ನೋವಿನೆದುರು ನಿಂತ ಲೀಲಾ..

ಇಂದಿನಿಂದ ಲೀಲಾ ಸಂಪಿಗೆ ಅವರ ಅಂಕಣ P for…ಆರಂಭವಾಗುತ್ತಿದೆ. ಇದು ಒಂದು ನಾವು ಕಂಡರಿಯದ ಲೋಕವನ್ನು ಬಿಚ್ಚಿಡಲಿದೆ. ಇದು ಅಂಕಣವಲ್ಲ-ನೋವಿನ ಒಡಲು.

ಲೀಲಾ ಸಂಪಿಗೆ ಯಾರು? ಅಂಕಣ ಆರಂಭವಾಗುತ್ತಿರುವ ಹೊತ್ತಲ್ಲಿ ಮತ್ತೆ ಅವರ ಕಿರು ಪರಿಚಯ ನಿಮ್ಮ ಮುಂದಿಡುತ್ತಿದ್ದೇವೆ. 

ಈಕೆ ಲೀಲಾ ಸಂಪಿಗೆ.

-ತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿಯೊಬ್ಬಳು ಜನ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಕ್ಷೇತ್ರವನ್ನು ಆಯ್ದುಕೊಳ್ಳುತ್ತಾಳೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಲೀಲಾಗೂ ಸಹಾ ಇದು ಸಹಜವಾದ ಆಯ್ಕೆಯಾಗಿರಲಿಲ್ಲವೇನೋ. ಅಕಸ್ಮಾತ್ ಆಗಿ ಸಂಪರ್ಕಕ್ಕೆ ಬಂದ ಕ್ಷೇತ್ರವನ್ನು ಅಚ್ಚುಕಟ್ಟುತನದಿಂದ ಮುನ್ನಡೆಸಿದ್ದಾರೆ.

ಲೀಲಾ ಸಂಪಿಗೆ ಆಯ್ದುಕೊಂಡದ್ದು ಲೈಂಗಿಕ ಕಾರ್ಯಕರ್ತೆಯರ ಸುಖ ದುಃಖಗಳನ್ನು ಆಲಿಸುವ ಕೆಲಸವನ್ನು. ಈಕೆ ಎನ್ ಜಿ ಓ ಗಳ ರೀತಿಯಲ್ಲಿ ಇದನ್ನು ಮಹತ್ ಸಾಧನೆಯಾಗಿ ಬಿಂಬಿಸಿಕೊಳ್ಳಲಿಲ್ಲ. ಇಲ್ಲವೇ ಇದರ ಬೆನ್ನಟ್ಟಿ ಬೇಕಾದಷ್ಟು ವಿದೇಶಿ ಹಣವನ್ನೂ ಮಾಡಿಕೊಳ್ಳಲಿಲ್ಲ. ಇಲ್ಲಾ ಬಿಲ್ ಗೇಟ್ಸ್ ಗಳ ಬೆನ್ನಟ್ಟಿ ಏಡ್ಸ್ ಆಸ್ಪತ್ರೆ ತೆಗೆಯಲು ಮುಂದಾಗಲಿಲ್ಲ.

ಬದಲಿಗೆ, ತೀವ್ರ ಆಸಕ್ತಿಯಿಂದ ಪ್ರತಿಯೊಬ್ಬರ ಕಥೆಯನ್ನೂ ಆಲಿಸಿದರು. ಅದು ಬಿಚ್ಚಿಟ್ಟ ಲೋಕದಿಂದ ಬೆಚ್ಚಿ ಬಿದ್ದ ಅವರು ತಮ್ಮ ಇಡೀ ಸಮಯವನ್ನು ಅವರಿಗಾಗಿ ಮೀಸಲಿಟ್ಟರು. ಅವರ ಬದುಕು ಹಸನು ಮಾಡಲು ಯತ್ನಿಸಿದರು. ಇವರು ಕೇವಲ ತೋರಿಕೆಯ ಅದ್ಯಯನಕ್ಕೆ ಸೀಮಿತರಾಗಲಿಲ್ಲ. ಲೈಂಗಿಕ ವೃತ್ತಿನಿರತರ  ಬಗ್ಗೆಯೇ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪಡೆದರು.

ವಿದ್ಯಾರ್ಥಿ ಸಂಘಟನೆಯ ನಾಯಕತ್ವ ಹಾಗೂ ಪತ್ರಕರ್ತರಾಗಿ ಪಡೆದಿದ್ದ ಅನುಭವವನ್ನು ಲೈಂಗಿಕ ವೃತ್ತಿನಿರತರಿಗಾಗಿ ಧಾರೆ ಎರೆದರು.  ಲೈಂಗಿಕ ವೃತ್ತಿನಿರತರ ಬಗ್ಗೆ ಈಕೆಯ ಜ್ಞಾನ ಅಪಾರ. ಒಂದು ಒಲಂಪಿಕ್ಸ್ ನಲ್ಲಿ ಎಷ್ಟು ಕಾಂಡೋಮ್ ಗಳು ಬಿಕರಿಯಾಗುತ್ತದೆ ಎನ್ನುವುದರಿಂದ ಹಿಡಿದು ಬಳಸಿದ ಕಾಂಡೋಮ್ ಗಳು ಹೇಗೆ ಪರಿಸರಕ್ಕೆ ಹಾನಿ ಒಡ್ಡುತ್ತಿವೆ ಎನ್ನುವವರೆಗೆ ಈಕೆ ಆಲೋಚನೆ ಮಾಡಬಲ್ಲರು.

ಗಟ್ಟಿ ದನಿಯ ಲೀಲಾ ತಾವು ನಡೆದ ಹಾದಿಯಲ್ಲಿ ಪ್ರಬುದ್ಧರಾಗಿ ಬದಲಾದ ರೀತಿ ವಿಸ್ಮಯ ಹುಟ್ಟಿಸುತ್ತದೆ.

ಕೊನೆಗೂ ಬರೆಯೋಕೆ ಕುಳಿತೆ

P for…

ಲೀಲಾ ಸಂಪಿಗೆ


ಕೊನೆಗೂ ಬರೆಯೋಕೆ ಕುಳಿತೆ. ಗೆಳೆಯರ ಒತ್ತಾಸೆಯ ಮಜರ್ಿಯಲ್ಲಿ ಬರೆದಿಲ್ಲವೆಂದಲ್ಲ! ಈ ತಪ್ಪಿದ ಹಾದಿಯ ಪಯಣಿಗರ ಬಗ್ಗೆ ಬರೆಯುತ್ತಲೇ ಬಂದಿರುವೆ. ಪಾಚಿಗಟ್ಟಿದ ಜಾರುದಾರಿಯಲ್ಲಿ ಸಾವರಿಸಿ ನಿಲ್ಲಲೂ ಆಗದೆ, ಹಾಗೆಂದು ಜಾರದಿರಲೂ ಆಗದೆ ತತ್ತರಿಸಿದವರ ನೋವಿನ, ಅವಮಾನದ, ಹತಾಶೆಯ, ಸಂಕಟದ ಬದುಕುಗಳ ಒಂದಷ್ಟು ಹೆಪ್ಪಿನ ಬುತ್ತಿಯನ್ನು ನನ್ನೊಳಗೆ ಹುದುಗಿಸಿಟ್ಟುಕೊಂಡೇ ಬಂದಿರುವೆ. ಬುತ್ತಿ ಬಿಚ್ಚಿಕೊಳ್ಳಲಾರದೇ ‘ಒಂದಷ್ಟು’ ನನ್ನೊಳಗೇ ಹುದುಗಿಬಿಟ್ಟಿವೆ. ಹೆಪ್ಪುಗಟ್ಟಿವೆ. ನಿಮ್ಮೊಂದಿಗೆ ಹಂಚಿಕೊಳ್ಳುವ ತಪನೆಯಿದೆ.
ಸಂಸ್ಕೃತದ ಶಬ್ದ ‘ವೇಶ್ಯಾ’ ಶಬ್ದದ ಮೂಲದಿಂದ ಬಂದು ಜನಜನಿತವಾಗಿರುವ ವೇಶ್ಯೆ ಅಥವಾ ಇಂದಿನ ‘ಲೈಂಗಿಕ ವೃತ್ತಿ ಮಹಿಳೆ’ಯು ಅವರ ಬದುಕುಗಳಿಗೆ ಗಂಭೀರವಾದ ಹೊಣೆಯೊಂದನ್ನು ಹೊತ್ತು ಒಳಹೊಕ್ಕಿದೆ. ಆ ನಿಧರ್ಾರ ಮಡಿದ ದಿನ ಅದೆಂಥಾ ದುಗುಡ, ಭಯ, ದ್ವಂದ್ವ ಒಳಗೊಳಗೇ ಹುಟ್ಟಿದ ನಡುಕ, ನಿದ್ದೆಗೆಡಿಸಿ ಬೆಚ್ಚಿಸಿದ ಆ ರಾತ್ರೆಗಳು ನನ್ನೊಳಗೇ ಒಂದು ಸಂಘರ್ಷವನ್ನು ತೀವ್ರಗೊಳಿಸಿದ್ದವು.
ಇಟ್ಟ ಹೆಜ್ಜೆ ಹಿತೆಗೆಯಲಿಲ್ಲ. ಒಂದು ಸಣ್ಣ ಕಿಂಡಿಯೊಳಗಿಂದ ಪ್ರವೇಶಿಸಿ ಭಾರತಾದಾದ್ಯಂತ ತೆರೆದಿಟ್ಟಿರುವ ಆ ಜಾಲದೊಳಗೆ ಮೈಯ್ಯೆಲ್ಲಾ ಕಣ್ಣಾಗಿ ಒಳಹೊಕ್ಕೇ ಬಿಟ್ಟೆ.  ಒಂದು mental distance ಕಾಯ್ದುಕೊಳ್ಳದೇ ಹೋಗಿದ್ದರೆ ಇವತ್ತು ಇಷ್ಟು ಪ್ರಶಾಂತವಾಗಿ ಕುಳಿತು ಆ ಅನುಭವಗಳನ್ನು ನಿಮ್ಮ ಮುಂದೆ ಹರವಿಕೊಳ್ಳಲು ಆಗುತ್ತಿರಲಿಲ್ಲವೇನೋ!
ಲೈಂಗಿಕ ವೃತ್ತಿ, ವೇಶ್ಯೆ, ವೇಶ್ಯಾವಾಟಿಕೆ………. ಶತಶತಮಾನಗಳಿಂದಲೂ ಅದೆಂಥಾ ‘ಕಳಂಕಿತ’ ಹಣೆಪಟ್ಟಿ ಹೊತ್ತುಕೊಂಡೇ ಬರುತ್ತಿದೆ ಎಂಬುದು ನಿಮಗೇ ಗೊತ್ತು. ಅಂಥಾ ‘ಕಳಂಕಿತ’ ಲೇಬಲ್ ಮಧ್ಯೆ ನಾನು ಹೊಕ್ಕಾಗ ಆ ಕಳಂಕದ ನೆರಳು ನನ್ನನ್ನು ಹಿಂಬಾಲಿಸದೇ ಬಿಟ್ಟಿಲ್ಲ. ನನ್ನ ಸುತ್ತಲಿನ ಬದುಕು, ಸಮಾಜ ನನ್ನನ್ನು ಗುರುತಿಸಿದ ರೀತಿ, ಅವರು ನನ್ನನ್ನು ಸ್ವೀಕರಿಸುವ ಪ್ರಕ್ರಿಯೆಯಲ್ಲಿ ನಾನನುಭವಿಸಿದ್ದು ಎಲ್ಲವೂ ಹೆಪ್ಪುಗಳೇ!
”ಸಾರ್, ವೇಶ್ಯಾವಾಟಿಕೆ ಬಗ್ಗೆ ನಾನು ಪಿಹೆಚ್.ಡಿ ಮಾಡ್ಬೇಕೂಂತ ಇದ್ದೀನಿ, ಅವರು ಹಾಗೆ, ಹೀಗೆ ಅವರ ಬದುಕುಗಳ ಸಂಕೀರ್ಣತೆಗಳು, ಸಂಕಷ್ಟಗಳು, ನಿಗೂಢಗಳು…….” ಹೀಗೆ ಮೈಮೇಲೆ ಬಂದವಳಂತೆ ಒದರುತ್ತಿದ್ದೆ. ಎಲ್ಲವನ್ನೂ ಕೇಳಿಸಿಕೊಂಡು ತಮ್ಮ ಕುತೂಹಲಗಳು ತಣಿದ ಮೇಲೆ ಏನಾದ್ರೂ ನೆಪ ಹೇಳಿ ನನ್ನನ್ನು ಸಾಗಿ ಹಾಕಿದ ಅದೆಷ್ಟೋ ಗೈಡ್ಗಳು ನನ್ನ ಕಣ್ಮುಂದೆ ಇದಾರೆ. ಪಾಪ, ಅವರಿಗೆ ಅದ್ಯಾವ ಪರಿಮಿತಿಗಳು, ಆತಂಕಗಳು, ಹಿಂಜರಿತಗಳು ಅಡ್ಡಿ ಬರುತ್ತಿದ್ದವೋ ಕಾಣೆ.
ಸರಿ, ಈ ಗಂಡಸರಾದ್ರೆ ಹಿಂಜರಿತಾರೆ. ಹೆಂಗಸರಾದ್ರೆ! ಅಂತ ಮತ್ತದೇ ರಿಹರ್ಸಲ್ ಮಾಡಿದಾಗ ಟಿಪಿಕಲ್ಲಾಗಿ `ಅವರು ಈ ವೃತ್ತೀನೆ ಯಾಕೆ ಮಾಡ್ಬೇಕು? ಬಿಟ್ಟು ಬಂದು ಬೇರೆ ಕೆಲ್ಸ ಮಾಡ್ಲಿ ಹೇಳು? ಹಾಗಂತ ಎಲ್ರೂ ವೇಶ್ಯಾವೃತ್ತೀನೇ ಮಾಡ್ತಾರಾ?’ ಮುಖ ಗಂಟಿಕ್ಕಿ ಈ ಪ್ರಶ್ನೆಗಳನ್ನು ನನ್ನ ಮೇಲೇ ಒಗೆದಾಗ ‘ಥೂ ಕೆಲ್ಸ ಕೆಡ್ತು’ ಅಂದ್ಕೊಂಡು ಮತ್ತೊಂದು ಹುಡುಕಾಟ ಅಣಿಯಾಗ್ತಿದ್ದೆ. 
ಇನ್ನೂ ಕೆಲವರು ನಾನು ಸಂಶೋಧಕಳೂ, ಮಹಾಪ್ರಬಂಧ ಮಂಡಿಸಬೇಕಾದವಳೂ ಅನ್ನೋದನ್ನು ಮರೆತು ಸಿಕ್ಕಿದ್ದೇ ಛಾನ್ಸು ಅಂತ ಆ ಹುಡ್ಗೀರ ಕೇಸ್ಸ್ಡಡೀಸ್ಗೆ ಅನುವಾಗಿಬಿಡ್ತಿದ್ರು.
ಅಬ್ಬಾ! ಅಂತೂ ಕೊನೆಗೂ ನನ್ನ ಗೈಡ್ ಸಿಕ್ಕಿಯೇ ಬಿಟ್ರು. ಅವರಿಗೆ ಮಾತ್ರ ಪ್ರಥಮ ಭೇಟಿಯಲ್ಲೇ ಕಥೇ ಹೇಳ್ಲಿಲ್ಲ. ಬೇರೆ ಗೈಡ್ಗಳ ಬಗ್ಗೆ ನನಗಾದ ಅನುಭವಗಳನ್ನು ಹೇಳಿಬಿಟ್ಟೆ. ನನ್ನ ಗೈಡ್ ಎಲ್ಲಾ ಕಳಂಕ, ತಾರತಮ್ಯಗಳ ಆತಂಕ ಮೀರಿ ಗೌರವಯುತವಾಗಿಯೇ ನನಗೆ ಮಾರ್ಗದರ್ಶನ ಮಾಡಿದರು ಅನ್ನೋದು ನನ್ನ ಹೆಮ್ಮೆ.
ಒಂದ್ಸಾರಿ ಹಾಸನಕ್ಕೆ ಹೊರಟಿದ್ದೆ, ಅಚಾನಕ್ಕಾಗಿ ವಿದ್ವಾಂಸರೂ, ಪ್ರಗತಿಪರರೂ, ಹಿರಿಯರೂ, ನನ್ನ ಆತ್ಮೀಯರೂ ಆಗಿದ್ದವರೊಬ್ಬರೂ ಬಸ್ಸಲ್ಲಿದ್ದರು. ಪಕ್ಕದಲ್ಲಿ ಕುಳಿತೆ. ಆಗತಾನೆ ಆಫ್ರಿಕಾದ ತರಬೇತುದಾರರು 18 ದಿನಗಳು ಕೊಟ್ಟ ತರಬೇತಿಯೊಂದನ್ನು ಮುಗಿಸಿ ಬಂದಿದ್ದೆ. ಅದು ಹೆಚ್ಐವಿ/ಏಡ್ಸ್ ನಿಯಂತ್ರಣ ಹೊಣೆಗಾರಿಕೆಯ ತರಬೇತಿಯಾಗಿತ್ತು. ಅದೇ ಉಮೇದಿನಲ್ಲಿದ್ದ ನಾನು ಮಾತಾಡಲು ಶುರುವಿಟ್ಟೆ. ಮೊದಮೊದಲು ಹೂಂಗುಟ್ಟಿದವರು ಹುಷಾರಾಗಿಬಿಟ್ರು. ಏಡ್ಸ್, ವೇಶ್ಯೆಯರು…ಶಬ್ದಗಳ ನಡುವೆ ತಮ್ಮನ್ನು ತಾವು ಬಚ್ಚಿಟ್ಟುಕೊಳ್ಳೋಕೆ ಹೆಣಗಾಡ್ತಿದ್ರು. ಕೊನೆಗೂ ತಮ್ಮ ಸೋಗಲಾಡಿ ಕಾಳಜಿ ಬಿಟ್ಟು ಮಡಿವಂತಿಕೆ ಕಚ್ಚೆ ಬಿಗಿ ಮಾಡ್ಕೊಂಡು, `ಇಲ್ಲೆಲ್ಲಾ ನನ್ನ ಪರಿಚಿತರು ಇದಾರೆ, ಒಂದ್ಸಾರಿ ಭೇಟಿಯಾಗಿ ಮಾತಾಡೋಣ’ ಅಂದ್ರು ನೋಡಿ; ನನಗೆ ಆಗ ಅರಿವಾಯ್ತು. ಓ ಇದು ಅತ್ಯಂತ ಉತ್ಕೃಷ್ಟ ಸಂಸ್ಕೃತಿಯ ದೇಶ. ಈಯಪ್ಪಾನೂ ಅದರ ವಾರಸುದಾರನೇ ಅಂತ. ಕೈಯ್ಯಲ್ಲಿದ್ದ `ಜಾಗತೀಕರಣದ ಸವಾಲುಗಳು’ ಪುಸ್ತಕ ತೆರೆದು ಕಣ್ಣಾಡಿಸುವವರಂತೆ ಸ್ತಬ್ಧರಾಗಿಬಿಟ್ರು, ಜಾಗತೀಕರಣದ ಗುತ್ತಿಗೆ ಹಿಡಿದವರಂತೆ!

ಇನ್ನಷ್ಟು