ಸಪ್ತಪದಿಯ ಸುತ್ತ ಸುತ್ತುವ ಷಟ್ಪದಿ

 

ನರೇಂದ್ರ ಪೈ ತಮ್ಮ ಬ್ಲಾಗ್ ‘ಓದುವ ಹವ್ಯಾಸ’ದಲ್ಲಿ ಚೇತನಾ ತೀರ್ಥಹಳ್ಳಿ ಅವರ
‘ಭಾಮಿನಿ ಷಟ್ಪದಿ’ಯನ್ನು ಕಂಡಿರುವುದು ಹೀಗೆ- 
ಚೇತನಾ ತೀರ್ಥಹಳ್ಳಿಯವರ ಭಾಮಿನಿ ಷಟ್ಪದಿಯ ಬಗ್ಗೆ ಈಗಾಗಲೇ ಹಲವರು ಬರೆದಿದ್ದಾರೆ. ವಿಜಯಕರ್ನಾಟಕದಲ್ಲಿ ಕಾಣಿಸಿಕೊಂಡ ಪುಟ್ಟ ವಿಮರ್ಶೆ, ಕನ್ನಡಪ್ರಭದಲ್ಲಿ ಬಂದ ವಿವರವಾದ ಪರಾಮರ್ಶನೆಯ ಜೊತೆಗೆ ಜೋಗಿಯವರು ಬರೆದ ಮುನ್ನುಡಿ, ನಟರಾಜ್ ಹುಳಿಯಾರ್ ಬರೆದ ಬ್ಲರ್ಬ್ ಎಲ್ಲವೂ ಈ ಕೃತಿಯನ್ನು ಕುರಿತು ಬಂದಿರುವ ಒಳ್ಳೆಯ ಬರಹಗಳು.
ಚೇತನಾ ಈ ಬರಹಗಳನ್ನು ಮೊದಲಿಗೆ ಇದೇ ಹೆಸರಿನ ತಮ್ಮ ಬ್ಲಾಗ್‌ಗಳಲ್ಲಿ, ಕನ್ನಡ ಟೈಮ್ಸ್‌ನಲ್ಲಿ ಪ್ರಕಟಿಸಿದ್ದರು. ಬಿಡಿ ಬಿಡಿಯಾಗಿ ಅವುಗಳನ್ನು ಓದುವಾಗ ಅನಿಸುತ್ತಿದ್ದದು ಇದು ಒಂದು ಲಹರಿಯ ಬರಹ ಎಂಬ ಭಾವವಷ್ಟೇ. ಓದಿ ಅಲ್ಲೇ ಮರೆತುಬಿಡಬಹುದಾದ, ಹೆಚ್ಚೆಂದರೆ ಆಯಾ ಬರಹದ ಮನೋಭಾವಕ್ಕೆ ಹೊಂದುವ ಒಂದು ಕಾಮೆಂಟ್ ಹಾಕಿ ಸಂತೈಸಬಹುದಾದ ಬರಹಗಳಂತೆ ಇವು ನೋವಿನ ಕತೆ ಹೇಳುತ್ತಿದ್ದವು. ಒಟ್ಟಾಗಿ ಗಮನಿಸುವಾಗ ಇಲ್ಲಿ ಮಡುಗಟ್ಟಿದ ಭಾವ, ಆತ್ಮಗತವಾಗಿರುವಂತೆ ಕಾಣುವ ನೋವು, ಆ ನೋವೇ ಕಾರಣವಾಗಿ ಇಲ್ಲಿನ ಪ್ರತಿ ಹೆಣ್ಣಿನ ಹೃದಯದಲ್ಲಿ ಬೆಳೆದಿರುವ ಅಮೂರ್ತ ರೊಚ್ಚು, ಮನುಷ್ಯನ ಒಳ್ಳೆಯತನವನ್ನು ಕುರಿತ ಅಪನಂಬುಗೆ; ಎಲ್ಲವೂ ಹೆಣ್ಣಿನ ಬದುಕು ಎಷ್ಟೆಲ್ಲ ಬಗೆಯಲ್ಲಿ ನೋಯುತ್ತಿದೆ, ಬಳಲುತ್ತಿದೆ ಎಂಬುದರ ಸಶಕ್ತ ಚಿತ್ರ ನೀಡುತ್ತಿವೆ. ಇದರಿಂದ ಮುಕ್ತವಾದ ಒಂದು ಮನಸ್ಥಿತಿ ಹುಟ್ಟಿಸಿದ ಬರಹಗಳು ಇಲ್ಲಿಲ್ಲವೇ ಇಲ್ಲವೆಂದಲ್ಲ. ಅಂಥವು ಕೊನೆ ಕೊನೆಯಲ್ಲಿ ಕೆಲವಾದರೂ ಸಿಗುತ್ತವೆ. ಆದರೆ ಅವುಗಳೂ ಒಂದು ನೋವಿನ ನೆರಳನ್ನು ಅರಸಿ ಹೊರಡಲು ಉತ್ಸುಕವಾಗಿರುವುದು ಸುಳ್ಳಲ್ಲ.
ಚಿತ್ರ – ಮಲ್ಲಿಕಾರ್ಜುನ್ ವಿನ್ಯಾಸ- ಅಪಾರ
ಒಟ್ಟಾರೆಯಾಗಿ ಈ ಎಲ್ಲ ಕತೆಗಳು ನನ್ನ ಅರಿವಿನ ಆಳ-ಅಗಲಗಳನ್ನು ಹೆಚ್ಚಿಸುವ ಕಸು ಹೊಂದಿವೆಯೇ, ಹೊಸದಾದ ಏನನ್ನು ಈ ಕತೆಗಳು ನನಗೆ ನೀಡುತ್ತವೆ, ನನ್ನ ಬದುಕನ್ನು ಹೇಗೆ ಶ್ರೀಮಂತಗೊಳಿಸುತ್ತವೆ, ಇದುವರೆಗೆ ನನಗೆ ತಿಳಿಯದಿದ್ದ ಯಾವ ಹೊಸ ಅರಿವನ್ನು ಈ ಕತೆಗಳು ನನಗೆ ಮನುಷ್ಯ ಮನಸ್ಸಿನ ಬಗ್ಗೆ, ಮನುಷ್ಯನ ಬಗ್ಗೆ, ಬದುಕಿನ ಬಗ್ಗೆ ದೊರಕಿಸಿಕೊಡುತ್ತವೆ ಎಂದೆಲ್ಲ ನಾನು ಪ್ರಶ್ನಿಸಿಕೊಳ್ಳುತ್ತ ಹೋಗುತ್ತೇನೆ. ಪ್ರಕಟಿಸಬಹುದಾದ ಸಾಹಿತ್ಯದ ಹೊಣೆಗಾರಿಕೆ ಇದು, ನಾನು ನಿರೀಕ್ಷಿಸುವಂತೆ. ಕಥೆ ಹಳೆಯ ಸೂತ್ರಗಳಿಗೆ ಹೊಸ ಉದಾಹರಣೆಯಲ್ಲ, ಅದು ಹೊಸತೇನನ್ನೋ ಕಾಣಲು ಹವಣಿಸುತ್ತಿರಬೇಕು ಎನ್ನುತ್ತಾರೆ ಜಯಂತ ಕಾಯ್ಕಿಣಿ. ಹಾಗೆಯೇ, ಒಂದು ಕಥೆ ಚಿಕ್ಕದಿರಲಿ, ದೊಡ್ದದಿರಲಿ, ತನ್ನದೇ ಆದ ವಾತಾವರಣವನ್ನು ಹೊಮ್ಮಿಸಬೇಕು. ಮತ್ತು ಈ ವಾತಾವರಣದಲ್ಲೇ ಅದರ ಪಾತ್ರ, ಪ್ರಸಂಗಗಳು ಸಜೀವವಾಗಿರಬಲ್ಲವು ಎನ್ನುವ ಮಾತನ್ನೂ ಜಯಂತ ಹೇಳಿದ್ದಾರೆ. ಭಾಮಿನಿ ಷಟ್ಪದಿಯಲ್ಲಿ ನಾವು ಮುಖಾಮುಖಿಯಾಗುವ ಹೆಣ್ಣಿನ ಅಳಲಿನ ಭಿನ್ನ ವಿಭಿನ್ನ ಮುಖಾವಳಿಗಳು ಎದುರಿಸಬೇಕಾದ ಪ್ರಧಾನ ಸವಾಲುಗಳಿವು.

 

ಈ ಎಲ್ಲ ಕತೆಗಳನ್ನು ಸ್ತ್ರೀವಾದಿ ಚಿಂತನೆಯ ಫಲ ಎಂದು ಕರೆಯುವುದು ಕಷ್ಟವಲ್ಲ. ಆದರೆ ಹಾಗೆ ಕರೆದು ಇಲ್ಲಿನ ನೋವಿಗೆ ಲೇಬಲ್ ಹಚ್ಚುತ್ತೇವೋ, ಹಚ್ಚಿ ಎಲ್ಲವನ್ನು ಸರಳಗೊಳಿಸುತ್ತೇವೋ ಅನಿಸುತ್ತದೆ. ಮೂಲಭೂತವಾಗಿ ಸಂವೇದನೆಗಳಲ್ಲಿ ಹೆಣ್ಣು ಗಂಡೆಂಬುದಿಲ್ಲ. ನಾವು ಆರಂಭದಿಂದಲೂ ಹೆಣ್ಣಿಗೆ, ಅದು ನಮ್ಮ ಅಜ್ಜಿಯಾಗಿರಲಿ, ತಾಯಾಗಿರಲಿ, ಹೆಂಡತಿಯೋ, ಅಕ್ಕತಂಗಿಯೋ, ಮಗಳೋ ಇನ್ನೊಂದೋ ಏನೇ ಆಗಿರಲಿ, ನೀಡಿದ ಅವಕಾಶಗಳು ಕಡಿಮೆ. ಅವಳ ಬದುಕು ತುಂಬ ಸೀಮಿತವಾದ ಒಂದು ಚೌಕಟ್ಟಿನೊಳಗೇ ಕಮರಿದಂತೆ ಹುಟ್ಟಿನಿಂದ ಸಾವಿನ ತನಕ ಸಾಗಬೇಕಿತ್ತು. ಇದರಿಂದ ಅವಳ ಅವಲೋಕನ ಎಷ್ಟೇ ಸೆಣಸಿದರೂ ಮಿತವಾಗಿಯೇ ಇತ್ತು, ಒಬ್ಬ ಗಂಡಸಿಗೆ ಸುಲಭವಾಗಿ ತೆರೆದಿದ್ದ ಅವಕಾಶ-ಅನುಭವಗಳು ದಕ್ಕಿಸಿದ ಅವಲೋಕನಕ್ಕೆ ಹೋಲಿಸಿದರೆ. ಇದರಿಂದ ಅವಳ ಸಾಹಿತ್ಯ, ಚಿಂತನೆ, ಅಭಿಮತ, ನಿಲುವು ಸೆಕೆಂಡರಿಯಾಗಿಯೇ ಪರಿಗಣಿಸಲ್ಪಡುತ್ತ ಬಂದಿದ್ದು ವಾಸ್ತವ. ಇವತ್ತು ಪರಿಸ್ಥಿತಿ ತುಂಬ ಸುಧಾರಿಸಿದೆ ಎಂದು ನಾವು ಸಮಾಧಾನ ಪಟ್ಟುಕೊಳ್ಳಬಹುದಾದರೂ ವಸ್ತು ಸ್ಥಿತಿ ಎಲ್ಲರಿಗೂ ಗೊತ್ತೇ ಇದೆ. ಇದು ಜೀನ್ಸ್‌ನಲ್ಲೂ ಸೇರಿಕೊಂಡು ತಲೆಮಾರಿನಿಂದ ತಲೆಮಾರಿಗೆ ಸಾಗಿಬರುವ ಮನುಸ್ಮೃತಿ. ಹೆಣ್ಣು ಇವುಗಳಿಂದ ಕಳಚಿಕೊಂಡು ನಿಲ್ಲುವುದು ಸುಲಭವಿರಲಿಲ್ಲ. ಹಾಗಾಗಿ ಇವತ್ತಿನ ಹೆಣ್ಣಿನ ಮನೋಧರ್ಮ ದಕ್ಕಿಸಿಕೊಂಡ ಸಮಾನತೆ, ಪ್ರಬುದ್ಧತೆ ಏನಿದ್ದರೂ ಅದು ಗಂಡು ನಡೆಸಿದ ಹೋರಾಟಕ್ಕಿಂತ ಹೆಚ್ಚು ದೃಢವಾದದ್ದು, ಶ್ರಮದಾಯಕವಾದದ್ದು ಮತ್ತು ಆ ಕಾರಣಕ್ಕಾಗಿಯೇ ಗಂಡು ನಿಂತು ಗಮನಿಸಬೇಕಾದಷ್ಟು ಮಹತ್ವದ್ದು. ಸುಲಭವಾಗಿ ದಕ್ಕಿದ ಮೇಲ್ಮೆಯಿಂದ ಗಂಡು ಕಳೆದುಕೊಂಡ ಸಂಗತಿಗಳಿರಬಹುದು ಎಂದು ಅವನಿಗೆ ಈಗ ಅನಿಸತೊಡಗಿದೆ. ಆದರೆ ಹೆಣ್ಣಿನ ಈ ಹೋರಾಟ ಪ್ರಮುಖವಾಗಿ ನಡೆದಿದ್ದು, ಹೆಚ್ಚು ಫಲದಾಯಕವಾಗಿದ್ದು ಆಕೆಯ ಭೌತಿಕ ಸಾಧನೆಗಳಿಂದಾಚೆಗೆ ಎಂಬುದು ಗಮನಾರ್ಹ. ಅವಳ ವಿದ್ಯಾಭ್ಯಾಸ, ದುಡಿಮೆ, ವೃತ್ತಿಪರ ನೈಪುಣ್ಯ, ಆಧುನಿಕತೆಗೆ ತೆರೆದುಕೊಂಡ ಛಲ ಏನಿದ್ದರೂ ಈ ಸುದೀರ್ಘ ಪ್ರಕ್ರಿಯೆಗೆ ಇಂಬುಕೊಟ್ಟಿತೆಂಬುದು ನಿಜವೇ ಹೊರತು ಅದೇ ಅವಳ ನೈಜ ಗೆಲುವಾಗಿರಲಿಲ್ಲ ಎಂಬುದು ಪ್ರತಿ ಹೆಣ್ಣಿಗೂ ಗೊತ್ತು. ವಿದ್ಯಾಭ್ಯಾಸ, ದುಡಿಯುವ ಅವಕಾಶ, ವೃತ್ತಿಪರ ತರಬೇತಿ ಅಥವಾ ಶಿಕ್ಷಣ, ಆಧುನಿಕ ಜಗತ್ತಿನ ಪ್ರಭಾವ ಇತ್ಯಾದಿಗಳೇ ಗಂಡಿನ ಹಿರಿಮೆಗೆ ಕಾರಣವಾಗಿದ್ದರೆ ಆತ ಹೆಣ್ಣನ್ನು ಶತಮಾನಗಳಿಂದ ಹೇಗೆ ನಡೆಸಿಕೊಂಡು ಬಂದಿದ್ದಾನೋ ಹಾಗೆ ನಡೆಸಿಕೊಂಡು ಬರುವ ಕಾರಣವಿರಲಿಲ್ಲ. ಬದಲಾಗಬೇಕಿರುವುದು ಮನೋಧರ್ಮ ಎಂಬುದು ನಿಶ್ಚಿತ. ಹೆಣ್ಣು ಅದನ್ನು ಸಾಧಿಸಿದ ಬಗೆಯಲ್ಲಿ ಸಾಹಿತ್ಯ ಕೂಡ ಪ್ರಮುಖ ಪಾತ್ರವಹಿಸಿರುವುದು ಸತ್ಯ.

ಚೇತನಾ ಅವರ ಎಲ್ಲ ಕತೆಗಳಲ್ಲಿ ನಮಗೆ ಕಾಣಸಿಗುವುದು ಈ ಮನೋಧರ್ಮದ ಅರಳುವಿಕೆ. ಇಲ್ಲಿ ಅವನು `ಎಷ್ಟೊಂದು ಚಿಕ್ಕೆಗಳು…..ನಡುವಲ್ಲಿ ಚಂದಿರ’ ಎನ್ನುತ್ತಾನೆ. ಅದೇ ಆಕಾಶವನ್ನು ನೋಡಿ ಅವಳು ಹೇಳುತ್ತಾಳೆ, `ಚಂದ್ರನಲ್ಲಿ ಇಂವ ಕಂಡ. ಮತ್ತೆ, ಸುತ್ತೆಲ್ಲ ನನ್ನ ಸವತಿಯರು!’
ಶೂದ್ರನನ್ನು ಮದುವೆಯಾದ ಮಗಳು ಮೇಲ್ನೋಟದ ರಾಜಿಯಲ್ಲಿ ಅಪೂರ್ವಕ್ಕೆ ತವರಿಗೆ ಬಂದಾಗ ಗಮನಿಸುವ ಸಂಗತಿಗಳು:”ಮನೆಯ ಒಳಕೋಣೆಗಳಲ್ಲೆಲ್ಲ ಎಂಥದೋ ಗುಟ್ಟು ಗುಟ್ಟು, ಬೇಲಿ-ಚೌಕಟ್ಟು! ಅಡುಗೆ ಮನೆಯಲ್ಲಿ ಘಮಘಮ. ಜಡಿ ಮಳೆಯ ಚಳಿಯಲ್ಲೂ ಬೆವರೊರೆಸಿಕೊಳ್ತಿರುವ ಅಮ್ಮ. ಮತ್ತೀಗ ಅವಳ ಪ್ರತಿ ಮಾತಲ್ಲೂ ಫುಲ್‌ಸ್ಟಾಪು, ಕಾಮಾ!!”
ದಿನವೂ ಹೊಡೆದು ಬಡಿದು ಮಾಡುವ ಗಂಡನ ಬಗ್ಗೆ ಅವಳು ಹೇಳುತ್ತಾಳೆ:”ಯಾರೋ ಏನೋ ಮಾಡ್ಸಿ ಹಾಕಿದಾರೆ ಕಣೇ. ದೇವ್ರು ಹೇಳ್ತು. ದಿನಾ ಚಿಟಿಕೆ ಕುಂಕುಮ ನೀರಲ್ಲಿ ಹಾಕಿ ಕುಡಿಸೋಕೆ ಹೇಳಿದಾರೆ. ಮೂರನೇ ಅಮವಾಸ್ಯೆಗೆ ಹೋಗಬೇಕಂತೆ!” ಅಂದವಳ ಮುಖದಲ್ಲಿ ಸಂಭ್ರಮ.
ಈ ಸಾಲುಗಳನ್ನು ಗಮನಿಸಿ:”ಈಗ ಮತ್ತೆ ಡಿವೈಡರಿನ ಮೇಲೆ.ಆಚೀಚೆ ಒನ್ ವೇ ರಸ್ತೆಗಳು. ಹೋದ ದಾರಿಯಲ್ಲೇ ಮರಳಿದರೆ ಸಾಕಷ್ಟು ದಂಡ ಕಟ್ಟಬೇಕು, ನಷ್ಟ ಭರಿಸಬೇಕು!”

 

ಇನ್ನೊಂದು ಕತೆ:”ಅಮ್ಮನ ಮದುವೆಯಾದ ಮೂವತ್ತು ವರ್ಷಗಳು ಹೀಗೇ ಕಳೆದುಹೋಗಿದ್ದವು. ಅವಳು `ಸಾಯ್ತೀನಿ’ ಅಂತ ಹೆದರಿಸ್ತಲೇ ಬದುಕಿ ತೋರಿಸಿದ್ದಳು. ಅಪ್ಪ ಕೂಡ `ಸಾಯಿ ಹೋಗು’ ಅನ್ನುತ್ತಲೇ ಅವಳನ್ನು ಉಳಿಸಿಕೊಂಡಿದ್ದ. ಸದ್ಯ! ಅಮ್ಮ ನಮ್ಮನ್ನ ಕೊಲ್ಲಲಿಲ್ಲ!! ಅವಳ ಮೇಲೆ ಪ್ರೀತಿ ಉಕ್ಕಿತು. ಹಾಗೇ, ಮಗುವನ್ನು ಕೊಂದು ಸತ್ತ ಹಿಂದಿನ ಬೀದಿ ಹೆಂಗಸಿನ ಮೇಲೆ ಕೋಪವೂ…”
ಎಲ್ಲವೂ ತೀರ ಸಣ್ಣ, ಮಿನಿ ಎನ್ನಬಹುದಾದ ಕತೆಗಳು. ಹಾಗಾಗಿ ಮಿನಿಕತೆಗಳ ಅನುಕೂಲ-ಕೊರತೆ ಎರಡನ್ನೂ ಇಲ್ಲಿನ ಕತೆಗಳು ಅನಿವಾರ್ಯವಾಗಿ ಹೊತ್ತಿವೆ. ಸಂಭಾಷಣೆ ಮತ್ತು ಚುರುಕಾದ ಭಾಷೆ ಮೇಲ್ಗೈ ಸಾಧಿಸಿವೆ. ಆದರೆ ಇವು ಕತೆಗೆ ವೇಗ ನೀಡುತ್ತವೆ, ಭಾವದ ಆಳಕ್ಕಿಳಿಯಲು ಬಿಡದೆ ಗತಿ ತಪ್ಪಿಸ್ತುತ್ತವೆ. ಇಲ್ಲಿ ವಿವರಗಳಿಗೆ ಪ್ರಾಮುಖ್ಯತೆ ಸಿಕ್ಕಿಲ್ಲ, ಹಾಗಾಗಿ ಪಾತ್ರ ಚಿತ್ರಣ, ಪರಿಸರದ ವಿವರ, ವಾತಾವರಣ ನಿರ್ಮಾಣ, ವಸ್ತುಲೋಕದ ವಿವರಗಳಿಲ್ಲ. ಎಲ್ಲವೂ ಚಕಚಕನೆ ಮುಗಿಯುವ ಕತೆಗಳು. ಇಂಥ ಸಾಲು ಸಾಲು ನಲವತ್ತಾರು ಕತೆಗಳು, ಕತೆಗಳಂಥ ಕವನಗಳು ನಮ್ಮನ್ನು ಆವರಿಸಿಕೊಳ್ಳುವ ಲಯ ಬೇರೆಯೇ ಆದದ್ದು. ಇಲ್ಲಿನ ಭಾಷೆ ಕಾವ್ಯದ ಘನತೆಯನ್ನು ಪಡೆದು ಸಶಕ್ತವಾಗಿದೆ. ಆದರೆ ಅದೇ ಹೊತ್ತಿಗೆ ಈ ಭಾಷೆಯ ಸದ್ದಿನ ಮೋಹ ಶಬ್ದದೊಳಗಿನ ನಿಶ್ಶಬ್ದಕ್ಕೆ ಕಿವುಡಾಗಿದೆ. ಅಮ್ಮನ ಮಾತಿನಲ್ಲಿ ಕಂಡ ಪುಲ್ ಸ್ಟಾಪು, ಕಾಮಾಗಳು ಹೆಚ್ಚಿನ ಗಮನ ಪಡೆದಿದ್ದರೆ ಇನ್ನೂ ಚೆನ್ನಾಗಿತ್ತೆನಿಸುತ್ತದೆ. ಇಂಥ ಭಾಷೆಯ ಕಸುವನ್ನೇ ನೆಚ್ಚಿದ ಕತೆಗಳಲ್ಲಿ ಆಳ ಇರುವುದಿಲ್ಲ ಎನ್ನುವುದು ಸುಳ್ಳು. ಆದರೆ ಆಳಕ್ಕೆ ಇಳಿಯಬಲ್ಲ ಒಂದು ಮನಸ್ಥಿತಿಯನ್ನು ಓದುಗನಲ್ಲಿ ಮೂಡಿಸಲು ಅಗತ್ಯವಾದ ಒಂದು ಚೌಕಟ್ಟು, ಭಾಷೆಯ ಹಂಗನ್ನು ಮೀರಿ ನಿಲ್ಲುವ ವಿವರಗಳು ಇಂಥ ಕತೆಗಳಲ್ಲಿ ಇರುವುದಿಲ್ಲ. ನಿಧಾನ, ಮೌನ ಮತ್ತು ಧ್ಯಾನ – ಇವನ್ನೆಲ್ಲ ಇಂಥ ಕತೆಗಳಲ್ಲಿ ಸಾಧಿಸಲು, ವಿಶೇಷತಃ ಮಿನಿಕತೆಗಳ ಸಂಕಲನದಲ್ಲಿ, ಸಾಧ್ಯವಾಗುವುದಿಲ್ಲ. ಇದು ಒಂದು ಕವನಸಂಕಲನದ ಮಟ್ಟಿಗೆ ನಿಲ್ಲುವ ಮಾತಲ್ಲ ಎಂಬುದನ್ನು ಗಮನಿಸಿದರೆ ಮಿನಿಕತೆಗಳು ಅಳವಡಿಸಿಕೊಳ್ಳಲೇ ಬೇಕಾದ ಒಂದು ಲಯವನ್ನು ಅಲ್ಲಿಂದ ಗುರುತಿಸಿಕೊಳ್ಳುವುದು ಸಾಧ್ಯವಾಗಬಹುದು ಅನಿಸುತ್ತದೆ.
ಸ್ರೀವಾದಿ ನೆಲೆಯ ಚಿಂತನೆಯೇ ಆಗಲಿ, ಕೇವಲ ಮನುಷ್ಯ ಜೀವಿಯ ಅಂತರಂಗದ ನೋವುಗಳೆ ಆಗಲಿ ಕೊನೆಗೂ ಸಾಧಿಸಬೇಕಾಗಿರುವುದು ಬದುಕಿನ ನೆಮ್ಮದಿಯನ್ನು. ಅದು ಭೌತಿಕವಾಗಿಯೂ, ಮಾನಸಿಕವಾಗಿಯೂ ಬೇಕು. ಶಿಕ್ಷಣ, ನೌಕರಿ, ಮಾನ್ಯತೆ ಮತ್ತು ಸಮಾನತೆ ಹೆಣ್ಣಿಗೆ ಸಿಗುವುದು ಕಷ್ಟವಾಗಲಾರದು ಅನಿಸುವ ದಿನಗಳಿವು. ನಾಗರಿಕತೆ ಮುಂದುವರಿದಂತೆಲ್ಲ ಈ ವಿಷಯಗಳಲ್ಲಿ ಪರಿಪೂರ್ಣ ಸಮಾನತೆ ಹೆಣ್ಣಿಗೆ ಸಿಕ್ಕಿಯೇ ಸಿಗುತ್ತದೆ. ಆದರೆ ಇಷ್ಟು ಭೌತಿಕವಲ್ಲದ ಒಂದು ಲೋಕವಿದೆ. ಅಲ್ಲಿ ಹೆಣ್ಣಿನ ನರಳುವಿಕೆ ಹೆಚ್ಚು ತೀವೃವಾದದ್ದು, ನಿರಂತರವಾದದ್ದು ಅನಿಸುತ್ತದೆ. ಇದನ್ನು ಹೆಣ್ಣು ಮೀರುವುದು ಹೇಗೆ ಎಂಬ ಪ್ರಶ್ನೆ ನಮ್ಮ ಮುಂದಿದೆ.
ನಮಗೆ ಬದುಕಿನಲ್ಲಿ ದಕ್ಕದೇ ಹೋದುದರ ಬಗ್ಗೆ, ದಕ್ಕಿಸಿಕೊಳ್ಳಲಾಗದೇ ಹೋದುದರ ಬಗ್ಗೆ, ನಿರಾಕರಿಸಲ್ಪಟ್ಟದ್ದರ ಬಗ್ಗೆ, ಕಳೆದುಕೊಂಡದ್ದರ ಬಗ್ಗೆ ಸಮಾಧಾನದ ನಿಲುವುಗಳು ಸಾಧ್ಯವಾಗುವುದು ಮುಖ್ಯ. ಚೇತನಾ ಹೇಳುತ್ತಾರೆ, “ಇಲ್ಲ…ಎಲ್ಲವೂ ಮುಗಿದುಹೋಗಿಲ್ಲ, ಹೇಳಲಿಕ್ಕಿನ್ನೂ ಸಾಕಷ್ಟು ಬಾಕಿ ಇದೆ…” ಎಂದು. ಅವರು ಬಾಕಿ ಇರಿಸಿಕೊಂಡಿರುವ ಹೇಳಲಿಕ್ಕಿರುವುದರ ತುಂಬ ಇಂಥ ಸಮಾಧಾನದ ಧ್ವನಿ ಇರುವುದನ್ನು ಕನ್ನಡ ಕಥಾಲೋಕ ನಿರೀಕ್ಷಿಸುತ್ತದೆ. ಎಲ್ಲವೂ ಮುಗಿದುಹೋಗಿಲ್ಲ ಎಂದವರು ಇನ್ನು ಮುಂದೆ ಹೇಳಬೇಕಿರುವುದು ಅಂಥ ಬದುಕಿನ ಬಗ್ಗೆ, ಬದುಕಿನ ಅಂಥ ಮುಖಗಳ ಬಗ್ಗೆ.
ಭಾಮಿನಿ ಷಟ್ಪದಿ
ಚೇತನಾ ತೀರ್ಥಹಳ್ಳಿ

ಮೇಫ್ಲವರ್ ಮೀಡಿಯಾ ಹೌಸ್,
1, ಯಮುನಾಬಾಯಿ ರಸ್ತೆ, ಐದನೆಯ
ಯುನಿಟ್, ಮೊದಲನೆಯ ಅಂತಸ್ತು,
ಮಾಧವನಗರ, ಬೆಂಗಳೂರು -560 001.
ಪುಟಗಳು 82, ಬೆಲೆ ರೂಪಾಯಿ ಐವತ್ತು.

%d bloggers like this: