ಇದು ಜುಗಾರಿ ಕ್ರಾಸ್, ಚರ್ಚೆಯೇ ಇಲ್ಲಿ ಪ್ರಧಾನ

ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳಸುವುದಕ್ಕೆ ಇರುವ ಅಂಕಣ.

ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ

ಇಗೋ ಇಲ್ಲಿದೆ ನಮ್ಮ ನಡುವಿನ ಒಳ್ಳೆಯ ಚಿಂತಕ ಬಿ ಆರ್ ಸತ್ಯನಾರಾಯಣ ಅವರ ಬರಹ. ಗೋಹತ್ಯೆ ಕುರಿತು ವಿಮರ್ಶಾತ್ಮಕ ಟಿಪ್ಪಣಿ ಒಳಗೊಂಡಿದೆ.

ಈ ಲೇಖನವನ್ನು ಅವರ ‘ನಂದೊನ್ಮಾತು’ ಬ್ಲಾಗ್ ನಿಂದ ಆಯ್ದುಕೊಳ್ಳಲಾಗಿದೆ.

ಚರ್ಚಿಸೋಣವೇ?

ನಿಮ್ಮ ಫೀಡ್ ಬ್ಯಾಕ್ ಪ್ರಕಟನೆಗೆ ಅರ್ಹವಾಗುವಂತಿರಲಿ, ಚರ್ಚೆಯನ್ನು ಬೆಳೆಸುವಂತಿರಲಿ, ಟೀಕೆ  ಎಡಿಟ್ ಆಗುತ್ತದೆ..

ಮಾರ್ಚ್ ೧ ಪ್ರಜಾವಾಣಿ ದಿನಪತ್ರಿಕೆಯ ವಾಚಕರವಾಣಿಯಲ್ಲಿ ಡಾ.ಸಿ.ಪಿಕೆ.ಯವರು ‘ಗೋಹತ್ಯೆ ನಿಷೇದ ಮತ್ತು ಕುವೆಂಪು’ ಎಂಬ ಪತ್ರದಲ್ಲಿ ಕುವೆಂಪು ಅವರ ಲೇಖನದ (ತ್ರಿಕಾಲ ಸಾಹಿತ್ಯ – ಸಕಾಲ ಸಾಹಿತ್ಯ: ಕುವೆಂಪು ಸಮಗ್ರ ಸಾಹಿತ್ಯ ಸಂಪುಟ – ೨, ಹಂಪಿಕನ್ನಡ ವಿಶ್ವವಿದ್ಯಾಲಯ ಪ್ರಕಟಣೆ, ೨೦೦೪. ಪುಟ ೨೬೮-೩೭೪) ಕೆಲವು ಭಾಗಗಳನ್ನು ಉದಾಹರಿಸಿ ಒಂದಷ್ಟು ಸತ್ಯಾಂಶಗಳನ್ನು ತೆರೆದಿಟ್ಟರು.

ಇಲ್ಲಿ ಕುವೆಂಪು ಹೇಳಿರುವ ವಿಷಯದ ಸತ್ಯಾಸತ್ಯತೆ ಮುಖ್ಯವಾಗಬೇಕೆ ಹೊರತು, ಕುವೆಂಪು ಅವರ ವೈಯಕ್ತಿಕ ಬದುಕಾಗಲೀ ವಿಚಾರವಾಗಲೀ ಚರ್ಚೆಯಾಗಬೇಕಿಲ್ಲ ಎಂಬುದನ್ನು ಸಹೃದಯರೆಲ್ಲರೂ ಒಪ್ಪುತ್ತಾರೆ ಎಂಬುದು ನನ್ನ ಅಭಿಪ್ರಾಯ.

ಆದರೆ ಆಗಿದ್ದೇನು?

ಮಾರ್ಚ್ ೫ ವಾಚಕಾರವಾಣಿಗೆ ಪತ್ರ (‘ದುರದೃಷ್ಟಕರ ಅವಿಚಾರಗಳು’) ಬರೆದ ಎ.ಶ್ರೀನಿವಾಸಮೂರ್ತಿ ಎನ್ನುವವರು ಮೊದಲಿಗೆ ವಿಷಯದ ಹಾದಿ ತಪ್ಪಿಸುವುದಕ್ಕೇ ಪ್ರಯತ್ನಿಸಿದರು. ತಾವೂ ಓದಿರುವ ಪುಸ್ತಕಗಳನ್ನೇ ಇತರರೂ ಓದಬೇಕೆಂಬುದು ಅವರ ಬಯಕೆಯಾಗಿದೆ. ಅದಕ್ಕೆ ಒಂದು ಪಟ್ಟಿಯನ್ನೂ ಕೊಡುತ್ತಾರೆ. ಅದಕ್ಕೂ ಮೊದಲು ‘ವೇದಗಳಲ್ಲಿ ಪ್ರಸ್ತಾಪವಿರುವುದು ಇದುವರೆಗೂ ನನ್ನ ಗಮನಕ್ಕೆ ಬಂದಿಲ್ಲ’ ಎನ್ನುತ್ತಾರೆ. ಅಂದರೆ ಇವರ ಗಮನಕ್ಕೆ ಬಂದಿಲ್ಲ ಎಂದ ಮಾತ್ರಕ್ಕೆ ಅದು ವೇದದಲ್ಲಿ ಇಲ್ಲವೇ ಇಲ್ಲ ಎಂಬುದು ಅವರ ತೀರ್ಮಾನವಾಗಿರುವಂತೆ ಕಾಣುತ್ತದೆ!

‘ವೇದಕಾಲದಲ್ಲಿ ಗೋವಧೆ ಇತ್ತು ಎನ್ನೋಣ. ಆದರೆ ಈಗ ಅದು ಏಕಿರಬೇಕು?’ ಎಂಬುದು ಶ್ರೀಯುತರ ಇನ್ನೊಂದು ಪ್ರಶ್ನೆ. ‘ಯಾಕಿರಬಾರದು?’ ಎಂಬ ಮರುಪ್ರಶ್ನೆಗೆ ಶ್ರೀಯುತರು ಏನು ಹೇಳುತ್ತಾರೆ. ಏಕಿರಬೇಕು ಎಂದರೆ ಅದೊಂದು ಸಾವಿರಾರು ವರ್ಷಗಳಿಂದ ರೂಪಗೊಂಡು ಉಳಿದುಕೊಂಡು ಬಂದಿರುವ ಆಹಾರಪದ್ಧತಿ ಅದಕ್ಕೆ!

‘ಆಗ ಇದ್ದ ಜಾತಿಪದ್ಧತಿ ಈಗಲೂ ಇರಲಿ ಎಂದಂತೆಯೇ ಗೋವಧೆ ಇರಲಿ ಎಂಬುದು’ ಶ್ರೀಯುತರ ಇನ್ನೊಂದು ವಾಕ್ ಬಾಂಬ್! ಇವರ ಗೋವುಗಳ ಬಗೆಗಿನ ಪ್ರೀತಿ ಜಾತಿಪದ್ಧತಿ ಬೇಡ ಎನ್ನುವವರಿಗೆ ಉತ್ತರ ಮಾತ್ರವೇ!?

ಕೊನೆಗೆ ಅವರು ಕುವೆಂಪು ಅವರ ತಿಳುವಳಿಕೆಯ ಬಗ್ಗೆಯೇ ಅನುಮಾನವೆತ್ತಿ ‘ಅವರು ಸಂಸ್ಕೃತ ಮತ್ತು ವೇದ ವಿದ್ವಾಂಸರಲ್ಲ’ ಎಂದು ತೀರ್ಪು ಕೊಡುತ್ತಾರೆ. ಕುವೆಂಪು ಅವರಿಗೆ ವೇದ ಉಪನಿಷತ್ತುಗಳ ಜ್ಞಾನ ಎಷ್ಟಿತ್ತು ಎಂಬುದು ಅವರ ಸಾಹಿತ್ಯವನ್ನು ಓದಿದವರಿಗೆಲ್ಲಾ ತಿಳಿದಿದೆ. ಕುವೆಂಪು ಅವರ ಸಾಹಿತ್ಯ ಬೇಡ; ಯಾವ ಲೇಖನದ ವಿಷಯಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೋ ಆ ಲೇಖನವನ್ನೂ ಪೂರ್ತಿ ಓದುವ ವ್ಯವಧಾನ ಶ್ರೀನಿವಾಸಮೂರ್ತಿಯವರಿಗೆ ಇದ್ದಂತಿಲ್ಲ. ಏಕೆಂದರೆ ಆ ಲೇಖನ ಪೂರ್ತಿ ಓದಿದ್ದರೆ ಅವರಲ್ಲಿ ಈ ತಪ್ಪು ಅಭಿಪ್ರಾಯ ರೂಪಗೊಳ್ಳುತ್ತಿರಲಿಲ್ಲ!

ಇನ್ನು ಮಾರ್ಚ್ ೯ರಂದು ಈ ವಿಷಯವಾಗಿ ಎರಡು ಪತ್ರಗಳು ವಾಚಕರವಾಣಿಯಲ್ಲಿ ಪ್ರಕಟವಾಗಿವೆ. ಡಾ.ಲತಾ ಮೈಸೂರು ಅವರು ‘ಜಗತ್ತಿನ ಪುರೋಹಿತಶಾಹಿ, ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಡಭಾವನೆಗಳ ಆಶ್ರಯದಲ್ಲಿ ಶ್ರೀಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ’ (ಎಂಬ ಮಾತುಗಳನ್ನು ಉದಾಹರಿಸಿ) ‘ಎಂಬುದನ್ನು ಜನತೆಗೆ ಕುವೆಂಪು ತಮ್ಮ ಜೀವಮಾನವಿಡೀ ಮನಗಾಣಿಸಲೆತ್ನಿಸಿದರು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಅದೇ ದಿನ ಸಿ.ಎನ್. ಕೃಷ್ಣಮಾಚಾರಿ ಎಂಬುವವರು ‘ಅಭಿಪ್ರಾಯ ಸಮರ್ಥನೀಯವಲ್ಲ’ ಎನ್ನುತ್ತಾ ‘ಇದೂ ಕೇವಲ ಕವಿವರ್ಯರ ಕಾವ್ಯಸೃಷ್ಟಿಯಷ್ಟೇ’ ಎಂದು ವ್ಯಂಗ್ಯವಾಡಿದ್ದಾರೆ. ಇಲ್ಲಿಯೂ ಕುವಂಪು ಅವರ ವಿಚಾರಗಳ ಸತ್ಯಾಸತ್ಯತೆಯನ್ನು ಅರಿಯುವ ಮನಸ್ಸಿಗಿಂತ ವ್ಯಂಗ್ಯ ಮಾಡುವುದೇ ಉದ್ದೇಶವಾಗಿರುವಂತೆ ಕಾಣುತ್ತಿದೆ. ಕುವೆಂಪು ಕವಿಯಾಗಿದ್ದರು; ಆದರೆ ಅವಿಚಾರಿಯಾಗಿರಲಿಲ್ಲ ಎಂಬುದು ಕೃಷ್ಣಮಾಚಾರಿಯವರಿಗೂ ಗೊತ್ತು!

ಬರಹಗಾರರು ವಿದ್ವಾಂಸರಾಗಿರುವುದಿಲ್ಲ; ಕೇವಲ ಕಾವ್ಯಸೃಷ್ಟಿಯಷ್ಟೇ ಅವರ ಕೆಲಸ ಎಂಬ ಅ(ದುರ)ಭಿಪ್ರಾಯದ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಹೇಳುತ್ತೇನೆ.

ನಮ್ಮ ಕಾಲದ ಪ್ರಮುಖ ಕಾದಂಬರಿಕಾರರಾದ ಶ್ರೀ.ಎಸ್.ಎಲ್.ಭೈರಪ್ಪ ಅವರು ಯಾವುದೇ ಕಾದಂಬರಿಯನ್ನು ಅದರಲ್ಲಿಯೂ ಇತಿಹಾಸ, ಸಂಸ್ಕೃತಿ ಇಂಥದ್ದಕ್ಕೆ ಸಂಬಂಧಿಸಿದ ಕಾದಂಬರಿಯನ್ನು ಬರೆಯುವಾಗಲೆಲ್ಲಾ ಸಾಕಷ್ಟು ಹೋಂ ವರ್ಕ್ ಮಾಡುತ್ತಾರೆ. ಸಂಶೋಧನೆ, ಅಧ್ಯಯನ, ಪ್ರವಾಸ ಎಲ್ಲವೂ ಅದರಲ್ಲಿ ಸೇರಿರುತ್ತದೆ. ಸಾರ್ಥ ಕಾದಂಬರಿಯನ್ನು ಬರೆಯುವಾಗ ಸಂಸ್ಕೃತವನ್ನು ಕಲಿಯುತ್ತಾರೆ. ಪರ್ವ ಕಾದಂಬರಿಯನ್ನು ಬರೆಯುವಾಗ ಇಡೀ ಉತ್ತರಭಾರತವನ್ನು ಪ್ರವಾಸ ಮಾಡುತ್ತಾರೆ. ವ್ಯಾಸಭಾರತವನ್ನು ತಲಷ್ಪರ್ಶಿಯಾಗಿ ಅಧ್ಯಯನ ಮಾಡುತ್ತಾರೆ. ವೇದ-ಉಪನಿಷತ್ತುಗಳು ಹಾಗೂ ವೇದೋತ್ತರ ಕಾಲದ (ಅಂದರೆ ಮಹಾಭಾರತದ ಕಾಲದ) ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಚಾರಗಳನ್ನು ಸಂಶೋಧನೆ ಮಾಡಿ ಸಿದ್ಧರಾಗುತ್ತಾರೆ. ಅದೇ ಕಾದಂಬರಿಯಲ್ಲಿ ಗೋಮಾಂಸ ಸೇವನೆಯ ಬಗ್ಗೆ ಹಲವಾರು ಬಾರಿ ಪ್ರಸ್ತಾಪಿಸಿದ್ದಾರೆ. ಶೂದ್ರರಿರಲಿ – ಕ್ಷತ್ರಿಯರೂ, ಬ್ರಾಹ್ಮಣರೂ, ನಾವು ಇಂದು ದೇವರು ಎಂದು ಪೂಜಿಸುವ ಕೃಷ್ಣ-ಬಲರಾಮರೂ ಎಲ್ಲರೂ ಗೋಮಾಂಸ ಸೇವನೆಯನ್ನು ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಅನರ್ತದೇಶದ ಅಭೀರರು (ಯಾದವರು ದ್ವಾರಕಾ ನಗರ ಸ್ಥಾಪಿಸುವ ಮೊದಲು ಅಲ್ಲಿದ್ದ ಜನರು) ‘ಹಿಂಡು ಹಿಂಡು ಹಸುಗಳನ್ನು ಸಾಕುವುದು, ಹೋರಿ ಮುದಿಹಸುಗಳ ಮಾಂಸ, ಹಸುಗಳ ಹಾಲು ಗೆಡ್ಡೆ ಗೆಣಸು ಹಣ್ಣು ಹಂಪುಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು’ (ಪುಟ ೨೭೯, ಮುದ್ರಣ ೧೯೯೫) ಎಂಬ ವಿಚಾರ ಬರುತ್ತದೆ.

ದುರ್ಯೋಧನ ಯಾದವರ ಬೆಂಬಲ ಪಡೆಯಲು ದ್ವಾರಕೆ ಹೋಗಿದ್ದಾಗ ಕೃಷ್ಣನ ಚಿಕ್ಕಪ್ಪ ಸತ್ಯಕ ದುರ್ಯೋಧನನ್ನು ಊಟಕ್ಕೆ ಅಹ್ವಾನಿಸುತ್ತಾನೆ. ಆಗ ಊಟದ ತಯಾರಿ ನಡೆಸುವಾಗ ‘ಈಗಲೇ ಹೋಗಿ ಒಂದು ಎಳೆಹೋರಿ ತರುವಂತೆ ಇನ್ನೊಬ್ಬನಿಗೆ ಅಜ್ಞಾಪಿಸಿದ’ (ಪುಟ ೨೮೮).

ದುರ್ಯೋಧನನ ಪರವಾಗಿ ಯುದ್ಧ ಮಾಡಲು ಮದ್ರ ದೇಶದ ರಾಜ ಶಲ್ಯನೊಡನೆ ಅವನ ಮಕ್ಕಳಾದ ಅಜಯ, ವಜ್ರರು ಬಂದಿರುತ್ತಾರೆ. ಶಲ್ಯನ ಹೆಸರಿನಲ್ಲಿ ಹೋಮ ಮಾಡಲು ಅವನ ಪುರೋಹಿತನೂ (ಅವನ ಹೆಸರಿಲ್ಲ ಕೇವಲ ಬ್ರಾಹ್ಮಣ ಎಂದಿದೆ) ಬಂದಿರುತ್ತಾನೆ. ಒಂದು ದಿನ ಹೋಮವಾದ ಮೇಲೆ ಈ ನಾಲ್ವರೂ ಒಟ್ಟಿಗೆ ಊಟಕ್ಕೆ ಕುಳಿತು ಊಟ ಮಾಡುತ್ತಲೇ ಅಂದಿನ ಊಟದ ಬಗ್ಗೆ ಮಾತನಾಡುತ್ತಾರೆ. ಆಗ

ವಜ್ರ ‘ಅಡಿಗೆ ಹೊಸತರ ಇದೆ. ಪರಿವಾಪವಂತೂ ಊರಿನಲ್ಲಿ ಅರಮನೆ ಅಡಿಗೆಯವರು ಮಾಡುವುದಕ್ಕಿಂತ ಹೆಚ್ಚು ರುಚಿಯಾಗಿದೆ’ (ಎಂದ)

‘ಅಡಿಗೆಯವನಿಗೂ ಒಂದು ಬಹುಮಾನ ಕೊಡೋಣ’ ಶಲ್ಯ ಒಪ್ಪಿಕೊಂಡ.

‘ಎತ್ತು, ಮೇಕೆ ಎರಡರ ಮಾಂಸವನ್ನೂ ಮಾಡಿದಾರಲ್ಲ ಏನು ವಿಶೇಷ?’ ಅಜಯ ಕೇಳಿದ.

‘ವಿಶೇಷದಿನ ಅಂತ ಇರಬಹುದು’ ಬ್ರಾಹ್ಮಣ ಊಹೆಮಾಡಿದ. (ಪುಟ ೩೨೧)

ಪರ್ವದಲ್ಲಿ ಇಷ್ಟೊಂದು ವಿವರಗಳನ್ನು ನೀಡಿರುವ ಭೈರಪ್ಪನವರು ಸುಳ್ಳು ಹೇಳಿದ್ದಾರೆ, ಅದು ಕೇವಲ ಕಾವ್ಯಸೃಷ್ಟಿ ಎಂದರೆ ಮೂರ್ಖತನವೆನ್ನದೆ ವಿಧಿಯಿಲ್ಲ!

ಮಾನವನು ಆದಿಕಾಲದಿಂದಲೂ ಸಸ್ಯಾಹಾರದಂತೆ ಮಾಂಸಾಹಾರವನ್ನೂ ರೂಢಿಸಿಕೊಂಡು ಬಂದಿದ್ದಾನೆ. ಅದೇನೂ ಒಂದೇ ದಿನ ಇದ್ದಕ್ಕಿದ್ದಂತೆ ತೀರ್ಮಾನವಾದುದಲ್ಲ, ಅಲ್ಲವೆ? ಮಾಂಸಾಹಾರವೆಂದರೆ ಮಾಸಾಹಾರ. ಅದು ದನ, ಕುರಿ, ಮೇಕೆ, ಕೋಳಿ, ಹಂದಿ, ಮೀನು ಎಲ್ಲದರ ಮಾಂಸವನ್ನೂ ಒಳಗೊಳ್ಳುತ್ತದೆ. ಸಸ್ಯಾಹಾರದಂತೆ ಮಾಂಸಾಹಾರವೂ ಒಂದು ಆಹಾರಪದ್ಧತಿ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಬಂದಾಗ ಮಾತ್ರ ಇನ್ನೊಬ್ಬರ ಆಹಾರಪದ್ಧತಿಯ ಬಗ್ಗೆ ಅನಗತ್ಯ ಅಸಹನೆ ಮೂಡುವುದಿಲ್ಲ.

ಇನ್ನು ಗೋಹತ್ಯೆ ಮಸೂದೆಯಲ್ಲಿ ಪ್ರಸ್ತಾಪವಾಗಿದ್ದ ಒಂದು ವಿಚಾರವನ್ನು ಗಮನಿಸಬಹುದು. ಇದು ಭಾವನೆಗೆ ಸಂಬಂಧಿಸಿದ್ದಲ್ಲ. ತಾಂತ್ರಿಕ, ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯಗೆ ಸಂಬಂಧಿಸಿದ್ದು.

ಒಂದು ಗೋವುಗಳನ್ನು ಸಾಗಾಟ ಮಾಡಲು ತಹಸಿಲ್ದಾರ್ ಹಾಗೂ ಅವರಿಗಿಂತ ಉನ್ನತ ಮಟ್ಟದ ಅಧಿಕಾರಿಗಳಿಂದ ಲಿಖಿತ ಒಪ್ಪಿಗೆ ಪಡೆಯಬೇಕೆನ್ನುವ ವಿಚಾರಕ್ಕೆ ಸಂಬಂಧಪಟ್ಟದ್ದು. ಒಬ್ಬ ರೈತ ಒಂದೆರಡು ಜೊತೆ ಎತ್ತುಗಳನ್ನು ಕೊಂಡುಕೊಳ್ಳುತ್ತಾನೆ. ಅವುಗಳನ್ನು ಸಂತೆಯಿಂದ ತನ್ನ ದೂರದ ಊರಿಗೆ ಸಾಗಿಸಲು ವಾಹನ ಬೇಕಾಗುತ್ತದೆ. ಜೊತೆಗೆ ಅಧಿಕಾರಿಗಳಿಂದ ಅನುಮತಿ ಪತ್ರ! ತಾನು ಕೊಂಡುಕೊಂಡ ಎತ್ತುಗಳನ್ನು ಆತ ಎಲ್ಲಿ ಬಿಟ್ಟು ಅನುಮತಿ ಪತ್ರ ತರಲು ಹೋಗಬೇಕು? ಆತ ಎತ್ತುಗಳನ್ನು ಸಂತೆಯಲ್ಲಿ ಜಾತ್ರೆಯಲ್ಲಿ ಸಹರೈತರ ಮನೆಯಲ್ಲಿ ಕೊಂಡುಕೊಂಡಿರಬಹುದು. ಅವುಗಳನ್ನು ಅಲ್ಲಿಯೇ ಬಿಟ್ಟು ತಾಲ್ಲೋಕು ಕೇಂದ್ರಕ್ಕೆ ಹೋಗಿ ಅಧಿಕಾರಿಯನ್ನು ಕಂಡು ಅನುಮತಿ ಪತ್ರ ತರಬೇಕೆ? ರೈತ ಅನುಮತಿ ಪಡೆಯಲು ಬರುತ್ತಾನೆಂದು ಅಧಿಕಾರಿಗಳು ಕಾಯುತ್ತಾ ಕೂತಿರುತ್ತಾರೆಯೇ? ಮೊದಲೇ ಅನುಮತಿ ಪತ್ರ ಪಡೆದು ಹೋಗೋಣವೆಂದರೆ, ಅಂದು ಸತ್ತುಗಳನ್ನು ಕೊಂಡುಕೊಳ್ಳಲು ಸಾಧ್ಯವಾಗದಿದ್ದರೆ ಏನು ಮಾಡುವುದು? ಇನ್ನು ಅಧಿಕಾರಿಗಳು ಭ್ರಷ್ಟರಾಗಿರುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯೇನು? ಇನ್ನು ಗೋವುಗಳನ್ನು ಸಾಗಿಸಬೇಕಾದರೆ ಆಯಾಯ ಸ್ಥಳದ ಪೊಲೀಸರು ತೊಂದರೆ ಕೊಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯೇನು? ಅಧಿಕಾರಿಗಳಿಗೆ ಭ್ರಷ್ಟರಾಗಲು ಇನ್ನೊಂದು ಅವಕಾಶವನ್ನು ಸರ‍್ಕಾರವೇ ಕಲ್ಪಿಸಿಕೊಟ್ಟಂತಾಗುವುದಿಲ್ಲವೆ? ಇದು ತಾಂತ್ರಿಕ ಸಮಸ್ಯೆ ಅಲ್ಲವೇ?

ಗೋವುಗಳನ್ನು ಕೇವಲ ಕೃಷಿ ಮಾಡುವ ರೈತರು ಕೇವಲ ಕೃಷಿಗಾಗಿಯೇ ಸಾಕುತ್ತಾರೆ ಎಂದೇನಿಲ್ಲ. ಅದೊಂದು ಉದ್ಯಮವಾಗಿಯೂ ಕೆಲವು ಕಡೆ ನಡೆಯುತ್ತಿದೆ. ಒಳ್ಳೆಯ ಜಾತಿಯ ಹಸುಗಳನ್ನು, ಹೋರಿಗಳನ್ನು ಉತ್ಪಾದಿಸಿ ಮಾರುವವರೂ ಇದ್ದಾರೆ. ಅದು ಮಾರಾಟವಾಗುವ ತನಕ ಮಾತ್ರ ಅವುಗಳನ್ನು ತಮ್ಮಲ್ಲಿ ಕೃಷಿ ಕೆಲಸಕ್ಕೆ ಬಳಸುವವರೂ ಇದ್ದಾರೆ. ಅವರೆಲ್ಲರನ್ನೂ ದನಗಳನ್ನು ಮಾರಬೇಡಿ ಎಂದರೆ ಹೇಗೆ? ಅಥವಾ ಮಾರುವಾಗ ಅವುಗಳನ್ನು ಕೊಂಡುಕೊಳ್ಳುವವನ ಪೂರ್ವಾಪರಗಳನ್ನು ವಿಚಾರಿಸುವುದು ಹೇಗೆ? ನೀನು ಅವುಗಳನ್ನು ಸಾಕಲು ಕೊಂಡುಕೊಳ್ಳುತ್ತೀಯಾ? ಕಸಾಯಿಖಾನೆಗೆ ಕೊಂಡುಕೊಳ್ಳುತ್ತೀಯಾ? ಎಂದು ವಿಚಾರಿಸುವುದು ಹೇಗೆ? ಒಂದು ಪಕ್ಷ ವಿಚಾರಿಸಿದೆ ಆತ ನಿಜವನ್ನು ಹೇಳುತ್ತಾನೆ ಎಂಬುದಕ್ಕೆ ಏನು ಗ್ಯಾರಂಟಿ? ಎಷ್ಟೋಜನ ತಮ್ಮ ತುರ್ತು ಅಗತ್ಯಗಳಿಗಾಗಿ ತಾವು ಸಾಕಿದ ಜಾನುವಾರುಗಳನ್ನು ಮಾರಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ, ಮದುವೆ, ನಾಮಕರಣ, ಬೀಜ ಗೊಬ್ಬರಗಳಿಗಾಗಿ, ಸಾಲ ಮರುಪಾವತಿಗಾಗಿ ಹೀಗೇ ತಾವು ಸಾಕಿದ ಜಾನುವಾರುಗಳನ್ನು ಮಾರಲು ನೂರಾರು ಕಾರಣಗಳಿರುತ್ತವೆ. ಅವುಗಳೆಲ್ಲವನ್ನೂ ಅಂದರೆ ಅವರ ಆರ್ಥಿಕ ಸಂಕಷ್ಟಗಳೆಲ್ಲವನ್ನು ನಿರ್ಲಕ್ಷ್ಯ ಮಾಡುವುದು ಅಥವಾ ಅದರ ಬಗ್ಗೆ ಜಾಣ ಮರೆವು ವ್ಯಕ್ತಪಡಿಸುವುದು ಎಷ್ಟು ಸರಿ?

ಈಗ ಒಂದು ಪಕ್ಷ ಸಾಕಿದ ಗೋವುಗಳನ್ನು ಮಾರುವುದೇ ಇಲ್ಲ. ವು ಮುದಿಯಾದರೂ, ಗೊಡ್ಡಾದರೂ, ಮನೆಯಲ್ಲಿಯೇ ಇಟ್ಟುಕೊಳ್ಳುತ್ತೇನೆ ಎನ್ನುವ ರೈತರು ಇದ್ದಾರೆ ಎಂದುಕೊಳ್ಳೋಣ. ಅವರು ಎಷ್ಟು ದಿನ ಅವನ್ನು ಇಟ್ಟುಕೊಳ್ಲಲು ಸಾಧ್ಯ? ಒಂದು ದನವನ್ನು ಸಾಕಲು ಎಷ್ಟೊಂದು ಖರ್ಚು ಬೇಕಾಗುತ್ತದೆ. ಹುಲ್ಲು ನೀರು ನೆರಳು ಜೊತೆಗೆ ಮಾನವಸಂಪನ್ಮೂಲ! ಇವು ರೈತರ ಬಳಿಯೇನೂ ಬೇಕಾದಷ್ಟು ಕೊಳೆಯುತ್ತಾ ಬಿದ್ದಿರುತ್ತವೆಯೇ? ಇಂದು ಕೃಷಿ ಕೆಲಸಕ್ಕೆ ಮಾನವಸಂಪನ್ಮೂಲದ ಕೊರತೆಯುಂಟಾಗಿ ದೇಶದ ಆಹಾರ ಉತ್ಪತ್ತಿಯ ಪ್ರಮಾಣ ಇಳಿಮುಖವಾಗಿದೆ ಎಂಬುದನ್ನೂ ಗಮನಿಸಬೇಕು? ಇನು ಬರಗಾಲ ಬಂದಾಗ ಬಡ ರೈತ ಏನು ಮಾಡಬೇಕು. ತನ್ನ ಹೊಟ್ಟೆ ತುಂಬಿಸಿಕೊಳ್ಳಲು ದೇಶಾಂತರ ಹೋಗುವ ಸಂದರ್ಭ ಬಂದರೂ ಬರಬಹುದು. ಆಗ ಈ ದನಗಳನ್ನು ಆತ ಏನು ಮಾಡಬೇಕು? ಮಾರಿ ಒಂದಷ್ಟು ದುಡ್ಡು ಪಡೆದು ಜೀವ ಉಳಿಸಿಕೊರ್ಳಳಬೇಕಾ? ಅಥವಾ ಅವನ್ನು ಹಾಗೇ ಬಿಟ್ಟು ಆತ ದೇಶಾಂತರ ಹೋಗಬೇಕಾ? ಹಾಗೆ ಬಿಟ್ಟು ಹೋದ ದನಗಳನ್ನು ಸರ್ಕಾರ ತಂದು ಸರ್ಕಾರೀ ಗೋಶಾಲೆಗಳಲ್ಲಿ ಸಾಕುತ್ತದೆಯೇ? ಸರ್ಕಾರೀ ಅಧಿಕಾರಿಗಳು ಮೇವು ಖರೀದಿ, ನೀರು ಪೂರೈಕೆ ನೆರಳು ನಿರ್ಮಾಣ ಮೊದಲಾದುವಗಳಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ? ಈಗಲೇ ಲೀಟರ್ ಹಾಲಿಗೆ ಘೊಷಣೆಯಾಗಿರುವ ಎರಡು ರೂಪಾಯಿ ಸಹಾಯಧನ ಪಡೆಯಲು ರೈತ ಪಡಬೇಕಾಗಿರು ಪಾಡು ದೊಡ್ಡದಾಗಿದೆ! ರಾತ್ರೋ ರಾತ್ರಿ ಜಾಹಿರಾತಿನಲ್ಲಿ ‘ರೈತರಿಗೆ ಲೀಟರ್ ಹಾಲಿಗೆ ಎರಡು ರೂಪಾಯಿ ಸಹಾಯ ಧನ’ ಎಂದು ತಮ್ಮ ಸಾಧನೆಯನ್ನು ಬಿಂಬಿಸುವಾಗಿನ ಆತುರ ಹಣ ಬಿಡುಗಡೆ ಮಾಡುವಾಗ, ಅದನ್ನು ವಿತರಿಸುವಾಗ ಇರುವುದಿಲ್ಲ.

ಒಂದು ವೇಳೆ ಹಾಗೆ ಬಿಟ್ಟ ದನಗಳು ಊರಿನಲ್ಲಿ ಬೀಡಾಡಿಯಾಗಿ ಅಲೆಯುತ್ತಿದ್ದರೆ ಆಗುವ ಅನಾಹುತಗಳ ಪಟ್ಟಿಯೇ ಬೆಳೆಯುತ್ತದೆ. ಅವುಗಳಿಂದ ಹರಡುವ ಸಾಂಕ್ರಾಮಿಕ ರೋಗ, ಅವುಗಳಿಗೆ ಹುಚ್ಚು ಹಿಡಿದು ನಡೆಸುವ ಧಾಳಿ ಜೀವಂತವಾಗಿರುವಾಗಲೇ ರಣಹದ್ದುಗಳಿಂದ ಕುಕ್ಕಿಸಿಕೊಳ್ಳುತ್ತಾ ಸಾಯಬೇಕಾದ ಅವುಗಳ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ರಣಹದ್ದುಗಳಿಂದ ಕುಕ್ಕಿಸಿಕೊಳ್ಳುತ್ತಾ ಕಿವಿ ಬಾಲಗಳನ್ನು ಮಾತ್ರ ಅಲ್ಲಾಡಿಸುತ್ತಾ ಹೃದಯವಿದ್ರಾವಕವಾಗಿ ಸಾಯುತ್ತಾ ಬಿದ್ದಿರುವ ದನಗಳನ್ನು ನೋಡಿದಾಗಲೇ ‘ಕಟುಕನ ಕತ್ತಿಯ ಕ್ರೌರ್ಯವೇ ಜಗದ್ಗುರಗಳ ಕನಿಕರಕ್ಕಿಂತಲೂ ಅವುಗಳಿಗೆ ದಯಾಮಯವಾಗುತ್ತದೆ ಅಲ್ಲವೇ?’ ಅನ್ನಿಸುವುದು.

ಅಹಿಂಸಾ ತತ್ವದ ಪ್ರತಿಪಾದಕರಾಗಿದ್ದ ಮಹಾತ್ಮ ಗಾಂಧಿಯವರೇ ತಮ್ಮ ಆಶ್ರಮದಲ್ಲಿದ್ದ ಕರು ಮರಣಯಾತನೆ ಅನುಭವಿಸುವುದನ್ನು ನೋಡಲಾಗದೆ, ಬೇಗ ಸಾವುಂಟು ಮಾಡುವ ಇಂಜೆಕ್ಷನ್ ಕೊಡಿಸುತ್ತಾರೆ ಏಕೆ? ಎಂಬುದನ್ನು ನಿಷ್ಪಕ್ಷಪಾತವಾಗಿ ವಿಚಾರಿಸಿದಾಗ ಪರಿಸ್ಥಿತಿ ತಕ್ಕಮಟ್ಟಿಗೆ ತಿಳಿಯಾಗಬಹುದು ಎಂದುಕೊಳ್ಳುತ್ತೇನೆ.

ಕುವೆಂಪು ಅವರ ಪ್ರಸ್ತುತ ಲೇಖನವನ್ನು ಓದಿದರೆ ಒಂದು ವಿಷಯ ಮನದಟ್ಟಾಗುತ್ತದೆ. ಕುವೆಂಪು ಗೋಮಾಂಸ ಸೇವನೆ ಪರವಾಗಲೀ ವಿರೋಧವಾಗಲೀ ವಾದ ಮಂಡಿಸುತ್ತಿಲ್ಲ; ಆದರೆ ಅದನ್ನು ಒಂದು ನೆವವಾಗಿಟ್ಟು ಕೊಂಡು ನಡೆಯುತ್ತಿರುವ ರಾಜಕೀಯ, ಸಾಮಾಜಿಕ ಸಂಘರ್ಷಕ್ಕೆ, ಅದನ್ನು ರೂಪಿಸುತ್ತಿರುವ ನಿಭಾಯಿಸುತ್ತಿರುವ ಮನಸ್ಥಿತಿಗೆ ವಿರೋಧವಾಗಿದ್ದಾರೆ ಎಂಬುದೇ ಆ ವಿಷಯ. (ಗೊಹತ್ಯೆ ನಿಷೇಧ ಕಾನೂನನ್ನು ತಂದೇ ತರುವುದಾಗಿ ಹೇಳಿಕೊಂಡಿದ್ದ ಕಾರ್ನಟಕ ಸರ್ಕಾರ ವಿಧಾನ ಶಬೆಯಲ್ಲಿ ಮಂಡಿಸದ್ದ ಮಸೂದೆಯನ್ನು ಚಚೆಗೆ ಕೈಗೆತ್ತಿಕೊಳ್ಲುವ ಮೊದಲೇ ಹಿಂದಕ್ಕೆ ಪಡೆದುದ್ದೇಕೆ? ಗೋಮಾಂಸಪ್ರಿಯರಿಗೆ ಇಷ್ಟವಾಗುವುದಿಲ್ಲ ಎನ್ನುವುದಕ್ಕೋ ಅಥವಾ ಸರ್ಕಾರದ ಒಳಗೇ ಇದು ಕಾರ್ಯಸಾಧುವಲ್ಲ ಎನ್ನುವ ಅಭಿಪ್ರಾಯ ದಟ್ಟವಾಗಿದ್ದರಿಂದಲೋ ಅದು ಬೇರೆ ವಿಚಾರ.[ಈ ಲೇಖನ ಿಲ್ಲಿ ಪ್ರಕಟವಾಗು ಹೊತ್ತಿಗೆ ಅಂದರೆ ನೆನ್ನೆ ಮತ್ತೆ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ!] ಆದರೆ ಕಾನೂನು ರೂಪಿಸುವುದಾಗಿ ಹೇಳಿದ್ದರಲ್ಲೂ, ಮಸೂದೆಯನ್ನು ಹಿಂದಕ್ಕೆ ಪಡೆದಿದ್ದರಲ್ಲೂ ರಾಜಕೀಯ ಇಲ್ಲವೆ? ಇಂತಹ ಮನಸ್ಥಿತಿಯನ್ನೇ ಕುವೆಂಪು ವಿರೋಧಿಸಿದ್ದು!) ಆದರೆ ಲೇಖನವನ್ನೋ/ಕೃತಿಯನ್ನೋ ಪೂರ್ತಿ ಓದದೇ ಅದರ ಲೇಖಕನ/ಕವಿಯ ಬಗ್ಗೆ ತೀರ್ಪು ನೀಡುವುದು ವ್ಯಂಗ್ಯವಾಗಿ ಅವರ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸುವುದು ಮೂರ್ಖತನದ ಪರಮಾವಧಿಯಲ್ಲದೆ ಮತ್ತೇನಲ್ಲ.

ಯಾವುದೇ ವಿಷಯದ ಬಗ್ಗೆ ಬರೆದಾಗ, ಮಾತನಾಡಿದಾಗ ಆತನಿಗೆ ಎರಡರಲ್ಲಿ ಒಂದು ಸ್ಥಾನವನ್ನು ಮೀಸಲಾಗಿಡಲು ಜನ ಕಾಯುತ್ತಿರುತ್ತಾರೆ. ‘ಪರ’ ಅಥವಾ ‘ವಿರೋಧ’! ಇವೆರಡೂ ಅಲ್ಲದ, ಕೇವಲ ವಾಸ್ತವಾಂಶ, ಸತ್ಯಾಂಶದ ಅರಿಯುವಿಕೆಗೂ ಜನ (ಅವರ ಸಂಖ್ಯೆ ಕಡಿಮೆಯಿರಬಹುದು) ಕಾತರರಾಗಿರುತ್ತಾರೆ ಎಂಬುದನ್ನೂ ನಾವು ಮನಗಾಣಬೇಕಿದೆ

5 ಟಿಪ್ಪಣಿಗಳು (+add yours?)

  1. Trackback: ಯಾವ ಬಣಕ್ಕೂ ಸೇರದೆ ಯೋಚಿಸಿ ನೋಡೋಣ « ಅವಧಿ
  2. ರಾಕೇಶ್ ಶೆಟ್ಟಿ
    ಮಾರ್ಚ್ 26, 2010 @ 11:59:44

    ಗೋ ಹತ್ಯೆ ನಿಷೇಧವನ್ನ ಬೆಂಬಲಿಸುವ ಮಾಂಸಹಾರಿಗಳಿಗೊಂದು ಪ್ರಶ್ನೆ (ಮಾಂಸಹಾರಿಗಳಿಗೆ ಮಾತ್ರ)

    ಗೋವಿನ ಹತ್ಯೆ ಯಾಕೆ ಆಗಬಾರದು,ಯಾಕೆ ಆಗಬೇಕು ಅನ್ನುವುದರ ಬಗ್ಗೆ ಹಲವರು ಅನಿಸಿಕೆಗಳನ್ನ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ.ನಾನು ಮತ್ತೆ ಅದರ ಬಗ್ಗೆ ಬರೆಯುವುದಿಲ್ಲ.ಬೆಂಬಲಿಸುವ ಹಲವರು ಹೇಳುವ ಮಾತು ಗೋವು ನಮಗೆ ದೇವರು ಅಂತ.ಈಗ ನನ್ನ ಪ್ರಶ್ನೆ, ನಮಗೆ ಹಿಂದೂಗಳಿಗೆ ಗೋವು ದೇವರ ಸಮಾನ.ಒಂದು ವೇಳೆ ನಾವು ಭಕ್ಷಿಸುವ ಮೀನು,ಕೋಳಿ,ಕುರಿ,ಹಂದಿ (ವರಾಹ!?) ಬೇರೆ ಧರ್ಮದವರಿಗೆ ಒಂದು ಪಕ್ಷ ಪೂಜ್ಯನೀಯವಾಗಿದ್ದು, ಅವರು ಅವುಗಳ ಹತ್ಯೆಯನ್ನ ನಿಷೇಧಿಸಿ ಅಂತೇಳಿ, ನಮ್ಮ ಘನ ಸರ್ಕಾರಗಳು ಒಂದು ವೇಳೆ ನಿಷೇಧ ಮಾಡಿಬಿಟ್ಟರೆ ನೀವು ಈಗ ಒಪ್ಪಿಕೊಳ್ಳುವ ಹಾಗೆಯೇ ಒಪ್ಪಿಕೊಳ್ಳಬಲ್ಲಿರೆ?ಒಂದು ವೇಳೆ ಒಪ್ಪಿಕೊಂಡರೆ ಆಮೇಲೆ ನಿಮಗೆ ಸಸ್ಯಹಾರವೇ ಗತಿ ಓಕೆ ನಾ?

    ನಾನು ಒಬ್ಬ ಮಾಂಸಹಾರಿಯಾಗಿರುವುದರಿಂದ ನನ್ನ ನಿಲುವನ್ನ ಹೇಳಿಬಿಡುತ್ತೇನೆ.ನನಗಂತೂ ಕೋಳಿ,ಕುರಿ,ಮೀನು ಹತ್ಯೆ ನಿಷೇಧವಾಗಿ ಬರಿ ಸೊಪ್ಪು ತಿನ್ಕೊಂಡಿರಪ್ಪ ಅಂದ್ರೆ ಬಹಳ ಕಷ್ಟ ಆಗುತ್ತೆ.ನಾನದನ್ನ ವಿರೋಧಿಸುತ್ತೇನೆ.
    ಅಷ್ಟಕ್ಕೂ,ನನ್ನ ಊಟದ ಮೆನು ನಿರ್ಧರಿಸಲು ಸರ್ಕಾರಕ್ಕೆ ಯಾವ ಹಕ್ಕಿದೆ ಸ್ವಾಮೀ?

    ಉತ್ತರ

  3. Trackback: ಗೋಹತ್ಯೆ ನಿಷೇಧ ಮತ್ತು ಸಾವರಕರ್ « ಅವಧಿ
  4. Trackback: ‘ಗೋವು ರಕ್ಷಿಸಿ’ ಎಂದು ಪುಕ್ಕಟ್ಟೆ ಉಪದೇಶ « ಅವಧಿ
  5. ಡಾ.ಬಿ.ಆರ್.ಸತ್ಯನಾರಾಯಣ
    ಮಾರ್ಚ್ 24, 2010 @ 16:21:57

    ಪೂರಕ ಮಾಹಿತಿ.
    ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಬಾಲಕನಾಗಿದ್ದಾಗ ನಮ್ಮ ಮನೆಯಲ್ಲು ಸುಮಾರು ನಲವತ್ತಕ್ಕು ಹೆಚ್ಚು ಎಮ್ಮೆ ದನಗಳಿದ್ದವು. ನಂತರ ಅವುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಮೊನ್ನೆ ಅಂದರೆ 2009 ಆಗಸ್ಟ್ ತಿಂಗಳ ಹೊತ್ತಿಗೆ ನಮ್ಮ ಮನೆಯಲ್ಲಿ ಒಂದೇ ಒಂದು ದನವಾಗಲೀ ಎಮ್ಮೆಯಾಗಲೀ ಇಲ್ಲದಂತಾಯಿತು! ಕಾರಣ ಇಷ್ಟೆ. ಅವುಗಳನ್ನು ಸಾಕುವಷ್ಟು ಮಾನವಸಂಪನ್ಮೂಲವಾಗಲೀ ಸಮಯವಾಗಲೀ ನಮಗಿಲ್ಲ. ಜೊತೆಗೆ ಆರ್ಥಿಕವಾಗಿ ನಷ್ಟವುಂಟಾಗುತ್ತಿತ್ತು. ಹಾಲಿಗೆ ಎರಡು ರೂಪಾಯಿ ಹೆಚ್ಚಾದರೆ ಬೊಬ್ಬೆ ಹೊಡೆಯುವವರು ವರ್ಷದಲ್ಲಿ ನಾಲ್ಕು ಬಾರಿ ಬೂಸಾ ಬೆಲೆ ಹೆಚ್ಚಾದರೂ ಮಾತನಾಡುವುದಿಲ್ಲ! ಆರ್ಥಿಕವಾಗಿ ರೈತ ಎಷ್ಟೇ ನಷ್ಟ ಅನುಭವಿಸಿದರೂ ಕೇವಲ ಭಾವನಾತ್ಮಕ ತೃಪ್ತಿಗಾಗಿ ದನಗಳನ್ನು ಸಾಕಬೇಕೆ? ಹೋಗಲಿ ಆತ ಸಾಕಿದ ರಾಸುಗಳನ್ನು ಅವನಿಗೆ ಬೇಕಾದಾಗ ಮಾರುವ ಹಕ್ಕನ್ನು ಕಸಿದುಕೊಳ್ಲುವ ಈ ಕಾನೂನು ಬೇಕಿತ್ತೆ? ಮಾರುವವನಿಗೆ ಕೊಂಡುಕೊಳ್ಳುವವನು ಮಾಂಸಕ್ಕಾಗಿ ಕೊಂಡುಕೊಳ್ಳುತ್ತಾನೆಯೇ ಎಂದು ತಿಳಿಯುವುದು ಹೇಗೆ? ಯಾರೋ ಹೇಳಿದ್ದರು. ಸಾಕಲಾಗದವರು ಸರ್ಕಾರೀ ಗೋಶಾಲೆಗಳಿಗೆ ಒಪ್ಪಿಸಬಹುದು ಎಂದು. ಆದರೆ ೀಗ ಮಾಡಿರುವ ಕಾನೂನಿನಲ್ಲಿ ಅದು ಬದುಕಿರುವವರೆಗೂ ಇಂತಿಷ್ಟು ಹಣವನ್ನು ಅದರ ಮಾಲೀಕ ಸರ್ಕಾರಕ್ಕೆ ಪಾವತಿಸಬೇಕು ಎಂದಿರುವುದು ಸುಳ್ಳೆ?
    ಇನ್ನು ಮಾಂಸಕ್ಕಾಗಿ ಹತ್ಯೆಯಾಗುತ್ತಿರುವ ರಾಸುಗಳ ವಿಚಾರಕ್ಕೆ ಬರೋಣ.
    ನಮ್ಮ ಪ್ರದೇಶದಲ್ಲಿ ಹಾಲು ಕೊಡುವ ಹಸುವಿನ ಬೆಲೆ 15ರಿಂದ 40000 ದವರೆಗೂ ಇದೆ. ಸುಮಾರಾದ ಒಂದು ಜೊತೆ ಎತ್ತುಗಳ ಬೆಲೆ 25000 ರಿಂದ 40000 ರೂಪಾಯಿಗಳು. ಅವೆರಡನ್ನೂ ಇಡಿಯಾಗಿ ತೂಕ ಹಾಕಿದರೂ ಗರಿಷ್ಠ ಒಂದೂವರೆ ಟನ್ ಮಾಂಸ ಸಿಗಬಹುದು. ಈಗ ಮಾರುಕಟ್ಟೆಯಲ್ಲಿ 75 ರೂಪಾಯಿಗೆ ಸಿಕ್ಕುತ್ತಿರುವ ದನದ ಮಾಂಸ ಈ ರೀತಿಯ ಎತ್ತುಗಳನ್ನು ಕೊಂಡು ಮಾಂಸಕ್ಕಾಗಿ ಮಾರಿದರೆ ಕೇಜಿಗೆ 250-300 ರೂಪಾಯಿ ಆಗುತ್ತದೆ. ಈ ರೀತಿಯ ಎತ್ತುಗಳನ್ನು ಮಾಂಸಕ್ಕಾಗಿ ಮಾರುವವರು ಕೊಳ್ಳುವವರು ಯಾರಿದ್ದಾರೆ? ಈಗಲಾದರೂ ನಿಮಗೆ ಗೊತ್ತಾಗಿರಬೇಕು; ಮಾಂಸಕ್ಕಾಗಿ ಮಾರಾಟವಾಗುವ ರಾಸುಗಳು ಎಂತಹವು ಎಂದು.
    ಮಾಂಸ ತಿನ್ನುವುದರಿಂದ ಗೋಸಂತತಿ ಕಡಿಮೆಯಾಗುತ್ತದೆ ಎಂಬುದು ಒಂದು ಮಿಥ್ ಅಷ್ಟೆ. ಆದರೆ ಉತ್ಥೇಜನವಿಲ್ಲದೆ, ಹಾಲಿಗೆ ಒಳ್ಳೆಯ ದರವಿಲ್ಲದೆ, ಮೇವು ಬೆಳೆಯಲು ನೀರಿಲ್ಲದೆ, ಸ್ವತಃ ರಾಸುಗಳಿಗೆ ಕುಡಿಯಲು ನೀರಿಲ್ಲದೆ, ನೀರೆತ್ತಲು ಕರೆಂಟಿಲ್ಲದೆ, ಗಗನಕ್ಕೇರುತ್ತಿರುವ ಬೂಸಾ ಬೆಲೆಯನ್ನು ತೆರಲಾರದೆ, ಹಾಗೂ ಹಳ್ಳಿಗಳಲ್ಲಿ ಕ್ಷೀಣಿಸುತ್ತಿರುವ ಯುವಕರ ಸಂಖ್ಯೆಯಿಂದಾಗಿ ಉಂಟಾಗಿರುವ ಮಾನವಸಂಪನ್ಮೂಲದ ಕೊರತೆಯಿಂದಾಗಿ ಗೋಸಂತತಿ ಕಡಿಮೆಯಾಗುತ್ತದೆ ಎಂಬ ಸತ್ಯವನ್ನು ಮರೆಮಾಚುವುದು ಎಷ್ಟು ಸರಿ?
    ಅರ್ಧ ರಾತ್ರಿ ಕೊಡುವ ಮೂರುಗಂಟೆ ಮೂರು ಫೇಸ್ ವಿದ್ಯುತ್ತಿನಿಂದ ನೀರೆತ್ತಲು ಇಂದು ರೈತರು ಪಡುತ್ತಿರುವ ಕಷ್ಟ ಗೋವು ರಕ್ಷಿಸಿ ಎಂದು ಪುಕ್ಕಟ್ಟೆ ಉಪದೇಶ ಕೊಡುವವರಿಗೆ ತಿಳಿಯುವುದು ಹೇಗೆ?

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ