‘ಮನದ ಮೊಗ್ಗೊಡೆದು ಘಮಘಮಿಸಿ-ಅಕ್ಷರ ಹೂ‘ ಎನ್ನುವ ಘೋಷವಾಕ್ಯದೊಂದಿಗೆ ಬ್ಲಾಗ್ ಅಂಗಳಕ್ಕೆ ಇಳಿದವರು ಪ್ರಿಯಾ ಕೆರ್ವಾಶೆ. ಯಾರಿದು ಎನ್ನುವವರಿಗೆ ಅವರೇ ಕೊಡುವ ಉತ್ತರ- ನನ್ಹೆಸ್ರು ಪ್ರಿಯಾ, ದಟ್ಟ ಕಾಡುಗಳ ನಡುವೆ ಪುಟ್ಟ ಕುಂಜದಂತಹ ನನ್ನೂರು ಕೆರ್ವಾಶೆ. ಪಕ್ಕದಲ್ಲೇ ಮಲೆಬೆಟ್ಟು ಕಾಡು…ಯಾವಾಗಲೂ ಜೀವತುಂಬಿ ಹರಿವ ಸ್ವರ್ಣೆ… ಆದರೂ ನನ್ನದು ಖಾಲಿ ಬದುಕು ..ಖಾಸಗಿ ಟಿವಿ ಚಾನಲ್ ನಲ್ಲಿ ಕೈತುಂಬಾ ಕೆಲಸ..
ಪ್ರಿಯಾ ಚಾನಲ್ ಗಳ ವೇಗದ ಓಟದ ಮಧ್ಯದಲ್ಲಿಯೇ ಅದೇಗೆ ಅಕ್ಷರ ಹೂ ಮೂಡಿಸಲು ಸಮಯ ಹೊಂದಿಸಿಕೊಂಡರೋ ಗೊತ್ತಿಲ್ಲ. ಅವರ ಬರವಣಿಗೆಯ ರೀತಿ ತಿಳಿಸುವ ಒಂದು ಬರಹ ಇಲ್ಲಿದೆ-

ಆಗ ಅವಳು ಕಾಲೇಜಿಗೆ ಹೋಗ್ತಾ ಇದ್ಳು. ವಿಟ್ಲದ ಕಾರಿಂಜ ಹತ್ತಿರದ ಅವಳ ಅಜ್ಜನ ಮನೆಯಿಂದ…ಅವಳಿಗೆ ಆಟ ಅಂದರೆ ಯಕ್ಷಗಾನದ ಹುಚ್ಚು ವಿಪರೀತ. ಅದಕ್ಕಾಗಿ ಅವತ್ತು ಅಜ್ಜನಮನೆಯಲ್ಲಿ ಜಗಳ ಮಾಡಿ ಪುತ್ತೂರಿಗೆ ಹೊರಟಿದ್ದಳು. ಅಲ್ಲೇ ಅವಳ ಗೆಳತಿಯ ಮನೆಯಿದ್ದ ಕಾರಣ ಇನ್ನೂ ಅನುಕೂಲವಾಗಿತ್ತು.ಅದು ಸಾಲಿಗ್ರಾಮ ಮೇಳದ ಕಾಡ ಮಲ್ಲಿಗೆ ಪ್ರಸಂಗ, ಕಾಳಿಂಗರಾಯರೇ ಭಾಗವತರು. ಆ ಕಾಲದ ಘಟಾನುಘಟಿಗಳೆಲ್ಲ ದೊಡ್ಡ ದೊಡ್ಡ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬಣ್ಣದ ವೇಷದ ಖದರೇ ಬೇರೆ.ಅವಳು ರಾತ್ರಿಯಿಡೀ ಕಣ್ಣ್ ಮಿಟುಕಿಸದಂತೆ ಯಕ್ಷಗಾನ ನೋಡಿದಳು. ಬೆಳಗ್ಗೆ ಗೆಳತಿ ಮನೆ ಕಡೆ ಹೊರಟಳು.ಅಲ್ಲಿಗೆ ತಲುಪುದರೊಳಗಾಗಿ ಅವಳ ಸೋದರ ಮಾವ ಅಲ್ಲಿ ಕಾಯ್ತಾ ಇದ್ರು.ಅವಸರವಸರದಲ್ಲಿ ಅವರಿಗೆ ಶಾಪ ಹಾಕುತ್ತಾ ಕಾರು ಹತ್ತಿದಳು. ಕಾರು ಅಜ್ಜನ ಮನೆ ಕಡೆ ಹೋಗದೇ ಅವಳ ಮನೆ ದಾರಿ ಹಿಡಿಯಿತು.
ಅವಳಿಗೆ ಕಸಿವಿಸಿ..ನಿನ್ನೆ ತಾನೇ ಜಗಳ ಮಾಡಿ ಮಾವನ ಹತ್ತಿರ ಕೋಪ ಮಾಡಿಕೊಂಡ ಕಾರಣ ಈಗ ಮಾವನಲ್ಲಿ, ಯಾಕೆ ಮನೆ ಕಡೆ ಕರ್‍ಕೊಂಡು ಹೋಗ್ತಾ ಇದ್ದೀರಾ? ಅಂತ ಕೇಳಲೂ ಮುಜುಗರ. ಹಸಿವು ಬೇರೆ. ಮಾವ ನಿನ್ನೆ ಜಗಳದ ಬಗ್ಗೆ ಅಪ್ಪನ ಹತ್ರ ಚಾಡಿ ಹೇಳವುದಕ್ಕೆ ಪ್ಲಾನ್ ಮಾಡ್ತಿದ್ದಾನಾ? ಅಂತ ಸಂಶಯ, ಒಳಗೊಳಗೇ ಭಯ.
ಈ ಟೆನ್ಶನ್‌ನಲ್ಲಿ ಸುಮ್ಮನೆ ಕೂರುವುದೂ ಕಷ್ಟವಾಗಿ ಮಿಸುಕಾಡುತ್ತಿದ್ದಳು. ಮಾವ ಮೌನವಾಗಿದ್ದ.
ಕುಡ್ತಮೊಗೇರು ಬರುವ ಹೊತ್ತಿಗೆ ಕಾರಿನ ಟಯರ್ ಪಂಕ್ಚರ್. ಅಲ್ಲೆಲ್ಲೂ ಗ್ಯಾರೇಜಿಲ್ಲ. ಮಾವನತ್ರ ಎಕ್ಟ್ರಾ ಟಯರೂ ಇಲ್ಲ… ಕೊನೆಗೆ ಇದು ಇವತ್ತು ರಿಪೇರಿ ಆಗುವುದಿಲ್ಲ ಅಂದು ಕೊಂಡು ಕಾರನ್ನು ಪಕ್ಕಕ್ಕೆ ಹಾಕಿಯಾಯಿತು. ಅವಸರವಸರವಾಗಿ ನಡೆದುಕೊಂಡೇ ಹೋಗೋಣ, ಬೇಗ ನಡಿ ಅಂದ ಮಾವ. ಇವಳಿಗಿನ್ನೂ ಸಂಶಯ, ರಾತ್ರಿ ನಿದ್ದೆ ಕೆಟ್ಟದ್ದಕ್ಕೆ ಹೊಟ್ಟೆಯಲ್ಲಿ ಸಂಕಟ. ಅವಳು ಒಳಗೇ ಕೋಪದಿಂದ ಕುದಿಯುತ್ತಿದ್ದಳು…ಸಿಟ್ಟಿನಲ್ಲೇ ಮಾವನ ಜತೆಗೆ ಹೆಜ್ಜೆ ಹಾಕತೊಡಗಿದಳು.
ಕುಡ್ತಮೊಗೇರಿನಿಂದ ಅಜ್ಜನ ಮನೆಗೆ ೫ ಮೈಲಿ ದೂರ…ನಡೆಯುವಾಗ ಕಾಲು ಜೋಮು ಹಿಡಿದಂತಾಗುತ್ತಿತ್ತು. ತಲೆ ಸಿಡಿತ ಬೇರೆ ಸುರುವಾಗಿತ್ತು. ಪೂವಕ್ಕು ಮನೆಯ ಹತ್ತಿರ ಬರುವಾಗ ತಲೆತಿರುಗಿ ಬಿದ್ದೇ ಬಿಟ್ಟಳು. ಮಾವನಿಗೆ ಏನು ಮಾಡುವುದೆಂದೇ ತಿಳಿಯಲಿಲ್ಲ…ಆಗ ಅವನಿಗಿನ್ನೂ ಇಪ್ಪತೈದರ ಪ್ರಾಯ.ಮದುವೆ ಆಗಿರಲಿಲ್ಲ. ದೇವರ ದಯೆದಿಂದ ಅದೇ ಸಮಯಕ್ಕೆ ಪೂವಕ್ಕು ಆ ದಾರಿಯಾಗಿ ಬರುತ್ತಿದ್ದಳು…ಮೂರ್ಛೆ ಹೋಗಿರುವ ಅವಳನ್ನೂ, ಬೆಪ್ಪನಂತೆ ನಿಂತಿರುವ ಮಾವನನ್ನೂ ಕಂಡು ವಿಷಯ ಏನೆಂದು ಕೇಳಿದಳು? ಮಾವ ಪೆದ್ದು ಪೆದ್ದಾಗಿ ಎಲ್ಲವನ್ನೂ ಹೇಳಿದ.
ಅವಳಿಗೆ ಕಾಫಿಯನ್ನೂ ಕುಡಿಸದೇ ಹಾಗೇ ಕರೆದುಕೊಂಡು ಬಂದ ಮಾವನಿಗೆ ಅವಳಿಂದ ಸರಿಯಾಗಿಯೇ ಪೂಜೆಯಾಯಿತು. ನಂತರ ಪೂವಕ್ಕು ಮನೆಯಿಂದ ನೀರು ತಂದು ಅವಳ ಮುಖಕ್ಕೆ ನೀರು ಹಾಕಿದಾಗ ಆಕೆಗೆ ಜ್ಞಾನ ಬಂದಂತಾಯಿತು. ಬೇಡ ಬೇಡವೆಂದರೂ ಕೇಳದೇ ತಿಂಡಿ, ಕಣ್ಣ ಚಾ ( ಹಾಲಿಲ್ಲದ ಚಹ) ಕುಡಿಸಿದ ಮೇಲೆ ಆಕೆ ಸ್ವಲ್ಪ ಸುಧಾರಿಸಿದಳು. ಮಾವನಿಗೆ ಬುದ್ಧಿ ಹೇಳಿ ಅವಳನ್ನು ಮಾವನೊಂದಿಗೆ ಕಳುಹಿಸಿದಳು ಪೂವಕ್ಕು.
ಅಂತೂ ಇಂತೂ ಮನೆಗೆ ಬಂದಾಗ ಅವಳು ಮನೆಗೆ ಬಂದು ಮುಟ್ಟಿದಾಗ ಮುಖ ನೊಡುವುದಕ್ಕೇ ಆಗುತ್ತಿರಲಿಲ್ಲ. ಆದರೇನು ಮಾಡುವುದು ಅವಳು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವ ಹೊತ್ತಿಗೇ ಅವಳಮ್ಮ ಅವಳನ್ನು ಬಚ್ಚಲಿಗೆ ಕರೆದೊಯ್ದು, ತಲೆ ತಿಕ್ಕಿ , ಬೇಗ ಬೇಗ ಸ್ನಾನ ಮುಗಿಸಲು ಹೇಳಿದಳು..ಇವಳಿಗೆ ಇನ್ನೂ ಗೊಂದಲ..ಇವರೆಲ್ಲ ಯಾಕೆ ಹೀಗೆ ಮಾಡುತ್ತಾರೆ?, ಎಲ್ಲ ಒಗಟಿನಂತಿತ್ತು. ಸ್ನಾನ ಮುಗಿಸಿ ಬಂದವಳಿಗೆ, ಅಪ್ಪ ಅಮ್ಮ ಯಾರದೋ ದಾರಿ ನೋಡುತ್ತಿದ್ದದ್ದನ್ನು ಕಂಡು ಮತ್ತಷ್ಟು ಗೋಜಲು..ಇದೆಲ್ಲ ಎಂತಮ್ಮಾ? ಅಂತ ಕೇಳಿದರೆ, ಏನೂ ಇಲ್ಲ, ನೀನು ಹೆದರಬೇಡ, ಎಂತದ್ದೂ ಆಗುವುದಿಲ್ಲ ಅನ್ನುವ ಉತ್ತರ. ಮನೆಯಲ್ಲಿ ಹಾಕುವ ಉದ್ದ ಲಂಗ ಹಾಕಿ ಬಂದಾಗ, ‘ಸೀರೆ ಸುತ್ತು ಕೂಸೇ …’ ಅವಳಪ್ಪ ಹೇಳಿದ್ರು…ಕಕ್ಕಾ ಬಿಕ್ಕಿಯಾಗಿ ಏನರಿಯದೇ ಮಿಕಿ ಮಿಕಿ ನೋಡಿದ್ಲು…ಅಪ್ಪ ಕಣ್ಣು ದೊಡ್ಡ ಮಾಡಿ ನೊಡಿದಾಗ, ವಿಧಿಯಿಲ್ಲದೇ ಹಳೇ ಸೀರೆಯುಟ್ಟು ಬಂದಳು.
ಸ್ವಲ್ಪ ಹೊತ್ತಿನಲ್ಲೇ ಮನೆಗೆ ಅಪರಿಚಿತರ ಆಗಮನ. ಇದ್ಯಾರಪ್ಪ ನಂಗೆ ಗೊತ್ತಿಲ್ಲದ ನೆಂಟರು? ಅಂತ ಅವಳು, ಹಾಗೇ ನೋಡುತ್ತಿದ್ದಾಗ ಅಮ್ಮ ಅವಸರದಲ್ಲಿ ಬಂದು ಹೋಗಿ ಕಾಫಿ ಕೊಟ್ಟು ಬಾ ಅಂತ ಪ್ಲೇಟಿನ ಮೇಲೆ ಕಾಫಿ ಲೋಟವಿಟ್ಟು ಕಳುಹಿಸಿದಳು. ಆಮೇಲೆ ಏನಾಯಿತು ಅಂತ ಹೇಳಲಿಕ್ಕೆ ಅವಳಿಗೆ ನಾಚಿಕೆ. ಅಷ್ಟೊತ್ತಿಗೆ ಅವಳಮ್ಮ ನಗುತ್ತಾ ಹೇಳಿದಳು, ‘ಆಮೇಲೆ 2 ವರ್ಷ ಆಗುವ ಮೊದಲೇ ನೀನು ಹುಟ್ಟಿದೆ…
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು