ಅಕ್ಷತಾ ಕೆ
ದಣಪೆಯಾಚೆ…
ಮೊದಲು ಮತ್ತು ತುದಿಯಲ್ಲಿ ಹಳದಿ ನಡುವಲ್ಲಿ ತುಸು ಕೆಂಪಿನ ಉದ್ದುದ್ದ ಪಕಳೆಗಳ ಮುಡಿಗಿಂತ ಅಗಲವಿರುವ ಡೇರೆ ಹೂವನ್ನು ಮುಡಿದು ಬಂದಿರುವ ರಂಜನಾ ಐದನೇ ತರಗತಿಯ ಹುಡುಗಿಯರ ಆ ದಿನದ ಆಕರ್ಷಣೆಯ ಕೇಂದ್ರ. ಸೀತಾಳದಂಡೆ, ಕೇದಿಗೆ, ಸುರಗಿ, ಡೇರೆ, ಸಂಪಿಗೆ, ಸೇವಂತಿಗೆ ಹೀಗೆ ಥರಾವರಿ ಹೂಗಳನ್ನು ದಿನವೂ ಮುಡಿದುಕೊಂಡು ಬರುವ ಮಲೆನಾಡಿನ ಆ ಹಳ್ಳಿ ಶಾಲೆಯ ಹುಡುಗಿಯರಿಗೆ ಹೂವೆಂದರೆ ವಿಶೇಷವಲ್ಲ ಆದರೆ ದಿನವೂ ನೋಡುವ, ಮುಡಿಯುವ ಹೂಗಳ ಬಗ್ಗೆ ಅವರಿಗಿರುವ ವಿಶೇಷ ಅಕ್ಕರೆಯಂತೂ ಎಷ್ಟು ಹೂ ಮುಡಿದರೂ ತೊಲಗುವಂತದ್ದಲ್ಲ.
ನೀ ಮುಡಿದ ಡೇರೆ ಹೂ ಎಷ್ಟು ಚೆಂದ ಇದ್ಯೇ ಎಂದು ಪುಷ್ಪ ರಾಗ ಎಳೆದರೆ ಸಾಕು. ಇಷ್ಟೊತ್ತು ಅದನ್ನು ಮುಡಿದು ತಾನು ಅನುಭವಿಸಿದ ಸಂತೋಷವನ್ನು ಅವಳಿಗೂ ಹಂಚಲು ಕಾದಿದ್ದವಳಂತೆ ರಂಜನಾ ಹೂವನ್ನು ಕ್ಲಿಪ್ಪಿನ ಸಹಿತ ನಿಧಾನಕ್ಕೆ ಮುಡಿಯಿಂದ ತೆಗೆದು ನೀನು ಮುಡಿದುಕೋ ಎಂದು ಕೊಡಲು ಹೋಗುವಳು ಆಗ ಅವಳಿಗೆ ಥಟ್ಟನೆ ತನ್ನ ಮಡಿ ಅಜ್ಜಿಯ `ಏಯ್ ಶಾಲೆಯಲ್ಲಿ ಯಾರಿಗೂ ಕೊಡಕ್ಕೆ ಹೋಗಬೇಡ ನಿನ್ನೆ ದೇವರ ತಲೆ ಮೇಲಿಟ್ಟ ಹೂ ಪ್ರಸಾದ ಅಂತ್ಹೇಳಿ ನಿನಗೆ ಮುಡಿಸಿದ್ದೀನಿ ಎಂಬ ಆದೇಶ ನೆನಪಾಗಿ ಮನೆಗೆ ಹೋಗ್ತಾ ಮಾತ್ರ ಮರೀದೆ ಕೊಡು ಮುಡಿದಿದ್ದ ಹೂವನ್ನ ಯಾರಿಗಾದ್ರೂ ಕೊಟ್ರೆ ನಮ್ಮ ಅಜ್ಜಿ ಬಯ್ತಾರೆ ಎಂದು ಹೇಳುವಳು. ಅಷ್ಟೊತ್ತಿಗೆ ಏಯ್ ನಾನೊಂಚೂರು ಹೊತ್ತು ಮುಡಿದು ಕೊಡ್ತೀನಿ ಕೊಡೆ ಅಂತ ಗೀತಾ ಬೇಡೋಳು. ನೀನಿವತ್ತು ನಂಗೆ ಮುಡಿಯೋಕೆ ಕೊಡ್ತೀನಿ ಹೇಳಿದ್ದೆ ಅಂತ ಉಷಾ ರಂಜನಾನ ಜೊತೆ ವಾಗ್ವಾದಕ್ಕೆ ಇಳಿಯೋಳು. ಇನ್ನೊಬ್ಬಳು ಏಯ್ ಒಬ್ರು ಮುಡಿದ ಹೂ ಇನ್ನೊಬ್ರು ಮುಡಿದ್ರೆ ತಲೆ ತುಂಬಾ ಹೇನಾಗತ್ತೆ ಕಣ್ರೆ ಎಂದು ಎಟುಕದ ದ್ರಾಕ್ಷಿ ಹುಳಿ ಸಿದ್ದಾಂತ ಮಂಡಿಸೋಳು. ಇಲ್ಲ ಕಣ್ರೆ ಚಿಕ್ಕವರು ಮುಡ್ಕಂಡ ಹೂನ ದೊಡ್ಡವರು ಮುಡಿದ್ರೆ ಹಂಗಾಗದು ಅಂತ ಮತ್ತೊಬ್ಬಳು ಹೇಳಿದ ಕೂಡಲೇ ರಂಜನಾಗಿಂತ ನಾವು ದೊಡ್ಡವರೋ ಚಿಕ್ಕವರೋ ಜಿಜ್ಞಾಸೆ ಅಲ್ಲಲ್ಲೆ ಶುರುವಾಗೋದು. ಅಲ್ಲಿದೆಯಲ್ಲ ಪಟ್ಟಿ ಅಲ್ಲಿ ಎಲ್ಲರ ವಯಸ್ಸು, ಹುಟ್ಟಿದ ತಿಂಗಳು ಬರೆದಿರ್ತಾರೆ ಕಣ್ರೆ ನೋಡಣಾ ಆಗ ಗೊತ್ತಾಗತ್ತೆ ಬುದ್ದಿವಂತೆ ಸೂಚಿಸುವಳು.
ಆ ಪಟ್ಟಿಯಲ್ಲಿ ನೋಡಿದರೆ ಎಲ್ಲರ ಹುಟ್ಟಿದ ವರ್ಷ ಹೆಚ್ಚು ಕಡಿಮೆ ಒಂದೆ ಆಗಿರುವುದಷ್ಟೆ ಅಲ್ಲ, ಒಂದಿಬ್ಬರದ್ದು ಬಿಟ್ಟು ಮತ್ತೆಲ್ಲರ ಹುಟ್ಟಿದ ತಿಂಗಳು ತಾರೀಕು ಜೂನ್ ಒಂದು ಆಗಿದೆ. ಏಯ್ ನಮ್ಮೆಲ್ಲರ ಬರ್ತಡೆನೂ ಒಂದೆ ದಿನ ಬರತ್ತೆ ಕಣೆ ಅಂತ ಒಂದಿಬ್ಬರು ಸಂಭ್ರಮಿಸೋಕೆ ಶುರು ಮಾಡೋಕು, ಇಲ್ಲಿರದು ನಾವು ಹುಟ್ಟಿದ ನಿಜವಾದ ತಾರೀಕು, ತಿಂಗಳು ಅಲ್ಲ. ನಮ್ಮ ಅಪ್ಪಯ್ಯ ಶಾಲೆಗೆ ಸೇರಿಸಕ್ಕೆ ಕರ್ಕಂಬಂದಾಗ ಹೆಡ್ ಮೇಷ್ಟ್ರು ಹುಟ್ಟಿದ ತಿಂಗಳು ತಾರೀಕು ಹೇಳಿ ಅಂದ್ರೆ ಅಪ್ಪಯ್ಯಂಗೆ ನೆನಪೆ ಬರ್ಲಿಲ್ವಂತೆ ಆಮೇಲೆ ಹೆಡ್ ಮೇಷ್ಟ್ರು ನಾನೇ ಬರ್ಕೋತಿನಿ ತಗಳ್ಳಿ ಅಂತ್ಹೇಳಿ ಬರ್ಕಂಡ್ರಂತೆ ಎಂದು ಸಂಧ್ಯಾ ಉಲಿಯುತ್ತಿದ್ದಂತೆ, ಅಯ್ಯೋ ನಂದು ಹಂಗೆ ಆಗಿರೋದು, ನಂದು ಹಂಗೆ ಆಗಿರಾದು ಮತ್ತಷ್ಟು ಧ್ವನಿಗಳು ಮಾರ್ಧನಿಸುವವು. ಅಲ್ಲೆ ಇದ್ದ ಕಿರಿಯ ವಯಸ್ಸಿನ ಆದರೆ ಹಿರಿಯಮ್ಮನ ಮನೋಭಾವದ ಮಗದೊಬ್ಬಳು ನಾವೆಲ್ಲ ಒಂದೆ ಕ್ಲಾಸ್ನವರಲ್ವ ನಮಗೆ ಹಂಗೆಲ್ಲ ಚಿಕ್ಕವರು ದೊಡ್ಡವರು ಅಂತ ಇರಲ್ಲ ಆದರೆ ನಾವು ಮುಡ್ಕಂಡಿದ್ದನ್ನ ಟೀಚರಿಗೆ ಮುಡಿಯೋಕೆ ಕೊಡಬಾರದು ಅಷ್ಟೆ ಎಂದು ಸಮಾಧಾನ ಆಗುವಂತ ವಾದ ಮಂಡಿಸುವಳು. ಕೂಡಲೆ ಕ್ಲಾಸಿನಲ್ಲಿರುವ 15 ಹುಡುಗಿಯರದು ಒಂದೆ ದನಿ ಈ ಡೇರೆ ಹೂವನ್ನ ನಾನು ಇವತ್ತು ಮುಡೀಯೋದು …
ಮನೆಯಿಂದ ಬರುವಾಗಲೇ ಗೊರಟೆ, ಕನಕಾಂಬರ ಮುಡಿದು ಕೊಂಡು ಬಂದವರಿಗೆ ಅಷ್ಟು ಹೂ ಮುಡ್ಕಂಡಿದ್ದೀಯಲ್ಲೆ ಮತ್ಯಾಕೆ ನಿಂಗೆ ಈ ಹೂವು ಬೇಕು ಅಂದ್ರೆ ಸಾಕು ಮೇಲೆ ಡೇರೆ ಹೂ ಮುಡ್ಕಂಡು ಕೆಳಗೆ ಗೊರಟೆ ಹೂವಿನ ಜಲ್ಲೆ ಇಳಿಬಿಟ್ಕೋತಿನಿ ಮುಡಿಗೆ ಡೇರೆ ಜಡೆಗೆ ಗೊರಟೆ ಎನ್ನುವ ವಾದ ಮಂಡಿಸುವರು. ಒಟ್ಟಿನಲ್ಲಿ ಎಲ್ಲರಿಗೂ ಈ ಡೇರೆ ಹೂ ಮುಡಿಯಲೇಬೇಕೆಂಬ ಆಶೆ ಹುಟ್ಟಿಬಿಟ್ಟಿದೆ. ಒಬ್ರು ಹಠ ಮಾಡಿ ಮುಡಿದುಕೊಂಡ್ರೋ ಆಗ ಟೀಚರು ಪಾಠ ಮಾಡೋ ಸಂದರ್ಭ ಕಾದುಕೊಂಡು ಹೂವಿನ ಪಕಳೆಗಳನ್ನು ಹಿಂದೆ ಕೂತವರು ಒಂದೊಂದಾಗಿ ಕಿತ್ತು ಹಾಕುವರು ಪೀರಿಯಡ್ನ ಕೊನೆಗೆ ಉಳಿಯೋದು ಹೂವಿನ ತೊಟ್ಟು ಮಾತ್ರ. ಈ ಸತ್ಯ ಗೊತ್ತಿದ್ದರಿಂದ ಯಾರಿಗೂ ನಾನೊಬ್ಬಳೇ ಮುಡಿತೀನಿ ಯಾರಿಗೂ ಕೊಡಲ್ಲ ಅನ್ನುವ ದೈರ್ಯವಿಲ್ಲ. ಜೊತೆಗೆ ಅಮ್ಮ, ಅಜ್ಜಿಯರು ತಲೆಗೆ ತುಂಬಿದ `ಹೂವನ್ನು ಹಂಚಿ ಮುಡಿಬೇಕು’ ಎಂಬ ಸಿದ್ದಾಂತ ಆಳದಲ್ಲಿ ಗಟ್ಟಿಯಾಗಿ ಸೇರಿಕೊಂಡಿದೆ. ಮಲ್ಲಿಗೆ, ಕನಕಾಂಬರ, ಗೊರಟೆಯ ಜಲ್ಲೆಯಾಗಿದ್ದರೆ ಒಂದೊಂದು ತುಂಡು ಮಾಡಿ ಎಲ್ಲರಿಗೂ ಕೊಡಬಹುದು. ಹೇಳಿಕೇಳಿ ಇದು ಡೇರೆ ಹೂ ಹರಿದರೆ ಬರಿ ಪಕಳೆ ಪಕಳೆ… ಅದಕ್ಕೆ ಒಂದೊಂದು ಪೀರಿಯಡ್ ಒಬ್ಬೊಬ್ಬರು ಮುಡಿಯೋದು ಮತ್ತೆ ರಂಜನಾ ನಾಳೆ ನಾಡಿದ್ದು ಡೇರೆ ಮುಡಿದುಕೊಂಡು ಬಂದಾಗ ಮತ್ತೆ ಉಳಿದವರು ಮುಡಿಯೋದು ಅನ್ನೋ ನಿಧರ್ಾರಕ್ಕೆ ಪುಟ್ಟ ಸುಂದರಿಯರು ಬಂದರು.
ನಾ ಫಸ್ಟ್ ಮುಡಿಯೋದು, ನಾ ಫಸ್ಟ್ ಮುಡಿಯೋದು ಎಂಬ ಸ್ಪಧರ್ೆಯ ಮಧ್ಯೆ ಒಬ್ಬಳ ಮುಡಿಗೆ ಆ ಹೂವು ಸೇರಿತು. ಉಳಿದವರು ಪೀರಿಯಡ್ ಮುಗಿಯೋದನ್ನು ಕಾಯ್ತಾ ಇದ್ದರೆ ಹೂ ಮುಡಿದವಳು ಮಾತ್ರ ಭಾರತಿ ಟೀಚರ್ ಇವತ್ತಿಡಿ ದಿನಾ ಊಟಕ್ಕೂ ಬಿಡದೇ ಕ್ಲಾಸ್ ತಗಳ್ಳಿ ದೇವರೆ ಎಂದು ಬೇಡವಳು. ಅದರ ಜೊತೆಗೆ ಟೀಚರ್ ಕ್ಲಾಸಿಗೆ ಬಂದ ಕೂಡಲೇ ಅವರ ಕಣ್ಣಿಗೂ ಈ ಚೆಂದದ ಹೂ ಕಾಣಿಸಿ ಹೂ ಮುಡಿದ ಸುಂದರಿಯೆಡೆಗೆ ಒಂದು ಮೆಚ್ಚುಗೆಯ ನೋಟ ಹರಿಸುವರು ಅವಳಿಗೂ ಗೊತ್ತು ಈ ನೋಟ ನನಗಲ್ಲ ನಾ ಮುಡಿದ ಹೂವಿಗೆ ಎಂದು ಮತ್ತೆ ಉಳಿದ ಹುಡುಗಿಯರಿಗೂ ಇದು ಹೊಳೆದು ಅವರಲ್ಲಿ ನಾನೇ ಹಠ ಮಾಡಿ ಫಸ್ಟ್ ಮುಡಿದುಕೋ ಬೇಕಿತ್ತು ಎಂಬ ಆಶೆಯನ್ನು ಹುಟ್ಟುಹಾಕುವುದು.
ಯಾರು ಬಯಸಿದರೂ ಬೇಡವೆಂದರೂ ಎರಡನೇ ಪೀರಿಯಡ್ ಬಂದೆ ಬಂದಿತು ಆಗ ಮತ್ತೊಬ್ಬಳ ಮುಡಿಗೆ ಈ ಹೂವು ವಗರ್ಾವಣೆಗೊಂಡಿತು, ಮತ್ತೊಂದು ಪೀರಿಯಡ್ ನಲ್ಲಿ ಮತ್ತೊಬ್ಬಳ ಮುಡಿಗೆ, ಮದ್ಯಾಹ್ನ ಊಟಕ್ಕೆ ಬಿಟ್ಟಾಗಲಂತೂ ಹೂ ಮುಡಿದವಳು ಬೆಲ್ ಆಗಲಿಕ್ಕೆ ಸಮಯ ಇದ್ದಾಗಲೂ ಎಲ್ಲರೂ ಆಟದ ಬಯಲು ಸೇರಿದರೆ ಇವಳು ಕ್ಲಾಸ್ ರೂಮಿನಲ್ಲೆ ಉಳಿದಳು ಬಿಸಿಲಿಗೆ ಎಲ್ಲಾದರೂ ಹೂ ಬಾಡಿದರೆ ಎಂಬ ಆತಂಕ… ಮತ್ತೆ ಮುಂದೆ ಮತ್ತೊಬ್ಬಳ ಮುಡಿಗೆ ಹೀಗೆ ಹೂ ಸೂಕ್ಷ್ಮವಾಗಿ ಒಬ್ಬರಿಂದ ಒಬ್ಬರಿಗೆ ಜಾರಿಕೊಂಡು ಆರೇಳು ಹುಡುಗಿಯರ ಮುಡಿಯಲ್ಲಿ ಕಂಗೊಳಿಸಿತು. ಬೆಳಿಗ್ಗೆಯಿಂದಲೂ ಮಕ್ಕಳನ್ನು ಗಮನಿಸುತ್ತಲೇ ಇರುವ ಟೀಚರಿಗೆ ಅಚ್ಚರಿ ಜೊತೆಗೆ ತುಸು ಗೊಂದಲ ಬೆಳಿಗ್ಗೆ ಒಬ್ಬಳ ಮುಡಿಯಲ್ಲಿದ್ದ ಹೂ ಆಮೇಲೆ ನೋಡುವಾಗ ಮತ್ತೊಬ್ಬಳ ಮುಡಿಗೆ ಜಾರಿತ್ತು ಅವಳೇ ಇವಳೋ ಇವಳೇ ಅವಳೋ ಎಂದು ಅನ್ನಿಸುವ ಹೊತ್ತಲ್ಲಿ ಅದು ಮತ್ತೊಬ್ಬಳ ಮುಡಿ ಸೇರಿತ್ತು. ಈಗ ನೋಡಿದರೆ ಅವರ್ಯಾರು ಆಗಿರದೇ ಹೂವಿನ ಒಡತಿ ಬೇರೆಯವಳೆ ಆಗಿಬಿಟ್ಟಿದ್ದಾಳೆ. ಹರೆಯದ ಟೀಚರಿಗೆ ನೂರಾರು ಗೋಪಿಕೆಯರೊಂದಿಗೆ ಒಂದೆ ಸಮಯದಲ್ಲಿ ರಾಸಲೀಲೆಯಾಡುತ್ತಾ, ಇಂವ ನನಗೆ ಮಾತ್ರ ಸೇರಿದವನು ಎಂಬ ಭಾವ ಉಕ್ಕಿಸಿದ ಆ ಕೃಷ್ಣನ ನೆನಪು ಸುಖಾ ಸುಮ್ಮನೆ ಬಂದ್ಬಿಟ್ಟು ಅವರ ಕೆನ್ನೆ ಕೆಂಪಾಗುವುದು. ಒಂದು ಹೂ ಎಲ್ಲ ಮಕ್ಕಳನ್ನು ಪರಸ್ಪರ ಬೆಸೆದಂತೆ ಅನ್ನಿಸಿ ಟೀಚರಿಗೆ ಖುಷಿಯಾಗುವುದು.
ಇತ್ತೀಚಿನ ಟಿಪ್ಪಣಿಗಳು