ಹೂಬಿಟ್ಟ ಹುಣಿಸೇಮರದ ಇಹಪರ ಧ್ಯಾನ

ಅವಧಿಗಾಗಿ ಜೋಗಿ

ಹುಣಿಸೇ ಮರವನ್ನು ಮೆಚ್ಚದವರು ಯಾರಿದ್ದಾರೆ? ತುಂಬು ಹೆರಳ ಸುಂದರಿಯ ಹಾಗೆ, ಕಂಗೊಳಿಸುವ ಹುಣಿಸೇಮರವೆಂದರೆ ನನಗಂತೂ ಇಷ್ಟ. ಅದೇ ಕಾರಣಕ್ಕೆ ಹುಣಸೂರು ಕೂಡ. ಮೈಸೂರಿನಿಂದ ಮಡಿಕೇರಿಗೆ ಹೋಗುವಾಗೆಲ್ಲ, ದಾರಿಯುದ್ದಕ್ಕೂ ಅವಧೂತರ ಹಾಗೆ ಸ್ವಸ್ಥ ನಿಂತಿರುವ ಹುಣಿಸೇಮರಗಳು ಖುಷಿ ಕೊಡುತ್ತವೆ. ಆ ಮರದ ಹಸುರೇ ಬೇರೆ, ಕತ್ತಲಾದರೆ ಅದರ ನಿಗೂಢವೇ ಬೇರೆ. ಹುಣಿಸೇಮರದ ಕೊಂಬೆಗಳು ಅದೆಷ್ಟು ಗಟ್ಟಿ ಅಂದರೆ ಕೊಂಬೆಯ ತುದಿಗೆ ಹೋದರೂ ಅದು ಬಾಗುತ್ತದೆಯೇ ಹೊರತು ಮುರಿಯುವುದಿಲ್ಲ. ಹಳ್ಳಿಯ ಶಾಲೆಯ ಮೇಷ್ಟ್ರುಗಳಿಗೆ ತುಂಟ ಮಕ್ಕಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಹುಣಿಸೆಯ ಬರಲೇ ಪಾಶುಪತಾಸ್ತ್ರ.

ಹುಣಿಸೆಯ ಮರ ಎಲ್ಲಾ ಹಳ್ಳಿಗಳಲ್ಲೂ ಸಾಮಾನ್ಯ. ಹುಣಿಸೇಹಣ್ಣಿನ ಬೆಲೆ ಎಷ್ಟೇ ಆದರೂ ಹುಣಿಸೇಮರವನ್ನು ನಗದು ಬೆಳೆಯಾಗಿ ಬೆಳೆಸಿದವರನ್ನು ನಾನಂತೂ ನೋಡಿಲ್ಲ. ಹುಣಿಸೇ ತೋಟ ಇಟ್ಟುಕೊಂಡಿದ್ದೇನೆ ಅಂತ .ಯಾವೂರ ರೈತನೂ ಹೇಳಿಕೊಂಡಂತಿಲ್ಲ. ಹುಣಿಸೇಹಣ್ಣಿಗೆ ಬೆಂಬಲ ಬೆಲೆ ಘೋಷಿಸಿ ಅಂತ ಗದ್ದಲವಾದದ್ದೂ ಗೊತ್ತಿಲ್ಲ. ಆದರೆ ಚಿತ್ರದುರ್ಗದ ಕಡೆಯ ಗೆಳೆಯರು ಅವರೂರಲ್ಲಿ ಬಂಜರು ಭೂಮಿ ಕೊಡು ಹುಣಿಸೇಮರ ಬಾಕಿ, ಹದಿನೈದೋ ಇಪ್ಪಕ್ಕೋ ವರುಷ, ಫಲಬರುವ ತನಕ ಕಾಯುತ್ತಾರಂತೆ. ಹುಣಿಸೇಮರದ ಲಾಭನಷ್ಟದ ಕತೆ ಹೇಗಾದರೂ ಇರಲಿ. ನಿಮಗೆಂದಾದರೂ ಎಲೆಯುದುರಿಸಿಕೊಂಡು ಬೆತ್ತಲೆ ನಿಂತ ಹುಣಿಸೇಮರ ನೋಡಿದ ನೆನಪಿದೆಯಾ? ನಾನಂತೂ ಎಲೆಯುದುರಿದ ಬೋಳು ಹುಣಿಸೇಮರ ನೋಡಿಲ್ಲ. ಹಾಗೇ ಯೌವನದಿಂದ ನಳನಳಿಸುವ ಹುಣಿಸೇಮರವನ್ನು ಕೂಡ. ಸಾಮಾನ್ಯವಾಗಿ ಎಲ್ಲಾ ಹುಣಿಸೇಮರವೂ ನೂರೋ ನೂರೈವತ್ತೋ ವರುಷವಾದಂತೆ ಋಷಿಗಳ ಹಾಗೆ ಕಾಣಿಸುತ್ತದೆ.

ಹುಣಿಸೇಮರ ಹುಟ್ಟುಹಾಕುವ ಕತೆಗಳಿಗಂತೂ ಲೆಕ್ಕವಿಲ್ಲ. ಅದು ದೆವ್ವಗಳ ಅಡಗುದಾಣ. ಹುಣಿಸೇಮರದಡಿಯಲ್ಲಿ ಮಲಗಿ ಮರಣಹೊಂದಿದವರ ಕತೆಗಳಂತೂ ಪ್ರತಿ ಹಳ್ಳಿಯಲ್ಲೂ ಇವೆ. ಹಳೆಯ ಚಂದಮಾಮಗಳಲ್ಲಂತೂ ಹುಣಿಸೇಮರದ ಜೊತೆ ದೆವ್ವ ಫ್ರೀ. ಬ್ರಹ್ಮರಾಕ್ಷಸನ ಪಾಲಿಗೂ ಹುಣಿಸೇಮರವೇ ಅಂತಃಪುರ. ಆದರೆ, ಹುಣಿಸೇಮರಕ್ಕೆ ನೇಣುಹಾಕಿಕೊಳ್ಳುವವರು ಕಡಿಮೆ. ಅದ್ಯಾಕೋ ಸತ್ತವರ ಪಾಲಿಗೆ ಪ್ರಿಯವಾದಷ್ಟು ಹುಣಿಸೇಮರ ಸಾಯುವವರ ಪಾಲಿಗೆ ಆಪ್ತವಾಗಲಿಲ್ಲ.

ಹಾಗೇ ಕವಿಗಳಿಗೂ ಕಾವ್ಯಕ್ಕೂ ಹುಣಿಸೇಹಣ್ಣು ರುಚಿಸಿದಂತಿಲ್ಲ. ಮರ ಮುಪ್ಪಾದರೆ ಹುಳಿ ಮುಪ್ಪೇ ಎಂಬ ಗಾದೆಗಷ್ಟೇ ಹುಣಿಸೇಮರ ಸೀಮಿತ. ಹುಣಿಸೇಹಣ್ಣು ಕೂಡ ವ್ಯರ್ಥಪ್ರಯತ್ನವನ್ನೂ ಸೂಚಿಸುವ ನುಡಿಗಟ್ಟನ್ನು ಕೊಟ್ಟಿತು. ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತೆ ಅಂತ ಹಿರಿಯರು ಈಗಲೂ ಹೇಳುವುದುಂಟು. ಇನ್ನೊಬ್ಬನ ಅಭಿವೃದ್ಧಿಯನ್ನು ಕಂಡು ಕರುಬುವವನನ್ನು ಹೊಟ್ಟೆಯಲ್ಲಿ ಹುಣಿಸೇಹಣ್ಣು ಕಿವುಚಿದಂತಾಯಿತು ಅನ್ನುತ್ತಾರೆ. ಅಷ್ಟು ಬಿಟ್ಟರೆ, ಬಸುರಿಯ ಬಯಕೆಗೆ ಮಾವಿನಕಾಯೇ ಬೇಕು. ಅದರ ಬದಲು ಅವರೇಕೆ ಹುಣಿಸೇಕಾಯಿ ಬಯಸರು? ಕವಿಗಳು ಇಷ್ಟೊಂದು ಚೆಂದದ ಮರವನ್ನು ಬಣ್ಣಿಸದೇ ಬಿಟ್ಟರೇಕೆ ಎಂಬ ಪ್ರಶ್ನೆ ಮೂಡುತ್ತಿರುವಾಗಲೇ ಮೊನ್ನೆ ಬೇಂದ್ರೆ ಬರೆದ ಹೂತದ ಹುಣಸೀ’ ಕವಿತೆಯನ್ನು ನೆನಪಿಸಿದರು ಕಿ. ರಂ ನಾಗರಾಜ್. ಕವಿ ಜೀವದ ಬೇಸರ ತಣಿಸೋದಕ್ಕೆ ಬೇರೇನು ಬೇಕು, ಒಂದು ಹೂಬಿಟ್ಟ ಹುಣಿಸೇಮರ ಸಾಕು ಎಂದು ಕೊನೆಯಾಗುವ ಕವಿತೆ ಹುಣಿಸೇಮರದ ಸೊಬಗನ್ನು ವರ್ಣಿಸಿದೆ. ಆ ಕವಿತೆಗಿರುವ ಇನ್ನಿತರ ಅರ್ಥಾಂತರಗಳು ಸದ್ಯಕ್ಕೆ ಬೇಡ.

 ********

ಕಾವ್ಯ ವಿಮರ್ಶಕರು ಬೇರೆ ಥರ ಬರೆಯುವುದನ್ನು ಕಲಿಯಬೇಕಿದೆ. ಕವಿತೆಯನ್ನು ನಾವು ವಿಶ್ಲೇಷಿಸುವ ಕ್ರಮದಲ್ಲೇ ತಪ್ಪಿದೆ. ಸಂಸ್ಕೃತಿ ವಿಮರ್ಶೆಯ ಹೆಸರಲ್ಲಿ ತಮ್ಮ ತಮ್ಮ ವಾದಗಳನ್ನು ಮಂಡಿಸುವುದಕ್ಕೆ ಕವಿತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಕವಿತೆಯನ್ನು ವಿಮರ್ಶೆ ಮಾಡುವುದು ಹಾಗಲ್ಲ. ಕವಿತೆಯ ಕಡೆ ಓದುಗ ಹೊರಳುವಂತೆ ಮಾಡುವುದು ವಿಮರ್ಶೆಯ ಉದ್ದೇಶವಾಗಬೇಕು. ಕಾವ್ಯ ವ್ಯಾಖ್ಯಾನದ ಹೆಸರಿನಲ್ಲಿ ಅಧಿಕಪ್ರಸಂಗತನವೇ ಜಾಸ್ತಿಯಾಗುತ್ತಿದೆ. ಕಾವ್ಯವನ್ನು ಹರಿಕಥೆಯಂತೆ ಬಳಸುವವರು ಹೆಚ್ಚಾಗಿದ್ದಾರೆ ಎಂದು ಮೊನ್ನೆ ಮೊನ್ನೆ ಯು ಆರ್ ಅನಂತಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು.

ವಿಮರ್ಶೆಯನ್ನು ಓದಿ ಕಾವ್ಯವನ್ನು ಓದುವವರ ಸಂಖ್ಯೆ ಎಷ್ಟಿದೆಯೋ ಗೊತ್ತಿಲ್ಲ. ಹಾಗೇ, ಕವಿತೆಯನ್ನು ಒಂದು ಗಣಿತದ ಸೂತ್ರದಂತೆ ಅಧ್ಯಯನ ಮಾಡುವುದೋ, ಒಗಟೆಂದು ಭಾವಿಸಿ ಬಿಡಿಸಲೆತ್ನಿಸುವುದೋ ಅದೊಂದು ಅರ್ಥವಾಗದ ಕಗ್ಗ ಎಂದು ಬೇರೆಯವರ ಹತ್ತಿರ ಇದಕ್ಕೆ ಅರ್ಥವೇನು ಎಂದು ಕೇಳುವುದೋ ಕವಿತೆಯನ್ನು ಮೆಚ್ಚುವವರು ಮಾಡುವ ಕೆಲಸ ಅಲ್ಲ. ಅದೇ ಕಾರ್ಯಕ್ರಮದಲ್ಲಿ ಕಿ ರಂ ನಾಗರಾಜ್ ಹೇಳಿದ್ದು ನಿಜಕ್ಕೂ ಅರ್ಥವತ್ತಾಗಿತ್ತು. ಈ ಕವಿತೆ ಅರ್ಥವಾಗುವುದಿಲ್ಲ ಎಂದು ಯಾರಾದರೂ ಹೇಳಿದರೆ ಅವರು ಉತ್ತರಿಸುತ್ತಾರಂತೆ; ಅರ್ಥವಾದಷ್ಟೇ ಕವಿತೆ. ಅದು ಪೂರ್ತಿ ಅರ್ಥವಾಗಬೇಕು ಎನ್ನುವ ಆತುರ ಯಾಕೆ? ಯಾವತ್ತೋ ಒಂದು ದಿನ ಅರ್ಥವಾಗುತ್ತೆ ಬಿಡಿ. ಅರ್ಥವಾಗದಿದ್ದರೂ ಸರಿಯೇ. ಅರ್ಥವಾಗಲೇಬೇಕು ಅನ್ನುವ ಹಠ ಯಾಕೆ? ಅದೇ ಸರಿ. ಅರ್ಥವಾದಷ್ಟೇ ಅರ್ಥ. ಕವಿತೆ ಇನ್ನೊಬ್ಬರ ಹಾಗೆ ಅಂದುಕೊಂಡುಬಿಡೋಣ. ಜೊತೆಗಿದ್ದವರೂ ಅಷ್ಟೇ, ಎಷ್ಟು ಅರ್ಥವಾಗುತ್ತಾರೋ ಅಷ್ಟೇ. ಇನ್ನಷ್ಟು

ಹೇಳಲಿಕ್ಕಿನ್ನೂ ಸಾಕಷ್ಟು ಬಾಕಿ ಇದೆ…

 

ತುಟಿಯ ರಂಗು ಕಳೆದಿದೆ.
ಇಲಾಸ್ಟಿಕ್ ಸ್ಮೈಲೂ…
ಇನ್ನು ಮುಂದೆ ಮುಖವಾಡದ ಅಗತ್ಯವಿಲ್ಲ.

 

ಬರಲಿದೆ …
ಭಾಮಿನಿ ಷಟ್ಪದಿ

ಪುಸ್ತಕ ರೂಪದಲ್ಲಿ
ನಿಮ್ಮ ಪ್ರತಿಗಾಗಿ ಇಲ್ಲಿಗೆ  ಮೈಲ್ ಮಾಡಿ :avadhi.pusthaka@gmail.com

ಗೇರುತೋಪಿನ ವಿಲಾಸಿನಿಯರು

ಹೈವೇ 7                                                                     ವಿ ಎಂ ಮಂಜುನಾಥ್ 

———-

ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭ ಎಂಬ ಆತ್ಮಕಥನದ ಕೆಲವು ವಿಶಿಷ್ಟ ಭಾಗಗಳು 

 

* * *

ಘಾಟು ಮದ್ಯ ಉಕ್ಕುವ ಹೆಣ್ಣುಗಳು-ಅಲ್ಲಿ ಗೇರು ಮರಗಳಲ್ಲಿ ಮಲಗಿಕೊಂಡು,
ಸ್ತನ, ತೊಡೆಗಳಿಂದ ಹಾಡು ಹೊಮ್ಮಿಸಿ,
ಹೈವೇ ಕಡೆಯ ಬಾರ್ ಅಂಡ್ ರೆಸ್ಟೋರೆಂಟ್ನ ಕಡೆಗೆ ಸೀಟಿ ಹೊಡೆಯುತ್ತಾರೆ.

ಕಂದುಬಣ್ಣದ ಮೊಲಗಳು,
ಅಪ್ಪಟ ಕಿರಾತಕರೇ ಇರಬೇಕೆಂದು ಜಾಲಿಪೊದೆಗಳಲ್ಲಿ ಅವಿತುಕೊಳ್ಳುತ್ತವೆ.

ಆ ಸೀಟಿಯ ಹೊಯ್ದಾಟಕ್ಕೆ ತಲೆದೂಗುವ ಹುಲ್ಲುಗೊನೆಗಳು,
ಇದ್ಯಾವ ಋತುವಿನ ಗಾಳಿ ಎಂದು ನುಲಿಯತೊಡಗುತ್ತಿದ್ದಂತೆ-

ಗ್ರಾಮಸ್ಥ ಮಹಿಳೆಯರು ತೊಡೆ ನಡುವಿನ ಕಾಲಮಾನವನ್ನು ತೋರಿಸುತ್ತಾ,
ಆ ಹುಲ್ಲುಗೊನೆಗಳನ್ನು ಕೊಯ್ದು, ಸೈಕಲ್ ಮೇಲೆ ಏರಿಕೊಂಡು ಹೋಗುತ್ತಾರೆ.

ಒಳಚೆಡ್ಡಿಗಳನ್ನು ಧರಿಸದ ಗಡಿಭದ್ರತಾ ಪಡೆಯ ಸೈನಿಕರು,
ಗುಂಡಿನಂತೆ ಹೃದಯಕ್ಕೆ ತಾಗಿದ ಸೀಟಿಯ ಜಾಡನ್ನು ಹಿಡಿದು ಅಲೆದು ಬರುತ್ತಿರುತ್ತಾರೆ.
ಅಪ್ಪ ಅಮ್ಮ ಇಬ್ಬರೂ ಸಂಸಾರ ವ್ಯವಸ್ಥಿತವಾಗಿ ತೂಗದ ಕುರಿತು ಆಲೋಚಿಸಿ, ಸಿಂಗನಾಯಕನಹಳ್ಳಿ ರೈತರ ಬ್ಯಾಂಕಿನಲ್ಲಿ ಸಾಲ ಮಾಡಿ ಒಂದು ಎಮ್ಮೆಯನ್ನು ಕೊಂಡರು. ಎಮ್ಮೆಯನ್ನು ಮೇಯಿಸಲು ಅಮ್ಮ ಪೋಲಿಸ್ ಕ್ಯಾಂಪಿಗೆ ಹೊಡೆದುಕೊಂಡು ಹೋಗುತ್ತಿದ್ದಳು. ಆಗಾಗ ಅಪ್ಪ ಕೆಲಸ ಮಾಡಿಕೊಂಡೇ ಎಮ್ಮೆಯನ್ನು ನೋಡಿಕೊಳ್ಳುತ್ತಾ ಸಾಯಂಕಾಲ ಮನೆ ಕಡೆ ಹೊಡೆದುಕೊಂಡು ಬರುತ್ತಿದ್ದರು. ಶನಿವಾರ ಮತ್ತು ಭಾನುವಾರ ನಮಗೆ ಸ್ಕೂಲು ರಜೆ ಆದ್ದರಿಂದ ನಾವು ಕೂಡ ಎಮ್ಮೆ ಮೇಯಿಸಲು ಹೋಗುತ್ತಿದ್ದೆವು. ಅಪ್ಪ ಕೆಲಸ ಮಾಡುತ್ತಿದ್ದ ಪೊಲೀಸ್ ಕ್ಯಾಂಪಿಗೆ ನಾವು ಹೋಗಬೇಕಾದರೆ ಗೇರುತೋಪು ಬಳಸಿಕೊಂಡೇ ಹೋಗಬೇಕಾಗುತ್ತಿತ್ತು. ವೆಂಕಟಾಲದಿಂದ ಮೂರು ಮೈಲುಗಳಷ್ಟು ದೂರದ ಗೇರುಕಾಡಿಗೆ ಹೋಗಲು ಹೈವೇ ಬದಿಯಲ್ಲೇ ಎಮ್ಮೆ ಬಿಟ್ಟುಕೊಂಡು ಹೋಗುತ್ತಿದ್ದೆವು. ಸ್ಪೋಕ್ಸ್ ಫ್ಯಾಕ್ಟರಿಯಿಂದ ಸ್ವಲ್ಪ ದೂರಕ್ಕೆ ಹೋಗಿ ಎಡಕ್ಕೆ ತಿರುಗಿಕೊಂಡರೆ ಒಂದು ದೊಡ್ಡ ಗೇರುಮರ ಸಿಗುತ್ತಿತ್ತು. ಈಗ ರಸ್ತೆ ಆದಮೇಲೆ ಆ ಮರವನ್ನು ಕಡಿದು ಹಾಕಿದ್ದಾರೆ. ನಾವೆಲ್ಲರೂ ಆ ಮರದ ಮೇಲೆ ಆಟವಾಡುತ್ತಿದ್ದೆವು. ಎಮ್ಮೆ ಮೇಯಿಸಿಕೊಂಡು ತಿರುಗಿ ಬರುವಾಗ ಒಮ್ಮೆ ಆ ಮರದ ಮೇಲೆ ಹತ್ತಿ, ಗೇರುಹಣ್ಣುಗಳನ್ನು ಉದುರಿಸುತ್ತಿದ್ದೆವು. ಅದೇನು ಪಾಪವೋ ಏನೋ ಈ ಮರದಲ್ಲಿ ಅರಿಶಿಣವರ್ಣದ ಗೇರುಹಣ್ಣು ರೋಗದಂತೆ ಬಿಡುತ್ತಿತ್ತು. ತುದಿಯಲ್ಲಿ ಅಲ್ಲಲ್ಲಿ ಕೆಲವೊಂದು ಕಾಣಿಸಿಕೊಳ್ಳುತ್ತಿದ್ದವು ಅಷ್ಟೇ. ಆ ಹಣ್ಣುಗಳನ್ನು ಉದುರಿಸಲು ನಾವು ಸಾಕಷ್ಟು ಪ್ರಯಾಸಪಡಬೇಕಾಗುತ್ತಿತ್ತು. ನಿಜಕ್ಕೂ ಆ ಹಣ್ಣುಗಳು ಸಿಹಿಯಾಗಿರುತ್ತಿದ್ದವು. ಹೋಗುವಾಗ ಕೂಡ ಎಲೆ ಮತ್ತು ಕೊಂಬೆಗಳನ್ನು ಎಳೆದು, ಜೀಕಾಡಿ ಮುಂದಕ್ಕೆ ಹೋಗುತ್ತಿದ್ದೆವು. ಮತ್ತೆ ಈ ಮರ ಒಂದು ರೀತಿ ಸೂಳೆಗಾರಿಕೆಗೂ ಸ್ಥಳವಾಗಿತ್ತು. ಬೇರೆಬೇರೆ ಊರುಗಳಿಂದ ಬರುತ್ತಿದ್ದ ಕರೆವೆಣ್ಣುಗಳು ಆ ಮರದ ಕೆಳಗೆ ಕುಳಿತುಕೊಳ್ಳುತ್ತಿದ್ದರು. ಮಳೆಗಾಲದಲ್ಲಿ ಗೋಣಿಚೀಲ ಹೊದ್ದುಕೊಂಡು ಬುಡದಲ್ಲಿ ಮಲಗಿಕೊಂಡಿರುತ್ತಿದ್ದರು. ಗಿರಾಕಿಗಳು ಆ ಮರದ ಹತ್ತಿರ ಬಂದು ವ್ಯವಹಾರ ಕುದುರಿಸಿಕೊಂಡು ಅವರನ್ನು ಗೇರುತೋಪಿನ ಕಡೆ ಕರೆದೊಯ್ಯುತ್ತಿದ್ದರು.
ಚಳಿಗಾಲದಲ್ಲಿ ನಾವು ಮನೆಯವರೆಲ್ಲರೂ ಆ ದಿನ ಬೆಳಿಗ್ಗೆ ಹನಿಮಳೆಯಲ್ಲಿ ನೆನೆದುಕೊಂಡೇ ಪೊಲೀಸ್ ಕ್ಯಾಂಪಿಗೆ ಹೊರಟಿದ್ದೆವು. ಆ ಮರದ ಹತ್ತಿರ ನನ್ನ ಗ್ರಾಮದ ಹುಡುಗರು ತುಂಬಿಕೊಂಡಿದ್ದರು. ಕುತೂಹಲದಿಂದ ನಾವೆಲ್ಲರೂ ಬೇಗಬೇಗ ಹೆಜ್ಜೆಗಳನ್ನು ಹಾಕುತ್ತ ಅವರು ಗುಂಪುಗೂಡಿದ ಕಡೆ ನಡೆದೆವು. ಕಾರೊಂದಕ್ಕೆ ಆ್ಯಕ್ಸಿಡೆಂಟ್ ಆಗಿತ್ತು. ಹೈವೇಯಲ್ಲಿ ಸಾಮಾನ್ಯವಾಗಿ ಬೆಳಗಿನ ಜಾವ ಅಪಘಾತಗಳು ಹೆಚ್ಚು ಸಂಭವಿಸುವುದು ನಮಗೆಲ್ಲ ಗೊತ್ತಿದ್ದರಿಂದ ಎದ್ದ ಕೂಡಲೇ ಹೈವೇಯನ್ನು ನೋಡುವುದು ನಮ್ಮ ಪ್ರತಿನಿತ್ಯದ ಕೆಲಸವಾಗಿತ್ತು. ಏಕೆಂದರೆ ಅಪಘಾತಕ್ಕೀಡಾದ ವಾಹನಗಳಿಂದ ಬೆಲೆ ಬಾಳುವ ವಸ್ತುಗಳು ಸಿಗುತ್ತಿದ್ದವು. ಆವೊತ್ತು ಆ ಕಾರಿನಲ್ಲಿ ಯಾರೂ ಇರಲಿಲ್ಲ. ಅಪಘಾತ ಸಂಭವಿಸಿದ ಕೂಡಲೇ ಕಾರನ್ನು ಬಿಟ್ಟುಹೋಗಿದ್ದರು. ನಾವು ಹೋಗುವಷ್ಟೊತ್ತಿಗೆ ಊರಿನ ಖಾಯಂಕಳ್ಳರು ಕಾರನ್ನು ಗುರಾಣಿಗಳಿಂದ ಮೀಟಿ ಹಾಕಿ ಬೇಕಾದ್ದನ್ನೆಲ್ಲ ಬಿಚ್ಚಿಕೊಂಡು ಲಪಟಾಯಿಸಿಬಿಟ್ಟಿದ್ದರು. ನನ್ನ ಕೈಯ್ಯಲ್ಲಿದ್ದದ್ದು ಗೋಣಿಚೀಲವೋ ಅಥವಾ ಮಂಕರಿಯೋ ಸರಿಯಾಗಿ ನೆನಪಿಲ್ಲ. ಮರದ ಬುಡದಲ್ಲಿಟ್ಟು ಕಾರಿನ ಇಂಡಿಕೇಟರ್, ವೈಪರ್, ಹೆಡ್ಲೈಟ್, ಬೀಡಿಂಗ್, ಲೈನರ್ಗಳನ್ನು ಮೆಲ್ಲಗೆ ಕೀಳಲು ಪ್ರಯತ್ನಿಸಿದೆ. ಬಾನೆಟ್ ಅನ್ನು ನನ್ನ ಅಣ್ಣಂದಿರು ಗುರಾಣಿಯಿಂದ ಬಲವಾಗಿ ಕುಟ್ಟತೊಡಗಿದ್ದರು. ನನಗೆ ಯಾವುದೂ ಸಿಗಲಿಲ್ಲ. ಟೈರುಗಳ ಕಡೆ ನೋಡಿದರೆ ಡಿಸ್ಕ್ ಮಾತ್ರ ಇದ್ದವು. ನನ್ನ ಅಣ್ಣಂದಿರು ಬಾನೆಟ್ ಅನ್ನು ಮೀಟಿ ಹಾಕಿ ಹಾರನ್ ಸೆಟ್, ಹೈವಾ ಸ್ಪೀಕರ್ಗಳು ಮತ್ತು ಬ್ಯಾಟರಿಯನ್ನು ಬಿಚ್ಚಿಕೊಂಡಿದ್ದರು. ಆ ಗೇರುಮರ ನೆನಪಾದಾಗಲೆಲ್ಲ ನನಗೆ ಈ ಕಾರಿನ ಆ್ಯಕ್ಸಿಡೆಂಟ್ ಚಿತ್ರ ಕಣ್ಮುಂದೆ ಬರುತ್ತದೆ.
ಅಲ್ಲಿಂದ ಮುಂದಕ್ಕೆ ಕಿರಿದಾದ ಮಣ್ಣು ದಾರಿ ಸಿಗುತ್ತದೆ. ಆ ಹಾದಿಯಲ್ಲಿ ಹಂಚಿಕಡ್ಡಿ, ಗರುಕೆಹುಲ್ಲು, ಶುಂಠಿಹುಲ್ಲು ದಟ್ಟವಾಗಿ ಬೆಳೆದುಕೊಂಡಿರುತ್ತಿತ್ತು. ಹಂಚಿಕಡ್ಡಿಯ ಊಬುಗಳನ್ನು ಮೈಕೈಗೆ ಚುಚ್ಚಿಸಿಕೊಂಡು ಆ ದಾರಿಯನ್ನು ಬಳಸಿಹೋದರೆ ಗೇರುಕಾಡು ಸಿಗುತ್ತದೆ. ಸುಮಾರು ನೂರು ಎಕರೆಯಷ್ಟಿರುವ ಈ ಗೇರುತೋಪು, ಏಪ್ರಿಲ್-ಮಾಚರ್್ ತಿಂಗಳಿನಲ್ಲಿ ಫಲವಂತಿಕೆಯಿಂದ ಕಂಗೊಳಿಸುತ್ತದೆ. ಇದರ ಎಡಮಗ್ಗುಲಿಗೆ ಸ್ಪೋಕ್ಸ್ ಫ್ಯಾಕ್ಟರಿ ಇದೆ. ತೀರ ಕೆಳಕ್ಕೆ ಮಾಜಿ ಮುಖ್ಯಮಂತ್ರಿ ವೀರೇಂದ್ರಪಾಟೀಲ್ರ ದೊಡ್ಡತೋಟ ಸಿಗುತ್ತದೆ. ಆ ತೋಟದಲ್ಲಿ ದ್ರಾಕ್ಷಿ, ಸೀಬೆಕಾಯಿ, ತರಕಾರಿಗಳನ್ನು ಬೆಳೆಯುತ್ತಿದ್ದರು. ಸದಾಕಾಲ ಹಸಿರುಕಾಡಿನ ಹಬ್ಬದಂತೆ ಕಾಣುತ್ತಿದ್ದ ಆ ತೋಟದ ಬಗ್ಗೆ ಮುಂದಿನ ಭಾಗಗಳಲ್ಲಿ ವಿವರಿಸುತ್ತೇನೆ. ಈ ಗೇರುತೋಪನ್ನು ಗುತ್ತಿಗೆ ಆಧಾರದ ಮೇಲೆ ಶಿವಾಜಿನಗರದ ಸಾಬರು ವರ್ಷಕ್ಕೊಮ್ಮೆ ಹಿಡಿದು ಸಾಕಷ್ಟು ದುಡ್ಡು ಮಾಡಿಕೊಂಡು ಹಿಂದಿರುಗುತ್ತಿದ್ದರು. ಈ ಗೇರುಕಾಡನ್ನು ಕಾಯಲು ಸುಮಾರು ಏಳೆಂಟು ಜನ ಕಾವಲುಗಾರರನ್ನು ನೇಮಿಸುತ್ತಿದ್ದರು. ಯಾಕೆಂದರೆ ಸುತ್ತಮುತ್ತಲಿನ ಗ್ರಾಮಗಳ ಜನರು ಗೋಡಂಬಿ ಕದಿಯಲು ಹೊತ್ತಲ್ಲದ ಹೊತ್ತಲ್ಲಿ ಬರುತ್ತಿದ್ದರು. ಗೋಡಂಬಿ ದುಬಾರಿಯಾದ್ದರಿಂದ ಗೇರುಹಣ್ಣನ್ನು ಮಾತ್ರ ಉಚಿತವಾಗಿ ಕೊಡುತ್ತಿದ್ದರು. ಬೆಳಿಗಿನಜಾವ ಐದು ಗಂಟೆಯಷ್ಟೊತ್ತಿಗೆ ಹಣ್ಣು ಕೀಳಲು ತೊಡಗಿಕೊಂಡರೆ ಬಿಸಿಲು ಬರುವವರೆಗೂ ಕೆಲಸ ಮಾಡುತ್ತಿದ್ದರು. ಅಷ್ಟೊತ್ತಿಗೆ ವ್ಯಾನ್ ಬಂದು ನಿಂತಿರುತ್ತಿತ್ತು. ಅಂದಿನ ಗೇರುಬೀಜವನ್ನು ಆ ದಿನವೇ ಸಾಗಿಸಿಬಿಡುತ್ತಿದ್ದರು. ಸುತ್ತಮುತ್ತಲಿನ ಗ್ರಾಮದ ಹೆಣ್ಣಾಳುಗಳು ಹೆಚ್ಚಾಗಿ ಕೂಲಿಗೆ ಬರುತ್ತಿದ್ದರು. ಹಣ್ಣಿನ ಕೆಳಭಾಗದಲ್ಲಿ ನೇತಾಡುತ್ತಿದ್ದ ಗೇರುಬೀಜವನ್ನು ಕಿತ್ತು ಮೂಟೆಗೆ ತುಂಬಿ ಹಣ್ಣುಗಳನ್ನು ಮಾತ್ರ ಆಯಾ ಮರದ ಬುಡದಲ್ಲಿ ಎಸೆದುಬಿಡುತ್ತಿದ್ದರು. ಹೆಣ್ಣಾಳುಗಳು ಎಸೆದ ಆ ಹಣ್ಣುಗಳನ್ನು ಮಂಕರಿಗೆ ತುಂಬಿಕೊಂಡು ದೂರದೂರಿಗೆ ವ್ಯಾಪಾರಕ್ಕೆ ಹೋಗಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ಮಳೆ ಬರುತ್ತಿದ್ದರೂ ಸಹ ಗೇರುಕಾಡಿನಲ್ಲಿ ತಲೆ ಮೇಲೆ ಗೋಣಿಚೀಲ ಹೊದ್ದುಕೊಂಡು ದೋಟಿ ಹಿಡಿದುಕೊಂಡು ಹಣ್ಣು ಕೀಳುತ್ತಿದ್ದ ಆ ಹೆಣ್ಣಾಳುಗಳು ತೊಡೆ ಕಾಣುವಂತೆ ಸೀರೆಯನ್ನು ಮೇಲಕ್ಕೆತ್ತಿ ಕಟ್ಟಿಕೊಳ್ಳುತ್ತಿದ್ದರು. ಮೈಮೇಲೆ ಮನೆ ಗಂಡಸರ ಹರಿದ ಅಂಗಿಗಳನ್ನು ಧರಿಸಿಕೊಂಡಿರುತ್ತಿದ್ದರು. ಹಣ್ಣುಗಳನ್ನು ಕೀಳುವುದರ ಜೊತೆಗೆ ಗೇರುಸೌದೆ, ಪುಳ್ಳೆಗಳನ್ನು ಮುರಿದುಕೊಂಡು ಹೊರೆ ಕಟ್ಟಿಕೊಂಡು ಗೇರುಕಾಡು ಹಿಂದಿನ ಹಾದಿಯಲ್ಲಿ ಮನೆಗಳ ಕಡೆಗೆ ನನ್ನ ಗ್ರಾಮದ ಹೆಂಗಸರು ಮಳೆಗಾಳಿ ಲೆಕ್ಕಿಸದೆ ಓಡುತ್ತಿದ್ದರು.