ಕಾರಂತರ ನೆನಪುಗಳ ಕತ್ತಲೆ ಬೆಳಕಿನಲ್ಲಿ….

ಇಂದು ಬಿ ವಿ ಕಾರಂತರ ಜನ್ಮದಿನ. ಆ ನೆನಪಿಗೆ ಜೋಗಿ ಕಾರಂತರ ಆತ್ಮಕಥನ (ವೈದೇಹಿ) ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ..’ ಕುರಿತು ಬರೆದ ಬರಹವನ್ನು ನೀಡುತ್ತಿದ್ದೇವೆ. ಜೊತೆಗೆ ನೆನಪಿನ ಆಲ್ಬಂನ ಪುಟವಿದೆ. ಡಾ. ವಿಜಯಾ ದಶಕಗಳ ಹಿಂದೆ ಆಕಾಶವಾಣಿಗಾಗಿ ಬಿ ವಿ ಕಾರಂತರನ್ನು ಸಂದರ್ಶಿಸಿದ್ದು ಹೀಗೆ..   

-ಜೋಗಿ 

ಕೊನೆಗೂ ಬಿ.ವಿ. ಕಾರಂತರ ಆತ್ಮಚರಿತ್ರೆ ಬಿಡುಗಡೆಯಾಗಿದೆ. ಹಕ್ಕುಗಳು ಬಿವಿ ಕಾರಂತರ ಪ್ರತಿಷ್ಠಾನದ ವಶವಾಗಿದೆ. ಅಲ್ಲಿಗೆ ಪುಸ್ತಕಕ್ಕೆ ಸಂಬಂಸಿದಂತೆ ಎಲ್ಲ ರಗಳೆಗಳೂ ಮುಗಿದಂತಾಗಿದೆ.

ಐನೂರೈವತ್ತು ಪುಟಗಳ ಕಾರಂತರ ಆತ್ಮಚರಿತ್ರೆಯನ್ನು ಓದುತ್ತಿದ್ದಾಗ ಮೊದಲು ಕಣ್ಣಿನ ಮುಂದೆ ಥಟ್ಟನೆ ನಿಲ್ಲುವುದು ಕಾರಂತರ ಅಗಾಧವಾದ ಪ್ರತಿಭೆ ಮತ್ತು ಅದನ್ನು ಅವರು ನಿಭಾಯಿಸಿದ ರೀತಿ. ಓದಿ ಮುಗಿಸುತ್ತಿದ್ದಂತೆ ಬೆರಗುಗೊಳಿಸುವುದು ವೈದೇಹಿಯವರ ಶ್ರದ್ಧೆ ಮತ್ತು ಶ್ರಮ. ಹಾಗೆ ನೋಡಿದರೆ ಇದು ವೈದೇಹಿಯವರು ಬರೆದ ‘ಮತ್ತೊಬ್ಬನ ಆತ್ಮಚರಿತ್ರೆ’ಯೂ ಹೌದು. ಕಾರಂತರನ್ನು ಬಲ್ಲವರಿಗೆಲ್ಲ ಗೊತ್ತು ; ವೈದೇಹಿ ರಚ್ಚೆ ಹಿಡಿದು ಮಾತಾಡಿಸದೇ ಹೋಗಿದ್ದರೆ ಕಾರಂತರು ಅಷ್ಟೆಲ್ಲವನ್ನು ಬಿಟ್ಟುಕೊಡುತ್ತಿರಲಿಲ್ಲ. ವೈದೇಹಿಯವರು ನಿಸ್ವಾರ್ಥ ಪ್ರೀತಿಯಿಂದ ಲಿಪಿಕಾರರಾಗದೇ ಹೋಗಿದ್ದರೆ ಮತ್ಯಾರಿಗೂ ಕಾರಂತರ ಜೊತೆಗೆ ಏಗುವ ತಾಳ್ಮೆ ಮತ್ತು ವ್ಯವಧಾನ ಇರುತ್ತಿರಲಿಲ್ಲ. ಹೀಗಾಗಿ ಕಾರಂತರನ್ನೂ ವೈದೇಹಿಯವರನ್ನೂ ಒಟ್ಟೊಟ್ಟಿಗೆ ಮೆಚ್ಚುವುದಕ್ಕೆ ಕಾರಂತರ ಆತ್ಮಚರಿತ್ರೆ ಕಾರಣವಾಗಿದೆ.

Cover page of 'Illiralare Allige Hogalare'ಇದನ್ನು ಆತ್ಮಚರಿತ್ರೆ ಎಂದು ವೈದೇಹಿಯವರು ಕರೆದಿಲ್ಲ. ಬದುಕಿನ ನೆನಪು ಅನುಭವಗಳ ಕಥನ ಎಂದಿದ್ದಾರೆ. ಅವರು ಬದುಕಿರುವಾಗಲೇ ಹೇಳಿಬರೆಸಿದ್ದರಿಂದ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಎಂಬ ಶೀರ್ಷಿಕೆಯೂ ಅರ್ಥವತ್ತಾಗಿದೆ ಎಂದುಕೊಳ್ಳಬೇಕು. ಇಲ್ಲಿ ಮತ್ತು ಅಲ್ಲಿ ಅನ್ನುವುದನ್ನು ಜೀವನ ಮತ್ತು ರಂಗ ಎಂದು ಸರಳವಾಗಿ ಅರ್ಥಮಾಡಿಕೊಂಡು ನೋಡುವುದೂ ಕಾರಂತರ ವಿಚಾರದಲ್ಲಿ ಅಷ್ಟು ಸರಿಯಲ್ಲ. ಹಾಗೆ ನೋಡುವುದಾದರೆ ಅವರು ಇಲ್ಲಿದ್ದವರೇ ಅಲ್ಲ ; ಸದಾ ಅಲ್ಲೇ ಇದ್ದವರು.

‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಓದುವ ಮುಂಚೆ ಪ್ರತಿಯಾಬ್ಬರೂ ಕೃತಿಯ ಅಂತ್ಯದಲ್ಲಿ ಕೊಟ್ಟಿರುವ ಬಿ. ವಿ. ಕಾರಂತರ ನಾಟಕ ಸೂಚಿಯನ್ನು ಗಮನಿಸಬೇಕು. 56 ಕನ್ನಡ, 44 ಹಿಂದಿ, ಉರ್ದು, ಪಂಜಾಬಿ, ಸಂಸ್ಕೃತ, ಗುಜರಾತಿ, ಮಲಯಾಳಂ, ತೆಲುಗು, ಇಂಗ್ಲಿಷ್‌ ಅಂತ 12, ಮಕ್ಕಳಿಗೋಸ್ಕರ ಕನ್ನಡ-ಹಿಂದಿಯಲ್ಲಿ 30 ನಾಟಕಗಳನ್ನು ಕಾರಂತರು ಆಡಿಸಿದ್ದಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ನೋಡಿರದಷ್ಟು ನಾಟಕಗಳನ್ನು ಗ್ರಹಿಸಿ, ಅವನ್ನು ರಂಗಕ್ಕೆ ತಂದದ್ದು ಸಾಮಾನ್ಯ ಸಾಧನೆಯೇನಲ್ಲ. ಇದರ ಜೊತೆಗೇ ಅವರು ನಿರ್ದೇಶಿಸಿರುವ ಸಿನಿಮಾಗಳ ಪಟ್ಟಿಯಿದೆ. ಸಂಗೀತ ನಿರ್ದೇಶನ ನೀಡಿದ ಸಿನಿಮಾಗಳಿದ್ದಾವೆ. ಕುಸುಮಬಾಲೆಯನ್ನು ರಂಗರೂಪಕ್ಕೆ ತಂದದ್ದಿದೆ. ಭೂಮಿಗೀತವನ್ನು ರಂಗಕ್ಕೆ ಅಳವಡಿಸಿದಂಥ ಪ್ರಯೋಗಗಳಿವೆ.

ಇಷ್ಟೆಲ್ಲ ಸಾಧಿಸಿದ ಜೀವನದ ಅನುಭವಗಳೂ ಅಷ್ಟೇ ದಟ್ಟವಾಗಿರಲೇಬೇಕು. ಆ ಕಾರಣಕ್ಕೇ ಕಾರಂತರ ಬದುಕಿನ ಅನುಭವ ಮತ್ತು ನೆನಪುಗಳು ನಮ್ಮನ್ನು ಒಳಗೊಳ್ಳುತ್ತಾ ಓದಿಸಿಕೊಂಡು ಹೋಗುತ್ತವೆ. ಪ್ರತಿಯಾಂದು ನೆನಪೂ ಮತ್ತೊಂದು ನೆನಪಿನ ಜೊತೆ ತಳುಕು ಹಾಕಿಕೊಳ್ಳುತ್ತಲೇ ಅನನ್ಯವಾಗಿ ಉಳಿಯುವಂತೆ ದಾಖಲಾಗಿದೆ. ಬದುಕು ಮತ್ತು ರಂಗಭೂಮಿ ಎರಡರ ವ್ಯತ್ಯಾಸ ಅಳಿಯುವಷ್ಟು ಗಾಢವಾಗಿ ಕಾರಂತರು ಬದುಕಿದ್ದರು ಅನ್ನುವುದು ಗೊತ್ತಾಗುತ್ತದೆ.

ಒಂದೊಂದೇ ಪುಟಗಳನ್ನು ಓದುತ್ತಾ ಹೋದಂತೆ ನಮಗೆ ಮೊದಲಿಗೆ ದಿಗ್ಭ್ರಮೆ ಹುಟ್ಟಿಸುವುದು ಕಾರಂತರ ಬದುಕಿನ ವಿಸ್ತಾರ. ಪುತ್ತೂರಿನ ಬಾಬುಕೋಡಿಯಲ್ಲಿ ‘ಕರ್ಕಾಟಕ ಮಾಸಲೆ ಒಳ್ಳೇ ಆದಿತ್ಯವಾರ, ಮಧ್ಯರಾತ್ರಿ, ಕಳ್ಳರು ಹೊರಡ್ತ ಹೊತ್ತಿಲೆ ಹುಟ್ಟಿದ’ ಕಾರಂತರ ಪ್ರತಿಭೆ ಜಗತ್ತಿನ ಸಮಸ್ತ ನಾಟಕಕಾರರ ಪ್ರತಿಭೆಯನ್ನೂ ತನ್ನ ತೆಕ್ಕೆಗೆ ಒಗ್ಗಿಸಿಕೊಂಡದ್ದು ಒಂದು ಅಪೂರ್ವ ನಟನೆ. ಈ ಜೀವನಪಥದಲ್ಲಿ ನಮಗೆ ಬೆದರುವ ಬಾಲಕಾರಂತರು, ತುಂಟತನದ ತರುಣ ಕಾರಂತರು, ಶ್ರಮಿಸಿದ ಸಾಧಕ ಕಾರಂತರು, ಅಪರಾ ಸ್ಥಾನದಲ್ಲಿ ನಿಂತ ನಿರ್ದೋಷಿ ಕಾರಂತರು, ಕುಡಿಯುತ್ತಾ ಕುಡಿಯುತ್ತಾ ಅನೇಕ ವರುಷಗಳನ್ನೇ ಕಳಕೊಂಡ ನಿರರ್ಥಕ ಕಾರಂತರು ಈ ನೆನಪಿನ ನದಿಯ ಗುಂಟ ಕಾಣಸಿಗುತ್ತಾರೆ. ಆದರೆ ವೈದೇಹಿಯವರ ನಿರೂಪಣೆಯ ಶೈಲಿ ಮತ್ತು ಕಾರಂತರು ತಮ್ಮ ಜೀವನವನ್ನು ಹೇಳಿಕೊಳ್ಳುವ ಲಹರಿಗೆ ಒಂದು ನಾಟಕದ ಆವೇಗವಿದೆ. ಒಂದು ದೃಶ್ಯದ ಉದ್ವೇಗವಿದೆ. ಜೀವನ ಸಹಜವಾಗಿ ಶುರುವಾಗುತ್ತದೆ. ಒಂದೊಂದೇ ಪಾತ್ರಗಳು ಪರಿಚಯವಾಗುತ್ತಾ ಹೋಗುತ್ತದೆ. ಆ ಪಾತ್ರಗಳ ಜೊತೆಗಿನ ಸಂಬಂಧಗಳು ಸ್ಥಿರವಾಗುತ್ತಾ, ಅಸ್ಥಿರವಾಗುತ್ತಾ ಹೋಗುತ್ತವೆ. ಆ ಸಂಬಂಧಗಳ ಮೂಲಕ ಮತ್ತೊಂದು ಹೊಸ ಜಗತ್ತು ಸೃಷ್ಟಿಯಾಗುತ್ತದೆ. ಆ ಹೊಸ ಜಗತ್ತಿನ ವ್ಯಾಪಾರಗಳಿಗೆ ಸ್ಪಂದಿಸುತ್ತಾ ಕಾರಂತರೂ ಹೊಸಬರಾಗುತ್ತಾ ಹೋಗುತ್ತಾರೆ.

***

ಕಾರಂತರ ಜ್ಞಾಪಕ ಚಿತ್ರಶಾಲೆಯ ರಸಗಳಿಗೆಗಳನ್ನು ಅವರ ಮಾತಲ್ಲೇ ಕೇಳುವುದು ಚಂದ. ಈ ಪುಟ್ಟ ಭಾಗಗಳು ನಿಮ್ಮನ್ನು ಇಡೀ ಆತ್ಮಚರಿತ್ರೆಯನ್ನು ಓದುವಂತೆ ಪ್ರೇರೇಪಿಸಲಿಕ್ಕೂ ಸಾಕು. ಅಂಥ ಪ್ರೇರಣೆಯನ್ನು ಯಾವುದಾದರೂ ಜೀವ, ಯಾರದ್ದೋ ಸಾಧನೆ, ಎಲ್ಲಿಯದೋ ಒಂದು ಪ್ರತಿಭೆ ಒದಗಿಸಿದರೆ ಈ ಕಾಲಕ್ಕೆ ಅಷ್ಟೇ ಸಾಕಲ್ಲ.

-1-


ನಾನು ಮತ್ತು ರಾಮು ಚೋಮನದುಡಿಯ ಪ್ರೊಡಕ್ಷನ್‌ ಸ್ಕಿೃಪ್ಟ್‌ ಸಿದ್ಧಮಾಡಿದೆವು. ಶಿವರಾಮ ಕಾರಂತರಿಗೆ ಪ್ರೊಡಕ್ಷನ್‌ ಸ್ಕಿೃಪ್ಟ್‌ ಸಿದ್ಧವಾಗಿದೆ. ಒಮ್ಮೆ ನೀವು ನಿಮ್ಮ ಅನುಭವದಲ್ಲಿ ಹಾಗೂ ಕಲ್ಪನೆಯಲ್ಲಿ ಇರೋ ಜಾಗ ತೋರಿಸುತ್ತೀರಾ ಅಂತ ಕಾಗದ ಬರೆದೆ. ಜಾಗ ನೋಡಿ ಹೋಗಲಿಕ್ಕೆ ನಿರ್ಮಾಪಕ ಮುದ್ದು ಸುವರ್ಣ ವ್ಯವಸ್ಥೆ ಮಾಡಿದರು. ಊರಿಗೆ ಬಂದೆ. ಕಾರಂತರು ಹಲವು ಜಾಗ ತೋರಿಸಿದರು. ಒಂದು ಕಡೆಯಂತೂ ಮೆಟ್ಟಲು ಮೆಟ್ಟಲು ಪ್ರದೇಶ. ಬಹಳ ಅಪರೂಪ ಎನ್ನಿಸಿತು. ಜೊತೆಯಲ್ಲಿ ರಾಮಚಂದ್ರ ಇದ್ದದ್ದರಿಂದ ಕಾರಂತರ ಸನಿಹ ಬರಲು ನನಗೆ ಅನುಕೂಲವಾಯಿತು. ನಮ್ಮ ಕಾರು ಆಗುಂಬೆ ಘಾಟಿ ಏರುವುದರೊಳಗೆ ಕೈಕೊಟ್ಟಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಂಡಿದ್ದೆವು. ನಾನು ಕಾರಂತರನ್ನು ಮೆಲ್ಲ ಕೇಳಿದೆ;

‘ನಿಮಗೆ ಅಸಮಧಾನ ಆಗಲ್ವಾ?’

‘ಅಸಮಾಧಾನ ಆದ್ರೆ ಕಾರು ಸರಿಹೋಗುತ್ತಾ?’ -ಕಾರಂತರು!

ಆಗುಂಬೆಯಲ್ಲಿ ಭಟ್ಟರ ಮನೆಯಲ್ಲಿ ಊಟಗೀಟ ಎಲ್ಲ ಚೆನ್ನಾಗಿತ್ತು. ಕುಂಬಳಕಾಯಿ ಹಲ್ವ ಮಾಡಿದ್ದರು. ಅಲ್ಲಿ ಮಾತಾಡುತ್ತಾ ಆಡುತ್ತಾ ನಾನು ಕಾರಂತರೊಡನೆ ‘ಪೂನಾಕ್ಕೆ ಹೋಗ್ತಿದ್ದೀನಿ. ಫಿಲ್ಮ್‌ ಇನ್‌ಸ್ಟಿಟ್ಯೂಟಿಗೆ. ಅಲ್ಲಿ ಗಿರೀಶರಿಗೆ ಸ್ಕಿೃಪ್ಟು ತೋರಿಸ್ತೇನೆ’ ಅಂದೆ. ಯಾಕೆ ಬೇಕಿತ್ತು ಈ ಕೆಲಸ. ಗೊತ್ತಿಲ್ಲ. ಹಾಗೆ ಹೇಳಬಾರದಾಗಿತ್ತು ನಾನು. ಹೇಳಿದ ತಕ್ಷಣವೇ ಕಾರಂತರು ‘ಸ್ಕಿೃಪ್ಟ್‌ ತೋರಿಸಲಿಕ್ಕೆ ಯಾರವರು? ಬರೆದದ್ದು ನಾನು. ಅವರು ಯಾರು ನೋಡಲಿಕ್ಕೆ?’ ಎಂದುಬಿಟ್ಟರು.

ಚೋಮನ ದುಡಿಗೆ ಬೆಸ್ಟ್‌ ಫಿಲ್ಮ್‌ ಅವಾರ್ಡು ಬಂದರೂ ಶಿವರಾಮ ಕಾರಂತರಿಗೆ ಮಾತ್ರ ಬಹಳ ಸಿಟ್ಟಿತ್ತು. ‘ಚೆನ್ನಾಗಿಲ್ಲ. ನಾನು ಹೇಳಿದ ನಟರನ್ನು ತೆಗೆದುಕೊಳ್ಳಲಿಲ್ಲ. ಬೆಳ್ಳಗಿದ್ದವನನ್ನು ಹೊಲೆಯ ಅಂತ ಮಾಡಿದ್ದಾರೆ’ ಮುಂತಾಗಿ ಎಲ್ಲ ಹೇಳಿದರಂತೆ. ಮೊದಲ ದಿನ ಚೋಮ ಬೆಳ್ಳಗಿದ್ದದ್ದೇನೋ ನಿಜ. ಮುಹೂರ್ತಕ್ಕೆ ಚೋಮನಿಗೆ ಬಣ್ಣ ಹಾಕಿರಲಿಲ್ಲ.

-2-


ಒಮ್ಮೆ ಜಿ. ವಿ. ಅಯ್ಯರ್‌ ದಿಲ್ಲಿಗೆ ಬಂದರು. ‘ಚೌಕದ ದೀಪ’ ಫಿಲ್ಮ್‌ ಮಾಡಿ ಸೋತು ದಿಲ್ಲಿಗೆ ಬಂದಿದ್ದರು. ಅವರ ನಲ್ವತ್ತೊಂಬತ್ತನೇ ಚಿತ್ರವಂತೆ ಅದು. ಚಿತ್ರದ ಕತೆಯಲ್ಲಿ ಅಣ್ಣ ಸ್ವಲ್ಪ ಲಂಪಟ. ಅದಕ್ಕೆ ತಕ್ಕಂತೆ ಚಿತ್ರದಲ್ಲಿ ಗೆರೆ ಮೀರಿದ ದೃಶ್ಯವೊಂದಿದ್ದು ಪ್ರೇಕ್ಪಕರು ರೊಚ್ಚಿಗೆದ್ದರಂತೆ. ಗಲಾಟೆ ಮಾಡಿ ಪರದೆ ಎಲ್ಲ ಹರಿದುಹಾಕಿ ಕಲ್ಲು ಹೊಡೆದು ದೊಂಬಿ ಮಾಡಿದರಂತೆ. ಸಿಕ್ಕಾಪಟ್ಟೆ ನಷ್ಟವಾಗಿ ಸಾಲಗಾರರಿಗೆ ಮುಖ ತೋರಿಸಲಿಕ್ಕಾಗದೆ ದಿಲ್ಲಿಗೆ ಓಡಿ ಬಂದುಬಿಟ್ಟಿದ್ದರು. ಅವರ ಬದುಕಿನಲ್ಲಿ ಇಂಥದ್ದು ಹತ್ತಾರು. ಎಂತಲೇ ಅವರನ್ನು ‘ಫೀನಿಕ್ಸ್‌’ ಎನ್ನುತ್ತಿದ್ದರು. ದಿಲ್ಲಿಗೆ ಬಂದವರು ನಮ್ಮಲ್ಲೇ ಉಳಿದುಕೊಂಡರು. ಆ ಸಮಯದಲ್ಲೇ ಅವರು ‘ವಂಶವೃಕ್ಷ’ ಓದಿದ್ದು.

ಅವರು ಬಂದಾಗ ಚಳಿಗಾಲ. ಅಯ್ಯರ್‌ ಚಪ್ಪಲಿಯಿಲ್ಲದೆ ನಡೆಯುವವರು. ಆ ಥಂಡಿ ರಸ್ತೆಯ ಮೇಲೆ ನಡೆಯುವಾಗ ಬೆಂಕಿಯಲ್ಲಿ ನಡೆದಂತೆ ಹಾರುತ್ತಿದ್ದರು. ಆಗ ಭೈರಪ್ಪನವರೂ ದೆಹಲಿಯಲ್ಲಿರುತ್ತಿದ್ದರು. ಪ್ರತಿದಿನ ನಮ್ಮ ಮನೆಯವರೆಗೆ ವಾಕಿಂಗ್‌ ಬರುತ್ತಿದ್ದರು. ಹೀಗಿರುವಾಗ ಅಯ್ಯರ್‌ ಒಂದು ದಿನ ‘ವಂಶವೃಕ್ಷ’ ಯಾಕೆ ಸಿನಿಮಾ ಮಾಡಬಾರದು’ ಅಂದರು.

‘ನನಗೇನಂತೆ’

‘ಅಲ್ಲ, ಭೈರಪ್ಪನವರು ಪರ್ಮಿಷನ್‌ ಕೊಡಬೇಕಲ್ಲ’

‘ನಾನು ಮಾತಾಡ್ತೀನಿ. ನೋಡೋಣ’ ಅಂದೆ. ಆಗ ದಿಶಾಂತರ್‌ನಲ್ಲಿ ‘ಖಾಮೋಷ್‌. ಅದಾಲತ್‌ ಜಾರೀ ಹೈ’ ನಾಟಕದ ರಿಹರ್ಸಲ್‌ ನೋಡೋಕೆ ಭೈರಪ್ಪನವರು ಬರುತ್ತಿದ್ದರು. ಭೈರಪ್ಪನವರಿಗೆ ನಾನು ಅಯ್ಯರ್‌ ಆಸೆ ತಿಳಿಸಿದೆ. ಯೋಚನೆ ಮಾಡ್ತೀನಿ ಅಂದರು. ಆಮೇಲೆ ಒಂದಿನ ಮನೆಗೆ ಬಂದಾಗ ‘ನೋಡಿ ಕಾರಂತರೆ, ನಾನು ಕಮರ್ಶಿಯಲ್‌ ಆಗಿ ಕೊಡೋದಿಲ್ಲ. ನೀವು ಡೈರೆಕ್ಟ್‌ ಮಾಡೋದಾದರೆ ಕೊಡ್ತೀನಿ’ ಅಂದರು. ‘ಮಾಡ್ಲಿ. ಕಾರಂತರೇ ಮಾಡ್ಲಿ. ನಮ್ಮವ ಇವ. ನನ್ನ ತಮ್ಮನ ಹಾಗೆ’ ಅಂದರು ಅಯ್ಯರ್‌.

ಪೂರಾ ನಟನೆ ಅವರದು. ಅಯ್ಯರ್‌ಗೆ ಇರುವಷ್ಟು ಅವತಾರಗಳು ಇನ್ಯಾರಿಗೂ ಇರಲಿಕ್ಕಿಲ್ಲ.

-3-


ಬೆಂಗಳೂರಲ್ಲಿ ಹಿಂದೊಮ್ಮೆ ಬಂದವ ಶ್ರೀರಂಗರ ನಾಟಕ ‘ನೀಕೊಡೆ ನಾ ಬಿಡೆ’ ಮಾಡಿ ಹೋಗಿದ್ದೆ. ಪ್ರದರ್ಶನಕ್ಕೆ ಬಂದ ವೈಎನ್‌ಕೆ ‘ನೀ ಕೊಡೆ ನಾ ಬಿಡೆ’ ಅಂತ ಬಾಗಿಲು ಹಾಕಿಕೊಂಡು ಬಿಟ್ಟಿದ್ದೀರಲ್ಲ’ ಅಂತ ತಮಾಷೆ ಮಾಡಿದ್ದರು. ಸ್ವತಃ ಶ್ರೀರಂಗರೇ ಬೆಂಗಳೂರಿನ ಪ್ರೇಕ್ಷಕರು ಎದ್ದು ಹೋಗುತ್ತಾರಂತ ಬಾಗಿಲು ಹಾಕಿಬಿಟ್ಟಿದ್ದರು.

-4-


ಮಾರ್ಚ್‌ ಹೊತ್ತಿಗೆ ವಿಭಾ ಭೋಪಾಲಿಗೆ ಬಂದಳು.

ಕೋರ್ಟಿಗೆ ಅವಳು ಹಾಜರಾಗುವ ದಿವಸ ನಾನು ಒಂದು ಕಡೆ ಮೆಟ್ಟಿಲು ಹತ್ತಿ ಬರುತ್ತಿದ್ದೇನೆ. ಅವಳು ಕಡೆಯಿಂದ ಬಂದಳು. ಎದುರು ಬರುತ್ತಲೂ ಎರಡೂ ಕೈ ಮುಗಿದು ನಮಸ್ಕರಿಸಿದಳು. ಕೋರ್ಟಿನಲ್ಲಿ ಅಂದಂತೂ ಆಸಕ್ತರೂ ಪತ್ರಕರ್ತರೂ ಜಮಾಯಿಸಿದ್ದರು. ಪೊಲೀಸರು ನನ್ನನ್ನು ಕರೆದುಕೊಂಡು ಬರುವಾಗ ಫೊಟೋ ತೆಗೆಯಲು ತಳ್ಳಿ ಮೈಮೇಲೇ ಬೀಳೋರು. ತೊಂದರೆ ಕೊಡಬೇಡಿ ಅನ್ನುತ್ತಾ ಅವರನ್ನು ಕೈಯಿಂದ ತಳ್ಳಿಕೊಳ್ಳುತ್ತಾ ಇದ್ದೆ.

ಪರ್ತಕರ್ತರು ನ್ಯಾಯಾಧೀಶರಿಗೆ ಒಂದು ಪತ್ರ ಕೊಟ್ಟರು. ‘ಬೀವೀ ಕಾರಂತರಲ್ಲಿ ದುಷ್ಟತನ ಬೆಳೆದಿದೆ. ನಮ್ಮ ಕರ್ತವ್ಯ ಮಾಡುವಾಗ ಚ್ಯುತಿಯುಂಟುಮಾಡಿದರು. ಕ್ಯಾಮರಾ ಕಿತ್ತುಕೊಂಡರು, ದೂಡಿ ಹಾಕಿದರು. ಅವರಿಗೆ ಕೋಳ ತೊಡಿಸಬೇಕು’ ಅಂತ. ಹತ್ತು ಹನ್ನೆರಡು ಮಂದಿ ಪತ್ರಕರ್ತರು ಸಹಿಹಾಕಿದ್ದರು. ನ್ಯಾಯಾಧೀಶರು ಅದನ್ನು ಓದಿಕೊಂಡು ಕಾರಂತರ ಜೊತೆಗಿದ್ದ ಪೊಲೀಸರನ್ನು ವಿಚಾರಿಸಬೇಕು ಅಂತಂದು ಊಟಕ್ಕೆ ಎದ್ದು ಹೋದರು. ನನಗೆ ಗಾಬರಿಯಾಯಿತು. ಇದುವರೆಗೆ ಬೇಡಿ ಹಾಕಿರಲಿಲ್ಲ. ಈಗ ಅದನ್ನೂ ತೊಡಿಸುತ್ತಾರೆಯೇ? ಪೊಲೀಸಿನವರ ಹತ್ತಿರ ಕೇಳಿದರೆ ಅವರು ಏನು ಹೇಳಿಯಾರು? ನನ್ನ ಪರವಂತೂ ಅಲ್ಲ…’ ಎಂದು ಯೋಚಿಸುತ್ತಿದ್ದೆ.

ಊಟದ ನಂತರ ಜಜ್‌ ಒಬ್ಬೊಬ್ಬ ಪೊಲೀಸರನ್ನೂ ಕರೆದು ಕೇಳಿದರು. ‘ಆರೋಪಿ ಬಹಳ ಶಾಂತರಾಗಿದ್ದರು. ಪೊಟೋ ತೆಗೀಬೇಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದರು. ಆರೋಪಿಯ ಯಾವ ತಪ್ಪೂ ಇಲ್ಲ’ ಎಂದು ಒಬ್ಬ ಹೇಳಿದ. ಇನ್ನೊಬ್ಬ ‘ನಾನು ಪ್ರೆಸ್ಸಿನವರನ್ನು ಕೇಳಿಕೊಂಡೆ. ನಮ್ಮ ಕಸ್ಟಡಿಯಲ್ಲಿ ಇರೋದರಿಂದ ಅವರನ್ನು ಕಾಪಾಡಿಕೊಳ್ಳೋದು ನಮ್ಮ ಕರ್ತವ್ಯ. ಆದ್ದರಿಂದ ಕಷ್ಟ ಕೊಡಬೇಡಿ ಅಂದೆ. ಅವರು ಕೇಳಲಿಲ್ಲ. ಆಪಾದಿತ ಶಾಂತಚಿತ್ತನಾಗಿದ್ದ’ ಅಂದ.

ಪತ್ರಕರ್ತರು ಸಪ್ಪಗಾದರು.

***

ಮೂವತ್ತೆಂಟನೇ ಇಸವಿಯಲ್ಲಿ ಕುಕ್ಕಾಜೆಯಲ್ಲಾದ ಕನ್ನಡ ನಾಟಕ ಐವತ್ತೆಂಟನೇ ಇಸವಿಯಲ್ಲಿ ಕಾಶಿಯಲ್ಲಿ ಹೊಸದೊಂದು ನಾಟಕದ ಹುಟ್ಟಿಗೆ ಕಾರಣವಾದ ರೋಮಾಂಚನಗೊಳಿಸುವ ಘಟನೆಯಿಂದ ಹಿಡಿದು, ಕಾರಂತರು ಕುಡಿತ ಬಿಡುವುದಕ್ಕೆ ಪಟ್ಟ ಪಾಡಿನ ವಿಹ್ವಲಗೊಳಿಸುವ ಸಂಗತಿಯ ತನಕ ಪ್ರತಿಯಾಂದು ನೆನಪಿನ ಚಿತ್ರವೂ ಇಲ್ಲಿ ದಾಖಲಾಗಿದೆ. ಎಲ್ಲಾ ಆತ್ಮಚರಿತ್ರೆಗಳಂತೆ ಇದು ಕೂಡ ಒಂದು ಕಾಲದ ಕತೆ. ರಂಗಾಯಣದ ಹುಡುಗರಿಗೆ ಸ್ಪೀಚ್‌ ಬಗ್ಗೆ ಹೇಳಿ ಅಂದಾಗ ಭಾಷಣ ಅಂದುಕೊಂಡು ರಾಜ್‌ಕುಮಾರ್‌ ‘ನಾನು ಸ್ಪೀಚ್‌ ಮಾಡೋಲ್ಲ’ ಅಂದ ಘಟನೆಯಿಂದ ಹಿಡಿದು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಕಂಪೆನಿಯಲ್ಲಿ ಕಾರಂತರು ಕೃಷ್ಣನಾಗಿ ಮುತ್ತುರಾಜ್‌ ಬಲರಾಮನಾಗಿ ನಟಿಸಿದ ನಾಟಕದ ದಿನಗಳ ತನಕ ಎಲ್ಲವನ್ನೂ ಕಾರಂತರು ಒಡಲಲ್ಲಿ ಬಚ್ಚಿಟ್ಟುಕೊಂಡು ಕಾಪಾಡಿದ್ದಾರೆ.

***

ಕನ್ನಡದಲ್ಲಿ ಆತ್ಮಚರಿತ್ರೆಗಳು ಅಷ್ಟಾಗಿ ಬಂದಿಲ್ಲ. ಆತ್ಮಚರಿತ್ರೆ ಬರೆಯುವಂಥ ಘನ ವ್ಯಕ್ತಿತ್ವಗಳೂ ನಮ್ಮ ಸುತ್ತಮುತ್ತಲೂ ಇದ್ದಂತಿಲ್ಲ. ನಾವೆಲ್ಲ ಸಾರಾಸಗಟಾಗಿ ಮೆಚ್ಚುವುದು ಫಿಕ್ಷನ್‌ಗಳನ್ನು. ಹೀಗಾಗಿ ಫಿಕ್ಷನ್‌ಗಳಷ್ಟೇ ಸೊಗಸಾಗಿರುವ ಆತ್ಮಚರಿತ್ರೆಗಳಷ್ಟೇ ಇಲ್ಲಿ ಓದಿಸಿಕೊಳ್ಳುತ್ತವೆ.

ಶಿವರಾಮ ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳು, ಕುವೆಂಪು ಅವರ ನೆನಪಿನ ದೋಣಿಯಲ್ಲಿ, ಮಾಸ್ತಿಯವರ ಭಾವ, ಭೈರಪ್ಪನವರ ಭಿತ್ತಿ, ಲಂಕೇಶರ ಹುಳಿಮಾವಿನ ಮರ- ಹೀಗೆ ಥಟ್ಟನೆ ನೆನಪಿಗೆ ಬರುವಂಥವು ಕೆಲವೇ ಕೆಲವು. ಶ್ರೀರಂಗರು ಸಾಹಿತಿಯ ಆತ್ಮಜಿಜ್ಞಾಸೆ ಎಂಬ ಹೆಸರಿನ ಆತ್ಮಚರಿತ್ರೆ ಬರೆದಿದ್ದಾರೆ ಎಂದು ನೆನಪು.

ಆತ್ಮಚರಿತ್ರೆ ತುಂಬ ಚೆನ್ನಾಗಿದೆ. ಲೇಖಕರ ಸೃಜನಶೀಲ ಪ್ರತಿಭೆಗೆ ಅದೇ ಸಾಕ್ಷಿ ಎನ್ನುವಂತೆ ಬಹುತೇಕ ಆತ್ಮಚರಿತ್ರೆಗಳು ಇರುತ್ತವೆ. ತಮ್ಮ ಬದುಕನ್ನು ಸಮರ್ಥಿಸಿಕೊಳ್ಳುವುದಕ್ಕೋ, ತಾವು ಬದುಕಿದ್ದೆವು ಅನ್ನುವುದನ್ನು ಸಾಬೀತು ಮಾಡುವುದಕ್ಕೋ ಅನೇಕರು ಆತ್ಮಚರಿತ್ರೆ ಬರೆಯುತ್ತಾರೆ. ಅಂಥವರ ವಿಚಾರದಲ್ಲಿ ಆತ್ಮವಷ್ಟೇ ಅವಿನಾಶಿ ಅನ್ನುವುದು ನಿಜವಾಗಿದೆ.

ಸಾಮಾನ್ಯವಾಗಿ ಆತ್ಮಚರಿತ್ರೆ ಬರೆಯುವ ಹೊತ್ತಿಗೆ ನೆನಪು ಮತ್ತು ಆಶೆಗಳು ಕಲಸಿಕೊಂಡು ಒಂದು ವಿಚಿತ್ರ ಸತ್ಯ ಸೃಷ್ಟಿಯಾಗಿರುತ್ತದೆ. ಬರೆದವನು ಓದಿದರೂ ರೋಮಾಂಚಗೊಳ್ಳುವಷ್ಟು ಆಪ್ಯಾಯಮಾನವೂ ರೋಚಕವೂ ಆಗಿ ಹೊರಹೊಮ್ಮುವುದೂ ಉಂಟು.

ಕಾರಂತರ ಆತ್ಮಕತೆಯಲ್ಲಿ ಕಾಣಿಸುವ ಪ್ರಾಮಾಣಿಕತೆಯೇ ಅದರ ಶಕ್ತಿ. ಅವರೇ ಟಿಪ್ಪಣಿಗಳಲ್ಲಿ ಬರೆದುಕೊಂಡಂತೆ;

‘ನಾನು ಮೊದಲಿನಿಂದಲೂ ಸುಳ್ಳು ಹೇಳುತ್ತಾ ಬಂದಿದ್ದೇನೆ. ಆ ಸುಳ್ಳಿನಿಂದ ಇನ್ನೊಬ್ಬರಿಗೆ ತೊಂದರೆಯಾಗುವುದಿಲ್ಲವೆಂಬ ನನ್ನದೇ ಆದ ಭರವಸೆಯೂ ಇರುತ್ತಿತ್ತು. ಅದಕ್ಕೇ ಈ ಇಳಿ ವಯಸ್ಸಿನಲ್ಲಿ ನನಗೆ ಸುಳ್ಳು ಸತ್ಯಗಳ ಭೇದವೇ ಮರೆತುಹೋಗಿದೆ. ನನ್ನ ಈ ದೀರ್ಘ ಜೀವನದ ಬಗ್ಗೆ ಉಳಿದವರು ಏನು ತಿಳಿದುಕೊಂಡಿದ್ದಾರೋ ಅದೇ ನನ್ನ ಕತೆ. ಆದರೆ ಈ ಉಳಿದವರಲ್ಲಿ ನಾನೂ ಒಬ್ಬನಾಗಿದ್ದೇನೆ.’

ಓದಿದ ನಂತರ ಆ ಉಳಿದವರಲ್ಲಿ ನಾವೂ ಒಬ್ಬರಾಗುತ್ತೇವೆ. ಅವರ ಕತೆ ನಮ್ಮದೂ ಆಗಿರುತ್ತದೆ.

ಆಗಲಿ.

ಮೂಗಿನ ಮೇಲೆ ಬೆರಳಿಟ್ಟುಕೊಂಡು..

ಅನಾಮಿಕತೆ ಎಂಬುದನ್ನೂ ಹೀಗೆಲ್ಲಾ ಹೇಳಬಹುದೇ ಎಂದು ಬೆರಗಿನಿಂದ

ಮೂಗಿನ ಮೇಲೆ ಬೆರಳಿಟ್ಟುಕೊಂಡು ‘ಎನಿಗ್ಮಾ’ದ ಬರಹ ಕೊಡುತ್ತಿದ್ದೇವೆ.

 

“ಸದ್ಯಕ್ಕೆ ಎನಿಗ್ಮಾ ಅನಾನಿಮಸ್” ಎಂದಿದೆ ಅವಧಿ. ಬಹುಶಃ ಯಾವತ್ತೂ ಅನಾಮಿಕವಾಗೇ ಇರಲು ಎನಿಗ್ಮಾಕ್ಕೆ ಇಷ್ಟ. ಈ ಇಷ್ಟವನ್ನು ಕಾಯುವ ಭಾರ ಜಗತ್ತಿಗಿರಲಿ.

ಯೆಂಡ್ಕುಡ್ಕ ರತ್ನನ ಅದ್ಭುತ ಸಾಲುಗಳು ನೆನಪಾಗುತ್ತವೆ:

ಬೆಳದಿಂಗಳ ರಾತ್ರೀಲಿ ಈ ಚೋರಿ ಬತ್ತಂದ್ರೆ
ಈಚ್ಲೆಂಡ ಕುಡ್ದಂಗೆ ನೆಪ್ಪಾಯ್ತದೆ
ಆಕಾಸದ ಚಂದ್ರನ್ನ ಪಡಖಾನೆ ದೀಪಕ್ಕೆ
ವೋಲಿಸ್ದೆ ವೋಯ್ತಂದ್ರೆ ತೆಪ್ಪಾಯ್ತದೆ.

ಅನಾಮಿಕನ ಸುಖ ಮತ್ತು ಸ್ವಾತಂತ್ರ್ಯ ಇದು. ಪರಿಚಿತರ ಲೋಕದಲ್ಲಿ ಸಂಕೋಚದ ಮುದ್ದೆಯಾಗುವುದಕ್ಕಿಂತ ಹೌದೊ ಅಲ್ಲವೊ ಅನ್ನುವಂಥ ಸಣ್ಣ ಹ್ಯಾಂಗೋವರ್ ಸ್ಥಿತಿಯಲ್ಲಿ ದಕ್ಕುವ ನಿರ್ಭಿಡೆ ಬೇಕು. ಕೈಗೆಟುಕದ ಚಂದ್ರನನ್ನು ಜಗುಲಿಯಲ್ಲೇ ತಂದಿಟ್ಟು ನೋಡುವ ಛಾತಿಗಿಂತ ದೊಡ್ಡ ಅಭಿವ್ಯಕ್ತಿ ಸ್ವಾತಂತ್ರ್ಯ ಯಾವುದಿದೆ ಹೇಳಿ? ಹೆಜ್ಜೆ ಹೆಜ್ಜೆಗೂ ಹಂಗಿನರಮನೆಯ ಹುನ್ನಾರಗಳನ್ನೇ ಕಾಣುತ್ತೇವೆ. ಇಂಥಲ್ಲಿ ಮುಲಾಜುಗಳ ಮುಳ್ಳುಬೇಲಿಗಿಂತ ನಿರ್ದಾಕ್ಷಿಣ್ಯವೇ ಕಣ್ಣಿಗೆ ರಾಚುವಂತೆ ಉದ್ದಕ್ಕೂ ಹಾಸಿಕೊಂಡಿರುವ ಬಟಾ ಬಯಲು ಇರಲಿ ಎನ್ನಿಸುತ್ತದೆ.

ಅನಾಮಿಕತೆಗೆ ಬಹುಶಃ ಇಂಥದ್ದೊಂದು ಶಕ್ತಿಯಿದೆ ಎಂದುಕೊಳ್ಳುವಾಗಲೂ ಯಾಕೊ ಅನುಮಾನಗಳೂ ಕಾಡುತ್ತವೆ. ಇದು ಮರೆಯಲ್ಲಿ ನಿಂತು ಬಾಣ ಬಿಡುವ ರೀತಿಯೇ ಎಂಬ ಪ್ರಶ್ನೆ ಕಾಡುತ್ತದೆ. ನಮ್ಮಲ್ಲಿ ಎಷ್ಟೋ ಮಂದಿಗೆ ಕಟುಸತ್ಯ ಹೇಳಲು ಸುಳ್ಳು ಹೆಸರು ಬೇಕು. ಆದರೆ ಅದನ್ನೇ ಕಥೆ ಮಾಡಿ disclaimer ಹಣೆಪಟ್ಟಿ ಹಚ್ಚಿ ಕೊಡುವಾಗ ನಿಜವಾದ ಹೆಸರೇ ಆಗಬೇಕು. ಅಪ್ರಿಯ ಸತ್ಯವನ್ನು ಹೇಳಬಾರದು ಎಂಬುದು ಡಿಪ್ಲೊಮ್ಯಾಟಿಕ್ ಥಿಯರಿ. ಹಾಗಾಗಿ ಅಪ್ರಿಯ ಸತ್ಯವೆಂಬುದು ಬಹಳಷ್ಟು ಸಲ ಅನಾಥ ಶಿಶು.

ಅನಾಮಿಕತೆಯ ಬಗ್ಗೆ ಹೀಗೆ ನಂಬಿಕೆ ಮತ್ತು ಅಪನಂಬಿಕೆ ಎರಡನ್ನೂ ಇಟ್ಟುಕೊಂಡೇ ಹೊರಟ ಪ್ರಯಾಣ ಎನಿಗ್ಮಾದ್ದು. ಆದರೆ ನಮ್ಮ ಅಂಗಳದ ಸಹಜ ಸಾಹಚರ್ಯದಲ್ಲಿ ಸಿಗುವ ಭಾಗ್ಯದ ಬಗೆಗೇ ಎನಿಗ್ಮಾ ಲಕ್ಷ್ಯ. ಅನಂತಮೂರ್ತಿಯವರ ಲೇಖನವೊಂದರಲ್ಲಿ ಎಳುತ್ತಚ್ಚನ್ (ತುಲಸೀದಾಸ) ಕುರಿತು ಬರುವ ಒಂದು ಪ್ರಸ್ತಾಪ ಹೀಗಿದೆ:

“ಎಳುತ್ತಚ್ಚನ್ ಕುರಿತು ಕೇರಳದಲ್ಲಿ ಬೇಕಾದಷ್ಟು ಕಥೆಗಳಿವೆ. ಮೈನವಿರೇಳಿಸುವಂಥ ಕಥೆಗಳು. ಅವುಗಳಲ್ಲೊಂದು ಸಂಸ್ಕೃತದಲ್ಲಿ ಬರೆಯುವ ಶ್ರೇಷ್ಠ ನಂಬೂದರಿ ಕವಿ ಭಟ್ಟತ್ತಿರಿಪ್ಪಾಡ್ ನೊಂದಿಗಿನ ಆತನ ಭೇಟಿ. ಸಂಸ್ಕೃತದ ಆ ದೊಡ್ಡ ಕವಿಗೆ ತನ್ನ ಭಾಗವತವನ್ನು ಹೇಗೆ ಆರಂಭಿಸಬೇಕೆನ್ನುವುದು ಗೊತ್ತಿರಲಿಲ್ಲ. ಮಲಯಾಳಿಗಳು ಈ ಕಥೆಯನ್ನು ನಿರೂಪಿಸುವುದು ಬಹಳ ಚೆನ್ನಾಗಿದೆ. ಕೇರಳದ ಪ್ರತಿಯೋರ್ವನೂ ಊಟವನ್ನು ಮೀನು ತಿನ್ನುವುದರೊಂದಿಗೆ ಆರಂಭಿಸುತ್ತಾನೆ. ಭಟ್ಟತ್ತಿರಿಪ್ಪಾಡ್ ತನ್ನ ಭಾಗವತವನ್ನು ಹೇಗೆ ಆರಂಭಿಸುವುದೆಂದು ತಿಳಿಯದೆ ನಿರ್ವಿಣ್ಣನಾಗಿ ಕುಳಿತಾಗ ಎದುರಾದ ಶೂದ್ರ ಕವಿ ಎಳುತ್ತಚ್ಚನ್ ನನ್ನು ಭಾಗವತವನ್ನು ಹೇಗೆ ಆರಂಭಿಸಲಿ ಎಂದು ಕೇಳುತ್ತಾನೆ. ಆಗ ಎಳುತ್ತಚ್ಚನ್, ಶುರುವಾಗುವುದೆಲ್ಲ ಮೀನಿನಿಂದಲ್ಲವೇ ಎಂದು ನಗುತ್ತಾನೆ. ಬ್ರಾಹ್ಮಣ ಭಟ್ಟತ್ತಿರಿಗೆ ಥಟ್ಟನೆ ಹೊಳೆಯುತ್ತದೆ: ಮತ್ಸ್ಯಾವತಾರದೊಂದಿಗೆ ಆರಂಭಿಸು ಎಂಬ ಸೂಚನೆ.”

ಇಂಥ ಮಿಂಚಿನ ಸೆಳಕುಗಳ ಮುಂದೆ ತನ್ಮಯಿಯಾಗಬೇಕೆಂಬುದು ಎನಿಗ್ಮಾ ಆಸೆ. ಬಾನಿಗೊಂದು ಬೊಗಸೆ. ಇದಕ್ಕೇಕೆ ಹೆಸರಿನ ಹಂಗು?

ಕಡೆಗೂ, ಹೆಸರಿರಲಿ ಇಲ್ಲದಿರಲಿ ಎಲ್ಲರ ಪಾಡೂ ಅಡಿಗರು ಹೇಳುವ ಹಾಗೆ-
“ಆಸೆಯೆಂಬ ತಳ ಒಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೊ ಯಾರೊ ಏನೊ ಗುರಿಯಿರದೆ ಬಿಟ್ಟ ಬಾಣ.”

ಬ್ಯೂಟಿ ಪಾರ್ಲರ್ ಕೆಲಸವನ್ನು ಯಾಕೆ ಎಳೆತಂದಿರಿ ?

‘ನೆಲ್ಸನ್ ಮಂಡೇಲರಿಗೆ ಕ್ಷೌರ ಮಾಡುವಾಸೆ’ ಎಂಬ ಅವಧಿ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ‘ದೇಸಿಮಾತು’ ಎಂಬ ಬ್ಲಾಗ್ ಬಗ್ಗೆ ಗಮನ ಸೆಳೆದಿವೆ. ದೇಸಿಮಾತು ಸಮಕಾಲೀನ ಆಗುಹೋಗುಗಳತ್ತ ಬೆಳಕು ಚೆಲ್ಲುತ್ತಿದೆ.

ಪತ್ರಕರ್ತ ದಿನೇಶ್ ಕುಮಾರ್ ಅವರು ತಮ್ಮನ್ನು ಬಣ್ಣಿಸಿಕೊಳ್ಳುವುದು ಹೀಗೆ- ಹುಟ್ಟಿದ್ದು ಸಕಲೇಶಪುರ ಎಂಬ ಪುಟ್ಟ ಊರು. ಮಲೆನಾಡಿನ, ಮಳೆಹಾಡಿನ ನಡುವೆ ಹೇಮದಂಡೆಯಲ್ಲಿ ಬೆಳೆದವನು. ಸದ್ಯಕ್ಕೆ ‘ಇಂದು ಸಂಜೆ ಎಂಬ ಪತ್ರಿಕೆಯ ಸಂಪಾದಕ. ಬರೆಯುವುದು ಹವ್ಯಾಸ ಎನ್ನುವುದಕ್ಕಿಂತಲೂ ಬದುಕುವ ಕ್ರಿಯೆ. ಸದ್ಯಕ್ಕೆ ಇಷ್ಟು ಸಾಕು…

ಪ್ರಜಾವಾಣಿ ಹೀಗೇಕಾಯ್ತು ಎನ್ನುವುದರಿಂದ ಹಿಡಿದು ಸಕಲೇಶಪುರ ಯಾಕೆ ಅಭಿವೃದ್ಧಿಯಾಗಲಿಲ್ಲ ಎನ್ನುವವರೆಗೆ ಇವರ ಬರಹಗಳು ಹರಡಿಕೊಂಡಿವೆ. ಮಂಡೇಲರಿಗೆ ಕ್ಷೌರ ಲೇಖನಕ್ಕೆ ಮಾತು ಕೂಡಿಸಲಿರುವ ಒಂದು ಲೇಖನ ಇಲ್ಲಿದೆ- 

ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಸಂತೋಷ್ ಹೆಗಡೆಯವರೇ,

ತಾವು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಭ್ರಷ್ಟ ಅಧಿಕಾರಿಗಳ ಗುಂಡಿಗೆ ನಡುಗುತ್ತಿದೆ. ಹಿಂದಿನ ಲೋಕಾಯುಕ್ತರು ಲೋಕಾಯುಕ್ತ ಸಂಸ್ಥೆ ಎಂಬುದೊಂದು ಇದೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಭ್ರಷ್ಟಾಚಾರದ ವಿರುದ್ಧ ತಮ್ಮದೇ ಆದ ವಿಧಾನದಲ್ಲಿ ಜನಜಾಗೃತಿ ಮೂಡಿಸಿದ್ದರು. ತಾವು ಇನ್ನೂ ಒಂದು ಹೆಜ್ಜೆ ಮುಂದು ಹೋಗಿದ್ದೀರಿ. ಸಣ್ಣ ಪುಟ್ಟ ಅಧಿಕಾರಿಗಳ ಜತೆಗೆ ದೊಡ್ಡ ತಿಮಿಂಗಲಗಳನ್ನೂ ನಿಮ್ಮ ಬಲೆಗೆ ಕೆಡವಿಕೊಂಡಿರಿ. ಪರಿಣಾಮವಾಗಿ ಐಎಎಸ್-ಐಪಿಎಸ್ ಅಧಿಕಾರಿಗಳೂ ಲೋಕಾಯುಕ್ತ ಸಿಂಡ್ರೋಮ್‌ಗೆ ಒಳಗಾಗಿದ್ದಾರೆ. ‘ನನ್ನ ಸರದಿ ಯಾವಾಗ? ಎಂಬುದೇ ಜನಸಾಮಾನ್ಯರ ದುಡ್ಡು ತಿಂದು ಕೊಬ್ಬಿರುವ ಅಧಿಕಾರಗಳ ಪ್ರಶ್ನೆಯಾಗಿದೆ. ರಾತ್ರಿ ಕನಸಿನಲ್ಲಿಯೂ ನೀವು ಅವರನ್ನು ಕಾಡುತ್ತಿದ್ದೀರಿ.

ಇದೆಲ್ಲವೂ ಸರಿ, ಈ ವಿಷಯ ಕುರಿತು ಇಲ್ಲಿ ನಾನು ಪ್ರಸ್ತಾಪಿಸುತ್ತಿಲ್ಲ. ನಾನು ಹೇಳಲು ಹೊರಟಿರುವುದು ನಿಮ್ಮ ಸಾಧನೆ, ವೃತ್ತಿಗೆ ಸಂಬಂಧಪಡದ ವಿಷಯ. ತಾಳ್ಮೆಯಿಂದ ಪರಾಂಬರಿಸಬೇಕು ಎಂಬುದು ನನ್ನ ವಿನಂತಿ.

ಸೆಪ್ಟೆಂಬರ್ ೧೨ರ ಪ್ರಜಾವಾಣಿ ಪತ್ರಿಕೆಯ ಮೂರನೇ ಪುಟದಲ್ಲಿ ತಮ್ಮ ಹೇಳಿಕೆಯೊಂದು ಪ್ರಕಟಗೊಂಡಿದೆ. ಅದರ ಮೊದಲ ಪ್ಯಾರಾ ಹೀಗಿದೆ: “ ಸರ್ಕಾರಿ ಅಧಿಕಾರಿಗಳ ವಿರುದ್ಧ ಉತ್ಪ್ರೇಕ್ಷಿತ ವರದಿಗಳನ್ನು ನಾವು ನೀಡುತ್ತಿಲ್ಲ. ನಾವು ಬ್ಯೂಟಿ ಪಾರ್ಲರ್ ಕೆಲಸವನ್ನೇನೂ ಮಾಡುವುದಿಲ್ಲ. ಭ್ರಷ್ಟರ ಪರ ವಹಿಸುವವರು ಎಚ್ಚರಿಕೆಯಿಂದ ಮಾತನಾಡಲಿ

ನಿಮ್ಮ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿಗಳ ಆಸ್ತಿ ಮೌಲ್ಯ ನಿಗದಿ ಮಾಡುವಾಗ ಬೇಕಾಬಿಟ್ಟಿ ವರದಿ ನೀಡುತ್ತಿದ್ದೀರಿ ಎಂದು ಸಚಿವರೊಬ್ಬರು ಆರೋಪಿಸಿದ ಹಿನ್ನೆಲೆಯಲ್ಲಿ ನೀವು ಈ ಸ್ಪಷ್ಟನೆ ನೀಡಿದ್ದೀರಿ.

ಸಚಿವರಿಗೆ ಸರಿಯಾದ ಉತ್ತರ ನೀಡಬೇಕಿತ್ತು, ನೀಡಿದ್ದೀರಿ. ಆ ಬಗ್ಗೆ ನನ್ನ ತಕರಾರಿಲ್ಲ. ಆದರೆ ವಿನಾಕಾರಣ ಬ್ಯೂಟಿ ಪಾರ್ಲರ್ ಕೆಲಸವನ್ನು ಯಾಕೆ ಎಳೆತಂದಿರಿ ಎಂಬುದು ನನ್ನ ಪ್ರಶ್ನೆ.

ಬ್ಯೂಟಿಪಾರ್ಲರ್ ಕೆಲಸವೆಂಬುದು ಬೇಕಾಬಿಟ್ಟಿ ಕೆಲಸವೇ? ಅದೇನು ಕೊಳಕು ಕಾರ್ಯವೇ? ಸಮಾಜ ಬಾಹಿರ ಉದ್ಯೋಗವೆ? ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕೆಲಸವೇ? ಸುಳ್ಳು ದಗಲ್ಬಾಜಿಯ ಕೆಲಸವೇ? ಬ್ಯೂಟಿ ಪಾರ್ಲರ್ ಕೆಲಸ ಮಾಡುವವರು ವಂಚನೆ ಮಾಡುತ್ತಾರೆಯೇ? ಯಾಕೆ ನೀವು ಬ್ಯೂಟಿ ಪಾರ್ಲರ್ ಉದಾಹರಣೆ ನೀಡಿದಿರಿ?

ನಾವು ಬೀದಿಗಳಲ್ಲಿ ಆಗಾಗ ಒಂದು ಮಾತನ್ನು ಕೇಳುತ್ತಿರುತ್ತೇವೆ. ‘ನಾನೇನು ಹಜಾಮತಿ ಮಾಡ್ತಿದ್ದೀನಾ? ನಾನೇನು ಹಜಾಮನಾ? ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಕೆಲವರು ಇಂಥ ಪ್ರಯೋಗಗಳನ್ನು, ಉಪಮೆಗಳನ್ನು ಬಳಸುತ್ತಾರೆ. ನೀವು ಹೀಗೆ ಹೇಳುವ ಬದಲು ನಾವೇನು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದೀನಾ? ಎಂದು ಸಭ್ಯ ಭಾಷೆಯಲ್ಲಿ ಹೇಳಿದ್ದೀರಿ ಅಷ್ಟೆ.

ಅಷ್ಟಕ್ಕೂ ನನ್ನಂಥವರಿಗೆ ಅರ್ಥವಾಗದ ವಿಷಯವೇನೆಂದರೆ ಯಾವುದೇ ವೃತ್ತಿ ಕನಿಷ್ಠ, ಮೊತ್ತೊಂದು ಶ್ರೇಷ್ಠ ಆಗುವುದು ಹೇಗೆ? ದೇಶದ ಶ್ರಮಿಕ ಜನವರ್ಗ ಹಲವು ಬಗೆಯ ಕುಲಕಸುಬುಗಳನ್ನು ರೂಢಿಸಿಕೊಂಡಿದ್ದಾರೆ. ಚಪ್ಪಲಿ ಹೊಲೆಯುವವರು, ಬೀದಿ ಗುಡಿಸುವವರು, ಕಕ್ಕಸ್ಸು ತೆಗೆಯುವವರು, ಕ್ಷೌರ ಮಾಡುವವರು, ಬಟ್ಟೆ ಒಗೆಯುವವರು, ಬಟ್ಟೆ ನೇಯುವವರು, ಕುರಿ ಕಾಯುವವರು, ದನ ಮೇಯಿಸುವವರು, ಮರಗೆಲಸದವರು, ಮಡಿಕೆ ಮಾಡುವವರು… ಹೀಗೆ ಹಲವು ಬಗೆಯ ಕುಲಕಸುಬುಗಳನ್ನು ಮಾಡುವ ಜನವರ್ಗ ನಮ್ಮಲ್ಲಿದೆ. ಹೀಗೆ ಕುಲಕಸುಬುಗಳನ್ನು ಮಾಡುವವರು ಕನಿಷ್ಠರೇ. ಕೇವಲ ಸಾಫ್ಟ್‌ವೇರ್ ಇಂಜಿನಿಯರುಗಳು, ಡಾಕ್ಟರುಗಳು, ನ್ಯಾಯಮೂರ್ತಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳು, ದೇವಸ್ಥಾನಗಳಲ್ಲಿ ಪೂಜೆ ಮಾಡುವವರು ಮಾತ್ರ ಶ್ರೇಷ್ಠರೇ?

ನಮ್ಮ ಸಾಮಾಜಿಕ ವ್ಯವಸ್ಥೆ ಹೇಗಿದೆಯೆಂದರೆ ಶ್ರೇಣೀಕೃತ ಜಾತಿವ್ಯವಸ್ಥೆಯ ತಳಭಾಗದಲ್ಲಿರುವ ಜಾತಿಗಳ ಹೆಸರನ್ನೇ ನಮ್ಮ ಸಮಾಜ ಬೈಗುಳಗಳನ್ನಾಗಿ ಬಳಸುತ್ತಿದೆ. ಹೊಲೆಯ, ಮಾದಿಗ, ಹಜಾಮ, ಕೊರಮ, ಕೊರಚ, ದೊಂಬಿದಾಸ, ಪಿಂಜಾರ, ಕುರುಬ, ಒಡ್ಡ, ಕಲ್ಲು ಒಡ್ಡ, ದರವೇಸಿ, ಸುಡುಗಾಡು ಸಿದ್ಧ, ಶಿಳ್ಳೇಕ್ಯಾತ ಹೀಗೆ ಹಲವು ಜಾತಿಗಳ ಹೆಸರುಗಳು ಬೈಗುಳಗಳಾಗಿ ಬಳಕೆಯಾಗುತ್ತಿವೆ. ಈ ಪೈಕಿ ಹೊಲೆಯ ಹಾಗು ಮಾದಿಗ ಸಮುದಾಯಕ್ಕೆ ಅಸ್ಪೃಶ್ಯತಾ ನಿಷೇಧ ಕಾಯ್ದೆಯಡಿ ರಕ್ಷಣೆ ನೀಡಲಾಗಿದೆ. ಹೀಗಿದ್ದೂ ಜಾತಿ ಹೆಸರು ಹೇಳಿ ನಿಂದಿಸುವ ‘ಪರಂಪರೆಯೇನು ಕೊನೆಯಾಗಿಲ್ಲ.

ಆದರೆ ಇನ್ನುಳಿದ ಜಾತಿಗಳಿಗೆ ಆ ರಕ್ಷಣೆಯೂ ಇಲ್ಲ. ಯಾವ ತಪ್ಪಿಗಾಗಿ ಈ ಸಮುದಾಯಗಳ ಜನರಿಗೆ ಶಿಕ್ಷೆ? ಈ ಸಮುದಾಯಗಳ ಪೈಕಿ ಕೆಲವು ದಲಿತ ವರ್ಗಕ್ಕೆ ಸೇರಿದವು. ಮತ್ತೆ ಕೆಲವು ಅಲೆಮಾರಿ ಬುಡಕಟ್ಟು ಜಾತಿಗಳು. ಇನ್ನುಳಿದವು ಹಿಂದುಳಿದ ಜಾತಿಗಳು. ಯಾಕೆ ಈ ಜನಸಮೂಹಗಳು ಮಾಡುತ್ತಿರುವ ಜೀವನಾಧಾರ ಕಸುಬುಗಳು ಕೀಳು ಎಂಬಂತೆ ಬಿಂಬಿತವಾದವು? ಈ ಸಮಾಜ ಎಷ್ಟು ಕೃತಘ್ನ ಎಂದರೆ ಇಡೀ ದೇಶದ ಜನರ ಶಾರೀರಿಕ ಹಾಗು ಮಾನಸಿಕ ಸ್ವಾಸ್ಥ್ಯ ಕಾಪಾಡುವ, ಊರು ತೊಳೆಯುವ, ಶುದ್ಧಗೊಳಿಸುವ ಕೆಲಸ ಮಾಡುವವರನ್ನೇ ನಿಂದಿಸುತ್ತದೆ, ಅವರಲ್ಲಿ ಕೀಳರಿಮೆ ತಂದೊಡ್ಡುತ್ತದೆ.

ದೇಶದ ಸಾಮಾಜಿಕ ಇತಿಹಾಸದ ದುರಂತವೇ ಇದು. ಯಾರು ಸಮಾಜದ ಕೊಳೆ-ಕೊಳಕುಗಳನ್ನು ಬಾಚಿ, ಬಳಿದು ಶುದ್ಧಗೊಳಿಸುತ್ತಾನೋ ಅವನು ಕನಿಷ್ಠ ಎನಿಸಿಕೊಂಡ. ಯಾರು ಸಮಾಜದ ಒಳಗೆ ಕೊಳೆ-ಕೊಳಕುಗಳನ್ನು ತುಂಬುತ್ತಾನೋ ಅವನು ಶ್ರೇಷ್ಠ ಎನಿಸಿಕೊಂಡ.

ಇನ್ನು ನೀವು ನಿಮ್ಮನ್ನು ಸಮರ್ಥಿಸಿಕೊಳ್ಳಲು ಬಳಸಿಕೊಂಡ ಉಪಮೆಯ ವಿಷಯಕ್ಕೆ ಬರೋಣ. ಬ್ಯೂಟಿಪಾರ್ಲರ್‌ಗಳನ್ನು ಅಥವಾ ಹೇರ್ ಕಟಿಂಗ್ ಸೆಲೂನ್‌ಗಳನ್ನು ನಡೆಸುತ್ತಿರುವವರು, ಆ ಕಾಯಕ ಮಾಡುತ್ತಿರುವವರು ಸವಿತಾ ಸಮಾಜದವರು. ಈ ಸಮಾಜಕ್ಕೆ ಹಜಾಮ, ನಯನಜ ಕ್ಷತ್ರಿಯ, ಭಂಡಾರಿ, ಹಡಪದ, ಕ್ಷೌರಿಕ ಇತ್ಯಾದಿ ಉಪನಾಮಗಳಿವೆ. ಈ ರಾಜ್ಯದಲ್ಲಿ ಅತಿ ಹೆಚ್ಚು ಬೈಗುಳವಾಗಿ ಬಳಕೆಯಾಗುವ ಶಬ್ದ ಎಂದರೆ ಅದು ಹಜಾಮ.

ಈ ಸಮುದಾಯವರು ಸಮಾಜ ಬಂಧುಗಳ ತಲೆ ಕೂದಲು, ಗಡ್ಡದ ಕೂದಲು ಬೆಳೆದಂತೆ ಅವುಗಳನ್ನು ಕತ್ತರಿಸಿ ಓರಣಗೊಳಿಸುತ್ತಾರೆ. ಗಬ್ಬುನಾರು ಕಂಕುಳ ಅಡಿಯ ಕೂದಲನ್ನು ತೆಗದು ಸ್ವಚ್ಛಗೊಳಿಸುತ್ತಾರೆ. ಇದಕ್ಕೆ ನಿಗದಿಪಡಿಸಿದ ಬೆಲೆಯನ್ನು ಪಡೆದುಕೊಳ್ಳುತ್ತಾರೆ. ಒಂದು ವೇಳೆ ಇವರು ಇಲ್ಲದೇ ಇದ್ದಿದ್ದರೆ ಎಲ್ಲರೂ ಕೆಜಿಗಟ್ಟಲೆ ತಲೆಕೂದಲು, ಜಟೆ, ಗಡ್ಡ ಬಿಟ್ಟುಕೊಂಡು ಅಸಹ್ಯವಾಗಿ ಕಾಣಬೇಕಾಗುತ್ತಿತ್ತು. ಇದು ಅಪ್ಪಟ ಶುದ್ಧಿಯ ಕಾಯಕ. ಕೊಳಕನ್ನು ತೊಳೆದುಕೊಂಡು ಶುಭ್ರಗೊಳ್ಳಲೆಂದೇ ಇವರ ಬಳಿ ನಾವು ಹೋಗುತ್ತೇವೆ.

ಈ ಶುದ್ಧಿಯ ಕಾಯಕವೇನು ವಂಚನೆಯೇ? ಸೂಳೆಗಾರಿಕೆಯೇ? ಕಳ್ಳತನವೇ? ದರೋಡೆಯೇ? ಅಥವಾ ತಲೆಹಿಡಿಯುವ ನೀಚ ಕಾಯಕವೇ? ಹೀಗಿರುವಾಗ ನಮ್ಮ ಸಮಾಜ ಈ ಕಾಯಕವನ್ನು ಕೆಟ್ಟದ್ದಕ್ಕೆ, ಕೊಳಕು ವಿಷಯಗಳಿಗೆ ಉಪಮೆಯನ್ನಾಗಿ ಬಳಸುವುದು ಯಾಕೆ? ಇದು ಅನ್ಯಾಯವಲ್ಲವೆ?

ಸಾಧಾರಣವಾಗಿ ಹೇರ್ ಕಟಿಂಗ್ ಸೆಲೂನ್ ಎಂದರೆ ಪುರುಷರ ಕೇಶ ವಿನ್ಯಾಸಕ್ಕೆ ನಿಗದಿಯಾದ ಸ್ಥಳಗಳು. ಬ್ಯೂಟಿ ಪಾರ್ಲರ್‌ಗಳು ಹೆಣ್ಣು ಮಕ್ಕಳ ಕೇಶ ಶೃಂಗಾರ ಮಾಡುತ್ತವೆ. ಈ ಬ್ಯೂಟಿ ಪಾರ್ಲರ್‌ಗಳನ್ನು ನಡೆಸುವ ಹೆಣ್ಣುಮಕ್ಕಳ ಬದುಕಿನಲ್ಲಿ ಸಾವಿರ ನೋವುಗಳಿರುತ್ತವೆ. ಅವರು ಬದುಕಿನ ಅನಿವಾರ್ಯತೆಗಳಿಂದ ನೊಂದವರು. ಕುಟುಂಬ ನಿರ್ವಹಣೆಯ ಹೊಣೆ ಹೊತ್ತುಕೊಂಡವರು. ಸಮಾಜದ ನಿಂದನೆಗಳಿಂದ ನೊಂದು, ಈ ಅಪಮಾನಗಳನ್ನು ಮೆಟ್ಟಿನಿಂತು ಕೆಲಸ ಮಾಡುವವರು. ಇವರ ಕಾಯಕ ಕನಿಷ್ಠವಾಗಲು ಸಾಧ್ಯವೆ? ಇವರು ಸಮಾಜ ಬಾಹಿರವಾದ ಕೆಲಸವನ್ನೇನಾದರೂ ಮಾಡುತ್ತಿದ್ದಾರೆಯೇ?

ಮಾನ್ಯ ಸಂತೋಷ್ ಹೆಗಡೆಯವರೆ,

ತಾವು ಬ್ಯೂಟಿ ಪಾರ್ಲರ್ ಹೋಲಿಕೆಯನ್ನು ಬಳಸುವಾಗ ಇದೆಲ್ಲವನ್ನು ಯೋಚಿಸಿರಲಾರಿರಿ. ಆಕಸ್ಮಿಕವಾಗಿ ನಿಮ್ಮ ಬಾಯಿಂದ ಈ ಮಾತು ಹೊರಬಂದಿರಬಹುದು. ಆದರೆ ನಿಮ್ಮಂಥ ಉನ್ನತ ಸ್ಥಾನದಲ್ಲಿ ಕುಳಿತ ವ್ಯಕ್ತಿಗಳು, ನಿಮ್ಮ ಹಾಗೆ ಜನಪ್ರಿಯರಾಗಿರುವ ಸಾರ್ವಜನಿಕ ವ್ಯಕ್ತಿಗಳು ಹೀಗೆ ಮಾತನಾಡಿದರೆ ಅದು ಆ ಸಮುದಾಯಕ್ಕೆ ಎಷ್ಟು ನೋವು ತರುತ್ತದೆ ಎಂಬುದನ್ನು ನೀವು ಅಂದಾಜು ಮಾಡಲಾರಿರಿ. ನೊಂದವರಿಗಷ್ಟೆ ನೋವಿನ ಆಳ-ಅಗಲ ಗೊತ್ತಾಗಲು ಸಾಧ್ಯ ಅಲ್ಲವೆ?

ಇದೆಲ್ಲವನ್ನು ತಮ್ಮ ಬಳಿ ಬಂದು ಖಾಸಗಿಯಾಗಿ ನಿವೇದಿಸಿಕೊಳ್ಳಬಹುದಿತ್ತು. ಆದರೆ ಇದು ನೀವು ಖಾಸಗಿಯಾಗಿ ಆಡಿದ ಮಾತಲ್ಲ. ನಿಮ್ಮ ಮಾತು ಪ್ರಜಾವಾಣಿಯಂಥ ಜನಪ್ರಿಯ ಪತ್ರಿಕೆಯಲ್ಲಿ ಪ್ರಕಟಗೊಂಡು ಲಕ್ಷಾಂತರ ಜನರು ಓದಿದ್ದಾರೆ. ಹಾಗಾಗಿ ಬಹಿರಂಗ ಪತ್ರವನ್ನೇ ಬರೆಯಬೇಕಾಯಿತು.

ಈ ಪತ್ರ ಓದಿದ ಮೇಲೆ ತಮಗೆ ತಾವು ಆಡಿದ ಮಾತಿನ ಬಗ್ಗೆ ವಿಷಾದವೆನ್ನಿಸಿದರೆ ಸಾಕು, ನನ್ನ ಶ್ರಮ ಸಾರ್ಥಕ.

ಲೋಕಾಯುಕ್ತ ಹುದ್ದೆಯಲ್ಲಿ ನಿಮ್ಮ ಸಾರ್ಥಕ ಸೇವೆಯ ಬಗ್ಗೆ ಒಂದೇ ಒಂದು ಕಳಂಕವೂ ಇರಲಾರದು. ಹುದ್ದೆಗೆ ಬರುವ ಮುನ್ನವೇ ನಿಮ್ಮ ಆಸ್ತಿ ವಿವರ ಘೋಷಿಸಿಕೊಂಡು ಇಡೀ ಇಲಾಖೆಗೆ ಮೇಲ್ಪಂಕ್ತಿ ಹಾಕಿಕೊಟ್ಟವರು ನೀವು. ನಿಮ್ಮ ಪ್ರಾಮಾಣಿಕತೆ, ಬದ್ಧತೆಯನ್ನು ಯಾರೂ ಶಂಕಿಸಲಾರರು.

ಈ ಗೌರವ ಆದರಗಳನ್ನು ಇಟ್ಟುಕೊಂಡೇ ನಿಮ್ಮ ಅನಪೇಕ್ಷಿತ ಪ್ರತಿಕ್ರಿಯೆಯ ಕುರಿತು ನನ್ನ ಆಕ್ಷೇಪಣೆ ದಾಖಲಿಸಿದ್ದೇನೆ. ಅದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಇಂಥ ಆಕ್ಷೇಪಣೆಯ ಯತ್ನಗಳು ನನಗೆ, ನನ್ನಂಥವರಿಗೆ ಸಂಕಷ್ಟಗಳನ್ನು ತಂದೊಡ್ಡಬಹುದು. ಆ ಕುರಿತು ನಾನು ಹೆಚ್ಚು ತಲೆಕೆಡಿಸಿಕೊಳ್ಳಲಾರೆ. ಅನ್ಯಥಾ ಭಾವಿಸಬೇಡಿ.

ಅಪಾರ ಗೌರವದೊಂದಿಗೆ,

ದಿನೇಶ್ ಕುಮಾರ್ ಎಸ್.ಸಿ.
e-mail: dinoosacham@gmail.com
blog: http://desimaatu.blogspot.com

ಕವಿತೆಯ ಸಾಲುಗಳನ್ನು ಬೊಗಳುತ್ತಿರುತ್ತದೆ..

ಅಲೆಮಾರಿ‘ ಬರಹಗಳು ಇಷ್ಟವಾಗುವುದು ಎರಡು ಕಾರಣಕ್ಕೆ. ಮೊದಲನೆಯದು ಅವರಿಗೆ ಸರಿಯಾದದ್ದನ್ನು ಗುರುತಿಸುವ ಕಣ್ಣಿದೆ ಎರಡನೆಯದಾಗಿ ಹಾಗೆ ಗುರುತಿಸಿದ್ದನ್ನು ಇದು ಕನ್ನಡದಲ್ಲೆ ಹುಟ್ಟಿದ ಕವಿತೆಯೇನೋ ಎಂಬಂತೆ ಕಟ್ಟಿಕೊಡಬಲ್ಲ ಶಕ್ತಿ ಇದೆ. ಈ ಎರಡೂ ಗುಣಗಳಿಗೆ ನಮೋ ಎನ್ನುತ್ತಾ ನಮ್ಮೆಲ್ಲರ ಪ್ರೀತಿಯ ಅಮೃತಾ ಪ್ರೀತಂ ಅವರ ಕವನಗಳನ್ನು ಮುಂದಿಡುತ್ತಿದ್ದೇವೆ-

 

ಪುಟ್ಟ ಗುಡಿಸಲು ನನ್ನದು 

ಎಲ್ಲಿ ಹಾಸಲಿ ಹೇಳು ಚಾಪೆ?
ನಿನ್ನ ನೆನಪಿನ ಕಿಡಿಯೊಂದು
ಅತಿಥಿಯಾಗಿ ನನ್ನ ಮನೆಗೆ ಬಂದಿದೆ..
******

 

ಬಾನೆಂಬ ಪವಿತ್ರ ಜಾಡಿ

ಮೋಡವೆಂಬ ಜಾಮನೆತ್ತಿ

ಬೆಳದಿಂಗಳ ಗುಟುಕು ಕುಡಿದಿದ್ದೇನೆ,
ಧರ್ಮನಿಂದೆಯ ಮಾತಾಡಿದ್ದೇನೆ..

****

ನನ್ನೊಳಗಿನ ಕಿಚ್ಚೆ, ಅಭಿನಂದನೆ,
ಸೂರ್ಯನಿಂದು ನನ್ನಲ್ಲಿಗೆ ಬಂದಿಹನು,
ಇದ್ದಿಲ ತುಂಡೊಂದನ್ನು ಕೇಳಿ
ತನ್ನ ಕಿಚ್ಚನ್ನು ಹೆಚ್ಚಿಸಿಕೊಂಡಿಹನು.

*********

ಏನಾಗಿದೆಯೋ ದೇವರೆ ಈ ರಾತ್ರಿಗಳಿಗೆ
ಕತ್ತಲಲ್ಲಿ ಓಡುತ್ತ, ಓಡುತ್ತ
ಮಲಗಿದ ಮಿಂಚು ಹುಳುಗಳ ಹಿಡಿಯುತ್ತಿವೆ..

 

ಅಕ್ಕ ಸಾಲಿ ಉಂಗುರ ಸಿದ್ಧ ಮಾಡಿದ್ದಾನೆ,
ನನ್ನ ವಿಧಿ ಅದರೊಳಗೆ
ನೋವಿನ ಮುತ್ತೊಂದ ಕೂರಿಸುತಿದೆ..

 

ಜಗತ್ತು ನೇಣುಗಂಬ ನೆಟ್ಟಿದೆ ಈಗ
ಗೆದ್ದ ಪ್ರತಿಯೊಬ್ಬನ ಕಂಗಳು
ತಮ್ಮ ಹಣೆ ಬರಹ ಓದಲಾರಂಭಿಸಿವೆ..

**********

 

ಮಸಲತ್ತು..
ರಾತ್ರಿ ತೂಕಡಿಸುತ್ತಿದೆ…
ಯಾರೋ ಮಾನವನ ಎದೆಗೆ ಕನ್ನಹಾಕಿದ್ದಾರೆ.
ಎಲ್ಲಾ ಕಳ್ಳತನಗಳಿಗಿಂತ
ಭಯಂಕರವೀ ಕಳವು.

 

ಎಲ್ಲ ದೇಶಗಳ, ಎಲ್ಲ ಶಹರಗಳ
ಪ್ರತಿ ರಸ್ತೆಯ ಮೇಲೆ ಇದೆ
ಕಳ್ಳರ ಗುರುತು.
ಯಾವ ಕಣ್ಣು ನೋಡುವುದಿಲ್ಲ,ಬೆರಗಾಗುವುದಿಲ್ಲ.
ಸರಪಳಿಗೆ ಬಿಗಿದ ನಾಯಿಯಂತೆ
ಯಾವಾಗಲೋ ಒಮ್ಮೆ
ಯಾರದೋ ಕವಿತೆಯ ಸಾಲುಗಳನ್ನು
ಬೊಗಳುತ್ತಿರುತ್ತದೆ..

%d bloggers like this: