ಕೆಫೆ ‘ಪ್ರತಿಭಾ’ ಡೇ

ಶಾದಿ ಡಾಟ್ ಕಾಮ್, ಮೆಟ್ರಿಮೊನಿಯಲ್ ಕಾಲಂ ಹುಡುಕ್ತಾನೇ ಇರ್ತೀನಿ

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ…

 

ಇನ್ಯಾರಿಗೆ ಗಂಡು ಹುಡುಕ್ತಿದ್ದೀಯಾ

ನಿನಗೆ

ಹುಚ್ಚು ನಿಂಗೆ- ನಕ್ಕಳು ರಾಜಿ.

ನನಗೆ ವಿಶ್ವಾಸ ಇದೆ .ಈ ಬಾರಿ ಒಳ್ಳೇ ವರ ಸಿಕ್ಕೇ ಸಿಗ್ತಾನೆ.

ನಾನು ಫ್ರಸ್ಟ್ರೇಟೆಡ್ ಆಗಿದ್ದೀನಿ ಅಂತ ಅನ್ನಿಸ್ತಿದೆಯಾ ಸ್ವಲ್ಪ ಸಿಟ್ಟಿನಿಂದಲೇ ಕೇಳುತ್ತಾಳೆ

ನನ್ನನ್ನು ಇಷ್ಟೇನಾ ಅರ್ಥ ಮಾಡ್ಕೊಂಡಿದ್ದು ಎಂದು ನಾನೂ ಸಿಟ್ಟು ಪ್ರದರ್ಶಿಸುತ್ತೇನೆ.

35 ಆಗ್ಹೋಯ್ತಲ್ಲ. ಇನ್ನು ಯಾವ ಮಹಾನುಭಾವ ಬರ್ತಾನೆ? ಮತ್ತೆ ನಾನದರ ಬಗ್ಗೆ ವಿಚಾರ ಮಾಡ್ತಿಲ್ಲ. ಅಂಥ ಡಿಸೈರ್ ಇದ್ದಿದ್ದರೆ ನಾನೇ ಯಾರನ್ನಾದ್ರೂ ಇಟ್ಕೊತ್ತಿದ್ದೆ.ಇವನ್ನೆಲ್ಲ ಮೀರಿ ಬಂದಿದ್ದೇನೆ. ನಿನಗ್ಯಾಕೆ ಈ ಹುಚ್ಚು….

ನನ್ನನ್ನಾಕೆ ಪ್ರೀತಿಯಿಂದ ಗದರಿದಾಗ, ಅವಳನ್ನೊಮ್ಮೆ ಹಾಗೆ ನೋಡುತ್ತೇನೆ. ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಅವಳು ತನ್ನ ತಲೆಯನ್ನು ನುಣ್ಣಗೆ ಬೋಳಿಸಿಕೊಂಡಿದ್ದಳು.ನನಗೂ ಎಷ್ಟೋ ಸಾರಿ ಪರ್ಸಿಸ್ ಕಂಬಾಟ್ಟಾ, ಪ್ರೊತಿಮಾ ಬೇಡಿ ಥರ ತಲೆಬೋಳಿಸಿಕೊಂಡು ಫಿಲ್ ಫ್ರೀ ಥರ ಇರಬೇಕು ಎನ್ನಿಸಿದ್ದಿದೆ. ಆದರೆ ಧೈರ್ಯ ಇಲ್ಲ.

ಈ ಗೆಟ್ ಅಪ್ ನಲ್ಲಿ ಅವಳು ಅದೆಷ್ಟು ಚೆನ್ನಾಗಿ ಕಾಣಿಸುತ್ತಾಳೆ. ಮೈಯೋ ಜಿಮ್ಮರ್ ಥರ. ಬೆಳಿಗ್ಗೆ ಕಂಪಲ್ಸರಿ ಯೋಗ ಸಂಜೆ ಬ್ರಿಸ್ಕ್ ವಾಕಿಂಗ್. ಆರೋಗ್ಯಪೂರ್ಣ ಅವಳ ದೇಹ ನೋಡಿದ್ರೆ ಯಾರಿಗಾದ್ರೂ ಹೊಟ್ಟೆಕಿಚ್ಚಾಗಲೇ ಬೇಕು. ಬುದ್ದಿವಂತೆ.ಎಂಎಸ್ಸಿ ಗಣಿತದಲ್ಲಿ ರಾಶಿರಾಶಿ ಚಿನ್ನದ ಪದಕ ತಂದ್ಬಿಟ್ಟಿದ್ಳಲ್ಲಾ. ಕಣ್ಣಿಗೆ ಕನ್ನಡಕ, ಕಿವಿಗೊಂದು ಸಿಂಪಲ್ ಓಲೆ, ಕೈಯ್ಯಲ್ಲೊಂದು ಬ್ಲಾಕ್ ಮೆಟಲ್ ಬಳೆ, ಬಿಳಿ ಕಾಟನ್ ಸೀರೆಯಲ್ಲಿ ಎಷ್ಟೊಂದು ಡಿಗ್ನಿಫೈಡ್ ಆಗಿ ಕಾಣುತ್ತಿದ್ದಾಳೆ.

ಆದರೂ ಇವಳಿಗ್ಯಾಕೆ ಒಂದು ಗಂಡು ಸಿಕ್ತಾ ಇಲ್ಲ. ಹೀಗೆ ಯೋಚಿಸುವಾಗ ಒಮ್ಮೊಮ್ಮೆ ನನ್ನ ಮೇಲೆ ನನಗೆ ಕೋಪ ಬರುವುದುಂಟು. ಅವಳಿಗಿರುವ ಸ್ವಾತಂತ್ರ್ಯ ನನಗಿಲ್ಲ ಎಂಬ ಹೊಟ್ಟೆಕಿಚ್ಚಿಗೇನಾದರೂ ಹೆಂಗಾದರೂ ಮಾಡಿ ಅವಳನ್ನು ಸಂಸಾರವೆಂಬ ಬಂಧನದಲ್ಲಿ ಬಂಧಿಸಿಬಿಡಬೇಕೆಂದು ನಾನು ಈ ರೀತಿ ವರ್ತಿಸುತ್ತಿಲ್ಲ ತಾನೇ? ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತೇನೆ.

 

ಮತ್ತೆ ನನ್ನನ್ನು ನಾನು ಸಮಾಧಾನ ಪಡಿಸುವ ಪ್ರಯತ್ನ. ಅದ್ಯಾಕೋ ಏನೋ ರಾಜೀ ತನ್ನದೆಂಬ ಗೂಡಿನಲ್ಲಿ ನೆಮ್ಮದಿಯಾಗಿಯೇ ಇದ್ದಾಳೆ. ಆದರೆ ನನಗೋ ಅವಳಿಗೊಂದು ಗಂಡು ಹುಡುಕಲೇಬೇಕೆನ್ನುವ ಹುಚ್ಚು. ಭಾನುವಾರ ಬಂತೆಂದರೆ ಕ್ಲಾಸಿಫೈಡ್ಸ್, ಮೆಟ್ರಿಮೊನಿಯಲ್ ಕಾಲಂ ನೋಡುವ ನನ್ನ ಒತ್ತಾಯಕ್ಕೆ ಮಣಿದು ರಾಜೀ ಎರಡು ಮೂರು ಗಂಡುಗಳನ್ನು ನೋಡಿದ್ದಾಳೆ. ಸ್ವಲ್ಪ ವಯಸ್ಸಾದವರು, ವಿಧುರರು, ಡೈವೋರ್ಸಿಗಳು… ಎಷ್ಟೋ ಸಾರಿ ಅವರು ಕೊಡುವ ಜಾಹೀರಾತುಗಳಿಗೆ ಮೋಸ ಹೋಗಿರುವ ನಾನು ರಾಜೀ ಬೇಡ ಎನ್ನುವ ಮೊದಲೇ ನಾನೇ ಬೇಡ ಎಂದು ಅವಳನ್ನು ವಾಪಸು ಕರೆದುಕೊಂಡು ಬಂದಿದ್ದೇನೆ. ಹೊರಬಂದ ಮೇಲೆ ಇಬ್ಬರೂ ಹೊಟ್ಟೆ ಬಿರಿಯುವಷ್ಟು ನಕ್ಕಿದ್ದೇವೆ. ನಾನು ಮಾಡುವ ಅಧ್ವಾನಕ್ಕೆ ಅವಳು ಪ್ರೀತಿಯಿಂದ ಕಿವಿ ಜಿಗುಟುತ್ತಾಳೆ. ಇದಾದ ಮೇಲೆ ಯಾವುದೇ ಕಾರಣಕ್ಕೂ ಎಂತೆಂಥವರನ್ನೋ ರಾಜೀಗೆ ತೋರಿಸಬಾರದು ಎಂದು ನಿರ್ಧಾರ ಮಾಡುತ್ತೇನೆ.

ನನ್ನ ಮನಸ್ಸೋ ಮತ್ತೆ ಜಾಹೀರಾತು ಹುಡುಕುತ್ತಲೇ ಇರುತ್ತದೆ. ರಾಜೀಗೊಪ್ಪುವ ಅವಳನ್ನು ಮನಸಾರೆ ಪ್ರೀತಿಸುವ ಜೀವವೊಂದು ಎಲ್ಲೋ ಒಂದು ಕಡೆ ಜನ್ಮ ತಳೇದೇ ಇರುತ್ತದೆ ಅನ್ನೋ ಅಛಲ ನಂಬಿಕೆ ನನ್ನದು. ನನ್ನ ವಿಶ್ವಾಸ ನೋಡಿ ಅವಳು ನಗುತ್ತಾಳೆ.ನಿನ್ನ ತಲೆ ಸರಿಯಿಲ್ಲ ಬಿಡು ಎನ್ನುತ್ತಾಳೆ.ಅವಳು ಆ ರೀತಿ ಮನಬಿಚ್ಚಿ ನಗುವಾಗಲೆಲ್ಲಾ ನನಗೆ ಅಂದಿನ ದಿನಗಳು ನೆನಪಾಗ್ತಾವೆ.

ಕಣ್ಣುಗಳ ತುಂಬ ಬರೀ ಪ್ರೀತಿಯನ್ನೇ ತುಂಬಿಕೊಂಡಿದ್ದ ದಿನಗಳವು. ಅದೆಷ್ಟು ಖುಷಿಯಾಗಿದ್ದಳು ರಾಜೀ. ಒಬ್ಬರಿಗೊಬ್ಬರು ಒಂದು ಕ್ಷಣವೂ ಬಿಟ್ಟಿರಲಾರದ ಸ್ನೇಹ ನಮ್ಮಿಬ್ಬರದು. ಅವಳೋ ಬುಕ್ ವರ್ಮ್.ನಾನೋ ಸದಾ ನಿದ್ದೆ. ಅವಳು ಸಿಎಸ್ ಆರ್ ಓದಿದರೆ ನಾನು ಮಿಲ್ಸ್ ಎನ್ ಬೂನ್ ಓದುತ್ತಿದ್ದೆ. ಅಂಥಹ ಪುಸ್ತಕಗಳನ್ನು ನೋಡಿ ನಗುವ ರಾಜೀಗೆ ನೀನು ಸ್ವಲ್ಪನೂ ರೋಮ್ಯಾಂಟಿಕ್ ಇಲ್ಲ.ಅದಕ್ಕೆ ಅಷ್ಟೊಂದು ಬೋರಿಂಗ್ ಬುಕ್ಸ್ ಓದ್ತಿಯಾ ಎನ್ನುತ್ತಿದ್ದೆ.

ಇಂಥಹ ರಾಜೀಗೂ ಪ್ರೀತಿಯ ಜ್ವರ ತಗುಲಿತ್ತು. ಒಬ್ಬ ಬ್ಲ್ಯಾಕ್ ನನ್ನು ರಾಜೀ ಪ್ರೀತಿಸಿದ್ದಳು. ಇದನ್ನು ಕೇಳಿ ನನಗೆ ಕೊಂಚ ಇರುಸು ಮುರುಸಾದರೂ ಕಾಣೋಕೆ ಹೇಗಿದ್ದಾನೆ ವಿವಿಯನ್ ರಿಚರ್ಡ್ ತರಾನಾ, ಬ್ರಿಯನ್ ಲಾರಾ ಥರಾನಾ ಎಂದು ಕಿಚಾಯಿಸಿದ್ದೆ. ವಿಲ್ ಸ್ಮಿತ್ ಥರಾ ಇದ್ರೆ ನಂಗೆ ಬಿಟ್ಟು ಕೊಡೆ ಎಂದು ಅವಳಿಗೆ ಸಿಟ್ಟು ತರಿಸಿದ್ದೆ. ಎಡ್ಡಿ ಮರ್ಫಿ ಥರಾ ಇದ್ದಾನೆ ಎಂದು ಅವಳೂ ನನ್ನನ್ನು ಕೆಣಕಿದ್ದಳು.

ಡೆಂಜೆಲ್ ವಾಶಿಂಗ್ಟನ್, ವಿಲ್ ಸ್ಮಿತ್ ಬಗ್ಗೆ ತಲೆಕೆಡಿಸಿಕೊಂಡ ದಿನಗಳವು. ರಾಜೀ ಪ್ರೆಂಡ್ ಹೇಗಿರಬಹುದು ಎಂಬ ವಿಪರೀತ ಕ್ಯೂರಿಯಾಸಿಟಿ. ಅದೊಂದು ದಿನ ಅವನನ್ನು ನೋಡೋ ಸುಯೋಗ ನನಗೆ ಒದಗಿ ಬಂದಿತ್ತು. ಆತ ಯಾವುದೋ ಕೆಲಸಕ್ಕಾಗಿ ಅದೆಲ್ಲೋ ಹೊರಟಿದ್ದ. ಅಂದು ನಾವಿಬ್ಬರೂ ಬಸ್ ಸ್ಟಾಂಡ್ ಗೆ ಬಂದಿದ್ವಿ. ರಾಜೀ ಗೆಳೆಯನನ್ನು ನೋಡಿ ನನಗೇನೂ ಅನ್ನಿಸಲಿಲ್ಲ. ಆತ ಲಾರಾ ಥರನೂ ಇರಲಿಲ್ಲ. ವಿಲ್ ಸ್ಮಿತ್ ಥರನೂ ಇರಲಿಲ್ಲ. ನಾನು ಕೇಳಿದ್ದೆ. ಕಪ್ಪು ಹುಡುಗ್ರು, ಮ್ಯಾನ್ಲಿ ಆಗಿರ್ತಾರೆ. ಅವರ ಪ್ರೀತಿ ಗಾಢವಾಗಿರತ್ತೆ ಅಂತ.

ಆದರೆ ಈ ರಾಜೀ ಗೆಳೆಯನಲ್ಲಿ ಅಂಥದ್ದೇನೂ ನನಗೆ ಕಂಡು ಬರಲಿಲ್ಲ. ಒಳ್ಳೇ ಗೂಳಿ ಥರ ಇದ್ದಾನಲ್ಲೇ ಎಂದು ಅವಳಿಗೆ ತಿವಿದಿದ್ದೆ. ನನ್ನನ್ನು ಪರಿಚಯಿಸಿದ್ದಳು. ಅವನೇನೋ ಅಂದ. ನನಗೆ ಅರ್ಥವಾಗಲಿಲ್ಲ. ಅಕ್ಕಪಕ್ಕದ ಜನ ನಮ್ಮನ್ನೇ ತುಂಬಾ ಸಂಶಯದಿಂದ ನೋಡುತ್ತಿರುವುದು ನನ್ನಲ್ಲಿ ಅಸಮಾಧಾನ ಉಂಟು ಮಾಡಿತ್ತು. ನಾವಿನ್ನು ಹೊರಡೋಣ ಬಿಡೆ ಎಲ್ಲ ನಮ್ಮನ್ನೇ ನೋಡುತ್ತಿದ್ದಾರೆ ಎಂದಿದ್ದೆ. ಇವಳೋ ಗದ್ಗದಿತಳಾಗಿದ್ದಳು.

ಇನ್ನೇನು ಬಸ್ಸು ಹೊರಡಬೇಕು. ಅಷ್ಟರಲ್ಲಿ ಆತ ರಾಜೀನ ಎಳೆದುಕೊಂಡು ಮುತ್ತಿಕ್ಕಿದ್ದ. ಬಸ್ಸ್ಟಾಂಡಿನಲ್ಲಿದ್ದ ಜನರೋ ಭೂಕಂಪವಾದ ರೀತಿಯಲ್ಲಿ ಇವರಿಬ್ಬರನ್ನು ನೋಡತೊಡಗಿದ್ದರು. ನನಗೋ ಓಡಿ ಹೋಗಬೇಕು ಎಂಬ ಆಸೆ. ಏನೂ ಗೊತ್ತಿಲ್ಲದವರ ಥರ ನಿಂತುಬಿಟ್ಟಿದ್ದೆ. ಬಸ್ಸು ಹೊರಟಿತ್ತು. ರಾಜೀನ ಬಿಟ್ಟು ನಾನು ಮುಂದೆ ನಡೆದಿದ್ದೆ. ನನಗೆ ಇನ್ನಿಲ್ಲದ ಕೋಪ. ಹಿಂದಿನಿಂದ ಇವಳು ದಯವಿಟ್ಟು ತಪ್ಪು ತಿಳ್ಕೋಬೇಡ ಕಣೆ ಗೋಗರೆಯುತ್ತಿದ್ದಳು. ಈ ರೀತಿ ಪಬ್ಲಿಕ್ ನಲ್ಲಿ ಸರಿಯಲ್ಲ ರಾಜೀ. ಒಳ್ಳೇ ಗೂಳಿನ ಪ್ರೀತಿಸಿದ್ದೀಯಾ. ಅದು ನಿನ್ನಿಷ್ಠ. ಸ್ವಲ್ಪ ಸುತ್ತಮುತ್ತಲಿನವರ ಬಗ್ಗೆನೂ ಪರಿವೆ ಇರಬೇಕು ಅಲ್ವಾ. ಅವಳು ಸುಮ್ಮನಿದ್ದಳು.

ಕಷ್ಟನೋ ಸುಖನೋ ನಮ್ಮ ಇಂಡಿಯಾದವ್ರನ್ನೇ ಪ್ರೀತಿಸ್ಬಿಡೆ. ನಿನ್ನನ್ನು ನೋಡ್ಬೇಕೆಂದ್ರ ಅಷ್ಟು ದೂರ ನನ್ನ ಕೈಯ್ಯಲ್ಲಂತೂ ಬರಕ್ಕಾಗಲ್ಲ ನೋಡು. ಅವಳು ನಕ್ಕಿದ್ದಳು. ಸರಿ ಹಾಳಾಗಿ ಹೋಗು ಎಂದು ನಾನೂ ಸುಮ್ಮನಾಗಿದ್ದೆ. ಆದರೆ ಯಾವುದೇ ಕಾರಣಕ್ಕೂ ಇನ್ನು ಸ್ವಲ್ಪ ದಿನಗಳ ಕಾಲ ಬಸ್ ಸ್ಟ್ಯಾಂಡ್ ಬಳಿ ಸುಳಿಯಬಾರದು ಎಂದು ತೀರ್ಮಾನಿಸಿದ್ದೆ.

ರಾಜಿ ಪ್ರೇಮ ಮುಂದುವರಿದಿತ್ತು ಹಾಗಂತ ಅವಳೆಂದು ತನ್ನ ಓದಿನ ಜೊತೆ ಕಾಂಪ್ರಮೈಸ್ ಮಾಡಿಕೊಳ್ಳಲಿಲ್ಲ. ಹುಟ್ಟು ಬುದ್ದಿವಂತೆ ಗೊತ್ತಿರದ ವಿಷಯವಿರಲಿಲ್ಲ. ಓದಿದ್ದು ತನ್ನ ಮಾತೃಭಾಷೆಯಲ್ಲೇ. ಇಂಗ್ಲಿಷ್ನಲ್ಲಿ ಅಗಾಧ ಪಾಂಡಿತ್ಯ. ಹಾಸ್ಟೆಲ್ಗೆ ಬರೋ ಎಲ್ಲ ಪತ್ರಿಕೆಗಳನ್ನು ಸೀರಿಯಸ್ಸಾಗಿ ಅವಳು ಓದುತ್ತಿದ್ದರೆ, ನಾನು ಮ್ಯಾಟನಿ ಶೋಗೆ ತಡಕಾಡುತ್ತಿದ್ದುದು ಅವಳಿಗೆ ಕೋಪ ತರಿಸುತ್ತಿತ್ತು. ನಾವೆಲ್ಲ ಕ್ಯಾಂಟೀನ್ನಲ್ಲಿ ಹಾಳಾಗಿ ಹೋದ್ರೆ ಅವಳು ಮಾತ್ರ ಲೈಬ್ರರಿಯಲ್ಲಿ ಹೆಚ್ಹಿನ ಕಾಲ ಕಳೆಯುತ್ತಿದ್ದಳು.

ಫ್ರೆಂಚ್ ಭಾಷೆಯಲ್ಲಿ ಪರಿಣತಿ ಸಾಧಿಸಿದ್ದ ರಾಜೀ ಪ್ರೀತಿಯ ಬಲೆಗೆ ಬಿದ್ದ ಮೇಲೆ ಸ್ವಾಹಿಲಿ ಭಾಷೆ ಕಲಿಯತೊಡಗಿದ್ದಳು.ಗಣಿತ, ಇತಿಹಾಸ, ಜಿಯಾಗ್ರಪಿ ಹೀಗೆ ಏನು ಕೇಳಿದ್ರು ಎಲ್ಲವನ್ನು ಅರಗಿಸಿ ಕುಡಿದಿದ್ದ್ದ ರಾಜಿಗೆ ಎಲ್ಲರೂ ನೀನು ಐ ಎ ಎಸ್ ಮಾಡಬೇಕು ಕಣೆ ಎಂದು ದುಂಬಾಲು ಬೀಳುತ್ತಿದ್ದರು.

ಈ ಹಾಳಾದ ಓದು ಮತ್ತೆ ನಿನ್ನ ಪ್ರೀತಿಯನ್ನು ಅದ್ಹೇಂಗೆ ಸಂಭಾಳಿಸ್ತೀಯಾ ರಾಜೀ. ನಾನ್ಯಾರನ್ನಾದ್ರೂ ಪ್ರೀತಿಸಿದ್ರೆ ನನ್ನಿಂದ ಓದೋಕ್ಕಂತೂ ಸಾಧ್ಯವೇ ಇಲ್ಲ ಮಾರಾಯ್ತಿ ಎಂದಿದ್ದೆ. ಅವಳು ಅದಕ್ಕೆ ಎಲ್ಲವೂ ಅದರದರ ಪಾಡಿಗೆ ನಡ್ಕೊಂಡು ಹೋದ್ರೆ ಒಳ್ಳೇದು. ಯಾವೂದೂ ಹೊರೆ ಆಗ್ಬಾರ್ದು. ನನಗದು ಅಂದು ಅರ್ಥವಾಗಿರಲಿಲ್ಲ.

ಹೀಗಿದ್ದಾಗ ಒಂದು ದಿನ ರಾಜಿ ತನ್ನ ಬಾಯ್ ಫ್ರೆಂಡ್ ಮನೆಗೆ ನನ್ನನ್ನು ಆಹ್ವಾನಿಸಿದ್ದಳು. ಈ ಬಾರಿ ಮತ್ತೆ ಪಬ್ಲಿಕ್ ನಲ್ಲಿ ಮುತ್ತಿಕ್ಕೋದು ಗಿತ್ತಿಕ್ಕೋದು ಮಾಡಿದ್ರೆ ನಾನು ಸುಮ್ಮನಿರಲ್ಲ ನೋಡು ಎಂದಿದ್ದೆ. ಅವಳು ಪೂರ್ತಿ ಭರವಸೆ ನೀಡಿದ್ದಳು. ಬಾಡಿಗೆ ಮನೆ. ದೊಡ್ಡದಾಗಿಯೇ ಇತ್ತು. ಆದರೆ ಏನಿಲ್ಲವೆಂದರೂ ಅಲ್ಲಿ 20 ಮಂದಿ ಇದ್ದರು. ಹೆಣ್ಣು ಗಂಡು ಎನ್ನೋ ಯಾವುದೇ ಭೇದವಿಲ್ಲದೆ. ಎಲ್ಲರೂ ಒಂದೇ ಥರ. ನನ್ನನ್ನು ಕೆಲವರಿಗೆ ಪರಿಚಯ ಮಾಡಿಸಿದಳು. ಕೆಲವರು ನನ್ನನ್ನು ವಿಚಿತ್ರವಾಗಿ ನೋಡಿದರು. ನಮಗೆ ಅವರೆಲ್ಲ ವಿಚಿತ್ರ ಕಾಣಿಸುವಂತೆ ನಾನೂ ಕೂಡ ಅವರಿಗೆ ಹಂಗೆ ಕಾಣಿಸಿರಬೇಕು. ಅಷ್ಟರಲ್ಲೊಬ್ಬಳು ಬಂದು ತನ್ನನ್ನು ತಾನೇ ಪರಿಚಯಿಸಿಕೊಂಡಳು. ಅವಳ ಇಂಗ್ಲಿಷ್ ನನಗೆ ಸ್ವಲ್ಪ ಅರ್ಥ ಆಗಿತ್ತು. ಅವಳು ಆಕರ್ಷಕವಾಗಿದ್ದಳು. ಯಾಕೋ ಅವಳನ್ನು ನೋಡಿ ಖುಷಿಯಾಯ್ತು. ಅಷ್ಟೊತ್ತಿಗೆ ರಾಜೀ ಪ್ರೆಂಡ್ ಡಿಕಾಕ್ಶನ್ ಥರ ಏನೋ ಕುಡಿಯೋಕೆ ತಂದುಕೊಟ್ಟಿದ್ದ. ನನ್ನಮ್ಮ ಹೊಟ್ಟೆ ನೋವಿಗೆ ಕೊಡೋ ಕಷಾಯ ಥರ ಇತ್ತು. ಕಣ್ಮುಚ್ಚಿ ಕುಡಿದೆ.

ಅಲ್ಲಿಂದ ಹೊರಟ ನಾನು ಚಿಕ್ಕದರಲ್ಲಿ ಭಾಷಣ ಮುಗಿಸಿದ್ದೆ. ಏನೇ ಹೇಳು ರಾಜೀ. ಒಬ್ಬರ ಜೊತೆ ಬಾಳ್ವೆ ನಡೆಸೋಕೆ ಸ್ವಲ್ಪನಾದ್ರೂ ನಮ್ಮದು, ನಮ್ಮತನ ಇರಬೇಕು. ಪ್ರೀತಿ ಒಂದರಿಂದನೇ ಎಲ್ಲಾ ಆಗಲ್ಲ ಕಣೆ.ಇವನನ್ನು ಕಟ್ಟಿಕೊಂಡ ಮೇಲೆ ಇದೇ ಕಷಾಯ ಕುಡಿಯಬೇಕು ನೋಡು.ಹಾಸ್ಯ ಮಾಡಿದ್ದೆ. ಅವಳೇನೋ ಹೇಳ ಹೊರಟಳು. ಹಾಗೆ ಸುಮ್ಮನಾದಳು. ಮತ್ತೆ ಅವಳಿಗೆ ಬೇಸರ ಮಾಡಬಾರದು ಎಂದು ನಾನು ತೀರ್ಮಾನಿಸಿದೆ. ಆದರೆ ಇದಾದ ಕೆಲವೇ ದಿನಗಳಲ್ಲಿ ರಾಜೀಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿದ್ದವು. ಅವಳು ಹೆಚ್ಚು ಮಾತಾಡುತ್ತಿರಲಿಲ್ಲ. ತನ್ನ ಓದಿನಲ್ಲಿ ಮಗ್ನಳಾಗಿರೋದನ್ನು ನೋಡಿದ್ರೆ ಎಲ್ಲವೂ ಸರಿಯಾಗಿದೆ ಎನ್ನಿಸುತ್ತಿತ್ತು.

ಯಾಕೋ ತಳಮಳವಾಗಿ ಕೇಳಿಯೇ ಬಿಟ್ಟೆ ಏನಾಯ್ತು ಅಂತ ಹೇಳಬಾರ್ದಾ?

ವಿ ಬ್ರೊಕ್

ಯಾಕೆ?

ಐ ಥಿಂಕ್ ಅವನಿಗೆ ಬೇರೆಯವರ ಜತೆ ಅಫೇರ್ ,ರಿಲೇಶನ್ ಇದೆ. ಸಂಬಂಧ ಮುಂದುವರಿಸುವುದ್ರಲ್ಲಿ ಯಾವುದೇ ಅರ್ಥ ಇಲ್ಲ ಎಂದುಕೊಂಡೆ.

 

ಅವಳ ಮಾತು ಕೇಳಿ ನಾನೂ ಹೌಹಾರಿದ್ದೆ.

ಅವನ ಜೊತೆ ನಾನೇ ಮಾತಾಡ್ಲಾ? ಪುಸಲಾಯಿಸಿದೆ.

ಮೌನವಾಗಿದ್ದಳು.

ಒಂದೇ ಸಮಗಂಡಸರೆಲ್ಲ ಹೀಗೆ ಬಿಡೆ… ಸಮಾಧಾನ ಪಡಿಸಲು ಪ್ರಯತ್ನಿಸಿದೆ.

ಆದದ್ದಾದರೂ ಏನು?

ಅವನನ್ನು ನೋಡಬಾರದ ಸ್ಥಿತಿಯಲ್ಲಿ ನೋಡ್ದೆ. ಇನ್ನಾರದ್ದೋ ಜತೆ ಅವನಿದ್ದ. ಆ ಬಗ್ಗೆ ನಂಗೆ ನೋವಿಲ್ಲ. ಆದರೆ ಅವನಲ್ಲಿ ಯಾವುದೇ ಪಶ್ಚಾತ್ತಾಪ ಇರಲಿಲ್ಲ. ಮೇಲಾಗಿ ಏನೇನೋ ಸುಳ್ಳು ಹೇಳಿದ. ಇಷ್ಟ ಆಗಲಿಲ್ಲ. ಅದಕ್ಕೆ ಬಿಟ್ಟು ಬಿಟ್ಟೆ. ಮತ್ತವಳು ತನ್ನ ಕೆಲಸದಲ್ಲಿ ಮಗ್ನಳಾಗಿದ್ದಳು. ಅಂತೂ ರಾಜೀ ಪ್ರೇಮಕಥೆ ಈ ರೀತಿ ಅಂತ್ಯಕಂಡಿತ್ತು.

ಎಲ್ಲ ಪರೀಕ್ಷೆ ಮುಗಿಸಿ ಅವರವರ ಮನೆ ಸೇರಿದ್ವಿ. ಹೆಚ್ಚಿನವರು ನೌಕರಿ ಮದುವೆ ಅಂತ ಸೆಟ್ಲ್ ಆದ್ರೆ ರಾಜೀ ಮಾತ್ರ ಓದನ್ನು ಮುಂದುವರಿಸಿದ್ಲು. ಈ ಮಧ್ಯೆ ಮತ್ತೆ ಮತ್ತೆ ನಾನು ಅವಳಿಗೆ ಯಾವುದಾದರೂ ಕೆಲಸ ಹಿಡಿದುಕೊಂಡು ಮದ್ವೆ ಮಾಡ್ಕೊಳ್ಳುವಂತೆ ಹೇಳುತ್ತಿದ್ದೆ.. ಅದಕ್ಕವಳು ನನಗ್ಯಾಕೋ ಇನ್ನು ಬೇರೆಯವರನ್ನು ಇಷ್ಟಪಡಬಹುದು ಎನ್ನಿಸುತ್ತಿಲ್ಲ ಎಂದಿದ್ದಳು. ಇನ್ನೂ ಅವನನ್ನು ಮರೆತಿಲ್ವಾ? ಇದ್ಯಾವ ನ್ಯಾಯ ರಾಜೀ? ಅಂಥವನು ಅಂಥ ಗೊತ್ತಾದ ಮೇಲೂ ಆತನನ್ನು ನೆನಪಿಸಿಕೊಳ್ಳೋದು ಸರಿಯಲ್ಲ. ಅವನು ನಿನಗೆ ವರ್ಥ್ ಆಗಿರಲಿಲ್ಲ ನೆನಪಿಟ್ಕೋ ಅಂದೆ. ಅದು ನಂಗೂ ಗೊತ್ತು. ಅವನನ್ನೇನು ನಾನು ನೆನೆಸಿಕೊಳ್ತಾ ಇಲ್ಲ. ಆದ್ರೆ ಮತ್ತೆ ಯಾರನ್ನೋ ಇಷ್ಟ ಪಡೋಕೆ ಸಾಧ್ಯ ಇಲ್ಲ ಅನ್ಸುತ್ತೆ. ನೀನು ಏನೇ ಮಾಡು ನಾವಂತೂ ನಿನ್ನ ಮದ್ವೆ ಮಾಡ್ಸೇ ಮಾಡ್ತೀವಿ ನೋಡ್ತಾ ಇರು, ನನ್ನ ಮಾತಿಗೆ ಮತ್ತವಳು ನಕ್ಕಿದ್ದಳು.

ಅಲ್ಲಿಂದ ಎಷ್ಟೋ ವರ್ಷ ಅವಳಿಗೆ ಗಂಡು ಹುಡುಕುವ ನಮ್ಮ ಕೆಲಸ ಸಾಗಿತ್ತು. ಅಷ್ಟರಲ್ಲಿ ಅವಳು ಪಿಎಚ್ ಡಿ ಮುಗಿಸಿದ್ದಳು. ರಾಜೀ ಕ್ವಾಲಿಫಿಕೇಶನ್ ಗೆ ಒಳ್ಳೋಳ್ಳೇ ಕೆಲಸಗಳು ಹುಡುಕಿಕೊಂಡು ಬರುತ್ತಿದ್ದವು. ಆದರೆ 6 ತಿಂಗಳು ಕೆಲಸ ಮಾಡಿದರೆ ಹೆಚ್ಚು. ಭ್ರಷ್ಟ ವ್ಯವಸ್ಥೆ ನನಗೆ ಸಹಿಸಕ್ಕಾಗಲ್ಲ ಕಣೆ. ಅದಕ್ಕೆ ಬಿಟ್ಟು ಬಂದೆ ಎನ್ನೋಳು. ಎಷ್ಟಂತ ಕೆಲಸಕ್ಕೆ ರಾಜೀನಾಮೆ ಕೊಡ್ತೀಯಾ. ಹೀಗೆ ಮಾಡ್ತಾ ಹೋದ್ರೆ ವ್ವವಸ್ಥೆ ಸುಧಾರಿಸಲ್ಲ. ಅಲ್ಲೇ ನಿಂತು ಹೋರಾಡಬೇಕಾಗುತ್ತೆ.ಎಲ್ಲಾ ಗದರಿದ ಮೇಲೆ ಯಾವುದೋ ಕೆಲಸಕ್ಕೆ ಕಚ್ಚಿಕೊಂಡಿದ್ದಳು. ತನ್ನಿಬ್ಬರು ತಂಗಿಯರು ಪ್ರೀತಿಸಿದವರನ್ನೇ ಕೊಟ್ಟು ಮದುವೆ ಮಾಡಿಸಿದ್ದಳು. ಯಾವುದೇ ಜವಾಬ್ದಾರಿಯಿಲ್ಲದಂತೆ ಕಂಡು ಬರುತ್ತಿದ್ದ ಅವಳಪ್ಪ ಮಗಳ ಮದುವೆ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಮಗಳು ಮನೆಯಲ್ಲೇ ಇದ್ರೆ ತಮಗೆ ಆಸರೆ ಆಗ್ತಾಳೆ ಅನ್ನೋದು ಅವರ ಭಾವನೆಯಾಗಿತ್ತೇನೋ.

ಈ ಮಧ್ಯೆ ರಾಜೀ ತಂಗಿ ವಿದೇಶಕ್ಕೆ ನೆಗೆದಿದ್ದಳು ತಾನು ಹೆತ್ತ ಮಗುವನ್ನು ಅವಳ ಕೈಗೆ ಕೊಟ್ಟು. ಅಲ್ಲಿಂದ ಆ ಮಗುವನ್ನು ನೋಡಿಕೊಳ್ಳೋದೆ ಅವಳಿಗೆ ಕೆಲಸ. ಮಗುವಿಗೆ ರಾಜಿನೇ ತಾಯಿ ತಂದೆ ಎಲ್ಲ. ಅವಳ ಹೆಚ್ಚಿನ ಸಮಯ ಮಗುವಿನ ಆರೈಕೆಯಲ್ಲಿ ಕಳೆದು ಹೋಗುತ್ತಿತ್ತು. ಒಂದು ರೀತಿ ಮಗುವಿನೊಂದಿಗೆ ತಾನೂ ಮಗುವಾಗಿದ್ದಳು. ತನಗೆ ಬುದ್ಧಿ ಬಂದಾಗಿನಿಂದ ಎದುರಿಗೆ ಕಂಡಿದ್ದು, ರಾಜೀನೆ ಆಗಿದ್ರಿಂದ ರಾಜಿಯನ್ನೆ ಅದು ಅಮ್ಮಾ ಎಂದು ಕರೆಯುತ್ತಿತ್ತು.ಅವಳು ಖುಷಿಯಾಗಿರುವುದನ್ನು ನೋಡಿ ನಾವು ಎಲ್ಲ ನಿಶ್ಚಿಂತರಾಗೇ ಇದ್ವಿ.

ಇದ್ದಕ್ಕಿದ್ದಂತೆ ಒಂದು ದಿನ ರಾಜೀ ತಂಗಿ ಹಾಜರಾಗಿದ್ದಳು. ಅಮೆರಿಕದಲ್ಲಿ ಒಳ್ಳೊಳ್ಳೇ ಸ್ಕೂಲ್ ಇವೆ. ಅಲ್ಲೇ ಹಾಕಿಸ್ತೀನಿ ಅಂದಿದ್ದಳು. ಇವಳಿಗೋ ಮಗುವನ್ನು ಇಲ್ಲೇ ಬಿಟ್ಬಿರು ಎಂದು ಹೇಳಲಿಕ್ಕಾಗದು. ನಾನೇ ಧೈರ್ಯವಹಿಸಿ ಹೇಳಿದ್ದೆ. ರಾಜೀ, ಮಗು ಒಬ್ಬರಿಗೊಬ್ಬರು ತುಂಬಾ ಹಚ್ಚಿಕೊಂಡು ಬಿಟ್ಟಿದ್ದಾರೆ. ಇಲ್ಲೇ ಇದ್ದರೇನಂತೆ? ಅದಕ್ಕವಳು ನಾಳೆ ಮಗು ನಮ್ಮನ್ನು ಸಂಪೂರ್ಣ ಮರೆತುಬಿಡಬಾರದು ಎಂದಿದ್ದಳು. ಎಂಥಹ ಪರಮ ಸ್ವಾರ್ಥಿ ಈಕೆ? ಅಷ್ಟು ಚಿಕ್ಕ ಮಗುವನ್ನು ಬಿಟ್ಟು ಹೋಗುವಾಗ ನಿನಗೇನು ಅನಿಸಲಿಲ್ವ? ಕೋಪದಿಂದ ನಾನೂ ಗುಡುಗಿದ್ದೆ. ಮಗುಗೆ ಜ್ವರ ಬಂದಾಗ ನೀನೆಲ್ಲಿದ್ದೆ.ಇಂಜೆಕ್ಶನ್ ನೋವಿಗೆ ಮಗು ಕೂಗಿಕೊಂಡಾಗ ಅಳೋಕೆ ನೀನಿದ್ಯಾ? ಇವನ್ನೆಲ್ಲ ಅನುಭವಿಸ್ದೋಳು ರಾಜೀ ಕಣೆ. ನೀನು ಹೆತ್ತಿರೋದನ್ನು ಬಿಟ್ರೆ ಇನ್ನೇನು ಮಾಡಿರ್ಲಿಲ್ಲ. ರಾಜೀ ನನ್ನನ್ನು ಸಮಾಧಾನಿಸಿದ್ದಳು.

ಮಗುವನ್ನು ಉಳಿಸಿಕೊಳ್ಳುವ ನಮ್ಮ ಎಲ್ಲ ಪ್ರಯತ್ನಗಳು ವಿಫಲವಾಗಿದ್ವು. ರೆಡಿಮೆಡ್ ಮಗುವನ್ನು ಹೊತ್ತು ರಾಜೀ ತಂಗಿ ಅಮೆರಿಕಕ್ಕೆ ಹಾರಿದ್ದಳು. ರಾಜೀ ಮತ್ತೆ ಒಂಟಿಯಾದಳೆಂದು ನನಗೆನಿಸಿತ್ತು. ಇದಾಗಿ ಮತ್ತಷ್ಟು ವರ್ಷಗಳು ಕಳೆದಿವೆ. ರಾಜೀ ಖುಷಿಯಾಗಿಯೇ ಇದ್ದಾಳೆ. ಅನಾಥಾಶ್ರಮ ನಡೆಸ್ತಾಳೆ. ಈಗಲೂ ಅಷ್ಟೇ ಓದುತ್ತಾಳೆ. ದೇಶ ವಿದೇಶ ಸುತ್ತುತ್ತಾಳೆ. ಆದರೂ ನನಗೆ ಅವಳಿಗೊಂದು ಗಂಡು ಹುಡುಕಬೇಕು ಅಂತ ಅನ್ನಿಸುತ್ತಲೇ ಇರುತ್ತದೆ. ಮತ್ತೆ ಮತ್ತೆ ಶಾದಿಡಾಟ್ ಕಾಮ್, ಮೆಟ್ರಿಮೊನಿಯಲ್ ಕಾಲಂ ಹುಡುಕ್ತಾನೇ ಇರ್ತೀನಿ. ರಾಜೀನ ಪ್ರೀತಿಸೋ ಜೀವ ಸಿಗಬಹುದು ಎನ್ನೋ ಆಸೆಯಿಂದ…

ಕಲೆ: ಗುಜ್ಜಾರ್

ಅಲ್ಲಿ ಚಪ್ಪಲಿಯೇ ದೇವರಾಗಿ ಬೆಳೆದು ನಿಂತಿತ್ತು!

 

ಏಷ್ಯಾನೆಟ್ ಸುವರ್ಣ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾಗಿರುವ ಶಶಿಧರ ಭಟ್ ಕನ್ನಡ ಪತ್ರಿಕೋದ್ಯಮದಲ್ಲಿ ಸಾಕಷ್ಟು ವರ್ಷ ಈಜಿದ್ದಾರೆ. ಈಟಿವಿ ಗಾಗಿ ‘ಬಾನಾಮತಿ’ ನಿರ್ದೇಶಿಸಿದ್ದಾರೆ.

ಆ ಬಾನಾಮತಿಯ ಚಿತ್ರೀಕರಣಕ್ಕೆ ಕರ್ನಾಟಕದ ಉದ್ದಗಲಕ್ಕೂ ಅಲೆದಾಡಿದಾಗ ಆದ ಅನುಭವಗಳನ್ನು ಈಗ ದಾಖಲಿಸುತ್ತಿದ್ದಾರೆ. ಅಂತಹ ಒಂದು ಅನುಭವವನ್ನು ತಮ್ಮ ಬರಲಿರುವ ಪುಸ್ತಕದಿಂದ ಆಯ್ದು ಕೊಟ್ಟಿದ್ದಾರೆ-

 

-ಶಶಿಧರ್ ಭಟ್

ಆ ಊರೆ0ಬ ಊರು. ಅಲ್ಲಿ ಬದುಕು ಬೀದಿಯಲ್ಲಿ ಬಿದ್ದು ಆಟವಾಡ್ತಾ ಇತ್ತು. ಟಾರು ಕಾಣದ ರಸ್ತೆಗಳು… ರಸ್ತೆಯ ಮೇಲೆ ಹರಿಯುವ ಚರ0ಡಿ ನೀರು. ದೊಡ್ಡ ಗಾಳಿ ಬ0ದರೆ ಹಾರಿ ಹೋಗುವ ಮನೆಯ ಮಾಡುಗಳು. ಅರ್ಧ ಬಿದ್ದ ಕಿಡಕಿ ಬಾಗಿಲುಗಳು. ಇವುಗಳ ನಡುವೆ ಇಣುಕುವ ಕಣ್ಣುಗಳು.

ನಿಜ ಅಲ್ಲಿ ಬದುಕು ರಸ್ತೆಗೆ ಬಿದ್ದಿತ್ತು…….. ಆ ಊರಿನಲ್ಲಿ ಸ್ವಲ್ಪ ನೋಡಬಹುದಾದ ಕಟ್ಟಡ ಎ0ದರೆ ಅದೊ0ದೇ. ಆ ಕಟ್ಟಡ ಮಾತ್ರ, ಖಾಸಾ ಕಲ್ಲಿನಿ0ದ ಕಟ್ಟಲಾಗಿತ್ತು. ಅದರ ಬುನಾದಿ ಭದ್ರವಾಗಿತ್ತು. ಅಲ್ಲಿನ ಜನರ ನ0ಬಿಕೆಯ0ತೆ. ಇರುವ ಬಾಗಿಲು ಗಟ್ಟಿಯಾಗಿತ್ತು. ಯಾವುದೇ ಮಳೆಗೆ, ಗಾಳಿಗೆ ಬೀಳಲಾರದ0ತಹ ಕಟ್ಟಡ. ಅದು ಆ ಊರಿನ ದೇವಾಲಯ…… ಅದು ಆ ಊರಿನಲ್ಲಿ ನ0ಬಿಕೆ ಮತ್ತು ಪರ0ಪರೆ ಎಷ್ಟು ಗಟ್ಟಿಯಾಗಿದೆ ಎ0ಬುದನ್ನು ಸ0ಕೇತಿಸುವ0ತಿತ್ತು. ಹಾಗೆ ಅದೇ ಅಲ್ಲಿನ ಬದುಕನ್ನು, ಜನಜೀವನವನ್ನು ಅವರ ನ0ಬಿಕೆಯನ್ನು ಪ್ರತಿನಿಧಿಸುವ0ತೆಯೂ ಇತ್ತು….. ಹೌದು, ಜನರ ಬದುಕಿನಲ್ಲಿ ಗಟ್ಟಿಯಾಗಿದ್ದು ಅವರ ನ0ಬಿಕೆ ಮಾತ್ರ………

ಆ ದೇವಾಲಯದ ಮು0ದೆ ಇದ್ದ ಒ0ದು ಹಳೆಯ ಮ0ಟಪ. ಆ ಮ0ಟಪದಲ್ಲಿ ಇದ್ದುದು ಹಲವು ಚಪ್ಪಲಿಗಳು…. ಆ ಚಪ್ಪಲಿ ಚಪ್ಪಲಿಯಾಗಿರಲಿಲ್ಲ. ಅದು ಆ ದೇವರ ಪಾದರಕ್ಷೆಯಾಗಿತ್ತು. ಅಲ್ಲಿಗೆ ಬ0ದವರು ಮೊದಲು ದೇವರಿಗೆ ಕೈ ಮುಗಿಯುತ್ತಿದ್ದರು. ನ0ತರ ನೇರವಾಗಿ ಆ ಮ0ಟಪದ ಸಮೀಪ ಬ0ದು ಚಪ್ಪಲಿಗೆ ಕೈ ಮುಗಿಯುತ್ತಿದ್ದರು. ಹಾಗೆ ಚಪ್ಪಲಿಯನ್ನು ಎತ್ತಿಕೊ0ಡು ಮೈ ಕೈಗೆ ಬಡಿದುಕೊಳ್ಳುತ್ತಿದ್ದರು.

ಅಲ್ಲಿ ನಡೆಯುತ್ತಿದ್ದುದು ಚಪ್ಪಲಿ ಸೇವೆ……!

ಇದೆ0ತಹ ಭಕ್ತಿ….?

ಇದೆ0ತಹ ಆಚರಣೆ…..!

ಯಾಕೆ ಇವರೆಲ್ಲ ಚಪ್ಪಲಿಯಿ0ದ ಮೈ ಕೈಗೆ ಹೊಡೆದುಕೊಳ್ಳುತ್ತಿದ್ದಾರೆ?

ಅಲ್ಲಿದ್ದ ಆ ವ್ಯಕ್ತಿ ಹೇಳಿದ…….

“ಈ ಚಪ್ಪಲಿಯಿ0ದ ಹೊಡೆದುಕೊ0ಡರೆ ಮೈ ಕೈ ನೋವು ಹೋಗತೈತಿ”

“ಭೂತ, ದೆವ್ವ, ಪಿಶಾಚಿಯ ಕಾಟದಿ0ದ ಬಿಡುಗಡೆ ಆಗತ್ತೈತಿ” ಇನ್ನೊಬ್ಬ ಹೇಳಿದ…….

 

ಆ ಊರಿನಲ್ಲಿ ಕಳೆದ ಹಲವು ವರ್ಷಗಳಿ0ದ ಆ ಚಪ್ಪಲಿ ದೇವರಾಗಿತ್ತು.

ಅಲ್ಲಿ ದೇವರ ಚಪ್ಪಲಿ ಮಾಡುವುದಕ್ಕೂ ಸ0ಪ್ರದಾಯ ಇತ್ತು. ಅಲ್ಲಿನ ಕೆಳವರ್ಗದ ಜನ, ತಮ್ಮ ಮನೆಯಲ್ಲಿ ನಡೆಯುವ ಮದುವೆ ಸ0ದರ್ಭದಲ್ಲಿ ಚಪ್ಪಲಿ ನೀಡುವ ಹರಕೆ ಹೊತ್ತುಕೊಳ್ಳುತ್ತಾರೆ. ಹಾಗೆ ಹರಕೆ ಹೊತ್ತವರು ಬಿಳಿ ಅಥವಾ ಕ0ದು ಬಣ್ಣದ ಎತ್ತನ್ನು ಕೊ0ಡುಕೊಳ್ಳುವುದರೊ0ದಿಗೆ ಈ ವಿಚಿತ್ರ ಆಚರಣೆ ಪ್ರಾರ0ಭವಾಗುತ್ತೆ. ಆ ಊರಿನ ಜನ ಈ ದೇವರ ಚಪ್ಪಲಿಯ ಕಥೆಯನ್ನು ಹೇಳ್ತಾ ಇದ್ದರು. ಹಾಗೇ ತಮ್ಮ ಊರಿನ ಕಥೆಯನ್ನ. ಅಲ್ಲಿ ಬೆಳೆದು ಬ0ದ ನ0ಬಿಕೆಯ ಕಥೆಯನ್ನ…….

 

ಆ ದೇವರು ಊರ ನಡುವೆ ಇದ್ದ. ಆದರೆ ಚಪ್ಪಲಿ ತಯಾರಿಸುವವರು, ಊರ ಹೊರಗೆ ಇದ್ದರು. ಅವರು ಈ ದೇವರಿಗೆ ಚಪ್ಪಲಿ ಮಾಡಿಕೊಡುತ್ತಿದ್ದರು. ಆದರೆ ಅವರು ಮಾಡಿದ ಚಪ್ಪಲಿಯ ಮೂಲಕ ಪವಾಡ ಮಾಡುವ ದೇವರು ಅವರನ್ನು ಮಾತ್ರ ಊರ ಹೊರಕ್ಕೆ ಇಟ್ಟಿದ್ದ. ದೇವಾಲಯದ ಮೆಟ್ಟಿಲ ಕೆಳಗೆ ನಿಲ್ಲುವ0ತೆ ಮಾಡಿದ್ದ.

ಅಲ್ಲಿದ್ದ ಇನ್ನೊಬ್ಬರು ದೇವರ ಚಪ್ಪಲಿಯ ಕಥೆಯನ್ನ ಮು0ದುವರಿಸಿದರು.

“ಎತ್ತುಗಳನ್ನು ಖರೀದಿಸಿ ತ0ದ ಮೇಲೆ ಅದಕ್ಕೆ ಚಾಕು ಹಾಕಿ ಕೊಲ್ತೀವಿ. ನ0ತರ ಅದರ ಚರ್ಮವನ್ನು ತೆಗೆದು ಹದ ಮಾಡ್ತೀವಿ. ಅದರಿ0ದ ಚಪ್ಪಲಿಯನ್ನು ಸಿದ್ಧ ಮಾಡ್ತೀವಿ. ಹೀಗೆ ಸಿದ್ಧ ಮಾಡಿದ ಚಪ್ಪಲಿಯನ್ನು ಮೆರವಣಿಗೆಯ ಮೂಲಕ ದೇವಾಲಯಕ್ಕೆ ತ0ದು ಸಲ್ಲಿಸ್ತೇವೆ”. “ಚಪ್ಪಲಿ ಮಾಡುವಾಗಲೂ ಬಾಳ ನೇಮ, ನಿಷ್ಠೆ ಬೇಕು. ಒ0ದೇ ರಾತ್ರಿಯಲ್ಲಿ ಚಪ್ಪಲಿ ಮಾಡಿ ಮುಗಿಸಬೇಕು. ಹೀಗೆ ಚಪ್ಪಲಿ ಮಾಡುವಾಗ ಮಲಮೂತ್ರ ವಿಸರ್ಜನೆ ಮಾಡಿದರೆ ತಕ್ಷಣ ಸ್ನಾನ ಮಾಡಬೇಕು. ಎಷ್ಟು ಸಲ ಕಾಲು ಮಡಚುತ್ತೇವೆಯೋ ಅಷ್ಟು ಬಾರಿ ಸ್ನಾನ”.

 

ಆ ಊರಿನಲ್ಲಿ ಚಪ್ಪಲಿ ಮಾಡುವವರ ಸುಮಾರು 60 ಮನೆಗಳಿದ್ದವು. ಅವರಲ್ಲಿ ಬಹಳಷು ಜನ ತಮ್ಮ ಮನೆಯಲ್ಲಿ ಮದುವೆಯಾದಾಗ ಚಪ್ಪಲಿ ಮಾಡಿ ದೇವರಿಗೆ ಸಲ್ಲಿಸಿದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಚಪ್ಪಲಿ ಮಾಡುವವರು ಕಡಿಮೆಯಾದರಿ0ದ ಬೇರೆ ಊರುಗಳಿ0ದ ದೇವರ ಚಪ್ಪಲಿ ಮಾಡುವವರನ್ನು ಕರೆಸಿ ತಮ್ಮ ಹರಕೆಯನ್ನು ಮುಗಿಸುವ ಸ0ಪ್ರದಾಯವೂ ಪ್ರಾರ0ಭವಾಗಿತ್ತು.

ಊರ ಹೊರಗೆ ಇರುವ ಇವರು ಮಾಡಿದ ಚಪ್ಪಲಿ ಮಾತ್ರ ದೇವಾಲಯದ ಬಳಿ ಬ0ದ ತಕ್ಷಣ ಪವಿತ್ರವಾಗುತ್ತಿತ್ತು. ಕೆಲವರ0ತೂ ರಾತ್ರಿಯ ಹೊತ್ತು ಈ ದೇವರ ಚಪ್ಪಲಿಯನ್ನ ತಮ್ಮ ತಮ್ಮ ಮನೆಗಳಿಗೆ ತೆಗೆದುಕೊ0ಡು ಹೋಗಿ ಪೂಜೆ ಮಾಡುತ್ತಿದ್ದರು. ಅಲ್ಲಿನ ಬಹುತೇಕ ಜನರ ಕಾಲುಗಳಲ್ಲಿ ಪಾದರಕ್ಷೆ ಇರಲಿಲ್ಲ. ಆದರೆ ಆ ದೇವರು ಮಾತ್ರ ಎ0ದೂ ಚಪ್ಪಲಿಯ ಸಮಸ್ಯೆಯನ್ನು ಎದುರಿಸಿರಲಿಲ್ಲ. ಜನ ತಮ್ಮ ಕಾಲುಗಳಿಗೆ ಪಾದರಕ್ಷೆ ಇಲ್ಲದಿದ್ದರೂ ಈ ದೇವರು ಬರಿಗಾಲಿನಲ್ಲಿ ಇರುವ0ತೆ ಮಾಡಿರಲಿಲ್ಲ.

ಅದು ಕೊಪ್ಪಳ ಜಿಲ್ಲೆಯ ಒ0ದು ಹಳ್ಳಿ. ಸದಾ ಮಳೆಗಾಗಿ ಕಾಯುತ್ತಲೇ ತಮ್ಮ ಬದುಕನ್ನು ಸವೆಸುವ ಜನ. ಅವರು ಉರಿ ಬಿಸಿಲಿನಲ್ಲೂ ಬರಿಗಾಲಿನಲ್ಲಿ ಓಡಾಡುವ ಬರಿಗಾಲು ಬ0ಟರು. ಆದರೆ ಅವರ ದೇವರು ಹಾಗಿರಲಿಲ್ಲ……… ಈ ಪ್ರದೇಶದ ಹಲವು ಹಳ್ಳಿಗಳಲ್ಲಿ ಈ ಚಪ್ಪಲಿ ಸೇವೆಯ ಪರ0ಪರೆ ಇದೆ. ಅದು ಯಾವಾಗಿನಿ0ದ ಬೆಳೆದು ಬ0ದಿದೆ, ಅದರ ಹಿನ್ನೆಲೆ ಏನು ಎ0ಬುದು ನಿಗೂಢ.

ನಾವು ಆ ದೇವಾಲಯದಿ0ದ ಹೊರಕ್ಕೆ ಬ0ದಾಗ ಅಲ್ಲಿ ಇದ್ದ ನೂರಾರು ಜನ, ಅವರೆಲ್ಲ ನಾವು ನಡೆಸುತ್ತಿದ್ದ ಚಿತ್ರೀಕರಣವನ್ನು ನೋಡಲು ಬ0ದಿದ್ದರು. ಆ ಊರಿನಲ್ಲಿ ಇದುವರೆಗೆ ಯಾವುದೇ ಕ್ಯಾಮರಾ ಪ್ರವೇಶ ಮಾಡಿರಲಿಲ್ಲ. ಹೀಗಾಗಿ ಅವರಿಗೆ ನಮ್ಮ ಚಿತ್ರೀಕರಣ ಒ0ದು ಈವೆ0ಟ್ ಆಗಿತ್ತು……..

ನಾವು ಅಲ್ಲಿ ಸೇರಿದ್ದವರು ಕಾಲುಗಳನ್ನು ನೋಡಿದೆವು. ಪಾದಗಳತ್ತ ಕಣ್ಣು ಹಾಯಿಸಿದೆವು. ಆ ಬರಿಗಾಲುಗಳು ನಮ್ಮನ್ನು ಅಣಕಿಸುತ್ತಿರುವ0ತೆ, ಅದನ್ನು ನೋಡಿ ಆ ದೇವಾಲಯದ ಒಳಗೆ ಇರುವ ದೇವರು ನಮ್ಮನ್ನು ಅಣಕಿಸುತ್ತಿರುವ0ತೆ ಭಾಸವಾಗತೊಡಗಿತು. ಇವುಗಳ ನಡುವೆ ಜನರಿ0ದ ಪೂಜೆ ಸ್ವೀಕರಿಸುತ್ತಿದ್ದ ಆ ಚಪ್ಪಲಿಗಳು ಅಲ್ಲಿ ಬೆಳೆಯುತ್ತಿದ್ದ0ತೆ, ಉಳಿದ ಎಲ್ಲವೂ ಮರೆಯಾಗುತ್ತಿದ್ದ0ತೆ ನಾವು ಅಲ್ಲಿ0ದ ಹೊರಟೆವು.

‘ಕೆ’ ಫಾರ್ ಕುಶಲೋಪರಿ

ತಮ್ಮ ಹೊಸತನದ ಕಥೆಗಳು ಹಾಗೂ ಮನಮುಟ್ಟುವ ಪ್ರಬಂಧಗಳ ಮೂಲಕ ಈಗಾಗಲೇ ಓದುಗರನ್ನು ತಲುಪಿರುವ ಕೆ ಸತ್ಯನಾರಾಯಣ ಈಗ ಬ್ಲಾಗ್ ಲೋಕದ ಬಾಗಿಲು ತಟ್ಟಿದ್ದಾರೆ. ಕುಶಲೋಪರಿ ಅವರ ಬ್ಲಾಗ್.

ಯು ಆರ್ ಅನಂತಮೂರ್ತಿ, ‘ಕಾಮರೂಪಿ’ ಪ್ರಭಾಕರ್, ಓ ಎಲ್ ಎನ್, ಕೆ ವಿ ನಾರಾಯಣ್ ಅವರು ಬ್ಲಾಗ್ ಮಂಡಲವನ್ನೂ ಕಟ್ಟಿದ್ದಾರೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವವರು ಸತ್ಯನಾರಾಯಣ. ಕಾಲಜಿಂಕೆ ಎಂಬ ಕಾದಂಬರಿ, ಈತನಕದ ಕಥೆಗಳು ರೀಸೆಂಟ್ ಪುಸ್ತಕಗಳು.

ಕೆ ಸತ್ಯನಾರಾಯಣ ಅವರ ಕಿ ರಂ ಕುರಿತ ಬರಹದೊಂದಿಗೆ ಅವರನ್ನು ಬ್ಲಾಗ್ ಮಂಡಲಕ್ಕೆ ಸ್ವಾಗತಿಸುತ್ತಿದ್ದೇವೆ-

  

ಕವಿ ರಿಲ್ಕೆ ಕಂಡ ನಮ್ಮ ಕಿ ರಂ

ಕಾವ್ಯದ ಸಮಗ್ರ ಮತ್ತು ಅಧಿಕೃತ ಓದುಗರು ಕರ್ನಾಟಕದಲ್ಲಿ ಯಾರು ಎಂಬ ಪ್ರಶ್ನೆ ಬಂದಾಗಲೆಲ್ಲ ಕುರ್ತಕೋಟಿ ಮತ್ತು ಅನಂತಮೂರ್ತಿಯವರ ಹೆಸರುಗಳ ಜೊತೆಯಲ್ಲೇ ಕಿರಂ ಹೆಸರು ಪ್ರಸ್ತಾಪಕ್ಕೆ ಬರುತ್ತದೆ. ಈ ಇಬ್ಬರು ಹಿರಿಯರಲ್ಲೂ ಇಲ್ಲದ ಒಂದು ವಿಶೇಷ ಶಕ್ತಿ ಕಿರಂ ನಾಗರಾಜರಲ್ಲಿ ಇದೆ. ಈ ಹಿರಿಯರಿಬ್ಬರು ಓದುಗರು, ಸೂಕ್ಷ್ಮ ವಿಮರ್ಶಕರು. ಆದರೆ ಕಿರಂ ವಿಶೇಷವಿರುವುದು ಕಾವ್ಯದೊಡನೆ ಇರುವ ಸಂಬಂಧದಲ್ಲಿ. ಕಾವ್ಯಮಂಡಲದ ಮಾಂಡಲೀಕರಾದ ಕಿರಂ ತಮಗೆ ಬೇಕಾದ ಕಾವ್ಯವನ್ನು ಬೇಕಾದಾಗ ಆವಾಹಿಸಿ ಮಂಡಲದೊಳಗೆ ದಿಗ್ಬಂಧನ ಹಾಕಿ ಕೂರಿಸಿ ತಮಗೆ ಬೇಕಾದಂತೆ ವರ್ತಿಸುವ ಹಾಗೆ ಮಾಡಬಲ್ಲರು. ಕೆಲವು ಕಾವ್ಯವನ್ನು ಭಕ್ತರ ರೀತಿಯಲ್ಲಿ ಆರ್ದ್ರವಾಗಿ ವಿನೀತವಾಗಿ ಬೇಡಿ ಪರಿತಪಿಸಬಲ್ಲರು. ಇನ್ನೂ ಕೆಲವು ರೀತಿಯ ಕಾವ್ಯಗಳನ್ನು ಸಖಿಯೊಬ್ಬಳು ಪ್ರಿಯಕರನ ಮೋಹಿಸುವಂತೆ, ಮುನಿಸಿನಿಂದ, ಕೆಣಕುವಿಕೆಯಿಂದ, ಪ್ರೀತಿಯಿಂದ, ಸ್ಪರ್ಶದಿಂದ ಒಳಗು ಮಾಡಿಕೊಳ್ಳುವರು. ಕಿರಂ ಮಂಡಲದಲ್ಲಿ ದಿಗ್ಬಂಧನದಲ್ಲಿ ಕೂತ ಕಾವ್ಯದ ಸಾಲುಗಳು, ಮಂಡಲದ ಆರಾಧನೆ – ಪೂಜೆ ಮುಂದುವರೆದಂತೆ ಹೊಸ ಹೊಸ ಕಾಣ್ಕೆ-ಅರ್ಥಗಳಿಂದ ಬೆಳಗುವುದನ್ನೂ, ಇಲ್ಲ ಕಿರಂ ಉತ್ಕಟವಾಗಿ ಬೆಳಗಿಸುವುದನ್ನು ಯಾರು ತಾನೇ ಕಂಡಿಲ್ಲ! ಮಾಂತ್ರಿಕ, ಭಕ್ತ, ಸಖಿ – ಈ ಮೂರೂ ಸ್ತರಗಳಲ್ಲಿ ಲೀಲಾಜಾಲವಾಗಿ ಓಡಾಡುತ್ತಾ ಕಾವ್ಯವನ್ನು ಕಿರಂ ಮೀಟುವ ರೀತಿಯನ್ನೂ ಯಾರಾದರೂ ಚಿತ್ರೀಕರಿಸಿ ದಾಖಲು ಮಾಡಿಕೊಳ್ಳಬೇಕು.
ಕಿರಂ ಓದು ಎಷ್ಟು ವ್ಯಾಪಕವಾದದ್ದು, ಆಳವಾದದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಕಿರಂರ ಎಷ್ಟೋ ಜನ ಸಹೋದ್ಯೋಗಿಗಳು ಸಮಕಾಲೀನರಲ್ಲಾದಂತೆ ಈ ಓದು ಒಣ ಜ್ಞಾನದರ್ಪವಾಗಲೀ, ಠೇಂಕಾರವಾಗಲೀ, ಪಾಂಡಿತ್ಯ ಪ್ರದರ್ಶನವಾಗಲೀ ಆಗಲಿಲ್ಲ. ಜನಪ್ರಿಯ ಮೇಷ್ಟ್ರಾಗಿದ್ದು ಕಿರಂ ಉಪದೇಶರತ್ನಿಯಾಗಲಿಲ್ಲ. ಕಿರಂರಲ್ಲಿ ಎಡೆಬಿಡದ ಓದುವಿಕೆ ಇರುವಂತೆ ನಿರಂತರವಾದ Unlearning ಕೂಡ ಇದೆ. ಈ Unlearningನ್ನು ಕಿರಂ ಸಾಧಿಸಿರುವುದಕ್ಕೆ ಎರಡು ಮುಖ್ಯ ಕಾರಣಗಳನ್ನು ಕೊಡಬಹುದು. ಒಂದು ಕಿರಂ ಸ್ವಭಾವದಲ್ಲೇ ಇರುವ ಇನ್ನಿಲ್ಲದ ಮುಗ್ಧತೆ ಮತ್ತು ಅಸಾಧಾರಣ ವಿನಯಶೀಲತೆ. ಇದು ಸ್ವಭಾವದ ಮಾತಾಯಿತು.
ಇದಕ್ಕಿಂತ ಮುಖ್ಯವಾದದ್ದು ಕಿರಂರಿಗೇ ವಿಶಿಷ್ಟವಾದ ಪಠ್ಯಗಳ ಮರುಓದು (Rereading) ಪಠ್ಯವೊಂದರ ಮತ್ತೆ ಮತ್ತೆ ಎನ್ನುವಂತೆ ಕಿರಂ ಒಳಹೋಗುತ್ತಲೇ ಇರುವುದರಿಂದ ಪ್ರತಿ ಓದಿನ ಸಂದರ್ಭದಲ್ಲೂ ಒಟ್ಟಿಗೇ Learning ಮತ್ತು Unlearningನ್ನು ಕಿರಂ ಸಾಧಿಸುತ್ತಾರೆ. ಕಿರಂ ನೆನಪಿನ ಶಕ್ತಿ ಅಗಾಧವಾಗಿದ್ದು ಕೂಡ ಮತ್ತೆ ಮತ್ತೆ ಪಠ್ಯವನ್ನು ಮರುಪ್ರವೇಶಿಸುವುದರ ಮಹತ್ವವನ್ನು ನಾವು ಮರೆಯಬಾರದು. ಪಠ್ಯವೊಂದನ್ನು ಎಂದೋ ಓದಿದಾಗ ಸಿಕ್ಕಿದ ಭಾವ – ನೋಟ, ಇಲ್ಲಿ ಓದಿನ ನೆನಪಿಗೆ ನಾವು ಬದ್ಧವಾಗಿ ಬಿಟ್ಟರೆ ಕಲಿಯುವಿಕೆ ನಿಂತೇ ಹೋಗಿಬಿಡುತ್ತದೆ. ಕಾಲಾಂತರದಲ್ಲಿ ಪಠ್ಯವು ಕೂಡ ನಮ್ಮಂತೆ ಒಳಗೊಳಗೇ ಬೆಳೆದಿರುತ್ತದೆ. ಮಾಗಿರುತ್ತದೆ. ಹೀಗೆ ತಿಳಿಯಬೇಕಾದರೆ ಹಿಂದೆ ಕಲಿತದ್ದರ Unlearningಗೆ ನಾವು ಸಿದ್ಧರಾಗಬೇಕಾಗುತ್ತದೆ. ಇದರಿಂದ ಕಿರಂಗೆ ಒಂದು ಪಠ್ಯ ನೀಡುವ ಅರ್ಥದ ಬಗ್ಗೆ ಮಾತ್ರವೇ ತಲೆ ಕೆಡಿಸಿಕೊಳ್ಳದೆ, ಅದು ನೀಡುವ ಅನುಭವದ ಕಡೆಗೇ ಮುಖಮಾಡಲು ಸಾಧ್ಯವಾಗಿದೆ. ಕುರ್ತಕೋಟಿಯಂತಹವರ ವಿಶಾಲ ಓದು ನೆನಪಿನ ಭಾರದಿಂದ ಬಿಡುಗಡೆ ಪಡೆಯಲೇ ಇಲ್ಲ. ಎಸ್.ದಿವಾಕರರಂತವರ ಓದುಗಾರಿಕೆ, ಸಂವೇದನೆ-ಸೃಜನಶೀಲತೆಯಾಗಿ ಪರಿವರ್ತನೆಯಾಗಲೇ ಇಲ್ಲ.
ಕೆ.ವಿ.ತಿರುಮಲೇಶರ ಈಚಿನ ಅಂಕಣ ಬರಹಗಳಲ್ಲಿ ಶ್ರೀಯುತರ ವಿಶಾಲವಾದ ಓದುವಿಕೆಯ ಜೊತೆಗೆ ಓದು, ಕೃತಿ ಮತ್ತು ಬದುಕಿನ ಬಗ್ಗೆ ಒಂದು ರೀತಿಯ ದಿಗ್ಭ್ರಮೆಯೂ ಇರುವುದರಿಂದ ಬರಹವು ಉಪದೇಶಾತ್ಮಕತೆ ಮತ್ತು ಮಾಹಿತಿಗಳಿಂದಾಚೆಗೆ ಸಂವಾದದ ಕಡೆಗೂ ಚಲಿಸುವುದನ್ನು ಗಮನಿಸಬಹುದು. ಕಿರಂ ಕಾವ್ಯಪ್ರೇಮವನ್ನು ಮಾತ್ರ ಕಲಿಯದೆ ಈ Unlearning ಗುಣವನ್ನು ಕೂಡ ನಾವೆಲ್ಲ ರೂಢಿಸಿಕೊಂಡರೆ ಎಷ್ಟು ಚೆನ್ನ.
ಈ ಹಿನ್ನೆಲೆಯಲ್ಲೇ ಕಿರಂಗೆ ಮೌಖಿಕ ಸಂಸ್ಕೃತಿ (oral culture) ಕಡೆಗೆ ಇರುವ ಒಲವನ್ನು ವಿಶ್ಲೇಷಿಸಬೇಕು. ಬರವಣಿಗೆಯ ತುಂಬಾ ಒಳ್ಳೆಯ ಮತ್ತು ತುಂಬಾ ಕೆಟ್ಟ ಗುಣವೆಂದರೆ ದಾಖಲಾಗುವ ಸ್ವಭಾವ. ಯಾವ ಭಾವ, ಯಾವ ವಿಚಾರವೂ ನಿರ್ದಿಷ್ಟವಲ್ಲ, ಅಂತಿಮವಲ್ಲ. ಪ್ರತಿ ಮರುಓದಿನಲ್ಲೂ ನಿರ್ಮಾಣವಾಗುವ ಭಾವ-ವಿಚಾರಗಳ ವಿನ್ಯಾಸವೇ ನಿಜವಾದದ್ದು ಎಂದು ನಂಬುವವರಿಗೆ ಬರವಣಿಗೆಯ ಮಿತಿಗಳು ಕೂಡ ಗೊತ್ತಿರುತ್ತವೆ. ಸಂಗೀತಗಾರನಿಗೆ ಪಠ್ಯವು ನಿರ್ದಿಷ್ಟವೆಂಬುದು ನಮ್ಮ ತಪ್ಪು ಕಲ್ಪನೆ. ಪ್ರತಿಸಲದ ಹಾಡುಗಾರಿಕೆಯಲ್ಲೂ, ಪ್ರತಿಸಲದ ಆಲಾಪನೆಯಲ್ಲೂ, ಪ್ರತಿ ವಿಳಂಬಿತ್‌ನಲ್ಲೂ ಪಠ್ಯಕ್ಕೆ ಹೊಸ ಜೀವ, ಹೊಸ ಭಾವ. ಕಿರಂ ಓದುಗಾರಿಕೆ, ಹಾಡುಗಾರಿಕೆಗೆ ತನ್ನನ್ನೇ ತೆತ್ತುಕೊಂಡ ಸಂಗೀತಗಾರನ ರೀತಿಯದು. ಈ ರೀತಿಯ ವೈಶಿಷ್ಟ್ಯವೆಂದರೆ ಓದುವಾಗ ತನ್ನೆಲ್ಲ ಒಳತೋಟಿಯೊಡನೆ ಓದಿ ಪಠ್ಯವನ್ನೇ ಉದ್ದೀಪಿಸುವುದು. ದ.ರಾ.ಬೇಂದ್ರೆ, ಗೋಪಾಲಕೃಷ್ಣ ಅಡಿಗರ ಎಷ್ಟೋ ಕವನಗಳ ಕಿರಂರ ಮರುಓದಿಗೆ ಸಾಕ್ಷಿಯಾಗಿರುವ ನಾನು ಪ್ರತಿ ಓದಿನಲ್ಲೂ ಕವನಗಳು ಹೊಸ ಅರ್ಥ, ಹೊಸ ಭಾವಗಳಲ್ಲಿ ಬೆಳಗಲು ಕಿರಂರ ಆವಾಹನೆಗೆ ಕಾಯುತ್ತಿರುವುದನ್ನು ಕಂಡು ಬೆರಗಾಗಿದ್ದೇನೆ. ಕಿರಂರ ಎರಡೂ ನಾಟಕಗಳು ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ – ಒಳತೋಟಿಯನ್ನೇ ಮೀಟುವುದನ್ನು, ಮೀಟಿದಾಗ ದಕ್ಕುವುದನ್ನೇ ಹಿಡಿಯಲು ಪ್ರಯತ್ನಿಸುತ್ತದೆಂದು ನನ್ನ ನೆನಪು.
ಬರವಣಿಗೆ ವಿಪುಲವಾಗಿ, ಪ್ರವಾಹದೋಪಾದಿಯಲ್ಲಿ ಬರುತ್ತಿರುವ ಕನ್ನಡದ ಇಂದಿನ ಸಂದರ್ಭದಲ್ಲಿ ಕಿರಂರ ಮೌಖಿಕ ಸಂಸ್ಕೃತಿಯ ಒಲವು – ನಂಬಿಕೆಗಳ ಹಿಂದಿರುವ ಪ್ರೇರಣೆಗಳನ್ನು ಕುರಿತು ನಾವು ಗಂಭೀರವಾಗಿ ಯೋಚಿಸಬೇಕಿದೆ. ಅಕ್ಷರ ಜ್ಞಾನ ಮತ್ತು ಲಿಖಿತ ಸಂಸ್ಕೃತಿ – ಇವೆರಡನ್ನೂ ಕೂಡ ಹೆಚ್ಚಾಗಿ ಆಶ್ರಯಿಸದೆಯೂ ಪರಂಪರೆ, ತಿಳಿವಳಿಕೆ, ಜ್ಞಾನದ ವೃತ್ತಿ ಕೌಶಲ್ಯಗಳ ಸಾತತ್ಯವನ್ನು ಬಹುಕಾಲ ಕಾಪಾಡಿಕೊಂಡು ಬಂದ ನಮ್ಮ ಜೀವನ ಶೈಲಿಯ ಬಗ್ಗೆಯೂ ಕಿರಂರ ಹಿನ್ನೆಲೆಯಲ್ಲಿ ಯೋಚಿಸಬಹುದು.
ಕಾವ್ಯ ಮಂಡಲವೆಂಬುದು ಕಿರಂ ತಾವೇ ತಮ್ಮ ಸಂಸ್ಥೆಗೆ ಕೊಟ್ಟುಕೊಂಡಿರುವ ಹೆಸರು. ಆದರೆ ಕಿರಂರ ಜೀವನ ಶೈಲಿ ಚಾವಡಿಯಲ್ಲಿ ಹರಟೆ ಹೊಡೆಯುವವರ ಯಜಮಾನನ ಗತ್ತು, ಬಿಡುಬೀಸುತನ, ದರ್ಪಕ್ಕೆ ಹತ್ತಿರವಾದದ್ದು. ಕಾವ್ಯಮಂಡಲದ ನಿರ್ದಿಷ್ಟ ಮತ್ತು ಪೂಜನೀಯ ಆವರಣಕ್ಕಿಂತ ಚಾವಡಿಯ ವೈಶಾಲ್ಯ ಮತ್ತು ಅನೌಪಚಾರಿಕತೆಯೇ ಕಿರಂಗೆ ಹತ್ತಿರವಾದದ್ದು. ಕಿರಂ ನೋಡಿದಾಗಲೆಲ್ಲ ಮಂಡಲದ ಆಚಾರ್ಯ, ಅವಧಾನಿಗಳಿಗಿಂತ ಹೆಚ್ಚಾಗಿ ನೆನಪಿಗೆ ಬರುವುದು ಕಾವ್ಯ ಪ್ರಚಾರ-ಪ್ರಸಾರಕ್ಕೇ ತಮ್ಮನ್ನು ತೆತ್ತುಕೊಂಡು ಬದುಕುತ್ತಿದ್ದ ಕೀರ್ತನಕಾರರು, ತಂಬೂರಿದಾಸರು (BAROS) ಈ ಕಾರಣಕ್ಕೇ.
ಕಿರಂರಲ್ಲಿರುವ ಇನ್ನೊಂದು ಗುಣವನ್ನು ನನಗೆ ಅನುಕರಿಸಲು ಇಷ್ಟ. ಆದರೆ ಅಂತಹ ಅನುಕರಣೆಗೆ ಬೇಕಾದ ಸ್ವಭಾವ-ಪ್ರತಿಭೆ ನನ್ನದಲ್ಲ. ಮೇಲುನೋಟಕ್ಕೆ ಬಂಡುಕೋರನಾಗಿ, ಅರಾಜ್ಯ ಜೀವನಶೈಲಿಯ ಪ್ರತಿಪಾದಕನಾಗಿ ಕಾಣುವ ಕಿರಂರಲ್ಲಿರುವ ಆಂತರಿಕ ಸಂಯೋಜನೆ, ಶಿಸ್ತು ತುಂಬಾ ಅಪರೂಪದ್ದು. ಪುಸ್ತಕಗಳನ್ನು ಕ್ರಮಬದ್ಧವಾಗಿಯೂ, ಶಿಸ್ತಾಗಿಯೂ ಜೋಡಿಸಿಕೊಂಡು, ಬೇಕೆಂದಾಗ ವಿಚಾರಗಳನ್ನು ಅಡಿಟಿಪ್ಪಣಿಗಳ ಮೂಲಕ ಉಲ್ಲೇಖಿಸುವ ಶಿಸ್ತು ಕಿರಂದಲ್ಲ. ಎಲ್ಲ ತಿಳುವಳಿಕೆ, ವಿಚಾರಗಳು ಆಂತರಿಕವಾಗಿ ಸಂಯೋಜನೆಗೊಂಡಿರುವ ರೀತಿ ಕಿರಂರ ವಾಕ್‌ಪ್ರವಾಹದಲ್ಲಿ ಯಾರಿಗಾದರೂ ಗೋಚರಿಸುತ್ತದೆ. ನಮ್ಮಲ್ಲಿ ಕ್ಲೀಷೆಯಾಗಿರುವ ಮಾತಿನ ನೆರವಿನಿಂದಲೇ ಹೇಳುವುದಾದರೆ ಕಿರಂರ ಪ್ರತಿಭೆ ಸಂಶ್ಲೇಷಣಾ ರೀತಿಯದು, ವಿಶ್ಲೇಷಣಾತ್ಮಕವಾದದ್ದಲ್ಲ.
ಪ್ರಸಿದ್ಧ ಜರ್ಮನ್ ಕವಿ ರೈನ್‌‌ರ್ ಮರಿಯಾ ರಿಲ್ಕೆ ಬರೆದಿರುವ ಒಂದೇ ಒಂದು ಕಾದಂಬರಿ `ಮಾಲ್ಟ್ ಅಲೌಂಡ್ಸ್ ಬ್ರಿಗ್ಗನ ಟಿಪ್ಪಣಿ ಪುಸ್ತಕ’ ಈಚೆಗೆ ಕೆ.ವಿ.ತಿರುಮಲೇಶರಿಂದ ಕನ್ನಡದಲ್ಲಿ ಅನುವಾದಗೊಂಡು ಪ್ರಕಟವಾಗಿದೆ. (ಅಭಿನವ ಪ್ರಕಾಶನ ಬೆಂಗಳೂರು 2008). ರಿಲ್ಕೆ ಕಿರಂರನ್ನು ಕಂಡು ಭೇಟಿ ಮಾಡಿ, ಸಾಕಷ್ಟು ಒಡನಾಡಿ ಈ ಕೆಳಗಿನ ಸಾಲುಗಳನ್ನು ಬರೆದಂತಿದೆ.
ರಾಷ್ಟ್ರೀಯ ಗ್ರಂಥಾಲಯ
ಇಲ್ಲಿ ನಾನು ಕೂತಿದ್ದೇನೆ. ಒಬ್ಬ ಕವಿಯನ್ನು ಓದುತ್ತ. ಓದುವ ಕೊಠಡಿಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆದರೆ ನನಗವರ ಅರಿವಿಲ್ಲ. ಅವರು ಗ್ರಂಥಗಳ ಒಳಗಿದ್ದಾರೆ. ಕೆಲವು ಸಲ ಅವರು ಆಚೀಚೆ ಸರಿಯುತ್ತಾರೆ. ಪುಟಗಳ ಒಳಗಡೆ, ಎರಡು ಕನಸುಗಳ ನಡುವೆ ಮಗ್ಗಲು ಬದಲಿಸುವ ನಿದ್ರಾಧೀನರಂತೆ. ಆಹಾ! ಓದುವವರ ಮಧ್ಯೆ ಇರುವುದೆಂದರೆ ಅದೆಷ್ಟು ಸೊಗಸು. ಜನ ಯಾವಾಗಲೂ ಯಾಕೆ ಹಾಗಿಲ್ಲ?
****
ಮತ್ತು ನಾನಿಲ್ಲಿ ಕವಿಯ ಜೊತೆ ಕೂತಿದ್ದೇನೆ. ಎಂಥ ಅದೃಷ್ಟ ನನ್ನದು. ಸದ್ಯ ಇಲ್ಲಿ ಮುನ್ನೂರು ಮಂದಿ ಇದ್ದಾರು. ಎಲ್ಲರೂ ಓದುವವರೇ. ಆದರೆ ಪ್ರತಿಯೊಬ್ಬನಿಗೂ ಒಬ್ಬ ಕವಿಯಿರಬೇಕೆಂದರೆ ಅಸಾಧ್ಯ. (ಅವರಿಗೇನಿದೆಯೋ ದೇವರಿಗೇ ವೇದ್ಯ). ಮುನ್ನೂರು ಮಂದಿ ಕವಿಗಳಿಲ್ಲ. ಆದರೆ ಯೋಚಿಸಿ ನೋಡಿ, ಬಹುಶಃ ಈ ಓದುಗರಲ್ಲೆಲ್ಲಾ ಅತ್ಯಂತ ದೈನೇಸಿಯೂ ಹಾಗೂ ವಿದೇಶಿಯನೂ ಆದ ನನಗೆ ದೈವ ಏನು ಬಗೆದಿದೆ ಎಂಬುದನ್ನು. ನನಗೊಬ್ಬ ಕವಿಯಿದ್ದಾನೆ. ನಾನು ದರಿದ್ರನಾಗಿದ್ದೂ ನಾನು ದಿನಂಪ್ರತಿ ತೊಡುವ ಸೂಟು ಕೆಲವು ಕಡೆ ತೇಪೆಯಾಗಿರಲು ತೊಡಗಿದ್ದರೂ ಮತ್ತು ಕೆಲವು ವಿಧಗಳಲ್ಲಿ ನನ್ನ ಶೂಗಳು ಖಂಡನಾತೀತವಾಗಿರದೆ ಇದ್ದರೂ.’ (ಪುಟ 26-27). 

%d bloggers like this: