ಅಪಾರ ಕಥೆ: ಮೇಷ್ಟರ ಸೈಕಲ್ಲಿನ ಬೇಬಿ ಸೀಟು

ajpg1ಚಿತ್ರ: ಪೂನೋಮೋ

ನಿವಾರದ ಮಾರ‌‌‌ನಿಂಗ್ ಸ್ಕೂಲಿನ ಎರಡನೇ ಪೀರಿಯಡ್‌ನಲ್ಲಿ ಎಯ್ತ್ ಬಿ ವಿದ್ಯಾರ್ಥಿಗಳಿಗೆ `ಸರಳರೂಪಕ್ಕೆ ತನ್ನಿ’ ಎಂಬ ಲೆಕ್ಕದ ಎರಡನೇ ಸ್ಟೆಪ್ಪನ್ನು ಬೋರ್ಡಿನ ಮೇಲೆ ಮಾಡಿ ಬಾಗಿಲ ಕಡೆ ತಿರುಗಿದ ಗೋಪಾಲಯ್ಯ ಮೇಷ್ಟ್ರು ಅಲ್ಲಿ ಎಷ್ಟೋ ಹೊತ್ತಿನಿಂದ ಎಂಬಂತೆ ನಿಂತಿದ್ದ ತಮ್ಮ ಧರ್ಮ ಪತ್ನಿಯನ್ನು ಕಂಡು ತುಸು ಅಚ್ಚರಿಗೊಂಡರು. ಮರುಕ್ಷಣವೇ ತಮ್ಮ ಇಪ್ಪತ್ತೆಂಟು ವರ್ಷಗಳ ಸರ್ವೀಸಿನಲ್ಲಿ ಶಾರದಮ್ಮ ಎಂದೂ ಯಾವ ಕಾರಣಕ್ಕೂ ತಮ್ಮನ್ನು ಹುಡುಕಿಕೊಂಡು ಶಾಲೆಯ ತನಕ ಬಂದಿರಲಿಲ್ಲವೆಂಬುದು ನೆನಪಾಗಿ ಸಣ್ಣ ಆತಂಕದಿಂದಲೇ ಲೆಕ್ಕವನ್ನು ಅಲ್ಲಿಗೇ ಕೈಬಿಟ್ಟು , ಗಲಾಟೆ ಮಾಡದೆ ಪ್ರಯತ್ನಿಸುತ್ತಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿ ಹೊರಬಂದರು.


ಮೇಷ್ಟ್ರು ಹೊರಗೆ ಬಂದ ತಕ್ಷಣ ಗಾಬರಿಗೊಂಡಿದ್ದ ಶಾರದಮ್ಮ ಮಗಳು ಪೃಥ್ವಿಕಾ ಬೆಳಗ್ಗಿನಿಂದ ಮನೆಯಲ್ಲಿಲ್ಲದ್ದನ್ನೂ ಎರಡು ದಿನದಿಂದ ಅವಳು ಒಂಥರಾ ಇದ್ದುದನ್ನೂ, ತಮಗೆ ತಿಳಿಸದೆ ಎಂದೂ ಹೀಗೆ ಹೊರಗೆ ಹೋದವಳಲ್ಲ ವೆಂಬುದನ್ನೂ ಕಡೆಗೆ ತಮಗೇಕೋ ಸಿಕ್ಕಾಪಟ್ಟೆ ಭಯವಾಗುತ್ತಿದೆಯೆಂಬುದನ್ನೂ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.
`ಗಾಬರಿ ಪಡಬೇಡ, ಪುಚ್ಚಿಯೇನು ಪುಟ್ಟ ಮಗುವೇ? ಕಾಲೇಜು ಓದೋ ಹುಡುಗಿ’ ಎಂಬ ಸಮಾಧಾನದ ಮಾತಾಡಿದರೂ ಮೇಷ್ಟ್ರಿಗೂ ಎಂಥದೋ ಆತಂಕ ನಿಧಾನವಾಗಿ ತುಂಬಿಕೊಳ್ಳುತ್ತಿದ್ದುದು ಅವರು ತಕ್ಷಣ ಹೆಡ್ ಮಾಸ್ಟರ ಕೋಣೆಗೆ ಹೋಗಿ ಅರ್ಧ ದಿನದ ಸಿ ಎಲ್ ಹಾಕಿ ಬಂದದ್ದರಿಂದಲೇ ತಿಳಿಯುವಂತಿತ್ತು.ಮನೆಗೆ ಹೋಗುವ ದಾರಿಯಲ್ಲಿ ಶಾರದಮ್ಮ ಮಗಳು ಇಲ್ಲದಿರುವುದನ್ನು ತಾನು ಮೊದಲು ಹೇಗೆ ಕಂಡುಕೊಂಡೆ ಎಂಬುವದನ್ನ ಪದೇಪದೇ ಅಳುವ ದನಿಯಲ್ಲಿ ವಿವರಿಸುವಾಗ ಮೇಷ್ಟ್ರು ತಾಳ್ಮೆ ಕಳೆದುಕೊಂಡು `ಅಂದರೆ ನಿನ್ನ ಮಾತುಗಳ ಅರ್ಥವೇನು? ನಮ್ಮ ಪುಚ್ಚಿ ಯಾವನೋ ಜೊತೆಗೆ ಓಡಿಹೋಗಿದ್ದಾಳೆ ಅಂತಲಾ? ಎಂದು ಸಿಡಿಮಿಡಿ ಗೊಂಡರು. ಮೇಷ್ಟ್ರು ರೇಗಿದ್ದಕ್ಕೋ ತಮ್ಮ ಮನದಾಳದಲ್ಲಿದ್ದ ಅನುಮಾನವನ್ನು ಆಡಿ ತೋರಿಸಿದ್ದಕ್ಕೋ ಅಂತೂ ಮನೆ ತಲುಪುವ ತನಕ ಶಾರದಮ್ಮ ಮತ್ತೆ ಮಾತಾಡಲಿಲ್ಲ.
ಮನೆಗೆ ಬಂದ ಮೇಷ್ಟರು ಮಗಳ ಕೋಣೆಯಲ್ಲಿ ಏನು ಎಂಬುದು ಗೊತ್ತಿಲ್ಲದೆಯೂ ಏತಕ್ಕಾಗಿಯೋ ಹುಡುಕಾಡಿದರು. ಗೋಡೆಗೆ ನೇತುಹಾಕಿದ ಪೃಥ್ವಿಕಾಳ ಬಟ್ಟೆಗಳನ್ನೂ, ಮುಕ್ತಾಯದ ಹಂತದಲ್ಲಿದ್ದ ಅವಳ ಹೊಸ ಪೇಂಟಿಂಗನ್ನೂ, ಗೋಡೆಗೆ ಹಚ್ಚಿದ ಅವಳ ಇಷ್ಟದ ಸ್ಟೆಫಿಗ್ರಾಫ್‌ಳ ಪೋಸ್ಟರನ್ನೂ ನೋಡುತ್ತಾ ಮೇಷ್ಟ್ರಿಗೆ ಮಗಳು ಒಳಗೆಲ್ಲೋ ಸ್ನಾನ ಮಾಡುತ್ತಿರಬಹುದು ಅಷ್ಟೇ ಎಂದೆನಿಸಿಬಿಟ್ಟಿತು. ಆದರೆ ಸಂಜೆಯಾದರೂ ಪೃಥ್ವಿಕಳ ಸುಳಿವೇ ಇಲ್ಲದಿರಲು ಮನೆಯ ಉಷ್ಣತೆ ನಿಧಾನವಾಗಿಯೇ ಏರ ತೊಡಗಿತು. ಮನೆಯ ಹೊರಗೆ ಒಳಗೆ ಮತ್ತೆ ಗೇಟಿನವರೆಗೂ ಹೋಗಿ ಬಗ್ಗಿ ಬೀದಿಯ ಅಂಚಿನವರೆಗೂ ದೃಷ್ಟಿ ಹಾಯಿಸಿ ಮಾಡುತ್ತಿದ್ದ ಮೇಷ್ಟ್ರಿಗೆ ಇನ್ನೇನು ಅಳಲು ಸಿದ್ಧವಾಗಿ ನಿಂತಿರುವ ತಮ್ಮ ಹೆಂಡತಿಯತ್ತ ನೋಡುವ ಧೈರ್ಯವಾಗಲಿಲ್ಲ.
ಸ್ವಲ್ಪ ಹೊತ್ತಿನ ಬಳಿಕ ಒಳಗೆ ಹೋಗಿ ಪ್ಯಾಂಟು ಧರಿಸಿ ಚಪ್ಪಲಿ ಮೆಟ್ಟಿಕೊಂಡು ಪತ್ನಿಗೆ `ನೋಡು, ಪುಚ್ಚಿ ಅಂಥವಳಲ್ಲ , ನೀನು ಧೈರ್ಯವಾಗಿರು. ನಾನು ಅವಳ ಗೆಳತಿಯರ ಮನೆಗಳಲ್ಲಿ ವಿಚಾರಿಸುತ್ತೀನಿ’ ಎಂದು ಹೇಳಿ ಮನೆಯಿಂದ ಹೊರ ಬಿದ್ದರು. ಟಿವಿಯಲ್ಲಿ ಮೆಗಾಸೀರಿಯಲ್ ನೋಡುತ್ತಾ ಕುಳಿತಿದ್ದ ದಪ್ಪನೆಯ ಹೆಂಗಸರ ಬೆಳಗ್ಗೆಯಿಂದಾ ಕಾಣ್ತಾಯಿಲ್ವಾ? ರಾತ್ರಿ ಇದ್ದಳಾ? ನಿಮಗೆ ಹೇಳದೇ ಹೋದಳಾ? ಎಂಬಂಥ ರಾಗದ ಪ್ರಶ್ನೆಗಳನ್ನು ಎದುರಿಸಲಾಗದೆ ಕಂಗಾಲಾಗಿ ಬೇಗನೆ ಮನೆಗೆ ತಿರುಗಿ ಬಂದ ಮೇಷ್ಟರು ತೀರ ನಿಶ್ಯಕ್ತರಾಗಿದ್ದರು. ಮಬ್ಬುಗತ್ತಲಲ್ಲಿ ಮನೆಯ ಬಾಗಿನಲ್ಲಿ ಎದುರುಬದುರು ಮೌನವಾಗಿ ಕುಳಿತ ದಂಪತಿಗಳಿಗೆ ತಾವು ಕಾಯುತ್ತಾ ಕುಳಿತಿರುವುದು ಮಗಳಿಗಾಗಿಯೋ ಅಥವಾ ಮಗಳ ಕುರಿತ ಸುದ್ದಿಗಾಗಿಯೋ ಎಂಬಂಥ ವಿಚಿತ್ರ ಅನುಮಾನವಾಯಿತು.
ಯಾವ ಕ್ಷಣವನ್ನು ಎದುರಿಸಲು ದಂಪತಿಗಳು ದೇವರಲ್ಲಿ ಧೈರ್ಯ ಬೇಡುತ್ತಾ ಕುಳಿತಿದ್ದರೋ ಆ ಕ್ಷಣ ಬಂದೇಬಿಟ್ಟಿತು. ರಾತ್ರಿ ಎಂಟು ಗಂಟೆಯ ಸಮಯದಲ್ಲಿ ಪೃಥ್ವಿಕಾಳ ಗೆಳತಿ ಎಂದು ಹೇಳಿಕೊಂಡು ಬಂದ ಆ ಹಸಿರು ಲಂಗದ ಹುಡುಗಿ ರೂಪದಲ್ಲಿ . ಅವಳು ಹೇಳಿದ್ದರ ಸಾರಾಂಶವಿಷ್ಟೇ: ಹಿಂದೀ ಮಧ್ಯಮಾ ಪರೀಕ್ಷೆಯ ತಯಾರಿಗೆ ಪದ್ಮನಾಭ ಎಂಬುವನ ಹತ್ತಿರ ಟ್ಯೂಷನ್‌ಗೆಂದು ಹೋಗುತ್ತಿದ್ದ ಪೃಥ್ವಿಕಾ ಕಳೆದೆರಡು ತಿಂಗಳಿನಿಂದ ಅವನನ್ನೇ ಪ್ರೀತಿಸತೊಡಗಿದ್ದಳು. ಮತ್ತು ಮನೆಯಲ್ಲಿ ಹೇಳುವ ಧೈರ್ಯವಾಗದೆ ಈ ದಿನ ಬೆಳಿಗ್ಗೆ ಅವನೊಡನೆ ಎಲ್ಲಿಗೋ ಓಡಿಹೋಗಿದ್ದಳು.
ಹಸಿರು ಲಂಗದ ಹುಡುಗಿ ಯಾವಾಗ ಹೋದಳೋ ತಿಳಿಯಲಿಲ್ಲ.ಮಾಸ್ತರು ಆಕಾಶವನ್ನೇ ದಿಟ್ಟಿಸುತ್ತಾ ಕುಳಿತುಬಿಟ್ಟರು. ಏನೊಂದೂ ಮಾತಾಡದೆ. ಹಿನ್ನೆಲೆಗೆ ಶಾರದಮ್ಮನ ಮುಸಿಮುಸಿ ಅಳು ಇತ್ತು. ಹಾಗೆ ಅದೆಷ್ಟು ಹೊತ್ತು ಕುಳಿತಿದ್ದರೋ ಮೇಷ್ಟರು ಒಮ್ಮೆಲೆ ಪತ್ನಿಯೆಡೆಗೆ ತಿರುಗಿ ಗಡುಸಾದ ದನಿಯಲ್ಲಿ , `ಹೀಗೇ ಅಳ್ತಾ ಕೂತಿರ್ತೀಯಾ ಇಲ್ಲಾ ಎದ್ದು ಅಡಿಗೆ ಮಾಡ್ತೀಯಾ’ ಎಂದು ರೇಗಿದರು. ಆಕೆ ಕುಳಿತಲ್ಲಿಂದ ಏಳದೆ ಅಳುವುದನ್ನು ಮುಂದುವರೆಸಲು ಮೇಷ್ಟ್ರು ವಿಚಿತ್ರ ದನಿಯಲ್ಲಿ ಚೀರಿದರು, `ಯಾವ ಕತ್ತೆ ಮುಂಡೆ ಎಲ್ಲಿ ಹಾಳಾದರೆ ನಂಗೇನು?ನೀನೇನು ಎದ್ದು ಅಡಿಗೆ ಮಾಡ್ತೀಯೋ ಇಲ್ಲ ಗ್ರಹಚಾರ ಬಿಡಿಸ್ಬೇಕೋ?’ ಶಾರದಮ್ಮ ಕಣ್ಣೊರೆಸಿಕೊಳ್ಳುತ್ತಾ ಎದ್ದು ನಡೆದ ಎಷ್ಟೋ ಹೊತ್ತಿನ ನಂತರವೂ ಮೇಷ್ಟ್ರು ಕಂಪಿಸುತ್ತಲೇ ಇದ್ದರು.
    

ಪೃಥ್ವಿಕಾ-ಪುಚ್ಚಿ-ಗೋಪಾಲಯ್ಯ ಮೇಷ್ಟ್ರ ಮುದ್ದಿನ ಒಬ್ಬಳೇ ಮಗಳು. ಅಮ್ಮನಿಗಿಂತ ಅಪ್ಪನನ್ನೇ ಹಚ್ಚಿಕೊಂಡು ಬೆಳೆದ ಹುಡುಗಿ. ಅವಳು ಚಿಕ್ಕವಳಿದ್ದಾಗ ಮೇಷ್ಟ್ರು ತಮ್ಮ ಮಿತ್ರ ವಿಜಯಾ ಬ್ಯಾಂಕ್ ಉದ್ಯೋಗಿ ಸುಬ್ರಮಣ್ಯಂ ಅವರು ಎಲ್ಲಿಂದಲೋ ತರಿಸುತ್ತಿದ್ದ ಸೋವಿಯಟ್ ರಷ್ಯಾದ ನುಣುಪು ಹಾಳೆಗಳ ಬಣ್ಣದ ಚಿತ್ರದ ಪುಸ್ತಕಗಳನ್ನು ಮಗಳಿಗೋಸ್ಕರ ಬೇಡಿ ತರುತ್ತಿದ್ದರು. ಅದರಲ್ಲಿನ ಚಿತ್ರಗಳನ್ನು ನೋಡುವುದು, ನುಣುಪು ಹಾಳೆಗಳನ್ನು ತನ್ನ ನುಣುಪು ಕೆನ್ನೆಗಳಿಗೆ ಒತ್ತಿಕೊಳ್ಳುವುದು ಎಂದರೆ ಪುಟ್ಟ ಪೃಥ್ವಿಕಾಗೆ ಎಲ್ಲಿಲ್ಲದ ಖುಷಿ. ಮಗಳಿಗೆ ಚಿತ್ರಕಲೆಯಲ್ಲಿನ ಆಸಕ್ತಿಯನ್ನು ಕಂಡ ಮಾಸ್ತರು ಅವಳು ನಾಲ್ಕನೇ ಕ್ಲಾಸಿನಲ್ಲಿರುವಾಗ ಒಂದು ದಿನ ಬಣ್ಣದ ಕ್ರೆಯಾನ್ಸ್ ತಂದುಕೊಟ್ಟಿದ್ದರು. ಪೃಥ್ವಿಕಾ ಅವನ್ನು ತೆಗೆದುಕೊಂಡು ಮೇಷ್ಟ್ರ ನೋಟ್ಸ್ ಆಫ್ ಲೆಸೆನ್ ಪುಸ್ತಕದಲ್ಲಿ ದೊಡ್ಡ ಹಸಿರು ಗಿಳಿಯ ಚಿತ್ರ ಮೂಡಿಸಿದ್ದಳು. ಅವತ್ತೇ ಇರಬೇಕು ಮೇಷ್ಟ್ರು ಮೊದಲ ಬಾರಿಗೆ ಮಗಳಿಗೆ ಹೊಡೆದದ್ದು.