ಈ ಫೋಟೋ ನೋಡಿದಿರಾ?

ಇದು ಅಪರೂಪದ ಫೋಟೋ. ಸುಶ್ರುತ ದೊಡ್ಡೇರಿ ಇದನ್ನು ‘ಚುರುಮುರಿ’ಯಲ್ಲಿ ಗಮನಿಸಿ ನಮಗೆ ಕಳಿಸಿಕೊಟ್ಟಿದ್ದಾರೆ. ಇದರ ಸ್ವಾರಸ್ಯಕರ ಕಥೆಗೆ ‘ಚುರುಮುರಿ’ ಗೆ ಭೇಟಿ ಕೊಡಿ.

ಮೊಗಳ್ಳಿ ಮತ್ತು ಕುಂ ವೀ

ಕನ್ನಡದ ಇಬ್ಬರು ಮುಖ್ಯ ಸಾಹಿತಿಗಳು ಈ ಭಾನುವಾರ ಬೆಂಗಳೂರಿನಲ್ಲಿರುತ್ತಾರೆ. ಕುಂ ವೀರಭದ್ರಪ್ಪ ಹಾಗೂ ಮೊಗಳ್ಳಿ ಗಣೇಶ್ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ನೀಡಿದ್ದಾರೆ. ಮೊಗಳ್ಳಿ ಗಣೇಶ್ ಅವರ ಮೂರು ಕೃತಿಗಳನ್ನು ಚನ್ನಪಟ್ಟಣದ ಪಲ್ಲವ ಪ್ರಕಾಶನ ಪ್ರಕಟಿಸಿದ್ದು ಯು ಆರ್ ಅನಂತಮೂರ್ತಿ ಅವರು ಬಿಡುಗಡೆ ಮಾಡಲಿದ್ದಾರೆ. ಕೆ ಟಿ ಶಿವಪ್ರಸಾದ್. ಕಿ ರಂ ನಾಗರಾಜ್, ಜಿ ಪಿ ಬಸವರಾಜು, ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ ಕೃಷ್ಣಮೂರ್ತಿ ಹನೂರು ಮುಖ್ಯ ಅತಿಥಿಗಳು.


ಕುಂ ವೀರಭದ್ರಪ್ಪ ಅವರ ಸಾಹಿತ್ಯದ ಬಗ್ಗೆ ಒಂದು ಭಿನ್ನ ರೀತಿಯ ಕಾರ್ಯಕ್ರಮವನ್ನು ಛಂದ ಪ್ರಕಾಶನ ಆಯೋಜಿಸಿದೆ. ರಾಯಲ ಸೀಮೆ ಎಂಬ ಕತೆಯೂ, ಕುಂ ವೀ ಎಂಬ ಮಾಂತ್ರಿಕನ ಜೊತೆಯೂ..ಮಂಥನದಲ್ಲಿ ಕಿ ರಂ ನಾಗರಾಜ್, ಓ ಎಲ್ ನಾಗಭೂಷಣ ಸ್ವಾಮಿ ಹಾಗೂ ಮಂಜುನಾಥ್ ಲತಾ ಇರುತ್ತಾರೆ. ವಿಕ್ರಮ್ ವಿಸಾಜಿ, ಆನಂದ ಋಗ್ವೇದಿ, ಕವಿತಾ ಕುಸುಗಲ್ಲ ಅವರು ಸಂವಾದ ನಡೆಸುತ್ತಾರೆ. ಇದರೊಂದಿಗೆ ಕುಂ ವೀ ಕಥೆ ‘ದೇವರ ಹೆಣ’ ಏಕಪಾತ್ರಾಭಿನಯವೂ ಇದೆ.

ಇಬ್ಬರೂ ಬಿಚ್ಚಿಡುವ ಹೊಸ ಲೋಕಕ್ಕೆ ತೆರೆದುಕೊಳ್ಳಲು ಇದು ಸದವಕಾಶ.

ಮತ್ತೆ ಮಳೆ ಹೊಯ್ಯುತಿದೆ…ಎಲ್ಲ ನೆನಪಾಗುತಿದೆ..

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..

ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಸುರಿಯುವ ಮಳೆ ಕಂಡು ಅವಳಿಗೆ ಅವಳೂರು ನೆನಪಾಗಿ ಹೊಟ್ಟೆಕಿಚ್ಚಾಗುತ್ತದೆ. ಊರಲ್ಲಾದರೆ ಮಳೆಗಾಲದಲ್ಲಿ  ನಾಲ್ಕು ತಿಂಗಳು  ಒಂದೇ ಸಮ ತೊಯ್ದು ಖುಷಿಪಡುವ ಅವಳಿಗೆ ಬೆಂಗಳೂರಿನ ಮಳೆಯಲ್ಲಿ ಅಂಥಹ  ವಿಶೇಷತೆ ಕಾಣುವುದಿಲ್ಲ. ಆದರೂ ಆಗಾಗ ಒಂದೇ ಸಮನೆ ಹುಯ್ಯುವ ಮಳೆಯ ಸೊಬಗನ್ನು  ಎಷ್ಟಾಗುತ್ತೋ ಅಷ್ಟನ್ನಾದರೂ ಸವಿಯುವ ಆಸೆ. ಕಛೇರಿ ಕಿಟಕಿಯಿಂದಲೇ ನೋಡಿ ತೃಪ್ತಿಪಡುತ್ತಾಳೆ.

ಅಪರೂಪಕ್ಕೊಮ್ಮೊಮ್ಮೆ ಅವಳು ಮನೆಯಲ್ಲಿದ್ದಾಗ ಧೋ ಎಂದು ಮಳೆ ಸುರಿಯತೊಡಗುತ್ತದೆ. ಅದನ್ನವಳು ತನ್ನ  ಸೌಭಾಗ್ಯವೆಂದೇ ತಿಳಿದುಕೊಳ್ಳುತ್ತಾಳೆ. ಸದ್ಯ ಸಿಕ್ಕಿದ್ದನ್ನು ಇಂಚಿಂಚು ಸವಿಯಲು ಮುಂದಾಗುತ್ತಾಳೆ.   ಆಕಾಶ ಕಪ್ಪಾಗಿ ಇನ್ನೇನು ಮಳೆಬಂದೇ ಬಿಡ್ತು ಅನ್ನುವ ಹೊತ್ತಿಗೆ ತನ್ನ ಕೊನೆಯ ಎಲ್ಲ ಕಿಟಕಿಗಳನ್ನು ತೆರೆದು ಬೆಚ್ಚನೆಯ ಬೆಡ್ ಶೀಟ್ ಒಳಗೆ ಸೇರಿ ಹಾಗೆ ಗೆರೆಗೆರೆಯಾಗಿ ಸುರಿಯವ ಹನಿಗಳನ್ನು ಒಂದೇ ಸಮ ನೋಡುತ್ತಾಳೆ.  ಊರಲ್ಲಾದರೆ ಹೆಂಚಿನ ಮನೆ. ಹೆಂಚುಗಳ ಮೇಲೆ ಬಿದ್ದ ಹನಿಗಳ ಸದ್ದನ್ನು ಆಲಿಸುವುದೇ ಒಂದು ಮಜ. ಅಂಥಹ ಮೋಡಿ ಇಲ್ಲಿಲ್ಲದಿದ್ದರೂ ಆಗಾಗ ಕಿಟಕಿಯಿಂದ ಒಳಬಂದು ಮುಖಕ್ಕೆ ಸಿಂಚನ ಗೈಯ್ಯುವ ಹನಿಗಳು ಎಲ್ಲಿಂದೆಲ್ಲೋ  ಕರೆದೊಯ್ಯತ್ತವೆ.

ಅವಳೂರಿನ  ಕರಾವಳಿ ತೀರ, ಸಹ್ಯಾದ್ರಿ, ಹಸಿರು ಸಿರಿಯ ನಡುವೆ ನಿಂತ ಆ ಶಾಲೆ, 10ನೇ ತರಗತಿಯ ಆ ಕೋಣೆ, ಎದುರಿನ ಬೆಂಚಲ್ಲಿ ಅವಳು, ಪಕ್ಕದ ಬೆಂಚಿನ ಮೂಲೆಯಲ್ಲಿ ಅವನು. ಇನ್ನೂ ಜೀವಂತವಾಗಿರುವ ಆ ಪತ್ರ ಇವೆಲ್ಲ ನೆನಪಾಗಿ ಮತ್ತೆ ಮಗ್ಗಲು ಬದಲಿಸುತ್ತಾಳೆ. ಯಾಕೋ ಮೈಮುರಿಯಲು ಮನಸ್ಸಾಗುತ್ತದೆ. ಕಾಲುಗಳು ಕಿರಿದಾಗಿ ಕೈಗಳು ಎದೆಗೆ ತಾಕಿ ಮೈ ಪೂರ್ತಿ ಬೆಂಡಾಗಿ ಇಡೀ ದೇಹ ಅವ್ಯಕ್ತ ಖುಷಿಯ ಮೋಡಿಗೆ ಒಳಗಾಗತೊಡಗುತ್ತದೆ..

ಇದ್ದಕ್ಕಿದ್ದಂತೆ  ಬಡಿದ ಸಿಡಿಲಿಗೆ ಒಮ್ಮೆ ಬೆಚ್ಚಿಬಿದ್ದಂತಾಗಿ ಮತ್ತೆ  ತನ್ನನ್ನು ತಾನು ಸಾವರಿಸಿಕೊಂಡು ಹೊರನೋಡುತ್ತಾಳೆ. ಇನ್ನೂ ಮಿಂಚುತ್ತಲೇ ಇದೆ. ಇದೇ ರೀತಿ 11ನೇ ವರ್ಷಕ್ಕೇ ತನ್ನ ಹೃದಯದಲ್ಲೂ ಮಧುರ ಮಿಂಚೊಂದು ಹುಟ್ಟಿ ನೂರು ಕಂಪನಗಳನ್ನು ಮೂಡಿಸಿದ್ದು ನೆನಪಾಗುತ್ತದೆ…

… 3 ವರ್ಷದ ಬಳಿಕ ಅವನು ಅದೇ ಶಾಲೆಗೆ ಹಾಜರಾಗಿದ್ದ. ಮತ್ತೆ ಅವನನ್ನು ನೋಡುತ್ತೇನೆಂದಾಗಲಿ, ತನ್ನ ಪಕ್ಕದ ಬೆಂಚಲ್ಲೇ ಅವನು ಕುಳಿತುಕೊಳ್ಳಬಹುದೆನ್ನುವ ಕಲ್ಪನೆಯೂ ಇರದ ಅವಳು ಒಮ್ಮೆಲೇ ಬೆಚ್ಚಿಬೀಳುತ್ತಾಳೆ. ಆದರೆ ಅವಳೆಡೆಗೆ ನೋಡಿದವನೇ ಅವನು ಒಂದು ಹೂನಗೆ ಬೀರಿದ್ದು, ತನ್ನನ್ನು ಇನ್ನು ಮರೆತಿಲ್ಲ ಎಂದುಕೊಂಡು ಅವಳು ಪುಳಕಿತಳಾಗುತ್ತಾಳೆ. .

ಅಂದಿನಿಂದ ಶುರು. ಶಾಲೆಯ ಬೆಲ್ ಯಾವಾಗ ಬಾರಿಸತ್ತೋ ಎಂದು ಕಾಯುವ ಕೆಲಸ. ಶಾಲೆ ಬಿಡುತ್ತಿದ್ದಂತೆ ಅಲ್ಲಿಂದ ಮುಂದಕ್ಕೆ ಸಾಗುವ ಹಾದಿಯುದ್ದಕ್ಕೂ  ಅವನು ಹಿಂದೆ ಹಿಂದೆ ನಡೆದರೆ ಅವಳು ಮುಂದೆ ಮುಂದೆ. ಅವನು ತನ್ನ ಹಿಂದೆಯೇ ಇದ್ದಾನೆ ಎನ್ನೋ ಖುಷಿಗೆ ಅವಳು ರಸ್ತೆಯಲ್ಲಿ ಹರಿಯುವ ನೀರಲ್ಲಿ ಆಟವಾಡುತ್ತಾ ಸಾಗುತ್ತಾಳೆ.

ಎಡಬಿಡದೆ ಸುರಿಯುವ ಮಳೆಗೆ ಡಾಂಬರ್ ರಸ್ತೆ ಕ್ಲೀನೋ ಕ್ಲೀನು. ಶುದ್ಧ ಸ್ಪಟಿಕದಂತೆ ಪಾದಗಳಡಿ ಹರಿಯುವ ನೀರನ್ನು ಕಾಲಿನಿಂದ ಎದುರಿಗಿದ್ದವರ ಮೇಲೆ ಬೀಳಿಸುತ್ತ ಮಂಗಾಟವಾಡುತ್ತಾ ಹುಡುಗರೆಲ್ಲ ಸಾಗಿದರೆ ಹಿಂದಿನಿಂದ ಅವಳ ಬೆನ್ನಿಗೆ ಒಂದೇ ಸಮ ರಪರಪನೆ ಬೀಳುವ ನೀರು ಆತ ಕಾಲಿನಿಂದ ದೂಡಿದ್ದೇ ಎಂಬುದು ಅರಿವಾಗಿ ಅವಳ ಮನಸ್ಸು ಇನ್ನಷ್ಟು ಪುಳಕಗೊಳ್ಳುತ್ತದೆ.

ಹಿಂತಿರುಗಿ ನೋಡುವ ಬಯಕೆ. ಅದೇನೋ ನಾಚಿಕೆ. ಇನ್ನು ಕೆಲವೇ ಕ್ಷಣಗಳಲ್ಲಿ ಅವರಿಬ್ಬರ ದಾರಿ ಬೇರೆಯಾಗಬೇಕು. ಅಷ್ಟರಲ್ಲೊಮ್ಮೆ ಅವನನ್ನು ಕಣ್ತುಂಬಿಕೊಳ್ಳುವ ಆಸೆ. ಮತ್ತೆ ನೋಡಲು ಇನ್ನು ಒಂದು ದಿನ ಕಾಯಬೇಕು. ಇನ್ನೆಲ್ಲೋ ನೋಡಿದಂತೆ ಒಮ್ಮೆ ಹಿಂತಿರುಗಿ ಅವನನ್ನೊಮ್ಮೆ ನೋಡಿಯೇ ಬಿಡುತ್ತಾಳೆ. ಅವನೋ ಸಿಕ್ಕಿದ್ದೇ ಛಾನ್ಸು ಅಂತ ಕಣ್ಣುಮಿಟುಕಿಯೇ ಬಿಡುತ್ತಾನೆ. ಇವಳು ಮಳೆಯಲ್ಲಿಯೂ  ಬೆವರುತ್ತಾಳೆ.

ಒಂದು ರೀತಿಯಲ್ಲಿ ಅವಳದು ಅವ್ಯಕ್ತ ಪ್ರೇಮ. 5ನೇ ಕ್ಲಾಸಿನಲ್ಲಿ ಗುಪ್ತವಾಗಿ ಹರಿದ ಚಿಕ್ಕ ತೊರೆಯೊಂದು 10ನೇ ಕ್ಲಾಸಿಗೆ ಬರುವ ವೇಳೆ ನದಿಯಂತೆ ಮೈದುಂಬಿಕೊಂಡುಬಿಟ್ಟಿದೆ . ಸುತ್ತೇಳು ಹಳ್ಳಿಗಳಿಗೆ ಶ್ರೀಮಂತ ತಂದೆಯ ಕೊನೆಯ ಮಗ. ಹಠಮಾರಿ ಹುಡುಗ ಕಾನ್ವೆಂಟ್ ನಲ್ಲಿ ಸರಿಯಾಗಿ ಓದುತ್ತಿಲ್ಲ ಎಂದು 5ನೇ ಕ್ಲಾಸಿಗೆ  ಕನ್ನಡ ಶಾಲೆಗೆ ಎತ್ತು ಹಾಕಿದ್ದರು ಅವರಪ್ಪ.

ಅಂದೇ ಇರಬೇಕು.ಅವಳಿಗೆ ಮೊಟ್ಟಮೊದಲ ಬಾರಿಗೆ ಅಕ್ಷರಗಳು ಉಲ್ಟಾ ಪುಲ್ಟಾ ಕಾಣತೊಡಗಿದ್ದು. ಕ್ಲಸಿನಲ್ಲಿ ಅವಳೇ ಬುದ್ದಿವಂತೆ.ಟೀಚರ್ಸ್ ಗೆಲ್ಲ ಅಚ್ಚುಮೆಚ್ಚು. ಅದಕ್ಕೆ ಅವನು ಒಮ್ಮೆ ಅವಳತ್ತ ನೋಡಿ ತುಂಟ ನಗೆ ಬೀರಿದ್ದ.ಇವಳು ಇನ್ನೇನೋ ಅಂದುಕೊಂಡು ಕೈಯ್ಯಲ್ಲಿದ್ದ ಪುಸ್ತಕವನ್ನು ಬರಿದಾದ ಎದೆಗವುಚಿಕೊಂಡಿದ್ದಳು. ಗುಳಿ ಬೀಳುವ ಅವನ ಕೆನ್ನೆ ಕಂಡು ಅವಳಿಗೆ ವಿಚಿತ್ರ ಅನುಭವವಾಗಿತ್ತು. ಬಿಟ್ಟು ಬಿಡದೇ ಸದಾ ಪಾಠ ಓದಿನಲ್ಲಿ ಮುಳುಗಿರುತ್ತಿದ್ದ ಅವಳಿಗೆ ಅಂದಿನಿಂದ  ಅವನ ಗುಂಗು ಹಿಡಿದು ಬಿಟ್ಟಿತ್ತು. ಎಲ್ಲೆಲ್ಲೂ ಅವನೇ .

ಏನಿದು ಯಾರಿಗೂ ಹೇಳಲಾರದ ಅನುಭವ. ಹಂಗೂ ಹಿಂಗೂ ಎರಡು ವರ್ಷ ಕಳೆದಿತ್ತು. ಅವನಪ್ಪ ಮತ್ತೊಂದು ಇಂಗ್ಲೀಷ್ ಮಿಡಿಯಂ ಸ್ಕೂಲಿಗೆ ಎತ್ತಾಕಿದ್ದರು. ಅದು ಅವಳ ಪುಟ್ಟ ಹೃದಯಕ್ಕೆ ಸಾಕಷ್ಟು ನೋವು ನೀಡಿತ್ತು. ಈ ಮಧ್ಯೆ ಪರೀಕ್ಷೆ, ಹಿಂದಿ ಅಕ್ಷರ ಕಲಿಕೆ ಅಂತ  ಸ್ವಲ್ಪ ಕಾಲ ಅವನು ಮರೆತು ಹೋಗಿದ್ದ. ಈಗ ಮತ್ತೆ ಆತ ಎದುರಾಗಿದ್ದಾನೆ. ಅವರಪ್ಪ ಕೀಟಲೆ ಮಗನನ್ನು ಹೆಂಗಾದರೂ ಸಂಭಾಳಿಸಿ ಅಂತ ಮತ್ತೆ ಅದೇ ಶಾಲೆಗೆ ತಂದಾಕಿದ್ದಾರೆ. ಮೊದಲೇ ಸುಂದರಾಂಗ. ಚಿಗುರು ಮೀಸೆ  ಬೇರೆ ಮೂಡಿ  ಇನ್ನೊಂದಿಷ್ಟು ಹುಡುಗಿಯರ ಕನಸಲ್ಲೂ ಅವನು ಬರತೊಡಗಿದ್ದ.

ಒಂದನೇ ತರಗತಿಯಿಂದ ಹಿಡಿದು ಇಲ್ಲಿಯವರೆಗೂ ಅವಳು ಮುಂದಿನ ಬೆಂಚಿನಲ್ಲಿಯೇ ಕುಳಿತಿದ್ದಾಳೆ. ಅಕ್ಕ ಪಕ್ಕ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ತನ್ನಲ್ಲೇ ತಾನು ಮಗ್ನಳಾಗಿ ಇರುವ ಅವಳಿಗೆ ಈಗೀಗ ಎಲ್ಲವೂ ಮಧುರ ಎನಿಸುತ್ತಿದೆ. ಕ್ಷಣಕ್ಕೊಮ್ಮೆ ಅವಳ ದೃಷ್ಟಿ ಎಡಕ್ಕೆ ಹೊರಳುತ್ತದೆ. ಬೆಳಗಿನ ಜಾವ ಯಾವಾಗ ಆಗುತ್ತೋ ಎಂದು ಕಾಯುವ ಅವಳಿಗೆ ಎಂದು ಶಾಲೆ ತಲುಪುವೆನೋ ಎಂಬ ಗಡಿಬಿಡಿ  ಇರುತ್ತದೆ.

ತನ್ನ ಗೆಳತಿಯರಿಗೂ  ಅವಳು ಇತ್ತಿತ್ತಲಾಗೆ ಬೇಗನೆ ಬರುವಂತೆ ಹೇಳಿದ್ದಾಳೆ .ಅವರಿಗೋ ಎಲ್ಲ ಕಾಲಕ್ಕೂ  ಇವಳ ಸಹಾಯ ಬೇಕೇ ಬೇಕು.ಅವಳು ಹೇಳಿದ ಮಾತನ್ನು ಮೀರಲಾರರು. ಮನೆಯಲ್ಲಿ ಪಾಠ ಮಣ್ಣು,ಮಸಿ ಇದೆ ಎಂದು ಸುಳ್ಳು ಹೇಳಿ ಬರುವ ಅವರೊಂದಿಗೆ ಇವಳೂ ಕ್ಲಾಸ್ಸಿಗೆ ತೆರಳುತ್ತಾಳೆ.ಅವನು ಬರುವ ಸರಿಯಾದ ಸಮಯ ನೋಡಿ ಕ್ಲಾಸಿನ ಎದುರು ಸುಮ್ಮನೆ ನಿಂತುಕೊಳ್ಳುವುದು ಇವರ ದಿನಿತ್ಯದ ಕೆಲಸ, ಮಹಾರಾಜನಂತೆ ಸುತ್ತ ಮುತ್ತ ನಾಲ್ಕೈದು ಹುಡುಗರ ಮಧ್ಯೆಯೇ ಬರುವ ಅವನನ್ನು ಕಂಡು ಇವಳಿಗೆ ಕೋಪ. ಅವನತ್ತ ನೋಡಿದರೆ ಉಳಿದವರು ಇವಳನ್ನು ತಿನ್ನುವಂತೆ ನೋಡುತ್ತಾರೆ. ಅವನನ್ನು ಕಣ್ತುಂಬಿ ನೋಡುವ ಅವಕಾಶಕ್ಕಾಗಿ ಅವಳು ಕಾದಿದ್ದಾಳೆ ಆದರೆ ಅದೇಕೋ ಅವನು ಒಂಟಿಯಾಗಿ ಇವಳಿಗೆ ಸಿಕ್ಕಿದ್ದೇ  ಇಲ್ಲ.

ಆಶ್ಚರ್ಯವೆಂದರೆ ಎಷ್ಟೇ ಹುಡುಗರ ಮಧ್ಯೆಯೂ ಅವನೊಮ್ಮೆ ಇವಳನ್ನು ನೋಡಿ ಮುಗುಳ್ನಗೆ ಬೀರುತ್ತಾನೆ. ತುಟಿಯಂಚಿನಲ್ಲಿ ಏನೋ ಹೇಳಲು ಹೊರಟಂತೆ ಅವಳನ್ನು ಇನ್ನಿಲ್ಲದಂತೆ ಓಲೈಸುತ್ತಾನೆ. ಅವನು ತನ್ನನ್ನು  ಗಮನಿಸುತ್ತಾನೆ ಎನ್ನೋದೇ ಅವಳಿಗೆ ಸಾಕಷ್ಟು ಖುಷಿ ನೀಡಿದೆ.

ಅವನ ಸೌಂದರ್ಯ ಅವನ ನಗುವನ್ನು ಮೆಲುಕು ಹಾಕುವುದು ಅವಳಿಗೀಗ ಅಭ್ಯಾಸ ಆಗಿ ಬಿಟ್ಟಿದೆ. ಅವನ ನಾಜೂಕು ಕೂದಲುಗಳು ಗಾಳಿಗೆ ಎಡತಾಕಿ ಹಾರಿದಾಗಲೆಲ್ಲ ಅವಳು ಸಂಭ್ರಮಿಸುತ್ತಾಳೆ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಅವಳ ಬದುಕಿನಲ್ಲೂ ಬಿರುಗಾಳಿ ಎದ್ದುಬಿಡುತ್ತದೆ, ಮಲೆನಾಡ ಭಾಗದಿಂದ ಕರಾವಳಿಗೆ ಬೆಳ್ಳಗಿನ  ಹುಡುಗಿಯ ಆಗಮನ. ಅವಳೆಡೆಗೆ ಇವನ ಗಮನ. ಆಕೆ ಸುಂದರಿ ಚೆಲುವೆ, ಇವಳಷ್ಟು ಬುದ್ಧಿವಂತೆ ಅಲ್ಲದಿದ್ದರೂ ಒಮ್ಮೆ ನೋಡಿದರೆ ಮನಸ್ಸಿನಲ್ಲೇ ಕಚ್ಚಿಕೊಂಡು ಉಳಿಯುವಾಕೆ.

ಹೊಸಬಳೊಂದಿಗೆ ಸ್ನೇಹವೇನೋ ಆಗುತ್ತದೆ. ಆದರೆ ಎಡಗಡೆಯ ಕೊನೆಯ ಬೆಂಚಿನಲ್ಲಿ ಕುಳಿತ ಅವನ ಕಣ್ಣುಗಳು ಇತ್ತಿತ್ತಲಾಗಿ ಹಿಂದಿನ  ಬೆಂಚಿನಲ್ಲಿ  ಕುಳಿತ ಹೊಸಬಳ ಕಡೆಗೆ ತಿರುಗುತ್ತಿರುವುದು ಅವಳ ಗಮನಕ್ಕೆ ಬರದೇ ಇಲ್ಲ. ಇರಲಿಕ್ಕಿಲ್ಲ ಎಂದುಕೊಂಡರೂ ಮನಸ್ಸು ಕೇಳದು. ಹೆಂಗ್ಹೆಂಗೋ ತನ್ನನ್ನು  ಸಂಭಾಳಿಸಿಕೊಳ್ಳುವ ಅವಳಿಗೆ ಇದ್ದಕ್ಕಿದ್ದಂತೆ ಕಸಿವಿಸಿ ಎನಿಸತೊಡಗುತ್ತದೆ. ಎಲ್ಲರ ಮೇಲೂ ಕೋಪ ಬರತೊಡಗುತ್ತದೆ. ಅಂದು ಶಾಲೆಯ ಬೆಲ್ ಬಾರಿಸುತ್ತಲೇ ಒಂದೇ ಸಮ ಓಡುವ ಅವನು ಹೊಸಬಳ ಭುಜಕ್ಕೆ ತನ್ನ ಭುಜ ತಾಗಿಸುತ್ತಲೇ ಅಲ್ಲಿಗೆ ಒಂದು ಮಧುರ ಅಧ್ಯಾಯದ ಕೊನೆಯಾದಂತೆ ಅವಳಿಗೆ ಅನಿಸುತ್ತದೆ. ಆದರೆ  ಮನದ ಮೂಲೆಯಲ್ಲಿ ಕಿಚ್ಚಾಗಿ ಹರಿವ ನೋವು ಪತ್ರದ ರೂಪ ತಾಳುತ್ತದೆ. ಹಿಂದೆ ಮುಂದೆ ನೋಡದೇ ಮುದ್ದಾದ ಅಕ್ಷರದಲ್ಲಿ ಅವಳು ಬರೆದೇ ಬಿಡುತ್ತಾಳೆ.

ಭುಜ ತಾಗಿಸುವುದರ ಅರ್ಥ ಏನು ಅಂತ.. ಅವನೋ ಅದಕ್ಕೊಂದು ಉತ್ತರ ಬರೆಯುತ್ತಾನೆ. ನೀನು ಬುದ್ದಿವಂತೆ ನಿನ್ನನ್ನು ಯಾರು ಇಷ್ಟ ಪಡಲ್ಲ ಹೇಳು.ಎಲ್ಲರಿಗಿಂತ ನೀನೆ ಇಷ್ಟ….ಇದರ ಅರ್ಥ ಏನು..ಸುಮ್ಮಸುಮ್ಮನೆ ಇನ್ನೊಬ್ಬಳ ಭುಜ ತಾಗಿಸೋಕಾಗುತ್ತಾ. ಅವಳಿಗೆ ಉತ್ತರ ಸಿಗುವುದಿಲ್ಲ. ಆದರೆ ತನ್ನ ಪತ್ರಕ್ಕೆ ಅವನು ಉತ್ತರ ಬರೆದಿದ್ದಾನಲ್ಲಾ ಎನ್ನುವುದೇ ಅವಳಿಗೆ ಖುಶಿಖುಶಿಯ ವಿಷಯ.
ತುಂಬಿದೆದೆಗೆ ಕಾಗದವನ್ನು ಅವಚಿಕೊಳ್ಳುವ ಅವಳು ಅದನ್ನು ಕಣ್ತುಂಬ ನೋಡುತ್ತಾಳೆ. ಒಂದಲ್ಲ , ಎರಡಲ್ಲ ಹತ್ತಾರು ಸಾವಿರಾರು ಸಲ ಓದುತ್ತಾಳೆ.

ಎಷ್ಟೋ ವರ್ಷ ಓದುತ್ತಲೇ ಇದ್ದಳು. ಎಸ್ಸೆಸ್ಸೆಲ್ಸಿ ನಂತರ ಅವನೆಲ್ಲಿಗೆ ಹೋದ  ಎಂಬುದು ಅವಳಿಗೆ ತಿಳಿಯಲಿಲ್ಲ. ಅವನ ಮನೆಯ ಕಪ್ಪುಗ್ಲಾಸಿನ ಆ ಕಾರು ಅವಳೂರಿನ ರಸ್ತೆಯಲ್ಲಿ ಹಾದು ಹೋದಾಗಲೆಲ್ಲ ಆಸೆಗಣ್ಣಿನಿಂದ ಅವಳು ಅನೇಕ ಬಾರಿ ನೋಡಿದ್ದಾಳೆ. ಎಲ್ಲಿಯೂ ಅವನು ಕಂಡು ಬರುವುದಿಲ್ಲ. ಅವನ ನೆನಪಾದಾಗಲೆಲ್ಲಾ ಆ ಕಾಗದವನ್ನು ಓದಿ ಖುಷಿ ಪಡುತ್ತಿದ್ದ ಅವಳಿಗೆ ಆ ಎಳೆಯ ನೆನಪುಗಳು ಈಗಲೂ ಅದೇ ಹೊಸತನ ನೀಡುತ್ತವೆ.ಅಮ್ಮನ ಮನೆಯ ಮುರುಕು ಕಪಾಟಿನಲಿ ಹಳೆಯ ಪುಸ್ತಕಗಳ ಸಂದಿಯಲ್ಲಿ ಎಷ್ಟೋ ವರ್ಷಗಳ ಕಾಲ ಬೆಚ್ಚಗೆ ಕುಳಿತಿದ್ದ ಆ ಮೊದಲ ಪ್ರೇಮ ಪತ್ರವನ್ನು ಊರಿಗೆ ಹೋದಾಗಲೆಲ್ಲ ಕದ್ದು ಮುಚ್ಚಿ ಅನೇಕ ಸಾರಿ ತೆಗೆದು ನೋಡಿದ್ದಾಳೆ. ಮತ್ತೆ ಓದಿದ್ದಾಳೆ. ಮತ್ತೊಂದು ದಿನ ಗೆದ್ದಲು ಹತ್ತಿದೆ ಎಂದು ಅತ್ತಿಗೆ ಕಪಾಟು ಕ್ಲೀನ್ ಮಾಡೋ ವೇಳೆ ಆ ಪತ್ರನೂ ಮಾಯವಾಗಿದ್ದು ನೋಡಿ ಅವಳ ಹೃದಯ ಬಿಕ್ಕಿದೆ.

ಇದಾಗಿ ಎಷ್ಟೋ ವರ್ಷಗಳೇ ಕಳೆದಿವೆ. ನಂತರವೂ ಹೀಗೆ ಅನೇಕ ಸಲ ಪ್ರೀತಿ ಹುಟ್ಟಿದೆ ಅಥವಾ ಅದನ್ನವಳು ಪ್ರೀತಿ ಅಂಥ ಅಂದುಕೊಂಡಿದ್ದಾಳೆ. ಆದರೆ ಮೊದಲ ಪ್ರೀತಿಯನ್ನು ಅವಳಿಗೆ ಇನ್ನೂ ಮರೆಯಲಾಗಿಲ್ಲ. ಯಾರಿಗೂ ಕಾಣದಂತೆ ಎಲ್ಲೋ  ದೂರದಲ್ಲಿರೋ ಅವಳಿಗೆ ಹೀಗೆ ಮಳೆ ಬಂದಾಗಲೆಲ್ಲ, ಕಣ್ಮುಚ್ಚಿದಾಗಲೆಲ್ಲ ರಸ್ತೆಯಲ್ಲಿ ನೀರಿನಾಟ ನೆನಪಾಗುತ್ತದೆ. ಆ  ಪತ್ರ ಕಣ್ಮುಂದೆ ಬರುತ್ತದೆ.  ಅವನ ನಗು ನೆನಪಾಗಿ ನಿಟ್ಟುಸಿರುಬಿಡುತ್ತಾಳೆ. ಅವನ ಗುಳಿ ಬಿಳುವ ಕೆನ್ನೆಗಳು ಇಗಲೂ ಅವಳ ಒಣಗಿದೆದೆಯಲ್ಲಿ ನೂರು ಕನಸುಗಳನ್ನು ಬಿತ್ತುತ್ತವೆ.

%d bloggers like this: