ಅಮ್ಮಂದಿರಿಗೆ ಯಾವುದು ಅಸಾಧ್ಯ?

ಅಕ್ಷತಾ ಕೆ

ದಣಪೆಯಾಚೆ…

ಪಿಕ್ನಿಕ್ ಅನ್ನೋದು ಎಲ್ಲರಿಗೂ ಯಾಕೆ ಇಷ್ಟ ಆಗತ್ತೆ ಎಂದು ತರಗತಿಯೊಂದರಲ್ಲಿ ಕೇಳಿದಾಗ ಒಬ್ಬ ವಿದ್ಯಾರ್ಥಿ ಯಾಕೆಂದರೆ ಪಿಕ್ನಿಕ್ ಅನ್ನೋದು ಶಾರ್ಟ್ ಪಿರಿಯಡ್ ದಾಗಿರತ್ತೆ.. ಮತ್ತೆ ಎಲ್ಲಿಂದ ಹೊರಟಿದ್ದೇವೋ ಅಲ್ಲಿಗೆ ವಾಪಾಸ್ ಬಂದೆ ಬರುತ್ತೇವೆ ಎಂಬ ಖಾತ್ರಿ ಮತ್ತು ವಾಪಾಸ್ ಬರಲೇಬೇಕು ಎಂಬ ಅನಿವಾರ್ಯತೆ ಪಿಕ್ನಿಕ್ ನ ಒಂದೊಂದು ಕ್ಷಣವನ್ನು ಅನುಭವಿಸುವಂತೆ ಪ್ರೇರೇಪಿಸುತ್ತದೆ ಎಂದು ಉತ್ತರಿಸಿದ್ದ.

ಇದೀಗ ಅಮ್ಮಂದಿರ ವರ್ಗಾವಣೆ ಪ್ರಾರಂಭವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಗನ, ಅನಿವಾರ್ಯತೆ ಇದೆ ಅಂತಾದರೆ ಮಗಳ ಮನೆಯಲ್ಲಿ ನೆಲೆಸಲು ಅಮ್ಮಂದಿರು ತೆರಳುತಿದ್ದಾರೆ. ಆದರೆ ಇದರ ಅನುಭವ ಪಿಕ್ನಿಕ್ ನಂತಿಲ್ಲ. ಯಾಕೆಂದರೆ ತಾವೆಲ್ಲಿಂದ ತೆರಳುತಿದ್ದಾರೋ ಅಲ್ಲಿ ತಮ್ಮ ನೆನಪಿಗೊಂದು ಚಿಕ್ಕ ನವಿಲುಗರಿಯನ್ನೂ ಬಿಟ್ಟು ಹೋಗಲು ಅಮ್ಮಂದಿರಿಗೆ ಅವಕಾಶವಿಲ್ಲ ಹಾಗೆಂದು ವಿಧವೆ ಅಮ್ಮನ ಮುಂದಿನ ಬದುಕಿನ ಸಂಪೂರ್ಣ ಜವಾಬ್ದಾರಿ ಹೊತ್ತ ಮಗ ಬಹಳ ಪ್ರೀತಿಯಿಂದಲೇ ಏನೇನಿದೆಯೋ ಎಲ್ಲ ವಿಲೇವಾರಿ ಮಾಡಿ, ಯಾರಿಗಾದ್ರೂ ಏನಾದ್ರೂ ಸಣ್ಣ, ಪುಟ್ಟ ವಸ್ತುಗಳನ್ನು ಕೊಡೋದಿದ್ದರೆ ಕೊಟ್ಟು ಬಂದ್ಬಿಡು ಏನೂ ಬಾಕಿ ಉಳಿಸಿಕೊಳ್ಳಬೇಡ ಮತ್ತೆ ವಾಪಾಸ್ ಹೋಗೋ ಪ್ರಶ್ನೆ ಏನು ಇಲ್ವಲ್ಲ ಎಂದು ಹೇಳಿದ್ದಾನೆ.

castingಕಳೆದ ಒಂದು ದಶಕದಲ್ಲಂತೂ ಪ್ರತಿ ವರ್ಷ ಬೆಂಗಳೂರಿಗೆ ನೆಲೆಸಲು ತೆರಳುವ ಅಮ್ಮಂದಿರ ಸಂಖ್ಯೆ ಹೆಚ್ಚುತಿದೆ. ಇಳಿವಯಸ್ಸಿಗೆ ಕಾಲಿಟ್ಟ ಅಮ್ಮಂದಿರು ತಾವು 30,40 ವರ್ಷ ಬದುಕನ್ನು ಕಟ್ಟಿಕೊಂಡ ಊರು, ಮನೆ ಎಲ್ಲವನ್ನು ಬಿಟ್ಟು ಮಗನ ಹಿಂದೆ ಕಣ್ಣಿ ಕಟ್ಟಿದ ಕರುವಿನಂತೆ ಹಿಂಬಾಲಿಸುತಿದ್ದಾರೆ. ಇಳಿವಯಸಿನಲ್ಲಿ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ಬದುಕುವ ಪ್ರಶ್ನೆ ಧುತ್ತೆಂದು ಎದುರು ಬಂದಾಗ ಆಸ್ತಿ, ಮನೆ ಎಲ್ಲ ಮಾರಿ ನನ್ನ ಜೊತೆ ಬಂದ್ಬಿಡಮ್ಮ ಎಂಬ ಮಗನ ಮಾತು ಸರಿ ಎಂದೇ ಅನಿಸುತ್ತದೆ.

ಮಲೆನಾಡಿನ ಹಳ್ಳಿ ಮೂಲೆಯಲ್ಲಿ ಸಂಸಾರ ಕಟ್ಟಿಕೊಂಡು, ತೋಟ ಮಾಡಿಕೊಂಡು ಮೂವತ್ತು, ಮೂವತೈದು ವರ್ಷದಿಂದ ಬದುಕುತಿದ್ದ ಹೆಂಗಸರು ಸಹ ಎಲ್ಲ ಮಾರಿ ಬೆಂಗಳೂರಿನಲ್ಲಿ ನೆಲೆಯಾಗಿರುವ ಮಗನ ಮನೆಗೆ ಹೋಗಲು ಒಲವು ತೋರಿಸಿದಾಗ ನನಗೆ ಬಹಳ ಅಚ್ಚರಿಯಾಯಿತು. ಆ ಹೆಂಗಸರು ಹೇಳುವುದು ಅವರಂತೂ ಇಲ್ಲಿಗೆ ಬರುವುದಿಲ್ಲ , ಅದರ ಬದಲಿಗೆ ನಾವೇ ಅಲ್ಲಿಗೆ ಹೋಗಿರೋದೆ ಸರಿ ಅನ್ನಿಸ್ತದೆ.

ಇಲ್ಲ ಅಂದರೆ ವರ್ಷಕ್ಕೊಮ್ಮೆ ಮಕ್ಕಳ ಜೊತೆ ಬರುವ ಮೊಮ್ಮಕ್ಕಳಿಗೆ ನಮ್ಮ ಸಂಪರ್ಕವೇ ಇರುವುದಿಲ್ಲ. ಕುಟುಂಬದಲ್ಲಿ ಪರಸ್ಪರ ಒಂದು ಮೋಹ ಬೆಳೆಯುತ್ತದಲ್ಲ ಅದೇ ಇರುವುದಿಲ್ಲ. ಹೀಗೆ ಹೇಳುವಾಗ ಅಮ್ಮಂದಿರ ನಿರ್ಧಾರ ತುಂಬಾ ಸರಿ ಅನ್ನಿಸ್ತದೆ. ಆದರೆ ಊರಲ್ಲಿ ಆಸ್ತಿ, ಮನೆ ಮಾರಿ ಹಾಕಿ ಬಂದ ಅಮ್ಮಂದಿರು ಸುಖವಾಗಿ, ನೆಮ್ಮದಿಯಿಂದ ಇದ್ದಾರೆಯೇ ಎಂದು ನೋಡಿದರೆ ಹಾಗಿರುವವರ ಸಂಖ್ಯೆ ಬೆರಳೆಣಿಕೆಯಷ್ಟು ಇಲ್ಲ ಎಂದೆ ಹೇಳಬಹುದು. ಆರ್ಥಿಕವಾಗಿ ಮಗನ ಮೇಲೆ ಪೂರ್ತಿ ಅವಲಂಬಿಸಿರುವ ಅಮ್ಮಂದಿರಿರಲಿ ಕೊನೆಗಾಲದಲ್ಲಿ ಗಂಡನ ಪೆನ್ಷನ್ ಹಣ, ಆಸ್ತಿ, ಮನೆ ಮಾರಿದ ಹಣ ಎಂದು ಜೋಪಾನವಾಗಿ ಇಟ್ಟುಕೊಂಡಿರುವ ಅಮ್ಮಂದಿರು ಸಹ ಒಂದು ರೀತಿ ಕೊರಗಿನಲ್ಲಿ, ಅನಿವಾರ್ಯತೆಯಲ್ಲಿ ಅಲ್ಲಿರುವಂತೆ ಕಾಣುತ್ತದೆ ವಿನಃ ಯಾವುದೇ ಸಂತೋಷ ಅಥವಾ ಸಂತೃಪ್ತಿಯಿಂದಲ್ಲ.

ಪತಿ ತೀರಿಹೋದ ಮೇಲೆ ಹಳ್ಳಿಯಲ್ಲಿದ್ದ ಆಸ್ತಿ, ಮನೆ ಎಲ್ಲ ಮಾರಿಕೊಂಡು ಬೆಂಗಳೂರಿಗೆ ಹೋಗಿರುವ ನನ್ನ ಗೆಳತಿಯ ಅಮ್ಮನನ್ನು ಈ ಬಗ್ಗೆ ಕೇಳಿದರೆ ಅವರು ಹೇಳಿದರು 4 ಎಕರೆ ಗದ್ದೆ, 1 ಎಕರೆ ತೋಟವಿತ್ತು, ಮನೆಯನ್ನು ಸೇರಿಸಿ ಎಲ್ಲ ಮಾರಿಬಿಟ್ಟೆ, ಮಗ ಹೇಳಿದ ಅಂತ ಹಾಗೆ ಮಾಡಿದೆ ಮಗ ಸೊಸೆ ಒಳ್ಳೆಯವರೇ ಆದರೆ ಒಂದು ವರ್ಷವಾಯಿತು ಇಲ್ಲಿಗೆ ಬಂದು ಒಮ್ಮೆಯು ಊರಿಗೆ ಹೋಗಲೇ ಇಲ್ಲ. ಹೋಗೋಕೆ ಯಾವ ಕಾರಣವೂ ಇಲ್ಲ. ಆದರೆ ತುಂಬಾ ಸರ್ತಿ ಅನ್ನಿಸೋದು ಮನೆ ಮತ್ತು ಒಂದೆಕ್ರೆ ಆಸ್ತಿಯನ್ನಾದರೂ ಮಾರದೇ ಇಟ್ಕೊಬೇಕಿತ್ತು. ಮನಸು ಬಂದಾಗ ಅಥವಾ ಮನಸು ಕೆಟ್ಟಾಗ ಊರಿಗೆ ಬರಬಹುದಿತ್ತು. ಒಂದು ನೆಲೆ ಅಂತ ಇರ್ತಿತ್ತು.

ಸಮಾಜಶಾಸ್ತ್ರಜ್ಞರಾಗಿರುವ ನನ್ನ ಗೆಳೆಯರೊಬ್ಬರು ಒಂದು ವಿಷಯದ ಬಗ್ಗೆ ನನ್ನ ಗಮನ ಸೆಳೆದರು. ಅವರು ಹೇಳಿದ್ದು ಹೆಂಗಸರು 65,70 ವರ್ಷದವರೆಗೂ ತುಂಬಾ ಚೈತನ್ಯಶಾಲಿಗಳಾಗೆ ಇರುತ್ತಾರೆ. ಸಾಕಷ್ಟು ಕೆಲಸಗಳನ್ನು ಮಾಡಲು ಅವರಿಂದ ಸಾಧ್ಯವಾಗುತ್ತದೆ. ಆದರೆ ಹಳ್ಳಿಯಿಂದ ಒಂದು 55, 60 ವಯಸ್ಸಲ್ಲಿ ಮಗನ ಮನೆಯಲ್ಲಿ ನೆಲೆಸಲು ಬೆಂಗಳೂರಿಗೆ ಬರುತ್ತಾರಲ್ಲ ಅವರಲ್ಲಿ ಹೆಚ್ಚಿನ ಹೆಂಗಸರು ಮಾನಸಿಕವಾಗಿ ತುಂಬಾ ಬಳಲುತ್ತಿರುತ್ತಾರೆ. ಜೊತೆಗೆ ಹಳ್ಳಿಯಲ್ಲಿ ಅವರು ಮಾಡುತಿದ್ದ ಅರ್ಧದಷ್ಟು ಕೆಲಸವನ್ನು ಮಾಡಲು ಅವರಿಂದ ಇಲ್ಲಿ ಸಾದ್ಯವಾಗುತ್ತಿಲ್ಲ. ಯಾವಾಗಲೂ ಒಂದು ರೀತಿಯ ನಾಸ್ಟಾಲ್ಜಿಯಾದಲ್ಲಿರುತ್ತಾರೆ’.

ಯಾಕೆ ಹೀಗಾಗುತ್ತದೆ ಎಂದೆ. ನಿರ್ಧಿಷ್ಟವಾಗಿ ಇದೇ ಕಾರಣ ಎಂದು ಹೇಳುವಂತಿಲ್ಲ ಹಲವು ಹತ್ತು ಕಾರಣಗಳಿವೆ ಆದರೆ ಮುಖ್ಯವಾಗಿ ತಾವು ಬದುಕಿ ಬಾಳಿದ ಊರನ್ನು ಬಿಟ್ಟುಬರುವುದು ಎಷ್ಟೆ ಮಗ\ಮಗಳು ಮೊಮ್ಮಕ್ಕಳ ಹಂಬಲವಿದ್ದರೂ ತುಂಬಾ ಮಾನಸಿಕವಾಗಿ ಹೈರಾಣ ಮಾಡುವಂತದ್ದು, ಹಳ್ಳಿಯಲ್ಲಿ ಸಂಬಂದಿಕರು, ನೆರೆಹೊರೆ, ಅಷ್ಟೇ ಅಲ್ಲದೆ ಮನೆಯ ಆಳುಕಾಳುಗಳೊಂದಿಗೂ ಅಧಿಕಾರಯುತವಾಗಿ ಒಳಗಿನಿಂದ ಸಂಬಂದ ಕಟ್ಟಿಕೊಂಡಿರುತ್ತಾರೆ. ಅದು ಇಲ್ಲಿ ಹೇಗೆ ಸಾಧ್ಯ. ಮನೆ ಕೆಲಸದವಳು ಸಹ ಇಲ್ಲಿ ಪ್ರೊಫೆಶನಲ್ ಆಗಿ ವರ್ತಿಸುತ್ತಿರುತ್ತಾಳೆ. ಇರೋದನ್ನ ಕಾಪಾಡಿಕೊಂಡು ಹೋಗಬಹುದಷ್ಟೆ, ಹೊಸ ಸ್ನೇಹ ಸಂಬಂಧ ಬೆಳೆಸುವ ವಯಸ್ಸು ಇದಲ್ಲ. ಜೊತೆಗೆ ಮಗ, ಸೊಸೆ, ಮೊಮ್ಮಕ್ಕಳ ಲೋಕ ಬೇರೆ ಇರುತ್ತದೆ ಆ ಲೋಕವನ್ನು ಪ್ರವೇಶಿಸಲು ಇವರಿಗೆ ಸಾಧ್ಯವಿಲ್ಲ ಹೀಗಾದಾಗ ಒಂಟಿತನಕ್ಕೆ ಬೀಳುತ್ತಾರೆ, ತಮ್ಮ ಮನಸಿಗೂ ಕಿರಿಕಿರಿ ಮಾಡಿಕೊಂಡು ಉಳಿದವರಿಗೂ ಕಿರಿಕಿರಿ ಅನ್ನಿಸತೊಡಗುತ್ತಾರೆ.

ಇದಕ್ಕೆ ಪರಿಹಾರ ಏನು ಎಂದೆ.

ಅದನ್ನು ಅಮ್ಮಂದಿರೇ ಹುಡುಕಿಕೊಳ್ತಾರೆ ಜಗತ್ತಿನ ಬೆಳವಣಿಗೆಗಳೊಂದಿಗೆ ಮೌನವಾಗಿಯೇ ಅನುಸಂಧಾನ ನಡೆಸುತ್ತಾ ಅದರಲ್ಲಿ ಯಶಸ್ವಿಯು ಆಗುತ್ತಾ ಬಂದಿದ್ದಾರಲ್ಲವೇ ಅಮ್ಮಂದಿರು. ಮಕ್ಕಳ ಟ್ರ್ಯಾಕ್ಗೆ ತಾವೇ ಹೋಗುತ್ತಾ ಆ ಮೂಲಕ ಮಕ್ಕಳನ್ನು ತಮ್ಮ ಟ್ರ್ಯಾಕ್ಗೆ ಎಳೆದಿಟ್ಟು ಕೊಂಡು ಪೊರೆಯುತ್ತಾ ಬಂದಿದ್ದಾರೆ. ಅಮ್ಮಂದಿರಿಗೆ ಯಾವುದು ಅಸಾಧ್ಯ ಎಂದರು.

ಮಾಧ್ಯಮಕ್ಕೆ ಒಂದು ತೋರುಬೆರಳು- ಬನ್ನಿ

ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ

ಮಕ್ಕಳು, ಗ್ರಾಮೀಣ, ಬುಡಕಟ್ಟು ಭಾಷೆ, ಸಂಸ್ಕೃತಿ-ಸಾಹಿತ್ಯ ಅಭಿವೃದ್ಧಿ ಸಂಸ್ಥೆ

# 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560 104

ದೂರವಾಣಿ: 080-23409512, 9448102158

byregowda.m1@gmail.com

we_media

ಆತ್ಮೀಯರೆ,

ಸ್ವಾತಂತ್ರ್ಯಾನಂತರ ನಾವು ಆಯ್ಕೆ ಮಾಡಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಪೂರಕವಾದ ಅನೇಕ ಸಂಸ್ಥೆಗಳನ್ನು ಬೆಳೆಸಿದೆವು. ಉದಾಹರಣೆಗೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹಾಗೆಯೇ ಉದಾರ ಪ್ರಜಾಪ್ರಭುತ್ವದ ಎಚ್ಚರದ ಗಂಟೆಯಂತೆ ಉಳಿದೆಲ್ಲ ಅಂಗಗಳನ್ನು ಕಾಯುವ ಕೆಲಸಕ್ಕೆಂದು ಸ್ವತಂತ್ರ ಮಾಧ್ಯಮ ವ್ಯವಸ್ಥೆಯನ್ನೂ ಪೋಷಿಸಿಕೊಂಡು ಬಂದೆವು. ಆದರೆ 60 ವರ್ಷಗಳ ಸ್ವತಂತ್ರ ಭಾರತದಲ್ಲಿ ಅವು ಒಂದೊಂದಾಗಿ ಜನರ ನಂಬುಗೆಯನ್ನು ಹುಸಿಮಾಡಿದವು. ಪ್ರಜಾಪ್ರಭುತ್ವ ವ್ಯವಸ್ಥೆಯ ಪವಿತ್ರ ಅಂಗವೆನಿಸಿದ ನ್ಯಾಯಾಂಗದಲ್ಲಿ ನಡೆದಿರುವ ಅವಾಂತರಗಳ ಬಗ್ಗೆ `ಫ್ರಂಟ್ ಲೈನ್’ ನಿಯತಕಾಲಿಕದಲ್ಲಿ ಎ.ಜಿ. ನೂರಾನಿಯವರು ಬರೆದಿರುವ ಎರಡು ಲೇಖನಗಳನ್ನು ಓದಿದರೆ ನಾವು ಕಾನೂನು ಕಟ್ಟಲೆಯ ಮಿತಿಯ ನಾಗರೀಕ ಸಮಾಜದಲ್ಲಿದ್ದೇವೆಯೊ ಅಥವಾ ಕಾಡಿನ ರಾಜ್ಯದಲ್ಲಿದ್ದೇವೆಯೊ ಎನ್ನುವ ಭಯ ಕಾಡಲಾರಂಭಿಸುತ್ತದೆ.

ಪ್ರಜಾಪ್ರಭುತ್ವದ ಒಂದೊಂದೇ ಸ್ಥಂಭಗಳು ಕುಸಿಯುತ್ತಿರುವ ಈ ಕಾಲದಲ್ಲಿ ಮಾಧ್ಯಮಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವಂತಿಲ್ಲ. ಅವೂ ಕೂಡ ಇತರ ಸಂಸ್ಥೆಗಳ ಪ್ರತಿಬಿಂಬದಂತೆ ಸಾಮಾಜಿಕ ಜವಾಬ್ದಾರಿಯನ್ನಾಗಲಿ ಅಥವಾ ಜನಪರ ನಿಲುವುಗಳನ್ನಾಗಲಿ ತೆಗೆದುಕೊಂಡು ಕಾರ್ಯನಿರ್ವಹಿಸುವುದು ಬರೀ ಮಾಧ್ಯಮ ಪಠ್ಯಪುಸ್ತಕಗಳಿಗಷ್ಡೇ ಸೀಮಿತವಾಗಿಹೋಗಿದೆ.

1991ರ ನಂತರ ಗೋಳೀಕರಣದಲ್ಲಿ ಮಾಧ್ಯಮಗಳ ಬೆಳವಣಿಗೆ ಹುಲುಸಾಗಿದೆ. ಆದರೆ ಅದರಿಂದ ಸಮಾಜಕ್ಕೇನೂ ಲಾಭವಾಗಿಲ್ಲ. ಬೇಜವಬ್ದಾರಿ ವರದಿ, ಬರವಣಿಗೆ, ಹಣ ಮಾಡುವುದಷ್ಟೇ ಮುಖ್ಯವಾದ ಮಾಧ್ಯಮ ತಂತ್ರಗಳನ್ನು ಬಳಸುತ್ತ ಅವು ಕೆಲವು ಶ್ರೀಮಂತರ ಮತ್ತು ಅವರ ಹಿತಾಸಕ್ತಿಗಳ ವಕ್ತಾರರಂತೆ ವರ್ತಿಸಲಾರಂಭಿಸಿವೆ. ಜನರಿಂದ ದಿನೇ ದಿನೇ ದೂರವಾಗಲಾರಂಭಿಸಿವೆ. ಲಾಭಗಳಿಕೆ ಮತ್ತು ಹುಚ್ಚು ಪೈಪೋಟಿಯಲ್ಲಿ ಅವು ತಾವು ಸಂವಿಧಾನಾತ್ಮಕವಾಗಿ ಪಡೆದ ಹಕ್ಕುಗಳ ದುರುಪಯೋಗಕ್ಕೆ ಇಳಿದಿವೆ. ಹಕ್ಕು ಮತ್ತು ಜವಾಬ್ದಾರಿ ಎರಡೂ ಒಟ್ಟೊಟ್ಟಿಗೆ ಹೋಗದಿದ್ದರೆ ಎಂತಹ ಅಪಾಯಗಳನ್ನು ನಾವು ಎದುರಿಸುತ್ತೇವೆ ಎನ್ನುವುದು ನಮ್ಮ ಅರಿವಿಗೆ ಬರಲಾರಂಭಿಸಿದೆ.

ಈಗ ನಮ್ಮ ಮುಂದಿರುವ ಸವಾಲೆಂದರೆ ಸಮಗ್ರ ರಾಜಕೀಯ ವ್ಯವಸ್ಥೆಯ ಸುಧಾರಣೆಯಂತೆಯೇ ಭಾರತೀಯ ಮಾಧ್ಯಮದ ಸುಧಾರಣೆಗೆ ಮುಂದಾಗಬೇಕಾಗಿದೆ. ಇಲ್ಲ, ಈಗಿರುವ ಮಾಧ್ಯಮ ವ್ಯವಸ್ಥೆಗೆ ಪರ್ಯಾಯವಾದ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ಇದು ತಡವಾದಷ್ಟೂ ಅಪಾಯ ಹೆಚ್ಚಾದುದರಿಂದ ಜರೂರಾಗಿ ಈ ಕಾರ್ಯದತ್ತ ಗಮನಹರಿಸಬೇಕಾಗಿದೆ. ಮೂರೂ ದಿನಗಳ ನಮ್ಮ ಕಾರ್ಯಾಗಾರದ ಉದ್ದಿಶ್ಯಗಳಾದರೂ ಇಷ್ಟೇ. ನಾಡಿನ ಪ್ರಜ್ಞಾವಂತರಾದ ನಿಮ್ಮ ಮುಕ್ತ ಸಲಹೆ ಸಹಕಾರಕ್ಕಾಗಿ ಎದುರು ನೋಡುತ್ತಿದ್ದೇವೆ.

1. ಮಿಥ್ ಗಳನ್ನು ಬ್ರೇಕ್ ಮಾಡುವುದು

2. ಸಂಕುಚಿತಗೊಳ್ಳುತ್ತಿರುವ ಸಾರ್ವಜನಿಕ ಸಂವಾದ

3. ಪರ್ಯಾಯಗಳ ಹುಡುಕಾಟ

ಶಿಬಿರಾರ್ಥಿಗಳಿಗೆ-

1. ಊಟ, ವಸತಿ ವ್ಯವಸ್ಥೆ ಮಾಡಲಾಗುವುದು.

2. ಸಾಮಾನ್ಯ ದರದ ಪ್ರಯಾಣ ಭತ್ಯೆ ನೀಡಲಾಗುವುದು.

3. ಮೂರು ದಿನಗಳು ಕಡ್ಡಾಯವಾಗಿ ಉಳಿಯಬೇಕು. ಒಒಡಿ ಸೌಲಭ್ಯ ಬಳಸಿಕೊಳ್ಳಬಹುದು.

4. ಮೇಲಿನ ವಿಷಯಗಳ ಬಗೆಗೆ ನಡೆದಿರುವ ಚರ್ಚೆಗಳನ್ನು ಅವಲೋಕಿಸಿಕೊಂಡು ಬಂದರೆ ಚರ್ಚೆಗೆ ಅನುಕೂಲ.

5. 28 ನವೆಂಬರ್ 2008ರ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಕನಕಪುರ ಬಸ್ ನಿಲ್ದಾಣಕ್ಕೆ ಬಂದರೆ ತಮ್ಮನ್ನು ಕಾರ್ಯಾಗಾರ ನಡೆಯುವ ಸ್ಥಳಕ್ಕೆ ಕರೆದೊಯ್ಯುವ ವ್ಯವಸ್ಥೆಯಿದೆ.

-ಎಂ ಭೈರೇಗೌಡ

ಕಾರ್ಯದರ್ಶಿ

ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ

ಹೇ ರಾಮ್!

ಎ ಎನ್ ಐ ವರದಿಗಾರ, ರಂಗಕರ್ಮಿ ಸುಘೋಷ್ ನಿಗಳೆ ‘ಸ್ನೇಹ ಸಮೂಹ ‘ ತಂಡ ಅಭಿನಯಿಸುವ ಹೇ ರಾಮ್! ನಾಟಕದ ಫೋಟೋಗಳನ್ನು ಕಳಿಸಿಕೊಟ್ಟಿದ್ದಾರೆ. ರಂಗಶಂಕರದಲ್ಲಿ ಇದೇ ಶುಕ್ರವಾರ ಪ್ರಯೋಗವಿದೆ.

ಅಂದ ಹಾಗೆ ಈ ನಾಟಕದ ರಚನೆ ಇನ್ನೊಬ್ಬ ಹಿರಿಯ ಪತ್ರಕರ್ತರದ್ದು. ರಾಜ್ ಟಿ ವಿ ಸುದ್ದಿ ವಿಭಾಗದ ಮುಖ್ಯಸ್ಥ ಅನಂತ ಚಿನಿವಾರ್ ಈ ನಾಟಕ ಬರೆದಿದ್ದಾರೆ.

dsc_7020-5

dsc_7020-4

dsc_7020-3

ಗೊರವಂಕಗಳನ್ನು ಮಿಸ್ ಮಾಡಿಕೊಂಡಿದ್ದೇನೆ

‘ಶೃಂಗೇರಿಯಿಂದ ಹತ್ತು ಕಿಲೋಮೀಟರ್, ಹೊರನಾಡಿನಿಂದ ಇಪ್ಪತ್ತು ಕಿಲೋಮೀಟರ್ . ನಡುವಿನ ಪುಟ್ಟ ಹಳ್ಳಿ ನಮ್ಮೂರು. ಇತ್ತೀಚೆಗೆ ಕೊಂಚ ರಕ್ತಸಿಕ್ತವಾಗಿದೆ. ನಾನು ಬೆಂಗಳೂರು ಸೇರಿದ್ದೇನೆ. ನಮ್ಮೂರಿನ ಗುಬ್ಬಚ್ಚಿ ಗೊರವಂಕಗಳನ್ನು ಮಿಸ್ ಮಾಡಿಕೊಂಡಿದ್ದೇನೆ’ ಎಂದು ಕಾಡುವಂತೆ ಬರೆಯುವ ‘ಋಷ್ಯಶೃಂಗ’ ಬ್ಲಾಗ್ ಆರಂಭವಾಗಿದೆ.

ಒಳ್ಳೆಯ ಬರಹಗಳಿವೆ. ಬ್ಲಾಗ್ ಲೋಕ ಎಷ್ಟೆಲ್ಲಾ ರೀತಿಯಲ್ಲಿ ಬದಲಾಗುತ್ತಿದೆಯಲ್ಲಾ ಎಂದು ವಿಸ್ಮಯಪಡುತ್ತಾ ಋಷ್ಯಶೃಂಗ ದಿಂದ ಒಂದು ಬರಹ ನಿಮಗಾಗಿ-

umbrella

ಆ ಮಧ್ಯಾಹ್ನ ಸಣ್ಣಗೆ ಮಳೆಯಿತ್ತು

ಶನಿವಾರ ಬಿಡುವು.
ಸೆಂಟ್ರಲ್ ಲೈಬ್ರರಿಯಲ್ಲಿ ಕುಳಿತು ಕಾದಂಬರಿಯೊಂದನ್ನು ಓದಿ ಮುಗಿಸುವ ಅವಸರದಲ್ಲಿದ್ದೆ.
ನಿರ್ಜನ ಲೈಬ್ರರಿ. ಹೊರಗೆ ನಿಯತಕಾಲಿಕೆಗಳು ಇರುವ ಟೇಬಲ್ಲಿನ ಸುತ್ತ ಜನ. ಅಲ್ಲಿರುವ ಟ್ಯಾಬ್ಲಾಯಿಡುಗಳಿಗೆ ಅಪಾರ ಬೇಡಿಕೆ.
ಅಷ್ಟು ಹೊತ್ತಿಗೆ ಅವನು ಲೈಬ್ರರಿಗೆ ಬಂದ. ಜುಬ್ಬಾ ತೊಟ್ಟಿದ್ದ. ವಯಸ್ಸು ಐವತ್ತು ದಾಟಿದಂತೆ ಕಾಣುತ್ತಿತ್ತು. ಆಗಷ್ಟೇ ಊಟ ಮುಗಿಸಿರಬೇಕು. ತುಂಬುಗಡ್ಡಕ್ಕೆ ಮೊಸರನ್ನ ಮೆತ್ತಿದ್ದನ್ನೂ ಅವನು ಸರಿಯಾಗಿ ತೊಳೆದುಕೊಂಡಿರಲಿಲ್ಲ.
ಬಂದವನೇ, ನಿನ್ನೆಯೋ ಮೊನ್ನೆಯೋ ಓದಿಟ್ಟ ಪುಸ್ತಕಕ್ಕಾಗಿ ಹುಡುಕಾಡುವವನಂತೆ ಹುಡುಕಾಡಿದ. ಅದನ್ನು ಅವನು ಅಲ್ಲೆಲ್ಲೋ ಥಟ್ಟನೆ ಸಿಗುವಂತೆ ಎತ್ತಿಟ್ಟಿದ್ದ ಎಂದು ಕಾಣುತ್ತದೆ.
ತುಂಬಾ ಹೊತ್ತು ಹುಡುಕಿ ನಿರಾಶನಾಗಿ ನನ್ನ ಬಳಿ ಬಂದ. ನಾನು ಓದುತ್ತಿರುವ ಪುಸ್ತಕವನ್ನು ನೋಡಿದ. ಅವನು ಅರ್ಧ ಓದಿಟ್ಟ ಪುಸ್ತಕ ಅದೇ ಆಗಿತ್ತೆಂದು ಕಾಣುತ್ತದೆ. ನಾನು ಮಾತಾಡಿಸುವುದಕ್ಕೆ ಹೋಗಲಿಲ್ಲ. ಸುಮ್ಮನೆ ನನ್ನೆದುರು ಕೂತ. ನಾನು ಓದುತ್ತಲೇ ಇದ್ದೆ.
ಸುಮಾರು ಅರ್ಧಗಂಟೆ ಹಾಗೇ ಕೂತಿದ್ದ. ನಾನು ಬೇಗ ಓದಿ ಮುಗಿಸಬಹುದು ಎಂಬ ಭರವಸೆಯಿಂದಲೋ ಎಂಬಂತೆ ಕಾಯುತ್ತಿದ್ದ.
ಅವನನ್ನು ವಾರೆಗಣ್ಣಿಂದ ನೋಡಿದವನು ಅವನನ್ನು ಮಾತಾಡಿಸುವ ಗೋಜಿಗೂ ಹೋಗದೆ ಹಠದಿಂದ ಎಂಬಂತೆ ಓದುತ್ತಾ ಕೂತೆ.
ಮತ್ತೊಂದಷ್ಟು ಹೊತ್ತು ಕೂತಿದ್ದು ಕೊನೆಗೆ ನಿರಾಸೆಯಿಂದ ಎದ್ದು ಹೋದ.
ಹೋಗುವಾಗ ಅವನ ಕಣ್ಣುಗಳು ತುಂಬಿ ಬಂದಿದ್ದವು ಎಂದು ಈಗ ಅನ್ನಿಸುತ್ತದೆ.
ನಾನ್ಯಾಕೆ ಅವನಿಗೆ ಆ ಪುಸ್ತಕವನ್ನು ಕೊಡಲಿಲ್ಲ. ಅವನನ್ನು ಯಾಕೆ ಮಾತಾಡಿಸಲಿಲ್ಲ. ಅವನು ನಾನು ಓದುತ್ತಿದ್ದ ಪುಸ್ತಕಕ್ಕಾಗೇ ಕಾಯುತ್ತಿದ್ದನಾ ಅನ್ನುವುದೂ ಗೊತ್ತಿಲ್ಲ.
ತಿರಸ್ಕೃತಗೊಂಡ ಪ್ರೇಮಿಯ ಹಾಗೆ ಅವನು ಮರಳಿ ಹೋಗುವುದನ್ನು ಮಾತ್ರ ನಾನು ಮರೆಯಲಾರೆ.