ನಾನೊಬ್ಬಳು ‘ಮಲ್ನಾಡ್ ಹುಡ್ಗಿ’

ಇಂದಿನಿಂದ ಆರಂಭ
ಪ್ರತೀ ಭಾನುವಾರ


ಕಾಡುವ ಮನಸ್ಸಿಗೆ ಕೈಯಿಡುವ ಅಂಕಣ ಮಾಲೆ-

‘ಸಿರಿ’ ಬಂದ ಕಾಲಕ್ಕೆ …

ಇದರೊಂದಿಗಿದೆ ಮೊದಲ ಬರಹ

ಇವನು ಗೆಳೆಯ-ನಲ್ಲ….

ನಾನೊಬ್ಬಳು ‘ಮಲ್ನಾಡ್ ಹುಡ್ಗಿ’

ನಾನು ಮಲೆನಾಡ ಹುಡುಗಿ. ನಮ್ಮೂರಷ್ಟು ಚಂದದ ಸ್ಥಳ ಮತ್ತೊಂದಿಲ್ಲ. ನಮ್ಮೂರ್ ಬಗ್ಗೆ ನಂಗೆ ಅಹಂಕಾರ ಅನ್ಕೊಂಡ್ರೂ ಪರ್ವಾಗಿಲ್ಲ ನೀವು.

ನನಗೆ ಸಾಹಿತ್ಯದಲ್ಲಿ ಆಸಕ್ತಿ..ಕುವೆಂಪು, ಅವ್ರ ಮಗ ಪೂ ಚಂ ತೇ, ಬಿ ಜಿ ಎಲ್ ಸ್ವಾಮಿ, ಭೈರಪ್ಪ, ಕಾರಂತ, ಬೆಳೆಗೆರೆ, ವಸುಧೇಂದ್ರ, ಕಾಯ್ಕಿಣಿ, ಜೋಗಿ, ವಿವೇಕ್ ಶಾನಭಾಗ್, ಗೊರೂರು ರಾಮಸ್ವಾಮಿ ಅಯ್ಯಂಗಾರ್,  ಮಾಸ್ತಿ ಇಷ್ಟ ಆಗ್ತಾರೆ. ಕೆ ಎಸ್ ನ, ಲಕ್ಷ್ಮೀನಾರಾಯಣ ಭಟ್ಟ, ಎಚ್ ಎಸ್ ವೆಂಕಟೇಶ ಮೂರ್ತಿ, ನಿಸಾರ್ ಅಹ್ಮದ್ ಇವರ ಕವಿತೆಗಳು ಇಷ್ಟ.

ಇಗೀಗ ಶೆಲ್ಲಿ, ಬೈರನ್, ಕೀಟ್ಸು, ವರ್ಡ್ಸ್ ವರ್ಥ್, ಬ್ಲೇಕ್, ಯೇಟ್ಸ್, ಏಲಿಯಟ್, ಡಿಕನ್ಸ್, ಕುಷ್ವಂತ್ ಸಿಂಗ್, ರಸ್ಕಿನ್ ಬಾಂಡ್, ಆರ್ ಕೆ ನಾರಾಯಣ್, ಜೇನ್ ಆಸ್ಟೆನ್, ಚಾರ್ಲೆಟ್ ಬ್ರಾಂಟೆ ಮುಂತಾದವರದನ್ನೆಲ್ಲಾ ಓದಕ್ ಶುರು ಮಾಡಿದಿನಿ ಅರ್ಥ ಆಗ್ದಿದ್ರೂ….

ನಂಗೆ ಮಳೆ , ಮುಂಜಾವು, ಮುಸ್ಸಂಜೆ, ತಂಪಾದ ರಾತ್ರಿ, ಬೆಳದಿಂಗಳು, ಸಮುದ್ರ, ಕತ್ತಲು, ಅಮ್ಮ ಅಂದ್ರೆ ತುಂಬಾ ಇಷ್ಟ…ಮಳೆ, ಮಳೇಲಿ ನೆನೆಯೋದು, ಮಳೆ ಬರೋದನ್ನ ನೋಡೋದು, ಮಳೆ ಸದ್ದು ಕೇಳೋದು ಅಂದ್ರೆ ಪ್ರಾಣ…

ಇವನು ಗೆಳೆಯ-ನಲ್ಲ….

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

ಆವತ್ತು ಸಂಜೆ ಕಾಲೇಜು ಬಿಟ್ಟ ತಕ್ಷಣ ಯಾವುದೇ ಊರು ಸುತ್ತುವ ಪ್ರೋಗ್ರಾಮು ಇಲ್ಲದ್ದರಿಂದ ಟೀ ಎಂದು ಕರೆಯುವುದಕ್ಕೆ ಯಾವ ಅರ್ಹತೆಯೂ ಇಲ್ಲದ ಟೀ ಕುಡಿದು ಹ್ಯಾಮ್ಲೆಟ್ ಓದುತ್ತಾ ಕೂತಿದ್ದೆ. ಫ್ರಾನ್ಸ್‌ಗೆ ಹೊರಟು ನಿಂತ ಮಗನಿಗೆ ಪೊಲೋನಿಯಸ್ ಅಲ್ಲಿ ಹೇಗಿರಬೇಕು ಅನ್ನುವ ಒಂದು ಪುಟದ ಮಾತು ಓದುತ್ತಿದ್ದರೆ ನನಗೆ ಅಪ್ಪನ ನೆನಪಾಯ್ತು.  ಅಷ್ಟರಲ್ಲಿ ಲಾಲಿ ದಬಾರೆಂದು ಬಾಗಿಲು ತಳ್ಳಿಕೊಂಡು ಒಳಬಂದು ಒಂದು ಮಾತಾಡದೇ ರೂಮ್ ಕ್ಲೀನ್ ಮಾಡತೊಡಗಿದಳು. ಅವಳು ಸಿಟ್ಟು ಬಂದಾಗೆಲ್ಲ ಹೀಗೆ ರೂಮ್ ಕ್ಲೀನ್ ಮಾಡಿಯೋ ಬಟ್ಟೆ ಒಗೆದೋ ಸಿಟ್ಟು ತೀರಿಸಿಕೊಳ್ಳುತ್ತಾಳೆ.

ಏನಾಯ್ತೆಂದು ಕೇಳಬೇಕನ್ನಿಸಿತು. ಆದರೆ ಮೊದಲು ರೂಮ್ ಕ್ಲೀನ್ ಮಾಡಿ ಕೋಪ ಇಳಿಯಲಿ ಎಂದು ಸುಮ್ಮನಾದೆ. ಒಂದರ್ಧ ಗಂಟೆಯ ನಂತರ ಅವಳ ಪಕ್ಕ ಬಂದು ಕೂತಳು. ಏನು ಓದುತ್ತಿದ್ದೀಯಾ ಅಂತ ಕೇಳಿದಳು. ಏನಾಯ್ತೇ’ ಕೇಳಿದೆ. ನಾನು ಅವನ ಬಗ್ಗೆ ಯಾವತ್ತೂ ಹಂಗೆ ಯೋಚಿಸಿರಲೇ ಇಲ್ಲ ಅಂದಳು. ಅವನು ಹೀಗ್ ಮಾಡ್ತಾನೆ ಅಂದ್ಕೊಂಡಿರಲಿಲ್ಲ ಕಣೇ. ಒಳ್ಳೇ ಫ್ರೆಂಡ್ ಆಗಿದ್ದ. ಎಲ್ಲಾ ಹಾಳ್ ಮಾಡಿಬಿಟ್ಟ. ನಂಗೆ ಪ್ರಪೋಸ್ ಮಾಡ್ದ ಕಣೇ’ ಬಿಕ್ಕಳಿಸಿದಳು.

ಹುಡುಗ ಹುಡುಗಿ ಸ್ನೇಹಿತರಾಗಿರುತ್ತಾರೆ. ಯಾವುದೋ ಒಂದು ದಿನ ಹುಡುಗ ಬಂದು ನೀನಂದ್ರೆ ಇಷ್ಟ, ನಿನ್ನ ಪ್ರೀತಿಸ್ತೀನಿ’ ಅಂತಾನೋ ಮದುವೆ ಆಗ್ತೀನಿ ಅಂತಾನೋ ಹೇಳ್ತಾನೆ. ಹುಡುಗಿಗೆ ಷಾಕ್ ಆಗುತ್ತೆ. ನಾನ್ಯಾವತ್ತೂ ನಿನ್ನ ಬಗ್ಗೆ ಹಿಂಗೆ ಯೋಚನೆ ಮಾಡಿರ್ಲಿಲ್ಲ  ಅಂತಾಳೆ. ಅವನು ನಾನು ಎಷ್ಟೊಂದು ಸಲ ಇನ್‌ಡೈರೆಕ್ಟ್ ಆಗಿ ಹೇಳಿದ್ದೀನಿ. ನಿಂಗೆ ಅರ್ಥ ಆಗಿರುತ್ತೆ ಅಂದ್ಕೊಂಡಿದ್ದೆ’ ಅಂತಾನೆ.

ಹೀಗ್ಯಾಕಾಗತ್ತೆ ಅಂತ ಕಾರಣ ಹುಡುಕುತ್ತಾ ಹೋದರೆ ಇದು ಏಣಿಯಾಟವಯ್ಯಾ ಅನ್ನುತ್ತೆ ಮನೋವಿಜ್ಞಾನ.  ಹೌದು, ಲ್ಯಾಡರ್ ಥಿಯರಿ ಅಂತ ಒಂದಿದೆ. ಅದರ ಪ್ರಕಾರ ಹುಡುಗೀರ ಮನಸ್ಸಲ್ಲಿ ಎರಡು ಏಣಿ ಇರುತ್ತೆ. ಒಂದು ಲೈಂಗಿಕ ಸಂಗಾತಿಗೆ, ಮತ್ತೊಂದು ಸ್ನೇಹಿತನಿಗೆ. ಹುಡುಗೀರು ತನ್ನನ್ನು ಸಮೀಪಿಸುವ ಅಥವಾ ತಾನು ಭೇಟಿ ಮಾಡುವ ಪ್ರತಿಯೊಂದು ಹುಡುಗನನ್ನೂ ಯಾವ ಏಣಿಗೆ ಹತ್ತಿಸಬೇಕು ಅಂತ ಮೊದಲ ನೋಟದಲ್ಲೇ ನಿರ್ಧಾರ ಮಾಡಿರುತ್ತಾರೆ. ಇದು ತುಂಬ ಸಹಜವಾಗಿಯೇ ಆಗಿಹೋಗಿರುತ್ತೆ. ಆದರೆ, ಹುಡುಗರಿಗೆ ಇರುವುದು ಒಂದೇ ಏಣಿ. ಅವರು ಎಲ್ಲರನ್ನೂ ಅದೇ ಏಣಿಗೆ ಹತ್ತಿಸುತ್ತಾರೆ. ತುಂಬ ಹತ್ತಿರವಾದವರಿಗೆ, ತಮಗೆ ಸರಿಜೋಡಿ ಅನ್ನಿಸಿದವರಿಗೆ ಪ್ರಪೋಸ್ ಮಾಡುತ್ತಾರೆ.

ಹಾಗೆ ಪ್ರಪೋಸ್ ಮಾಡುವ ಹುಡುಗ, ಆಕೆಯ ಲೈಂಗಿಕ ಸಂಗಾತಿಯ ಏಣಿಯಲ್ಲಿದ್ದರೆ ಅವಳೂ ಒಪ್ಪಿಕೊಳ್ಳುತ್ತಾಳೆ. ಅಕಸ್ಮಾತ್, ಗೆಳೆಯನ ಏಣಿಯಲ್ಲಿದ್ದರೆ ಅವನು ಹೀಗೆ ಮಾಡ್ತಾನೆ ಅಂತ ಗೊತ್ತಿರಲಿಲ್ಲ’ ಎಂದು ಗೋಳೋ ಅಂತಾರೆ.

ಇದನ್ನೆಲ್ಲ ಲಾಲಿಗೆ ಹೇಳಬೇಕು ಅನ್ನಿಸಿತು. ಆದರೆ ಇಂಥ ಹೊತ್ತಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ ಅನ್ನಿಸಿತು. ನಾ ಇನ್ಮೇಲೆ ಅವನ್ನ ಮಾತಾಡ್ಸಲ್ಲ’ ಎಂದವಳು ಎದ್ದು ಹೋದಳು.

ಒಂದಿನ ಸಾತ್ಯಕಿ ಜೊತೆ ಹೀಗೇ ಮಾತಾಡ್ತಾ ಲ್ಯಾಡರ್ ಥಿಯರಿ ಬಗ್ಗೆ ಹೇಳಿದ್ದೆ. ಅದಕ್ಕವನು ಲ್ಯಾಡರ್ ಥಿಯರೀನೂ ಇಲ್ಲ, ಸ್ನೇಕ್ ಥಿಯರೀನೂ ಇಲ್ಲ. ನೀವೆಲ್ಲ ಸೇರಿ ಮಾಡೋ ನಾಟಕ ಅದು. ಒಂದು ಹುಡುಗ ಇಷ್ಟ ಪಡ್ತಿದ್ದಾನೆ ಅಂತ ಗೊತ್ತಾಗಿರೋಲ್ವಾ ನಿಮಗೆ? ಅವನು ಪ್ರಪೋಸ್ ಮಾಡ್ಲಿ ಅಂತ ಕಾಯೋದು. ಆಮೇಲೆ ಹೀಗಂದ್ಕೊಂಡಿರ್ರ್‍ಇಲ್ಲ ಅನ್ನೋದು. ಇಷ್ಟ ಇಲ್ಲ ಅಂದ್ರೆ ಅವನಿಷ್ಟ ಪಡ್ತಾನೆ ಅಂತ ಗೊತ್ತಾದ ತಕ್ಷಣ ನೇರವಾಗಿ ಹೇಳಿಬಿಡಬೇಕಪ್ಪ. ನಾಟ್ಕ ಮಾಡೋದ್ಯಾಕೆ ಅಂತ ನನ್ನ ವಾದವನ್ನು ತಳ್ಳಿಹಾಕಿಬಿಟ್ಟಿದ್ದ.

ಹಾಸ್ಟೆಲ್‌ಗೆ ಬಂದ ಮೇಲೆ ಅವನ ಮೆಸೇಜು: in which ladder you have kept me?

ಇವನು ಉದ್ಧಾರ ಆಗೋಲ್ಲ ಅಂದುಕೊಂಡು ಸುಮ್ಮನಾದೆ.

‘ಓದು ಬಜಾರ್’ ಗೆ ಭೇಟಿ ಕೊಡಿ

 

ಪ್ರಸನ್ನ ಅವರ ಲೇಟೆಸ್ಟ್ ಕಾದಂಬರಿ ನನ್ನ ಗೋಪಾಲ ಬಗ್ಗೆ ಬರೆಯಲಿದ್ದಾರೆ ಜೋಗಿ

 ಕುಸುಮಾ ಶಾನಬಾಗ್ ಬರೆವ ಬೀದಿಯ ಹೆಣ್ಣುಗಳ ತಳಮಳದ ಕಥೆಗಳು

ಈ ಎಲ್ಲಕ್ಕೂ ‘ಓದು ಬಜಾರ್’ ಗೆ ಭೇಟಿ ಕೊಡಿ

ಅಲೆಗಳಲ್ಲಿ ಮರೆಯಾದ ಅಂಚೆಯಣ್ಣ

-ಜಯಂತ ಕಾಯ್ಕಿಣಿ

ನಮ್ಮೆಲ್ಲರ ಅಕ್ಕರೆಯ ಅಂಚೆಯಣ್ಣ  ಅಥವಾ “ಪೋಸ್ಟ್ ಮ್ಯಾನ್ ” ಬರೇ ಒಂದು  ಟಪಾಲು ಬಟವಾಡೆಯ ವೃತ್ತಿಯವನಾಗಿರುವುದಿಲ್ಲ. ಅವನು ಮನುಷ್ಯರಿಂದ   ಮನುಷ್ಯರಿಗೆ ಅದೇನನ್ನೋ ದಾಟಿಸುವ ಮಾರುವೇಷದ ದೇವರಾಗಿರುತ್ತಾನೆ. ಸಣ್ಣ ಊರುಗಳಲ್ಲಂತೂ  ಅವನು ಪ್ರತಿ ಮನೆಯ ಅಂತರಂಗದ  ಸದಸ್ಯ. ಎಸ್ಸೆಸ್ಸೆಲ್ಸಿ ರಿಸಲ್ಟು, ಹೆರಿಗೆ, ಮದುವೆ, ಕೋರ್ಟು ವಾರೆಂಟು, ಸಾವು, ರೋಗ ರುಜಿನ ಎಲ್ಲವನ್ನೂ “ನಿರಪೆಕ್ಷಯೋಗ ” ದಲ್ಲಿ ಹಂಚಿಕೊಂಡು  ಮನೆಯಿಂದ  ಮನೆಗೆ ದಾಟಿಸುತ್ತಲೇ ಇರುವ, ಬೆವರೊರೆಸಿಕೊ೦ಡು ಓಡುತ್ತಾ ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಅಥವಾ ಹ್ಯಾ೦ಡಲ್ಲಿಗೆ ಸಿಕ್ಕಿಸಿಕೊ೦ಡು ಸೈಕಲ್ ಏರುತ್ತಿರುವಾಗಲೇ ಯಾರನ್ನೋ ಕ೦ಡು ಫಕ್ಕನೇ ನಿಲ್ಲಿಸಿ ಕಾಗದ ಹುಡುಕಿ ಕೊಡುವ ನ೦ಟ. ಸಮಾಜದ ಒಳಬಾಳು ಅ೦ತ ಕರೀತೇವಲ್ಲ ಅ೦ಥ ಒಳಬಾಳಿನ ಚಲನಶೀಲ ಸದಸ್ಯ.

ಇಂಥ ಅ೦ಚೆಯಣ್ಣನನ್ನೇ  ಕೇಂದ್ರವಾಗಿರಿಸಿಕೊಂಡು  ಅದ್ಭುತವಾದ ದೃಶ್ಯಕೂಟವನ್ನು ನೀಡುವ ಒ೦ದು ಚೀನೀ ಚಿತ್ರ: “ಪೋಸ್ಟ್ ಮ್ಯಾನ್  ಇನ್ ದಿ ಮೌ೦ಟನ್ಸ್” (ಮಲೆಗಳಲ್ಲಿ ಅ೦ಚೆಯಣ್ಣ). ಇದು ಚೀನಾದ ಮಲೆನಾಡಿನ ಪ್ರದೇಶದ ಸರಳ ಜೀವಿಗಳ ಕಥೆ. ಆ ಮಲೆನಾಡು ಹೇಗಿದೆ ಎ೦ದರೆ, ನಮ್ಮಲ್ಲಿಯ ಹಾಗೇ, ನಿರ್ಜನ ಕಾಡುಮೇಡುಗಳ ನಡುವೆ ಒ೦ದೆರಡೇ ಮನೆಗಳ ಹಳ್ಳ. ಇ೦ಥ ಒ೦ದು ಹಳ್ಳಿಯಿ೦ದ ಇನ್ನೊ೦ದು ಹಳ್ಳಿಗೆ ಹೋಗಲು ಹಗಲಿಡೀ ನಡೆಯಬೇಕು, ಹೊಳೆಗಳನ್ನು ದಾಟಬೇಕು. ಇ೦ಥ ಹತ್ತಾರು ಹಳ್ಳಿಗಳ ಒ೦ದು “ರೂಟಿ” ನ ಡ್ಯೂಟಿ ಮುಗಿಸಲು ಒ೦ದು ವಾರ ಬೇಕು.

ನಮ್ಮ ಈ ಚಿತ್ರದ ನಾಯಕ ಈ ರೀತಿ ಗುಡ್ಡಗಾಡಿನಲ್ಲಿ ಅ೦ಚೆ ಬಟವಾಡೆ ಮಾಡಿ ಈಗ ನಿವೃತ್ತಿಯ ಸಮೀಪ   ಬ೦ದಿರುವ ಅ೦ಚೆಯಣ್ಣ. ಅವನಿಗೆ ಈ ಕೆಲಸ ಮು೦ದುವರಿಸುವ ಮನಸೇನೋ ಇದೆ. ಆದರೆ ಅವನ ಮೊಣಕಾಲು, ಮ೦ಡಿಗಳು ಅವನಿಗೆ ಜೊತೆ ನೀಡುತ್ತಿಲ್ಲ. ಈಗ ಬಿಟ್ಟುಬಿಟ್ಟರೆ ಬೇರೆ ಗತಿ ಇಲ್ಲ. ಆಗ ಅವನ ದುಗುಡಗಳನ್ನೆಲ್ಲ ಕರಗಿಸುವಂಥ  ಒ೦ದು ಕಾಗದ ಅವನಿಗೆ  ಬರುತ್ತದೆ. ಅದೇನೆ೦ದರೆ ಅವನ ಒಬ್ಬನೇ ಹದಿಹರೆಯದ ಮಗನಿಗೆ ಅವನು ಕೆಲಸವನ್ನು ವರ್ಗಾಯಿಸಲು ಪರವಾನಗಿ!

ಒ೦ದು ಬಗೆಯ ನಿಸರ್ಗ ಸಹಜ ಉಡಾಫೆ ಮತ್ತು ದಿಕ್ಕುದೆಸೆಯಿಲ್ಲದ ಚೈತನ್ಯ ಸೂಸುವ ಆ ಹದಿಹರೆಯದ ಪೋರನನ್ನು ತಾಯಿ – ತಂದೆ  ಇಬ್ಬರೂ ಪ್ರೀತಿಯಿ೦ದಲೇ ಪುಸಲಾಯಿಸುತ್ತಾರೆ. ಅವನನ್ನು ದೂರದ ಪಟ್ಟಣದ ಅ೦ಚೆ ಕಛೇರಿಗೊಯ್ದು ಅಧಿಕಾರಿಗಳಿಗೆ ಅಪ್ಪ ಪರಿಚಯಿಸುತ್ತಾನೆ. ಮರುದಿನ ಗುಡ್ಡಗಾಡುಗಳ ಏಳು ದಿನಗಳ “ರೂಟ್” ನ ಪರಿಚಯವನ್ನು ಮಗನಿಗೆ ಮಾಡಿಕೊಡುವ ಅಪ್ಪ ಮಗನ ಯಾತ್ರೆ ಆರ೦ಭವಾಗುತ್ತದೆ.

ಅಪ್ಪನ ಜತೆಗೆ ಸದಾ ಸಖನ೦ತೆ ಹೋಗುವ ನಾಯಿ ಕೂಡ ನಸುಕಿಗೇ ತಯಾರಾಗಿ ಕೂತಿದೆ. ಅ೦ಚೆ ಕಾಗದಗಳ ದಪ್ಪಚೀಲವೂ ಕಾಯುತ್ತಿದೆ. ಚಿಗುರು ಮೀಸೆಯ ಪೋರ ತನ್ನ ತ೦ದೆಯ ಜತೆ ಹೊರಡುವುದನ್ನು ಕಣ್ತು೦ಬಾ ನೋಡುತ್ತಾ ತಾಯಿ ನಿ೦ತಿದ್ದಾಳೆ. ನಾಯಿಗೇನೋ ಸಿಡಿಮಿಡಿ, ಎ೦ದಿನ ತಮ್ಮ ಜತೆ ಈ ಪೋರನೂ ಯಾಕೆ ಬ೦ದ ಅ೦ತ. ಕೈಲೊ೦ದು ಕೋಲು, ಬೆನ್ನಿಗೆ ಅ೦ಚೆಯ ಚೀಲ ಹಿಡಿದು ಅಪ್ಪ ಮು೦ದೆ, ಹಿ೦ದೆ ಮಗ ಮತ್ತು ಇಬ್ಬರನ್ನೂ ಬಳಸುತ್ತ ಒಮ್ಮೆ ಹಿ೦ದೆ ಒಮ್ಮೆ ತುರುತುರು ಮು೦ದೆ ಓಡುವ ನಾಯಿ, ಕಸುಬಿನ ಹಸ್ತಾ೦ತರದ ಈ ಸಣ್ಣ ಪಯಣ ನಸುಕಿನ ಕಿರಣಗಳಲ್ಲಿ ದಟ್ಟಕಾಡು, ಬೆಟ್ಟಗಳ ಕಾಲು ದಾರಿಯಲ್ಲಿ ಶುರುವಾಗುತ್ತದೆ.

ಇದೇ ಚಿತ್ರ ಈ ಹಸ್ತಾ೦ತರದ ಪಯಣವನ್ನು ಮನಮುಟ್ಟುವ೦ತೆ ತೋರಿಸುತ್ತದೆ. ಅರ್ಧ ದಿನ ಅವರು ಒ೦ದು ಮರದ ಬಳಿ ಬಂದಿದ್ದಾರೆ. ನಡುನಡುವೆ ನಾಯಿಯೂ ಆ ಅ೦ಚೆಚೀಲವನ್ನು  ಕೊಂಡು ಸಾಗಿಸಿದೆ. ಆ ಮರದ ಬಳಿ ನಿ೦ತು ಅಪ್ಪ ಆ ಚೀಲದ ಮಹತ್ವ ಹೇಳುತ್ತಾನೆ; “ಈ ಜೀವ ಹೋದರೂ ಸರಿ, ಮಳೆಯಿ೦ದ, ಕಾಡು ಪ್ರಾಣಿಗಳಿ೦ದ, ಹೊಳೆನೀರಿನಿಂದ  ಈ ಅ೦ಚೆಯ ಚೀಲವನ್ನು ಕಾಪಾಡಬೇಕು. ಅದರಲ್ಲಿರುವುದು ಬರೇ ಕಾಗದಗಳಲ್ಲ. ಯಾರ್ಯಾರನ್ನೋ ತಲುಪಲೇಬೇಕಾಗಿರುವ, ಆದರೆ ಇನ್ನೂ ತಲುಪಿರದ ಸ್ವರಗಳು. ಇವು ನಮ್ಮ ಕೈಲಿವೆ. ಅವನ್ನು ತಲುಪಿಸುವ ತನಕ ಅವುಗಳನ್ನು ಕಾಪಾಡಬೇಕು. ಜೀವ ಹೋದರೂ ಚಿ೦ತೆಯಿಲ್ಲ” ಎ೦ದು ಆತ ಹೇಳುವಾಗ ನಾಯಿಯೂ ಬಾಲ ಅಲ್ಲಾಡಿಸುತ್ತ ಮಗನ ಕಾಲ ನೆಕ್ಕುತ್ತದೆ.

ಈ ಕೆಲಸದ ಮೇಲೆ ವಾರಗಟ್ಟಲೇ ಮರೆಯಾಗುವ ಅಪ್ಪನ ಕುರಿತು ಎ೦ದೂ ದಿಗಿಲನ್ನೇ ಮನದಲ್ಲಿಟ್ಟುಕೊ೦ಡಿದ್ದ ಮಗನಿಗೆ ಅಪ್ಪನನ್ನು ಅವನ ನಿತ್ಯದ ಕಸುಬಿನ ದಾರಿಯಲ್ಲಿ ಇಷ್ಟು ಸಮೀಪದಿ೦ದ ನೋಡಲು ವಿಚಿತ್ರ ಸ೦ಕಟ, ಸಂಕೋಚ  ಆಗುತ್ತಿದೆ. ಯಾವಾಗಲೂ ಸಿಟ್ಟು ಸೆಡವುಗಳಲ್ಲೇ ಇರುತ್ತಿದ್ದ ಅಪ್ಪ ರಾತ್ರಿ ಬೆಳಗಾಗುವುದರೊಳಗೆ ಎಲ್ಲ ಬಿಟ್ಟು ಕೊಟ್ಟು ತನ್ನನ್ನು ಅತೀ ಸರೀಕನ೦ತೆ   ಭಾಸವಾಗಿ  ಸಮಯದ ಅನುಭವವಾಗುತ್ತಿದೆ. ಅಪ್ಪನ ನಡಿಗೆಯಲ್ಲಿ ಈತನಕ ತಾನು ಊಹಿಸಿಯೇ ಇರದ ದಣಿವನ್ನು, ಗೂನನ್ನು, ನೋವನ್ನು ಮತ್ತು ವಿಚಿತ್ರವಾದ ಒಜ್ಜೆಯನ್ನು ಮಗ ಮೂಕನಾಗಿ ಗಮನಿಸುತ್ತಾನೆ. ಅವನಿ೦ದ ಇಸಿದುಕೊ೦ಡು ಚೀಲವನ್ನು ತಾನೇ ಬೆನ್ನಿಗೇರಿಸಿಕೊಳ್ಳುತ್ತಾನೆ. ಅಷ್ಟರಲ್ಲಿ, ಮು೦ದೆ ಓಡಿದ್ದ ನಾಯಿ ತನ್ನ ಎ೦ದಿನ ಇಷ್ಟದ ಹೊಳೆಯನ್ನು ಕ೦ಡು ಕೇಕೆ ಹಾಕಿ ಕೂಗುತ್ತಿದೆ.

ಈಗ ಹೊಳೆ ದಾಟಬೇಕು. ಹೇಗೆ ಅ೦ಚೆಯ ಚೀಲವನ್ನು ನೀರಿಗೆ ತಾಗದ೦ತೆ ಹೆಗಲ ಮೇಲೆ  ಇಟ್ಟುಕೊಳ್ಳಬೇಕು ಎ೦ದು ತೋರಿಸುವ ಅಪ್ಪನಿಗೆ  ಸೊಂಟ  ಮಟ್ಟ ನೀರಿನ ಆ ಹೊಳೆಯನ್ನು ತುಸು ದಾಟುವಷ್ಟರಲ್ಲಿ ಸುಸ್ತಾಗುತ್ತದೆ. ಮಗ ಆ ಬ್ಯಾಗು ಇಸ್ಕೊಂಡು   ಆಚೆ ಹೋಗಿ ಇಟ್ಟು, ಮತ್ತೆ ಮರಳಿ ಬರುತ್ತಾನೆ. ಈಜಿಕೊ೦ಡು ದಾಟಿದ ನಾಯಿ ಆಚೆ ದಡದಲ್ಲಿ ಆ ಚೀಲವನ್ನು ಕಾಯುತ್ತಾ ನಿಲ್ಲುತ್ತದೆ.

ಅದನ್ನೇ ದಣಿದ ಕ೦ಗಳಲ್ಲಿ ನೋಡುತ್ತಾ ನಿ೦ತ ಅಪ್ಪನಿಗೆ ನೀರಿನ ಸೆಳವು ಜಾಸ್ತಿ ಇದ್ದ೦ತೆ ಭಾಸವಾಗಿ “ಸೆಳವು ಜಾಸ್ತಿ ಇದೆ. ಪಕ್ಕದ ಘಟ್ಟಗಳಲ್ಲಿ ಮಳೆಯಾಗಿರಬೇಕು. ನೀರಿನ ಬಣ್ಣವೂ ಹಳದಿಯಾಗಿದೆ” ಎ೦ದೂ ಕೂಗುತ್ತಾನೆ. ಮರಳಿ ಬ೦ದ ಮಗ ಅಪ್ಪನನ್ನು ತನ್ನ ಬೆನ್ನ ಮೇಲೆ ಹೊತ್ತುಕೊ೦ಡು ಮೆಲ್ಲಗೆ ಹೊಸನೀರಿನ ಆ ಹೊಳೆಯನ್ನು ದಾಟತೊಡಗುತ್ತಾನೆ. ಇದು ಅತೀ ತೀವ್ರವಾದ ಕ್ಷಣ. ಏಕೆ೦ದರೆ ಕಳೆದ ಹತ್ತು ವರ್ಷಗಳಲ್ಲಿ ಅವರಿಬ್ಬರೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಇಷ್ಟು ಸಮೀಪವನ್ನು ಸಾಧಿಸಿದ್ದೇ ಈಗ.

ಹೊಳೆ ದಾಟುತ್ತಾ ಮಗನ ಬೆನ್ನಿನ ಮೇಲೆ ಮಗುವಿನ೦ತೆ ಅವಚಿ ಕೂತ ಅಪ್ಪ ಹೇಳುತ್ತಾನೆ: “ನೀನು ಪುಟ್ಟವನಿದ್ದಾಗ ಹೀಗೇ ನಿನ್ನನ್ನು ಹೊತ್ತುಕೊ೦ಡು ಎಲ್ಲಾ ಜಾತ್ರೆಗಳಿಗೂ ಒಯ್ದಿದ್ದೆ.” “ಹೌದು. ಆದರೆ ನೀನು ನನಗೆ ದೊಡ್ಡ ಗಿಣಿ ಆಕಾರದ ಮಿಠಾಯಿಯನ್ನು ಎ೦ದಿಗೂ ಕೊಡಿಸಲೇ ಇಲ್ಲ”. ಆಗ ಹಠಾತ್ತನೇ ಅಪ್ಪನಿಗೆ ಮಗನ ಕತ್ತಿನ ಹಿ೦ಭಾಗದಲ್ಲಿಯ ಗಾಯದ ಗುರುತು ಕಾಣುತ್ತದೆ. “ಅರೇ, ಈ ಗಾಯ ಯಾವಾಗ ಆಯಿತು? ನನಗೆ ಹೇಳಲೇ ಇಲ್ಲ ನೀನು. ಬರೀ ಪು೦ಡತನವವೇ ಆಯಿತು ನಿನ್ನದು. ಯಾವಾಗ ಆಯ್ತು ಈ ಗಾಯ?” “ಅದಾಗಿ ಆರು ವರ್ಷ ಆಯ್ತು. ಮನೆಗೆ  ಬ೦ದಿದ್ದೇ ಅಮ್ಮನನ್ನು ಗೋಳು ಹೊಯ್ಕೊಳ್ಳೋದೇ ನಿನ್ನ ನಿತ್ಯದ ಕಾರ್ಯಕ್ರಮ ತಾನೇ? ಅದರಲ್ಲಿ ಈ ಗಾಯ ನಿನಗೆ ಹೇಗೆ ಕ೦ಡೀತು?” “ನಾವು ಹೇಗೆ ಕಷ್ಟಪಟ್ಟು ಮನೆಯ ಒಲೆ ಉರಿಸುತ್ತಾ ಬ೦ದಿದ್ದೇವೆ ಎ೦ಬುದು ನಮಗೆ ಗೊತ್ತು. ನಡುವೆ ಬರಬೇಡ. ನೀನು……………”

ಹೀಗೆ ಹೊಳೆ ದಾಟುತ್ತ ದಾಟುತ್ತಾ ಅಪ್ಪ ಮಗ ಕಳೆದ ಹತ್ತು ವರ್ಷಗಳಲ್ಲಿ ಆಡದೇ ಉಳಿದ ಮಾತುಗಳನ್ನು ಆಡುತ್ತಾರೆ. ಆ ಪುಟ್ಟ ಕುಟು೦ಬದ ನೋವಿನ ಎಳೆಗಳು ಆಳದಿ೦ದ ಬ೦ದು ಮಿ೦ಚಿ ಮರೆಯಾಗುತ್ತವೆ. ಆಚೆ ದಡದಿ೦ದ ಮತ್ತೆ ಪಯಣ ಮು೦ದುವರಿಯುತ್ತದೆ. ಮೊದಲು ಸಿಕ್ಕ ಹಳ್ಳಿಯಲ್ಲಿ ಯಾರ್ಯಾರ ಮನೆಗೆ ಹೇಗೆ ಪತ್ರ ಕೊಡಬೇಕು ಎ೦ದು ಹೇಳಿಕೊಡುತ್ತ ಅಪ್ಪ ಎಲ್ಲರಿಗೂ ಮಗನನ್ನು ಪರಿಚಯಿಸುತ್ತಾನೆ. “ಇನ್ನು ಮು೦ದೆ ಇವನೇ ಬರುತ್ತಾನೆ. ನಿಮ್ಮ  ಮಗನಂತೆ  ನೋಡಿಕೊಳ್ಳಿ; ಬಾಯಾರಿಕೆಗೆ ಕೊಡಿ” ಎ೦ದು ಹೇಳುತ್ತಾನೆ. ನ೦ತರ ಊರಿನ ಒ೦ಟಿ ಕುರುಡಿ ಅಜ್ಜಿಯೊಬ್ಬಳ ಬಳಿ ಸಾಗಿ ಅವಳಿಗೆ ಮನಿ ಆರ್ಡರ್ ಕೊಡುತ್ತಾನೆ.

“ಪಟ್ಟಣದ ನಿನ್ನ ಮಗ ಹಣ ಕಳಿಸಿದ್ದಾನೆ ಅಜ್ಜೀ” ಎಂದು  ಹೇಳಿದಾಗ ಅವಳು “ಏನು ಬರೆದಿದ್ದಾನೆ?” ಎ೦ದು ಕೇಳುತ್ತಾಳೆ. ಆಗ ಅವನು ಏನೂ ಬರೆಯದಿದ್ದರೂ, ಸುಳ್ಳು ಸುಳ್ಳೇ ಕಾಗದದಲ್ಲಿ ಇದೆ ಎಂಬಂತೆ  “ಪ್ರೀತಿಯ ಅಮ್ಮ, ನೀನು ಹೇಗಿದ್ದೀ? ಈ ಮಳೆಗಾಲದಲ್ಲಿ ಖ೦ಡಿತಾ ಬರುತ್ತೇನೆ. ನಿನ್ನ ಕಾಳಜಿ ತಗೋ. ಸರಿಯಾಗಿ ತಿನ್ನು. ಬೆಟ್ಟದಲ್ಲಿ ಹಣ್ಣುಗಳನ್ನು ಆರಿಸಲು ಜಾಸ್ತಿ ಅಲೆಯಬೇಡ” ಎ೦ದು ಹೇಳುತ್ತಾನೆ. ಕಣ್ಣೇ ಕಾಣದ ಆ ತಾಯಿ ಅದನ್ನು ನ೦ಬುತ್ತ ಆಲಿಸುತ್ತಾಳೆ. ಮಗನನ್ನು ಪರಿಚಯಿಸಿದಾಗ ಅವನ ಮು೦ಗುರುಳು ಸವರಿ “ಮಗೂ………. ನಿನ್ನ ಅಪ್ಪ ಸಾಕಷ್ಟು ಸವೆದಿದ್ದಾನೆ. ಅವನ ಮು೦ದಿನ ದಾರಿ ಸುಗಮಗೊಳಿಸು” ಎ೦ದು ಹರಸುತ್ತಾಳೆ.  ಅಲ್ಲಿ೦ದ ಹೊರಟ ನ೦ತರ “ಆ ತಾಯಿಗೆ ಸಮಾಧಾನವಾಗುವ ಹಾಗೆ ಹೀಗೆ ಸುಳ್ಳು ಪತ್ರ ಓದಿ ಹೇಳು ಆಗಾಗ………” ಎ೦ದು ಹೇಳುತ್ತಾನೆ.

ಮು೦ದಿನ ಹಳ್ಳಿಯ ನಾಲ್ಕು ಮನೆಯವರೆಲ್ಲ ಬ೦ದು ಅ೦ಚೆಯಣ್ಣನನ್ನು ತಬ್ಬಿ ಬೀಳ್ಕೊಡುತ್ತಾರೆ. ಮರುದಿನ ಅವರು ಒ೦ದು ನಿರ್ಜನ ಧರ್ಮಶಾಲೆಯಲ್ಲಿ ರಾತ್ರಿ ಕಳೆಯುತ್ತಾರೆ. ಅ೦ಚೆಯ ಚೀಲದ ಭಾರ ಈಗ ತುಸುವೇ ಕಡಿಮೆ ಆಗಿದೆ. ಕಾಗದ ಕಟ್ಟುಗಳನ್ನು ತೆಗೆದು “ಇದು ಈ ಮನೆಗೆ ಬೀಗವಿದೆ”, “ಈ ಊರಿಗೆ ಎರಡು ದಿನ ಇದೆ”. ಹೀಗೆ ತಿರುಗಿ ವಿಂಗಡಿಸುತ್ತಾ ಕೂರುತ್ತಾನೆ. ಮಗ ಆಯಾಸದಿ೦ದ ಅಡ್ಡಾಗಿದ್ದಾನೆ. “ಸುಸ್ತಾಯಿತೇ?” ಎ೦ದು ಮಗನನ್ನು ಅಕ್ಕರೆಯಿ೦ದ ಕೇಳಿ ಅಪ್ಪ ಅವನ ಕೈಕಾಲು ಮೈ ನೇವರಿಸುತ್ತಾನೆ. ಅಷ್ಟರಲ್ಲಿ ಭೋರೆ೦ದು ಬಿರುಗಾಳಿಯೊ೦ದು ಬೀಸಿ ಬಿಡಿಸಿದ್ದ ಕಟ್ಟೊ೦ದರ ಕಾಗದಗಳನ್ನೆಲ್ಲ ತರಗಲೆಗಳ೦ತೆ ಹಾರಿಸಿಕೊ೦ಡು ಹೋಗುತ್ತದೆ. ದಣಿದು ನಿಸ್ತೇಜವಾಗಿದ್ದ ಅಪ್ಪನಲ್ಲಿ ವಿಶೇಷ ಶಕ್ತಿಯೊ೦ದು ಉದ್ಭವಿಸಿದ೦ತೆ ಆತ ಓಡಿ ಜೀವದ ಹ೦ಗು ತೊರೆದು ಮಳೆ ಗಾಳಿಯಿ೦ದ ಪ್ರತಿ ಕಾಗದವನ್ನೂ ಹೆಕ್ಕಿ ಎದೆಗೊತ್ತಿಕೊ೦ಡು ಮರಳುತ್ತಾನೆ.

“ಮ೦ದಗತಿ (slow motion) ಯಲ್ಲಿ ಚಿತ್ರಿಸಲಾದ ಈ ದೃಶ್ಯ ಮೈ ಜುಮ್ಮೆನಿಸುವ೦ತಿದೆ. ಕಾಯಕ ತತ್ವದ ಅನುಷ್ಠಾನದ ಪರಮ ಗಳಿಗೆಯ೦ತಿರುವ ಈ ದೃಶ್ಯ, ಗಾಳಿ ಮಳೆ, ಹಾರುವ ಕಾಗದಗಳು (ಯಾರದೋ ಸ್ವರಗಳು) ಅವುಗಳನ್ನು ಈಜಿದ೦ತೆ ಹೋರಾಡುತ್ತ ಹಿಡಿದು ಹಿಡಿದು ಬಚಾವು ಮಾಡಿ ಎದೆಗೊತ್ತಿಕೊಳ್ಳುವ ಹಣ್ಣಾದ ಅ೦ಚೆಯಣ್ಣ ಒ೦ದು ಪರಮ ಮೌಲ್ಯದ ಹಸ್ತಾ೦ತರದ ಗಳಿಗೆಯ ಅನಿರ್ವಚನೀಯವನ್ನು ಅದ್ಭುತವಾಗಿ ಸಾಧಿಸಿದೆ. ಮ೦ತ್ರ ಮುಗ್ಧನಾಗಿ ನಿ೦ತ ಮಗ ಒ೦ದು ಕನಸನ್ನು ನೋಡುವ೦ತೆ ಅದನ್ನು ನೋಡುತ್ತಾನೆ. ಅವನ ಹೊಸ ಜಗದ ಉದಯ ಅಲ್ಲಿದೆ.

ಚಿತ್ರದ ಕೊನೆಯ ದೃಶ್ಯ:
ಮನೆ ಅವರ ಮನೆ. ಮು೦ಜಾವು. ಹುಡುಗ ತನ್ನ ಮೊದಲ “ರೂಟ್” ಗೆ ಸಿದ್ಧನಾಗುತ್ತಿದ್ದಾನೆ. ಅ೦ಚೆ ಚೀಲವನ್ನು ಅವನ ಹೆಗಲಿಗೇರಿಸಿದ ಅಪ್ಪ, ಕೈಗೆ ಬುತ್ತಿ ಕೊಟ್ಟ ತಾಯಿ ಅವನನ್ನು ಕಣ್ತು೦ಬಾ ನೋಡುತ್ತಾ ನಿ೦ತಿದ್ದಾರೆ. ಅವರಿಗೆ ಕೈಬೀಸಿ ಹಸಿರಿನ ನಡುವಿನ ಕಾಲುದಾರಿಯಲ್ಲಿ ಅವನ ಪಯಣ ಆರ೦ಭವಾಗಿದೆ. ಒ೦ದು ಕ್ಷಣ ತಬ್ಬಿಬ್ಬಾಗಿ ಅಪ್ಪ ಯಾಕೆ ಬರುತ್ತಿಲ್ಲ ಎ೦ಬ೦ತೆ ಗೊ೦ದಲದಿ೦ದ ಹಿ೦ದೆ ಮು೦ದೆ ನೋಡಿ ನಾಯಿ ಅಪ್ಪನ ಬಳಿ ಬರುತ್ತದೆ. ಅಪ್ಪ “ಹೋಗು” ಎ೦ದು ಹೇಳಿ ದೂರವಾಗುತ್ತಿರುವ ಮಗನೆಡೆ ಕೈ ತೋರಿಸುತ್ತಾನೆ. ದೂರವಾಗುತ್ತಿರುವ ಮಗನನ್ನು ನಾಯಿ ಓಡಿ ಸೇರಿಕೊಳ್ಳುತ್ತದೆ. “ನಾನು ತೋರಿಸುತ್ತೇನೆ ದಾರಿ” ಎ೦ಬ೦ತೆ ಅವನನ್ನು ಬಳಸಿ ಮು೦ದೆ ಓಡುತ್ತದೆ. ಕಾಡಿನ ವಿಶಾಲ ತೆರೆಗಳೆಡೆ ಅವರು ಚಲಿಸುತ್ತ ಮೆಲ್ಲಗೆ ಮಲೆಗಳಲ್ಲಿ ಮರೆಯಾಗುತ್ತಾರೆ.

ಮೌಲ್ಯಗಳ ಹಸ್ತಾ೦ತರದ ಕ್ಷಣದ ಯಾತನೆ, ಬಿಡುಗಡೆ, ಹೊಸ ಸಮಯದ ಉದಯದ ಸ೦ಭ್ರಮ, ಅಪ್ಪ ಮಗನ ನ೦ಟಿಗೆ ಹೊಸ ಜೀವವನ್ನೇ ನೀಡುವ ಕಾಯಕ ತತ್ವ – ಇವೆಲ್ಲವುಗಳನ್ನು ಮನಕರಗಿಸುವ೦ತೆ ಕಣ್ಣೆದುರು ಮೂಡಿಸಿದ ಈ ಚಿತ್ರ ನಾಲ್ಕು ವರ್ಷಗಳ ಹಿ೦ದೆ ನೋಡಿದ್ದರೂ ಈಗಲೂ, ನೆನೆದರೆ ಮತ್ತೆ ಆವರಿಸಿಕೊ೦ಡು ಬೆಳೆಯುತ್ತಿದೆ. ಬೆಳೆಸುತ್ತಿದೆ.

ಇದು ‘ಬಿಗ್ ಬಜಾರ್’ ಅಲ್ಲ….

ಇದು ಬಿಗ್ ಬಜಾರ್ ಅಲ್ಲ….

ಇದು ಜನತಾ ಬಜಾರ್ ಅಲ್ಲ…

ಇದು- ‘ಓದು ಬಜಾರ್’

ಇಲ್ಲಿ ಭೇಟಿ ಕೊಡಿ

ಬ್ಲಾಗ್ ಲೋಕದ ಮಹಾ ಮರ್ಜರ್

ಅವಧಿ ಹಾಗೂ ಜೋಗಿಮನೆ ಎರಡೂ ಕೈ ಕುಲುಕಿವೆ. ಅವಧಿ ನಡೆಸುತ್ತಿದ್ದ ‘ಬುಕ್ ಬಜಾರ್’ ಹಾಗೂ ಜೋಗಿ ಮನೆಯ ‘ಓದು ಜನಮೇಜಯ’ ಎರಡೂ ವಿಲೀನಗೊಂಡಿದೆ.

ಈ ಬೆಳವಣಿಗೆ ಮತ್ತೊಂದು ಮಹತ್ವದ ಬ್ಲಾಗ್ ಗೆ ದಾರಿಮಾಡಿಕೊಟ್ಟಿದೆ. ಬುಕ್  ಬಜಾರ್ ಹಾಗೂ ಓದು ಜನಮೇಜಯ ಎರಡೂ ಹೆಸರನ್ನು ಬಿಂಬಿಸುವ ‘ಓದು ಬಜಾರ್’ ಬ್ಲಾಗ್ ಲೋಕಕ್ಕೆ ಅಡಿ ಇಡಲಿದೆ. ಪುಸ್ತಕ,  ಸಾಹಿತಿ, ಪುಸ್ತಕ ಲೋಕದ ಏಳುಬೀಳು, ನಮ್ಮ ನೆರೆಯ ಭಾಷೆಗಳ ಪುಸ್ತಕ ಸಾಹಸಗಳು ಯಾವುದೂ ಕೇಳಲೂ ಸಿಗದ ಪರಿಸ್ಥಿತಿಯಲ್ಲಿ ಈ ಬ್ಲಾಗ್ ಮೂಡಿ ಬರುತ್ತಿದೆ.

ಕನ್ನಡದಲ್ಲಿ ಪುಸ್ತಕಕ್ಕೆ ಸಂಬಂಧಪಟ್ಟ  ಬೆಳಕಿಂಡಿಗಳೇ ಇಲ್ಲ ಎಂಬಷ್ಟು ಕಡಿಮೆ. ಹಾಗಾಗಿ ಓದುಗರಿಗೆ ಹೊಸ ದಾರಿ ಹುಡುಕಿ ಕೊಡಲು ಈ ಓದು ಬಜಾರ್ ಬರಲಿದೆ. ಕನ್ನಡ ಖ್ಯಾತ ಸಾಹಿತಿಗಳು ವಿಮರ್ಶಕರು ಓದುಗರು ಇದರಲ್ಲಿ ಅಂಕಣ ಬರೆಯಲಿದ್ದಾರೆ. ಪುಸ್ತಕ ಲೋಕದ ರೋಚಕ ಸುದ್ದಿಗಳೂ ಇರುತ್ತವೆ. ಪುಸ್ತಕಕ್ಕೆ ಸಂಬಂಧಪಟ್ಟ  ಯಾವುದೇ ಕಾರ್ಯಕ್ರಮದ ಫೋಟೋ ಅಲ್ಬಮ್ ಎಲ್ಲರ ಗಮನ ಸೆಳೆಯಲಿದೆ. ಪುಸ್ತಕ ಮಾರಾಟಗಾರರನ್ನು ಪರಿಚಯಿಸಲಾಗುತ್ತಿದೆ. ಪುಸ್ತಕಕ್ಕೆ ಸಂಬಂಧಪಟ್ಟ  ಎಲ್ಲವೂ ಇಲ್ಲಿರುತ್ತದೆ.

ಜೋಗಿ ತಾವು ಓದಿದ ಪುಸ್ತಕದ ಮೊದಲ ಅನಿಸಿಕೆಯನ್ನು ‘ಫರ್ಸ್ಟ್ ನೈಟ್’ ಅಂಕಣದಲ್ಲಿ ನಮ್ಮ ಮುಂದಿಡುತ್ತಾರೆ. ಓದುಗರದ್ದೇ ಟಾಪ್ ಟೆನ್ ಇರುತ್ತದೆ.

ಬುಕ್ ಬಜಾರ್ ಹಾಗೂ ಓದು ಜನಮೇಜಯದಲ್ಲಿ ಇದುವರೆಗೆ ಬಂದಿರುವ ಎಲ್ಲ ಲೇಖನಗಳೂ ಅರ್ಕೇವ್  ನಲ್ಲಿ ಲಭ್ಯವಿರುತ್ತದೆ.

ನಿರೀಕ್ಷಿಸಿ – ಓದು ಬಜಾರ್

ಹಳೇ ಮಂಚದ ಕಥೆಯು…

ಹಂಗಾಮ ಎಂಬ ಪತ್ರಿಕೆಯಿತ್ತು. ವೆಂಕಟರಮಣ ಗೌಡರ ಕನಸಿನ ಕೂಸದು. ಆ ಪತ್ರಿಕೆ ಎಷ್ಟೊಂದು ಬರಹಗಾರರಿಗೆ ಆಡುವ ಅಂಗಳವಾಗಿತ್ತು. ಆ ಅಂಗಳದಲ್ಲಿ ಗೌಡರೇ ಬರೆದ ಒಂದು ಕಥಾನಕ ಇಲ್ಲಿದೆ…

ವೆ0ಕಟ್ರಮಣ ಗೌಡ

ಅವಳದೇ ಕನ್ನಡಿ, ಅವಳದೇ ಮ0ಚದ ಒ0ದು ಪ್ರತ್ಯೇಕ ಪ್ರಪ0ಚದ0ತೆ ಆ ಅಷ್ಟು ದೊಡ್ದ ಮನೆಯಲ್ಲಿ ಅವಳ ಕೋಣೆ. ಊರಿನ ಎಲ್ಲಾ ಹುಡುಗಿಯರಿ0ದ ಗೌಡನ ಮಗಳು ಬೇರೆಯೆ0ಬ0ತೆ ಮಾಡಿರುವಲ್ಲಿ ಇತರ ಹಲವಾರು ಸ0ಗ0ತಿಗಳೊ0ದಿಗೆ ಆ ಕೋಣೆಯ ಪಾಲೂ ಬಹಳವೇ ಇದೆ. ತನ್ನ ಓರಗೆಯ ಎಲ್ಲ ಹುಡುಗಿಯರನ್ನು ಜಲಜಾಕ್ಷಿ ಆ ಕೊಣೆಯೊಳಗೆ ಸೇರಿಸುತ್ತಾಳಾದರೂ, ಅವರಾರೂ ಗೆಳತಿಯ ಸಲಿಗೆಯನ್ನು ದು0ದು ಮಾಡುವುದಿಲ್ಲ. ಹೀಗಾಗೇ ಅವರೆಲ್ಲರ ಕಣ್ಣಲ್ಲಿ ಜಲಜಾಕ್ಷಿ ದೊಡ್ಡವಳೇ ಆಗಿ, ಅವಳ ಆ ಕೋಣೆ ಬೆಚ್ಚಗಿನ ಸ್ವಪ್ನಕ್ಕೆ ಅವರನ್ನಿಳಿಸುವ0ತದ್ದಾಗಿ ಗಾಢವಾಗಿರುವುದು.

ಆ ಕೋಣೆ ಎ0ದ ತಕ್ಷಣ ಅದು ಒ0ದೇ ಕೋಣೆಯಲ್ಲ. ಬಾಗಿಲು ತೆರೆದರೆ ಒ0ದು, ಇನ್ನೊ0ದು, ಮತ್ತೊ0ದು ಎ0ದು ಮೂರು ಕೋಣೆಗಳುಳ್ಳದ್ದಾಗಿ ಪ್ರತ್ಯೇಕ ಮನೆಯೇ ಎ0ಬ0ತಿರುವ ಅದನ್ನು ಕೋಣೆಯೆ0ದೇ ಕರೆದುಕೊ0ಡು ಬರಲಾಗಿದೆ. ಅದು ಜಲಜಾಕ್ಷಿಗಾಗಿ ಇರುವ0ತದ್ದು ಎ0ಬುದನ್ನು ಸೂಚಿಸಲಿಕ್ಕಾಗಿಯೇ ಅವಳ ಕೋಣೆ ಎ0ದು ಎ0ತದೋ ಒ0ದು ಬಗೆಯ ಗೌರವ ಭಾವವನ್ನು ವಿನೀತ ಭಾವವನ್ನು ತೋರುವುದು ಗೌಡನ ಮನೆಯೊಳಗೆ ನಡೆದುಬ0ದಿದೆ.

ಅವಳದೆ0ಬುವ ಆ ಕೋಣೆಯ ಮು0ಬಾಗಿಲು ತೆರೆದು ಒಳಗೆ ಹೋದರೆ ನೇರ ಮುಖಕ್ಕೆ ಕೊಟ್ಟು ಕರೆಯುವುದೇ ಅಷ್ಟೆತ್ತರದ ಕನ್ನಡಿ. ಈಗಷ್ಟೇ ಅರಳಿದ್ದೆ0ಬ0ತಾ ಭಾಸದಲ್ಲಿ ಒ0ದು ಕ್ಷಣ ಅದ್ದಿ ತೆಗೆಯುವ0ತಹ ಜೀವ0ತ ಹೂಚಿತ್ರಗಳನ್ನು ಬಿಡಿಸಿರುವ ಮರದ ಚೌಕಟ್ಟು ಆ ಕನ್ನಡಿಗೆ. ಗೌಡನ ಮನೆತನದಲ್ಲಿ ಲಾಗಾಯ್ತಿನಿ0ದಲೂ ಉಳಿದುಕೊ0ಡು ಬ0ದಿರುವ ಆಸ್ತಿಯಾದ ಅದು ಜಲಾಕ್ಷಿಯ ಬೆಳವಣಿಗೆಯ ಪ್ರತಿ ಹ0ತವನ್ನೂ ತನ್ನ ಕಣ್ಣಲ್ಲಿ ಹಿಡಿದಿದೆ. ನಾಲ್ಕು ತಲಗಳಿಗೆಯ ನ0ತರ ಹುಟ್ಟಿದ ಆ ಹೆಣ್ಣು ಮಗಳಿಗೆ ಎಷ್ಟೊ0ದು ಅಕ್ಕರೆಯಿ0ದ ಚೆಲುವನ್ನು ದಯಪಾಲಿಸಿ ಧನ್ಯಗೊ0ಡ0ತಿದೆ.

ಪುಟ್ಟ ಪೋರಿಯಾಗಿದ್ದಾಗ ಅ0ಗಿಯನ್ನು ಸೀದಾ ಮೇಲೆತ್ತಿ ಬಾಯಿಗಿಟ್ಟು ಕಚ್ಚುತ್ತಿದ್ದ ಹುಡುಗಿಗೆ ಈಗ ಪ್ರಾಯದ ವಜ್ಜೆಯನ್ನು ಎ0ತದೋ ಬಿಗಿತವನ್ನು ಸ0ಬಾಳಿಸಲು ಕಲಿಸಿದ್ದು, ಕೋಡುಬಳೆ ತಿನ್ನುವಾಗಲೂ ಕನ್ನಡಿಯೆದುರೇ ನಿ0ತು ತಾನು ಹೇಗೆ ಗೆಲ್ಲ ಜಗಿಯುತ್ತೇನೆ ಎ0ದು ನೋಡುತ್ತಾ ದೊಡ್ಡವರನ್ನು ನಗಿಸುತ್ತಿದ್ದವಳಿಗೆ ತನ್ನ ಬೆಳೆದ ಕಣ್ಣುಗಳ ಸಮುದ್ರದಲ್ಲಿ ಪ್ರೀತಿಯ ದೋಣಿಯೊ0ದು ಅಲೆಗಳನ್ನು ದಾಟುವಾಟದಲ್ಲಿ ಚೆ0ದಗಟ್ಟಿದೆ ಎ0ಬ ಸುಳಿವು ಕೊಟ್ಟಿದ್ದು, ಮೈನೆರೆದ ಅನುಭವವಾದ ಮೊದಲ ಕ್ಷಣದಲ್ಲಿ ತನ್ನ ಮುಖದ ತು0ಬಾ ಮೂಡಿದ್ದ ಆತ0ಕದ ಕ0ಪನದ ಬಾಧೆಯಲ್ಲಿ ಬೆಚ್ಚಿದವಳಿಗೆ ಲಜ್ಜೆಯ ಗುರುತನ್ನು ಹೇಳಿ ಕೊಡುತ್ತಾ ಪುಳಕ ಮೀಯಿಸಿದ್ದು………. ಎಲ್ಲವೂ ಎಲ್ಲವೂ ಇದೇ ಕನ್ನಡಿ.

ಈ ಕನ್ನಡಿಯ ಹೂಚಿತ್ರಗಳ ಚೌಕಟ್ಟನ್ನು ಮಾಡಿದ ಮಾಟದ ಕೈಯವನೇ ಮಾಡಿದ್ದೆ0ಬ0ತಿರುವ ಒ0ದು ಮ0ಚ ಈ ಹಿ0ದೆ ಗೌಡನ ಮನೆಯಲ್ಲಿತ್ತು. ಆದರೆ ಗೌಡನ ಮನೆತನದ ಹಿರಿಯನೇ ಆ ಮ0ಚವನ್ನು ಮಾಡಿದವನಾಗಿದ್ದ. ಇದು ನಾಲ್ಕು ತಲಗಳಿಗೆಯ ಹಿ0ದೆ. ಜಲಜಾಕ್ಷಿಗಿ0ತ ಮೊದಲು ಈ ಮನೆಯಲ್ಲಿ ಹುಟ್ಟಿದ್ದ ಹೆಣ್ಣು ಮಗಳಿಗಾಗಿ ಅವನು ಅಷ್ಟೊ0ದು ಪ್ರೀತಿಯಿ0ದ ಮಾಡಿದ ಮ0ಚ ಎ0ತಾ ಸು0ದರವಾದದ್ದಾಗಿತ್ತೆ0ದರೆ, ಅದು ಹೇಗೋ ಅದನ್ನು ನೋಡುತ್ತಾ ನೋಡುತ್ತಾ ಇದ್ದರೆ ಮೈತು0ಬಿದ ಹೆಣ್ಣು ಮಗಳನ್ನೇ ಎದುರಲ್ಲಿ ಕ0ಡ0ತಾಗಿ ಬಿಡುತ್ತಿತ್ತ0ತೆ. ಎಲ್ಲರೂ ಆ ಮ0ಚದ ಸೊಗಸನ್ನು ಹೊಗಳುವವರೇ ಆದರೆ ಈ ಹೊಗಳಿಕೆ ಕೇಳಿಸಿಕೊಳ್ಳಲು ಅದನ್ನು ತಯಾರು ಮಾಡಿದ ಹಿರಿಯ ಇರಲಿಲ್ಲ.

ಮ0ಚವನ್ನು ಪೂತರ್ಿ ಮಾಡಿ ಮುಗಿಸಿದ ದಿನ ಅದರ ಚೆ0ದಕ್ಕೆ ತಾನೇ ಹುಚ್ಚನ0ತಾಗಿ ಸ0ಭ್ರಮಪಟ್ಟವನು, ಮತ್ತೆ ಮೂರೇ ದಿನಗಳಲ್ಲಿ ಸತ್ತಿದ್ದ. ಈ ಮೂರು ದಿನಗಳಲ್ಲಿ ಅವನು ಮ0ಕಾಗುತ್ತಾ ಮ0ಕಾಗುತ್ತಾ, ಮ0ಚ ತಯಾರಾದ ದಿನ ಎಷ್ಟು ಸ0ಭ್ರಮಪಟ್ಟಿದ್ದನೋ ಅದಕ್ಕೆ ಪೂತರ್ಿ ವಿರುದ್ಧವಾಗಿ ವಿಚಿತ್ರ ಕನಲಿಕೆಯ ಸ್ಥಿತಿಗೆ ಹೋಗಿ ಬಿದ್ದಿದ್ದವನನ್ನು ಗಮನಿಸುವುದಕ್ಕೂ ಒಬ್ಬರೂ ಇರಲಿಲ್ಲ. ಎಲ್ಲರೂ ಮ0ಚದ ಮೋಡಿಗೆ ಸಿಕ್ಕಿ ಬಿಟ್ಟಿದ್ದರು.

ಗೌಡನ ಮನೆಯ ಆ ಹಿರೀ ತಲೆ ಅತ್ಯ0ತ ದರಿದ್ರ, ಅನಾಥ ಭಾವದಲ್ಲಿ ಬಾಯೇ ಇಲ್ಲದ0ತಾ ಸ್ಥಿತಿಯಲ್ಲಿ ಏನೇನನ್ನೋ ಕನವರಿಸುತ್ತಾ ಎದೆ ಬಡಿದುಕೊಳ್ಳುತ್ತಾ ಉಸಿರು ಬಿಟ್ಟಿತ್ತು. ಎ0ತಾ ಚೆ0ದದ ಮ0ಚ ಮಾಡಿದ್ದವ ಅದರ ಮೇಲೆ ಒ0ದು ದಿನವಾದರೂ ಮಲಗಲಿಲ್ಲ, ಯಾವುದಕ್ಕೂ ಪಡೆದು ಬ0ದಿರಬೇಕು ಅ0ಬೂದು ಎಷ್ಟು ಖರೆ ಎ0ದೇ ಕೊರಗಿತ್ತು ಊರು. ಆಮೇಲೆ ಅವನ ಸಾವು ಮರೆತುಹೋಯಿತು, ಅವನ ನೆನಪು ಅಡಗಿ ಹೋಯಿತು. ಮ0ಚ ಮಾತ್ರ ಎಲ್ಲರ ಕಣ್ಣಲ್ಲಿ ನಿ0ತು ಬಿಟ್ಟಿತು.

ಗೌಡನ ಮನೆ ಮಗಳ ಹೆಸರಲ್ಲೇ ತಯಾರಾದ ಮ0ಚಕ್ಕೆ ಅದಾಗಲೇ ಪ್ರಾಯಕ್ಕೆ ಬ0ದ ಆಕೆಯೇ ಹಕ್ಕುದಾರಳಾದಳು. ಅದರ ಹೂಗೊ0ಡೆ ಸುತ್ತಿದ0ತಾ ಕಾಲುಗಳ ಸೊಗಸಿಗೆ, ಕಾಲುಗಳ ತುದಿಯಲ್ಲಿ ನೆಲದಿ0ದ ಒ0ದ0ಗುಲ ಮೇಲೆ ತೂಗುತ್ತಿರುವ0ತೆ ಕಟ್ಟಿರುವ ಬೆಳ್ಳಿ ಗೆಜ್ಜೆಗಳ ಇ0ಪಾದ ಉಲಿತಕ್ಕೆ, ಮ0ಚದ ಮೈಯ ನಯಕ್ಕೆ ಅವಳು ಸೋಲುತ್ತಾ ಹೋಗುವಳು. ಮ0ಚದೊ0ದಿಗೆ ಒಬ್ಬಳೇ ಮಾತಾಡುತ್ತಾ ಎಷ್ಟೋ ಹೊತ್ತು ಕಳೆದು ಬಿಡುವಳು. ಹೀಗೆ ಮ0ಚದೊ0ದಿಗೆ ಸ0ಬ0ಧ ಬೆಳೆದ ಕೆಲವೇ ದಿನಗಳಲ್ಲಿ ಅವಳು ಸು0ದರಳಾಗುತ್ತಾ ಆಗುತ್ತಾ ಹೋದಷ್ಟೇ ಮನೆಯ ಮ0ದಿಯಿ0ದ ದೂರವಾಗುತ್ತಲೂ ಹೋದಳು. ಇದು ಎಷ್ಟಕ್ಕೆ ಬ0ತೆ0ದರೆ ಮ0ಚವನ್ನು ಬಿಟ್ಟು ಅವಳು ಉಳಿಯುವುದೇ ಅಪರೂಪವಾಯಿತು. ಆದರೆ ಮನೆಮ0ದಿಗಾರಿಗೂ ಇದು ಕಾಡಲಿಲ್ಲ. ಬದಲಾಗಿ ಮ0ಚದ ಬಗ್ಗೇ ಹೊಗಳುವರು.

ಹೀಗಿರುವಾಗಲೇ ಒ0ದು ರಾತ್ರಿ ಊರೆಲ್ಲಾ ಮಲಗಿದೆ. ಗೌಡನ ಮನೆಯಲ್ಲೂ ಮಾತಿಲ್ಲ, ಕತೆಯಿಲ್ಲ; ಆಳು ಮಕ್ಕಳೂ ಎಚ್ಚರವಿಲ್ಲ. ಇದ್ದಕ್ಕಿದ್ದ0ತೆ ಯಾರೋ ಭೀಕರವಾಗಿ ಚೀರಿಕೊ0ಡ0ತೆ ಒ0ದು ಧ್ವನಿ ಎದ್ದಿತು. ಇಡೀ ಊರನ್ನೇ ಒ0ದು ಕ್ಷಣ ಎಚ್ಚರಿಸಿದ ಚೀರಿಕೆಯಾಗಿತ್ತು ಅದು. ಎಚ್ಚರಗೊ0ಡ ಎಲ್ಲರಿಗೂ ಆ ಚೀರಿಕೆಯ ಕೊನೆಯ ಸೊಲ್ಲೂ ಎಲ್ಲಿ0ದಲೋ ಕೇಳಿ ಬ0ದ0ತಾಯಿತೇ ಹೊರತು ಇ0ತಾ ದಿಕ್ಕಿನಿ0ದಲೇ, ಇ0ತಾ ಮನೆಯಿ0ದಲೇ ಬ0ತು ಎ0ದು ತಿಳಿಯಲು ಆಗಲಿಲ್ಲ. ಗೌಡನ ಮನೆ ಮ0ದಿಗೂ ಹೀಗೇ ಅನುಭವವಾಯಿತು. ರಾತ್ರಿ ಕಳೆದು ಬೆಳಗಾದಾಗಲೇ ಎಲ್ಲಾ ಗೊತ್ತಾದದ್ದು.

ಮ0ಚದ ಮೇಲೆ ಮಲಗಿದ್ದ ಗೌಡನ ಮಗಳು ಮ0ಚದಿ0ದ ಸಿಡಿದೇ ಬಿದ್ದಿದ್ದಾಳೆ0ಬ0ತೆ ಬಾಗಿಲ ಬಳಿ ಹೆಣವಾಗಿ ಬಿದ್ದಿದ್ದಳು. ಅಷ್ಟೊ0ದು ಚೆ0ದವಿದ್ದವಳ ಮುಖ ನೋಡಲಿಕ್ಕೆ ಆಗದ ಹಾಗೆ ವಿಕಾರವಾಗಿತ್ತು. ಅವಳು ಮಲಗಿದ್ದ ಮ0ಚವ0ತೂ ಸೀಳಿ ಸೀಳಿ ಹೋಗಿತ್ತು. ಮೋಹಿನಿ ನೆಲೆಯಾಗಿದ್ದ ಮ0ಚ ಅದಾಗಿತ್ತು ಎ0ದು ಚೌಕಾಶಿಯಿ0ದ ತಿಳಿಯಿತು. ಮಾತು ಕಳಕೊ0ಡು ದಕ್ಕಾಗಿ ಹೋಗಿದ್ದರು ಎಲ್ಲ. ಕನ್ನೆ ಹೆಣ್ಣಿನ ಹೆಣದೊ0ದಿಗೆ ಆ ಮ0ಚವನ್ನು ಸುಟ್ಟು ಹಾಕಲಾಯಿತು.

ಮನೆತನದಲ್ಲಿ ಹೀಗೊ0ದು ದುರ0ತವಾದ ನ0ತರ ಗೌಡನ ಮನೆತನದಲ್ಲಿ ಯಾರೂ ಮ0ಚದ ಬಗ್ಗೆ ಮೋಹಪಡಲಿಲ್ಲ.

ಈ ಕೆಟ್ಟ ಘಟನೆಯ ನೆನಪು ಮು0ದಿನ ಪೀಳಿಗೆಗಳಲ್ಲೂ ಉಳಿದುಕೊ0ಡು ಬ0ತು. ಹೀಗಿದ್ದಾಗ ಜಲಜಾಕ್ಷಿ ತನಗೊ0ದು ಮ0ಚ ಬೇಕೇ ಬೇಕೆ0ದು ಹಠ ಹಿಡಿದುಬಿಟ್ಟಳು. ಗೌಡ ದಿಗ್ಭ್ರಾ0ತನಾಗಿ ಹೋದ. ಕಡೆಗೂ ದೇವರಲ್ಲಿ ಕೇಳಿ ಒಪ್ಪಿಗೆ ಸಿಕ್ಕಿದ ಮೇಲೆ ಮ0ಚ ಮಾಡಿಸಲಾಯಿತು.

ಈಗ ಜಲಜಾಕ್ಷಿಯ ಕೋಣೆಯಲ್ಲಿ ಕನ್ನಡಿಯಷ್ಟೇ ದೊಡ್ಡ ಆಸ್ತಿ ಎ0ಬ0ತೆ ಇರುವ ಈ ಹೊಸ ಮ0ಚವೂ ತು0ಬಾ ಸು0ದರವಾದದ್ದೇ. ಜಲಜಾಕ್ಷಿಗೂ ಈ ಮ0ಚವೆ0ದರೆ ಇಷ್ಟ.

ಈ ಮ0ಚದ ಮೇಲೆ ಕೂತೇ ಅವಳು ಅಜ್ಜನ ಬಾಯಿ0ದ ಹಳೇ ಮ0ಚದ ಕಥೆ ಹೇಳಿಸಿಕೊ0ಡಿದ್ದಾಳೆ.

ಸೌಜನ್ಯ: ಹ0ಗಾಮ

‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ…’

ಬಿ ವಿ ಕಾರಂತರ ಬದುಕನ್ನು ಬಿಚ್ಚಿಟ್ಟ ಆತ್ಮ ಕಥನ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ…’ ಇಂಗ್ಲಿಶ್ ಗೆ ಅನುವಾದಗೊಂಡಿದೆ. ವೈದೇಹಿ ಹಲವು ವರ್ಷಗಳ ಕಾಲ ಬಿ ವಿ ಕಾರಂತರ ಜೊತೆ ನಡೆಸಿದ ಮಾತುಕತೆ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ.

ಈಗ ರಾಷ್ಟ್ರೀಯ ನಾಟಕ ಶಾಲೆ ಅದನ್ನು ಇಂಗ್ಲಿಶ್ ಗೆ ಸಜ್ಜುಗೊಳಿಸಿದೆ. ಖ್ಯಾತ ಅನುವಾದಕರುಗಳಾದ ಪ್ರೊ. ಸಿ ಎನ್ ರಾಮಚಂದ್ರನ್ ಹಾಗೂ ಪದ್ಮ ರಾಮಚಂದ್ರ ಶರ್ಮ ಇದನ್ನು ಇಂಗ್ಲಿಶ್ ತೆಕ್ಕೆಗೆ ತಂದಿದ್ದಾರೆ.

ಇದರ ಬಿಡುಗಡೆ ಕಾರಂತ ಉತ್ಸವವಾಗಿ ಬದಲಾಗಲಿದೆ. ಕಾರಂತರ ನಾಟಕಗಳ ಸುಗ್ಗಿಯ ಮಧ್ಯೆ ಈ ಪುಸ್ತಕ ಬಿಡುಗಡೆಗೊಳ್ಳಲಿದೆ.

ಮತ್ತೆ ಕಾಗದ ಬಂತು..

ವಿಕ್ರಮ್ ಹತ್ವಾರ್ ಅವರ ‘ಸೇತುವೆಯ ಮೇಲೊಂದು ಹುಣ್ಣಿಮೆಯ ಆಟ’ ಲೇಖನಕ್ಕೆ ಪ್ರತಿಕ್ರಿಯೆ-

Shwetha, Hosabale
shwetha_gbhat@yahoo.co.in |

ಹೆಣ್ಣಿನ ಮನಸ್ಸಿನ ಒಳತೋಟಿಗಳನ್ನು ಬಿಚ್ಚಿಡುವ ಸಿನೆಮಾದ ಬಗ್ಗೆ ಓದಿದ ಮೇಲೆ
ಆ ಸಿನೆಮಾ ನೋಡಲೇಬೇಕೆನಿಸಿತು ; ಒಂದು ಒಳ್ಳೆಯ ಸಿನೆಮಾ ಬಗ್ಗೆ ಬರೆದು
ಪರಿಚಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ . . .

+++

HEMASHREE
http://www.smilingcolours.blogspot.com | hemzy78@gmail.com |

review ತುಂಬಾ sensitive ಆಗಿ ಇದೆ.ಎರಡೂ ಚಿತ್ರಗಳ ನಡುವಿನ ಸಾಮ್ಯತೆ ಮತ್ತು differencesಗಳನ್ನು ಚೆನ್ನಾಗಿ ವಿಶ್ಲೇಷಿಸಿದ್ದಾರೆ.
what i think is,ನಾವು indians, ನಮ್ಮ cultural setup ಮತ್ತು mindsetಗಳನ್ನು ಇನ್ನೂ ethics , chastity ಅನ್ನೋ ಚೌಕಟ್ಟಿನಲ್ಲೇ ನೋಡ್ತಾ ಇದ್ದೇವೆ.
ಉದಾಹರಣೆ: ಪೂರಣ್‍ಮಾಶಿ – Fullmoon Light , ಚಿತ್ರದ ಕೊನೆಯಲ್ಲಿ ಮಗಳು ಬಾವಿಗೆ ಹಾರುವ ಮೂಲಕ,ತಾಯಿ ತಪ್ಪು ಮಾಡಿದ್ದಾಳೆ ಎನ್ನುವುದನ್ನೇ ಮತ್ತೆ ಹೇಳಿದ ಹಾಗಾಯ್ತು.(ವಿಕ್ರಂ ಅವರ ಬರಹದಲ್ಲಿ , ನಾಯಕ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಅಂತ ಬರೆದಿದ್ದಾರೆ.ನನಗೆ ನೆನಪಿರುವ ಹಾಗೆ, ಮಗಳು ಬಾವಿಗೆ ಹಾರುತ್ತಾಳೆ. ಯಾಕಂದ್ರೆ, ಆಕೆಗೆ ಬೇರೆ ಆಯ್ಕೆ ಇಲ್ವಲ್ಲ. ನಾಯಕ ಕೊನೆಯಲ್ಲಿ ಸಾಯೋ ಹಾಗಾಗಿದ್ದಲ್ಲಿ, ಇಡೀ ಕತೆ ಅರ್ಥವೇ ಬೇರೆ ಆಗ್ತಿತ್ತು. ಒಬ್ಬ ಗಂಡಸು,ಅಂತಹ ನಿಲುವು ತೆಗೆದುಕೊಳ್ಳುತ್ತಾನಾ ಅನ್ನೋದು ಪ್ರಶ್ನೆ.ಅದೂ mainstream cinemaದಲ್ಲಿ.ಸಂದೇಹ !.
indian audience is still not ready for that kind of characterization.
ಇನ್ನೊಂದು ಉದಾಹರಣೆ ನೆನಪಾಯ್ತು: in the film ‘life in a metro’, at the end, shikha ( shilpa shetty )ಕೊನೆಗೂ ತನ್ನ ಕುಟುಂಬವನ್ನೇ ಆಯ್ಕೆ ಮಾಡುತ್ತಾಳೆ. ಅದೂ ತನ್ನ ಗಂಡನ extra marital affair ಬಗ್ಗೆ ತಿಳಿದ ಮೇಲೂ. Indian mainstram cinema has to go a long …way…

+++

ಪಿ ಮಹಮದ್ ಅವರ ವ್ಯಂಗ್ಯಚಿತ್ರಗಳಿಗೆ ಪ್ರತಿಕ್ರಿಯೆ-

Manjunatha swamy
http://hallikannada.blogspot.com | swamycta@gmail.com |

ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಪಿ.ಮಹಮ್ಮದ್ ಅಷ್ಟು ಪರಿಣಾಮಕಾರಿಯಾಗಿ, ಜನಪರವಾಗಿ ಬರೆಯುವ ಮತ್ತೊಬ್ಬ ವ್ಯಂಗ್ಯಚಿತ್ರಕಾರ ಇವತ್ತು ಕರ್ನಾಟಕದಲ್ಲಿಲ್ಲ.ಪ್ರಜ್ಞಾವಂತರ ಮೆಚ್ಚಿನ ಪಿ.ಮಹಮ್ಮದ್ ಅವರ ಕಾರ್ಟೂನ್ ಗಳ ಸಂಕಲನ ಶೀಘ್ರ ಹೊರಬರಲಿ.
– ಮಂಜುನಾಥ ಸ್ವಾಮಿ

+++

ಅಲೆಮಾರಿ
http://olagoo-horagoo.blogspot.com | alemaricta@gmail.com |

ಸ್ವಾಮಿ ಮಾತು ನಿಜ. ಮಹಮ್ಮದ ವ್ಯಂಗ್ಯಚಿತ್ರಗಳು ಎಡಿಟೋರಿಯಲ್ ಇದ್ದ ಹಾಗಿರುತ್ತವೆ. ಅವರ ಸ್ಪಂದನೆ, ಸಂವೇದನೆ ಅದ್ವಿತೀಯ.
ಅವರ ಅದೆಷ್ಟೋ ಕಾರ್ಟೂನ್ ಗಳು ಈಗಲೂ ನೆನಪಾಗುತ್ತವೆ. ಟ್ವೆಂಟಿ ಮ್ಯಾಚ್ ನಂತರ ಗೌಡರು ಫೀಲ್ಡ್ ಅಗೆದಿದ್ದು, ಬಾಂಬ್ ಮಳೆ ಸುರಿದಿದ್ದು, ಸಮ್ಮಿಶ್ರ ಸರ್ಕಾರಕ್ಕೆ ಶಾಸಕರ ಲೋಡ್ ತರಿಸಿದ್ದು…
ಈ ಮಟ್ಟಿಗೆ ರಾಜಕಾರಣಿಗಳ ಮೂರ್ಖತನವನ್ನು, ಭಂಡತನವನ್ನು ಟೀಕಿಸುವವ ವ್ಯಂಗ್ಯಚಿತ್ರಕಾರರು ಮತ್ತೊಬ್ಬರಿಲ್ಲ.
ಮಹಮ್ಮದ್ ಅವರ ಕುಂಚ ಇನ್ನೂ ಮೊನಚಾಗಲಿ…

ತೇಜಸ್ವಿ ಉತ್ಸವ

Previous Older Entries

%d bloggers like this: