ಕದ್ದೇ ಬಿಡಬೇಕು ಅನ್ನುವಂತೆ ಮಾಡಿದ್ದು …

ಕದಿಯಲೇ ಬೇಕು ಎನಿಸಿಬಿಡುವ ವಸ್ತುಗಳಿವೆ. ಆದರೆ ನಾವು ಮಾರುವೇಷದಲ್ಲಿ ಬ್ಲಾಗ್ ಸಂಚಾರ ನಡೆಸಿದಾಗ ಕದ್ದೇ ಬಿಡಬೇಕು ಅನ್ನುವಂತೆ ಮಾಡಿದ್ದು ಎರಡು ಕವಿತೆಗಳು. ಕದ್ದಿದ್ದೀರಾ ಎಂದು ಆ ಇಬ್ಬರೂ ಕವಿಗಳು ದೂರು ದಾಖಲು ಮಾಡಿದಲ್ಲಿ ಇನ್ನಷ್ಟು ಓದುಗರ ಮುಂದೆ ಅವರ ಕವಿತೆಗಳನ್ನು ಇಟ್ಟ ತಪ್ಪಿಗಾಗಿ ಅವರ ಠಾಣೆಯಲ್ಲಿ ಸ್ವಯಂ ಶರಣಾಗತರಾಗಲು ನಾವು ಸಿದ್ಧ.

ಇಲ್ಲಿ ನಾವು ಎನ್ನುವ ಬಳಕೆ ಸ್ವಾಮಿಗಳ ಲೋಕದಿಂದ ಎರವಲು ತಂದದ್ದಲ್ಲ. ‘ಅವಧಿ’ ನಡೆಸುತ್ತಿರುವವರು ಒಬ್ಬರೇ ಅಲ್ಲ ಎಂಬ ಕಾರಣಕ್ಕೆ. ತಲೆಹರಟೆ ನಿಲ್ಲಿಸಿ ನಿಮ್ಮ ಮುಂದೆ ಎರಡು ಕದ್ದ ಮಾಲು ಇಡುತ್ತಿದ್ದೇವೆ-

ಹರೆಯ ಉಕ್ಕಿದಾಕೆಗೆ ಹಿತವಚನ ಎಂಬಂತೆ..

-ಜೋಗಿ
 
 
ಅವನ
ನೆನಪೂ ಭಾರವಾಗಿ
ಕಂಡ ದಿನ
ಶಕುಂತಳೆ
ಉಂಗುರ ಕಳಕೊಂಡದ್ದೂ
ಸಾರ್ಥಕ

ನಿನ್ನ
ಉತ್ಕಟ ಬಯಕೆಗಳನ್ನು
ನಿಯಂತ್ರಿಸುವುದು
ತಪ್ಪು ಎಂದು ಗೊತ್ತಾದ
ದಿನ
ನೀನು ಮುದುಕಿಯಾಗುವೆ.

ಅವನ ತುಟಿ
ಕಚ್ಚುವ ಕ್ಷಣ
ಮುತ್ತುಗದ ಹೂವರಳಿದ
ತೋಟ ಕಣ್ಮುಂದೆ ಸುಳಿಯದೇ ಹೋದರೆ
ನೀನು ಪ್ರೀತಿಸಿದ್ದು ವ್ಯರ್ಥ

ಜಗತ್ತಿನ ಎಲ್ಲ ನಿಯಮಗಳನ್ನು
ಮೀರಿದ್ದು
ಅಂಗಾಂಗದ
ಪುಲಕ
ಎನ್ನುವುದನ್ನು ತಿಳಿದುಕೊಳ್ಳದೇ
ಇದ್ದವಳ
ಬಯಕೆ ಅಹಲ್ಯೆಯಂತೆ
ಕಲ್ಲಾಗುವುದು.

ರಾವಣನೂ ಕದ್ದೊಯ್ಯದ
ಲಕ್ಷ್ಮಣನೂ ಹಂಬಲಿಸದ
ಊರ್ಮಿಳೆ
ಆಗು ಅಂತ
ಯಾರಾದರೂ ಹೇಳಿದರೆ
ಸುಟ್ಟು ಹೋಗು.

+++
 
……………..
 
– ಅಲೆಮಾರಿ
 
(ಇದೊಂದು ಶೀರ್ಷಿಕೆ ಇಲ್ಲದ ಪದ್ಯ. ಈ ಬಾರಿ ಬರೆಯುವಾಗಲೇ ನಿರ್ಧರಿಸಿಬಿಟ್ಟಿದ್ದೆ ಈ ಪದ್ಯಕ್ಕೆ ಶೀರ್ಷಿಕೆ ಕೊಡಬಾರದು ಅಂತಾ.. ಪದ್ಯ ಓದಿ.. ಇಷ್ಟವಾದರೆ ನಿಮಗೆ ತಿಳಿದ ಶೀರ್ಷಿಕೆ ಕೊಟ್ಟು ಆನಂದಿಸಿ..ಇಷ್ಟವಾದರೆ..)
 
 

‘ಥೂ ಹೋಗಾಚೆ ‘
ಸುಮ್ಮನೆ ಕಾಡಬೇಡ.
ಬಂದ ಹಾಗೆ..
ಬಂದ ಮೇಲೆ ನೆಪ ಹೇಳುವ ಹಾಗೆ
ಸುಮ್ಮನೆ ಹೇಗ್ಹೇಗೋ ಆಡಬೇಡ.
ಕುಂಚದ ತುದಿಯಂತೆ
ಅಂಚಿನಿಂದಾಚೆ
ಸರಿದು,
ಥೇಟ್ ಪೋಲಿಯ ಹಾಗೆ
ಸಿಗರೇಟ್, ಬೀಡ..
ಧುತ್ತನೆ ಆವರಿಸುವಾಗ
ಅಯ್ಯೋ ಬೇಡ ಬೇಡ..
ಹುಚ್ಚುಚ್ಚು..
ಯಾರೋ ಜೊತೆಗಿದ್ದಾಗಲೇ
ಅಚ್ಚುಮೆಚ್ಚು.
ಬಂಗಾರದಂಥ ಕ್ಷಣಗಳನ್ನೆಲ್ಲಾ
ತೊಳೆದು..
ತೇಲಿಬಿಟ್ಟ ಕಾಗದದ ದೋಣಿಯನ್ನು
ತೇಲಿಸದೇ, ಮುಳುಗಿಸದೆ
ದಡಕ್ಕೂ ಸೇರಿಸದೆ,
ಎಲ್ಲ ಮುದ್ದೆ ಮುದ್ದೆ…
ಯಾಕೇಂತ ಕೇಳಿದರೆ
ನೀನು ಕಣ್ಣೀರು..
ಸುಮ್ಮನಿದ್ದುಬಿಟ್ಟರೆ
ಸೋನೆಯ ಪನ್ನೀರು…
ಬರೀ ಇದೇ ಆಯ್ತು..
ಗೋಳು ಹೊಯ್ದುಕೊಂಡಿದ್ದೇ ಆಯ್ತು.
ಸರಿ ಯಾವಾಗ ಬರುವೆ ಹೇಳು,
ಎಲ್ಲಾದರೂ ಒಂಟಿಯಾಗಿ
ಛತ್ರಿ ಮಡಿಚಿಟ್ಟು ನಿನಗಾಗಿ
ಕಾಯಬೇಕಲ್ಲ..

1 ಟಿಪ್ಪಣಿ (+add yours?)

  1. ಅನಾಮಿಕಾ...
    ಜೂನ್ 27, 2008 @ 10:01:38

    ಈ ಪದ್ಯ ಓದುತ್ತಾ ಅವನ ಸಿಗರೇಟು ರುಚಿಯ ತುಟಿ ನೆನಪಾದದ್ದು ಯಾರ ತಪ್ಪು..

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ