ್ಕಾರಿ ಅಧಿಕಾರಿಗಳ ವಿರುದ್ಧ ಉತ್ಪ್ರೇಕ್ಷಿತ ವರದಿಗಳನ್ನು ನಾವು ನೀಡುತ್ತಿಲ್ಲ. ನಾವು ಬ್ಯೂಟಿ ಪಾರ್ಲರ್ ಕೆಲಸವನ್ನೇನೂ ಮಾಡುವುದಿಲ್ಲ. ಭ್ರಷ್ಟರ ಪರ ವಹಿಸುವವರು ಎಚ್ಚರಿಕೆಯಿಂದ ಮಾತನಾಡಲಿ

ನಿಮ್ಮ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿಗಳ ಆಸ್ತಿ ಮೌಲ್ಯ ನಿಗದಿ ಮಾಡುವಾಗ ಬೇಕಾಬಿಟ್ಟಿ ವರದಿ ನೀಡುತ್ತಿದ್ದೀರಿ ಎಂದು ಸಚಿವರೊಬ್ಬರು ಆರೋಪಿಸಿದ ಹಿನ್ನೆಲೆಯಲ್ಲಿ ನೀವು ಈ ಸ್ಪಷ್ಟನೆ ನೀಡಿದ್ದೀರಿ.

ಸಚಿವರಿಗೆ ಸರಿಯಾದ ಉತ್ತರ ನೀಡಬೇಕಿತ್ತು, ನೀಡಿದ್ದೀರಿ. ಆ ಬಗ್ಗೆ ನನ್ನ ತಕರಾರಿಲ್ಲ. ಆದರೆ ವಿನಾಕಾರಣ ಬ್ಯೂಟಿ ಪಾರ್ಲರ್ ಕೆಲಸವನ್ನು ಯಾಕೆ ಎಳೆತಂದಿರಿ ಎಂಬುದು ನನ್ನ ಪ್ರಶ್ನೆ.

ಬ್ಯೂಟಿಪಾರ್ಲರ್ ಕೆಲಸವೆಂಬುದು ಬೇಕಾಬಿಟ್ಟಿ ಕೆಲಸವೇ? ಅದೇನು ಕೊಳಕು ಕಾರ್ಯವೇ? ಸಮಾಜ ಬಾಹಿರ ಉದ್ಯೋಗವೆ? ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕೆಲಸವೇ? ಸುಳ್ಳು ದಗಲ್ಬಾಜಿಯ ಕೆಲಸವೇ? ಬ್ಯೂಟಿ ಪಾರ್ಲರ್ ಕೆಲಸ ಮಾಡುವವರು ವಂಚನೆ ಮಾಡುತ್ತಾರೆಯೇ? ಯಾಕೆ ನೀವು ಬ್ಯೂಟಿ ಪಾರ್ಲರ್ ಉದಾಹರಣೆ ನೀಡಿದಿರಿ?

ನಾವು ಬೀದಿಗಳಲ್ಲಿ ಆಗಾಗ ಒಂದು ಮಾತನ್ನು ಕೇಳುತ್ತಿರುತ್ತೇವೆ. ‘ನಾನೇನು ಹಜಾಮತಿ ಮಾಡ್ತಿದ್ದೀನಾ? ನಾನೇನು ಹಜಾಮನಾ? ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಕೆಲವರು ಇಂಥ ಪ್ರಯೋಗಗಳನ್ನು, ಉಪಮೆಗಳನ್ನು ಬಳಸುತ್ತಾರೆ. ನೀವು ಹೀಗೆ ಹೇಳುವ ಬದಲು ನಾವೇನು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದೀನಾ? ಎಂದು ಸಭ್ಯ ಭಾಷೆಯಲ್ಲಿ ಹೇಳಿದ್ದೀರಿ ಅಷ್ಟೆ.

ಅಷ್ಟಕ್ಕೂ ನನ್ನಂಥವರಿಗೆ ಅರ್ಥವಾಗದ ವಿಷಯವೇನೆಂದರೆ ಯಾವುದೇ ವೃತ್ತಿ ಕನಿಷ್ಠ, ಮೊತ್ತೊಂದು ಶ್ರೇಷ್ಠ ಆಗುವುದು ಹೇಗೆ? ದೇಶದ ಶ್ರಮಿಕ ಜನವರ್ಗ ಹಲವು ಬಗೆಯ ಕುಲಕಸುಬುಗಳನ್ನು ರೂಢಿಸಿಕೊಂಡಿದ್ದಾರೆ. ಚಪ್ಪಲಿ ಹೊಲೆಯುವವರು, ಬೀದಿ ಗುಡಿಸುವವರು, ಕಕ್ಕಸ್ಸು ತೆಗೆಯುವವರು, ಕ್ಷೌರ ಮಾಡುವವರು, ಬಟ್ಟೆ ಒಗೆಯುವವರು, ಬಟ್ಟೆ ನೇಯುವವರು, ಕುರಿ ಕಾಯುವವರು, ದನ ಮೇಯಿಸುವವರು, ಮರಗೆಲಸದವರು, ಮಡಿಕೆ ಮಾಡುವವರು… ಹೀಗೆ ಹಲವು ಬಗೆಯ ಕುಲಕಸುಬುಗಳನ್ನು ಮಾಡುವ ಜನವರ್ಗ ನಮ್ಮಲ್ಲಿದೆ. ಹೀಗೆ ಕುಲಕಸುಬುಗಳನ್ನು ಮಾಡುವವರು ಕನಿಷ್ಠರೇ. ಕೇವಲ ಸಾಫ್ಟ್‌ವೇರ್ ಇಂಜಿನಿಯರುಗಳು, ಡಾಕ್ಟರುಗಳು, ನ್ಯಾಯಮೂರ್ತಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳು, ದೇವಸ್ಥಾನಗಳಲ್ಲಿ ಪೂಜೆ ಮಾಡುವವರು ಮಾತ್ರ ಶ್ರೇಷ್ಠರೇ?

ನಮ್ಮ ಸಾಮಾಜಿಕ ವ್ಯವಸ್ಥೆ ಹೇಗಿದೆಯೆಂದರೆ ಶ್ರೇಣೀಕೃತ ಜಾತಿವ್ಯವಸ್ಥೆಯ ತಳಭಾಗದಲ್ಲಿರುವ ಜಾತಿಗಳ ಹೆಸರನ್ನೇ ನಮ್ಮ ಸಮಾಜ ಬೈಗುಳಗಳನ್ನಾಗಿ ಬಳಸುತ್ತಿದೆ. ಹೊಲೆಯ, ಮಾದಿಗ, ಹಜಾಮ, ಕೊರಮ, ಕೊರಚ, ದೊಂಬಿದಾಸ, ಪಿಂಜಾರ, ಕುರುಬ, ಒಡ್ಡ, ಕಲ್ಲು ಒಡ್ಡ, ದರವೇಸಿ, ಸುಡುಗಾಡು ಸಿದ್ಧ, ಶಿಳ್ಳೇಕ್ಯಾತ ಹೀಗೆ ಹಲವು ಜಾತಿಗಳ ಹೆಸರುಗಳು ಬೈಗುಳಗಳಾಗಿ ಬಳಕೆಯಾಗುತ್ತಿವೆ. ಈ ಪೈಕಿ ಹೊಲೆಯ ಹಾಗು ಮಾದಿಗ ಸಮುದಾಯಕ್ಕೆ ಅಸ್ಪೃಶ್ಯತಾ ನಿಷೇಧ ಕಾಯ್ದೆಯಡಿ ರಕ್ಷಣೆ ನೀಡಲಾಗಿದೆ. ಹೀಗಿದ್ದೂ ಜಾತಿ ಹೆಸರು ಹೇಳಿ ನಿಂದಿಸುವ ‘ಪರಂಪರೆಯೇನು ಕೊನೆಯಾಗಿಲ್ಲ.

ಆದರೆ ಇನ್ನುಳಿದ ಜಾತಿಗಳಿಗೆ ಆ ರಕ್ಷಣೆಯೂ ಇಲ್ಲ. ಯಾವ ತಪ್ಪಿಗಾಗಿ ಈ ಸಮುದಾಯಗಳ ಜನರಿಗೆ ಶಿಕ್ಷೆ? ಈ ಸಮುದಾಯಗಳ ಪೈಕಿ ಕೆಲವು ದಲಿತ ವರ್ಗಕ್ಕೆ ಸೇರಿದವು. ಮತ್ತೆ ಕೆಲವು ಅಲೆಮಾರಿ ಬುಡಕಟ್ಟು ಜಾತಿಗಳು. ಇನ್ನುಳಿದವು ಹಿಂದುಳಿದ ಜಾತಿಗಳು. ಯಾಕೆ ಈ ಜನಸಮೂಹಗಳು ಮಾಡುತ್ತಿರುವ ಜೀವನಾಧಾರ ಕಸುಬುಗಳು ಕೀಳು ಎಂಬಂತೆ ಬಿಂಬಿತವಾದವು? ಈ ಸಮಾಜ ಎಷ್ಟು ಕೃತಘ್ನ ಎಂದರೆ ಇಡೀ ದೇಶದ ಜನರ ಶಾರೀರಿಕ ಹಾಗು ಮಾನಸಿಕ ಸ್ವಾಸ್ಥ್ಯ ಕಾಪಾಡುವ, ಊರು ತೊಳೆಯುವ, ಶುದ್ಧಗೊಳಿಸುವ ಕೆಲಸ ಮಾಡುವವರನ್ನೇ ನಿಂದಿಸುತ್ತದೆ, ಅವರಲ್ಲಿ ಕೀಳರಿಮೆ ತಂದೊಡ್ಡುತ್ತದೆ.

ದೇಶದ ಸಾಮಾಜಿಕ ಇತಿಹಾಸದ ದುರಂತವೇ ಇದು. ಯಾರು ಸಮಾಜದ ಕೊಳೆ-ಕೊಳಕುಗಳನ್ನು ಬಾಚಿ, ಬಳಿದು ಶುದ್ಧಗೊಳಿಸುತ್ತಾನೋ ಅವನು ಕನಿಷ್ಠ ಎನಿಸಿಕೊಂಡ. ಯಾರು ಸಮಾಜದ ಒಳಗೆ ಕೊಳೆ-ಕೊಳಕುಗಳನ್ನು ತುಂಬುತ್ತಾನೋ ಅವನು ಶ್ರೇಷ್ಠ ಎನಿಸಿಕೊಂಡ.

ಇನ್ನು ನೀವು ನಿಮ್ಮನ್ನು ಸಮರ್ಥಿಸಿಕೊಳ್ಳಲು ಬಳಸಿಕೊಂಡ ಉಪಮೆಯ ವಿಷಯಕ್ಕೆ ಬರೋಣ. ಬ್ಯೂಟಿಪಾರ್ಲರ್‌ಗಳನ್ನು ಅಥವಾ ಹೇರ್ ಕಟಿಂಗ್ ಸೆಲೂನ್‌ಗಳನ್ನು ನಡೆಸುತ್ತಿರುವವರು, ಆ ಕಾಯಕ ಮಾಡುತ್ತಿರುವವರು ಸವಿತಾ ಸಮಾಜದವರು. ಈ ಸಮಾಜಕ್ಕೆ ಹಜಾಮ, ನಯನಜ ಕ್ಷತ್ರಿಯ, ಭಂಡಾರಿ, ಹಡಪದ, ಕ್ಷೌರಿಕ ಇತ್ಯಾದಿ ಉಪನಾಮಗಳಿವೆ. ಈ ರಾಜ್ಯದಲ್ಲಿ ಅತಿ ಹೆಚ್ಚು ಬೈಗುಳವಾಗಿ ಬಳಕೆಯಾಗುವ ಶಬ್ದ ಎಂದರೆ ಅದು ಹಜಾಮ.

ಈ ಸಮುದಾಯವರು ಸಮಾಜ ಬಂಧುಗಳ ತಲೆ ಕೂದಲು, ಗಡ್ಡದ ಕೂದಲು ಬೆಳೆದಂತೆ ಅವುಗಳನ್ನು ಕತ್ತರಿಸಿ ಓರಣಗೊಳಿಸುತ್ತಾರೆ. ಗಬ್ಬುನಾರು ಕಂಕುಳ ಅಡಿಯ ಕೂದಲನ್ನು ತೆಗದು ಸ್ವಚ್ಛಗೊಳಿಸುತ್ತಾರೆ. ಇದಕ್ಕೆ ನಿಗದಿಪಡಿಸಿದ ಬೆಲೆಯನ್ನು ಪಡೆದುಕೊಳ್ಳುತ್ತಾರೆ. ಒಂದು ವೇಳೆ ಇವರು ಇಲ್ಲದೇ ಇದ್ದಿದ್ದರೆ ಎಲ್ಲರೂ ಕೆಜಿಗಟ್ಟಲೆ ತಲೆಕೂದಲು, ಜಟೆ, ಗಡ್ಡ ಬಿಟ್ಟುಕೊಂಡು ಅಸಹ್ಯವಾಗಿ ಕಾಣಬೇಕಾಗುತ್ತಿತ್ತು. ಇದು ಅಪ್ಪಟ ಶುದ್ಧಿಯ ಕಾಯಕ. ಕೊಳಕನ್ನು ತೊಳೆದುಕೊಂಡು ಶುಭ್ರಗೊಳ್ಳಲೆಂದೇ ಇವರ ಬಳಿ ನಾವು ಹೋಗುತ್ತೇವೆ.

ಈ ಶುದ್ಧಿಯ ಕಾಯಕವೇನು ವಂಚನೆಯೇ? ಸೂಳೆಗಾರಿಕೆಯೇ? ಕಳ್ಳತನವೇ? ದರೋಡೆಯೇ? ಅಥವಾ ತಲೆಹಿಡಿಯುವ ನೀಚ ಕಾಯಕವೇ? ಹೀಗಿರುವಾಗ ನಮ್ಮ ಸಮಾಜ ಈ ಕಾಯಕವನ್ನು ಕೆಟ್ಟದ್ದಕ್ಕೆ, ಕೊಳಕು ವಿಷಯಗಳಿಗೆ ಉಪಮೆಯನ್ನಾಗಿ ಬಳಸುವುದು ಯಾಕೆ? ಇದು ಅನ್ಯಾಯವಲ್ಲವೆ?

ಸಾಧಾರಣವಾಗಿ ಹೇರ್ ಕಟಿಂಗ್ ಸೆಲೂನ್ ಎಂದರೆ ಪುರುಷರ ಕೇಶ ವಿನ್ಯಾಸಕ್ಕೆ ನಿಗದಿಯಾದ ಸ್ಥಳಗಳು. ಬ್ಯೂಟಿ ಪಾರ್ಲರ್‌ಗಳು ಹೆಣ್ಣು ಮಕ್ಕಳ ಕೇಶ ಶೃಂಗಾರ ಮಾಡುತ್ತವೆ. ಈ ಬ್ಯೂಟಿ ಪಾರ್ಲರ್‌ಗಳನ್ನು ನಡೆಸುವ ಹೆಣ್ಣುಮಕ್ಕಳ ಬದುಕಿನಲ್ಲಿ ಸಾವಿರ ನೋವುಗಳಿರುತ್ತವೆ. ಅವರು ಬದುಕಿನ ಅನಿವಾರ್ಯತೆಗಳಿಂದ ನೊಂದವರು. ಕುಟುಂಬ ನಿರ್ವಹಣೆಯ ಹೊಣೆ ಹೊತ್ತುಕೊಂಡವರು. ಸಮಾಜದ ನಿಂದನೆಗಳಿಂದ ನೊಂದು, ಈ ಅಪಮಾನಗಳನ್ನು ಮೆಟ್ಟಿನಿಂತು ಕೆಲಸ ಮಾಡುವವರು. ಇವರ ಕಾಯಕ ಕನಿಷ್ಠವಾಗಲು ಸಾಧ್ಯವೆ? ಇವರು ಸಮಾಜ ಬಾಹಿರವಾದ ಕೆಲಸವನ್ನೇನಾದರೂ ಮಾಡುತ್ತಿದ್ದಾರೆಯೇ?

ಮಾನ್ಯ ಸಂತೋಷ್ ಹೆಗಡೆಯವರೆ,

ತಾವು ಬ್ಯೂಟಿ ಪಾರ್ಲರ್ ಹೋಲಿಕೆಯನ್ನು ಬಳಸುವಾಗ ಇದೆಲ್ಲವನ್ನು ಯೋಚಿಸಿರಲಾರಿರಿ. ಆಕಸ್ಮಿಕವಾಗಿ ನಿಮ್ಮ ಬಾಯಿಂದ ಈ ಮಾತು ಹೊರಬಂದಿರಬಹುದು. ಆದರೆ ನಿಮ್ಮಂಥ ಉನ್ನತ ಸ್ಥಾನದಲ್ಲಿ ಕುಳಿತ ವ್ಯಕ್ತಿಗಳು, ನಿಮ್ಮ ಹಾಗೆ ಜನಪ್ರಿಯರಾಗಿರುವ ಸಾರ್ವಜನಿಕ ವ್ಯಕ್ತಿಗಳು ಹೀಗೆ ಮಾತನಾಡಿದರೆ ಅದು ಆ ಸಮುದಾಯಕ್ಕೆ ಎಷ್ಟು ನೋವು ತರುತ್ತದೆ ಎಂಬುದನ್ನು ನೀವು ಅಂದಾಜು ಮಾಡಲಾರಿರಿ. ನೊಂದವರಿಗಷ್ಟೆ ನೋವಿನ ಆಳ-ಅಗಲ ಗೊತ್ತಾಗಲು ಸಾಧ್ಯ ಅಲ್ಲವೆ?

ಇದೆಲ್ಲವನ್ನು ತಮ್ಮ ಬಳಿ ಬಂದು ಖಾಸಗಿಯಾಗಿ ನಿವೇದಿಸಿಕೊಳ್ಳಬಹುದಿತ್ತು. ಆದರೆ ಇದು ನೀವು ಖಾಸಗಿಯಾಗಿ ಆಡಿದ ಮಾತಲ್ಲ. ನಿಮ್ಮ ಮಾತು ಪ್ರಜಾವಾಣಿಯಂಥ ಜನಪ್ರಿಯ ಪತ್ರಿಕೆಯಲ್ಲಿ ಪ್ರಕಟಗೊಂಡು ಲಕ್ಷಾಂತರ ಜನರು ಓದಿದ್ದಾರೆ. ಹಾಗಾಗಿ ಬಹಿರಂಗ ಪತ್ರವನ್ನೇ ಬರೆಯಬೇಕಾಯಿತು.

ಈ ಪತ್ರ ಓದಿದ ಮೇಲೆ ತಮಗೆ ತಾವು ಆಡಿದ ಮಾತಿನ ಬಗ್ಗೆ ವಿಷಾದವೆನ್ನಿಸಿದರೆ ಸಾಕು, ನನ್ನ ಶ್ರಮ ಸಾರ್ಥಕ.

ಲೋಕಾಯುಕ್ತ ಹುದ್ದೆಯಲ್ಲಿ ನಿಮ್ಮ ಸಾರ್ಥಕ ಸೇವೆಯ ಬಗ್ಗೆ ಒಂದೇ ಒಂದು ಕಳಂಕವೂ ಇರಲಾರದು. ಹುದ್ದೆಗೆ ಬರುವ ಮುನ್ನವೇ ನಿಮ್ಮ ಆಸ್ತಿ ವಿವರ ಘೋಷಿಸಿಕೊಂಡು ಇಡೀ ಇಲಾಖೆಗೆ ಮೇಲ್ಪಂಕ್ತಿ ಹಾಕಿಕೊಟ್ಟವರು ನೀವು. ನಿಮ್ಮ ಪ್ರಾಮಾಣಿಕತೆ, ಬದ್ಧತೆಯನ್ನು ಯಾರೂ ಶಂಕಿಸಲಾರರು.

ಈ ಗೌರವ ಆದರಗಳನ್ನು ಇಟ್ಟುಕೊಂಡೇ ನಿಮ್ಮ ಅನಪೇಕ್ಷಿತ ಪ್ರತಿಕ್ರಿಯೆಯ ಕುರಿತು ನನ್ನ ಆಕ್ಷೇಪಣೆ ದಾಖಲಿಸಿದ್ದೇನೆ. ಅದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಇಂಥ ಆಕ್ಷೇಪಣೆಯ ಯತ್ನಗಳು ನನಗೆ, ನನ್ನಂಥವರಿಗೆ ಸಂಕಷ್ಟಗಳನ್ನು ತಂದೊಡ್ಡಬಹುದು. ಆ ಕುರಿತು ನಾನು ಹೆಚ್ಚು ತಲೆಕೆಡಿಸಿಕೊಳ್ಳಲಾರೆ. ಅನ್ಯಥಾ ಭಾವಿಸಬೇಡಿ.

ಅಪಾರ ಗೌರವದೊಂದಿಗೆ,

ದಿನೇಶ್ ಕುಮಾರ್ ಎಸ್.ಸಿ.
e-mail: dinoosacham@gmail.com
blog: http://desimaatu.blogspot.com

9 ಟಿಪ್ಪಣಿಗಳು (+add yours?)

  1. chandrashekhar aijoor
    ಮೇ 09, 2009 @ 19:07:21

    ಡಿಯರ್ ದಿನೇಶ್,
    ಸಂತೋಷ್ ಹೆಗ್ಡೆಯವರ ‘ಬ್ಯೂಟಿಪಾರ್ಲರ್’ ಪದ ಬಳಕೆಯ ಬಗ್ಗೆ ನೀವು ಎತ್ತಿರುವ ಆಕ್ಷೇಪ ಮೆಚ್ಚಬಹುದಾದರು, ನೀವು ಅಗ್ರಹಾರದ ಗೊಂಡಾರಣ್ಯದಲ್ಲಿ ಬಿದ್ದು ಸಾಮಾಜಿಕ ನ್ಯಾಯಕ್ಕಾಗಿ ಚೀರುತ್ತಿರುವಂತೆ ನನಗೆ ಕಾಣಿಸುತ್ತಿದೆ. ಭಯೋತ್ಪಾದನೆ ನಿಗ್ರಹಕ್ಕಾಗಿ ಬ್ಲಾಗ್, SMS, ಇಮೇಲ್, ಟೀಶರ್ಟ್ ಗಳಲ್ಲಿ ಪ್ರಾಣಕೊಡಲು ಸಿದ್ಧರಿರುವ ಸನಾತನಿಗಳ ಸಂಖ್ಯೆ ನಮ್ಮ ಸುತ್ತಲು ಕೋಟಿಯ ಲೆಕ್ಕದಲ್ಲಿ ಸಿಗುತ್ತದೆ. ಅದೇ ಅಸ್ಪೃಶ್ಯತೆ ನಿಗ್ರಹಕ್ಕಾಗಿ ನಿಮ್ಮಲ್ಲೇನಾದರೂ ಒನ್ ಪಾಯಿಂಟ್ ಪ್ರೊಗ್ರಾಮ್ ಇದೆಯಾ ಅಂತ ಸನಾತನ ಮಠಗಳಿಗೆ, ಸನಾತನ ಸರ್ಕಾರಗಳಿಗೆ, ಅಷ್ಟೇಕೆ ಖುದ್ದು ಸನಾತನಿಗಳಿಗೆ ಕೇಳಿ ನೋಡಿ, ತಕ್ಷಣವೇ ಅವರೆಲ್ಲ ತಮ್ಮ ಕಣ್ಣು ಕಿವಿ ಮೂಗು ಬಾಯಿಗಳನ್ನು ಕಳೆದುಕೊಂಡು ಶಿಲಾಯುಗವಾಸಿಗಳಾಗುತ್ತಾರೆ.

    ಪುಡಿಗಾಸಿಗೆ ಗಡಿಗಳಲ್ಲಿ ಜೀತಕ್ಕಿರುವ ನಮ್ಮ ಸೈನಿಕರನ್ನು ಕಂಡು ನನಗೆ ಅಯ್ಯೋ ಅನ್ನಿಸುತ್ತದೆ. ಈ ಮಹಾನ್ ದೇಶದ ದೇಶಪ್ರೇಮ ಅವರನ್ನು ಅಲ್ಲಿ ದುಡಿಯುವಂತೆ ಮಾಡಿದೆ ಎಂದುಕೊಂಡಿರುವ ಸನಾತನಿಗಳಿಗೆ, ಆ ಅಮಾಯಕರ ಮನೆಯೊಳಗಿನ ಬಡತನ ಯಾವತ್ತು ಕಾಣುವುದಿಲ್ಲ. ನನಗೆ ಆ ಸೈನಿಕರು ಬರಿ ಗಡಿಗಳನ್ನು ಕಾಯುತ್ತಿಲ್ಲ, ಈ ದೇಶದ ಮಡಿ ಮೈಲಿಗೆಯ ವಿಕಾರಗಳನ್ನು, ಮತಾಂಧರ, ಧರ್ಮದ ತಲೆಹಿಡುಕರ, communal butcherಗಳ ಸೈತಾನಿ ತೆವಲುಗಳನ್ನು ತಮ್ಮ ಪ್ರಾಣ ಒತ್ತೆ ಇಟ್ಟು ಕಾಯುತ್ತಿದ್ದಾರೆನಿಸುತ್ತದೆ. ದಲಿತರು ಮನುಷ್ಯರಲ್ಲ, ಆದರೆ ಅವರು ಹಿಂದೂಗಳು ಎಂದು ಹೇಳುವಷ್ಟು ದೊಡ್ಡಗುಣ ಸನಾತನಿಗಳ ನಾಲಿಗೆಗಿದೆ. ಇಂಥ ನಾಲಿಗೆಯೇ ಇವತ್ತು ಕೊರಮರನ್ನು ಕಳ್ಳಖದೀಮರನ್ನು ಒಂದೇ ಪಟ್ಟಿಗೆ ಸಲೀಸಾಗಿ ಸೇರಿಸುತ್ತದೆ. ಇನ್ನು ಇಂಥವರ ಪಟ್ಟಿಗಳಲ್ಲಿ ಮುಸ್ಲಿಮರ ಶ್ರಮಜೀವಿಗಳ ಸ್ಥಾನಮಾನ ಎಂಥದ್ದು ಎಂಬುದನ್ನು ಈ ದೇಶದ ಯಾರು ಬೇಕಾದರೂ ಸುಲಭವಾಗಿ ಗ್ರಹಿಸಬಹುದು.

    ಈ ದೇಶದ ಸಾಮಾಜಿಕ ನ್ಯಾಯದ ಬಗ್ಗೆಯೇ ನನಗೆ ಅನೇಕ ಗುಮಾನಿಗಳಿವೆ. ಲೋಕಾಯುಕ್ತ ಅನ್ನುವುದು ಕೂಡ ಸಂಪೂರ್ಣ ಸಾಚಾ ಇಲಾಖೆಯೇನಲ್ಲ. ಅದು ಆಯಾ ಸರ್ಕಾರದ ಕೃಪಾಪೋಷಿತ ನಾಟಕ ಶಾಲೆ. ಸಂತೋಷ್ ಹೆಗ್ಡೆಯವರು ರಾಶಿಗಟ್ಟಲೆ ಕಾನೂನು ಪುಸ್ತಕಗಳನ್ನೇ ಓದಿರಬಹುದು, ಆದರೆ ಅವರ ತಲೆ ಮಿದುಳುಗಳಲ್ಲಿ ‘ಮನು’ವಿನಂಥ ಒಬ್ಬ ಕ್ರಿಮಿಯಿದ್ದರೆ ಸಾಕಲ್ಲವೇ ಸಾಮಾಜಿಕ ನ್ಯಾಯ ಅನ್ನುವುದು ತಬ್ಬಲಿಯಾಗಲು.

    ಹುಟ್ಟಿಗೂ-ಪ್ರತಿಭೆಗೂ, ಜಾತಿಗೂ-ಪ್ರತಿಭೆಗೂ ಏನೇನೂ ಸಂಬಂಧ ಇಲ್ಲದಿರುವುದನ್ನೂ ಕಾಣುವಷ್ಟಾದರೂ ‘ಪ್ರತಿಭೆ’ ಈ ದೊಡ್ಡ ದೇಶಕ್ಕಿನ್ನು ಬಂದಿಲ್ಲ. ದಲಿತರು, ಹಿಂದುಳಿದವರು, ಹಳ್ಳಿಗರು, ಶ್ರಮಿಕರನ್ನು ವಂಚಿಸುವ ಬುದ್ಧಿಯೇ ಭಾರತದಲ್ಲಿ ಪ್ರತಿಭೆ ಎನಿಸಿಕೊಂಡಿದೆ. ಅಗ್ರಹಾರದ ಬೀದಿಗಳಿಂದ ದೇಶಕಾಯಲು ಹೋರಾಟ ಸನಾತನಿಗಳ ಅಂಕಿ ಸಂಖ್ಯೆಯ ಲೆಕ್ಕಾಚಾರದ ಅಂಶಗಳ ಬಗ್ಗೆ ಯಾರಾದರೂ ಬ್ಲಾಗ್ ನ ವೀರಾಧಿವೀರರು ಮಾಹಿತಿ ಕೊಟ್ಟರೆ ನಾನವರಿಗೆ ಋಣಿ.

    ಉತ್ತರ

  2. Kirankumari
    ಮೇ 06, 2009 @ 11:58:45

    ಶ್ರೀ. ದಿನೇಶ್ ,

    ನಿಮ್ಮ ಸಾಮಾಜಿಕ ವಿನ್ಯಾಸದ ಕುರಿತಾಗಿನ ಕಳಕಳಿ ಮತ್ತು ಬದ್ದತೆಗೆ ಧನ್ಯವಾದಗಳು. ಬಳಸುವ ಪದ ಅಥವಾ ವಾಕ್ಯಗಳು ಅಪ್ರಜ್ನ್ಯಾಪೂರ್ವಕವಾಗಿಯಾದರೂ ಸರಿಯೆ ಅದರ ಹಿ೦ದಿನ ರಾಜಕಾರಣ ಮಾತ್ರ ಒ೦ದಷ್ಟು ಸಮುದಾಯಗಳ ಅನನ್ಯತೆಯನ್ನು ಅವರ ಬದುಕಿನ ಕ್ರಮಗಳನ್ನು ಅವಹೇಳನ ಮಾಡುವ ಪರಿಯಲ್ಲಿರುತ್ತದೆ ಎ೦ಬುದಕ್ಕೆ ನೀವೇ ಕೊಟ್ಟಿರುವ ಅನೇಕ ಉದಾಹರಣೆಗಳೇ ಜ್ವಲ೦ತ ಸಾಕ್ಶಿ.

    ಬಹುಷ: ಶ್ರೀ. ಸ೦ತೋಷ ಹೆಗಡೆಯವರ ಮಾತನ್ನು ಪ್ರಸ್ತುತ ಸಮಾಜದಲ್ಲಿ ಸೌ೦ದರ್ಯ ಮತ್ತು ಸೌ೦ದರ್ಯವರ್ಧಕಗಳ ಲಾಬಿ ಹೆಸರಲ್ಲಿ ನಡೆಯುತ್ತಿರುವ ದ೦ದೆಯನ್ನು ವಿವರಿಸಿರಬಹುದೇ ಅಥವಾ ಸ್ತ್ರೀ ಪುರುಷರಿಬ್ಬರೂ ಸು೦ದರವಾಗಿರಲೇಬೇಕೆ೦ಬ ಪುರುಷಾಧಿಪತ್ಯ ಮೌಲ್ಯ ಮತ್ತು ಸರಕು-ಗ್ರಾಹಕ ಸ೦ಸ್ಕೃತಿಯ ಹಿನ್ನಲೆಯಲ್ಲಿ ಪ್ರಸ್ತಾಪಿಸಿರಲೂಬಹುದು. [ ಸ್ವಚ್ಚತೆ ಬೇರೆ..ಸೌ೦ದರ್ಯದ ಕುರಿತಾಗಿನ ಮೀಮಾ೦ಸೆ ಬೇರೆ ಎನ್ನು ವುದು ತಮಗೂ ತಿಳಿದಿರಬಹುದು.] ಆದರೆ ಮಾತ್ರ ದುಡಿಮೆ ಹಿ೦ದಿರುವ ಜನವರ್ಗಗಳ ಪರಿಸ್ಥಿತಿ ಮಾತ್ರ ಅರ್ಥವಾಗಬೇಕು ಎ೦ಬ ನಿಮ್ಮ ನಿಲುವು ಸರಿಯಾಗಿಯೇ ಇದೆ.

    ನನಗೆ ಆಶ್ಚರ್ಯವೆನ್ನಿಸಿದ್ದು..ಭಾಷೆ ಬಗ್ಗೆ ಮಾತನಾಡುವಾಗ..ಸಹಜವಾಗಿಯೋ ಅಥವಾ ಅಪ್ರಜ್ನ್ಯಾಪೂರ್ವಕವಾಗಿಯೋ.. ನೀವು ಬಳಸಿರುವ ಬಾಷೆ ಚರ್ಚೆಗೆ ಗ್ರಾಸವಾಗುತ್ತದೆ. ನಮ್ಮ ಸಮಾಜ ಶ್ರೇಣೀಕ್ರುತ ವ್ಯವಸ್ಥೆ ನಿರ್ಮಿಸಿಕೊಟ್ಟ ಹಾಗೆ ಲಿ೦ಗ ವ್ಯವಸ್ಥೆಯನ್ನೂ ಬಹಳ ಥಳುಕಿನಿ೦ದ ಅಥವಾ ಅಮೂರ್ತ ಸ್ವರೂಪದಲ್ಲಿ ನಿರೂಪಿಸುತ್ತಾ ಬ೦ದಿದ್ದು ಅದರ ಪರಿಣಾಮವಾಗಿ ತಾವು ಕೆಟ್ಟ-ಅಶುದ್ದ ಎ೦ಬ ಪರಿಕಲ್ಪನೆಯಲ್ಲಿ ಮಹಿಳೆಯರ ನ್ನು “ಸೂಳೆಗಾರಿಕೆ-ವೇಶ್ಯಾವಾಟಿಕೆ ” ಪದ ಪ್ರಯೋಗ ಮಾಡಿದ್ದೀರೀ. ಇಲ್ಲೂ ಕೂಡಾ ವ್ಯವಸ್ಥೆಯ ಬಲಿಪಶುಗಳೇ , ವ೦ಚನೆಗಾರರು, ಕೊಲೆಗಡುಕರು ,ದರೋಡೆಕೋರರು. ವೇಶೇಯರು.. ತಲೆ ಹಿಡುಕರ- ವಿಟ ಪುರುಷರು. ಎ೦ಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದರರ್ಥ ಇವೆಲ್ಲವೂ ಸರಿ ಅಥವಾ ತಪ್ಪು ಎ೦ಬ ನಿರ್ಣಯಕ್ಕೆ ನಾನು ಬರುತ್ತಿಲ್ಲ. ಬದಲಿಗೆ ಸಾಮಾಜಿಕ ಸ್ತರವಿನ್ಯಾಸದಲ್ಲಿ ಕಾಯಕವನ್ನು ಕ೦ಡ ಬಗೆಯ ಹಿ೦ದಿರುವ ದೃಷ್ಟಿಕೋನವನ್ನು ಮರುಚಿ೦ತಿಸಬೇಕೇನೋ ಎ೦ದೆನ್ನಿಸಿದೆ.

    ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಯೋಚಿಸುವ ಪ್ರತಿಯೊಬ್ಬರೂ ಇ೦ಥ ವ್ಯವಸ್ಥೆಯಲ್ಲಿ ನಲುಗುವ ಅನೇಕ ಅನನ್ಯತೆಗಳ..ಕುರಿತೂ ಕಾಳಜಿಯನ್ನುವ್ಯಕ್ತಪಡಿಸಿದರೆ ..ನಿಜವಾಗಿಯೂ ನಮ್ಮ ವೈಚಾರಿಕತೆಗೆ ನ್ಯಾಯ ಒದಗಿಸಿದ೦ತಾಗುತ್ತದೆ.

    ದೇಸೀ ಮಾತು ಮೂಲಕ ಬ್ಲಾಗ್ ತೆರೆದು ಮಾತುಕತೆ ಮೂಲಕ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದೀರಿ. ಧನ್ಯವಾದಗಳು.

    ಉತ್ತರ

  3. chandrashekar
    ಸೆಪ್ಟೆಂ 21, 2008 @ 11:44:02

    ಅವಧಿಯವರು ದೇಸೀಮಾತು ಬ್ಲಾಗ್ ಪರಿಚಯಿಸಿದ್ದು ಒಳ್ಳೆಯದಾಯಿತು. ಚರ್ಚ್‌ಗಳ ಮೇಲಿನ ದಾಳಿ ಹಿನ್ನೆಲೆಯಲ್ಲಿ ಬ್ಲಾಗ್‌ಗಳಲ್ಲಿ ಸಮರ್ಥ ಲೇಖನ ಹುಡುಕುತ್ತಿದ್ದೆ. ದಿನೇಶ್ ಅವರು ಯಾರು ಮತಾಂತರಿಗಳು? ಎಂಬ ಲೇಖನದಲ್ಲಿ ಹತ್ತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
    ದೇಶದ ಧಾರ್ಮಿಕ ಕೇಂದ್ರಗಳನ್ನು ಅಬ್ರಾಹ್ಮಣರಿಗೆ ಬಿಟ್ಟು ಕೊಡಿ ಎಂಬ ಅವರ ಸವಾಲನ್ನು ವಿಶ್ವ ಹಿಂದೂ ಪರಿಷತ್‌ನಂಥ ಹಿಂದೂ ಧರ್ಮ ರಕ್ಷಣೆಯ ಸಂಘಟನೆಗಳು ಸ್ವೀಕರಿಸಿಯಾವೆ?
    ದಿನೇಶ್‌ರವರೆ, ಸಂತೋಷ್ ಹೆಗಡೆಯವರಿಗೆ ಬರೆದ ಬಹಿರಂಗ ಪತ್ರ ಒಂದಷ್ಟು ಜಾಗೃತಿ ಮೂಡಿಸಿದೆ ಎಂದು ಭಾವಿಸಿದ್ದೇನೆ. ಧನ್ಯವಾದಗಳು.
    -ಚಂದ್ರಶೇಖರ್

    ಉತ್ತರ

  4. neelanjala
    ಸೆಪ್ಟೆಂ 20, 2008 @ 20:45:30

    “..ಹಜಾಮ, ಕೊರಮ, ….ಜಾತಿಗಳ ಹೆಸರುಗಳು ….”
    ನೀವು ಬರೆದಿದ್ದು ಓದಿ ನನಗೆ ಹಳೆಯ ಪ್ರಮಾದವೊಂದು ನೆನಪಾಯ್ತು. ನಾನು ಪೇಪರ್ ಗೆ ಕೊಡುವ ಮೇಜ್ ಒಂದರಲ್ಲಿ ಕಳ್ಳ ಕೋರಮನನ್ನು ಹಿಡಿಯಲು ದಾರಿತೋರಿಸಿ ಎಂದು ಬರೆದಿದ್ದೆ. ನನಗೆ ನಿಜವಾಗಿಯೂ ಅದೊಂದು ಜಾತಿಯ ಹೆಸರು ಎಂದು ಗೊತ್ತಿರಲಿಲ್ಲ. ನಮ್ಮ ಊರಿನಲ್ಲಿ ಹಾಗೆ ಬಯ್ಯುವುದನ್ನು ಕೇಳಿದ್ದೆ. ಪೇಪರ್ ನವರು ಸಹ ಗಮನಿಸಿರಲಿಲ್ಲ. (ಮಾಮೂಲಾಗಿ ತಪ್ಪೇನೂ ಇರುವುದಿಲ್ಲ ಎಂಬ ನಂಬಿಕೆಯಿಂದ ). ಅದು ಹಾಗೆಯೇ ಪ್ರಕಟಗೊಂಡು ನನ್ನಿಂದಾಗಿ ಮಾರನೆ ದಿನ ಪೇಪರ್ ನವರು ಕ್ಷಮೆ ಕೇಳಬೇಕಾಗಿ ಬಂತು. 😦 ನನಗೆ ವಿಷಯ ಗೊತ್ತಾಗಿದ್ದು ಇನ್ನೊಂದು ಸಲ ಮೇಜ್ ಕೊಡಕ್ಕೆ ಹೋದಾಗ, ಎರಡು ತಿಂಗಳು ಬಿಟ್ಟು. ಆಗಲೇ ಈ ತರಹ ಹೆಸರಿನ ಜಾತಿಯೊಂದರ ಪರಿಚಯ ನನಗಾಗಿದ್ದು.

    ಉತ್ತರ

  5. Vasanth Kaje
    ಸೆಪ್ಟೆಂ 20, 2008 @ 13:43:37

    ಸಂತೋಶ್ ಹೆಗ್ಡೆಯವರು ಹೇಳಿದ್ದು ತಪ್ಪಾದರೆ, ದಿನೇಶ್ ಅವರ ಈ ವಾಕ್ಯವನ್ನು ಗಮನಿಸಿ:

    “ಈ ಶುದ್ಧಿಯ ಕಾಯಕವೇನು ವಂಚನೆಯೇ? ಸೂಳೆಗಾರಿಕೆಯೇ?”

    ಸೂಳೆಗಾರಿಕೆ ಅದರಲ್ಲಿ ತೊಡಗಿರುವ ಹೆಣ್ಣುಮಕ್ಕಳಿಗೆ ಒಂದು ಅನಿವಾರ್ಯ ವೃತ್ತಿ. ಸೂಳೆಗಾರಿಕೆಗೆ ತಳ್ಳುವ ವೃತ್ತಿಯನ್ನು ಕೀಳಾಗಿ ನೋಡಬಹುದು, ಸೂಳೆಗಾರಿಕೆಯ ಗಿರಾಕಿಗಳನ್ನು ಕೀಳಾಗಿ ನೋಡಬಹುದು, ಆದರೆ ಸೂಳೆಗಾರಿಕೆಯನ್ನು ಕೀಳಾಗಿ ನೋಡುವುದು ತಪ್ಪು.

    ಪಾಪ ನಮ್ಮದೇ ಅಕ್ಕಪಕ್ಕದ ಹೆಣ್ಣುಮಕ್ಕಳು ಒಳಹೊಕ್ಕು ಹೊರಬರಲಾರದೆ ತಮ್ಮ ಮಕ್ಕಳು, ಸಂಸಾರವನ್ನು ಪೊರೆಯಲು ಮಾಡುವ ಈ ವೃತ್ತಿ, ವಂಚನೆ, ಕಳ್ಳತನ, ಮತ್ತು ದರೋಡೆಗೆ ಖಂಡಿತಾ ಸಮವಲ್ಲ. ತಾವು ಪಡೆಯುವ ದುಡ್ಡಿಗೆ ಸರಿಯಾದ ಸೇವೆಯನ್ನು ಒದಗಿಸುವ ನಿಜ ಅರ್ಥದ ಈ ವೃತ್ತಿ ದರೋಡೆ/ಕಳ್ಳತನಕ್ಕೆ ಹೇಗೆ ಸಮನಾಗಬಲ್ಲುದು?

    ಎಲ್ಲ ವೃತ್ತಿಗಳನ್ನು ಗೌರವಿಸಬೇಕೆಂದು ಪುಟಗಟ್ಟಲೆ ಬರೆಯುವ ದಿನೇಶ್ ಕುಮಾರ್ ಅವರು ಈ ವೃತ್ತಿಯನ್ನು ಏಕೆ ಪಟ್ಟಿಯಿಂದ ಹೊರಗಿಟ್ಟರೋ.

    ಉತ್ತರ

  6. dinesh kumar s.c.
    ಸೆಪ್ಟೆಂ 20, 2008 @ 11:48:52

    ಅವಧಿಯಲ್ಲಿ ನನ್ನ ಲೇಖನ ನೋಡಿ ಸಂತೋಷವಾಯಿತು. ಅವಧಿ ಬಳಗಕ್ಕೆ ಕೃತಜ್ಞತೆಗಳು.
    ಗುರು, ಸುನಾಥ್ ಹಾಗು ಸುಘೋಷ್ ಅವರ ಅಭಿಪ್ರಾಯಗಳನ್ನು ಗಮನಿಸಿದೆ. ಅವರು ಭಾವಿಸಿರುವ ರೀತಿಯಲ್ಲೇ ಸಂತೋಷ್ ಹೆಗಡೆಯವರು ಮಾತನಾಡಿದ್ದರೆ ಸಂತೋಷ. ಆದರೆ ವಿಷಯ ಅಷ್ಟು ಸರಳವಾಗಿಲ್ಲ. ಇಂಥ ಹೇಳಿಕೆಗಳು ಸಮಾಜದಲ್ಲಿ ಬಳಕೆಯಲ್ಲಿರುವ ಅರ್ಥ-ಅನರ್ಥಗಳನ್ನೇ ಪ್ರತಿಬಿಂಬಿಸುತ್ತವೆ. ತಮ್ಮ ಸಮರ್ಥನೆಗಾಗಿ ಅವರು ಯಾವುದೋ ಸಮುದಾಯದ ಕಸುಬನ್ನು ಎಳೆತರುವುದು ಸರಿಯಲ್ಲ, ಅಲ್ಲವೆ? ಅದೂ ಆ ಸಮುದಾಯ ಇಂಥ ಅವಮಾನ, ಗೇಲಿ, ಲೇವಡಿಗಳನ್ನು ಅನುಭವಿಸುತ್ತಿರುವ ಈ ಹೊತ್ತಿನಲ್ಲೇ.
    -ದಿನೇಶ್

    ಉತ್ತರ

  7. sughosh nigale
    ಸೆಪ್ಟೆಂ 19, 2008 @ 21:14:43

    ಗುರು ಹಾಗು ಸುನಾಥ್ ಹೇಳಿದ್ದು ಬಹುಷಃ ಸರಿ ಇದೆ ಎನಿಸುತ್ತದೆ. ನಾವುಗಳು ಹಲವು ಬಾರಿ ನಮ್ಮ ಮೂಗಿನ ನೇರಕ್ಕೆ ಹಾಗು ನಮ್ಮದೇ ಆದ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಯೋಚಿಸುವುದರಿಂದ ಈ ತರಹದ ತಪ್ಪು ನಿರ್ಣಯಕ್ಕೆ ಬರುವ ಸಂಭವ ಇರುತ್ತದೆ.

    ಉತ್ತರ

  8. sunaath
    ಸೆಪ್ಟೆಂ 19, 2008 @ 16:11:11

    ಲೋಕಾಯುಕ್ತರು ”Beauty parlour’ ಪದವನ್ನು ಬಳಸಿದಾಗ, ತಾವು ಮಾಡುತ್ತಿರುವ ಕೆಲಸ ಕಣ್ಣೊರೆಸುವ ಕೆಲಸ ಅಥವಾ cosmetic ಕೆಲಸ ಅಲ್ಲ ಅನ್ನೋ ಅರ್ಥದಲ್ಲಿ ಹೇಳಿದ್ದಾರಷ್ಟೇ. ಅವರನ್ನು ತಪ್ಪಾಗಿ ಅರ್ಥೈಸಬೇಡಿ.’

    ಉತ್ತರ

  9. Guru
    ಸೆಪ್ಟೆಂ 19, 2008 @ 08:40:56

    ಸರ್,

    ಒಳ್ಳೆ ಲೇಖನ

    ಆದ್ರೂ ನನಿಗೆನೊ ಅವರು ಹೇಳಿದ್ದು,

    “ನಿಜವಾಗಿ ಇರೋದನ್ನೆ ಹೇಳ್ತೆವೆ. ಬ್ಯುಟಿಪಾರ್ಲರ್ ಗಳ ತರ ಇರೋದನ್ನ ಇನ್ನಷ್ಟು ‘ಛಂದ’ಮಾಡಿ ಹೇಳೋಲ್ಲ” ಅನ್ನೊ ಅರ್ಥದಲ್ಲಿ ಅನ್ನ್ಸುತ್ತೆ.

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ