ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..
ಇದ್ದಕ್ಕಿದ್ದಂತೆ ಒಂದು ದಿನ ಆತ ಅನೇಕರ ಹೃದಯಕ್ಕೆ ಲಗ್ಗೆ ಹಾಕಿದ್ದ…..ಕುರುಚಲು ಗಡ್ಡದ ಅವನ ನಗು ನೋಡೇ ಎಳೆಯ ಹುಡುಗಿಯರು ಬೆಸ್ತು ಬೀಳುತೊಡಗಿದರು. ಸುಮ್ಮಸುಮ್ಮನೆ ಮಳೆಯಲ್ಲಿ ನೆನೆಯತೊಡಗಿದರು. ಅವನ ಆಟೋಗ್ರಾಫ್ ಗಾಗಿ ದುಂಬಾಲು ಬೀಳುತ್ತಿದ್ದರು. ನೀನಿಷ್ಟ ಕಣೋ… ಅಂತ ಹಾಡೋಕೆ ಶುರುಮಾಡಿದ್ರು.ಇದ್ದಕ್ಕಿದ್ದಂತೆ ಎಲ್ಲ ನಟರು ಮದುವೆಯಾಗುವಂತೆ ಆತನೂ ಗಪ್ ಚುಪ್ ಆಗಿ ಮದುವೆನೂ ಆಗಿಬಿಟ್ಟ. ನಮ್ಮನ್ನೆಲ್ಲ ನಗಿಸೋನು, ಖುಷಿಪಡಿಸೋ ವ್ಯಕ್ತಿಯೊಬ್ಬ ಚತುರ್ಭುಜನಾದ ಅಂತ ಖುಷಿಪಡೋದನ್ನು ಬಿಟ್ಟು, ನನ್ನ ಓರಗೆಯ ಪತ್ರಕರ್ತ ಮಿತ್ರರೆಲ್ಲ ಅವನ ಮದುವೆಯ ಬಗ್ಗೆ ಸ್ಕೂಪ್ ಸುದ್ದಿಯನ್ನು ಹುಡುಕತೊಡಗಿದರು.
ಒಂದಿಷ್ಟು ಮಂದಿ ಅವಳಿಗೆ ಮೊದಲೇ ಒಂದು ಮಗು ಇದೆ ಅಂತ ಅರ್ಧ ಬೆಂದ ಬ್ರೇಕಿಂಗ್ ನ್ಯೂಸ್ ನೀಡಿ ಖುಷಿಪಟ್ಟರು…. ಹಿಂಗಿರುವಾಗ ಒಂದು ದಿನ ಆ ಕಣ್ಮಣಿಯ ಹೃದಯ ಸಾಮ್ರಾಜ್ಞಿ ನನ್ನ ಗೆಳತಿಗೆ ತುಂಬಾ ಆತ್ಮೀಯ ಸ್ನೇಹಿತೆ ಎನ್ನೋದು ನನ್ನ ಗಮನಕ್ಕೆ ಬಂತು. ಅವಳೊಂದಿಗೆ ದೂರವಾಣಿಯಲ್ಲಿ ಮಾತನಾಡುವ ಯೋಗವೂ ನನ್ನದಾಯ್ತು. ಹೇಳಿ ಕೇಳಿ ನಾನೂ ಪತ್ರಕರ್ತೆ ತಾನೇ.. ಅಯ್ಯೋ ಇವರಿಬ್ಬರು ಇಷ್ಟೊಂದು ಕ್ಲೋಜಾ ಅಂತ ನಾನೂ ಬಾಯಿಬಾಯಿ ಬಿಟ್ಟೆ.
ಅಷ್ಟೊತ್ತಿಗಾಗಲೇ ನನ್ನ ಗೆಳತಿಯಿಂದ ಫರ್ಮಾನು ಹೊರಟಿತ್ತು. ನಿನ್ನಷ್ಟೇ ಅವಳು ಕೂಡ ನನಗೆ ಆತ್ಮೀಯಳು. ಆ ಕಾರಣ ಅವಳನ್ನು ನೋಡುವಾಗ, ಮಾತನಾಡುವಾಗ ನಿನ್ನ ಪತ್ರಕರ್ತ ಬುದ್ಧಿಯನ್ನು ಬಿಡಬೇಕು. ಜೀ ಹುಜೂರ್ ಎಂದೆ. ಅಲ್ಲಿಗೆ ನಾನು ಆ ನಟ, ಅವನ ಮುದ್ದಿನ ಮಡದಿಗೆ ಸಂಬಂಧಿಸಿದ ವಿಷಯಕ್ಕೂ ನನ್ನ ಹುದ್ದೆಗೂ ಯಾವುದೇ ಸಂಬಂಧ ಇಲ್ಲ ಎಂದೂ ಇದ್ದು ಬಿಟ್ಟೆ.
ಹಿಂಗಿರುವಾಗ ಮತ್ತೊಂದು ದಿನ ನನ್ನ ಗೆಳತಿ….
ಅವಳು ವಾಂತಿ ಮಾಡ್ತಾ ಇದ್ದಾಳೆ ಕಣೆ ಎಂದು ಬಿಟ್ಟಳು.ನನಗೆ ಗೊತ್ತಾಗಿ ಬಿಡ್ತು. ಸುದ್ದಿ ಕೇಳಿದ್ದೇ ತಡ. ನನ್ನೊಳಗಿನ ಜರ್ನಲಿಸ್ಟ ಜಾಗೃತ.ಆದರೆ ಕೇಳೋದು ಹೇಗೆ. ನಾನ್ಯಾನಾದ್ರೂ ಸುದ್ದಿ ಮಾಡ್ತೀನಿ ಎಂದ್ರೆ ನನಗೆ ಏಟು ಬೀಳೋದು ಖಚಿತ. ಆದ್ರೂ ಬಿಡಬೇಕಲ್ಲ.ಸುದ್ದಿ ಮಾಡ್ಬಹುದಾ ನಾನು ಕೀಟಲೆ ಮಾಡ್ದೆ. ಥೂ ನಿನ್ನ..ನನ್ನ ಗೆಳತಿ ನನ್ನ ಮೇಲೆ ಕೆಂಡಾಮಂಡಲವಾಗಿದ್ದಳು. ಸಾರಿ ಕಣೆ…ತಮಾಷೆ ಮಾಡ್ದೆ.ನನಗೂ ಜವಾಬ್ದಾರಿ ಇದೆ ಎಂದು ಸಮಾಧಾನ ಪಡಿಸಿದೆ.
ಮನೆಗೆ ಬಂದು ಉಸ್ಸಪ್ಪಾ ಎಂದು ಮಂಚಕ್ಕೆ ಒರಗಿದವಳಿಗೆ ಅವಳು ವಾಂತಿ ಮಾಡುತ್ತಿರುವ ವಿಷಯದ ಸುತ್ತ ನನ್ನ ಮಿದುಳು ಗಿರಕಿ ಹೊಡೆಯತೊಡಗಿತು.ಲಕ್ಷ ಲಕ್ಷ ಜನರ ಮನಸ್ಸನ್ನು ಕದ್ದವನು ಅಪ್ಪ ಆಗ್ತಾ ಇದ್ದಾನೆ ಅನ್ನೋದು ಸುದ್ದಿ ಅಲ್ವಾ..ಅವನ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳೋಕೆ ಆಸೆ ಇದ್ದವರಿಗೆ ಅದು ಸುದ್ದಿನೇ. ಹಾಗಾಗಿದ್ದರೆ ನಾನು ಈ ಸುದ್ದಿ ಕೊಡಬೇಕಾ ಬೇಡವಾ…ಸುಮಾರು ಹೊತ್ತು ನನ್ನಲ್ಲಿ ನಾನು ಮಂಥನ ಮಾಡಿಕೊಂಡ ಮೇಲೆ ಒಂದು ನಿರ್ಧಾರಕ್ಕೆ ಬಂದೆ. ಬೇಡ. ವಾಂತಿ ಯಾರೂ ಮಾಡಲ್ಲ. ಅಂಥದ್ರಲ್ಲಿ ಅವಳೇನೂ ಘನಕಾರ್ಯ ಮಾಡಿದ್ದಾಳೆ. ಅವಳ ಈ ಸಂತೋಷವನ್ನು ಅವಳು ಅನುಭವಿಸಲಿ. ನಾವ್ಯಾಕೆ ಅದನ್ನು ಹಾಳು ಮಾಡ್ಬೇಕು ಎಷ್ಟೋ ಮನೆಗಳಲ್ಲಿ ವರ್ಷಕ್ಕೊಂದು ಸಾರಿ ವಾಂತಿ ಮಾಡೋದೇ ಕೆಲ ಹೆಂಗಸರಿಗೆ ಕೆಲಸ ಆಗಿಬಿಟ್ಟಿರುತ್ತೆ. ಇನ್ನು ಕೆಲವು ಮನೆಯಲ್ಲಿ ಅತ್ತೆನೂ ವಾಂತಿ ಸೊಸೆನೂ ವಾಂತಿ.. ಕಳೆದ ಅನೇಕ ದಿನಗಳಿಂದ ಈ ವಿಷಯ ನನ್ನನ್ನು ಹಾಗೇಯೆ ಕಾಡತೊಡಗಿದೆ. ಕಾರಣ ಏನು ಎಂದು ಹುಡುಕುತ್ತಲೇ ಇದ್ದೇನೆ.
ನಾವೇ ಮಾಡಿಕೊಂಡ ತಪ್ಪುಗಳು ಇಂದು ನಮ್ಮನ್ನು ಬಾಧಿಸುತ್ತಿರುವುದು ನಿಜ. ಆದರೆ ಎಲ್ಲೋ ಒಂದು ಕಡೆ ಸರಿಪಡಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂಬುದು ಮನದಟ್ಟಾದಾಗ ವಾಂತಿಗೆ ಬ್ರೇಕ್ ಹಾಕಿದೆ.ಆದರೆ ನಮ್ಮನ್ನು ನಾವು ತಿದ್ದಿಕೊಳ್ಳುವುದು ಹೇಗೆ. ಬೆಟ್ಟದಷ್ಟು ತಪ್ಪುಗಳು ನಮ್ಮ ಮುಂದಿವೆ. ಒಮ್ಮೆ ಹಿಂತಿರುಗಿ ನೋಡುತ್ತೇನೆ.ನಾವು ದಿನಾ ಎದ್ದು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಗಾಬರಿಯಾಗುತ್ತದೆ. ಬೆಳಿಗ್ಗೆ ಆಯ್ತಾ ಅಂತ ಕಾಯುತ್ತಲೇ ಇರುವ ನಾವು ಬೆಳಕಾಗುತ್ತಲೇ ರಾಜಕಾರಣಿಗಳ ಮನೆ ಕಾವಲು ಕಾಯತೊಡಗುತ್ತೇವೆ. ಅವನೋ..ತನಗೆ ಬೇಕಾದಾಗ ತಕ್ಷಣವೇ ಹೊರಬರುತ್ತಾನೆ.. ಅವನಿಗೆ ಬೇಡ ಎನಿಸಿದಾಗ ನಾವು ಗಂಟೆಗಟ್ಟಲೆ ಕಾವಲು ನಾಯಿ ಥರ ಹೊರಗಡೆ ಕಾಯಬೇಕು. ಅವನೆಷ್ಟೇ ಕಾಯಿಸಿದರೂ ನಾವಂತೂ ಅವರಿಗೆ ಮೈಕ್ ಹಿಡಿಯಲೇಬೇಕೆಂದು ತೀರ್ಮಾನ ಮಾಡಿಯೇ ಬಿಟ್ಟಿರುತ್ತೇವೆ. ನಮಗೆ ಗೊತ್ತು ಆ ರಾಜಕಾರಣಿ ಎಷ್ಟು ಭ್ರಷ್ಟ, ಎಷ್ಟು ನಿಕೃಷ್ಠ ಅಂತ. ಹೀಗಿದ್ದರೂ ನಾವು ಅವನ ಮುಂದೆ ಹಲ್ಲುಗಿಂಜುತ್ತೇವೆ. ಅವನು ನಮಗೆ ಕಾಫಿ ಕೊಡುತ್ತಾನೆ ತನ್ನ ಕೈಯ್ಯಾರೆ. ಅವನಿಗೆ ನಮಗಿಂತ ಹೆಚ್ಚು ಪ್ರಿಯ ನಮ್ಮ ಕೈಯ್ಯಲ್ಲಿರೋ ಕ್ಯಾಮರಾ. ಅದಕ್ಕೆ ಅವನು ಆಗಾಗ ತನ್ನ ಮುಖದ ಮೇಲೇ ಮಂದಹಾಸವೆಂಬ ಹೊನಲು ಬೆಳಕಿನ ಆಟ ಆಡ್ತಾ ಇರ್ತಾನೆ. ಬರೀ
ಸುಳ್ಳು ಬೊಗಳುವ ಆತ ಬೆಳಿಗ್ಗೆಯಿಂದ ರಾತ್ರಿವರೆಗೆ ಹಂಗೆ ಮಿಂಚ್ತಾ ಇರ್ತಾನೆ. ನಂತರ ಈ ರಾಜಕಾರಣಿಗಳು ಎಲ್ಲಿಗೆ ಹೋದ್ರು, ಯಾರ ಮನೆಯಲ್ಲಿ ಊಟ ಮಾಡಿದ್ರು, ಎಲ್ಲಿ ಮಲಕ್ಕೊಂಡ್ರು, ಯಾರಿಗೆ ಇಬ್ಬರು ಹೆಂಡಂದಿರು, ಹೀಗೆ ಇಂಥ ಗಾಸಿಪ್ ಗಳನ್ನು ಸುದ್ದಿ ಮಾಡೋದ್ರಲ್ಲಿ ನಮ್ಮ ಕಾಲ ಕಳೆದುಬಿಟ್ಟಿರುತ್ತೆ.
ಇತ್ತೀಚಿನ ಟಿಪ್ಪಣಿಗಳು