ಗೆರೆ ದಾಟುವುದು ಅಹಾ ಎಷ್ಟು ಚೆನ್ನ…

ಅಕ್ಷತಾ ಕೆ

ದಣಪೆಯಾಚೆ…

 ಆ ಕಥೆಯನ್ನು ಬರೆದವರಾರು ಎಂಬುದು ನೆನಪಿಲ್ಲ. ಬಹಳ ಹಿಂದೆ ಯಾವುದೋ ಪತ್ರಿಕೆಯಲ್ಲಿ ಓದಿದ ಆ ಕಥೆ ಸ್ವಲ್ಪ ಮೆಲೋಡ್ರಾಮ್ಯಾಟಿಕ್ ಎನಿಸಿದರೂ ನಿಜದ ಸತ್ವದಿಂದಲೇ ನನ್ನ ನೆನಪಿನಲ್ಲಿ ಉಳಿದಿದೆ.

 

ವಿಧವೆಯೊಬ್ಬಳನ್ನು ಮದುವೆಯಾಗಿರುವ ಗಂಡಸು ಅವಳನ್ನು ಖುಷಿಯಾಗಿಡುವಲ್ಲಿ ಸೋತಿದ್ದಾನೆ. ಹೆಂಡತಿಯನ್ನು ಬಹಳ ಪ್ರೀತಿಸುವ ಆತ ಅವಳು ಸುಖವಾಗಿರಬೇಕೆಂದು ಬಯಸುವವನು. ಆದರೆ ಅವಳ ಶೋಕ ಕರಗುವುದಿಲ್ಲ. ಅದನ್ನು ಕರಗಿಸುವ ಮಾರ್ಗವು ತೋಚದೆ ಆತ ಕಂಗಾಲು. ಹೆಂಡತಿಗೂ ಆತನ ಪ್ರೀತಿ ತಿಳಿದಿದೆ. ತನ್ನನ್ನು ನೆಮ್ಮದಿಯಾಗಿಡಲು ಆತ ಮಾಡುತ್ತಿರುವ ಪ್ರಯತ್ನಗಳೂ… ಆದರೆ ಅವಳು ತನ್ನ ಸತ್ತ ಗಂಡನನ್ನು ಮರೆಯಲಾರಳು, ಅವನನ್ನು ಅಷ್ಟು ಪ್ರೀತಿಸುತಿದ್ದ ತಾನು ಅವನು ಸತ್ತ ಆರೇ ತಿಂಗಳಿಗೆ ಹೇಗೆ ಮರು ಮದುವೆಯಾದೆ ಎಂಬ ಪಾಪಪ್ರಜ್ಞೆ ಮತ್ತು ಸತ್ತ ತನ್ನ ಗಂಡನೇ ಈಗಲೂ ಮನಸನ್ನು ತುಂಬಿಕೊಂಡಿರುವಾಗ ಇವನನ್ನು ಹೇಗೆ ಪ್ರೀತಿಸಲಿ ಎಂಬ ನಿರಂತರ ಚಡಪಡಿಕೆಯಲ್ಲಿಯು ಇರುವವಳು.

ಆಗ ಗಂಡ ಅವಳ ನೆಮ್ಮದಿಯ ದಾರಿಯೊಂದನ್ನು ಹುಡುಕುತ್ತಾನೆ ಸತ್ತ ಅವಳ ಗಂಡನ ದೊಡ್ಡದೊಂದು ಫೋಟೋಗೆ ಕಟ್ಟು ಹಾಕಿಸಿ ತಂದು ಅವಳಿಗೆ ಕೊಡುತ್ತಾನೆ. ಗಂಡನ ಈ ಕ್ರಿಯೆಯಲ್ಲಿ ಸಿಟ್ಟು, ವ್ಯಂಗ್ಯ, ಅಪಹಾಸ್ಯ ಇರದೇ ಉದಾರತೆ ತುಂಬಿರುತ್ತದೆ. ಆ ಮೂಲಕ ಅವಳಿಗೆ ತನ್ನ ಮೊದಲ ಗಂಡನನ್ನು ನೆನಪಿನ ಭಿತ್ತಿಯಲ್ಲಿ ಸದಾ ಇರಿಸಿಕೊಂಡೆ ತನ್ನನ್ನೂ ಪ್ರೀತಿಸು ಎಂಬ ಸಂದೇಶ ಮುಟ್ಟಿಸಿರುತ್ತಾನೆ. ಅವಳ ಪಾಪಪ್ರಜ್ಞೆ ನಿವಾರಣೆಗೊಂಡು ಬದುಕಿನಲ್ಲಿ ಕಳೆದುಹೋಗಿದ್ದ ಉತ್ಸಾಹ ಮರಳುತ್ತದೆ.

 

ಅವಳು ಪ್ರೀತಿಸಿ ಮದುವೆಯಾದವಳು. ಅವಳು ಪ್ರೀತಿಸಿದ ಹುಡುಗ ಸಸ್ಯಾಹಾರಿ. ಶೂದ್ರರ ಮನೆಯ ಹೆಣ್ಣಾದ ಆಕೆಗೆ ಮಾಂಸದಡುಗೆ ಜೀವಕೋಶದಲ್ಲಷ್ಟೆ ಅಲ್ಲ ಭಾವಕೋಶದಲ್ಲೂ ಬೆರೆತು ಹೋಗಿದೆ. ಮಾಂಸದೂಟ ಎಂದರೆ ಅವಳಿಗೆ ಅವಳೂರಿನ ಮಾರಮ್ಮನ ಜಾತ್ರೆ ನೆನಪಾಗುವುದು. ಆದಿನ ಇಡೀ ಊರನ್ನ ಆವರಿಸುತಿದ್ದ ಅಲ್ಲಾ ಬಳ್ಳೊಳ್ಳಿಯ ಮಸಾಲೆಯಲ್ಲಿ ಕುದಿಯುತಿದ್ದ ಮಾಂಸದ ಘಮ, ಹಳ್ಳದಲ್ಲಿ ಏಡಿ ಹಿಡಿದು ತಟಕ್ಕಂತ ಅದರ ವಿಷದ ಕೊಂಡಿ ಮುರಿದು ತಳಲೆ ತುಂಬಾ ತುಂಬಿ ತರುತ್ತಿದ್ದ ಚಿಕ್ಕಮ್ಮ, ರಾತ್ರಿ ಇಡೀ ಕೆರೆಗೆ ಬಲೆ ಹಾಕಿ ಬೆಳಗಿನ ಜಾವಕ್ಕೆ ರಾಶಿ ಮೀನಿನೊಂದಿಗೆ ವಿಜಯ ಧುಂದುಬಿ ಮೊಳಗಿಸುತ್ತಾ ಬರುತಿದ್ದ ಅಣ್ಣ, ಮಾಂಸದಡುಗೆ ಬೇಯುವಾಗ ಅಡಿಗೆ ಮನೆಯ ಒಲೆಯ ಬಳಿಯೇ ಕೂತು ಅಮ್ಮನಿಗೆ ಅಸ್ಟು ಕೊತ್ತುಂಬರಿ ಬೇಕು ಮಾರಾಯ್ತಿ, ಇನ್ನು ಚೂರು ಮಸಾಲೆ ಹಾಕು, ಬೆಂದಿದ್ದು ಸಾಕು ಅನಿಸತ್ತೆ ಅಂತೆಲ್ಲ ಹದ ಹೇಳುವ ಅಪ್ಪ, ಅತ್ತೆಗೆ ಒಂಚೂರು ಸಾರು ಕೊಟ್ಟು ಬರ್ರೋ ಎಂದು ದೊಡ್ಡಪ್ಪನ ಮನೆಗೆ ಕ್ಯಾರಿಯರ್ ಕಳಿಸುವ ಅಮ್ಮ… ಹೀಗೆ . ಇದೆಲ್ಲದರ ಜೊತೆಗೆ ಮೂಗಿಗೆ ಬಡಿಯುವ ಘಮ, ನಾಲಿಗೆಗೆ ಬೇಕೆನಿಸುವಷ್ಟು ರುಚಿ, ಎಲ್ಲ ಒಟ್ಟಿಗೆ ಕೂತು ಹಬ್ಬದೂಟ ಉಂಡ ತೃಪ್ತಿ.

 

ಈಗ ಅವರಿಬ್ಬರೇ ಮನೆಯಲ್ಲಿರುವವರಾದ್ದರಿಂದ ಅವಳನ್ನು ಯಾರು ಇಂಥ ಅಡಿಗೆಯೇ ಮಾಡಬೇಕು ಎಂದು ಒತ್ತಾಯಿಸಿದವರಿಲ್ಲವಾದರೂ ಅವಳೇ ಅವನಿಗೆ ಮುಜುಗರವಾಗಬಹುದೆಂದು ಮಾಂಸದಡುಗೆ ಮಾಡುವ ಸಾಧ್ಯತೆಯನ್ನು ಕೈ ಬಿಟ್ಟಿದ್ದಾಳೆ. ಆದರೆ ತರಕಾರಿ ತರಲು ಹೋದಾಗೆಲ್ಲ ಪಕ್ಕದ ಚಿಕ್ಕನ್ ಸ್ಟಾಲ್ ಬೇಡವೆಂದರೂ ಕಣ್ಣಿಗೆ ಬೀಳುವುದು, ಬಂಗಡೆ, ಬಂಗಡೆ ಎಂದು ಮೀನಿನವನು ಕೂಗಿಕೊಂಡು ಹೋಗುವಾಗ ಮೀನು ವ್ಯಾಪಾರಿಯ ಸೈಕಲ್ ಹಾನರ್ಿನ ಶಬ್ದಕ್ಕೆ ಕಾಯುತಿದ್ದು, ಅವನು ಬಂದೊಡನೇ ಪಾತ್ರೆ ಹಿಡಿದು ಓಡುತಿದ್ದ ಅಮ್ಮಮ್ಮ ನೆನಪಾಗುವಳು. ಒಟ್ಟು ಇವಳನ್ನು ಯಾರೂ ಮಾಂಸದಡುಗೆ ಮಾಡಬೇಡ ಎಂದು ನಿರ್ಬಂಧಿಸಿರದಿದ್ದರೂ ಇವಳೇ ಅದನ್ನು ತನ್ನ ಮೇಲೆ ಹೇರಿಕೊಂಡು ಪೂತರ್ಿ ಬದ್ದಳಾಗಿರಲು ಆಗದೇ ಒದ್ದಾಡುವಳು.

 

ಒಮ್ಮೆ ಮಾತ್ರ ಪೇಟೆಗೆ ಹೋದವಳಿಗೆ ಚಿಕ್ಕನ್ ಸ್ಟಾಲ್ನ್ನು ನೋಡಿದ್ದೆ ತಡೆಯಲಾಗಲೇ ಇಲ್ಲ ಒಳನುಗ್ಗಿ ಒಂದು ಕೆ.ಜಿ ಎಂದು ಆರ್ಡರ್ ಮಾಡಿಯೇ ಬಿಟ್ಟಳು. ಇದೇ ಮೊದಲು ಅವಳು ಮಾಂಸ ಮಾರಾಟ ಸ್ಥಳಕ್ಕೆ ಕಾಲಿಟ್ಟು ಖರೀದಿ ಮಾಡುತ್ತಿರುವುದು. ಅವಳಿಗೆ ಒಂದು ಕ್ಷಣ ಎಲ್ಲ ತನ್ನನ್ನೆ ನೋಡುತಿದ್ದಾರೇನೂ ಎಂಬ ಅನುಮಾನ ಬಂದು ಸಂಕೋಚದಿಂದ ತಲೆ ಎತ್ತಿ ನೋಡಿದರೆ ಅಂಗಡಿಯಲ್ಲಿದ್ದ ನಾಲ್ಕೈದು ಗಿರಾಕಿಗಳು ತಮ್ಮದೇ ಲೋಕದಲ್ಲಿದ್ದು, ಒಳ್ಳೆಯ ಮಾಂಸ ಕೊಡುತಿದ್ದಾನ, ತೂಕದಲ್ಲಿ ಏನೂ ಮೋಸ ಮಾಡ್ತಿಲ್ಲ ತಾನೇ ಎಂಬುದರ ಕಡೆಗೆ ಅವರೆಲ್ಲ ಗಮನ ಕೇಂದ್ರಿಕರಿಸಿದಂತಿತ್ತು. ಮನೆಗೆ ಬಂದವಳೆ ಹೊಸ ಉತ್ಸಾಹದಿಂದ ಸಾರು ಮಾಡಿ ಗೆಳತಿಯೊಬ್ಬಳಿಗೆ ಊಟಕ್ಕೆ ಕರೆದಳು. ನಿನ್ನ ಗಂಡ ಏನೂ ಹೇಳಲ್ವೇನೆ ಎಂದು ಗೆಳತಿ ಮತ್ತೆ ಮತ್ತೆ ಕೇಳಿದಾಗ ಕಿರಿಕಿರಿಯಾಗಿ ಅವನೇ ತಂದುಕೊಟ್ಟಿದ್ದು ಎಂಬ ಸುಳ್ಳನ್ನೆ ಸತ್ಯ ಮಾಡಿ ಉಲಿದಳು. ಗೆಳತಿ ಗಂಡನ ಔದಾರ್ಯ ಹೊಗಳುತಿದ್ದರೆ ಇವಳಿಗೆ ಒಳಗೆಲ್ಲೋ ತುಸು ಕಳವಳ.

 

ಸಂಜೆ ಗಂಡ ಬಂದವನೆ ಅಡುಗೆ ಮನೆಯಲ್ಲಿ ಏನೋ ಸ್ಪೆಷಲ್ ತಯಾರಾದ ಹಾಗಿದೆ ಎನ್ನುವನು ಅವನದು ಕಳ್ಳಬೆಕ್ಕಿನ ಮೂಗು. ಹೂಂ ಕೋಳಿ ತಂದು ಸಾರು ಮಾಡಿದೆ. `ಓಹೋ ಹೌದಾ ಸರಿ ಸರಿ’. ಅವನ ಮಾತಲ್ಲಿ ಅವಳಿಗಿಷ್ಟವಾದ ಮತ್ತು ಅವನೆಂದು ಮುಟ್ಟದ ಹಾಗಲಕಾಯಿ ಪಲ್ಯ ಮಾಡಿದಾಗ ಯಾವ ರೀತಿಯ ಪ್ರತಿಕ್ರಿಯೆ ಇರುತಿತ್ತೋ ಅಷ್ಟೆ ಸಹಜವಾಗಿತ್ತು.

 

ಆ ಮನೆಯಲ್ಲಿ ಇದ್ದವರು ಗಂಡ, ಹೆಂಡತಿ ಇಬ್ಬರು ಮಕ್ಕಳು. ಗಂಡ ಅಡಿಕೆ ವ್ಯಾಪಾರಿ. ವಂಚನೆ, ಮೋಸ ಮಾಡದಿದ್ದರೂ ಇಷ್ಟು ಲಾಭ ಬರಲೇಬೇಕೆಂದು ದುಡಿಯುವವ. ಅವನಿಗೆ ಮನರಂಜನೆ ಎಂದರೆ ಗೆಳೆಯರೊಡನೇ ಸಂಜೆ ಒಂದು ಗಂಟೆ ಟೆನ್ನಿಸ್ ಆಡುವುದು ಮತ್ತು ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡೋದು ಇಷ್ಟೆ. ಮತ್ತುಳಿದ ಸಮಯವೆಲ್ಲ ಆತನ ವ್ಯಾಪಾರಿ ತಲೆ ಲಾಭದ ಲೆಕ್ಕಾಚಾರಗಳನ್ನು ಹಾಕುತ್ತಲೇ ಇರುವುದು. ಅವನ ಹೆಂಡತಿಗೆ ನಾಟಕ ಎಂದರೆ ಪ್ರೀತಿ, ಸಂಗೀತ ಎಂದರೆ ಆರಾಧನೆ ಆದರೆ ಇವನಿಗೆ ಇಷ್ಟವಿಲ್ಲ.

 

ಅದನ್ನು ಅರಿತಿರುವ ಅವಳು ಯಾವುದಕ್ಕೂ ಇವನಿಗೆ ಒತ್ತಾಯ ಮಾಡುವವಳಲ್ಲ. ಸಂಗೀತ ಕಲಿಯುತ್ತಾಳೆ, ನಾಟಕದಲ್ಲಿ ಅಭಿನಯಿಸುತ್ತಾಳೆ ಯಾವುದಕ್ಕೂ ಅವಳಿಗೆ ಇವನ ಒಪ್ಪಿಗೆ ಬೇಕಾಗುವುದಿಲ್ಲ. ಅವರಿಬ್ಬರು ಆಯ್ದು ಕೊಂಡ ದಾರಿಗಳು ಭಿನ್ನವಾಗಿದ್ದವು. ಆದರೆ ಅವರಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯವು ಇರಲಿಲ್ಲ. ಆದರೆ ಹಾಗಂತ ಪರಸ್ಪರ ಪ್ರೋತ್ಸಾಹ ನೀಡುವುದು, ಬೆನ್ನು ತಟ್ಟುವುದೇನು ಮಾಡುತ್ತಿರಲಿಲ್ಲ. ಒಂದು ಬಗೆಯ ನಿಲರ್ಿಪ್ತತೆಯನ್ನು ಕಾದುಕೊಂಡಿದ್ದರು. ಹಾಗೆಯೇ ಬದುಕಿದರು ಕೂಡಾ.

 

ಈಗ ಅಜ್ಜ-ಅಜ್ಜಿಯಾಗಿರುವ ಇವರನ್ನು ನಾನು ಮೊನ್ನೆ ಭೇಟಿ ಮಾಡಿದಾಗ ಮುದುಕರು ಹೇಳುತಿದ್ದರು ಬೈಪಾಸ್ ಆಯಿತು, ಅವರು(ಹೆಂಡತಿ) ತುಂಬಾ ಕೇರ್ ತಗೊಂಡ್ರು. ಬೈಪಾಸ್ ಆದ ನನ್ನ ಮೂರ್ನಾಲ್ಕು ಗೆಳೆಯರು ಆ ಹಂತದಲ್ಲಿ ಹೋಗಿಯೇ ಬಿಟ್ಟರು. ನಾನು ಈಗ ಅಂತ ಸಮಸ್ಯೆ ಇಲ್ಲದೆ ಬದುಕಿದ್ದೇನೆ ಅಂದ್ರೆ ಅದಕ್ಕೆ ಅವರೇ ಕಾರಣ…

 

ಸಣ್ಣ ಪುಟ್ಟ ಗೆರೆಗಳನ್ನು ನಾವೇ ಕೊರೆದು ಅದನ್ನು ನಾವೇ ದಾಟಿಕೊಂಡು ಹೋಗುವ ಸಂಭ್ರಮ… ಅಹಾ ಎಷ್ಟು ಚೆನ್ನ?

ಮಹಮದ್ ಮ್ಯಾಜಿಕ್

%d bloggers like this: