‘ಹಾಡೇ ಹಾಡೇ ಬಾ..’

ಕನ್ನಡ ರಂಗಭೂಮಿ ನಾದದ ಒಂದು ನದಿಯನ್ನು ಸದಾ ತನ್ನ ಒಡೊಲೊಳಗೆ ಹುದುಗಿಸಿಕೊಂಡಿದೆ. ಬಿ ವಿ ಕಾರಂತರಂತೂ ರಂಗಭೂಮಿಯಲ್ಲಿ ಸಂಗೀತದ ಜಾದೂವನ್ನೇ ನಡೆಸಿದರು. ಆದರೆ ರಂಗಗೀತೆಗಳು ಇತರ ಮಾಧ್ಯಮಗಳಿಗೆ ತನ್ನನ್ನು ತೆತ್ತುಕೊಂಡದ್ದು ಕಡಿಮೆ.

ಕನ್ನಡ ರಂಗಭೂಮಿಯಲ್ಲಿ ರಂಗಗೀತೆಗಳನ್ನು ಹಿಡಿದಿಡುವ ಅಪರೂಪದ ಪ್ರಯತ್ನಗಳು ಆಗಿದೆಯಾದರೂ ಮತ್ತೆ ಮತ್ತೆ ಮೆಲುಕು ಹಾಕುವ ಅವಕಾಶ ನೀಡುವ ಮಾಧ್ಯಮಗಳನ್ನು ಬಳಸಿಕೊಂಡದ್ದು ಕಡಿಮೆ. ನಾಟ್ಯ ಸಂಘ ಕೈಲಾಸಂ ಗೀತೆಗಳನ್ನು ಕ್ಯಾಸೆಟ್ಗೆ ಒಗ್ಗಿಸಿತ್ತು. ಕಾಕನಕೋಟೆಗೆ ಸಿ ಅಶ್ವಥ್ ಸಂಗೀತ ಸಂಯೋಜಿಸಿ ಹಾಡಿದ ಹಾಡುಗಳು ರಂಗ ಹಾಗೂ ಸಿನೆಮಾ ಎರಡೂ ಹಾಡುಗಳ ರೂಪದಲ್ಲೂ ಕ್ಲಿಕ್ ಆದವು. ನಾಟ್ಯ ಸಂಘದ್ದೇ ಇನ್ನೊಂದು ಪ್ರಯೋಗ ಕಕೆಶಿಯನ್ ಚಾಕ್ ಸರ್ಕಲ್ ಸಹಾ ತನ್ನ ನಾದದ ಮೋಡಿಗೆ ಕೇಳುಗರನ್ನು ಒಗ್ಗಿಸಿತ್ತು. ಬಿ ವಿ ಕಾರಂತರ ನೆನಪಿನಲ್ಲಿ ಹೊರತಂದ ಅವರು ಸಂಗೀತ ಸಂಯೋಜಿಸಿದ ಹಾಡುಗಳು ಬಹುಷಃ ಕನ್ನಡ ರಂಗಭೂಮಿಗೆ ಸಿಕ್ಕಿದ ಅಪರೂಪದ ಕೊಡುಗೆ. ಇದೇ ಸಾಲಿನಲ್ಲಿ ನಿಲ್ಲುವಂತಹ ಇನ್ನೊಂದು ಪ್ರಯೋಗ ಬಿ ಜಯಶ್ರೀ ಅವರ ಕಂಪನಿ- ಹವ್ಯಾಸಿ ಎರಡೂ ಪ್ರಾಕಾರಗಳ ಹಾಡುಗಳ ಸಿ ಡಿ.

ಆದರೆ ಇತ್ತೀಚಿನ ಹುಡುಗರ ದಂಡು ನಡೆಸಿದ ಪ್ರಯೋಗಗಳು ಹೀಗೆ ಇತರ ಮಾಧ್ಯಮಕ್ಕೆ ಜಿಗಿದದ್ದು ಕಡಿಮೆ.
ಈಗ ಅಂತಹ ಒಂದು ಹೆಮ್ಮೆಯ ಪ್ರಯೋಗವನ್ನು ಕೃಷ್ಣಮೂರ್ತಿ ಕವತ್ತಾರ್ ಮಾಡಿದ್ದಾರೆ. ‘ಹಾಡೇ ಹಾಡೇ ಬಾ…’ ಎಂಬ ಸಿ ಡಿ ಯೊಂದು ಮಾರುಕಟ್ಟೆಗೆ ಬಂದು ಕುಳಿತಿದೆ.

ಕೃಷ್ಣಮೂರ್ತಿ ಕವತ್ತಾರ್ ಹಲವು ಪ್ರಯೋಗಗಳಿಗೆ ತಮ್ಮನ್ನು ತೆತ್ತುಕೊಂಡವರು. ಅವರ ನಾಟಕಗಳಲ್ಲಿ ಒಂದು ಶಿಸ್ತು ತಾನೇ ತಾನಾಗಿ  ಕುಳಿತಿರುತ್ತದೆ. ಅಂತಹ ಶಿಸ್ತಿನಿಂದಲೇ ಇತರರ ನಿರ್ದೇಶನಕ್ಕೂ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಶಶಿಧರ ಬಾರಿಘಾಟ್ ಬರೆದು ಉಮಾಶಂಕರ ಸ್ವಾಮಿ ನಿರ್ದೇಶಿಸಿದ ‘ಸಾಯುವನೇ ಚಿರಂಜೀವಿ’ ಕೃಷ್ಣಮೂರ್ತಿಗೆ ಸವಾಲು ಒಡ್ಡಿದ ನಾಟಕ. ಈ ಏಕವ್ಯಕ್ತಿ ಪ್ರದರ್ಶನವನ್ನು ಶತಕದತ್ತ ಕೊಂಡೊಯ್ದದ್ದು ಇವರ ಸಾಧನೆ.

ಅಷ್ಟೇ ಅಲ್ಲ ಎಂಬಂತೆ ಇದುವರೆಗೂ ಕನ್ನಡದಲ್ಲಿ ಕಾಣಿಸಿಕೊಂಡ ಏಕವ್ಯಕ್ತಿ ಪ್ರಯೋಗಗಳನ್ನೆಲ್ಲಾ ಒಟ್ಟಿಗೆ ತಂದು ಕೊನೆಯ ದಿನ ಇದಕ್ಕೆ ಗರಿ ಇಟ್ಟಂತೆ ‘ಹಾಡೇ ಹಾಡೇ ಬಾ..’ ಸಿ ಡಿ ಬಿಡುಗಡೆ ಮಾಡಿದ್ದಾರೆ.

ಹಾಡೇ ಹಾಡೇ ಬಾ… ಕೃಷ್ಣಮೂರ್ತಿ ಕವತ್ತಾರ್ ಸಂಗೀತ ಸಂಯೋಜಿಸಿದ ರಂಗ ಗೀತೆಗಳ ಗುಚ್ಛ. ಘಾಶೀರಾಂ ಕೊತ್ವಾಲ್, ಏನ ಬೇಡಲಿ ನಿನ್ನ ಬಳಿಗೆ ಬಂದು?, ಅಗ್ನಿವರ್ಣ, ಕಂಸಾಯಣ, ಶಸ್ತ್ರಪರ್ವ, ನಾಯಿಮರಿ, ಸೇವಂತಿ ಪ್ರಸಂಗ, ಅಲೆಗಳಲ್ಲಿ ಅಂತರಂಗ, ಮಹಾಮಾಯಿ ಯಂತಹ ನಾಟಕಗಳ ಹಾಡುಗಳು ಇಲ್ಲಿವೆ.

ಮುದೇನೂರು ಸಂಗಣ್ಣ, ದುಂಡಿರಾಜ್, ವೈದೇಹಿ, ಎಚ್ ಎಸ್ ವೆಂಕಟೇಶ ಮೂರ್ತಿ, ಬಿ ಆರ್ ಲಕ್ಷ್ಮಣ ರಾವ್, ಜಯಂತ ಕಾಯ್ಕಿಣಿ ಬರೆದ ಕವಿತೆಗಳು ಇಲ್ಲಿವೆ , ಕೇಳಲೇ ಬೇಕಾದ, ಕೊಳ್ಳಲೆ ಬೇಕಾದ ಸಿ ಡಿ ಇದು

ಬೆಲೆ: 90 ರೂ
ಸಂಪರ್ಕ: rangavatar@yahoo.co.in
ದೂರವಾಣಿ :98441 15311, 98867 96234, 99801 65724

ನಾನೇ ನಿಮ್ಮಪ್ಪ…

P For…

-ಲೀಲಾ ಸಂಪಿಗೆ

ಮೇಡಂ, ಪ್ರೀತೀನ ಕೇಳ್ಕೊಂಡು ಯಾರೋ ಬಂದಿದ್ದಾರೆ ಎಂದರು. ನನಗೆ ಶಾಕ್ ಆಯ್ತು. ಈ ಜಗತ್ತಿನಲ್ಲಿ ಈ ಪ್ರೀತಿ ಎನ್ನುವ ಹುಡುಗಿಗೆ ನಾನಿಲ್ಲದೆ ಯಾರೂ ಇಲ್ಲದ ಕಂದಮ್ಮ ಅಂತ ಫೀಲ್ ಮಾಡ್ತಿದ್ದೆ. ಯಾರು ಹುಟ್ಕೊಂಡ್ರು ಪ್ರೀತಿಗಾಗಿ? ಹೊರ ಬಂದು ನೋಡ್ದೆ. ಒಬ್ಬ ಗಂಡಸು ನಿಂತಿದ್ದ.’ನಮಸ್ಕಾರ ಅಮ್ಮ. ಸುಷ್ಮ ನಿಮ್ಮ ಬಗ್ಗೆ ಹೇಳಿದ್ಲು. ಅಮ್ಮ, ನನ್ನ ಮಗಳು ನನಗೆ ಬೇಕು. ಅವಳನ್ನ ಕರ್ಕೊಂಡು ಹೋಗೋಕೆ ಬಂದೆ’ ಅಂದ. ಒಂದು ಕ್ಷಣ ಅವಾಕ್ಕಾದೆ. ಕೂಡಲೇ ಹುಶಾರಾದೆ. ಯಾರು, ಸುಷ್ಮಾಳ ಮಗಳಾ? ಅವಳ ಮಗಳ್ಯಾರೂ ಇಲ್ಲಿಲ್ಲ ಅಂತ ಅವನನ್ನ ಬೆದರಿಸಿ ಕಳುಹಿಸಿದೆ. ಕೂಡ್ಲೇ ಗೂಡಿನ ಜವಾಬ್ದಾರಿ ಹೊತ್ತಿದ್ದ ಪ್ರವೀಣ್ಗೂ, ಅಡಿಗೆ ಮಾಡ್ತಿದ್ದ ಶೀಲಾಗೂ ಎಚ್ಚರಿಕೆ ಕೊಟ್ಟೆ. ಇಲ್ಲಿಗೆ ಯಾರು ಬಂದು ಯಾವ ಮಕ್ಕಳ ಗುರುತು ಹೇಳಿದರೂ ಒಳಗೆ ಸೇರಿಸ್ಪೇಡಿ ಅಂತ.

ಆದ್ರೂ ಆ ಇಡೀ ದಿನ ಎಂಥದ್ದೋ ಆತಂಕ ನನ್ನನ್ನ ಆವರಿಸಿತ್ತು. ಅವನು ಸುಷ್ಮಾಳ ಹಿಂದೆ ಮುಂದೆ ತಿರುಗಾಡ್ಕೊಂಡಿದ್ದ ಪಿಂಪ್, ಪಕರ್ಿ. ಅವನಿಗೆ ಸುಷ್ಮಾ ಮಗಳು ಇಲ್ಲಿರೋದನ್ನ ಯಾರು ಹೇಳಿದ್ರು? ಯಾವಾಗ್ಲೋ ಕುಡ್ಕೊಂಡು ಹೆಚ್ಚಾದಾಗ ನಮ್ಮ ಹುಡುಗೀರೇ ಹೇಳಿರ್ತಾರೆ ಅಂದ್ಕೊಂಡೆ.

ಅದೊಂದು ದಿನ ಸುಷ್ಮಾ ಬೆಂಕಿ ಹಚ್ಚೊಂಡಿದ್ಲು. ಶೇ. 75ರಷ್ಟು ಸುಟ್ಟ ದೇಹ ಆಸ್ಪತ್ರೆಯಲ್ಲಿ ಸಾವು ಬದುಕಿನೊಡನೆ ಹೋರಾಡಿತ್ತು ನೋಡೋಕೆ ಅಂತ ಹೋದೆ, ಸಾವಿನತ್ತ ವಾಲುತ್ತಿದ್ದ ಕಣ್ಣುಗಳಲ್ಲಿ ದೈನ್ಯತೆಯಿತ್ತು. ನನ್ನನ್ನು ನೋಡುತ್ತಲೇ ತನ್ನ ಮಗುವಿನ ಸನ್ನೆ ಮಾಡಿ ಕೈ ಮುಗಿದ್ಲು. ನನಗಂತೂ ದುಃಖ ಒತ್ತರಿಸಿ, ಬಂತು. ಅಲ್ಲಿಂದ ಹೊರಗೆ ಬಂದೆ. ಸುಮಾರು ಹೊತ್ತು ವಿಕ್ಟೋರಿಯಾದ ಪಾಕರ್್ನಲ್ಲಿ ಕೂತಿದ್ದೆ.

ಲೈಂಗಿಕ ವೃತ್ತಿ ಮಹಿಳೆಯರ ಸಂಘಟನೆ ‘ಗೆಳತಿ’ಯನ್ನು ಚಿತ್ರನಟಿ ಜಯಂತಿ, ಕೆ.ವಿ.ಟಾಗೂರ್, ಸಿಜಿಕೆ. ಫೀಲೋಮಿನಾ ಪೆರಿಸ್, ರಾಣಿಸತೀಶ್… ನಯನದಲ್ಲಿ ಉದ್ಘಾಟಿಸಿದ್ದರು. ಅವರೆಲ್ಲರ ಬೆಂಬಲವನ್ನು ಇವರ ಬದುಕಿಗೆ ಭಾಷಣದಲ್ಲಾದರೂ ಕೊಡಿಸಿ ಧನ್ಯಳಾಗಿದ್ದೆ. ಗೆಳತಿಯನ್ನು ಬಲಿಷ್ಠಗೊಳಿಸಿ ಅವರ ಸಮುದಾಯದ ಸಬಲೀಕರಣಕ್ಕೆ ಅವರೇ ನಾಯಕತ್ವ ವಹಿಸಬೇಕೆಂಬ ಆಶಯವೇ ಗೆಳತಿಯಾಘಿದ್ದು. ದಿನಗಟ್ಟಲೆ ಮಾನಸಿಕ ಗಟ್ಟಿತನದ ಬಗ್ಗೆ ಕೊರೆದೂ, ಕೊರೆದೂ ನಾನು ಸಂತುಷ್ಟಳಾಗ್ತಿದ್ದೆ. ಇನ್ನೇನು ಅವರೆಲ್ಲ ಖಿನ್ನತೆಯಿಂದ ಹೊರಬಂದ್ರು ಅಂತ ನಾನು ಭ್ರಮಿಸಿದ್ದಾಗೇ ಸುಷ್ಮಾ ಯಾವನೋ ಪಕರ್ಿಯ ವಿಚಾರಕ್ಕೆ ಬೆಂಕಿ ಇಟ್ಕೊಂಡಿದ್ಲು. ಅದೇ ಸುಷ್ಮಾ ಈ ದಿನ 8 ತಿಂಗಳ ಕಂದಮ್ಮನನ್ನು ಈ ಭೂಮಿಗೆ ಒಗೆದು ತನ್ನನ್ನು ತಾನು ಈ ವ್ಯವಸ್ಥೆಗೆ ಬಲಿಕೊಟ್ಟಿದ್ಲು.

ಆ ಮಗುವು ನೆಪ ಮಾತ್ರವಾಗಿ ಈ ಹೆಣ್ಣುಮಕ್ಕಳು ಹಡೆದು ಶುರುವಾಯ್ತು ಸರಿ ಏನಾಗ್ದಿದ್ರೂ ಪರವಾಗಿಲ್ಲ ಆ ಆ ಮಕ್ಕಳನ್ನಾದ್ರೂ ಬಚಾವ್ ಮಾಡೋಕಾಗುತ್ತಾ ಅಂತ ಪ್ರಯತ್ನ ಶುರು ಮಾಡ್ದೆ. ಕೊನೆಗೂ ನನ್ನ ಆಶಯ ಕೈಗೂಡ್ದು. 30 ಮಕ್ಕಳನ್ನು ಆಯ್ಕೆ ಮಾಡಿ. ಅದಕ್ಕೊಂದು ಪುಟಾಣಿ ಗೂಡಿನ ಪುಟ್ಟ ಕಂದಮ್ಮಗಳಿಗೆ ಹೆಸರಿರಲಿಲ್ಲ. ಅದೊಂದು ದಿನ ಪಾಯಸ ಮಾಡಿ ಪ್ರೀತಿ ಅಂತ ಹೆಸರಿಟ್ರೆ ಅಮ್ಮನಂತೆ ದುಂಡುದುಂಡಗೆ ಬೇಳಿತಾ ಇದ್ಲು ಪ್ರೀತಿ. ಅಲ್ಲಿದ್ದ ಎಲ್ಲ ಮಕ್ಕಳೂ ನನ್ನನ್ನ ಅಮ್ಮ ಅಂತಿದ್ರೂ ಪ್ರೀತಿ ನನ್ನನ್ನ ಅಮ್ಮಾ ಅನ್ನೋದ್ರಲ್ಲಿ ಒಂದು ಪೊಸೆಸಿವ್ನೆಸ್ ಇತ್ತು.

ಅವನ್ಯಾವನೋ ಸುಳಿವು ಹಿಡಿದು ಬಂದು ಪ್ರೀತಿ ನನ್ನ ಮಗಳು ಅಂದಾಗ, 8ತಿಂಗಳ ಮಗುವನ್ನು ತಂದು ಮೂರು ವರ್ಷದವಳನ್ನಾಗಿಸುವಾಗ….! ಮತ್ತೆ ಅವನೇ ಬಂದ, ಈ ಬಾರಿ ಒಂದು ಹೆಂಗಸನ್ನೂ ಜೊತೆಯಲ್ಲಿ ಕರೆತಂದಿದ್ದ. ತನ್ನ ಅಕ್ಕನೆಂದೂ ಅವಳೇ ಇದಕ್ಕೆ ಸಾಕ್ಷಿಯೆಂದೂ ಹೇಳಿದ. ಸುಮಾರು ವರ್ಷಗಳು ಈ ಫೀಲ್ಡ್ನಲ್ಲಿ ಮುಳುಗಿದ್ದ ನನಗೆ ಇವನನ್ನು ಓಡಿಸೋಕೆ ಇರೋ ಒಂದೇ ಅಸ್ತ್ರ ಬಳಸಿದೆ. ‘ಆಯ್ತಪ್ಪ. ನೀನು ಮಗುವನ್ನು ಕರ್ಕೊಂಡು ಹೋಗೋಕೆ ಮುಂಚೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಕೆ. ಶಿವಾರಂ ಅಂತ, ಉಪ್ಪಾರಪೇಟೆ, ಪೊಲೀಸ್ ಸ್ಟೇಷನ್ನಲ್ಲಿದ್ದಾರೆ. ಅವರು ನಮಗೆ ಈ ಮಗು ಕೊಟ್ಟಿದ್ದಾರೆ. ಅವರಿಂದ ಒಂದು ಪಮರ್ಿಷನ್ ಲೆಟರ್ ತೆಗೆದುಕೊಂಡು ಬಾ, ಅವರೇ ಈ ಮಗೂನ ಸಾಕ್ತಿರೋದು ಅಂದೆ, ಇವತ್ತಿಗೂ ಅವನು ಇತ್ತ ಸುಳಿದಿಲ್ಲ.

ನನಗಿದ್ದ ಆತಂಕ ದೂರವಾಗ್ಲೇ ಇಲ್ಲ. ಆದ್ರೆ ಈಗ ಆ ಆಂತಕ ಇಲ್ಲ. ಸುಷ್ಮಾ ನನಗೆ ಕೊಟ್ಟು ಹೋಗಿದ್ದ ನಮ್ಮ ಪ್ರೀತಿ ಈಗ ಡಾಕ್ಟರ್(ಎನ್ಆರ್ಐ)ರೊಬ್ಬರ ಆಶ್ರಯದಲ್ಲಿ ಚೆನ್ನಾಗಿದ್ದಾಳೆ. 3ನೇ ಕ್ಲಾಸ್ನಲ್ಲಿ ಓದ್ತಿದ್ದಾಳೆ. ಹದಿನೈದು ಇಪ್ಪತ್ತು ವರ್ಷಗಳಲ್ಲಿ ಸಾರ್ಥಕ ಅನ್ನಿಸಿರೋ ಒಂದೇ ಒಂದು ನಕ್ಷತ್ರ ಈ ಪ್ರೀತಿ.
ಲೈಂಗಿಕವೃತ್ತಿ ಮಹಿಳೆಯರ ಮಕ್ಕಳ ಬದುಕು, ಅದರೊಂದಿಗೆ ತಳಕು ಹಾಕಿಕೊಳ್ಳುವ ಸಮಸ್ಯೆಗಳು ಬಹುಮುಖಿಯಾದವು, ಲೈಂಗಿಕವೃತ್ತಿ ಮಹಿಳೆಯರು ತಮ್ಮ ವೃತ್ತಿಯ ಅವಧಿಯಲ್ಲಿ ತಮ್ಮ ಪ್ರಿಯಕರನೊಂದಿಗೆ, ಗಂಡನೆಂದು ಹೇಳಿಕೊಳ್ಳುವ ವ್ಯಕ್ತಿಯೊಂದಿಗೆ, ಅಥವಾ ಗಿರಾಕಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿ ಮಕ್ಕಳನ್ನು ಪಡೆಯುವುದೇ ಅಲ್ಲದೇ ಇಂತಹ ಮಕ್ಕಳ ಬಾಳ್ವೆಯನ್ನು ಪಣಕ್ಕಿಟ್ಟು ಹೆಣಗಾಡುತ್ತಿರುತ್ತಾರೆ.

ಸಮಾಜದ ದೃಷ್ಟಿಯಲ್ಲಿ ಶಾಸನಬಾಹಿರ ಮಕ್ಕಳು ಎಂದು ಪರಿಗಣಿಸಲ್ಪಟ್ಟವರ ಹೋರಾಟವೇ ಅತ್ಯಂತ ಸಾಹಸದ್ದು, ಲೈಂಗಿಕವೃತ್ತಿ ಮಹಿಳೆಯರು ಎಂದು ತಾಯ್ತನವನ್ನೂ ಮತ್ತು ಮಕ್ಕಳು ಹೊಂದಿರುವುದನ್ನು ಅಪ್ರಮುಖವೆಂದಾಗಲೀ, ಅಮೂಲ್ಯವಲ್ಲವೆಂದಾಗಲೀ ಭಾವಿಸುವುದೇ ಇಲ್ಲ.

ಆದರೆ ವಾಸ್ತವವಾಗಿ ಗಂಡನೆಂದು ಹೇಳಿಕೊಂಡು ಬೇರೆ ಬೇರೆ ಕಾರಣಗಳಿಂದ, ಅನಿವಾರ್ಯತೆಗಳಿಂದ ಲೈಂಗಿಕವೃತ್ತಿ ಮಹಿಳೆಯರ ಜೀವನದೊಳಗೆ ಪ್ರವೇಶಿಸುವ ಪ್ರತಿಯೊಬ್ಬನೂ ತನಗೊಂದು ತನ್ನದೇ ಆದ ಮಗು ಬೇಕೆಂಬ ಬೇಡಿಕೆಯಿಡುತ್ತಾನೆ. ತಾತ್ಕಲಿಕವಾಗಿ ತನ್ನೊಂದಿಗಿದ್ದು, ಯಾವುದೇ ಕ್ಷಣದಲ್ಲಾದರೂ ಕೈಕೊಟ್ಟು ಓಡಿಹೋಗುವ ಬಾಡಿಗೆ ಗಂಡಂದಿರ ಬಗ್ಗೆ ಅರಿವಿದ್ದರೂ ಕೂಡ ಅವನು ತನ್ನ ಬಾಳಸಂಗಾತಿಯಾಗಬಲ್ಲನೆಂಬ ಭ್ರಮೆಯಲ್ಲಿ ಮತ್ತೆ ಮತ್ತೆ ಹಡೆಯುತ್ತಲೇ ಹೋಗುತ್ತಾಳೆ. ಹಾಗೆ ಹಡೆದ ನಂತರವೇ ಅವರಿಬ್ಬರ ಮಧ್ಯೆ ಬಿರುಕುಗಳು…… ಆರಂಭವಾಗುವುದು. ಸಾಮಾನ್ಯವಾಗಿ ಒಬ್ಬ ಲೈಂಗಿಕವೃತ್ತಿ ಮಹಿಳೆಗಿರುವ ನಾಲ್ಕು ಮಕ್ಕಳಿಗೆ ನಾಲ್ಕು ಅಪ್ಪಂದಿರು. ಇದು ಅವರ ಬದುಕುಗಳಿಗಿರುವ ದೊಡ್ಡ ಸವಾಲು ಮತ್ತು ಏಕಾಂಗಿಯಾಗಿ ಲೈಂಗಿಕವೃತ್ತಿ ಮಹಿಳೆ ಸೆಣಸಾಡಬೇಕಾದ ಹೊಣೆ ಎದುರಾಗಿರುತ್ತದೆ.

ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ವೇಶ್ಯೆಯರ ಮಕ್ಕಳೂ ಕೂಡ ವೇಶ್ಯಾವಾಟಿಕೆಯಂತಹ ವ್ಯವಸ್ಥೆಯೊಂದಿಗೆ ತಳುಕು ಹಾಕಿಕೊಂಡೇ ಇರುತ್ತಾರೆ. ಭ್ರೂಣವಾಗಿರುವಾಗಲೇ ತಾಯಿಯ ಒಡಲಲ್ಲಿ ಬೆಚ್ಚಿಗಿರಲೂ ಆಗದ ಜಂಜಾಟಗಳಿಂದ ಆರಂಭಗೊಂಡ ಈ ಕಂದಮ್ಮಗಳ ಬದುಕಿನ ಪಯಣ ಜೀವನ ಪರ್ಯಂತ ಮುಳ್ಳಿನ ಹಾಸಿಗೆಯಾಗುತ್ತದೆ. ತಿಂಗಳ ನವಜಾತರನ್ನೇ ಕಂಕುಳಲ್ಲಿರಿಸಿಕೊಂಡು ವೃತ್ತಿಗಿಳಿದ ಅನಿವಾರ್ಯತೆ ಬಹುತೇಕ ಈ ಅಮ್ಮಂದಿರುಗಳಿಗೆ ಇರುವುದು ಕಟುಸತ್ಯ

ಚಿಕ್ಕಪ್ರಾಯದಿಂದಲೇ ಈ ಮಕ್ಕಳು ಅರಳುವ ವಾತಾವರಣವೇ ಅವರ ಬದುಕನ್ನು ಅನಾರೋಗ್ಯಕರವಾಗಿಸುತ್ತದೆ. ತಾಯಿಗೆ ಬರುವ ಗಿರಾಕಿಗಳು, ಅವರ ನಡವಳಿಕೆಗಳು, ಅಮ್ಮನನ್ನು ಕಾಡಿಸುವ, ಅವಳ ಗಂಡನಾಗಿ ತಾತ್ಕಲಿಕ ಪಾತ್ರವಹಿಸುವ ಈ ಮಕ್ಕಳ ಅಂಕಲ್ಗಳು ಮಾಮಂದಿರು ಹಾಗೂ ದುಶ್ಚಟಗಳು, ಅರಾಜಕ ವರ್ತನೆಗಳು ಮಕ್ಕಳನ್ನು ಕುಂದಿಸುತ್ತಲೇ ಹೋಗುತ್ತದೆ. ಸಂದರ್ಭದ ಬಲಿಪಶುಗಳಾಗುವ ಈ ಮಕ್ಕಳ ಬಗ್ಗೆ ವ್ಯವಸ್ಥೆಯೂ ತೀರಾ ನಿರ್ಲಕ್ಷ್ಯ ತೋರುತ್ತದೆ.

ಅವರಿಗೆ ಬೌದ್ಧಿಕವಾಗಿ, ಆರೋಗ್ಯವಂತರಾಗಿ ಬದುಕುವ ಅವಕಾಶವೇ ಇಲ್ಲ. ಅಪೌಷ್ಟಿಕತೆ, ಅಶಾಂತಿಯಿಂದ ಬಳಲುತ್ತದೆ. ಕನಿಷ್ಠ ಸೌಲಭ್ಯಗಳೂ ಈ ಮಕ್ಕಳ ಪಾಲಿಗೆ ಇರುವುದಿಲ್ಲ. ಸಾಮಾಜಿಕವಾಗಿ ಇವರು ಅನುಭವಿಸುವ ಅಸ್ಮೃಶ್ಯತೆ ಇವರನ್ನು ತಳಪಾಯಕ್ಕೆ ತಳ್ಳಿದೆ. ಅನಿವಾರ್ಯವಾಗಿ ಅವರು ಅಮ್ಮಂದಿರ ಗಿರಾಕಿಗಳನ್ನು ಕರೆತರುವ ಪಿಂಪ್ಗಳಾಗುತ್ತಾರೆ. ಒಟ್ಟಾರೆ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ, ಪೋಷಕರ ಆರೈಕೆ. ಶಾಂತಿ ನೆಮ್ಮದಿಯ ವಾತಾವರಣ…. ಇವ್ಯಾವೂ ಇಲ್ಲದೆಯೇ ಬೆಳೆಯುವ ಈ ಮಕ್ಕಳ ಭವಿಷ್ಯ ಒಂದು ದೊಡ್ಡ ಸಮಾಜಕ್ಕೆ ಹೊರೆಯೇನಲ್ಲ. ಆದರೆ ಜಡ್ಡುಗಟ್ಟಿರುವ ಈ ವ್ಯವಸ್ಥೆಗೆ ಈ ಸಮಾಜಕ್ಕೆ ಇದರ ಅರಿವು ಮೂಡಿಸಬೇಕಾದ್ದು. ಕೂಡ ಒಂದು ಸವಾಲೇ!
ಇದು ವಾಸ್ತವ
2005ರಲ್ಲಿ ಸಂಜಿಘೋಷ್ ಹತ್ತನೇ ತರಗತಿ ತೇರ್ಗಡೆಯಾದ! ಕಲ್ಕತ್ತಾದ ಸೋನಾಗಾಚಿಯ ಲೈಂಗಿಕವೃತ್ತಿ ಮಹಿಳೆಯೋರ್ವಳ ಮಗನಾಗಿದ್ದ ಸಂಜಿತ್ ಆ ಕಾರಣಕ್ಕಾಗಿಯೇ ಬಿಟ್ಟು ಬಿಟ್ಟು ಐದಾರು ಶಾಲೆಗಳಲ್ಲಿ ಕಲಿತು ಹೈಸ್ಕೂಲ್ ಮುಗಿಸಿದ್ದ.
ಸರಿ; ಮಾಧ್ಯಮದವರಿಗೆ ಅದೊಂದು ಸೋಚಿಗದ ಸುದ್ದಿಯೇ ಆಗಿತ್ತು. ಆ ವಾರ ಬಿಸಿಬಿಸಿ ಸುದ್ದಿಯಲ್ಲಿ ಸಂಜಿತ್ ಸ್ಟೋರಿ ಪ್ರಮುಖವಾಯ್ತು. ಮಾಧ್ಯಮಗಳಲ್ಲಿ ಬಿತ್ತರಗೊಂಡ ಹೀರೋ ಆಗಿದ್ದ ಸಂಜಿತ್ಗೆ ಯಾವುದು ಕಾಲೇಜಿನಲ್ಲಿ ಸೀಟು ಸಿಕ್ಕದಾದಾಗ ಆತ ಕುಸಿದು ಹೋಗಿದ್ದ. ಒಂದು ಅಂದಾಜಿನಂತೆ ಭಾರತದಲ್ಲಿ ಲಕ್ಷಾಂತರ ಮಕ್ಕಳು ಇಂತಹ ಕುಸಿದ ಬದುಕಿನ ಬುನಾದಿಯ ಮೇಲೆ ನಿಂತಿದ್ದಾರೆ.
ಸಾಮಾನ್ಯ ಮಕ್ಕಳಂತೆ ಇವರು ಕಳಂಕ. ತಾರತಮ್ಯವಿಲ್ಲದೆ ಬದುಕುವಂತಾಗಬೇಕು. ಎಲ್ಲರಂತೆ ನಕ್ಕು ನಲಿಯುವ, ಬದುಕುವ ಓದುವ ಕನಿಷ್ಠ ಅವಕಾಶಗಳಾದರೂ ದೊರೆಯಬೇಕು.

ಓದುಬಜಾರ್ ಓದಿ

‘ಸಹಿಸುವುದೇ ಸರಿಯಾದ ರೀತಿ ಎಂಬ ವಾದದಲ್ಲಿ ಏನೋ ತಪ್ಪಿದೆ’

ನರೇಂದ್ರ ಪೈ ಉತ್ತರ-
ಓದಿ ಈಗಲೇ ‘ಓದುಬಜಾರ್’ನಲ್ಲಿ

ದಟ್ಟ ಮಲೆನಾಡಿನ ನೆನಪುಗಳು

ಓದಿ ಈಗಲೇ ‘ಓದುಬಜಾರ್’ನಲ್ಲಿ

ಸೋಗೆಮನೆಯ ‘ಅಕಾಲ’ ಕಥೆಗಳು

ರಮೇಶ್ ಸೋಗೆಮನೆ ಕಾಲವನ್ನು ಮೀರುವ ‘ಅಕಾಲ’ ಕಥೆಗಳನ್ನು ಬರೆದಿದ್ದಾನೆ. ಇದೆಲ್ಲಾ ಆತನಿಗೆ ಸಾಧ್ಯವಾದದ್ದು ಆತನ ಸದಾ ಮೌನ ಹಾಗೂ ಅಪಾರ ಓದಿನಿಂದ ಎನ್ನುತ್ತಾರೆ ಆತನ ಗೆಳೆಯರು. ಚಿಕ್ಕ ವಯಸ್ಸಿಗೆ ತಲ್ಲಣಗೊಳಿಸುವ ನೋಟ ನೀಡುತ್ತಿರುವ ಈತನ ಕಥೆಗಳ ಮತ್ತಷ್ಟು ಸ್ಯಾಂಪಲ್ ಇಲ್ಲಿದೆ.

ಜನ ಹೇಳಿದ್ದು

ಬಹಳ ವರ್ಷಗಳ ಕಾಲ ಸುಖಿಸಿ ಸಂಭೋಗಿಸಿ ಧ್ಯಾನಿಸಿದ ದೇಹ ತುಸು ವಿಶ್ರಾಂತಿ ಬೇಡಿತು. ಜನ ಅದನ್ನು ಸಾವು ಅಂದರು.

ನಟ

ಪ್ರೇಯಸಿ ಸತ್ತಿದ್ದಾಳೆ. ಅವನು ಅಳುತ್ತಿದ್ದಾನೆ. ಕೈಯಲ್ಲಿರುವುದು ಗ್ಲಿಸರಿನ್.

ಕಥೆ ಅರ್ಥವಾಗದಿದ್ದರೆ…

ಅಪ್ಪ ಬಹಳ ಹಿಂದೆ ಮಗನಿಗೆ ಹೇಳಿದ ಕಥೆ ಇದು. ಊರಿಗೆ ತೋಳ ಕತ್ತೆಕಿರುಬ ಬಾರದೆ ಇರಲಿ ಅಂತ ಒಂದ್ಸಲ ಆಡಿಗೆ ಹುಲಿ ಮುಖವಾಡ ಹಾಕಿದ್ರು. ಆಡು ಬಹಳ ಪೋಸು ಕೊಟ್ಟುಕೊಂಡು ಊರಲ್ಲಿ ಎಲ್ಲಾರನ್ನೂ ಹೆದರಿಸ್ತಾ ಇತ್ತು. ಆದ್ರೆ ಒಂದಿನ ನಿಜವಾದ ಹುಲಿ ಬಂದು ಆಡನ್ನ ತಿಂದು ಹಾಕಿ ಸತ್ಯ ಏನು ಅಂತ ಜನರಿಗೆ ತಿಳಿಸ್ತು. ಇದರಿಂದ ತೃಪ್ತಿಯಾದ ಜನ ಹುಲಿಗೆ ಆಡಿನ ವೇಷ ಹಾಕಿದ್ರು. ಮೊದಲೇ ಹೊಟ್ಟೆ ಹಸಿದ ಹುಲಿ ಆಡುಗಳನ್ನ ಮುಗಿಸಿದ ಮೇಲೆ ಊರಿನ ದನ ಕರುಗಳನ್ನೆಲ್ಲ ಗುಳುಂ ಮಾಡ್ತು.
ಅಪ್ಪ ಹೇಳಿದ ಕಥೆ ಎಷ್ಟೋ ವರ್ಷಗಳವರೆಗೆ ಮಗನಿಗೆ ಅರ್ಥವಾಗಿರಲಿಲ್ಲ. ಅರಿವಾಗುವ ಹೊತ್ತಿಗೆ ಅವನ ಮನೆಯಲ್ಲಿ ಊರಲ್ಲಿ ಯಾರೂ ಉಳಿದಿರಲಿಲ್ಲ.

ಕನ್ನಡಕ

ತನ್ನ ಗೆಳೆಯನ ಬಗ್ಗೆ ಒಬ್ಬನಿಗೆ ಅಪಾರ ಕುತೂಹಲ. ಒಂದು ದಿನ ಅವನ ಕನ್ನಡಕದ ಬಗ್ಗೆ ಮಾತು ಸರಿಯಿತು.
ಇವನ ಪ್ರಶ್ನೆ – ಹೊಸ ಕನ್ನಡಕ ಇದ್ರೂ ಈ ಒಡೆದುಹೋದ ಹಳೆ ಕನ್ನಡಕವನ್ನೇ ಯಾಕೆ ಮತ್ತೆ ಮತ್ತೆ ಬಳಸುತ್ತೀ?
ಅದಕ್ಕೆ ಸಿಕ್ಕ ಉತ್ತರ – ಕನ್ನಡಕ ಒಡದ್ರೆ ನೋ ಪ್ರಾಬ್ಲಂ. ಅದ್ರೆ ಕಣ್ಣೇ ಒಡೆದಿದ್ರೆ?


%d bloggers like this: