ಕೆಂಪುಸುಳಿಗಳಲ್ಲಿ ಸ್ಲಂ ಬಾಲನ ಕನಸು

…..ಮತ್ತು ರಿವಾಲ್ವಾರ್ ಹಿಡಿದ ನಿರ್ದೇಶಕಿ

2008022251110404

-ಮಂಜುನಾಥ ವಿ ಎಂ

 

ಹದಿನೈದು ವರ್ಷಗಳ ದೀರ್ಘಾವದಿಯ ನಂತರ ಥಿಯೇಟರ್ ನಲ್ಲಿ ಕುಳಿತು ನಾನು ನೋಡಿದ ಸಿನಿಮಾಗಳೆಂದರೆ `ಆ ದಿನಗಳು’ ಮತ್ತು `ಸ್ಲಂ ಬಾಲ’. ಅವೆರಡರ ನಡುವೆಯೂ ಸ್ನೇಹಿತ ನಟಿಸಿದ ಒಂದು ಸಿನಿಮಾವನ್ನು ಕೂಡ ನೋಡಿದೆ, ಅದೃಷ್ಟವಶಾತ್ ಬದುಕಿ ಬಂದಿದ್ದೇ ಹೆಚ್ಚು. ಹಾಗಾಗಿ ಆ ಚಿತ್ರವನ್ನು ನೋಡಿಲ್ಲವೆಂದೇ ತಿಳಿದು ನಿರುಮ್ಮಳನಾಗಿದ್ದೇನೆ. ಸ್ಲಂ ಬಾಲ ಮತ್ತು ಆ ದಿನಗಳನ್ನು ನಾನು ನೋಡಲು ಕಾರಣವೇನೆಂದರೆ, ಇವೆರಡೂ ಚಿತ್ರಗಳ ಕತೆಗಳು ಒಂದೇ ಕಾದಂಬರಿಯಿಂದ ಎತ್ತಿಕೊಂಡಿದ್ದು ಎನ್ನುವುದು ಒಂದಾದರೆ ರೇಪ್, ಐಟಂ ಸಾಂಗ್, ಹುಸಿಪ್ರೇಮ, ಹೊಡೆದಾಟ, ಸುಳ್ಳುಕಣ್ಣೀರಿನ ಅಬ್ಬರ ಇಲ್ಲದೆಯೂ ಚಿತ್ರ ಗೆಲ್ಲಿಸಬಹುದು ಎಂಬುದು ಮತ್ತೊಂದು. ಈ ಎರಡೂ ಚಿತ್ರಗಳು ಭೂಗತಲೋಕವನ್ನು ತೋರಿಸಿದರೂ ಎಲ್ಲಿಯೂ ಯಾರನ್ನೂ ರಿವಾಲ್ವಾರ್, ಲಾಂಗ್ ಹಿಡಿಯುವಂತೆ ಪ್ರಚೋದಿಸುವುದಿಲ್ಲ ಎನ್ನುವುದನ್ನು ನಾವು ಮುಖ್ಯವಾಗಿ ಗಮನಿಸಬೇಕು. ಹಾಗೆ ಮುಸ್ಲಿಂ ಜನಾಂಗವನ್ನು ಅಪಾಯವೆಂಬಂತೆ ಕಾಣುತ್ತಿರುವ ಈ ಸಂದರ್ಭದಲ್ಲಿ ಈ ಎರಡೂ ಚಿತ್ರಗಳಲ್ಲಿ ಅಪ್ಪಟ ಮಾನವೀಯ ನೆಲೆಯಲ್ಲಿ ಚಿತ್ರಿಸಿ ಅವರಿಗೆ ಅಸ್ತಿತ್ವ ದೊರಕಿಸಿಕೊಟ್ಟಿದ್ದಾರೆ.

ಕನ್ನಡ ಸಾಹಿತ್ಯ ಪರಂಪರೆಗೆ ತನ್ನದೇ ಆದ ಭೂಗತ ಗುಣವನ್ನು ತಂದು ಬೆಚ್ಚಿಬೀಳಿಸಿದ ಅಥವಾ ಪ್ರಜ್ಞೆ ಬೆಳೆಸಿದ ಅಗ್ನಿ ಶ್ರೀಧರ್ ರ `ದಾದಾಗಿರಿಯ ದಿನಗಳು’ ಪತ್ರಿಕೆಯಲ್ಲಿ ದಾರಾವಾಹಿಯಾಗಿ, ಕಾದಂಬರಿ ಆಗಿ, ನಾಟಕವಾಗಿ, ಸಿನಿಮಾ ಆಗಿ, ಮತ್ತೊಂದು ಸಿನಿಮಾ ಆಗಿ ವ್ಯವಸ್ಥೆಯ ಅರಾಜಕತೆಯನ್ನು ಯಾವುದೇ ಮುಲಾಜುಗಳಿಲ್ಲದೆ, ಒತ್ತಡಗಳಿಲ್ಲದೆ ಹೇಳಿದ ಅಪರೂಪದ ಕೃತಿ. ಇದೇ ಕಾರಣಕ್ಕೆ ಈ ಕೃತಿ ಯಾವುದೇ ಸೀಮಿತವ್ಯಾಪ್ತಿಯನ್ನು ಇಟ್ಟುಕೊಳ್ಳದೆ ಮತ್ತಷ್ಟು ಸಿನಿಮಾಗಳನ್ನು ಕೊಡುವುದರಲ್ಲಿ ಸಂದೇಹವಿಲ್ಲ ಎನ್ನುವುದು ಈ ಮೂಲಕ ಗೊತ್ತಾಗುತ್ತದೆ. ಅಂದರೆ ವ್ಯವಸ್ಥೆಯ ಕ್ರೂರ, ಭಯಾನಕ ಸತ್ಯಗಳ ವಿಧಗಳನ್ನು ಕೊನೆಯಿಲ್ಲದಂತೆ ಹೇಳುತ್ತಾ, ತೋರಿಸುತ್ತಾ ಹೋಗುತ್ತದೆ ಈ ಕೃತಿ. ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಬಹುಶಃ ಭಾರತೀಯ ಚಿತ್ರರಂಗದಲ್ಲೇ ಮಹಿಳೆಯೊಬ್ಬರು ಭೂಗತ ಜಗತ್ತಿನ ಕುರಿತಾದ ಸಿನಿಮಾ ನಿರ್ದೇಶಿಸಿದ್ದು ಇದೇ ಮೊದಲಿರಬೇಕೆಂದು ನಾನು ಭಾವಿಸುತ್ತೇನೆ. ಮೀರಾ ನಾಯರ್, ದೀಪಾ ಮೆಹ್ತಾ, ತನುಜ ಚಂದ್ರ, ಕಲ್ಪನಾ ಲಾಜ್ಮಿ, ಅಪರ್ಣಸೇನ್, ಪ್ರೇಮಾ ಕಾರಂತ್, ಕವಿತಾ ಲಂಕೇಶ್ ಇವರ ವಸ್ತು-ವಿಷಯಗಳು ಕೂಡ ವಿಭಿನ್ನವಾಗಿದ್ದು, ಒಂದು ಕಾಲಘಟ್ಟದ ವೈರುಧ್ಯಗಳನ್ನು, ತಲ್ಲಣಗಳನ್ನು ತೋರಿಸಿದ್ದಾರೆ. ಸೆಕ್ಸ್, ಸಲಿಂಗಕಾಮ, ಜಾತಿ, ಪ್ರೇಮ, ಪ್ರಣಯ, ಕಾರ್ಪೋರೆಟ್ ಜಗತ್ತು, ರಾಜಕೀಯ, ಕೌಟುಂಬಿಕ ಸಮಸ್ಯೆ ಇವು ಇವರೆಲ್ಲರ ಕೇಂದ್ರೀಕೃತ ವಿಷಯಗಳಾಗಿದ್ದು, ಇಲ್ಲಿನ ಯಾರೂ ಸಹ ಸುಮನಾ ಕಿತ್ತೂರು ಆರಿಸಿಕೊಂಡ ಅಥವಾ ಹೊಕ್ಕ ಭೀಕರ ಜಗತ್ತಿಗೆ ಕೈ ಹಾಕಲಿಲ್ಲ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತದೆ.

slum-baala12

ಇಲ್ಲಿ ಹೆಣ್ಣಿನ ಮನಸ್ಸು ಕೂಡ ಹೇಗೆ ಕೋಲ್ಡ್ ಬ್ಲಡೆಡ್ ಸ್ಥಿತಿಗಳನ್ನು ತನ್ನ ಕ್ರಿಯಾಶೀಲತೆಯಲ್ಲಿ ಜೀರ್ಣಿಸಿಕೊಂಡು ಉತ್ತರ ಹೇಳಬಲ್ಲದು ಎಂಬುದನ್ನು ಸಾಬೀತುಪಡಿಸುತ್ತದೆ. ರಾಜಕಾರಣಿಯೊಬ್ಬ ತನ್ನ ಸ್ವಾರ್ಥಕ್ಕಾಗಿ ಪೊಲೀಸ್ ಕುಮ್ಮಕ್ಕಿನಿಂದ ಬೆಂಗಳೂರಿನಿಂದ ಗಡೀಪಾರಾದ ಅಪರಾಧಿಯೊಬ್ಬನನ್ನು ಬಾಂಬೆಯಿಂದ ಕರೆಸಿಕೊಂಡು ಅವನ ಬಲದಿಂದ, ಚಾಣಾಕ್ಷತನದಿಂದ ಹೇಗೆ ತನ್ನ ದುಷ್ಟಪರಿಧಿಯನ್ನು ವ್ಯವಸ್ಥಿತವಾಗಿ ವಿಸ್ತರಿಸಿಕೊಳ್ಳುತ್ತಾ ಕಟ್ಟಕಡೆಗೆ ಅವನನ್ನೇ ಕೊಂದು ಹಾಕುವುದು `ಸ್ಲಂ ಬಾಲ’ದ ಒಟ್ಟೂ ಕಥಾನಕ.

ಸ್ಲಂ ಬಾಲನನ್ನು ಗಡೀಪಾರು ಮಾಡುವ ಮೂಲಕ ಆರಂಭವಾಗುವ ಈ ಚಿತ್ರ ಸಂಜೆಯ ಹೊಂಬಣ್ಣದ ನೆರಳು-ಬೆಳಕಿನಲ್ಲಿ ಫೈಟರ್ ಬಾಲ ನುಡಿಸುವ ಮೌತ್ ಆರ್ಗನ್ನಿಂದ ಹೊಮ್ಮುವ ಸಂಗೀತದ ಅಲೆಗಳಲ್ಲಿ ವಿಲೀನವಾಗುವುದು, ತೆರೆದುಕೊಳ್ಳುವುದು ನಮ್ಮ ಮನಸ್ಸಿನಲ್ಲಿ ಒಂದು ರೀತಿಯ ದುಗುಡಮಿಶ್ರಿತ ನೋವನ್ನು ಹುಟ್ಟು ಹಾಕುತ್ತದೆ. ಈ ಸಂಗೀತದ ಬಿಟ್ಗಳು ಬಾಲನಿಗೆ ತನ್ನ ತಾಯಿ, ಸ್ಲಂ, ಗೆಳೆಯರು ನೆನಪಿಗೆ ಬಂದಾಗ ಮಾತ್ರ ಬಂದುಹೋಗುತ್ತದೆಯಾದರೂ ಎಲ್ಲೂ ಒಂದು ಸಂಪೂರ್ಣವಾದ ಹಾಡಿನ ರೂಪದಲ್ಲಿ ಬರುವುದೇ ಇಲ್ಲ. ಬಾಲ ಮೌತ್ ಆರ್ಗನ್ನ್ನು ನುಡಿಸುತ್ತಾನೆ ಎಂದ ಮೇಲೆ ಅದನ್ನು ಸಮರ್ಪಕವಾಗಿ ಚಿತ್ರದಲ್ಲಿ ಬಳಸಬೇಕಾಗಿತ್ತು, ಅದನ್ನು ನಿರ್ದೇಶಕರು ಯಾಕೆ ಕೈಬಿಟ್ಟರೋ ಗೊತ್ತಾಗಲಿಲ್ಲ. ಇಂಥ ಚಿತ್ರಗಳು ಹಾಡುಗಳನ್ನು ಬಯಸುವುದಿಲ್ಲವಾದರೂ, ಈ ಚಿತ್ರದಲ್ಲಿ ಎರಡು ಹಾಡುಗಳನ್ನು ಸಂಯೋಜಿಸಿದ್ದರಿಂದ ಮಾತ್ರ ಇದನ್ನು ಹೇಳುತ್ತಿದ್ದೇನೆ. ಕನ್ನಡ ಹಾಡುಗಳನ್ನೇ ಕೇಳದ ನನ್ನಂಥವನನ್ನು `ಆ ದಿನಗಳ’ಲ್ಲಿನ ಎರಡು ಹಾಡುಗಳು ಉಲ್ಲಸಿತಗೊಳಿಸಿವೆ. ಬಾಂಬೆ ಸೇರಿದ ಬಾಲ ಗೆಳೆಯನ ನೆರವಿನಿಂದ ಡಾನ್ಸ್ ಬಾರ್ ನಲ್ಲಿ ದಿನಕ್ಕೆ ಮುನ್ನೂರು ರೂಪಾಯಿ ದಿನಗೂಲಿಗೆ ಬೌನ್ಸರ್ ಆಗಿ ಸೇರಿಕೊಳ್ಳುತ್ತಾನೆ. ಅಲ್ಲಿಂದಲೇ ಬಾಲನ ಸುಂದರ ಬದುಕು ಬಿಚ್ಚಿಕೊಳ್ಳುತ್ತದೆ. ಡಾನ್ಸ್ ಬಾರ್ ನಲ್ಲಿ ಕುಣಿಯುವ ಹೆಣ್ಣೊಬ್ಬಳ ಸ್ನೇಹ ಸಲಿಗೆಗೆ ಕಡೆಗೆ ಪ್ರೇಮಕ್ಕೆ ತಿರುಗಿಕೊಳ್ಳುತ್ತದೆ. ಎಲ್ಲ ಡಾನ್ಸರ್ ಗಳಿಗಿಂತ ಇವಳನ್ನೇ ಹೆಚ್ಚಿಗೆ ಕಾಯುವ ಬಾಲ ಈ ಹೆಣ್ಣನ್ನು ಬಾಂಬೆಯ ರಸ್ತೆಗಳಲ್ಲಿ ಬೈಕಿನಲ್ಲಿ ಸುತ್ತಾಡಿಸುತ್ತಾನೆ. ಇಲ್ಲಿ ಬಾಲ ಉಪಯೋಗಿಸುವ ಟಿವಿಎಸ್ ಬೈಕ್ ಗಿಂತ ಎನ್ಫೀಲ್ಡ್ ಮೋಟರ್ ಸೈಕಲ್ ಬಳಸಿದ್ದರೆ ಚೆನ್ನಾಗಿರುತ್ತಿತ್ತೇನೊ. ಬಾಂಬೆ ಬೀಚ್ನಲ್ಲಿ ಇಬ್ಬರೂ ತಮ್ಮತಮ್ಮ ತಂದೆತಾಯಿಯರ ಮತ್ತು ದೇವರ, ಜಾತಿಯ ಬಗ್ಗೆ ಮಾತನಾಡುತ್ತಾ ಪ್ರೇಮದ ಅಲೆಗಳಲ್ಲಿ ಇಳಿದುಹೋಗುವುದು ಕಣ್ಣಿಗೆ ಹೊಡೆದಂತಿದೆ.

slum-baala5

ಇನ್ನು ಬಾಂಬೆಯ ಡಾನ್ಸ್ ಬಾರ್ನ ಒಳಚಿತ್ರಣವನ್ನು ಇನ್ನಷ್ಟು ಗಾಢವಾಗಿ ಚಿತ್ರೀಕರಿಸಬೇಕಿತ್ತು. ಮಧು ಭಂಡಾರ್ಕರ್ `ಚಾಂದನಿ ಬಾರ್’ನಲ್ಲಿ ಡಾನ್ಸ್ ಬಾರ್ ನ ಒಳಸ್ಥಿತಿಯನ್ನು, ಹಿಂಸಾತ್ಮಕ ಮನಸ್ಸುಗಳನ್ನು ಸ್ಪಷ್ಟವಾಗಿ ಪರದೆಯ ಮೇಲೆ ಬಿಂಬಿಸಿದ್ದಾರೆ. ಮೊದಲು ತಾಯಿ ಮತ್ತು ಮಗಳು ಕ್ರಮೇಣವಾಗಿ ಡಾನ್ಸ್ ಬಾರ್ ಹೊಕ್ಕುವುದು ನಮ್ಮ ಕಣ್ಣೆದುರಿಗೆ ನಡೆದಂತಿದೆ. ಟಬು ಹಾಸಿಗೆಯ ಮೇಲೆ ಸೆರಗು ಜಾರಿಸಿ ಮಲಗಿಕೊಂಡಾಗ ಅವನು ಅವಳ ಕಿಬ್ಬೊಟ್ಟೆಯ ಮಲಗಿಕೊಂಡು ಸುಖಿಸುತ್ತಾನೆ. ಆಗ ಆ ನಟ ಒಬ್ಬ ಡಾನ್ಸ್ ಬಾರ್ ಹೆಣ್ಣಿನ ಜೊತೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕೇಕೆ ಹಾಕುತ್ತಾ ತನ್ನ ವಿಕೃತವನ್ನು ಬಗೆದು ತೋರಿಸಿಕೊಡುತ್ತಾನೆ ಜೊತೆಗೆ ಟಬು ಕೂಡ ಸ್ಪಂದಿಸುತ್ತಾಳೆ. ಇರಲಿ, `ಚಾಂದನಿ ಬಾರ್’ ಚಿತ್ರದ ಕತೆ ನಡೆಯುವುದೇ ಡಾನ್ಸ್ ಬಾರ್ ನಲ್ಲದ್ದರಿಂದ ಅವರು ಹಾಗೆ ತೆಗೆಯಲೇಬೇಕಿತ್ತು. ಉದ್ಯಮಿಯೊಬ್ಬ ಬಾಲನ ಪ್ರೇಯಸಿಯನ್ನು ಚುಡಾಯಿಸಲು ಮುಂದಾದಾಗ, ಬಾಲ ಅವನನ್ನು ಬಡಿದುಹಾಕುತ್ತಾನೆ. ಅಷ್ಟೊತ್ತಿಗಾಗಲೇ ಬೆಂಗಳೂರಿನಲ್ಲಿ ರಾಜಕಾರಣಿಯೊಬ್ಬ ಕುರ್ಚಿಗಾಗಿ ಕುದಿಯುತ್ತಿರುತ್ತಾನೆ. ಇಲ್ಲಿ ಬಾಂಬೆಯಲ್ಲಿ ಉದ್ಯಮಿ ಮತ್ತು ಬಾಲನ ನಡುವೆ ಘರ್ಷಣೆ ಶುರುವಾಗುವುದಕ್ಕೂ ಬೆಂಗಳೂರಿನಿಂದ ಬಾಲನನ್ನು ಗಡೀಪಾರು ಮಾಡಿ ಪೊಲೀಸ್ ಅಧಿಕಾರಿಯೊಬ್ಬ ಬಾಲ ಮತ್ತು ಅವನ ಸ್ನೇಹಿತನನ್ನೂ ವಾಪಸ್ ಕರೆಸಿಕೊಳ್ಳುವುದಕ್ಕೂ ಒಂದೇ ಆಗುತ್ತದೆ. ಬಾಲ ಡಾನ್ಸ್ ಬಾರ್ ನ ತನ್ನ ಪ್ರೇಯಸಿಯನ್ನೂ ಜೊತೆಗೆ ಕರೆದುಕೊಂಡು ಬೆಂಗಳೂರಿಗೆ ಬರುತ್ತಾನೆ. ಆನಂತರದ ಕತೆ ಪೊಲೀಸ್ ಮತ್ತು ರಾಜಕಾರಣ ಹೇಗೆ ಸ್ಲಂ ಅಥವಾ ಅಸಹಾಯಕ ಜನರ ಬದುಕನ್ನು ತುಳಿದುಹಾಕುತ್ತದೆ ಎಂಬುದನ್ನು ಈಸ್ತೆಟಿಕ್ ನೆಲೆಯಲ್ಲಿ ನಿರ್ದೇಶಕರು ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದಾರೆ.

ರಿಚರ್ಡ್ ಅಟೆನ್ಬರೋನ `ಗಾಂಧಿ’ ಚಿತ್ರದಲ್ಲಿ ಬೆನ್ ಕಿಂಗ್ಸ್ಲೇ ಗಾಂಧಿಯಾಗಿ ಅಭಿನಯಿಸಲು ಅನೇಕ ವರ್ಷಗಳ ಕಾಲ ಗಾಂಧಿಯನ್ನು ಅಧ್ಯಯನ ಮಾಡಿ, ಅಭಿನಯಿಸಿ ಸಾರ್ಥಕವೆನಿಸಿಕೊಂಡರು. ಇವರ ಅಭಿನಯವನ್ನು ಕಂಡ ಅಥವಾ ನಿಜಕ್ಕೂ ಗಾಂಧಿಯನ್ನು ಅರ್ಥ ಮಾಡಿಕೊಳ್ಳಬೇಕಾದ ಇಡೀ ಭಾರತವೇ ದಂಗುಬಡಿಯಿತು. ಇದೇ ಚಿತ್ರದ ಹಿಂದಿ ಅವತರಣಿಕೆಯಲ್ಲಿ ಪಂಕಜ್ ಕಪೂರ್ ರನ್ನು ಗಾಂಧಿ ಪಾತ್ರಕ್ಕೆ ಧ್ವನಿ ನೀಡಲು ಕೇಳಿಕೊಂಡಾಗ, ಅವರು ಒಮ್ಮೆಲೇ ಒಪ್ಪಿಕೊಳ್ಳಲಿಲ್ಲ. ಬೆನ್ ಕಿಂಗ್ಸ್ಲೇ ಗಾಂಧಿ ಪಾತ್ರದ ಅಧ್ಯಯನಕ್ಕೆ ವ್ಯಯಿಸಿದ ಅಷ್ಟೇ ಕಾಲವನ್ನು ಪಂಕಜ್ ಕಪೂರ್ ಕೇವಲ ಧ್ವನಿಗೆ ತೆಗೆದುಕೊಂಡರು. ನಾನು ಯಾಕೆ ಈ ಉದಾಹರಣೆ ಕೊಡುತ್ತಿದ್ದೇನೆಂದರೆ, ಸ್ಲಂ ಬಾಲ ಚಿತ್ರದಲ್ಲಿ ಬಾಲನ ತಾಯಿ ಪಾತ್ರ ನಿರ್ವಹಿಸಿದ ನಟಿಯ ಅಬ್ಬರದ ನಟನೆಯ ವಿಚಾರಕ್ಕಾಗಿ. ನಿರರ್ಗಳವಾಗಿ ಮಾತನಾಡಲು ಬಂದೊಡನೇ ನಟಿ ಅಥವಾ ನಟ ಯಾರೂ ಆಗಲಾರರು. ಕಮಲಹಾಸನ್ ಮಾತಿಲ್ಲದೆಯೂ ಚಿತ್ರವನ್ನು ಗೆಲ್ಲಿಸಬಲ್ಲರು. ಅನಗತ್ಯವಾಗಿ ಚೀರುವುದು ಇದ್ದಕ್ಕಿದ್ದಂತೆ ಸ್ತಬ್ಧವಾಗಿ ಪ್ರೇಕ್ಷಕರನ್ನು ತಬ್ಬಿಬ್ಬುಗೊಳಿಸುವುದು ನಟನೆಯಲ್ಲ. ಒಡಲಾಳ ನಾಟಕದಲ್ಲಿ ನಟಿಸಿದ ಈ ಹಿರಿಯ ನಟಿ ಈಗಲೂ ಅದೇ ಗುಂಗಿನಲ್ಲಿ ಅನೇಕ ಚಲನಚಿತ್ರಗಳಲ್ಲೂ ಅಭಿನಯಿಸುತ್ತಿರುವುದು ದುರದೃಷ್ಟಕರ. ಇಲ್ಲಿನ ಅನೇಕ ನಿರ್ದೇಶಕರು ಈ ನಟಿಗೆ ಭಿನ್ನ ಪಾತ್ರಗಳನ್ನು ಕೊಡದೆ, ಬ್ರಾಂಡ್ ಮಾಡಿ ಅವರ ಅಭಿನಯವನ್ನೇ ಹಾಳುಗೆಡವಿದ್ದಾರೇನೋ ಎಂದೆನಿಸುತ್ತದೆ. ಸ್ಟಾನ್ಸ್ಲಾವ್ಸ್ಕಿ ಸಿದ್ಧಾಂತವನ್ನು ಅಪ್ಪಿಕೊಂಡವರ ದುರಂತ ಇದು. ನಾಟಕಕಾರ ಬ್ರೆಕ್ಟ್ ಗೆ ಇದು ಚೆನ್ನಾಗಿ ಗೊತ್ತಿತ್ತು. ಆ ಕಾರಣಕ್ಕಾಗೇ ಅವನು ಜಗತ್ಪ್ರಸಿದ್ಧ ನಾಟಕಕೃತಿಗಳನ್ನು ನಮಗೆ ಕೊಟ್ಟ.

`ಗಾಡ್ ಫಾದರ್’ ಚಿತ್ರದಲ್ಲಿ ನಟಿಸಿದ ಮರ್ಲಿನ್ ಬ್ರಾಂಡೋನ ಅಭಿನಯ ಜಗತ್ತಿನ ಅನೇಕ ಭೂಗತದೊರೆಗಳನ್ನು ಹುಟ್ಟು ಹಾಕಲು ಪ್ರೇರಣೆಯಾಯಿತು. ಅಲ್ಲಿ ಅವನು ಮನಬಂದಂತೆ ಚೀರಲಿಲ್ಲ, ಆದರೆ ಬ್ರಾಂಡ್ ಜಗದ್ವಿಖ್ಯಾತಿ ನಟನಾದ. ಸದ್ದಾಂ ಹುಸೇನ್ ನ ನೆಚ್ಚಿನ ಪುಸ್ತಕ ಮರಿಯಾ ಫ್ಯೂಜೋನ `ಗಾಡ್ ಫಾದರ್’.

ಸ್ಲಂಬಾಲದಲ್ಲೂ ನಿರ್ದೇಶಕಿ ಬಾಲನನ್ನು ಅದೇ ರೀತಿಯಲ್ಲಿ ಮುನ್ನಡೆಸುವ ಸೂಕ್ಷ್ಮತೆಯನ್ನು ಉಳಿಸಿಕೊಂಡಿದ್ದಾರೆ. ಎಲ್ಲೂ ಯಾವ ಹಂತದಲ್ಲೂ ಆ ನಟನನ್ನು ಹಿಂದಿನ ಚಿತ್ರಗಳ ಯಶಸ್ಸಿನ ಇಮೇಜ್ ಗೆ ಮರಳದಂತೆ ಎಚ್ಚರಿಕೆ ವಹಿಸಿದ್ದಾರೆ. ಬಾಲ ಗಡೀಪಾರಾಗುವಾಗ, `ನಾನು ಸ್ಲಂ ಬಾಲ’, ಎನ್ನುವ, ರಿವಾಲ್ವಾರ್ ಚುಂಬಿಸುವ ಮತ್ತು ಕೇಬಲ್ ಅಪರೇಟರ್ ನನ್ನು ಕೊಲ್ಲುವ ದೃಶ್ಯಗಳನ್ನು ಚಿತ್ರೀಕರಿಸಿರುವ ರೀತಿ, ನಿರ್ದೇಶಕರ ತಂತ್ರಜ್ಞತೆ ಮತ್ತು ಕ್ರಿಯಾಶೀಲತೆಗೆ ಉತ್ತಮ ಉದಾಹರಣೆ. ಇಲ್ಲಿ ಅವರು ಯಾವುದನ್ನೂ ವೈಭವೀಕರಿಸದೆ ವಾಸ್ತವಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಗಡೀಪಾರು ವಜಾ ಮಾಡುತ್ತಾರೆಂಬ ಬಹುದೊಡ್ಡ ಭರವಸೆಯೊಂದಿಗೆ ರಾಜಕೀಯದ ಎಲ್ಲ ದುಷ್ಕೃತ್ಯಗಳಲ್ಲಿ ಭಾಗಿಯಾಗಿ, ತನ್ನ ಮತ್ತು ಸ್ಲಂ ಕನಸಿನಲ್ಲೇ ಬಾಲ ಸಾಯುವುದು ಕಾಡುತ್ತದೆ. ಇಡೀ ಕಥಾನಕದಲ್ಲಿ ಪ್ರೇಮ ಸಣ್ಣದಾಗಿ ಹೊಗೆಯಾಡುತ್ತಿದ್ದರೂ ಅದು ಹಾಗೇ ವ್ಯವಸ್ಥೆಯ ಗಾಳಿಯಲ್ಲಿ ಲೀನವಾಗಿಬಿಡುವುದು ಎಂಥ ಮನಸ್ಸನ್ನಾದರೂ ಹಿಂಡಿ ಹಾಕುತ್ತದೆ. ಡಾನ್ಸ್ ಬಾರ್ ಹೆಣ್ಣಿನ ಪಾತ್ರದಲ್ಲಿ ನಟಿಸಿದ ನಟಿಯನ್ನು ಅಭಿನಯದಲ್ಲಿ ಇನ್ನಷ್ಟು ತಯಾರು ಮಾಡಬೇಕಾಗಿತ್ತು ಅಥವಾ ಅವರೇ ಇನ್ನಷ್ಟು ತೆರೆದುಕೊಳ್ಳಬೇಕಿತ್ತು. `ಮಂಡಿ’ ಚಿತ್ರದಲ್ಲಿ ಶಬಾನಾ ಆಜ್ಮಿ ವೇಶ್ಯೆ ಪಾತ್ರ ನಿಭಾಯಿಸುವುದಕ್ಕಾಗಿ ತಿಂಗಳುಗಳ ಕಾಲ ವೇಶ್ಯೆಯರೊಂದಿಗೆ ಕಳೆದರು. ಟಾಂಗಾವಾಲಾನ ಪಾತ್ರಕ್ಕೆ ಜೀವ ತುಂಬುವ ಸಲುವಾಗಿ ಓಂಪುರಿ ಬಾಂಬೆಯಲ್ಲಿ ಟಾಂಗಾ ಓಡಿಸಿ ಪಾತ್ರ ನಿರ್ವಹಿಸಿದ್ದಿದೆ. ಮೇಲಿನ ಎಂಥದೇ ಪಾತ್ರಗಳನ್ನಾಗಲೀ ಲೀಲಾಜಾಲವಾಗಿ ನಿಭಾಯಿಸುವ ಪಲ್ಲವಿಜೋಷಿ, ನಂದಿತಾ ದಾಸ್ ರ ಚಿತ್ರಗಳನ್ನು ಮತ್ತು ಬಿಬಿಸಿಯವರು ನಿರ್ಮಿಸಿರುವ ಮ್ಯಾಕ್ಬೆತ್ ನಾಟಕ/ಚಿತ್ರ ನೋಡಿದ್ದರೆ ಈ ನಟಿ ಸ್ವಲ್ಪಮಟ್ಟಿಗಾದರೂ ಆ ಪಾತ್ರಕ್ಕೆ ಒಗ್ಗಿಕೊಳ್ಳಬಹುದಾಗಿತ್ತು. ಇಂಥದೇ ಪಾತ್ರಕ್ಕೆ ಅಲ್ಲದೇ ಯಾವುದೇ ಪಾತ್ರಕ್ಕಾದರೂ ಶೇಕ್ಸ್ಪಿಯರ್ ಮತ್ತು ಗ್ರೀಕ್ ನಾಟಕಗಳನ್ನು ಇಲ್ಲಿನ ಎಲ್ಲ ನಟನಟಿಯರು ಓದಿ, ಅರಗಿಸಿಕೊಳ್ಳಬೇಕು. ಚಿತ್ರದ ಅಂತ್ಯದಲ್ಲಿ ಬಾಲ ತಾನು ದೇವರೆಂದೇ ನಂಬಿದ ಪೊಲೀಸ್ ಅಧಿಕಾರಿಯನ್ನು ನೋಡುತ್ತಾ, `ಸಾರ್…’ಎನ್ನುವ ದೃಶ್ಯ ಜೂಲಿಯಸ್ ಸೀಸರ್ ನಾಟಕವನ್ನು ನೆನಪಿಗೆ ತಂದುಕೊಟ್ಟು ಮತ್ತೊಮ್ಮೆ ನನ್ನನ್ನು ತುಡಿಯತೊಡಗಿತು.

ಬಹುಶಃ ಅಗ್ನಿ ಶ್ರೀಧರ್ ರ ಒಡನಾಟವಿಲ್ಲದೆ ಸುಮನಾ ಕಿತ್ತೂರು ಈ ಚಿತ್ರ ಮಾಡಿದ್ದರೆ ಇಲ್ಲಿನ ಎಲ್ಲ ಸಿನಿಮಾ ನಿರ್ದೇಶಕರಂತೆ ಕಳೆದುಹೋಗುತ್ತಿದ್ದರೇನೊ. ಭಾರತೀಯ ಚಿತ್ರರಂಗದಲ್ಲಿ ಮಣಿರತ್ನಂ ಮತ್ತು ರಾಮ್ ಗೋಪಾಲ್ ವರ್ಮರ ಸಾಲಿಗೆ ಯಾರೊಬ್ಬರೂ ಗುರುತಿಸಿಕೊಳ್ಳಲಾಗದೆ ಹೆಣಗುತ್ತಿರುವಾಗ ನಿರ್ದೇಶಕಿ ಸುಮನಾ ಕಿತ್ತೂರು ತಮ್ಮ ನಿರ್ದೇಶನದ ಮೊದಲ ಚಿತ್ರ `ಸ್ಲಂ ಬಾಲ’ ದ ಮೂಲಕ ನಿಲ್ಲಲು ಯತ್ನಿಸಿದ್ದಾರೆ ಎನ್ನುವುದು ನನ್ನಲ್ಲಿ ಅಚ್ಚರಿ ಹುಟ್ಟಿಸಿದೆ ಮತ್ತು ಬರೆಯಲು ಕಾರಣವಾಗಿದೆ.

ಚಿತ್ರ: nowrunning.com