ಯು ಆರ್ ಅನಂತಮೂರ್ತಿ ಅವರ ಸಮಕಾಲೀನ ಚಿಂತನೆಗಳ ಪ್ರಖರತೆ ಗೊತ್ತಾಗಬೇಕಾದರೆ ಅವರ ಬ್ಲಾಗ್- ‘ಋಜುವಾತು’ಗೆ ಭೇಟಿ ಕೊಡಬೇಕು.
ಅಭಿನವದ ರವಿಕುಮಾರ್ ಅನಂತಮೂರ್ತಿ ಅವರಿಂದ ಹೆಕ್ಕಿ ತೆಗೆಸಿದ ಮಹಾರಾಜ ಕಾಲೇಜಿನ ನೆನಪುಗಳು ಇಲ್ಲಿವೆ-
ನನ್ನ ತಂದೆಯವರು ಮೈಸೂರಿಗೆ ನನ್ನನ್ನು ಕರೆದುಕೊಂಡು ಬಂದರು. ಹಾಸ್ಟೆಲ್ನಲ್ಲಿ ನನ್ನನ್ನು ಓದಿಸುವುದು ಅವರಿಗೆ ಸಾಧ್ಯವಿರಲಿಲ್ಲವಾದ್ದರಿಂದ ಮಹಾರಾಜಾ ಕಾಲೇಜಿಗೆ ಹತ್ತಿರದಲ್ಲೇ ಇದ್ದ ಒಂದು ಮನೆಯಲ್ಲಿ ಸ್ವತಃ ಅಡುಗೆ ಮಾಡಿಕೊಂಡು ಓದುವ ಏರ್ಪಾಡನ್ನು ಅವರೇ ಓಡಾಡಿ ಮಾಡಿದರು. ನನಗಾಗ ಸಿಕ್ಕ ರೂಮು ಯಾರ ಮನೆಯದು ಎಂದು ನೆನೆದರೆ ಈಗ ಆಶ್ಚರ್ಯವಾಗುತ್ತದೆ. ನಾನು ಓದಿದ ಶರಶ್ಚಂದ್ರರ ಎಲ್ಲ ಕಾದಂಬರಿಗಳನ್ನು ಅನುವಾದ ಮಾಡಿದ ಹಿರಿಯರೊಬ್ಬರ ಮನೆ ಅದು. (ನನಗೀಗ ಥಟ್ಟನೆ ಅವರ ಹೆಸರು ನೆನಪಾಗುತ್ತಿಲ್ಲ) ಇಂಟರ್ ಮೀಡಿಯೆಟ್ನಲ್ಲಿ ನಾನು ಫೇಲಾದ ವರ್ಷವೇ ಇಂಗ್ಲಿಷ್ನಲ್ಲಿ ಫಸ್ಟ್ ಕ್ಲಾಸ್ ಅಂಕಗಳನ್ನು ಪಡೆದಿದ್ದೆ. ಆದ್ದರಿಂದ ಇಂಗ್ಲಿಷ್ ಆನರ್ಸ್ನಲ್ಲಿ ಸೀಟು ಸಿಗುವುದು ಕಷ್ಟವಲ್ಲದಿದ್ದರೂ ನನ್ನ ಸಮಾಜವಾದೀ ಸಂಬಂಧದಿಂದಾಗಿ ಸ್ನೇಹಿತರಾಗಿದ್ದ ಡಿ.ಆರ್.ಕೃಷ್ಣಮೂರ್ತಿ ಎಂಬ ಧೀರೋದಾತ್ತ ಕಮ್ಯುನಿಸ್ಟ್ ಕಾರ್ಯಕರ್ತರ ತಮ್ಮ ರಾಜಗೋಪಾಲ್ ಎನ್ನುವವರು ನನ್ನನ್ನು ಪ್ರೊ.ಭರತ್ರಾಜ್ ಸಿಂಗ್ ಎಂಬುವರ ಬಳಿ ಕರೆದುಕೊಂಡು ಹೋದರು. (ಡಿ.ಆರ್. ಕೃಷ್ಣಮೂರ್ತಿಯವರು ನಡೆಸುತ್ತಿದ್ದ ಅತ್ಯಂತ ಅಪರೂಪದ ಪುಸ್ತಕಗಳು ಸಿಗುತ್ತಿದ್ದ `ಪೀಪಲ್ಸ್ ಬುಕ್ ಹೌಸ್’ ನಮಗೆ ಆ ದಿನಗಳಲ್ಲಿ ಸಂಜೆಯ ಹರಟೆಯ ತಾಣ) ಭರತ್ರಾಜ್ ಸಿಂಗರು ಬಹಳ ವಿಶ್ವಾಸದಿಂದ ನನ್ನನ್ನು ಕುಳಿತುಕೊಳ್ಳುವಂತೆ ಹೇಳಿ ತಮ್ಮದೊಂದು ಪುಸ್ತಕದ ಲಿಸ್ಟ್ ತೆಗೆದು `ಇವುಗಳನ್ನು ಓದಿದ್ದೀಯಾ?’ ಎಂದು ಕೇಳಿದರು. ಆ ಎಲ್ಲ ಪುಸ್ತಕಗಳೂ ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ಮುಖ್ಯವಾಗಿದ್ದವು.
ನನ್ನ ತಂದೆಯವರ ಆಸ್ಥೆಯಿಂದಾಗಿ ನಾನು ಗೋಲ್ಡ್ ಸ್ಮಿತ್ನ `ರಿಕಾರ್ ಆಫ್ ದಿ ವೇಕ್ ಫೀಲ್ಡ್’ ಕಾದಂಬರಿಯನ್ನು ಮಾತ್ರ ಓದಿದ್ದೆ. ಹಾಗೆಯೇ ಅವನ `ಸಿಟಿಜನ್ ಆಫ್ ದಿ ವರ್ಲ್ಡ್’ ಪುಸ್ತಕದ ಕೆಲವು ಪ್ರಬಂಧಗಳನ್ನೂ ಓದಿದ್ದೆ. ಪ್ರೊ.ಸಿಂಗರ ಲಿಸ್ಟ್ನಲ್ಲಿದ್ದ ಉಳಿದ ಯಾವ ಪುಸ್ತಕವನ್ನೂ ಓದಿರಲಿಲ್ಲ.
ಶಾಲೆಗೆ ಹೋಗದೇ ಸ್ವತಃ ಓದುವುದನ್ನು ಕಲಿತ ನನ್ನ ತಂದೆ ವಾಲ್ಟರ್ ಸ್ಕಾಟ್ನ `Ivan hoe’ ಎನ್ನುವ ಪುಸ್ತಕವನ್ನು ಓದಿ ಕೆಲವು ದಿನ ಮಂಕಾಗಿಬಿಟ್ಟಿದ್ದರಂತೆ. ಅವರ ತಲೆಯ ಮೇಲಿನಿಂದ ನೀರು ತುಂಬಿದ ಕೊಡವನ್ನು ಸುರಿದು ಚಿಕಿತ್ಸೆ ಮಾಡಿದ್ದನ್ನು ನಮ್ಮ ತಾಯಿ ಹೇಳುತ್ತಿದ್ದರು.
ಗಣಿತ ಶಾಸ್ತ್ರವನ್ನು ನಾನು ಓದಬೇಕೆಂದು ಆಸೆಪಟ್ಟಿದ್ದ ನನ್ನ ತಂದೆ ನನ್ನ ಸಮಾಜವಾದಿ ಆಂದೋಲನ ಮತ್ತು ಸಾಹಿತ್ಯದ ಹುಚ್ಚನ್ನು ಅರಿತುಕೊಂಡು ಹೇಳಿದ್ದರು: `ನೀನು ಏನು ಬೇಕಾದರೂ ಓದು, ಆದರೆ ಆ ವಾಲ್ಟರ್ ಸ್ಕಾಟ್ ನ `Ivan hoe’ ಮಾತ್ರ ಓದಕೂಡದು’ ನನ್ನ ತಂದೆಯ ಅಪ್ಪಣೆಯಂತೆ ಈ ಹೊತ್ತಿನವರೆಗೂ ಅದನ್ನು ಓದಿಲ್ಲ. ಪ್ರೊ.ಸಿಂಗರಿಗೆ ನಾನು ಹೇಳಿದೆ: `ನಾನು ಏನೇನು ಓದಿದ್ದೇನೆ ಎಂಬುದನ್ನು ಹೇಳಬಹುದೇ ಸರ್’. ಕೇಂಬ್ರಿಡ್ಜ್ನಲ್ಲಿ ಓದಿ ಬಂದಿದ್ದ ಸ್ನೇಹಮಯಿಯಾದ ಈ ಯುವ ಪ್ರಾಧ್ಯಾಪಕರು `ಹೇಳಿ’ ಎಂದರು. ನಾನು ಹೇಳತೊಡಗಿದೆ. ಗಾರ್ಕಿಯ ಕಥೆಗಳು, ಅವನ `ಮದರ್’, ಟಾಲ್ ಸ್ಟಾಯ್ನ `ರಿಸಲಕ್ಷನ್’, ಗಾಂಧಿಯ ಆತ್ಮಕತೆ, ನೆಹರೂರ `ಡಿಸ್ಕವರಿ ಆಫ್ ಇಂಡಿಯಾ’, ಆ ದಿನಗಳಲ್ಲಿ ಗಾಂಧಿಗೆ ಪ್ರಿಯವಾಗಿದ್ದ `ಲೈಟ್ ಆಫ್ ಇಂಡಿಯಾ’, ವಿವೇಕಾನಂದರ ಭಾಷಣಗಳು, ಜಯಪ್ರಕಾಶರ `ಮೈ ಸೋಷಲಿಸಮ್’, ಈ ಲಿಸ್ಟ್ನ ಹಲವು ಪುಸ್ತಕಗಳು ಭರತರಾಜಸಿಂಗರ ಹುಬ್ಬೇರುವಂತೆ ಮಾಡಿದವು. ಪ್ರಾಧ್ಯಾಪಕರೊಬ್ಬರ ಲಿಸ್ಟ್ನಲ್ಲಿ ಇಲ್ಲದೇ ಇರುವುದನ್ನು ನಾನು ಓದಿದ್ದೆನೆಂಬುದೇ ಅವರ ಮೆಚ್ಚುಗೆಗೆ ಕಾರಣವಾದಂತೆ ತೋರಿತು.
ಆಗ ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಡಾ.ಗೋಪಾಲಸ್ವಾಮಿ. ಇವರು ಜಗತ್ ಪ್ರಸಿದ್ಧ ಮನೋವಿಜ್ಞಾನಿಯೆಂದು ಆಗ ಎಲ್ಲರ ಅಭಿಮತ. ಮೈಸೂರಿನಲ್ಲಿ ಆಕಾಶವಾಣಿಯನ್ನು ಆ ಹೆಸರು ಕೊಟ್ಟು ಪ್ರಾರಂಭ ಮಾಡಿದರೆಂಬುದು ಅವರ ಕೀರ್ತಿ. ಇಂತಹ ಹಿರಿಯ ಪ್ರಿನ್ಸಿಪಾಲರೊಬ್ಬರು ಕೇವಲ ಪೈಜಾಮ ಜುಬ್ಬದಲ್ಲಿ ನಮ್ಮ ಮುಂದೆ ಕಾಣಿಸಿಕೊಳ್ಳುತ್ತಿದ್ದರು. ಇವರು ಎಷ್ಟು ಸರಳರೋ ಅಷ್ಟೇ ಉದಾರಿಯೂ, ಹೆಚ್ಚು ಮಾತನಾಡದ ಚಿಂತಕರೂ ಆಗಿದ್ದರು. ಆ ದಿನಗಳಲ್ಲಿ ಉತ್ತಮವಾದ ಇಂಗ್ಲಿಷ್ ಚಿತ್ರಗಳನ್ನು ತೋರಿಸುತ್ತಿದ್ದ ಟಾಕೀಸೆಂದರೆ, `ಗಾಯತ್ರಿ’ ಟಾಕೀಸು. ನೂರಡಿ ರಸ್ತೆಯ ಮೇಲೆ ಇದ್ದ ಸಿನೆಮಾ ಮಂದಿರ ಅದು. ಅಲ್ಲಿ ನಾವು ಕಡಿಮೆ ದರ್ಜೆಯ ಟಿಕೆಟ್ ಪಡೆದು ಬೆಂಚುಗಳ ಮೇಲೆ ಹೋಗಿ ಕೂರುತ್ತಿದ್ದೆವು.
ಕೆಲವೊಮ್ಮೆ ಡಾ. ಗೋಪಾಲಸ್ವಾಮಿಯವರನ್ನು ವಿದ್ಯಾರ್ಥಿಗಳ ನಡುವೆ ಕಂಡು ನಾನು ಬೆರಗಾದದ್ದೂ ಉಂಟು. ಡಾ.ಗೋಪಾಲಸ್ವಾಮಿಯವರ ಕಾಲದಲ್ಲಿಯೇ ಮಹಾರಾಜಾ ಕಾಲೇಜಿನ ಶತಮಾನೋತ್ಸವ ನಡೆದಿತ್ತು. ಆಗ ಮೈಸೂರಿನ ಪ್ರಸಿದ್ಧ ಶಿಲ್ಪಿಯಾದ ಸಿದ್ಧಲಿಂಗಯ್ಯ ಅವರು ಮಾಡಿದ ಸರಸ್ವತಿ ವಿಗ್ರಹ ನಮ್ಮೆಲ್ಲರ ಕಣ್ಣಿಗೆ ಅಚ್ಚುಮೆಚ್ಚಾಗಿ ಸ್ಟೇರ್ ಕೇಸ್ ಹತ್ತಿ ಹೋಗುತ್ತಿದ್ದಂತೆ ಒಂದು ಗೂಡಿನಲ್ಲಿ ಇತ್ತು.
ಮಹಾರಾಜ ಕಾಲೇಜು ಎಲ್ಲ ಕಾಲೇಜಿನಂತಲ್ಲ. ಎಲ್ಲರೂ ನೆನೆಯುತ್ತಿದ್ದ ಮಹಾನುಭಾವರು ಯಾವ ಯಾವ ಕೋಣೆಯಲ್ಲಿ ಕೂತಿರುತ್ತಿದ್ದರು ಎಂಬುದನ್ನು ಹೊಸ ವಿದ್ಯಾರ್ಥಿಗಳಾದ ನಮಗೆ ತೋರಿಸುತ್ತಿದ್ದರು. `ಇಲ್ಲಿ ರಾಧಾಕೃಷ್ಣನ್ ಕೂತಿರುತ್ತಿದ್ದರು’, `ಇಲ್ಲಿ ರಾಧಾಕೃಷ್ಣನ್ರಿಗೇ ಭಾರತೀಯ ತತ್ವಶಾಸ್ತ್ರವನ್ನು ಕಲಿಸಿದ ಹಿರಿಯಣ್ಣ ಕೂತಿರುತ್ತಿದ್ದರು’…..ಹೀಗೆ.
ಇತ್ತೀಚಿನ ಟಿಪ್ಪಣಿಗಳು