ಕಿ ರಂ ‘ಕಾವ್ಯಮಂಡಲ’

lankesh

‘ಋಷ್ಯಶೃಂಗ’ ಕಾರ್ನರ್

ಇನ್ನು ಮುಂದೆ ಆಗಾಗ ಋಷ್ಯಶೃಂಗ

ವ್ಯಸನ
tailo

ನಮ್ಮೂರಲ್ಲೊಬ್ಬ ಟೈಲರ್ ಇದ್ದ. ಬೀರಣ್ಣ, ಬೀರಪ್ಪ ಅಂತೆಲ್ಲ ಅವನಿಗೆ ಅನೇಕ ಹೆಸರು. ಬೀರ ಅಂತ ಅಪ್ಪ ಇಟ್ಟ ಹೆಸರಿರಬೇಕು. ಯಾರ ಜೊತೆಗೂ ಮಾತಾಡುತ್ತಿರಲಿಲ್ಲ. ತನ್ನ ಪಾಡಿಗೆ ಬಟ್ಟೆ ಹೊಲಿಯುತ್ತಿದ್ದ. ಅಳತೆ ತೆಗೆದು, ಒಂದಿಷ್ಟೂ ಅಳತೆ ವ್ಯತ್ಯಾಸವಾಗದೆ ಬಟ್ಟೆ ಹೊಲಿಯುವುದರಲ್ಲಿ ಅವನು ಹೆಸರುಗಾರ.
ಶರ್ಟು, ಪ್ಯಾಂಟು, ಚೂಡಿದಾರ, ರವಕೆ, ಲಂಗ- ಎಲ್ಲವನ್ನೂ ಹೊಲಿದು ಕೊಡುತ್ತಿದ್ದನಾದರೂ ಕ್ರಮೇಣ ಪ್ರಸಿದ್ಧವಾದದ್ದು ಅವನು ಹೊಲಿದುಕೊಡುತ್ತಿದ್ದ ಚಡ್ಡಿ. ಕೊನೆಕೊನೆಗೆ ಚಡ್ಡಿ ಹೊಲಿಸಿಕೊಂಡರೆ ಬೀರಪ್ಪನ ಹತ್ತಿರವೇ ಹೊಲಿಸಿಕೊಳ್ಳಬೇಕು ಅಂತ ಜನ ಮಾತಾಡಿಕೊಳ್ಳತೊಡಗಿದರು.
ಚಡ್ಡಿ ಹೊಲಿದೂ ಹೊಲಿದೂ ಅಭ್ಯಾಸವಾಯಿತೋ, ಮನಸ್ಸಿಗೆ ಬರೀ ಚಡ್ಡಿಯನ್ನಷ್ಟೇ ಹೊಲೀಬೇಕು ಅನ್ನಿಸಿತೋ ಅಥವಾ ಚಡ್ಡಿ ಹೊಲಿಯುವುದೇ ಒಂದು ವ್ಯಸನವಾಯಿತೋ ಏನೋ. ಆಮೇಲಾಮೇಲೆ ಶರ್ಟು ಬಟ್ಟೆ, ರವಕೆ ಬಟ್ಟೆ, ಪ್ಯಾಂಟು ಪೀಸು ಒಯ್ದು ಕೊಟ್ಟರೂ ಬೀರಪ್ಪ ಅದರಲ್ಲಿ ಚಡ್ಡಿ ಹೊಲಿದುಕೊಡುತ್ತಿದ್ದ. ಜನ ಬೈದರು, ಬುದ್ಧಿ ಹೇಳಿದರು, ತಿದ್ದಲು ನೋಡಿದರು. ರೇಗಿದರು.
ಬೀರಪ್ಪ ಬದಲಾಗಲಿಲ್ಲ.
ಇತ್ತೀಚೆಗೆ ಚಡ್ಡಿ ಹೊಲಿಸಬೇಕಾದವರು ಮಾತ್ರ ಬೀರಪ್ಪನ ಬಳಿಗೆ ಬರುತ್ತಾರಂತೆ.
ಏನೇ ಆದ್ರೂ ಚಡ್ಡಿ ಮಾತ್ರ ಸಕತ್ತಾಗೇ ಹೊಲೀತಾನೆ ಬಿಡ್ರೀ ಅಂತ ನಮ್ಮೂರ ಜನ ಗುಂಪು ಸೇರಿದಲ್ಲೆಲ್ಲ, ಚಡ್ಡಿ ಮಾತು ಬಂದಾಗಲೆಲ್ಲ ಬೀರಪ್ಪನನ್ನು ಕೊಂಡಾಡುವುದಿದೆ.ಬೀರಪ್ಪನೂ ಅದರಿಂದಲೇ ಸಂತೋಷ ಹೊಂದಿದನವಂತೆ ಕೇವಲ ಚಡ್ಡಿ ಹೊಲಿಯುವುದಕ್ಕೇ ತನ್ನ ಪ್ರತಿಭೆಯನ್ನು ಸೀಮಿತಗೊಳಿಸಿಕೊಂಡು ಬಿಟ್ಟಿದ್ದಾನೆ.

ಕನ್ನಡಿಯಿಂದ ಎಷ್ಟು ದೂರ?

ಗಾಳಿಬೆಳಕು

ನಟರಾಜ ಹುಳಿಯಾರ್

ಮೈಗಾಡ್! ಭಯವಾಗುತ್ತೆ ಎಂದು ಆ ಕಲಾವಿದೆ ಪುಸ್ತಕ ವಾಪಸ್ ಕೊಟ್ಟಳು. ಕೇವಲ ಎರಡು ದಿನದ ಹಿಂದೆ ‘ಶಿವಗಂಗಾ’ ಎಂಬ ಸ್ತ್ರೀವಾದಿ ಕಾದಂಬರಿಯನ್ನು ಆ ಕಲಾವಿದೆಗೆ ಕೊಟ್ಟಿದ್ದೆ. ಫೆಮಿನಿಸ್ಟ್ ಚಳುವಳಿಗಳಲ್ಲಿ ಭಾಗಿಯಾಗಿರುವ ಚಂಪಾವತಿ ಎಂಬ ಇಂಗ್ಲೀಷ್ ಅಧ್ಯಾಪಕಿ ಪ್ರಕಟಿಸಿರುವ ಕಾದಂಬರಿ ಇದು. ತನ್ನ ವರ್ಣಚಿತ್ರಗಳಲ್ಲಿ ಹೆಣ್ಣಿನ ಅಂತರಂಗ ಕುರಿತ ಪ್ರತಿಮೆಗಳನ್ನೇ ಹೆಚ್ಚು ಬಳಸುವ ಕಲಾವಿದೆಯೊಬ್ಬಳಿಗೆ ಈ ಸ್ತ್ರೀವಾದಿ ಕಾದಂಬರಿಯಿಂದ ಒಳ್ಳೊಳ್ಳೆಯ ಐಡಿಯಾಗಳು ಸಿಗಬಹುದು ಎಂಬ ಭ್ರಮೆಯಲ್ಲಿ ನಾನಿದ್ದರೆ, ಆಕೆ ಆ ಕಾದಂಬರಿ ಓದುವುದನ್ನು ಅರ್ಧಕ್ಕೇ ನಿಲ್ಲಿಸಿ, ಹೆದರಿ ಹಿಂದಕ್ಕೆ ಕೊಟ್ಟಿದ್ದಳು.

ಕಳೆದ ತಿಂಗಳು ಈ ಕಾದಂಬರಿಯ ಕೆಲಭಾಗಗಳನ್ನು ಓದಿದಾಗ ಲೇಖಕಿ ಸ್ವಲ್ಪ ಬೋಲ್ಡ್ ಆಗಿ ಬರೆದಿರುವಂತೆ ಕಂಡರೂ ಬಹಳಷ್ಟು ಕಡೆ ಬರವಣಿಗೆ ಹಸಿಹಸಿಯಾಗಿದೆಯೆನ್ನಿಸಿತ್ತು. ಆ ಬಗ್ಗೆ ಏನೂ ಹೇಳದೆ, ಈ ಕಾದಂಬರಿಯಲ್ಲಿ ಹೆಣ್ಣಿನ ಬಗ್ಗೆ ಕಹಿಸತ್ಯಗಳಿವೆ ಎಂದು ಭಯವಾಗಿಯೆ? ಎಂದೆ.

mirror_images

ಅಯ್ಯೋ, ಅದಲ್ಲ.. ನನ್ನ ಹಲ್ಲು ಎಂದು ಕಲಾವಿದೆ ಇಳಿಮುಖ ಮಾಡಿಕೊಂಡಳು. ಅರ್ಥವಾಗಲಿಲ್ಲ.
ಇನ್ನೇನು ಕಣ್ಣಂಚಿನಿಂದ ಹನಿ ಉರುಳಲಿತ್ತು. ಈಚೆಗೆ ಪರಿಚಯವಾದ ಈ ಕಲಾವಿದೆ ಗಂಭೀರ ಮುಖವನ್ನಷ್ಟೇ ಕಂಡಿದ್ದೆನೇ ಹೊರತು ಅಳು ಮುಖವನ್ನು ಕಂಡಿರಲಿಲ್ಲ. ನಿನ್ನ ಹಲ್ಲು ಏನಾಯಿತು? ಅಂದೆ.

ಪ್ರಶ್ನೆ ಮುಗಿಯುವ ಮುನ್ನವೇ ಆಕೆಯ ಕಣ್ಣಿಂದ ನೀರು ಒಸರತೊಡಗಿತು. ಆ ಕಾದಂಬರೀಲಿ ಬರೋ ಗಂಗಾ ಚಿಕ್ಕವಯಸ್ಸಿನಲ್ಲೇ ಎಲ್ಲ ಹಲ್ಲುಗಳನ್ನೂ ಕೀಳಿಸಿಕೋಬೇಕಾಗುತ್ತೆ. ನಾನು ಮೂರು ದಿವಸದಿಂದ ಯಾವ ಮಾತ್ರೆ ತಗೊಂಡ್ರೂ ಹಲ್ಲುನೋವು ನಿಂತಿಲ್ಲ. ಇಷ್ಟು ಚಿಕ್ಕವಯಸ್ಸಿಗೇ ಹಲ್ಲು ಕಳಕೊಂಡ್ರೆ ಎಂದು ಕಲಾವಿದೆ ಸಣ್ಣಗೆ ಬಿಕ್ಕತೊಡಗಿದಳು.

ನಾನು ನಗತೊಡಗಿದೆ. ಅವಳ ಭಯ ಅರ್ಥವಾಗಿತ್ತು. ಆಕೆಗೆ ಹಲ್ಲು ನೋವಿರುವುದು ಮೊದಲೇ ಗೊತ್ತಿದ್ದರೆ ಈ ಕಾದಂಬರಿ ಕೊಡುತ್ತಿರಲಿಲ್ಲ! ಒಮ್ಮೆ ಜರ್ಮನ್ ವಿಮರ್ಶಕ ವಾಲ್ಟರ್ ಬೆಂಜಮಿನ್ ಗೆ ಹುಷಾರಿರಲಿಲ್ಲ. ಅಂದು ಸಂಜೆ ಅವನು ನಾಟಕಕಾರ ಬ್ರೆಕ್ಟ್ ಮನೆಗೆ ಹೋದಾಗ ಏನು ಓದುತ್ತೀಯ? ಎಂದು ಕೇಳುತ್ತಾನೆ ಬ್ರೆಕ್ಟ್ ದಾಸ್ತೋವಸ್ಕಿ ಯ ‘ಕ್ರೈಂ ಅಂಡ್ ಪನಿಷ್ಮೆಂಟ್’ ಓದುತ್ತಿದ್ದೇನೆ ಎನ್ನುತ್ತಾನೆ ಬೆಂಜಮಿನ್. ತಕ್ಷಣ ಹೌಹಾರುವ ಬ್ರೆಕ್ಟ್ ತಾನು ಹರೆಯದಲ್ಲಿ ಬಹುಕಾಲ ನರಳಿದ ಖಾಯಿಲೆಯೊಂದು ಶುರುವಾಗಿದ್ದು ತನ್ನ ಕ್ಲಾಸ್ಮೇಟನೊಬ್ಬ ಷಿಯಾನೋದಲ್ಲಿ ಷಾಪಿನ್ (ಸಾಮಾನ್ಯವಾಗಿ ಕಳವಳ, ವಿಷಾದಗಳ ಭಾವವನ್ನು ಸೃಷ್ಟಿಸುವ ಸಂಗೀತಗಾರ) ನುಡಿಸಿದಾಗ ಎಂದು ನೆನೆಸಿಕೊಳ್ಳುತ್ತಾ ಹೇಳುತ್ತಾನೆ: “ಷಾಪಿನ್ ಮತ್ತು ದಾಸ್ತೋವ್ಸ್ಕಿ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲರು”.

ಬ್ರೆಕ್ಟ್ ಹೇಳಿದ್ದರಲ್ಲಿ ಅರ್ಧ ತಮಾಷೆ, ಅರ್ಧ ಸತ್ಯ ಎರಡೂ ಇದ್ದಿರಬಹುದು. ಈ ಮಾತನ್ನು ಓದಿದಾಗ, ಖಾಯಿಲೆಯಾದಾಗ ಎಂಥ ಪುಸ್ತಕ ಓದಬೇಕು ಎಂದು ಪ್ರತ್ಯೇಕ ಪಟ್ಟಿಯನ್ನೇ ಮಾಡಿಕೊಳ್ಳಬೇಕೇನೋ ಎನ್ನಿಸಲಾರಂಭಿಸಿತು. ಬೇಂದ್ರೆಯವರ ‘ಒಲವೆ ನಮ್ಮ ಬದುಕು’, ಕಾರಂತರ ‘ಬೆಟ್ಟದ ಜೀವ’, ಕುವೆಂಪು ಅವರ ‘ಕಾನೂರು ಹೆಗ್ಗಡತಿ’, ತೇಜಸ್ವಿಯವರ ‘ಕರ್ವಾಲೋ’, ಲಂಕೇಶರ ‘ಟೀಕೆ-ಟಿಪ್ಪಣಿ’, ಜೇನ್ ಆಸ್ಟಿನ್, ವುಡ್ ಹೌಸ್, ಶೇಕ್ಸ್ಪಿಯರನ ಸಾನೆಟ್ಟುಗಳು ಹೀಗೆ ಖಾಯಿಲೆಯ ಸಮಯದಲ್ಲಿ ತಾಯಿಯಂತೆ ನಮ್ಮನ್ನು ಸಂತೈಸಬಲ್ಲ ಕೆಲವು ಪುಸ್ತಕಗಳು ಹಾಸಿಗೆಯ ಪಕ್ಕದಲ್ಲಿರಬೇಕೆನ್ನಿಸುತ್ತದೆ.

ಆದರೆ ಮೇಲೆ ಹೇಳಿದ ಕಲಾವಿದೆಯ ಸಮಸ್ಯೆ ಒಂದು ಪುಸ್ತಕದ ಪಾತ್ರಗಳು, ಘಟನೆಗಳನ್ನು ನೋಡುವಾಗ ಸರಿಯಾದ ಅಂತರ ಇರಿಸಿಕೊಳ್ಳದ್ದರಿಂದಲೂ ಹುಟ್ಟಿರಬಹುದೆಂದು ಈಗ ಅನ್ನಿಸುತ್ತಿದೆ. ನಾವು ಸಾಹಿತ್ಯವನ್ನು ಕನ್ನಡಿಯೆಂದೂ ಕೈದೀವಿಗೆಯೆಂದೂ ಕರೆದರೂ ಕನ್ನಡಿಯಿಂದ ಎಷ್ಟು ದೂರ ನಿಂತು ಮುಖ ನೋಡಿಕೊಳ್ಳಬೇಕೆಂಬ ಎಚ್ಚರ ಅತ್ಯಂತ ನಿರ್ಣಾಯಕವಾದದ್ದು. ಆದರೆ ನಾವು ಏನೆಲ್ಲ ಅಂತರದ, ವಿಮರ್ಶೆಯ ಮಾತಾಡಿದರೂ ಒಂದು ಕಾದಂಬರಿಯನ್ನೋ, ಕತೆಯನ್ನೋ, ಭಾವಗೀತೆಯನ್ನೋ ಬಹಳಷ್ಟು ಸಲ ಪರ್ಸನಲ್ ಆಗಿಯೇ ಓದುತ್ತಿರುತ್ತೇವೆ. ಒಮ್ಮೆ ‘ಬಾಂಬೆ’ ಎಂಬ ಜನಪ್ರಿಯ ಸಿನಿಮಾ ನೋಡುವಾಗ ತಮಗೆ ಅಳು ಬಂದದ್ದರ  ಬಗ್ಗೆ ಲಂಕೇಶರು ಬರೆದಾಗ, ನನ್ನ ಪರಿಚಿತರೊಬ್ಬರು ಪರವಾಗಿಲ್ಲಯ್ಯ, ನಿಮ್ಮ ಮೇಷ್ಟ್ರು ಕಡು ವಿಚಾರವಾದಿ ಅಂದುಕೊಂಡಿದ್ದರೆ, ಅವರೂ ನಮ್ಮ ಥರವೇ! ಎಂದು ಸಮಧಾನಪಟ್ಟಿದ್ದರು. ಹಾಗಾದರೆ ಒಂದು ಸಿನಿಮಾ ನೋಡುವಾಗ ಕಛೇರಿಗಳಲ್ಲಿ ತಲೆದೂಗುತ್ತಾ ಕೂರುವ ನಾವು ಬರಬರುತ್ತಾ ಯಾಕೆ ತಲೆದೂಗುತ್ತಿದ್ದೇವೆ ಎಂಬುದೇ ಮರೆತು ಹೋಗಿ ಅಭ್ಯಾಸಬಲದಿಂದ ಕತ್ತು ಹಾಕುತ್ತಿರುತ್ತೇವೆ ಎಂದು ಮಿಲನ್ ಕುಂದೇರ ಒಮ್ಮೆ ಹೇಳಿದ್ದ. ಇದೊಂದು ವಿಚಿತ್ರ ಸ್ಥಿತಿ. ನಾಟಕ, ಸಿನಿಮಾ ನೋಡುವಾಗ ಅಥವಾ ಕಾದಂಬರಿ ಓದುವಾಗ ತನ್ಮಯತೆಯಿರದಿದ್ದರೆ ಮನ ಕರಗುವುದಿಲ್ಲ. ಆದರೆ ಮನ ಕರಗಿ ಮಾತುಮಾತಿಗೆ  ಅಳುವವನಿಗೆ ಕೃತಿಯ ನೋಟ ಸಿಕ್ಕುವುದಿಲ್ಲ. ಹಾಗಾದರೆ ಒಂದು ಕೃತಿಯನ್ನು ಖಾಸಗಿ ಅನುಭವದಂತೆ ನೋಡಿಯೂ ವಿಮರ್ಶಾತ್ಮಕವಾಗಿರುವುದು ಸಾಧ್ಯವೆ? ಇನ್ನಷ್ಟು

ಶ್ರೀನಿವಾಸರಾಜು ನೆನಪಿನ ಜಾತ್ರೆ

mestrucoverfinal22

ಚಿ. ಶ್ರೀನಿವಾಸರಾಜು ಕಟ್ಟಿದ ಪ್ರತಿಭೆ ಗೂಡು ಚಳಿ ಗಾಳಿಯನ್ನು ತಡೆದುಕೊಂಡು ಉಳಿದಿದೆ. ಅಂತಹ ಗೂಡಿನ ಗಟ್ಟಿ ಕಾಳುಗಳಾದ ಸಂಚಯದ ಡಿ ವಿ ಪ್ರಹ್ಲಾದ್, ಅಭಿನವದ ರವಿಕುಮಾರ್ ರಾಜು ಮೇಷ್ಟ್ರ ನೆನಪನ್ನು ಕಾಪಿಡುವ ಹಲವಾರು ಕೆಲಸ ಮಾಡುತ್ತಿದ್ದಾರೆ.

ವಿಚಿತ್ರವೆಂದರೆ ಶ್ರೀನಿವಾಸ ರಾಜು ಅವರ ಹುಟ್ಟು ಹಾಗೂ ಸಾವು ಒಂದೇ ದಿನಾಂಕದಂದು ಸಂಭವಿಸಿದೆ. ನವೆಂಬರ್ 28 ಹುಟ್ಟಿದ ದಿನ ಡಿಸೆಂಬರ್ 28 ಅವರು ಇಲ್ಲವಾದ ದಿನ. ಈ ಎರಡೂ ದಿನಗಳಂದು ಅವರ ನೆನಪಿನ ಜಾತ್ರೆ ನಡೆಯಲಿದೆ.

ಈ 28 ರಂದು ಪ್ರಹ್ಲಾದ್ ಬೆಂಗಳೂರಿನಲ್ಲಿ ಶ್ರೀನಿವಾಸರಾಜು ಕುರಿತ ಕವಿತಾ ಗುಚ್ಚವನ್ನು ಹೊರತರುತ್ತಿದ್ದಾರೆ. 28 ಕವಿತೆಗಳನ್ನು ಒಳಗೊಂಡ ‘ನಮ್ಮ ಮೇಷ್ಟ್ರಿಗೆ’ ಸಂಕಲನ ಮುದ್ದಾಗಿ ಹೊರಬಂದಿದೆ. ಅದರಲ್ಲೂ ಆ ಸಂಕಲನದ ರಕ್ಶಾಕವಚದಲ್ಲಿರುವ ಎರಡು ಛಾಯಾಚಿತ್ರಗಳು ಇನ್ನಿಲ್ಲದಂತೆ ಕಾಡುತ್ತವೆ.

ಅದೇ ದಿನ ಧಾರವಾಡ ದಲ್ಲ್ಲಿ ರವಿಕುಮಾರ್ ಅವರು ಶ್ರೀನಿವಾಸ ರಾಜು ಹಾಗೂ ಜಿ ಪಿ ರಾಜರತ್ನಂ ಇಬ್ಬರನ್ನೂ ನೆನಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಡಿಸೆಂಬರ್ 28 ರಂದು ಶ್ರೀನಿವಾಸರಾಜು ಅವರ ಸಮಗ್ರ ಕೃತಿಯನ್ನು ಹೊರತರುವ ಆಲೋಚನೆಯಲ್ಲಿದ್ದಾರೆ.

ಧಾರವಾಡದಲ್ಲಿ ರಾಜರತ್ನಂ

makkaligagi

ಜಿ. ಪಿ. ರಾಜರತ್ನಂ ಜನ್ಮಶತಮಾನೋತ್ಸವ ಸಮಿತಿ
ಗಾಂಧಿ ಸಾಹಿತ್ಯ ಸಂಘ, 8ನೆಯ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-3
ಮತ್ತು
ಹಿರೇಮಲ್ಲೂರು ಈಶ್ವರನ್ ಪ. ಪೂ. ವಿಜ್ಞಾನ ಕಾಲೇಜು
ಕಲ್ಯಾಣನಗರ, ಧಾರವಾಡ

ಇವರ ಸಂಯುಕ್ತ  ಆಶ್ರಯದಲ್ಲಿ
`ಕವಿಗೆ ಕವಿ ಮಣಿವನ್’ ಕಾರ್ಯಕ್ರಮ

ಅಧ್ಯಕ್ಷತೆ:
ಕೆ. ಎಸ್. ಶರ್ಮ

ವಿಶೇಷ  ಉಪನ್ಯಾಸ:

ಜಿ. ಪಿ. ರಾಜರತ್ನಂ ಕಾವ್ಯ ಮತ್ತು ವ್ಯಕ್ತಿತ್ವ ಕುರಿತು
ಶಾಮಸುಂದರ ಬಿದರಕುಂದಿ ಅವರಿಂದ
ಮತ್ತು
ಚಿ. ಶ್ರೀನಿವಾಸರಾಜು ವ್ಯಕ್ತಿತ್ವ ಮತ್ತು ಸಾಹಿತ್ಯ ಪರಿಚಾರಿಕೆ ಕುರಿತು
ರಮಾಕಾಂತ ಜೋಶಿ ಅವರಿಂದ

ರಾಜರತ್ನಂ ಮತ್ತು ಶ್ರೀನಿವಾಸರಾಜು ಅವರ ಕವಿತೆಗಳ ಓದು

ದಿನಾಂಕ: 28-11-೨೦೦೮, ಶುಕ್ರವಾರ
ಸಂಜೆ ೫ಕ್ಕೆ
ಸ್ಥಳ: ಸಭಾಂಗಣ
ಶ್ರೀ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಕಾಲೇಜು
ಕಲ್ಯಾಣನಗರ, ಧಾರವಾಡ
ದಯಮಾಡಿ ಬನ್ನಿ

ಸಹಕಾರ: ಮನೋಹರ ಗ್ರಂಥಮಾಲೆ, ಧಾರವಾಡ ಮತ್ತು ಅಭಿನವ ಬೆಂಗಳೂರು