ವಿಲಾಸಿ ಸೈನಿಕರು

ಹೈವೇ 7                                                                     ವಿ ಎಂ ಮಂಜುನಾಥ್ 

———-

ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭ ಎಂಬ ಆತ್ಮಕಥನದ ಕೆಲವು ವಿಶಿಷ್ಟ ಭಾಗಗಳು 

 

* * *

ಗಡಿಭದ್ರತಾ ಪಡೆ(ಬಿಎಸ್ಎಫ್), ಇಂಡಿಯನ್ ಏರ್ಫೋಸರ್್ (ಐಎಎಫ್), ಪಿಡಿಎಂಎಸ್ ಇವು ಮೂರು ಒಂದಕ್ಕೊಂದು ಅಣ್ಣತಮ್ಮಂದಿರಂತೆ ಅಂಟಿಕೊಂಡಿದ್ದರೂ ಈ ಸೈನಿಕರು, ರಿಕ್ರೂಟ್ಗಳು ಹಾದರವನ್ನು ಕೂಡ ಪೈಪೋಟಿಯಲ್ಲಿ ನಡೆಸುತ್ತಿದ್ದರು. ಈ ಎಲ್ಲ ಕ್ಯಾಂಪುಗಳ ಟ್ರೈನಿಗಳು ಬೇರೆಬೇರೆ ರಾಜ್ಯಗಳ, ಜಿಲ್ಲೆಗಳಿಂದ ಬಂದಿರುತ್ತಿದ್ದರು. ಇವರು ಡ್ಯೂಟಿಯ ವೇಳೆಯಲ್ಲೇ ಈ ಗೇರುತೋಪಿನ ಕಡೆಗೆ ಬರುತ್ತಿದ್ದರು. ಈ ಕ್ಯಾಂಪುಗಳು ವೆಂಕಟಾಲ ಸೇರಿದಂತೆ ಸುತ್ತಮುತ್ತಲಿನ ಪಾಲನಹಳ್ಳಿ, ಕಟ್ಟಿಗೇನಹಳ್ಳಿ, ಕೆಂಚೇನಹಳ್ಳಿ ಗ್ರಾಮಗಳ ಬಡಹುಡುಗಿಯರು, ಹೆಣ್ಣುಗಳನ್ನು ಸುಲಿದು ಹಾಕುವುದರ ಜೊತೆಗೆ ಅಸಂಖ್ಯಾತ ಬಡಬಗ್ಗರನ್ನು ಸಾಕಿವೆ. ಬಡಹೆಂಗಸರು ಅಕ್ಕಿ, ಗೋಧಿ ಮಾಟಲು ಈ ಕ್ಯಾಂಪುಗಳಿಗೆ ಹೋಗುತ್ತಿದ್ದರು.

ಆ ಹೊತ್ತಿನಲ್ಲಿ ಸೈನಿಕರು ಚಪಾತಿ, ಅಕ್ಕಿ, ಗೋಧಿ, ಬಟ್ಟೆ ಕೊಟ್ಟು ಪುಸಲಾಯಿಸಿ ತಮ್ಮ ಬ್ಯಾರೆಕ್ಸ್ಗಳಿಗೆ ಕರೆದೊಯ್ಯುತ್ತಿದ್ದರು. ಚಳಿಗಾಲದಲ್ಲಿ ಬೆಚ್ಚಗಿಡಲು ಪಾಚಿ ಹಸಿರುಬಣ್ಣದ ಸ್ವೆಟರ್ಗಳು, ಕಂಬಳಿಗಳು, ಕಾಕಿ ಪ್ಯಾಂಟ್ಗಳು, ಚೆಡ್ಡಿಗಳು, ಬಿಳಿಬಣ್ಣದ ಬನಿಯನ್ಗಳು, ಕ್ಯಾನ್ವಾಸ್ ಬೂಟುಗಳನ್ನು ಕೊಡುತ್ತಿದ್ದರು. ಸಣ್ಣಮಕ್ಕಳಿಗೆ ತಾವು ಧರಿಸುವ ಹ್ಯಾಟುಗಳನ್ನೂ ಕೊಡುತ್ತಿದ್ದರು. ಪಾಲನಹಳ್ಳಿಯಿಂದ ದನ ಕಾಯಲು ಬರುತ್ತಿದ್ದ ಹುಡುಗರು ಹ್ಯಾಟುಗಳನ್ನು ಹಾಕಿಕೊಂಡೇ ದಿನ್ನೆಯಲ್ಲಿ ನಡೆದಾಡುತ್ತಿದ್ದರು. ವಯಸ್ಸಾದ ವೃದ್ಧರು ಸಂಪೂರ್ಣವಾಗಿ ಮಿಲಿಟರಿ ಉಡುಪುಗಳಲ್ಲೇ ದಿನ್ನೆಯಲ್ಲಿ ದನಕರು, ಮೇಕೆಗಳನ್ನು ಮೇಯಿಸುತ್ತಿದ್ದರು.

ನಾವು ಅಪ್ಪನ ಪೋಲಿಸ್ ಕ್ಯಾಂಪಿನಿಂದ ಎಮ್ಮೆ ಹೊಡೆದುಕೊಂಡು ಗಡಿಭದ್ರತಾಪಡೆ ಕ್ಯಾಂಪಿನ ಮುಳ್ಳುಬೇಲಿಯ ಕಡೆ ಯಾವಾಗಲಾದರೂ ಹೋದಾಗ ಸೈನಿಕರು ನಮ್ಮನ್ನು ಕರೆದು ಚೀಲಗಟ್ಟಲೆ ಎಣ್ಣೆ ಸವರದ ಸುಕ್ಕ ರೊಟ್ಟಿಯನ್ನು ಕೊಡುತ್ತಿದ್ದರು. ಈ ಗೇರುಕಾಡು ಬಹಳ ದೊಡ್ಡದಾದ್ದರಿಂದ ಸುತ್ತಮುತ್ತಲಿನ ಗ್ರಾಮದವರೆಲ್ಲರೂ ದನಗಳನ್ನು, ಮೇಕೆಗಳನ್ನು ಮೇಯಿಸಲು ಈ ಗೇರುಕಾಡಿಗೆ ಬರುತ್ತಿದ್ದರು. ಇಷ್ಟೇಅಲ್ಲದೆ ಆಂಧ್ರಪ್ರದೇಶದಿಂದ ವಲಸೆ ಬಂದು ಭಾರತೀನಗರ, ದ್ವಾರಕಾನಗರಗಳಲ್ಲಿ ವಾಸ್ತವ್ಯ ಹೂಡಿರುವ ಘಾಟಿ ಹೆಂಗಸರು ಕರಿಎಮ್ಮೆಗಳನ್ನು ಹೊಡೆದುಕೊಂಡು ಇದೇ ಗೇರುತೋಪಿಗೆ ಬರುತ್ತಿದ್ದರು. ಮುದುಕಿಯರು ಜಾಕೀಟು ತೊಡುತ್ತಿರಲಿಲ್ಲವಾದ್ದರಿಂದ ಅವರ ಸ್ತನಗಳು ಕಿಬ್ಬೊಟ್ಟೆಗಳಿಗೆ ತಾಗುತ್ತಿತ್ತು. ಆ ಎಮ್ಮೆಗಳಂತೆಯೇ ಅವರೂ ಕೂಡ ಕಪ್ಪಗಿರುತ್ತಿದ್ದರು. ಆಂಧ್ರದ ಎಮ್ಮೆಗಳ ಕೊಂಬುಗಳು ನೆಲಕ್ಕೆ ತಾಗುವಂತಿರುತ್ತಿದ್ದವು. ಉದ್ದಗಿನ ಹುಲ್ಲುಹೊರೆಗಳನ್ನು ತಲೆ ಮೇಲೆ ಇಟ್ಟುಕೊಂಡು ಹೋಗುತ್ತಿದ್ದರೆ, ಸೈನಿಕರು ಅವರನ್ನೇ ಹಿಂಬಾಲಿಸುತ್ತಿದ್ದರು.

 
ಕೆಲವು ಹೆಂಗಸರು ಸೈಕಲ್ ಮೇಲೆ ಬಂದು ಹುಲ್ಲು ಕೊಯ್ದುಕೊಂಡು ಹೋಗುತ್ತಿದ್ದರು. ಗಡಿಭದ್ರತಾ ಪಡೆಯ ಸೈನಿಕರು ಯೂನಿಫಾರಂ ಮೇಲೆ ಸೈಕಲ್ ತುಳಿದುಕೊಂಡು ಈ ಗೇರುತೋಪಿನ ಕಡೆ ಹೆಂಗಸರನ್ನು ಹುಡುಕಿಕೊಂಡು ಬರುತ್ತಿದ್ದರು. ಮಿಲಿಟರಿ ಕ್ಯಾಂಟೀನ್ನಿಂದ ತಮಗೆ ಸಿಗುತ್ತಿದ್ದ ಮದ್ಯವನ್ನೂ ತರುತ್ತಿದ್ದರು. ಅಥವಾ ಹೈವೇ ಪಕ್ಕದ ಜೀರೋ ರೋಡಿನ ಬಾರ್ನಲ್ಲಿ ಮದ್ಯ ಕೊಂಡುಕೊಂಡಿರುತ್ತಿದ್ದರು. ಈ ಗೇರುತೋಪಿನ ಎದುರಿಗೆ ಇದರಷ್ಟೇ ವಿಶಾಲವಾದ ನೀಲಗಿರಿತೋಪು ಕೂಡ ಇದ್ದದ್ದರಿಂದ ಇಲ್ಲಿ ಏನೇ ನಡೆದರೂ ಯಾರಿಗೂ ಗೊತ್ತಾಗುತ್ತಿರಲಿಲ್ಲ.

ಈ ಎರಡೂ ತೋಪುಗಳ ನಡುವೆ ಜಲ್ಲಿಕಲ್ಲುಗಳ ರಸ್ತೆ ಇತ್ತು. ಜಲ್ಲಿಕಲ್ಲುಗಳು ದಪ್ಪಗಿರುತ್ತಿದ್ದರಿಂದ ಅಪ್ಪ ಸೈಕಲ್ಲನ್ನು ಬಹಳ ಹುಷಾರಾಗಿ ಒಂದೇ ಬದಿಯಲ್ಲಿ ತುಳಿದುಕೊಂಡು ಹೋಗುತ್ತಿದ್ದರು. ನಾನು ಹಿಂದೆ ಕುಳಿತು ಗೇರುತೋಪು-ನೀಲಗಿರಿ ತೋಪುಗಳ ಪೊದೆಗಳನ್ನು ದಿಟ್ಟಿಸುತ್ತಿದ್ದೆ. ಅದನ್ನೆಲ್ಲ ನಾನು ನೋಡಬಾರದಂತೆ ಏನೋ ಅಪ್ಪ ನನಗೆ ಗಿಡ, ಮರ, ಪ್ರಾಣಿಪಕ್ಷಿ, ಹಣ್ಣುಗಳ ಕುರಿತೋ ಅಥವಾ ಪುರಾಣದ ಕತೆಗಳನ್ನು ಹೇಳುತ್ತಾ ಕರೆದೊಯ್ಯುತ್ತಿದ್ದರು. ಕೆಲವುಸಲ ನಾನೊಬ್ಬನೇ ಇವೆರಡೂ ತೋಪುಗಳ ಜಲ್ಲಿಕಲ್ಲಿನ ಹಾದಿಯಲ್ಲಿ ನಡೆದುಕೊಂಡು ಬರಬೇಕಾಗುತ್ತಿತ್ತು. ಸ್ಕೂಲು ಇಲ್ಲದಾಗ ಗೇರುಹಣ್ಣು, ಮುಳ್ಳಣ್ಣು, ಸಪೋಟ, ಸೀತಾಫಲ ತಿನ್ನಲು ಕ್ಯಾಂಪ್ಗೆ ಹೋಗುತ್ತಿದ್ದೆ. ಆಗ ನನಗೆ ತುಂಬಾ ಭಯವಾಗುತ್ತಿತ್ತು. ಕಣ್ಣುಗಳ ಬದಿಯಲ್ಲಿ ಈ ತೋಪುಗಳನ್ನು ನೋಡದೆ ಕಣ್ಮುಚ್ಚಿಕೊಂಡು ಹೈವೇವರೆಗೂ ಓಡಿಬಿಡುತ್ತಿದ್ದೆ.

ನಂತರ ನಿರಾಳವಾಗಿ ಉಸಿರಾಡುತ್ತಾ ಗೇರುತೋಪಿನ ಕಡೆ ತಿರುಗಿ ನೋಡುತ್ತಾ ಮುಂದೆ ಸಾಗುತ್ತಿದ್ದೆ. ಈ ಆತ್ಮಹತ್ಯೆ ಮಾಡಿಕೊಂಡವರ ಹೆಣಗಳು ಗೇರುಮರಗಳಲ್ಲಿ ವಾರಗಟ್ಟಲೆ ನೇತಾಡಿಕೊಂಡಿರುತ್ತಿದ್ದವು. ಗೇರುತೋಪಿನ ತೀರಾ ಒಳಕ್ಕೆ ಯಾರೂ ಹೋಗುತ್ತಿರಲಿಲ್ಲವಾದ್ದರಿಂದ ಆ ಹೆಣಗಳು ಕೊಳೆತು ನಾರಲುತೊಡಗಿದಾಗ ಗೊತ್ತಾಗುತ್ತಿತ್ತು. ಈ ತೋಪುಗಳಲ್ಲಿ ಅತ್ಯಾಚಾರ, ಕೊಲೆಸುಲಿಗೆಗಳು, ಆತ್ಮಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಿದ್ದವು. ಬರುಬರುತ್ತ ಅತ್ಯಾಚಾರಗಳು ಹಾದರಕ್ಕೆ ತಿರುಗಿಕೊಂಡು ವೃತ್ತಿಯಾಗಿ ಹೋಯಿತು.

ಇದನ್ನು ಅರಿತ ಕೆಲವು ಪಡ್ಡೆ ಹೆಂಗಸರು ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಗೇರುಕಾಡಿನ ಮೊದಲ ಮರದಿಂದ ಹಿಡಿದು ಕೊನೆಯ ಮರದವರೆಗೂ ಬರೀ ಹೆಣ್ಣುಗಳೇ ನಿಂತಿರುವುದನ್ನು ನೋಡುತ್ತಿದ್ದೆ. ನನಗೆ ಆಗ ಏನೂಂತ ಗೊತ್ತಾಗುತ್ತಿರಲಿಲ್ಲ. ಕೆಲವು ಸಲ ಸೈಕಲ್ಗಳು ಮಾತ್ರ ಪೊದೆಗಳಲ್ಲಿ ಬಿದ್ದಿರುತ್ತಿದ್ದವು. ಆ ಸೈಕಲ್ಲುಗಳಲ್ಲಿ ಕ್ಯಾರಿಯರ್ಗಳಲ್ಲಿ ಸೈಡ್ ಡಬ್ಬಗಳಲ್ಲಿರುತ್ತಿದ್ದದ್ದರಿಂದ ಅದು ಸೈನಿಕರದ್ದೇ ಎಂದು ತಿಳಿಯುತ್ತಿತ್ತು. ಹ್ಯಾಂಡಲ್ಗೆ ಪಾಚಿಬಣ್ಣದ ಸೈನಿಕರು ಧರಿಸುವ ಸ್ವೆಟರ್ಗಳು ಇಳಿಬಿದ್ದಿರುತ್ತಿದ್ದವು. ದನ ಕಾಯುವ ಅನೇಕ ಹುಡುಗಹುಡುಗಿಯರನ್ನು ಈ ಸೈನಿಕರು ಕರೆಯುತ್ತಿದ್ದರು. ಬರದಿದ್ದರೆ ಬಲವಂತದಿಂದ ಗೇರುಮರಗಳ ಹಿಂದಿನ ಪೊದೆಗಳಿಗೆ ಎಳೆದೊಯ್ಯುತ್ತಿದ್ದರು. ಮೈಮೇಲಿನ ಉಡುಪುಗಳನ್ನೆಲ್ಲ ಕಳಚಿ ಬೆತ್ತಲಾಗಿ ಸೈನಿಕರು ಗೇರುತೋಪಿನಲ್ಲಿ ಓಡಾಡುತ್ತಿದ್ದರು.

ಇದೆಲ್ಲ ನನ್ನ ಅಪ್ಪನಿಗೆ ಗೊತ್ತಿದ್ದರಿಂದಲೋ ಏನೋ ಅಮ್ಮ ಮತ್ತು ನನ್ನ ಅಕ್ಕನನ್ನು ಕ್ಯಾಂಪ್ಗೆ ಒಬ್ಬೊಬ್ಬರನ್ನೇ ಕರೆಯುತ್ತಿರಲಿಲ್ಲ. ಇದು ಕಡೆಕಡೆಗೆ ಈ ರಸ್ತೆಯಲ್ಲಿ ಯಾರೇ ಹೆಂಗಸರು ಬರಲಿ, ಸೈನಿಕರು ಅವರನ್ನು ಮಾತನಾಡಿಸಿಕೊಂಡು ಕಷ್ಟಸುಖ ಕೇಳುವಂತೆ ಗೇರುಮರದ ಕೆಳಗೆ ಗಂಟೆಗಟ್ಟಲೆ ಕುಳಿತಿರುತ್ತಿದ್ದರು. ಸೈಕಲ್ಗಳಲ್ಲಿ ಅನೈತಿಕ ದಂಧೆಯ ಹೆಂಗಸರನ್ನು ಕುಳ್ಳಿರಿಸಿಕೊಂಡು ಗೇರುತೋಪಿನ ಹುಲ್ಲು ಪೊದೆಗಳಲ್ಲಿ ಹಿಂದಿ ಸಿನಿಮಾ ಹಾಡುಗಳನ್ನು ಹಾಡಿಕೊಂಡು ಒಳನುಗ್ಗುತ್ತಿದ್ದರು.

 

 

ಒಂದು ಇಂಟ್ರೊ, ಒಂದು ಬಾಡಿ, ಒಂದು ಎಂಡಿಂಗ್…

ಭಾಗೇಶ್ರೀ ಕನ್ನಡ ಬ್ಲಾಗ್ ಲೋಕಕ್ಕೆ ಅಡಿ ಇಟ್ಟಿದ್ದಾರೆ. ಅವಧಿಯ ಓದುಗರಿಗೆ ಭಾಗೇಶ್ರೀ ಅಪರಿಚಿತರಲ್ಲ. ಇತ್ತೀಚೆಗಷ್ಟೇ ಅವರ ಕವನಗಳ ದ್ವನಿ ಸುರುಳಿ ‘ನಿನ್ನ ನೆನಪು’ ವನ್ನು ಅವಧಿಯಲ್ಲಿ ಪರಿಚಯ ಮಾಡಿ ಕೊಡಲಾಗಿತ್ತು. ಪತ್ರಕರ್ತೆಯಾಗಿ ಎಷ್ಟು ಭಾಗೇಶ್ರೀ ಪರಿಚಿತರಾಗಿದ್ದಾರೋ ಅಷ್ಟೇ ಸಾಹಿತ್ಯದ ಒಡನಾಡಿಯಾಗಿಯೂ ಎಲ್ಲರಿಗೂ ಪರಿಚಿತರು. ಪತ್ರಕರ್ತರ ಅದೇ ಇಂಟ್ರೋ ಅದೇ ಹೆಡ್ಡಿಂಗ್ ಅದೇ ಬಾಡಿ ಎಂಬ ಬದುಕಿನಲ್ಲಿ ಇದ್ದವರು ಒಂದಿಷ್ಟು ಲವಲವಿಕೆ ಹುಡುಕುತ್ತಾ ಈಗ ಬ್ಲಾಗ್ ಲೋಕಕ್ಕೆ ಬಂದಿದ್ದಾರೆ. ದಿ ಹಿಂದೂ ಪತ್ರಿಕೆಯ ಭಾಗೇಶ್ರೀ ಅಲ್ಲಿ ಪುಸ್ತಕದ ಬಗ್ಗೆ ತಮ್ಮ  ಒಳನೋಟಗಳನ್ನು ಕಟ್ಟಿಕೊಟ್ಟಿದ್ದಾರೆ. ಈಗ ತಮ್ಮ ‘ಭಾಗೇಶ್ರೀ’ ಬ್ಲಾಗ್ ಮೂಲಕ ಓದುಗರಿಗೆ ಎದುರಾಗುತ್ತಿದ್ದಾರೆ.

ಅವರು ತಮ್ಮ ಬ್ಲಾಗನ್ನು ಪರಿಚಯಿಸಿಕೊಳ್ಳುವುದು ಹೀಗೆ…

 

+++

ಬರೆಯುವ ಕಾಯಕದಿಂದಾಚೆ…

ದಿನ ಬೆಳಗಾದರೆ ಬರೆಯುವುದೇ ಕೆಲಸ ಆದವರ ಬರವಣಿಗೆ ಒಂದು ಥರದ routineಗೆ ಬಿದ್ದುಬಿಡುತ್ತದೆ. ಒಂದು ಇಂಟ್ರೊ, ಒಂದು ಬಾಡಿ, ಒಂದು ಎಂಡಿಂಗ್… ಹೀಗೆ. ಎಲ್ಲವೂ inverted pyramid. ಅದರ ಆಚೆ ಎನೂ ಹೊಸ ತರಹದ್ದನ್ನು ಬರೆಯುವ ಸಾಧ್ಯತೆಯೇ ಕಳೆದು ಹೋಗಬಹುದೇನೋ ಎಂಬ ಭಯ ಶುರುವಾಗುತ್ತದೆ. ಅದರಲ್ಲೂ ವಯಸ್ಸಾಗುತ್ತಾ ಹೋದಂತೆ. ಇಂಗ್ಲಿಶ್ ಪೇಪರಿನಲ್ಲಿ ಕೆಲಸ ಮಾಡುವ ನನ್ನಂತ ಮಂದಿಗೆ ಕನ್ನಡ ಬರೆಯುವುದೇ ಮರೆತು ಹೋದರೆ ಎಂಬ ಇನ್ನೊಂದು ಭಯ. ಆದಕ್ಕೆ ಈ ಬ್ಲಾಗ್. ತುಂಬ selfish ಕಾರಣಕ್ಕೆ. ಸುಮ್ಮನೆ ಡೈರಿಯಲ್ಲಿ ಬರೆಯಬಹುದಲ್ಲ ಬ್ಲಾಗು ಗೀಗೆಲ್ಲ ಯಾಕೆ ಅಂತ ಕೇಳಬಹುದು. ಹೌದು. ಕೇಳಬಹುದು. ಉತ್ತರ ಸಧ್ಯಕ್ಕಂತು ಇಲ್ಲ. ಆದರೂ ಇರಲಿ. ಅಗಾಧ ಸೈಬರ್ ಲೋಕದ ಒಂದು ಮೂಲೆಯಲ್ಲಿ ಇದೂ ಒಂದಿದ್ದರೆ ನಷ್ಟವಂತೂ ಇರಲಾರದು ಎಂಬ ನಂಬಿಕೆಯೊಂದಿಗೆ… ನಮಸ್ಕಾರ.

+++                                                                                                                                           +++

ಅವರ ಬರಹದ ಸವಿ ತಿಳಿಸಲು ಅವರ ಬ್ಲಾಗ್ನಲ್ಲಿರುವ ಅನುವಾದ ಕುರಿತ ‘ಅನುವಾದದ ಮಜ’ ಬರಹದಿಂದ ಒಂದು ಕವಿತೆಯ ತುಣುಕು ಇಲ್ಲಿದೆ.

ಸಧ್ಯಕ್ಕೆ ಗಾಲಿಬನ ನನಗೆ ಪ್ರಿಯಾವಾದ ಗಜಲೊಂದರ ಕನ್ನಡೀಕರಣ. ಇಂಗ್ಲಿಷ್ ಭಾಷಾಂತರದ ಮರು ಭಾಷಾಂತರವಾದ್ದರಿಂದ ”ಮೂಲ ಅರ್ಥ” ಎನ್ನುವ ಕಲ್ಪನೆಯೇ ಇಲ್ಲಿ ವಿಚಿತ್ರ ಸ್ವರೂಪದ್ದು. ಅದರ form ಬಗ್ಗೆ ತಲೆ ಕೆಡಿಸಿಕೊಳ್ಳದೆ ಮಾಡಿರುವ ಈ ಪ್ರಯತ್ನಕ್ಕೆ ಗಾಲಿಬ್ ಮತ್ತು ಆತನನ್ನು originalನಲ್ಲಿ ಓದಿದ ಎಲ್ಲರ ಕ್ಷಮೆ ಇರಲಿ.

ಮೊಂಬತ್ತಿ

ಆಕಾಶ ಭೂಮಿಗಳನ್ನು ನನಗಿತ್ತ ಅವನು ನಾನು ಸಂತುಷ್ಟನಾಗಿರುತ್ತೇನೆ ಅಂದುಕೊಂಡ.

ವಾದ ಮಾಡುವುದಕ್ಕೆ ಮುಜುಗರವೆನ್ನಿಸಿ ಏನೂ ಹೇಳದೆ ಸುಮ್ಮನಾಗಿಬಿಟ್ಟೆ.

 

ಆಧ್ಯಾತ್ಮ ಅರಸಿ ಹೊರಟವರೆಲ್ಲ ಸುಸ್ತಾಗಿದ್ದಾರೆ. ಪ್ರತಿ ತಿರುವಿನಲ್ಲಿ ಬಳಲಿ ಕುಳಿತಿದ್ದಾರೆ.

ಬಸವಳಿದು ಬೆಂಡಾದ ಇವರಿಗೆ ನಿನ್ನ ವಿಳಾಸವೇ ಯಾವತ್ತೂ ಗೊತ್ತಿರಲಿಲ್ಲ.

 

ಮೊಂಬತ್ತಿಗೆ ಶುಭ ಹಾರೈಸುವ ಬಹಳಷ್ಟು ಮಂದಿ ಇದ್ದಾರೆ ಈ ಕೂಟದಲ್ಲಿ. ಆದರೆ,

ಕರಗುವಿಕೆಯೇ ಇರುವಿಕೆಯಾದ ಮೇಲೆ ಯಾರ ಹಾರೈಕೆಯಿಂದೇನು ಸುಖ?