ಸಣ್ಣ ಪದ್ಯವೊಂದು ಗಾಂಧಿ ಆಶ್ರಮಕ್ಕೆ ಬಂತು

 

ಗಾಂಧಿ ದಿನ ಹತ್ತಿರವಾಗುತ್ತಿದೆ. ಗಾಂಧಿ ಎಂಬ ಅಜ್ಜನನ್ನು ಆರೋಪಗಳ ಕಟಕಟೆಯಲ್ಲಿ ನಿಲ್ಲಿಸುವ ಮನಸ್ಸುಗಳೂ ಹೆಚ್ಚಿವೆ. ಈ ನಡುವೆ ತಣ್ಣಗೆ ತನ್ನ ಸತ್ವದಿಂದ ಕಾಡಿದ ಕವಿತೆ ‘ಒಳಗೂ…ಹೊರಗೂ..’ಬ್ಲಾಗ್ನಲ್ಲಿ ಸಿಕ್ಕಿತು. ಗಾಂಧಿ ಎಂಬ ಗಾಂಧೀ ಇಲ್ಲಿದಾರೆ ಅನಿಸುತ್ತಿದೆ-   


ಒಂದು ದಿನ ಸಣ್ಣ ಪದ್ಯವೊಂದು
ಗಾಂಧಿ ಆಶ್ರಮಕ್ಕೆ ಬಂತು;
ಗಾಂಧಿಯನ್ನು ನೋಡಬೇಕಿತ್ತು ಅದಕ್ಕೆ.
ಗಾಂಧಿಯ ಕೈಯಲ್ಲಿ ನೂಲಿತ್ತು.
ಬಾಯಲ್ಲಿ ರಾಮನಾಮ.
ಬಾಗಿಲಲ್ಲಿ ನಿಂತಿದ್ದ ಪದ್ಯವನ್ನು
ಅವರು ನೋಡಲೇ ಇಲ್ಲ.
ಪದ್ಯ,
ನಾನೊಂದು ಭಜನೆಯಾದರೂ
ಆಗಬೇಕಿತ್ತು ಅಂದುಕೊಂಡಿತು,
ಗಂಟಲು ಸರಿ ಮಾಡಿಕೊಂಡಿತು. ಗಾಂಧಿ ಬೀರಿದರು ಓರೆ ನೋಟ,
ನರಕವನ್ನೇ ಕಂಡ ತಮ್ಮ
ಕನ್ನಡಕದ ಮೂಲಕ.
‘ಎಂದಾದರೂ ನೂಲುವ ಕೆಲಸ ಮಾಡಿದ್ದೀಯಾ?’
‘ಎಂದಾದರೂ ಜಾಡಮಾಲಿಯ
ಕೈಗಾಡಿ ಎಳೆದಿದ್ದೀಯಾ?’
ಹೊಗೆ ತುಂಬಿದ ಅಡುಗೆ ಮನೆಗೆ
ಯಾವ ಬೆಳಗಿನಲ್ಲಾದರೂ ಹೋಗಿದ್ದೀಯಾ?’
ಪದ್ಯ ಹೇಳಿತು;
‘ನಾನು ಹುಟ್ಟಿದ್ದು ಕಾಡಿನಲ್ಲಿ
ಬೇಟೆಗಾರನ ಬಾಯಲ್ಲಿ
ಬೆಳೆದಿದ್ದು ಮೀನುಗಾರನ
ಪುಟ್ಟ ಗುಡಿಸಲಲ್ಲಿ
ಆದರೂ ನನಗೇನೂ ಬರದು.
ಗೊತ್ತಿರುವುದೊಂದೆ ಹಾಡುವುದು.
ಆಸ್ಥಾನಗಳಲ್ಲಿ ಮೊದಲು ಹಾಡಿದೆ.
ಆಮೇಲೆ ಮೆದುವಾದೆ, ಸುರೂಪಿಯಾದೆ
ಆದರೀಗ ಅರೆ ಹಸಿದು
ಬೀದಿಯಲ್ಲಿದ್ದೇನೆ..’

ಒಳ್ಳೆಯದು ‘ನಿಗೂಢ ನಗೆ ಸೂಸಿ
ಗಾಂಧಿ ಹೇಳಿದರು,
‘ಯಾವಾಗಲೂ ಸಂಸ್ಕೃತದಲ್ಲಿ
ಮಾತನಾಡುವದ ಬಿಡು.
ಹೋಗು ಹೊಲಗಳಿಗೆ
ವ್ಯಾಪಾರಿಗಳಾಡುವ ಮಾತು ಕೇಳು.’

ಪದ್ಯ…
ಬೀಜವಾಗಿ ನೆಲಕ್ಕೆ ಬಿತ್ತು.
ನೇಗಿಲೊಂದು ಮಣ್ಣ ಉತ್ತು
ಹೊಸ ಮಳೆಗೆ ನೆನೆಯಲು ಕಾಯುತ್ತಿತ್ತು.

(ಇದು ಮಲಯಾಳಂ ಖ್ಯಾತ ಕವಿ ಕೆ. ಸಚ್ಚಿದಾನಂದನ್ ಅವರ ಕವಿತೆ. ಬದುಕು ಕಾವ್ಯಕ್ಕಿತ ದೊಡ್ಡದು ಅಂತಿವಲ್ಲ, ಅದಕ್ಕೆ ಇದೂ ಒಂದು ಉದಾಹರಣೆ ಅನಿಸಿತು. ಒಂದೇ ಬಾರಿಗೆ ಕನ್ನಡಕ್ಕೆ ಇಳಿಸಿದ್ದೇನೆ.
ಇನ್ನು ಸಚ್ಚಿದಾನಂದನ್ ಬಗ್ಗೆ. ಸಚ್ಚಿ ಮಲಯಾಳಂ ಭಾಷೆ ನವ್ಯ ಕಾವ್ಯದ ಹರಿಕಾರರಲ್ಲಿ ಒಬ್ಬರು. ಆಧುನಿಕತೆ, ಸಮಾಜವಾದ, ನಗರದ ಸಮೂಹ ಸಂಸ್ಕೃತಿಯ ಒತ್ತಡಗಳು, ಹಾಗೆಯೇ ರಾಜಕೀಯವೂ ಅವರ ಕಾವ್ಯದಲ್ಲಿ ಕಂಡುಬರುತ್ತದೆ. ಅಂಚು ಸೂರ್ಯನ್ ಅವರ ಮೊದಲ ಸಂಕಲನ. ಇದುವರೆಗೂ 19 ಕವಿತೆಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ. ತಮ್ಮ ಕವಿತೆಗಳನ್ನು ಸ್ವತಃ ಸಚ್ಚಿಯವರೇ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಅಲ್ಲದೆ ಲ್ಯಾಟಿನ್ ಅಮೆರಿಕ, ಆಫ್ರಿಕಾದ ಕವಿತೆಗಳನ್ನು ಮಲಯಾಳಂಗೆ ಅನುವಾದಿಸಿದ್ದಾರೆ. )

ನಿಜ.. ಬೆಕ್ಕಿನ ಮರಿ ಬೆಲೆ 35,000 ರೂಪಾಯಿ…!

ಮಲ್ಲಿಕಾರ್ಜುನ ತಿಪ್ಪಾರ ಅವರ ಬ್ಲಾಗ್- ನನ್ನ ಹಾಡು. ಸರಳವಾದ ವಿಷಯಗಳನ್ನು ಸ್ವಾರಸ್ಯಕರವಾಗಿ ಬರೆಯುವ ಮಲ್ಲಿಕಾರ್ಜುನ್ ಅವರು ಇತ್ತೀಚಿಗೆ ೩೫ ಸಾವಿರ ರೂಪಾಯಿಯ ಬೆಕ್ಕನ್ನು ಕಂಡು ‘ಅಬ್ಬಾ’ ಎಂದು ಉದ್ಘಾರವೆತ್ತಿದ್ದಾರೆ – 

ನಿಜ.. ಬೆಕ್ಕಿನ ಮರಿ ಬೆಲೆ 35,000 ರೂಪಾಯಿ…! ಭಾರತ ಬಡವರ ರಾಷ್ಟ್ರ ಅಂತ್ ಯಾರು ಹೇಳ್ತಾರೆ. ಇಷ್ಟೆ ಬೆಲೆಯ ಏಳೆಂಟು ಬೆಕ್ಕಿನ ಮರಿಗಳನ್ನು ಹೊಂದಿರುವ ಒಡೆಯರು ಬೆಂಗಳೂರಿನಲ್ಲಿದ್ದಾರೆಂದರೆ ಹುಬ್ಬೇರಿಸಬೇಡಿ. 

ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ನನ್ನ ಮಾಧ್ಯಮ ಮಿತ್ರ ಯಾವುದೋ ಒಂದು ಫೆಸ್ಟ್ ವರದಿ ಮಾಡಲು ನನ್ನನ್ನು ತನ್ನ ಜತೆ ಕರೆದುಕೊಂಡು ಹೋಗಿದ್ದ. ಅಲ್ಲಿ ಈ ಮಹಾ ದುಬಾರಿಯ ಬೆಕ್ಕು ನನ್ನ ಕಣ್ಣಿಗೆ ಬಿತ್ತು. ಅಷ್ಟೆ ಅಲ್ಲ, ನನ್ನ ಮಿತ್ರ ಅದನ್ನು ತನ್ನ ಕ್ಯಾಮೆರಾ ಕಣ್ಣಿಗೂ ತುಂಬಿಕೊಂಡ.

ತುಂಬಾ ಮುದ್ದಾಗಿದ್ದ ಆ ಬೆಕ್ಕಿನ ಮರಿ ನೋಡೋದಕ್ಕೆ ಕೊಂಚ ನಾಯಿ ಮರಿಯಂತೆ ಇತ್ತು. ನಾನು ಅದನ್ನ ನಾಯಿ ಮರೀನೆ ಅಂತ್ ತಿಳ್ಕೊಂಡಿದ್ದೆ. ಆದರೆ, ಆ ಬೆಕ್ಕಿನ ಮರಿಯ ಒಡತಿಯನ್ನು ಮಾತನಾಡಿಸಿದಾಗ ತಿಳಿದುಬಂತು, ಅದು ಬೆಕ್ಕಿನ ಮರಿ ಅಂತ್, ಅದು ವಿದೇಶದಿಂದ ಅಂದ್ರೆ, ಯುರೋಪಿನಿಂದ ಆಮದು ಮಾಡಿಕೊಂಡದ್ದು.

ಬೆಕ್ಕಿನ ಮರಿ ಒಡತಿ. ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಅವರಿಗೆ ಬೆಕ್ಕುಗಳನ್ನು ಸಾಕುವುದು ಹವ್ಯಾಸವಂತೆ. ಅದು ವಿದೇಶಿ ಬೆಕ್ಕುಗಳು (!). ಇದೇ ಮಾದರಿಯ ಸುಮಾರು ಏಳೆಂಟು ಬೆಕ್ಕುಗಳನ್ನು ಸಾಕಿಕೊಂಡಿದ್ದಾರಂತೆ. ನಾನು ನೋಡಿದ ಬೆಕ್ಕಿನ ಬೆಲೆ ಯುರೋ ಲೆಕ್ಕದಲ್ಲಿ 7 ರಿಂದ 8 ನೂರು ಯುರೋ ಅಂತೆ. ಅಂದ್ರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 35 ಸಾವಿರು ರೂಪಾಯಿಯಂತೆ. ಈ ವಿವರ ನೀಡಿದ್ದು ಕೂಡಾ ಅವರೆ. ಆದರೆ, ಅವರ ಹೆಸರು ಕೇಳೋದನ್ನು ಮರೆತು ಬಿಟ್ಟೆ.

ಮತ್ತೊಬ್ಬ ಮಿತ್ರ “ಈ ಬೆಕ್ಕು ಇಲಿ ಹಿಡಿಯುತ್ತಾ…” ತರ್ಲೆ ಪ್ರಶ್ನೆ ಕೇಳಿದ. ಅದಕ್ಕೆ ಅವರು “ಗೊತ್ತಿಲ್ಲ.. ಹೊರಗಡೆ ಬಿಟ್ಟು ನೋಡಿಲ್ಲ” ಅಂದ್ರು. (ಇಲಿ ಹಿಡಿಯುತ್ತೆ, ಇಲಿ ತಂದು ಬಿಡಿ ಎಂಬ ಭಾವನೆಗಳು ಆಗ ಅವರ ಮುಖದಲ್ಲಿದ್ದವು). ಈ ಮಾತಿಗೆ ನಾವು ಎಲ್ಲರು ನಕ್ಕೇವು. 
****

ಸ್ವಲ್ಪ ಯೋಚಿಸಿ, ಸುಮಾರು 35,000 ರೂಪಾಯಿ ಬೆಲೆಯ ಏಳೆಂಟು ಬೆಕ್ಕಿನ ಮರಿಗಳನ್ನು ಸಾಕುವ ಹವ್ಯಾಸಿಗರು(ಹಣವಂತರು) ನಮ್ಮಲ್ಲಿದ್ದಾರೆ. ಹೀಗಿರಬೇಕಾದರೆ, ಭಾರತ ಹೇಗೆ ಬಡ ರಾಷ್ಟ್ರವಾಗೋಕೆ ಸಾಧ್ಯ ಅಲ್ವಾ. 

35 ಸಾವಿರು ರೂಪಾಯಿಯಲ್ಲಿ ಗ್ರಾಮೀಣ ಪ್ರದೇಶದ ಓರ್ವ ಬಡ ಹುಡುಗ ಪಿಯೂಸಿ ವರೆಗೆ ಶಿಕ್ಷಣ ಪೂರೈಸಬಲ್ಲ. ಅಂದ್ರೆ ಅಂತ ಏಳೆಂಟು ಬೆಕ್ಕಿನ ಮರಿಗಳನ್ನು ಸಾಕಿಕೊಂಡಿರುವ ಒಡತಿ ಸುಮಾರು ಏಳೆಂಟು ಹುಡುಗರಿಗೆ ಶಿಕ್ಷಣ ನೀಡಬಹುದಾಗಿತ್ತು. ಅಲ್ವಾ, ನಮ್ಮ ದೇಶದಲ್ಲಿ ಇಂತಹುದನ್ನು ಕೇಳಬೇಡಿ. ಬೇಡವಾದಕ್ಕೆ ದುಡ್ಡು ಸುರಿಯೋ ಜನ ಬೇಜಾನ್ ಇದ್ದಾರೆ. ಯಾವುದಾದರೂ ಒಂದು ಒಳ್ಳೆಯ ಕಾರ್ಯ, ಬಡವರಿಗೆ ಸಹಾಯವಾಗುವಂಥದಕ್ಕೆ ದುಡ್ಡು ಕೇಳಿದರೆ ಅವರ ಹತ್ರ, ದುಡ್ಡು ಇರಲ್ಲ.

ಅಷ್ಟಕ್ಕೂ ಅದು ಅವರ ದುಡ್ಡು. ಅವರು ಬೆಕ್ಕು ಅಥವಾ ನಾಯಿಯನ್ನಾದರೂ ಖರೀದಿಸುತ್ತಾರೆ. ಅದನ್ನು ಕೇಳೊ ಹಕ್ಕು ನಮಗೆ ಇಲ್ಲ. ಆದರೆ, ಪ್ರತಿಯೊಬ್ಬನಿಗೂ ಸಮಾಜ ಋಣ ಇರುತ್ತಲ್ಲ. ಬೆಕ್ಕಿಗೆ, ನಾಯಿಗೆ ಲಕ್ಷಾಂತರ ಖರ್ಚು ಮಾಡೊ ಜನ, ಅದರಲ್ಲಿ ಕೊಂಚ ಭಾಗವನ್ನಾದರೂ ಹಳ್ಳಿಯಲ್ಲಿರುವ ಪ್ರತಿಭಾವಂತ ಬಡಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದರೆ, ಒಂದು ಕುಟುಂಬ ಬದುಕುತ್ತದೆ. ಇಂದಿಗೂ ಹಳ್ಳಿಯಲ್ಲಿ ಅನೇಕ ಪ್ರತಿಭಾವಂತ ಹುಡುಗರು ದುಡ್ಡಿನ ಆಸರೆ ಇಲ್ಲದೇ, ತಮ್ಮ ಓದನ್ನು ಅರ್ಧಕ್ಕೆ ನಿಲ್ಲಿಸಿ, ಕೂಲಿ-ನಾಲಿ ಮಾಡುತ್ತಿದ್ದಾರೆ. ಇಂಥವರಿಂದ ಅಂಥವರಿಗೆ ಸ್ವಲ್ಪವಾದರೂ ಸಹಾಯವಾದರೆ ನಮ್ಮ ಹಳ್ಳಿಗಳು, ಹಳ್ಳಿಗರು ಉದ್ದಾರವಾಗುತ್ತಾರೆ.

ಅಷ್ಟಕ್ಕೂ ನಾಯಿ, ಬೆಕ್ಕು ಸಾಕೋದು ತಪ್ಪಲ್ಲ. ಆದರೆ, ಅವುಗಳ ಮೇಲೆ ಖರ್ಚು ಮಾಡೋ ಹಣದಲ್ಲಿ ಕಾಲು ಭಾಗವನ್ನಾದರೂ ಬಡವರಿಗೆ ಕೊಟ್ಟರೆ, ದೇಶ ಉದ್ದಾರವಾದೀತು.

ಹೋಗ್ಲಿ ಬಿಡಿ.. ಇದನ್ನೆಲ್ಲ ಹೇಳೋದಕ್ಕೆ ನಾನ್ಯಾರು ..?? ನೀವು ಯಾರು.. ಅಲ್ವಾ ??

%d bloggers like this: