‘ಸಿರಿ’ಗೆ ಯಾಮಿನಿಯೆಡೆಗೆ ಭರ್ತಿ ಹೊಟ್ಟೆಕಿಚ್ಚು.

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

ಈವಾಗ ಕೊರಿಯರ್ ಮಾಡ್ದೆ, ನಾಳೆ ತಪ್ಪಿದ್ರೆ ನಾಡಿದ್ದು ಸಿಗುತ್ತೆ ಅಂತ ಕೃಷ್ಣ ಫೋನ್ ಮಾಡಿ ಹೇಳಿ ಮೂರು ದಿನ ಆದ್ರೂ ಪುಸ್ತಕ ಸಿಗದೆ, ಶನಿವಾರ ಮಧ್ಯಾಹ್ನ ಕಾಲೇಜಿನ ಆಫೀಸಿನಲ್ಲಿ ವಿಚಾರಿಸಿದಾಗ ಅಟೆಂಡರ್ ಯಾವುದೋ ಪುಸ್ತಕದಲ್ಲಿ ಸೈನ್ ಮಾಡಿಸಿಕೊಂಡು ಕೊರಿಯರ್‌ನ ನನ್ನ ಕೈಗಿಟ್ಟ. ಹಾಸ್ಟೆಲ್ ಅಡ್ರೆಸ್ಸಿಗೆ ಬರಬೇಕಾದ್ದು ಕಾಲೇಜಿಗೆ ಹೋದದ್ದು ಹೇಗೆಂದು ಅರ್ಥವಾಗದಿದ್ದರೂ ಕೊರಿಯರ್ ತಗೊಂಡು ಹಾಸ್ಟೆಲಿಗೆ ಬಂದೆ.

ಕೃಷ್ಣನಿಗೆ ಹಿಂಸೆ ಮಾಡಿ ಎಡೆಬಿಡದೆ ಕಾಲ್ ಮಾಡಿ ಯಾಮಿನಿ, ಕಾಡು ಹಾದಿಯ ಕತೆಗಳು ಪುಸ್ತಕಗಳನ್ನು ಕೊರಿಯರ್ ಮಾಡಿಸಿಕೊಂಡಿದ್ದೆ.
ಯಾಮಿನಿಯನ್ನು ಓದಿ ಊಫ್ ಎಂದು ನಿಟ್ಟುಸಿರಿಡುವ ಹೊತ್ತಿಗೇ ನಿಟ್ಟುಸಿರಿನ ಜೊತೆ ಜೊತೆಗೇ ಶೇಷುವನ್ನು ಭೇಟಿಯಾಗಬೇಕು, ಚಿರಾಯುವಿನ ಮಹಾಪ್ರಸ್ಥಾನ, ಅವ್ಯಕ್ತ, ಅಬೋಧ, ಮೇಘಮಲ್ಹಾರ ಕಾದಂಬರಿಗಳನ್ನು ಓದಲೇಬೇಕು ಎಂದು ತುಂಬ ತೀವ್ರವಾಗಿ ಅನ್ನಿಸಿತು.

ಹೌದು, ವಿಜಯಲಕ್ಷ್ಮಿ, ರಂಜೆ ಮರದಡಿಯಲ್ಲಿ ಹೂವು ಹೆಕ್ಕುವ ಜಾಹ್ನವಿ, ಶಿವಣ್ಣನ ಹೆಂಡತಿ ಮಾಳವಿಕಾ, ಭಾಗೀರಥಿ ಚಿಕ್ಕಮ್ಮ, ಊರ್ಮಿಳಾ ದೇಸಾಯಿ, ಸರಸ್ವತಿ, ಸುಪರ್ಣಾದಾಸ್ ಗುಪ್ತಾ, ನಳಿನಿ ಹೆಗ್ಡೆ, ನಟ ಶರತ್‌ಕುಮಾರ್, ತುಂಗಮ್ಮ, ನಾವಡರು, ಭಾಗ್ಯಲಕ್ಷ್ಮಿ, ಅನ್ನಪೂರ್ಣ, ವಿಕ್ಟರ್, ಜಾಯ್ಸ್, ರೋಹಿಣಿ, ನಿರ್ಮಲೆ, ವಾಸುದೇವ ಕಿಣಿ, ಶಾಲಿನಿ, ಸಾಂಬ, ಅತ್ತೆ, ಮಂಗಳಾ.. ಉಹುಂ ಇವರ್ಯಾರೂ ಕಾಡುವುದಿಲ್ಲ ಅಥವಾ ನನ್ನನ್ನು ಕಾಡಲಿಲ್ಲ. ಶ್ರದ್ಧಾ, ಸ್ಮಿತಾ, ಯಾಮಿನಿಯೂ ನಮ್ಮ ಮನಸ್ಸಿನಲ್ಲಿ ಉಳಿಯುವುದಿಲ್ಲ.

ಹಾಗಾದರೆ ಕಾದಂಬರಿಯನ್ನು ಯಾಕಾದರೂ ಓದಬೇಕು ಅಂತ ಕೇಳಿದರೆ, ಕಾದಂಬರಿಯ ನಾಯಕನಿಗಾಗಿ ಅನ್ನುತ್ತೇನೆ ನಾನು. ಇಲ್ಲ, ಚಿರಾಯುವಿನ ಬಗ್ಗೆ ಹೇಳ್ತಿಲ್ಲ ನಾನು. ಆದರೆ ಕಾದಂಬರಿಯ  protaganist ಚಿರಾಯುವಿನ ವಾದಗಳು, ಅವನ ಆಲೋಚನೆಗಳು, ಚಿರಾಯು ಯಾಮಿನಿ ನಡುವೆ ನಡೆಯುವ ಚರ್ಚೆಗಳೇ ಈ ಕಾದಂಬರಿಯ ನಾಯಕನಾಗಿ ವಿಜೃಂಭಿಸುತ್ತವೆ. ಎಷ್ಟು ಪುಟ್ಟ ಕಾದಂಬರಿ. ಎರಡೇ ಗಂಟೆಯಲ್ಲಿ ಓದಿ ಮುಗಿಸುತ್ತೇನೆ ಎಂಬ ನನ್ನ ಅಹಂಕಾರವನ್ನು ಕೆಡವಿದ್ದೇ ಅವು. ಆ ವಾದಗಳನ್ನು ಓದುತ್ತಲೇ ಅವನ್ನು ಸಮರ್ಥಿಸಿಯೋ ನಿರಾಕರಿಸಿಯೋ ಅಥವಾ ಎರಡೂ ಅಲ್ಲದ ಮತ್ತೊಂದು ವಾದವೋ ನಮ್ಮನ್ನು ಆವರಿಸಿಕೊಳ್ಳುತ್ತದೆ:
ಉದಾಹರಣೆಗೆ:
– ಒಂದು ಸಾಲು ಸಿಕ್ಕರೆ…. ಬರಹವೆಂದರೆ ಸಂಭೋಗದ ಹಾಗೆ. ಆ ಕ್ಷಣಕ್ಕೆ ಮದನ ಎಷ್ಟು ಕರುಣಿಸುತ್ತಾನೋ ಅಷ್ಟು. ( ಪುಟ ೧೫,  ಪ್ಯಾರಾ ೨ )
-ಲೇಖಕ ಲೆಸ್ ಇನ್‌ಫಾರ್ಮ್‌ಡ್ ಆಗಿರಬೇಕು. ಮಾಹಿತಿಗಳು ಹೆಚ್ಚಾಗುತ್ತಾ ಹೋದ ಹಾಗೆ ಕ್ರಿಯೇಟಿವಿಟಿ ಕಡಿಮೆಯಾಗುತ್ತಾ ಹೋಗುತ್ತದೆ……………… ಎಂಬ ಅಹಂಕಾರದಲ್ಲಿ ನಾನು ಬರೆಯಬೇಕು. (ಪುಟ ೨೩ ಪ್ಯಾರಾ ೨)
-ಗಂಡು ತನ್ನ ಅಹಂಕಾರವನ್ನು ಮರೆತು ಒಂದು ಹೆಣ್ಣಿನ ಜೊತೆ ಮಾತ್ರ ಬೆರೆಯಬಲ್ಲ… (ಪುಟ ೨೯ ಪ್ಯಾರಾ ೩)
ಇಂಥದ್ದು ಹಲವಾರು.

ನನ್ನನ್ನು ಚಕಿತಗೊಳಿಸಿದ ಪಾತ್ರವೆಂದರೆ ಶೇಷುವಿನದು. ಜೋಗಿಯ ಅದ್ಬುತ ಸೃಷ್ಟಿ ಅವನು. ಅವನಿಗೆ ತನ್ನದೇ ಆದ ವ್ಯಕ್ತಿತ್ವನೂ ಇಲ್ಲ, ಚಿರಾಯುವಿನ ನೆರಳಿನಂತಿರುತ್ತಾನೆ ಎನ್ನುವುದೂ ಅಸಂಬದ್ಧ. ಅವನೇ ಬೇರೆ.  ವಿಚಿತ್ರ ಚಿರಾಯುವಿನ ಪ್ರತಿಯೊಂದು ಚಲನವಲನವನ್ನೂ ಅರ್ಥ ಮಾಡಿಕೊಂಡಿರುವ ಶೇಷುವನ್ನು ಅವನು ನನ್ನ ಅರ್ಥ ಮಾಡಿಕೊಂಡಿದ್ದನೋ ಅಥವಾ ಅದು ಅವನ ಅನಿವಾರ್ಯತೆಯೋ’ ಎಂದು ಕೇಳುವ ಚಿರಾಯುವಿನ ಬುದ್ಧಿಜೀವಿ ಮನಸ್ಸು ಓದುಗನಿಗೆ ಹಿಂಸೆ ಮಾಡುತ್ತದೆ.

ಮತ್ತೊಂದು ರಿಲೀಫ್ ಎಂದರೆ ಉಕ್ಕುವ ಸೌಂದರ್ಯದ ಖನಿಯೇನೂ ಆಗಿರಲಿಲ್ಲ ಯಾಮಿನಿ’ ಎಂಬ ಸಾಲು.ನಾನು ಚಿಕ್ಕವಳಾಗಿದ್ದಾಗಿನಿಂದ ಓದಿದ ಕಾದಂಬರಿಯ ನಾಯಕಿಯರೆಲ್ಲ ಸೌಂದರ್ಯದ ಖನಿಯರೇ. ನೋಡಲು ಸುಮಾರಾಗಿದ್ದರೆ ಕಥಾನಾಯಕಿಯಾಗಲು ಸಾಧ್ಯವೇ ಇಲ್ಲವಾ ಎಂದು ಆಶ್ಚರ್ಯವಾಗುತ್ತಿತ್ತು. ಜೋಗಿಯ ನದಿಯ ನೆನಪಿನ ಹಂಗು’ ಕಾದಂಬರಿಯ ನರ್ಮದೆ ಕೂಡ ತುಂಬುಸುಂದರಿ.. ಭೈರಪ್ಪನವರು ಈ ಅಂಶ ಮುಖ್ಯವೇ ಅಲ್ಲ ಎನ್ನುವಂತೆ ಬರೆಯುತ್ತಾರಲ್ಲವಾ ಎಂದು ಈಗ ಹೊಳೆಯುತ್ತಿದೆ. ಇರಲಿ, ಯಾಮಿನಿ’ ಉಕ್ಕುವ ಸೌಂದರ್ಯದ ಖನಿಯಲ್ಲದಿದ್ದರೂ ಇಷ್ಟ ಆಗುತ್ತಾಳೆ. ತುಂಬ ಸೆಕ್ಸಿಯಾಗಿಲ್ಲದಿದ್ದರೂ ಅಪಾರನ ಮುಖಪುಟ ಇಷ್ಟವಾಗುವಂತೆ.

ಕೊನೆಯವರೆಗೂ ಚಿರಾಯುವಿನ ಫ್ಲಾಷ್‌ಬ್ಯಾಕ್‌ಗಳಲ್ಲಿ ಬರುವ, ಕಾದಂಬರಿಯ ಕೊನೆಯಲ್ಲಿ ಬಂದು ಚಿರಾಯುವನ್ನು ತಬ್ಬಿ ಮುತ್ತಿಕ್ಕುವ ಯಾಮಿನಿ, ಯಾಮಿನಿಯಂಥ ಹುಡುಗಿ ಇರಬಹುದು ಎಂದು ಕಲ್ಪಿಸಿಕೊಳ್ಳಲೂ ಅಸಾಧ್ಯ ನನಗೆ. ಅವಳು ಚಿರಾಯುವಿನ ಆಲ್ಟರ್ ಈಗೋನಾ  ಅಥನಾ ಅವನು ಸಂಧಿಸಿದ ಎಲ್ಲಾ ಹುಡುಗಿಯರಲ್ಲಿ ಅವನಿಗೆ ಇಷ್ಟವಾದ ಗುಣಗಳನ್ನು ಸೇರಿಸಿ ಸೃಷ್ಟಿಸಿದ ಹುಡುಗಿಯಾ ಎಂಬ ಅನುಮಾನ ಉಳಿಯುತ್ತೆ ನಂಗೆ.

ನದಿಯ ನನೆಪಿನ ಹಂಗಿನಲ್ಲಿ ಆಗುವಂತೆ ಯಾಮಿನಿಯಲ್ಲೂ ಜೋಗಿ, ವಾಸ್ತವವನ್ನು ಮಾಧ್ಯಮದವರು ಹಾಗೂ ಸೃಜನಶೀಲ ಬರಹಗಾರರು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ಎದುರುಬದುರಾಗಿ ತಂದು ನಿಲ್ಲಿಸುತ್ತಾರೆ. ವಾಸ್ತವ ಹಾಗೂ ಸೃಜನಶೀಲತೆಯ ನಡುವಿನ ಸಂಬಂಧವನ್ನು ಹುಡುಕುತ್ತಾ ಹೋಗುವ ಚಿರಾಯುವಿನ ಸಮಸ್ಯೆಯು ಎಲ್ಲಾ ಕಾದಂಬರಿಕಾರ, ಕವಿ, ಕಥೆಗಾರ, ಚಿತ್ರಕಾರ, ಶಿಲ್ಪಿ, ನಾಟಕಕಾರನ ಸಮಸ್ಯೆಗೆ ಹಿಡಿದ ಕನ್ನಡಿಯಂತೆ ಕಾಣುತ್ತದೆ. supermacy of Art over Life ಎಂದು ಕೀಟ್ಸ್ ಕಿವಿಯಲ್ಲಿ ಗುನುಗಿಹೋದ ಹಾಗೆ ಅನ್ನಿಸಿತು.

ಯಾವ ಒಂದೇ ಒಂದು ವಿಷಯದ ಬಗ್ಗೆಯೂ ಚಿರಾಯು ಒಂದೆರಡು ಪ್ಯಾರಾ ಮೀರಿ ಚರ್ಚಿಸುವುದಿಲ್ಲ. ಪುಟಗಟ್ಟಲೆ ವಿಚಾರ ಮಾಡಬಹುದಾದಂಥ ವಿಷಯಗಳನ್ನು ಸುಮ್ಮನೆ ನಮ್ಮ ಮುಂದೆ ಚೆಲ್ಲಿ ಹೋಗುತ್ತಾರೆ ಜೋಗಿ. ಇದು ಕಾದಂಬರಿಯ ಸಾಮರ್ಥ್ಯವೋ ಬಲಹೀನತೆಯೋ ಗೊತ್ತಾಗುತ್ತಿಲ್ಲ. ಇನ್ನೊಂಗು ಸ್ವಲ್ಪ ಹೊತ್ತು ಚರ್ಚಿಸಿದ್ದರೆ ಇವರ ಗಂಟೇನು ಹೋಗುತ್ತಿತ್ತು ಎಂದುಕೊಳ್ಳುವ ಹೊತ್ತಿಗೆ ನಿನ್ನ ಸಾಮರ್ಥ್ಯ ಆಳ ವಿಸ್ತಾರಗಳೆಷ್ಟೋ ಹಾಗೆ ಚರ್ಚೆಯನ್ನು ಬೆಳೆಸಿಕೋ ಎಂಬಂತೆ ಓಪನ್ ಎಂಡೆಡ್ ಆಗಿ ವಿಚಾರಗಳನ್ನು ಅಲ್ಲೇ ಕೈ ಬಿಟ್ಟು ಅಹಂಕಾರದಿಂದ ಎದ್ದು ಹೋದಂತೆ ಕಾಣುತ್ತಾರೆ. ಅಂಥ ಅಹಂಕಾರ ಇಷ್ಟವಾಗುತ್ತದೆ.

ಚಿರಾಯುವನ್ನು ಹುಡುಕುತ್ತಾ ಹೋಗುವ ಶ್ರದ್ಧಾಳಿಗೆ ತಾನು ಕಂಡ, ಅಂದುಕೊಂಡ ಚಿರಾಯು ಹಾಗೂ ಅವನನ್ನು ಹತ್ತಿರದಿಂದ ನೋಡಿದ ಪ್ರತಿಯೊಬ್ಬನೂ ಕಂಡ ಚಿರಾಯುವಿನ ಚಿತ್ರ ಬೇರೆಬೇರೆಯದು ಎಂದು ತಿಳಿಯುತ್ತಾ ಹೋಗುತ್ತದೆ. ಈ ಭಾಗ ನನಗೆ ಕ್ಯೂರಿಯಸ್ ಅನ್ನಿಸಿತು. ಏಕೆಂದರೆ ಪ್ರತಿಯೊಬ್ಬ ಮನುಷ್ಯನೂ ಯಾರಿಗೂ ಪೂರ್ತಿ ದಕ್ಕುವುದಿಲ್ಲ. ನಾವು ಪ್ರತಿಯೊಬ್ಬರ ಕೆಲವು ಮುಖಗಳನ್ನು ಮಾತ್ರ ನೋಡಿರುತ್ತೇವೆ ಎಂಬುದಕ್ಕೆ ಸಾಕ್ಷಿ ಇದು.
ಕೊನೆಗೆ ನನ್ನಲ್ಲಿ ಉಳಿದದ್ದು ಚಿರಾಯುವಿನ ಕಾದಂಬರಿಗಳನ್ನು ಓದಬೇಕೆಂಬ ಹಂಬಲ, ಶೇಷುವನ್ನು ನೋಡಲೇಬೇಕೆಂಬ ಆಕಾಂಕ್ಷೆ, ಯಾಮಿನಿಯೆಡೆಗೆ ಭರ್ತಿ ಹೊಟ್ಟೆಕಿಚ್ಚು.

ಮತ್ತೆ ಆ ಬ್ಲಾಗ್ ಗೆ ಜೀವ ಬಂದಿದೆ

ಮತ್ತೆ ಆ ಬ್ಲಾಗ್ ಗೆ ಜೀವ ಬಂದಿದೆ. ನಮಗೂ ಒಂದು ಸಮಾಧಾನ. ಮಂಗಳೂರಿನ ಪುಸ್ತಕ ಪ್ರೇಮಿ ನರೇಂದ್ರ ಪೈ ಅವರು ಒಂದಿಷ್ಟು ಕಿರಿಕಿರಿಯಿಂದಾಗಿ ತಮ್ಮ ‘ಓದುವ ಹವ್ಯಾಸ’ ಎಂಬ ಬ್ಲಾಗ್ ಗೆ ತಿಲಾಂಜಲಿ ಇಟ್ಟಿದ್ದರು. ಅವರ ಬರಹಗಳನ್ನು ನಿರಂತರವಾಗಿ ಓದುತ್ತಿದ್ದ ‘ಅವಧಿ’ ಎಲ್ಲೋ ಒಳ್ಳೆಯ ಬ್ಲಾಗ್ ಗಳು ಕಣ್ಣು ಮುಚ್ಚುತ್ತಿದೆಯಲ್ಲಾ ಎಂಬ ಆತಂಕಕ್ಕೆ ಒಳಗಾಯಿತು.

ಜೋಗಿ ಇತ್ತೀಚಿಗೆ ತಾನೆ ಬ್ಲಾಗ್ ಬಾಗಿಲು ಎಳೆದು ದೇಶಾಂತರ ಹೊರಟು ಹೋದರು. ಆದರೆ ನಮಗಂತೂ ಒಂದು ನಂಬಿಕೆ ಇದೆ- ‘ಬರೆಯಲು ಬಂದವನು ಬ್ಲಾಗ್ ಗೆ ಬಾರನೇ…’ ಅಂತ. ಜೋಗಿ ಮತ್ತೆ ಅಷ್ಟೇ ದಿಢೀರನೆ ಬ್ಲಾಗ್ ಬಾಗಿಲು ತೆರೆದು ಕೂಡುವ ಆಸಾಮಿಯೇ. ಹಾಗಾಗಿ ಅಂತಹ ಆತಂಕವೇನೂ ಇಲ್ಲ. ಆದರೆ ಎಲ್ಲಿಂದಲೋ ಎರಗಿ ಬರುವ ಅನಾಮಿಕ ಅಥವಾ ಮಾರುವೇಷದ ಪತ್ರಗಳಿಂದ ಬಾಗಿಲು ಮುಚ್ಚಿದ್ದು ಇದೇ ಮೊದಲೇನೋ.

ಹಾಗಾಗಿ ಅವಧಿ ನರೇಂದ್ರ ಪೈಗಳ ಮನಸ್ಥಿತಿಗೆ ಮಾತು ಕೊಟ್ಟಿತ್ತು. ನಮ್ಮ ಓದುಗರನೇಕರು ಪೈ ಗಳಿಗೆ ಫೋನ್ ಮಾಡಿ, ಮೇಲ್ ಮಾಡಿ ಸಮಾಧಾನ ಹೇಳಿದ್ದಾರೆ. ‘ಕಡಲ ತೀರ’ದ ಸಂದೀಪ್  ಕಾಮತ್ ಅವರಂತೂ ಓದುವ ಹವ್ಯಾಸ ಕ್ಕೆ ಎರಡನೇ ರಂಗಪ್ರವೇಶ ಒದಗಿಸಿದ್ದಾರೆ.

ಇಲ್ಲಿ ನರೇಂದ್ರ ಪೈಗಳ ಪತ್ರ ಪ್ರಕಟಿಸುತ್ತಿದ್ದೇವೆ. ಅನಾಮಿಕ ಪತ್ರ ಯಾವ ಬ್ಲಾಗಿಗರಿಗೂ ಹೊಸದಲ್ಲ. ಅದರಲ್ಲೂ ಟೀನಾ ಅವರನ್ನು ಕೇಳಿ ನೋಡಿ. ಒಂದು ಪಟ್ಟಿಯನ್ನೇ ಮುಂದಿಡುತ್ತಾರೆ. ಹಾಗಾಗಿ ನಾವು ಮನನೋಯಿಸಿಕೊಳ್ಳಬೇಕಾದದ್ಧೇನೂ ಇಲ್ಲ ಎನ್ನುತ್ತಾ ಈ ಪ್ರಕರಣಕ್ಕೆ ‘ಜಯಮಂಗಲಂ ನಿತ್ಯ ಶುಭ ಮಂಗಳಂ’
I shall inform you that my deleted blog is restored back by blogger team. All the credit shall go to Mr Sandeep Kamath who took lot of trouble to get this done. This has become possible because of Avadhi (odubazar) without which I would not have thought much about my deleted blog.

Those who emailed me and called me to show their concern about the issue were all informed about the end of blog through odubazar.

Somewhere I do feel committed to the books and the authors whose books have been reviewed by me in this blog.

Thank you and your readers for all the support and wishes.
Regards,
Narendra

ತೇಜಸ್ವಿ ಎಂಬ ಕಾಡು ಹಕ್ಕಿ

ಸಂಪಾದಕರು ಒಳಗಿದ್ದಾರೆ

ಸಂಪಾದಕರು ಒಳಗಿದ್ದಾರೆ ಎಂಬ ಬೋರ್ಡ್ ನೋಡಿ ನೀವೇನಾದರೂ ಬಾಗಿಲು ಬಡಿದರೆ ಈ ಬರಹ ಸಿಗುತ್ತದೆ- “ಏನ ಬೇಡಲಿ ಹರಿಯೆ ನಿನ್ನ ಬಳಿಗೆ ಬಂದು” ಎಂದು ಹಾಡಿದರು ಹರಿದಾಸರು. ತನಗಿಂತಲೂ ಭಗವಂತನೇ ಹೆಚ್ಚು ಕಷ್ಟದಲ್ಲಿದ್ದಾನೆ ಎನ್ನಿಸಿದ ಆ ಗಳಿಗೆ ಅಗಾಧ ಶಕ್ತಿಯುಳ್ಳದ್ದು. ಅದೊಂದು ಮಿಂಚು. ನಮಗೆಲ್ಲ ಆ ಮಿಂಚು ಬೇಕು. ಅದನ್ನು ಹಿಡಿವ ಹಾದಿಯಲ್ಲಿ ಅರೆ, ನಾವೆಷ್ಟು ಜನ!

ಬಹುಷಃ ಇದೊಂದು ಉದಾಹರಣೆ ಸಾಕು ‘ಎನಿಗ್ಮಾ’ ಎಷ್ಟು ಜೀವಂತವಾಗಿದೆ ಎಂದು ಸಾರಲು. ಎನಿಗ್ಮಾ ಸಧ್ಯಕ್ಕೆ ಅನಾನಿಮಸ್. ಆದರೆ ಬ್ಲಾಗ್ ಮಂಡಲದಲ್ಲಿ ನಿರಂತರ ಸುತ್ತುವವರಿಗೆ ಇದು ಯಾರು ಎಂಬುದರ ಗುಟ್ಟನ್ನು ಬರಹಗಳು ಈಗಾಗಲೇ ಬಿತ್ತುಕೊತ್ತಿವೆ. ಕನ್ನಡದ ಬ್ಲಾಗ್ ಗಳ ಸಂಖ್ಯೆಯನ್ನು ಇತ್ತೀಚಿಗೆ ಶ್ರೀದೇವಿ ಲೆಕ್ಕ ಹಾಕುತ್ತಾ ಕುಳಿತಿದ್ದರು ಅವರ ಪಟ್ಟಿ ೪೫೦ ಕೊ ದಾಟಿತ್ತು. ಕನ್ನಡ ಬ್ಲಾಗ್ ಮಂಡಲ ದಿನೇ ದಿನೇ ಲವಲವಿಕೆ ಪಡೆದುಕೊಳ್ಳುತ್ತಿದೆ. ಈ ಸಾಲಿಗೆ ಹೊಸ ಸೇರ್ಪಡೆ ಈ ‘ಎನಿಗ್ಮಾ’. ಎನಿಗ್ಮಾ ಓದಿ ಎನರ್ಜಿ ಪಡೆಯಿರಿ…

%d bloggers like this: