‘ಗಣ್ಯರ’ ಮಗಳೊಬ್ಬಳು ಕಿಡ್ನಾಪ್ ಆದ್ಲು

P for…

-ಲೀಲಾ ಸಂಪಿಗೆ

 

ಹೀಗೊಂದು ಪಿ.ಪಿ.ನಗರ…
ಇಡೀ ಏರಿಯಾಕ್ಕೆ ಬೆಂಕಿ ಬಿದ್ದಿತ್ತು! ಉರಿ ಹೊಗೆಯಿರಲಿಲ್ಲ ಅಷ್ಟೇ. ಪೊಲೀಸರ ಬೂಟುಗಳು ಒಂದೊಂದು ತಡಿಕೆಗಳನ್ನು, ಬಾಗಿಲುಗಳನ್ನು ಒದ್ದು ಎಲ್ಲಾ ಬಟಾಬಯಲು ಮಾಡ್ತಿದ್ವು. ಪೋಲಿಸರ ಯೂನಿಫಾಮರ್ಿಗೆ ಸಿಟ್ಟು ನೆತ್ತಿಗೇರಿತ್ತು. ಅಲ್ಲಿದ್ದ ನೂರಾರು ಗುಡಿಸಲುಗಳು, ಆಫ್ಮನೆಗಳು, ಮಲ್ಟಿಸ್ಟೋರ್ಡ್ ಸೆಮಿ ಬಿಲ್ಡಿಂಗ್ಗಳು, ಮಹಡಿಯ ಪೋಸ್ ಕೊಡ್ತಿದ್ದ ಅಟ್ಟಣಿಗೆಗಳು… ಎಲ್ಲವೂ ಏಕಾಏಕಿಯಾಗಿ ಮಗುಚಿ ಬಿದ್ವು. ಮುರಿದು ಹೋದ ನೆಲೆಗಳಿಂದ ಹೊರಟ ಆರ್ತನಾದದಲ್ಲಿ ವೈರುಧ್ಯತೆಯಿತ್ತು. ಗಿರಾಕಿಗಳೊಂದಿಗೆ ಸಂಧಾನಕ್ಕಿಳಿದಿದ್ದ ಮಾಲಿಕರುಗಳು ಶಾಕ್ ಆದ್ರು, ಬೆತ್ತಲಾಗಿದ್ದ ದೇಹಗಳು ದಿಕ್ಕಾಪಾಲಾದ್ವು. ಎಲ್ಲಿಂದಲೋ ವ್ಯಾಪಾರ ಕುದುರಿಸಿ ಕರೆತರುತ್ತಿದ್ದ ಪಿಂಪ್ಗಳು ಓಟಕಿತ್ತರು. ಹೇಗೋ ಹೋರಾಡಿ ಜಾಗ ಹಿಡ್ದು ಅಲ್ಲಿಂದ ಇಲ್ಲಿಂದ ಹೊಂಚಿ ಒಂದು ಗೂಡುಕಟ್ಟಿ ಬಾಡಿಗೆಗೋ, ಲೀಸ್ಗೋ ಕೊಟ್ಟಿದ್ದವರೆಲ್ಲಾ ಲಬೋ ಲಬೋ ಅಂದ್ರು. ಗಂಟೆ ಲೆಕ್ಕದಲ್ಲಿ ಬಾಡಿಗೆ ಕೊಡ್ತಿದ್ದವರು ಕೈ ಕೈ ಹಿಸುಕ್ಕೊಂಡ್ರು. ಏನಾದ್ರೂ ಸರಿ ಈ ಘಟನೆ ತಪ್ಪಿಸೋಕೆ ಮರಿ ಪುಡಿ ಪುಡಾರಿಗಳೆಲ್ಲ ಪದರುಗುಟ್ಟಿದ್ರು.
ಅದೊಂದು ದುದರ್ಿನ! ಪಿ.ಪಿ.ನಗರದಲ್ಲಿಯ ಎಲ್ಲಾ ದಂಧೆಗಳೂ ರೇಡ್ ಆಗಿದ್ವು. ಇಡೀ ಏರಿಯಾನೇ ಕಫ್ಯರ್ೂ ಹಾಕ್ದಂಗಾಯ್ತು. ಹತ್ತಿ ಉರಿದಂಗೆ, ಸುನಾಮಿ ಬಂದಂಗೆ, ಎಲ್ಲವೂ ಲೂಟ್ ಆದಂಗೆ ಆಗಿಹೋಯ್ತು. ಎಲ್ಲಾ ಮಾಮೂಲಿಗಳೊಟ್ಟಿಗೆ ನಿರಾಳವಾಗಿಯೇ ದಂಧೆ ನಡೆಸುತ್ತಿದ್ದ ಪಿ.ಪಿ.ನಗರಕ್ಕೊಂದು ಇಂಥಾ ಬರಸಿಡಿಲು ಬಡಿಯೋಕೆ ಒಂದು ಬಲವಾದ ಕಾರಣವಿತ್ತು.
ನೆರೆ ರಾಜ್ಯದ ‘ಗಣ್ಯರ’ ಮಗಳೊಬ್ಬಳು ಕಿಡ್ನಾಪ್ ಆದ್ಲು. ಅವಳ ಹಿನ್ನಲೆ ಗೊತ್ತಿರದ ಪೆಕ್ರನೊಬ್ಬ ಎತ್ತಾಕ್ಕೊಂಡ್ಬಂದು ಈ ಪಿ.ಪಿ.ನಗರಕ್ಕೆ ಆ ಹುಡುಗಿಯನ್ನು ಮಾರಿಬಿಟ್ಟಿದ್ದ.
ಹುಡ್ಗಿಯನ್ನು ಪತ್ತೆ ಹಚ್ಚೋ ಕೆಲ್ಸ ಬಹಳ ಬಿರುಸಾಯ್ತು. ಮುಗ್ಧ, ಅಮಾಯಕ ಹುಡ್ಗೀರ್ನ ಸಾಗಿಸೋ ತಲೆಹಿಡುಕ ದಂಧೆಯ ಜಾಲವನ್ನು ಇಡೀ ದೇಶದಲ್ಲೆಲ್ಲಾ ಜಾಲಾಡಿದ್ರು. ಕಡೆಗೆ ಆ ಹುಡ್ಗಿ ಕನರ್ಾಟಕದ ಮಂಡ್ಯದ ಪಿ.ಪಿ.ನಗರದಲ್ಲಿರೋದು ಗೊತ್ತಾಯ್ತು. ಕೂಡಲೇ ಆ ಹುಡುಗಿಯನ್ನು ಅಲ್ಲಿಂದ ಪಾರುಮಾಡಿ ಆ ಗಣ್ಯರಿಗೆ ಒಪ್ಪಿಸಿದ್ರು. ದೇಶದಲ್ಲೆಲ್ಲಾ ಈ ಸುದ್ದಿ ತಲೆಬರಹವಾಯ್ತು. ಪಿ.ಪಿ.ನಗರ ಏಕಾಏಕಿ ಕುಖ್ಯಾತವಾಗಿಬಿಡ್ತು.
ಸ್ಥಳೀಯ ಪೊಲೀಸ್ ಇಲಾಖೆ, ಆಡಳಿತಗಳ ಮೇಲೆ ಎಲ್ಲರ ಕಣ್ಣು ಬಿತ್ತು. ಅಧಿಕಾರಿಗಳ ಮೇಲೆ ಕ್ರಮಗಳಾದ್ವು. ಇದರಿಂದ ಕುಪಿತಗೊಂಡ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ತಗೊಂಡ ತೀಮರ್ಾನದಿಂದಾಗಿ ಪಿ.ಪಿ.ನಗರಕ್ಕೆ ಬುಲ್ಡೋಜರ್ ಬಂತು!
ಅಷ್ಟೊತ್ತಿಗೆ ತಡಿಕೆ, ಬಾಗಿಲುಗಳು ತಳ್ಳಾಡಿದ್ವು, ‘ಏಯ್, ಪ್ರಾಣದ ಮೇಲೆ ಆಸೆ ಇದ್ರೆ ಆಚೆ ಬನ್ನಿ, ಹತ್ತು ನಿಮಿಷ ಟೈಮಷ್ಟೆ’ -ಮೆಗಾಫೋನ್ನಲ್ಲಿ ಅನೌನ್ಸ್ ಮಾಡಿದ್ರು. ಏನ್ ನಡೀತಿದೆ ಅನ್ನೊವಷ್ಟರಲ್ಲಿ ಬುಲ್ಡೋಜರ್ ಸ್ಟಾಟರ್್ ಆಗೇಬಿಡ್ತು. ಬೆಳಗಿನ ಜಾವ ಕೋಳಿ ಕೂಗೋ ಹೊತ್ಗೆ ಇಡೀ ಪಿ.ಪಿ.ನಗರ ಮುರಿದು ಮಲಗಿತ್ತು. ಅದೊಂದು ಪಾತಕಗಳ ಕೂಪ. ಕಳ್ಳಭಟ್ಟಿಯ ಗಡಂಗುಗಳು, ಜೂಜಾಟದ ಅಡ್ಡೆಗಳು ಅಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯ ದಂಧೆಗೆ ಇನ್ನೊಂದಷ್ಟು ಬಲಕೊಟ್ಟಿದ್ವು.
ಭಾರತದ ವೇಶ್ಯಾವಾಟಿಕೆಯ ನಿಟ್ಟಿನ ಇತಿಹಾಸದಲ್ಲಿ ಪಿ.ಪಿ.ನಗರದ ಕಥೆಯೂ ತೆರೆದುಕೊಳ್ಳುತ್ತದೆ. ಇಂಡಿಯಾದ ಅತ್ಯಂತ ಸುಂದರಿಯನ್ನು ದಂಧೆಗಿಳಿಸಿದ ಸ್ಥಳವಿದು. ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ ರವಾನಿಸಲ್ಪಟ್ಟು ದಂಧೆ ನಡೆಸುತ್ತಿದ್ದ ಒಂದು ದೊಡ್ಡಜಾಲದ ಅಖಾಡವೇ ಅಲ್ಲಿತ್ತು. ನೂರಾರು ಗುಡಿಸಲುಗಳಲ್ಲಿ ಸಾವಿರಾರು ಹೆಣ್ಣುಗಳ ದೇಹಗಳು ಇಲ್ಲಿ ಸೇವೆಗೆ ಸರಕಾಗಿದ್ದವು. ಮೊದ ಮೊದಲು ಗುಡಿಸಲುಗಳಲ್ಲಿ ಆರಂಭವಾದ ದಂಧೆ ತಂದಿತ್ತ ಲಾಭ ಹೆಚ್ಚಾದಂತೆಲ್ಲಾ ಗೋಡೆಗಳು, ಮಾಡುಗಳು, ತಾರಸಿಗಳು ಬಂದವು. ತೀರಾ ಇತ್ತೀಚಿನವರೆಗೂ ಅಲ್ಲಿ ಈ ದಂಧೆ ಸುಸೂತ್ರವಾಗಿಯೇ ನಡೀತಿತ್ತು. ಅದೊಂದು ಘಟನೆ ಆ ದಿನ ನಡೆಯದಿದ್ದಲ್ಲಿ ಇಂದಿಗೂ ಕೂಡ ಅದು ಹೆಣ್ಣುಗಳ ಮಾರುಕಟ್ಟೆ ಕೇಂದ್ರವಾಗಿಯೇ ಇರುತ್ತಿತ್ತೇನೋ!