ಉಗಮಿಸಲಿದೆ ‘ಒಂದು ಬಟ್ಟೆ ಚೂರು’

invit-1

ಉಗಮ ಶ್ರೀನಿವಾಸ್ ಪತ್ರಕರ್ತ. ತುಮಕೂರಿನಲ್ಲಿ ಕನ್ನಡಪ್ರಭ ವರದಿಗಾರರಾಗಿರುವ ಇವರು ಸದಾ ಚಟುವಟಿಕೆಯ ಕೇಂದ್ರ. ಕವಿತೆ, ಕಥೆ, ಜೀವನ ಚರಿತ್ರೆ, ರಂಗಭೂಮಿಯಲ್ಲಿ ಹರಡಿಹೋಗಿರುವ ಉಗಮ ಸದಾ ಗೆಳೆಯರ ದಂಡಿನ ಮಧ್ಯೆ ಇರುವವರು.

ಬಯಲ ಬಾಗಿಲು (ಕವನ) ಅಮೇರಿಕನ್ ಗೊಂಬೆ (ಕಥೆ) ಪೊನ್ನಮ್ಮಾಳ್ (ಆತ್ಮಚರಿತ್ರೆ) ಸಂಕಲನಗಳನ್ನು ಹೊರತಂದಿರುವ ಇವರ ಎರಡನೆಯ ಕವನ ಸಂಕಲನವನ್ನು ವಿ ಎಂ ಮಂಜುನಾಥ್ ಹಾಗೂ ರಾಮಕೃಷ್ಣ ತಮ್ಮ Tree 5 ಪ್ರಕಾಶನದಿಂದ ಹೊರತಂದಿದ್ದಾರೆ. ಈ ಭಾನುವಾರ ಪುಸ್ತಕ ಬಿಡುಗಡೆ ತುಮಕೂರಿನಲ್ಲಿ.

Ugama sreenivas: 94487 92238, 93428 61918

ugamasri@rediffmail.com

ಉಗಮ ಶ್ರೀನಿವಾಸರ ‘ರೂಮಿಯ ನೆವದಲ್ಲಿ ದೇವರ ಹಾವು’ ಲೇಖನಕ್ಕಾಗಿ ಭೇಟಿ ಕೊಡಿ- ಓದುಬಜಾರ್ 

she do spoon work..!

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

 

ಓದಿ ಓದಿ ಸಾಕಾಗಿದೆ. ಪರೀಕ್ಷಾ ಪಿಶಾಚಿ ಹದಿನೆಂಟನೇ ತಾರೀಕಿನವರೆಗೂ ಹರಡಿಕೊಂಡಿದೆ. ‘ನಂಗೆ ಚಿಟ್ಟು ಹಿಡೀತಿದೆ.’ ಎಂದು ಘೋಷಿಸಿ ಪುಸ್ತಕ ಮುಚ್ಚಿಟ್ಟು ಕೂತೆ.

‘ನಾವು ನಳಂದ ಪ್ರೈಮರಿ ಸ್ಕೂಲಿನಲ್ಲಿದ್ದಾಗ ಎಷ್ಟು ಚೆನ್ನಾಗಿತ್ತು ಎಕ್ಸಾಮು ಟೆಸ್ಟು ಅಂತ ತಲೆ ಕೆಡಿಸಿಕೊಳ್ಳುತ್ತಲೇ ಇರಲಿಲ್ಲ.’ ಮಾತಾದಳು ಲಾಲಿ. ಹಾಸ್ಟಲ್ಲಿನಲ್ಲಿ ಹುಡುಗಿಯರು ಮಾತಾಡುವ ವಿಷಯಗಳಿಗೆ ತಲೆ ಬುಡ ಇರುವುದಿಲ್ಲ ಆದರೆ ಹಾಗೆ ಮಾತಾಡುವಾಗ ಒಮ್ಮೊಮ್ಮೆ ಹೊರಬೀಳುವ ವಿಷಯಗಳು ಅತ್ಯಂತ ಕುತೂಹಲಕಾರಿಯಾಗಿರುತ್ತದೆ ಅನ್ನೋದೂ ಒಂದು ವಿಶೇಷ.

ಲಾಲಿ, ಮೂಡಿಗೆರೆಯ ಹುಡುಗಿ ಅವಳು ಮಾತಾಡುತ್ತಾ ಅವಳಿಗರಿವಿಲ್ಲದೆಯೇ ಒಂದು ಇಂಟ್ರೆಸ್ಟಿಂಗ್ ವಿಷಯ ಹೇಳಿದಳು. ಅವಳ ಮಾತುಗಳಲ್ಲೇ ಕೇಳಿ ‘ಏನ್ ಗೊತ್ತಾ ಸಿರಿ, ಒಂದ್ ಸತಿ ನಾವು ಸಿಕ್ಸ್ತ್ ಸ್ಟಾಂಡರ್ಡ್ನಲ್ಲಿದ್ದಾಗ ನಮ್ ನಲಂದ ಸ್ಕೂಲ್ನಲ್ಲಿ ಆರ್ಟ್ಸ್ ಮತ್ತೆ ಸೈನ್ಸ್ ಎಕ್ಸಿಬಿಷನ್ ಮಾಡಿದ್ರು. ಎಲ್ಲರೂ ಪಾರ್ಟಿಸಿಪೇಟ್ ಮಾಡ್ಲೇ ಬೇಕಿತ್ತು ಆಯ್ತಾ. ನನ್ ಫ್ರೆಂಡ್ ಪುನಿ ಕರ್ನಾಟಕ ರೈಟರ್ಸ್ ಬಗ್ಗೆ ಏನೋ ಎಕ್ಸಿಬಿಶನ್ಗೆ ಅಂತ ಮಾಡಿದ್ದ. ಒಂದ್ ಕಡೆ ರೈಟರ್ಸ್ ಹೆಸ್ರು, ಅವ್ರು ಬರ್ದಿರೋ ಬುಕ್ಸ್ ಹೆಸ್ರು, ಇನ್ನೊಂಡ್ ಕಡೆ ಅವ್ರ ಫೊಟೋಸು. ಎಲ್ಲಾ ಜಂಬಲ್ ಆಗಿರತ್ತೆ. ಎರಡು ಎಲೆಕ್ಟ್ರಿಕ್ ವೈರು ಆ ವೈರ್ ನ ಅವ್ರ ಹೆಸ್ರು ಮತ್ತೆ ಫೋಟೋಗೆ ಟಚ್ ಮಾಡಿದ್ರೆ ಮಾತ್ರ ಲೈಟ್ ಹತ್ಕೊಳುತ್ತೆ. ಯಾರದೋ ಫೊಟೊ ಯಾವ್ದೋ ರೈಟರ್ಸ್ ಗೆ ಟಚ್ ಮಾಡಿದ್ರೆ ಲೈಟ್ ಆನ್ ಆಗಲ್ಲ. ಆ ಥರ ಮಾಡಿದ್ದ.

ಜಡ್ಜ್ ಬಂದ್ರು, ಇವ್ನು ಫುಲ್ ಎಕ್ಸ್ಪ್ಲೈನ್ ಮಡಿದ… ‘ಇವ್ರು ಕುವೆಂಪು ಅಂತ ಕುಪ್ಪಳ್ಳಿಯೋರು, ಇವ್ರು ನೋಡಿ ಕುವೆಂಪು ಮಗ, ಇಲ್ಲೇ ಮೂಡ್ಗೆರೇಲೇ ಇರ್ತಾರೆ. ತುಂಬಾ ದೊಡ್ಡ ರೈಟರ್.’ ಅಂತೆಲ್ಲಾ ಎಕ್ಸ್ಪ್ಲೈನ್ ಮಾಡ್ತಿದಾನೆ, ಆ ಜಡ್ಜು ‘ನಾನೇ ಕಣಪ್ಪಾ ಪೂರ್ಣ ಚಂದ್ರ ತೇಜಸ್ವಿ’ ಅಂದ್ರು ನಮ್ಗೆಲ್ಲಾ ಶಾಕು.’ ಅಂದ್ಲು. ಚಿಕ್ಕಮಗಳೂರು ಮೂಡಿಗೆರೆಯ ದಾರಿಗಳಲ್ಲಿ ಓಡಾಡುತ್ತಾ ತೇಜಸ್ವಿಯವರ ಕಥೆಗಳಲ್ಲಿ ಬರುವ ‘ಭೂತನ ಕಾಡು’ ಮುಂತಾದ ಎಸ್ಟೇಟ್ಗಳನ್ನು ನೋಡಿ (ಬರೀ ಹೊರಗಡೆಯಿಂದ) ನಾನೇ ಧನ್ಯಳು ಎಂದು ಬೀಗುತ್ತಿದ್ದ ನನಗೆ ಈ ಹುಡುಗಿ ತೇಜಸ್ವಿಯವರನ್ನೇ ಅಷ್ಟು ಹತ್ತಿರದಿಂದ ನೋಡಿರುವುದನ್ನು ಕೇಳಿ ಹೊಟ್ಟೆ ಕಿಚ್ಚಾಯಿತು.

spoons

ಅರುಣ್ ಭಾರದ್ವಾಜ್ ತೇಜಸ್ವಿಯವರ ಬಗ್ಗೆ ಮತ್ತೊಂದು ಕಥೆ ಹೇಳಿದ್ದ ‘ಚಿತ್ರದುರ್ಗದಿಂದ ಯಾವುದೋ ಸ್ಕೂಲಿನ ಮಕ್ಕಳನ್ನು ಧರ್ಮಸ್ಥಳ ಮಂಗಳೂರು ಉಡುಪಿ ಇಲ್ಲೆಲ್ಲಾ ಟೂರ್ ಕರೆದುಕೊಂಡು ಹೋಗಿದ್ದರಂತೆ. ವಾಪಸ್ಸು ಬರುವಾಗ ಮೂಡಿಗೆರೆಯ ಬಳಿ, ಬಸ್ಸಿನಲ್ಲಿದ್ದ ಒಬ್ಬ ಟೀಚರ್ಗೆ ಹೇಗಿದ್ದರೂ ಇಲ್ಲಿವರೆಗೂ ಬಂದಿದ್ದೇವೆ ಮಕ್ಕಳಿಗೆ ತೇಜಸ್ವಿಯವರನ್ನು ತೋರಿಸಿಕೊಂಡು ಹೋದರೆ ಹೇಗೆ ಎನ್ನಿಸಿರಬೇಕು. ಅವರ ಮನೆ ದಾರಿ ಗೊತ್ತಿಲ್ಲವಲ್ಲ ಬಸ್ಸು ನಿಲ್ಲಿಸಿ ಅಲ್ಲಿ ನೆಡೆದು ಹೋಗುತ್ತಿದ್ದ ದಾರಿಹೋಕನೊಬ್ಬನನ್ನು ತಡೆದು. ತೇಜಸ್ವಿ ಮನೆ ಎಲ್ಲಿದೆ ಗೊತ್ತಾ? ನಾವು ಚಿತ್ರದುರ್ಗದಿಂದ ಬಂದಿದೀವಿ ಮಕ್ಕಳಿಗೆಲ್ಲಾ ಅವರನ್ನು ತೋರಿಸಿಕೊಂಡು ಹೋಗೋಣ ಅಂತ. ಅಂದರು ಆ ಮಾಸ್ಟ್ರು.

ಆಯ್ತು ಮಕ್ಕಳನ್ನೆಲ್ಲಾ ಕೆಳಗಿಳಿಸಿ ಅಂದ ದಾರಿ ಹೋಕ. ಸರಿ ಇವರು ಮಕ್ಕಳನ್ನೆಲ್ಲಾ ಸಾಲಾಗಿ ಇಳಿಸುವ ಹೊತ್ತಿಗೆ ದಾರಿ ತೋರಿಸುತ್ತೇನೆಂದವ ಹತ್ತಿರದಲ್ಲೇ ಇದ್ದ ದೊಡ್ಡ ಮರಳು ರಾಶಿಯ ಮೇಲೆ ಹತ್ತಿ ನಿಂತು ನೋಡಿ ‘ನಾನೇ ತೇಜಸ್ವಿ ಮನೆವರ್ಗೂ ಬರಕ್ ಹೋಗ್ಬೇಡಿ.’ ಅಂದ್ರಂತೆ. ಕೇಳಿ ಆಶ್ಚರ್ಯ ಆಯ್ತು ನಂಗೆ. ಹೀಗೆ ಇದ್ದೂ ಓದುಗರನ್ನು ಉಳಿಸಿಕೊಳ್ಳಲು ಅವರಿಗೆ ಮಾತ್ರ ಸಾಧ್ಯವಾಯಿತಾ ಅನ್ನಿಸುತ್ತೆ.

ಮತ್ತೆ ಮಾತು ನನ್ನ ಪ್ರೈಮರಿ ಸ್ಕೂಲಿನ ಬಗ್ಗೆ ತಿರುಗಿತು. ನಮಗೆಲ್ಲಾ ಇಂಗ್ಲೀಷ್ನಲ್ಲೇ ಮಾತಾಡಬೇಕೆಂದು ಸ್ಟ್ರಿಕ್ಟ್ ರೂಲ್ಸು. ಇಲ್ಲ ಅಂದ್ರೆ ಒಂದು ಕನ್ನಡ ಪದಕ್ಕೆ 25 ಪೈಸ ಫೈನು. ನಾವು ಮಾತಾಡ್ತಿದ್ದ ರೀತಿ ಹೇಗೆ see yaa what what all telling ya ಅಂದ್ರೆ ನೋಡೆ ಏನೇನೋ ಹೇಳ್ತಾಳೆ ಅಂತ. Miss tell. you wait  ಅಂದ್ರೆ ಮಿಸ್ಸಿಗೆ ಹೇಳ್ತಿನಿ ತಡಿ, she do spoon work ಅನ್ನೋದು ಅವಳು ಚಮಚಗಿರಿ ಮಾಡ್ತಾಳೆಯ ಇಂಗ್ಲೀಶಾನುವಾದ. ಈಗ ನೆನಸಿಕೊಂಡರೆ ನಗು ಬರುತ್ತೆ. ಹೈಸ್ಕೂಲು ಮುಗಿಸಿ ಕಾಲೇಜಿಗೆ ಸೇರುವ ಹೊತ್ತಿಗೆ ನಮ್ಮನ್ನು ಬಿಟ್ಟು ಈ ಲೋಕದಲ್ಲಿ ಯಾರಿಗೂ ಇಂಗ್ಲೀಷ್ ಬರುವುದಿಲ್ಲವೆಂಬ ಅಹಂಕಾರದಲ್ಲಿದ್ದೆವು.

ಪಿ.ಯು.ಸಿ ಯಲ್ಲಿ ಬಯಾಲಜಿ ಪಾಠ ಮಾಡಲು ಬರುತ್ತಿದ್ದ ಲೆಕ್ಚರರ್ಗೆ ಸರಿಯಾಗಿ ಇಂಗ್ಲೀಶ್ ಬರುತ್ತಿರಲಿಲ್ಲ. ಅವರ ಸಬ್ಜೆಕ್ಟ್ ನಾಲೆಡ್ಜ್ ತುಂಬಾ ಚೆನ್ನಾಗಿತ್ತು. ಪಾಸ್ಟ್ ಟೆನ್ಸ್ ಪ್ರೆಸೆಂಟ್ ಟೆನ್ಸ್ ಫ್ಯೂಚರ್ ಟೆನ್ಸುಗಳ ಪರಿವೆಯೇ ಇಲ್ಲದೆ ಮನ್ಸ್ಸಿಗೆ ಬಂದಂತೆ ಹೇಳುತ್ತಿದ್ದರು. ಅವರು ತಪ್ಪು ಹೇಳಿದ ವಾಕ್ಯಗಳನ್ನು ಬರೆದುಕೊಂಡು ಮುಸಿ ಮುಸಿ ನಗುವುದು ನಮಗೆ ಅಭ್ಯಾಸವಾಗಿ ಹೋಗಿತ್ತು. ಅವತ್ತೊಂದು ದಿವಸ what I am going to teach yesterday I am repeated  ಅನ್ನಬೇಕೆ? ಯಥಾ ಪ್ರಕಾರ ಕೊನೆಯ ಬೆಂಚಿನಲ್ಲಿ ಕೂತಿದ್ದ ನಾನೂ ರೀನ ಮುಸಿ ಮುಸಿ ನಗಲು ಶುರು. ಅವರಿಗೆ ಸಿಟ್ಟು ನೆತ್ತಿಗೇರಿತು. Both of you three get out of the class ಅಂದರು.

ನಾನು ಫಸ್ಟ್ ಅಥವಾ ಸೆಕೆಂಡ್ ಸ್ಟ್ಯಾಂಡರ್ಡ್ ಇದ್ದೆ ಅನ್ಸುತ್ತೆ. ಅಜ್ಜನ ಮನೆಗೆ ಹೋಗಿದ್ದೆವು. ಅಜ್ಜನ ಮನೆಯಿರುವುದು ತೆಂಗಿನ ತೋಟದ ಮಧ್ಯದಲ್ಲಿ. ರಜ ಬಂತೆಂದರೆ ತೋಟದಲ್ಲಿ ಅಲೆಯುವುದೇ ಕೆಲಸ. ಅವತ್ತು ಒಂದು ದಿನ ಬೆಳಗೆದ್ದು ಎಂದಿನಂತೆ ಹಲ್ಲುಜ್ಜಿ ತಾತನಿಗೆ ಮುತ್ತು ಕೊಟ್ಟು ಹೋಗೋಣ ಅಂತ ಬಂದೆ. ಅದು ಎದ್ದು ಹಲ್ಲುಜ್ಜಿದ ತಕ್ಷಣ ಮಕ್ಕಳೆಲ್ಲಾ ಮಾಡುತ್ತಿದ್ದ ರೋಟೀನು. ಯಾರು ಬೆಳ್ಗೆದ್ದು ತಾತಂಗೆ ಮೊದ್ಲು ಮುತ್ತು ಕೊಡ್ತಾರೆ ಅಂತ ನಾವು ಮೊಮ್ಮಕ್ಕಳಿಗೆಲ್ಲ ಕಾಂಪಿಟೀಷನ್ ಬೇರೆ.

ಅವತ್ತು ನಾನೇ ಫಸ್ಟ್ ಎದ್ದಿದ್ದೆ ಹೊರಗೆ ಈಸಿ ಚೇರ್ ಮೇಲೆ ಕೂತಿದ್ದ ತಾತನ ಬಳಿ ಹೋದೆ. ತಾತ ಎಂದಿನಂತೆ ತಮ್ಮ ರಾಜ ಠೀವಿಯಲ್ಲಿ ಎದುರು ನಿಂತಿದ್ದ ದೇವರಾಜ ನಮ್ಮ ಟ್ರಾಕ್ಟರ್ ಡ್ರೈವರಿಗೆ ಏನೋ ‘ಕಷ್ಟ ಪಡ್ದಿದ್ರೆ ಏನೂ ಆಗಲ್ಲ, ಕೈ ಕೆಸರಾದರೆ ಬಾಯಿ ಮೊಸರು.’ ಅಂತ ಹೇಳುತ್ತಿದ್ದರು. ಮೊಸರು ಇಷ್ಟು ಈಸಿಯಾಗಿ ಸಿಗುತ್ತೆ ಅಂತ ನಂಗೆ ಗೊತ್ತೇ ಇರ್ಲಿಲ್ಲ! ಹೋಗಿ ನನ್ನ ದೊಡ್ಡಮ್ಮನ ಮಗ ಕಿಶೋರ ನನ್ನೂ ಏಳಿಸಿದೆ ಅವನೂ ನಾನೂ ಒಂದೇ ಕ್ಲಾಸು ಮೊಸರೆಂದರೆ ರಾವು. ತಾತ ದೇವರಾಜನಿಗೆ ಹೇಳುತ್ತಿದ್ದನ್ನು ಹೇಳಿದೆ. ಅವನು ಹಲ್ಲುಜ್ಜದೆಯೇ ನನ್ನ ಜೊತೆ ಬಂದ ಅವನು ನಾನು ಕಷ್ಟಪಟ್ಟು ಬಕೀಟಲ್ಲಿ ನೀರು ತಂದು ಮಣ್ಣಿನ ಮೇಲೆ ಸುರಿದು ಮಣ್ಣು ಕಲಿಸೋಕ್ಕೆ ಶುರು… ಕೈ ಎಲ್ಲಾ ಕಡಿಯೋಕ್ಕೆ ಶುರುವಾಯಿತು. ಆದ್ರೂ ಮೊಸ್ರು ಸಿಗುತ್ತಲ್ಲಾ ಅಂತ ಕಲ್ಸಿದ್ದೇ ಕಲ್ಸಿದ್ದು.

ಅಷ್ಟೊತ್ತಿಗೆ ಕಾಣೆಯಾದ ನನ್ನನ್ನೂ ಕಿಶೋರ ನ್ನೂ ಹುಡುಕಿಕೊಂಡು ಅಮ್ಮ, ದೊಡಮ್ಮ ಬಂದರು. ನಾವಿಬ್ರು ನೋಡಿದರೆ ಮೈ ಕೈ ಎಲ್ಲಾ ಕೆಸ್ರು ಮಾಡ್ಕೊಂಡ್ ಕೂತಿದೀವಿ. ನಮ್ಮಿಬ್ರಿಗೂ ಸರ್ಯಾಗಿ ಬಾರ್ಸಕ್ ಶುರು ಮಾಡಿದ್ರು. ಕಿಶೋರ್ ಗೆ ಮಣ್ಣು ಮುಟ್ಟಿದ್ರೆ ಮೈ ಪೂರ ಅಲರ್ಜಿ. ದೊಡ್ಡಮ್ಮನ ಬೈಗುಳ ಏಟು ತಾಳಲಾರದೆ ಅವನು ಸಿರಿನೇ ಹೇಳಿದ್ದು ಅಂತ ತಪ್ಪನ್ನೆಲ್ಲಾ ನನ್ನ ಮೇಲೆ ಹಾಕಿದ. ತಾತಾನೇ ಹೇಳಿದ್ದು ಆ ಥರ ಅಂತ ಎಷ್ಟ್ ಹೇಳಿದ್ರೂ ಅಮ್ಮ ನಂಬ್ಲೇ ಇಲ್ಲ.. ಆಮೇಲೆ ಕಾರಣ ಗೊತ್ತಾಗಿ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. ಇವತ್ತಿಗೂ ಕೈ ಕೆಸರಾದರೆ ಬಾಯಿ ಮೊಸರು ಅಂತ ಆಡ್ಕೊಂತಾಳೆ ಅಮ್ಮ…

ಇದನ್ನೆಲ್ಲಾ ಹೇಳುತ್ತಿದ್ದೆ ಎಲ್ಲಾರೂ ತಾವು ಸ್ಕೂಲಿನಲ್ಲಿದ್ದಾಗ ಮಾಡುತ್ತಿದ್ದ ಕಿತಾಪತಿಗಳ ಬಗ್ಗೆ ಹೇಳಿಕೊಂಡರು. ಮಲ್ಕೊಳಣ ಬನ್ನಿ ಮೂರು ಗಂಟೆ ಆಯ್ತು. ಇವತ್ತ ರಾತ್ರಿ ಅಂತೂ ಓದ್ಲಿಲ್ಲ ನಾಳೆ ಆದ್ರೂ ಓದ್ಕೊಳೊಣ ಇನ್ನು ಎರೆಡೇ ದಿನ ಉಳ್ದಿರೊದು ಅಂತ ಎಚ್ಚರಿಸಿದಳು ಮಧು..

ಮಲಗಿದವಳಿಗೆ ಪರೀಕ್ಷೆಗಳಿಗಿಂತ ತಯಾರಿಯೇ ಹೆಚ್ಚಾಯಿತು ಅನ್ನಿಸುತ್ತಿತ್ತು. ಜೀವನದಲ್ಲೂ ಹಾಗೇ ಅಲ್ಲವೆ?

ಇದು ಬೆಳಕು ನೀಡುವ ‘ಬೆಂಕಿ ಕಡ್ಡಿ’

swamyಚಂದ ಕವಿತೆ ಬರೆಯುವ ಡೀ ಎಸ್ ರಾಮಸ್ವಾಮಿ ಬ್ಲಾಗ್ ಲೋಕ ಪ್ರವೇಶಿಸಿದ್ದಾರೆ-ಬೆಂಕಿ ಕಡ್ಡಿ ಹಿಡಿದು.

ಬೆಂಕಿ ಕಡ್ಡಿ- ಬೆಳಕು,ಶಾಖ ಮತ್ತು ಉರಿಯ ಚಿಕ್ಕತುಂಡು. ನಾವೆಲ್ಲರೂ ಈ ಲೌಕಿಕದ ಬೆಂಕಿಯಲ್ಲಿ ಬೇಯುತ್ತಲೇ ಮತ್ತೊಂದು ಬೆಳಕು, ಶಾಖ ಮತ್ತು ಉರಿಯನ್ನು ಸೃಜಿಸುತ್ತಿರುವವರು.ಅದಕ್ಕೆಂದೇ ಈ ಬರಹಗಳ ಶೀರ್ಷಿಕೆ “ಬೆಂಕಿಕಡ್ಡಿ”. ಈಗಾಗಲೇ ಪ್ರಕಟಿಸಿರುವ ಸಂಕಲನಗಳಿಂದ ಮತ್ತು ಹೊಸ ಪದ್ಯ ಹಾಗೇ ಆಕಾಶವಾಣಿಯ ಚಿಂತನಕ್ಕೆ ಬರೆದ ಲೇಖನಗಳನ್ನೂ ಸೇರಿಸುವ ಇರಾದೆ ಈ ಬ್ಲಾಗಿಗನಿಗೆ…ಎನ್ನುವ ರಾಮಸ್ವಾಮಿ ಎರಡು ಕವನ ಸಂಕಲನಗಳು- ’ಮರೆತ ಮಾತು’(೨೦೦೨)’ಉಳಿದಪ್ರತಿಮೆಗಳು’ (೨೦೦೭) ಗಳನ್ನು ಹೊರ ತಂದಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ. ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಕಾಂತಾವರ ಕನ್ನಡ ಸಂಘವು ಹಸ್ತಪ್ರತಿಗೆ ನೀಡುವ ಮುದ್ದಣ ಕಾವ್ಯ ಪುರಸ್ಕಾರ ೨೦೦೬ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ ೨೦೦೪, ೨೦೦೫ ಮತ್ತು ೨೦೦೮ರ ಬಹುಮಾನ. ಆಕಾಶವಾಣಿ ಹಾಸನ ಕೇಂದ್ರ ೧೦೦ಕ್ಕೂ ಹೆಚ್ಚು ಚಿಂತನಗಳನ್ನು ಪ್ರಸಾರ ಮಾಡಿದೆ.

ರಾಮಸ್ವಾಮಿ ಅವರ ಕವಿತೆಯೊಂದು ಇಲ್ಲಿದೆ… 

ಅಳತೆ

angula-hulu

ಹಿಂದೆಂದೋ ರಾಮಾನುಜನ್ ಪರಿಚಯಿಸಿದ್ದ
ಆ ಅದೇ ಅಂಗುಲದ ಹುಳು
ಮೊನ್ನೆ ಮಾರ್ಕೆಟ್ಟಲ್ಲಿ ಅಚಾನಕ್ಕಾಗಿ ಸಿಕ್ಕು
ಉಭಯ ಕುಶಲೋಪರಿ ಕೇಳಿತು:

ಗುಬ್ಬಚ್ಚಿಯ ಬಾಲ, ಮುದಿ ಗೂಬೆಯ ಹೊಟ್ಟೆ
ಹಂಸದ ಕತ್ತು, ಹಾಗೇ ಹಾಲಕ್ಕಿಯ ಮೂಗು
ಕೊಕ್ಕರೆಯಂತೇ ಇದ್ದ ಇನ್ಯಾರದೋ ತೆಳ್ಳನೆಯ ಕಾಲು,
ಉದ್ದವಾಗುವ ನಾಲಿಗೆ, ಕುಕ್ಕುವ ಕೊಕ್ಕು,
ಯೋನಿ, ಲಿಂಗಗಳನ್ನಳೆಯುವಾಗಲೂ ಸಂತ-
ನಂತಿದ್ದೂ, ಹಾಡನ್ನಳೆಯುವ ನೆವದಲ್ಲಲೆದೂ ಅಳೆದೂ
ಸವೆದಿರುವ ತನ್ನ ಅಳತೆಯ ಪಟ್ಟಿ-
ಗೆ ಪ್ರಮಾಣ ಪತ್ರ ಕೊಟ್ಟವರ ಪಟ್ಟಿ ಬಿಡಿಸಿಟ್ಟಿತು.

ಹಾಗೇ ಬುದ್ಧ, ಬಸವ, ಗಾಂಧಿ, ಏಸು
ಕನಕ, ಪುರಮ್ದರರ ಜೊತೆಗೇ ಬೆರೆವ
ಅದೆಷ್ಟೆಷ್ಟೋ ಹೆಸರುಗಳನುದ್ಧರಿಸಿತು.
ನಿಖರವಾಗದವರಳತೆ ಸೋತೆನೆಂದಿತು.

ಇಷ್ಟಿಷ್ಟೇ ಎಂದು ತುಂಬಿಸಿಕೊಂಡಿದ್ದ ಕೈಯ ಚೀಲ
ಭಾರವೆನ್ನಿಸಿ ಕೈ ಬದಲಿಸಲು, ದೃಷ್ಟಿ ಬದಲಿಸಿದೆ.

 

ಆ ಹುಳು ಮತ್ತೆಲ್ಲೋ ಮರೆಯಾಗಿ ಹೋಯಿತು!

ಎಲ್ಲರೊಳಗೊಂದು ಕಥೆ..

ತಿಳಿಯ ಹೇಳುವೆ ಇಷ್ಟಕತೆಯನು

image001
`ಎಲ್ಲರೊಳಗೂ ಒಂದೆ ಕತೆ ಇರುತ್ತದೆ’ ಎಂದಿದ್ದರು ಹಿಂದೊಮ್ಮೆ ಖ್ಯಾತ ಕತೆಗಾರ ಯಶವಂತ ಚಿತ್ತಾಲ. `ಅಮ್ಮಾ ಇವತ್ತು ಶಾಲೆಯಲ್ಲಿ ಏನಾಯ್ತು ಗೊತ್ತಾ’ ಎಂದು ಹೇಳುತ್ತಾ ಶಾಲೆಯಿಂದ ಕಣ್ಣರಳಿಸಿಕೊಂಡು ಓಡಿ ಬರುವ ಮಗುವಿನಲ್ಲೂ ಒಂದು ಕತೆ ಇರುತ್ತದೆ ಎಂದು ಅವರು ಒಂದು ಸಲ ಹೇಳಿದ್ದರು.
ಕತೆ ಯಾರಲ್ಲೂ ಇರಬಹುದು. ಅಂಥ ಕತೆಗಳನ್ನು ಆಗಾಗ ನೀಡುವ ಪ್ರಯತ್ನವನ್ನು `ಕಳ್ಳಕುಳ್ಳ’ ಮಾಡಲಿದೆ. ಒಂದಿಷ್ಟು ರೀಮೇಕ್‌, ಒಂದಿಷ್ಟು ಸ್ವಮೇಕ್‌ ಕತೆಗಳು ಹಾಗೇ ಹರಿದು ಬರಲಿವೆ ಈ ಬ್ಲಾಗಂಗಡಿಯಲ್ಲಿ. ಆ ಮಾಲಿಕೆಯ ಮೊದಲ ಕತೆಯ ಹೆಸರು: ಗುರುವಿನ ಗುಲಾಮನಾಗುವ ತನಕ. 

 

ಸಂಪೂರ್ಣ ಓದಿಗೆ ಭೇಟಿ ಕೊಡಿ : ಕಳ್ಳ ಕುಳ್ಳ 

+++

ಅಪಭ್ರಂಶ

motugode-2

ಇಂದಿಗೂ ಕೆಲವರಿಗೆ ಕೆಲವು ಹೆಸರುಗಳು ಏಕೆ ಬಂತೆಂದು ಗೊತ್ತೇ ಇರುವುದಿಲ್ಲ.

“ಬಾಯ್ಲರ್ ಕೋಳಿ ಹಾಕಿದ ಮೇಲೆ ಚೆನ್ನಾಗಿ ದುಡ್ಡು ಮಾಡ್ತಿದ್ದೀನಿ ಸಾರ್. ನಾಟಿ ಕೋಳಿ ಏನೂ ಪ್ರಯೋಜನ ಇಲ್ಲ” ಎಂದು ಒಬ್ಬ ಕೋಳಿ ಸಾಕುವವನು ಹೇಳಿದ. ನಾನು ಇದೆಂಥದು ಬಾಯ್ಲರ್ ಕೋಳಿ ಎಂದು ಚಕಿತನಾಗದೇ ಇರಲು ಸಾಧ್ಯವೇ ಇಲ್ಲ. ಕೋಳಿಯನ್ನು ಬಾಯ್ಲರಿನಲ್ಲಿ ಹಾಕಿ ಬೇಯಿಸಿ ನಂತರ ಬೆಂದ ಕೋಳಿಯನ್ನು ಮಾರುವುದೇ ಎಂಬುವಷ್ಟರ ಮಟ್ಟಿಗೆ ಯೋಚಿಸಿದೆ. ಆದರೆ ನಂತರ ಪಿ.ಯು.ಸಿ. ಪಠ್ಯಪುಸ್ತಕವನ್ನು ತಿರುವಿಹಾಕಿದಾಗ ಗೊತ್ತಾಯಿತು ಆತ ಹೇಳ ಬಯಸುತ್ತಿದ್ದುದು “ಬ್ರಾಯ್ಲರ್ ಕೋಳಿ” ಎಂಬ ಜಾತಿಯ ಕೋಳಿಯ ಬಗ್ಗೆ ಎಂದು.

ಸಂಪೂರ್ಣ ಓದಿಗೆ ಭೇಟಿ ಕೊಡಿ : ಮೋಟುಗೋಡೆಯಾಚೆ ಇಣುಕಿ 

“ಸ್ಲಂ ಬಾಲ”ನಿಗೆ ಫುಲ್ ಮಾರ್ಕ್ಸ್

q

ನಾನು ಚಿತ್ರ ನೋಡಿದೆ, ಮತ್ತು ತುಂಬ ಇಷ್ಟ ಆಯಿತು. ಆದರೆ ನಾನೊಬ್ಬ ಅಸಿಸ್ಟಂಟ್ ಡೈರೆಕ್ಟರ್ ಆಗಿ ಚಿತ್ರವನ್ನು ವಿಶ್ಲೇಷಿಸುವುದಾದರೆ ಚಿತ್ರದಲ್ಲಿ ಒಳ್ಳೆ ಸ್ಕ್ರೀನ್ ಪ್ಲೇ ಖಂಡಿತಾ ಇದೆ, ಚಿತ್ರದ ಒಳ ತಿರುಳು ಕೂಡಾ ಸುಪರ್ಬ್. ಪ್ರೇಕ್ಷಕ ಮಹಾಶಯ ಚಿತ್ರ ನೋಡುವಾಗ ಅದರ ಫೋರ್ಸ್ ಮತ್ತು ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ಇರಬೇಕಾಗುತ್ತದೆ. ಚಿತ್ರ ಸ್ವಲ್ಪ ಮಟ್ಟಿಗೆ ಗಿರೀಶ್ ಕಾರ್ನಾಡರ ಚಿತ್ರದಂತೆ ಮನಸ್ಸಿನ ಭಾವನೆಗಳನ್ನು ಹೊರತಂದಿದೆ. ಇನ್ನೊಂದು ಕಡೆ ಪೂರ್ಣ ಪ್ರಮಾಣದ ರೌಡಿಸಂ ಕಥೆ ಕೂಡ ಆಗಿಲ್ಲ ಅನ್ನೋದು ಎದ್ದು ಕಾಣಿಸುತ್ತದೆ.

ಚಿತ್ರದಲ್ಲಿ ಸ್ಕ್ರೀನ್ ಪ್ಲೇ ಮತ್ತು ಡೈಲಾಗ್ ಪೋಷನ್ಸ್ ಗಟ್ಟಿಯಾಗಿ ಇರೋದ್ರಿಂದ ತಪ್ಪುಗಳು ಮುಚ್ಚಿ ಹೋಗಿವೆ. ಆದರೂ ಎಲ್ಲಾ ಚಿತ್ರಗಳು ಪರ್ಫೆಕ್ಟ್ ಅಲ್ಲ ನೋಡಿ ಹಾಗಾಗಿ “ಸ್ಲಂ ಬಾಲ”ನಿಗೆ ಫುಲ್ ಮಾರ್ಕ್ಸ್ ಕೊಡಬಹುದು. ಸಮಕಾಲೀನ ಚಿತ್ರಗಳು ಎಷ್ಟರ ಮಟ್ಟಿಗೆ ಕಾಮ್ಪೀಟ್ ಮಾಡ್ತವೆ ಅನ್ನೋದು ಕೂಡಾ ಮುಖ್ಯ ಪ್ರಶ್ನೆ ಆಗತ್ತೆ. ಸ್ಲಂ ಬಾಲನ ಆಪೋಸಿಟ್ ಆಗಿ ಯಾವುದೇ ರೌಡಿಸಂ ಚಿತ್ರಗಳಿಲ್ಲ ಅನ್ನೋದು ಇನ್ನೊಂದು ಪ್ಲಸ್ ಪಾಯಿಂಟು.. ಚಿತ್ರ ಪ್ರೇಕ್ಷಕರ ಮನಸ್ಸು ಯಶಸ್ವಿಯಾಗಿರುವುದು ಪ್ರಶಂಸನೀಯ. ಅಗ್ನಿ ಶ್ರೀಧರ್ ರವರ ಸ್ಕ್ರೀನ್ ಪ್ಲೇ ಮತ್ತು ಡೈಲಾಗ್ ವಯಕ್ತಿಕವಾಗಿ ನಂಗೆ ಬಹಳ ಇಷ್ಟ ಆಯಿತು.

– ಬಸವರಾಜ್. ಎಸ್. ಪುಷ್ಪಕಂದ