ಜೋಗಿ ಬರೆದಿದ್ದಾರೆ: ಅವರಿಲ್ಲದ ‘ಜುಗಾರಿಕ್ರಾಸ್’

jjjjj21

ಜೋಗಿ

ತೇಜಸ್ವಿ ಕಣ್ಮರೆಯಾಗಿ ನಾಡಿದ್ದು ಏಪ್ರಿಲ್ 5ಕ್ಕೆ ಎರಡು ವರುಷ. ಸಂದಿಗ್ಧದ ಗಳಿಗೆಗಳಲ್ಲಿ ತಿರುಗಿ ನೋಡಬಹುದಾದ, ವಿವಾದ ಎದ್ದಾಗಲೆಲ್ಲ ಅಧಿಕಾರಯುತ ವಾಣಿಯಿಂದ ಕೊನೆಯ ಮಾತು ಹೇಳುತ್ತಿದ್ದ ಸ್ಥಾನವೊಂದು ಖಾಲಿಯಾಗಿರುವುದನ್ನು ನೋಡುತ್ತ ನಾವು ಇದ್ದೇವೆ, ನಿವರ್ಾತದಲ್ಲಿನ ನಿರುಪಾಯ ಬೊಂಬೆಗಳಂತೆ…

ಅವನ ಹೆಸರು ಸೀನಪ್ಪ. ಮೂಡಿಗೆರೆಯಿಂದ ಓಡಿ ನಮ್ಮೂರಿಗೆ ಬಂದಿದ್ದ. ನಮ್ಮೂರಿನ ಅಡಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಮೂಲತಃ ಸೋಮಾರಿಯಾಗಿದ್ದ ಅವನು ಒಬ್ಬೊಬ್ಬರ ತೋಟದಲ್ಲಿ ಒಂದೊಂದು ತಿಂಗಳು ಕೆಲಸ ಮಾಡಿದ್ದರೆ ಹೆಚ್ಚು.

ನಾವೆಲ್ಲ ಒಮ್ಮೆ ತೇಜಸ್ವಿಯವರ ಕತೆಗಳ ಬಗ್ಗೆ ಮಾತಾಡುತ್ತಿದ್ದರೆ, ಅವರ ತೋಟ, ಸ್ಕೂಟರು, ಕಾಡಿನ ನಡುವಿನ ಮನೆ, ಹಕ್ಕಿಯ ಫೋಟೋಗಳ ಬಗ್ಗೆ ಮಾತಾಡುತ್ತಿದ್ದರೆ ಪಕ್ಕದಲ್ಲೇ ಈ ಸೀನಪ್ಪ `ಅವರು ಬಿಡಿ ಸಾರ್, ಒಂಥರಾ ಡೇಂಜರು’ ಎಂದು ಉಡಾಫೆಯಿಂದ ಹೇಳಿಕೆ ಕೊಟ್ಟ. ಇವನಿಗೆ ತೇಜಸ್ವಿ ಹೇಗೆ ಗೊತ್ತಿರೋದಕ್ಕೆ ಸಾಧ್ಯ ಎಂದು ನಾವೆಲ್ಲ ಅಚ್ಚರಿಪಡುತ್ತಿರಬೇಕಾದರೆ ಅವನೇ ತನ್ನ ಕತೆ ಹೇಳಿಕೊಂಡ.

2007041301830301ಮೂರು ತಿಂಗಳು ಅವನು ತೇಜಸ್ವಿಯವರ ತೋಟದಲ್ಲೂ ಕೆಲಸ ಮಾಡಿದ್ದನಂತೆ. ಅವನ ಸೋಮಾರಿತನಕ್ಕೆ ಅವರ ತೋಟವೇ ಸರಿ ಎಂಬ ತೀಮರ್ಾನಕ್ಕೆ ಅವನು ಬಂದಿದ್ದನೆಂದು ಕಾಣುತ್ತದೆ. `ಅವರೇನೂ ಕಾಟ ಕೊಡ್ತಿರಲಿಲ್ಲ. ಏನು ಕೆಲಸ ಮಾಡ್ದೆ ಅಂತಾನೂ ಕೇಳ್ತಿರಲಿಲ್ಲ. ಆದರೆ ಒಂದ್ಸಾರಿ ಒಂದು ಹಕ್ಕಿಗೋಸ್ಕರ ಸಿಕ್ಕಾಪಟ್ಟೆ ಬೈದ್ರು, ದೊಣ್ಣೆ ತಗೊಂಡು ಹೊಡೆದೇ ಬಿಟ್ರು’ ಅಂತ ದುಃಖ ತೋಡಿಕೊಂಡ.

ಅವನು ತೇಜಸ್ವಿಯವರಿಗೆ ಸಿಟ್ಟು ಬರಿಸಿದ್ದು ಹೀಗೆ: ಒಂದು ಸಾರಿ ಅವನು ಬೆಳಗ್ಗೆ ಬೆಳಗ್ಗೆ ಸಾರಾಯಿ ಕುಡಿದು ತನ್ನ ಪಾಡಿಗೆ ಹಾಡುತ್ತಾ ಕೈಯಲ್ಲೊಂದು ಕೋಲು ಹಿಡಕೊಂಡು ಕಾಫಿ ತೋಟದಲ್ಲಿ ಅಡ್ಡಾಡುತ್ತಿದ್ದನಂತೆ. ಇದ್ದಕ್ಕಿದ್ದಂತೆ ತೋಟದ ಪೊದೆಯೊಂದರಿಂದ ಸರ್ರನೆ ನುಗ್ಗಿ ಬಂದ ತೇಜಸ್ವಿ, ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಕೈಲಿದ್ದ ದೊಣ್ಣೆ ತಗೊಂಡು ದಬದಬ ಬಾರಿಸಿದರಂತೆ.

ಆದದ್ದಿಷ್ಟು. ಕಾಫಿ ಹೂಗಳ ಮಕರಂದ ಹೀರುವುದಕ್ಕೆ ಬರುವ ಯಾವುದೋ ಪುಟ್ಟ ಹಕ್ಕಿಯ ಫೋಟೋ ತೆಗೆಯುವುದಕ್ಕೆ ತೇಜಸ್ವಿ ಬೆಳಗ್ಗೆಯಿಂದಲೇ ಕಾಯುತ್ತಾ ಕೂತಿದ್ದರು. ಇನ್ನೇನು ಹಕ್ಕಿ ಬಂದು ಕೂತು, ತೇಜಸ್ವಿ ಅದನ್ನು ಫೋಕಸ್ ಮಾಡುವಷ್ಟರಲ್ಲಿ ಇವನು ಗಲಾಟೆ ಮಾಡಿ ಹಕ್ಕಿಯನ್ನು ಓಡಿಸಿದ್ದ. ಅವರಿಗೆ ಸಿಟ್ಟು ಹತ್ತಿ ಅವನನ್ನು ಅಟ್ಟಿಸಿಕೊಂಡು ಹೋಗಿದ್ದರು.

ಒಂದು ಹಕ್ಕಿಗೋಸ್ಕರ ನನ್ನ ಚರ್ಮ ಸುಲಿದ್ರಲ್ಲ ಸ್ವಾಮೀ ಎಂದು ಸೀನಪ್ಪ ಆವತ್ತೇ ಕೆಲಸ ಬಿಟ್ಟು ಓಡಿಬಂದನಂತೆ.

ತೇಜಸ್ವಿ ಇಲ್ಲದ ಎರಡು ವರುಷಗಳು ಸಂದಿವೆ. ಇಂಥ ದಂತಕತೆಗಳಲ್ಲಿ ತೇಜಸ್ವಿ ಅಮರರಾಗಿದ್ದಾರೆ. ಅವರ ಕುರಿತು ಬರೆಯಲು ಕುಳಿತಾಗ, ಮಾತಿಗೆ ಕುಳಿತಾಗ ಇಂಥ ರಸವತ್ತಾದ ಕತೆಗಳನ್ನು ಒಬ್ಬರಲ್ಲ ಒಬ್ಬರು ಹೇಳುತ್ತಿರುತ್ತಾರೆ. ಅತ್ಯಂತ ಹೆಚ್ಚು ದಂತಕತೆಗಳು ಇವತ್ತು ಜಾರಿಯಲ್ಲಿರುವುದು ತೇಜಸ್ವಿಯವರ ಕುರಿತೇ.
ಲೇಖಕ ಕಣ್ಮರೆಯಾದ ತಕ್ಷಣ ಅವನ ಪುಸ್ತಕಗಳ ಮಾರಾಟವೂ ಕಡಿಮೆ ಆಗುತ್ತಾ ಬರುತ್ತದೆ. ತೇಜಸ್ವಿಯವರ ವಿಚಾರದಲ್ಲಿ ಹಾಗಾಗಿಲ್ಲ ಅನ್ನುತ್ತಾರೆ ಪುಸ್ತಕದಂಗಡಿಯ ಮಾಲಿಕರು. ಅಷ್ಟೇ ಅಲ್ಲ, ಅವರ ಕುರಿತು ಬರೆದ ಪುಸ್ತಕಗಳೂ ಅದೇ ವೇಗದಲ್ಲಿ ಮಾರಾಟವಾಗುತ್ತಿವೆ. ಮುಖಪುಟದಲ್ಲಿ ಅವರ ಹೆಸರು ಅಥವಾ ಫೋಟೋ ಇದ್ದರೆ ಸಾಕು ಅದು ಟಾಪ್ಟೆನ್ ಪಟ್ಟಿ ಸೇರಿಕೊಂಡು ಬಿಡುತ್ತದೆ.

ಒಬ್ಬ ಲೇಖಕ ಜನಮಾನಸದಲ್ಲಿ ಇತ್ತೀಚಿನ ದಿನಗಳಲ್ಲಿ , ಕೇವಲ ತನ್ನ ಕೃತಿಯಿಂದಾಗೇ ನೆನಪಲ್ಲಿ ಉಳಿದದ್ದು ಕಡಿಮೆ. ಎಂದೂ ಅನಗತ್ಯವಾಗಿ ಸುದ್ದಿಯಲ್ಲಿರದ, ತನ್ನ ಕೃತಿಗಳಾಚೆಗೆ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದ, ಎಲ್ಲವೂ ನಗರೀಕೃತವಾಗುತ್ತಿದ್ದ ಕಾಲಘಟ್ಟದಲ್ಲೂ ಆ ಸ್ಥಿತ್ಯಂತರಗಳನ್ನು ಮೂಡಿಗೆರೆಯೆಂಬ ರೂಪಕದ ಮೂಲಕವೇ ಸೆರೆಹಿಡಿಯುತ್ತಿದ್ದ ತೇಜಸ್ವಿ ಒಬ್ಬ ವ್ಯಕ್ತಿಗಿರಬಹುದಾದ ಎಲ್ಲಾ ಆಸಕ್ತಿಗಳ ಮೊತ್ತದಂತೆ ಕಾಣಿಸಿದವರು.

ಒಂದು ಪುಟ್ಟ ಊರನ್ನಿಟ್ಟುಕೊಂಡೇ ಇಡೀ ಜಗತ್ತನ್ನು ಕಾಣಿಸಿದವರು ತೇಜಸ್ವಿ. ಆರ್ ಕೆ ನಾರಾಯಣ್ರ ಕಲ್ಪನೆಯ ಮಾಲ್ಗುಡಿ, ಅನಂತಮೂತರ್ಿಯವರ ಭಾರತೀಪುರ, ಲಂಕೇಶರ ಕಂಬಳ್ಳಿಯ ಹಾಗೇ, ಮೂಡಿಗೆರೆ ಕೂಡ ಕನ್ನಡ ಕಥಾಸಾಹಿತ್ಯದ ಚಿರಸ್ಮರಣೀಯ ತಾಣ. ತೇಜಸ್ವಿಯವರ ಕತೆಗಳ ಪಾತ್ರಗಳೆಲ್ಲ ಅಲ್ಲಿಯವೇ. ತಬರ, ತುಕ್ಕೋಜಿ, ಕವರ್ಾಲೋ, ಮಂದಣ್ಣ, ಸುರೇಶ, ಗೌರಿ, ಕೃಷ್ಣೇಗೌಡ- ಇವರನ್ನೆಲ್ಲ ಮೂಡಿಗೆರೆಯಿಂದ ಬೇರ್ಪಡಿಸಿ ನೋಡುವುದಕ್ಕೇ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅವರೆಲ್ಲ ಆ ಮಣ್ಣಿಗೆ ಅಂಟಿಕೊಂಡಿರುವವರೇ.

2007041301820301ಒಂದು ಕಾಲಘಟ್ಟದಲ್ಲಿ ಒಬ್ಬ ಲೇಖಕ ಓದುಗ ಸುಖವನ್ನು ನೀಡುತ್ತಲೇ, ಅರಿವನ್ನೂ ಹೆಚ್ಚಿಸುತ್ತಾನೆ.

ಕುವೆಂಪು, ಶಿವರಾಮಕಾರಂತ, ಬೇಂದ್ರೆ ನಮಗೆ ಆಪ್ತರಾದದ್ದು, ನಮ್ಮ ಪ್ರಜ್ಞೆಯ ಒಂದು ಭಾಗವಾದದ್ದು ಕೇವಲ ಲೇಖಕರಾಗಷ್ಟೇ ಅಲ್ಲ. ಅವರು ಬರೆದದ್ದನ್ನು ಓದದವರ ಪಾಲಿಗೂ ಇವರೆಲ್ಲ ಸ್ಪೂತರ್ಿ, ಕನ್ನಡತನದ ಸಂಕೇತ ಮತ್ತು ನಿವ್ಯರ್ಾಜ ಪ್ರೀತಿಯ ಪ್ರತೀಕವಾಗಿ ಕಂಡವರು. ತೇಜಸ್ವಿ ಕೂಡ ಆ ಸಾಲಲ್ಲೇ ಬರುತ್ತಾರೆ. ಅಕ್ಷರ ವ್ಯಾಮೋಹಿಗಳಾಚೆಗೂ ಅವರ ಪ್ರಭಾವವಿದೆ. ಅದಕ್ಕೆ ಕಾರಣ ಅವರ ಅಸಂಖ್ಯ ಆಸಕ್ತಿಗಳು. ಶುಷ್ಕ ಚಚರ್ೆಯಲ್ಲಾಗಲೀ, ಬುದ್ಧಿಜೀವಿ ಹೇಳಿಕೆಗಳಲ್ಲಾಗಲೀ ಕಾಲಹರಣ ಮಾಡದೇ ಇದ್ದ ತೇಜಸ್ವಿ ವೈವಿಧ್ಯಮಯ ಆಸಕ್ತಿಗಳನ್ನು ಹೊಂದಿದ್ದವರು. ಬರಹ ಬೇಸರವಾದಾಗ, ಕಂಪ್ಯೂಟರ್, ಅದೂ ಸಾಕೆನಿಸಿದಾಗ ಚಿತ್ರಕಲೆ, ಅದರಾಚೆಗೆ ಫೋಟೋಗ್ರಫಿ- ಇವೆಲ್ಲವೂ ಸಾಕು ಎನ್ನಿಸಿದಾಗ ಕಾಡಿನಲ್ಲಿ ಅಲೆದಾಟ, ತಾನು ಬರೆದದ್ದು ಮುಗಿದಿದೆ ಎನ್ನಿಸಿದಾಗ ಕೆನೆತ್ ಆಂಡರ್ಸನ್, ಜಿಮ್ ಕಾಬರ್ೆಟ್, ನಡುನಡುವೆ ಹೆನ್ರಿ ಚಾರಿಯರ್, ಆಗೊಮ್ಮೆ ಮಿಲೇನಿಯಮ್ ಸೀರೀಸ್- ಮತ್ತೆ ಮತ್ತೆ ಕುಳಿತು ಓದಬಹುದಾಗ ಬರಹಗಳೇ ಎಲ್ಲವೂ. ಅದರಲ್ಲೂ ಮಕ್ಕಳಿಗಂತೂ ಸುಗ್ರಾಸ ಸುಗ್ಗಿ.

ತೇಜಸ್ವಿಯವರಿಲ್ಲದ ಕಳೆದೆರಡು ವರುಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಅಂಥ ಮಹತ್ವದ ಬದಲಾವಣೆಯೇನೂ ಆಗಿಲ್ಲ. ಅವರಿದ್ದಿದ್ದರೆ ಮಾಯಾಲೋಕದ ಎರಡನೆಯ ಭಾಗ ಹೊರಬರುತ್ತಿತ್ತು. ಅದಾದ ಮೇಲೆ ಮತ್ತೊಂದೇನೋ ಮಾಂತ್ರಿಕವಾದದ್ದನ್ನು ಅವರು ನೀಡುತ್ತಿದ್ದರು. ತೋಟ ವರುಷ ವರುಷ ಹೊಸ ಚಿಗುರು ತಳೆಯುವ ಹಾಗೆ, ಕಾಫಿ ಹೂವು ಅರಳುವ ಹಾಗೆ, ಆಕಸ್ಮಿಕವಾಗಿ ಹಾರುವ ಓತಿ ಸಿಕ್ಕಿ ಪುಳಕಗೊಳ್ಳುವ ಹಾಗೆ, ಚಿದಂಬರ ರಹಸ್ಯವನ್ನು ಬಗೆಯುವ ಹಾಗೆ ಮತ್ತೊಂದೇನೋ ಹುಟ್ಟುತ್ತಿತ್ತು.

ಈ ಮಧ್ಯೆ ಒಂದಷ್ಟು ವಿನಾಕಾರಣ ವಿವಾದಗಳನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಕಂಡಿದೆ. ಅಂಥ ಹೊತ್ತಲ್ಲಿ ತಿರುಗಿ ನೋಡುವುದಕ್ಕೆ ತೇಜಸ್ವಿ ಇರಲಿಲ್ಲ. ಜಗಳ ಆವರಣ ದಾಟಿದಾಗ, ಮತ್ತಾವುದೋ ಸಂವಾದ ಹೊಸಿಲು ದಾಟಿದಾಗ ಅವರೊಂದಷ್ಟು ಗದರುತ್ತಿದ್ದರು. ಅವರ ಬೈಗಳನ್ನೂ ಅದರ ಹಿಂದಿರುತ್ತಿದ್ದ ಪ್ರೀತಿಯನ್ನೂ ನಾವು ಮಿಸ್ ಮಾಡಿಕೊಂಡಿದ್ದೇವೆ.

ಕನ್ನಡ ತಂತ್ರಾಂಶದ ಕತೆ ಅಲ್ಲಿಗೇ ನಿಂತಿದೆ. ಕನ್ನಡಕ್ಕೂ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ತಂತ್ರಜ್ಞಾನ ಬೇಕು ಕಣ್ರಯ್ಯಾ ಎಂದು ಜಗಳ ಆಡುವುದಕ್ಕೆ ಅವರಿಲ್ಲ. ಹಳೆಯ `ನುಡಿ’ಯೇ `ಬರಹ’ಕ್ಕೆ ಸೀಮಿತವಾಗಿದೆ.

ಕಣ್ಮರೆಯ ಕಾಡಿನಲ್ಲಿ ತೇಜಸ್ವಿ ಅಲೆದಾಡುತ್ತಿದ್ದಾರೆ. ಅವರ ಜಗಳಗಂಟ ನಾಯಿ ಕಿವಿ, ತಂಟೆಕೋರ ಸಹಾಯಕ ಪ್ಯಾರ, ಹಾದಿಬೀದಿಯಲ್ಲಿ ಎದುರಾಗುವ ತರಲೆ ತಾಪತ್ರಯ, ಧುತ್ತೆಂದು ಕಾಣಿಸುವ ವಿಸ್ಮಯ, ಝಗ್ಗನೆ ಪ್ರಕಾಶಿಸಿ ನಮ್ಮ ದೈನಂದಿನ ಯಾಂತ್ರಿಕತೆಯನ್ನು ಹೊರದಬ್ಬುವ ಮಾಯಾಲೋಕ- ಎಲ್ಲವನ್ನೂ ಅವರು ಮೂಟೆ ಕಟ್ಟಿಕೊಂಡು ಹೊರಟಾಗಿದೆ.

ಈಗಲೂ ಮೂಡಿಗೆರೆಯ ಹ್ಯಾಂಡ್ಪೋಸ್ಟ್ ದಾಟುವಾಗೆಲ್ಲ ಕಣ್ಣೊಮ್ಮೆ ಅವರ ಮನೆಯ ರಸ್ತೆಯತ್ತ ಹಾಯುತ್ತದೆ. ಅವರ ಮನೆಯ ಹಳದಿ ಗೇಟು ಕಂಡು ಖುಷಿಯಾಗುತ್ತದೆ. ಮೂಡಿಗೆರೆಯಲ್ಲೋ ಬಣಕಲ್ನ ಆಸುಪಾಸಲ್ಲೋ ಮಂದಣ್ಣ ನಡೆದುಹೋಗುತ್ತಿರಬಹುದೇ ಎಂದು ಹುಡುಕಾಡುತ್ತೇವೆ. ಲೂನಾದಲ್ಲಿ ಭರರ್ೊ ಎಂದು ಸದ್ದು ಮಾಡುತ್ತಾ ಚಿಕ್ಕಮಗಳೂರಿನ ರಸ್ತೆಯ ಏರುಹಾದಿಯಲ್ಲಿ ಲೂನಾದಲ್ಲಿ ಸಾಗುತ್ತಿರುವವನು ಅವರ ಕತೆಯಲ್ಲೇ ಬರುವ ಪೋಸ್ಟ್ಮ್ಯಾನ್ ಇರಬಹುದಾ ಎನ್ನಿಸುತ್ತದೆ. ಕೊಟ್ಟಿಗೆಹಾರದಲ್ಲಿ ನಡುರಾತ್ರಿ ಇಳಿದು ಸುತ್ತ ಕಣ್ಣುಹಾಯಿಸಿದರೆ, ಆ ಫಾರೆಸ್ಟ್ ಚೆಕ್ಪೋಸ್ಚು, ನೀರು ದೋಸೆ ಮಾರುವ ಹೊಟೆಲ್ಲು, ಎಸ್ಟೀಡಿ ಬೂತ್, ಅಲ್ಲಲ್ಲಿ ವಿನಾಕಾರಣ ಮಾತಾಡುತ್ತಾ ನಿಂತ ಗುಂಪು- ಎಲ್ಲವೂ ಅವರ ಕಥನಶೈಲಿಯ ವಿಚಿತ್ರ ಹೊಳಪಿನಲ್ಲಿ ಮಿನುಗಿ, ನಾವು ನಿಂತಿರುವುದು ಜುಗಾರಿಕ್ರಾಸ್ ಇರಬಹುದೇ ಎಂದು ಅರೆಕ್ಷಣ ಅನುಮಾನವಾಗುತ್ತದೆ.

12 ಟಿಪ್ಪಣಿಗಳು (+add yours?)

 1. ಕೆ.ರಾಜಶೇಖರ ಹೊಣಕರೆ
  ಏಪ್ರಿಲ್ 08, 2010 @ 15:56:16

  ಜೋಗಿ ಅವರಿಗೆ ನಮನಗಳು,
  ‘ಅವರಿಲ್ಲದ ಜುಗಾರಿಕ್ರಾಸ್’ನಲ್ಲಿ ಪೂಚಂತೆ ಅವರನ್ನು ಎಲ್ಲಾ ಕೋನಗಳಿಂದಲು ನೆನಪಿಸಿಕೊಂಡಿರಿವುದಕ್ಕೆ ನನ್ನ ಅಭಿನಂದನೆಗಳು. ಆದರೆ ಒಂದು ಮಾತು ಸತ್ಯ ಏನಂದರೆ ನಾವು ಕನ್ನಡಿಗರು, ಸಾಹಿತ್ಯದ ಆಸಕ್ತರು ತೇಜಸ್ವಿಯನ್ನು, ಅವರ ಸಾಹಿತ್ಯವನ್ನು ಇಷ್ಟ ಪಡುವವರು ಅವರನ್ನು ಮರೆತಿದ್ದರೆ ತಾನೇ ಅವರನ್ನು ನೆನಪಿಸಿಕೊಳ್ಲುವುದು. ಅವರು ಸದಾಕಾಲ ನಮ್ಮ ನೆನಪಿನಲ್ಲಿದ್ದಾರೆ. 80ರ ದಶಕ ‘ತುಷಾರ’ ಮಾಸಿಕ ಪತ್ರಿಕೆಯ ಆಹ್ವಾನ ಕಾಲಂ ‘ದಶಕದ ಸ್ಮರಣೀಯ ಗ್ರಂಥಗಳು,ಗೆ ಅವರ ‘ನಿಗೂಢ ಮನುಸ್ಯರು’ಕಿರು ಕಾದಂಬರಿಯನ್ನು ಸ್ಮರಿಸುತ್ತ ಲೇಖನ ಬರೆದು ಕಳುಹಿಸಿದ್ದೆ, ಆ ಲೇಖನ ಪ್ರಕಟವಾಗಿ ಬಹುಮಾನ ಬಂದಿತ್ತು. ನಾನು ತುಂಬ ಕುಶಿಯಿಂದ ಆ ಲೇಖನವನ್ನು ಜೆರಾಕ್ಸ್ ಮಾಡಿ ಕಳುಹಿಸಿ ನನ್ನ ಸಂತೋಷವನ್ನು ತೋಡಿಕೊಂಡಿದ್ದೆ. ಎಷ್ಟೋ ದಿನಗಳನಂತರ ಅವರಿಂದ ಸಣ್ಣದೊಂದು ಪತ್ರ ಬಂತು, ಅದರಲ್ಲಿ ಇದೇನು ದೊಡ್ಡ ಸಾಧನೆಯಲ್ಲ ಕಣ್ರೀ, ಸಾಹಿತ್ಯವನ್ನು ಮತ್ತಷ್ಟು ಆಳವಾಗಿ ಅಭ್ಯಾಸ ಮಾಡಿ ಎಂದು ಬರೆದಿದ್ದರು. ಇದು ಅವರ ವ್ಯಕ್ತಿತ್ವಕ್ಕೆ ವಿರುದ್ಧವಾದ ಪ್ರತಿಕ್ರಿಯೆ ಆದರೂ ನನಗೆ ಅವರು ಯಾವತ್ತೂ ವಿಸ್ಮಯ ವ್ಯಕ್ತಿಯಾಗಿದ್ದರು.
  ಇತಿ, ನಿಮ್ಮ ಕೆರಾಹೊ.

  ಉತ್ತರ

 2. prashu
  ಏಪ್ರಿಲ್ 06, 2010 @ 19:50:50

  tejaswi estondu prashnegalanna haage ulisihodaru alva?

  ಉತ್ತರ

 3. jogi
  ಏಪ್ರಿಲ್ 05, 2010 @ 23:33:02

  @ಶ್ರೀಧರ,
  ಆಕಸ್ಮಿಕ ಅಲ್ಲ. ಪುಟ್ಟ ಊರು ಹೆಗ್ಗೋಡನ್ನು ಸುಬ್ಬಣ್ಣ ಜಗತ್ತಿಗೇ ಪರಿಚಯಿಸಿದರು. ಆದರೆ ನಾನು ಹೇಳುತ್ತಿರುವುದು ಸಾಹಿತ್ಯದ ಮೂಲಕ ಒಂದು ಊರನ್ನು ಅಜರಾಮರ ಆಗಿಸಿದ್ದರ ಕುರಿತು. ಸುಬ್ಬಣ್ಣ ಸಾಹಿತ್ಯದಲ್ಲಿ ಹೆಗ್ಗೋಡು ಬಂದಿಲ್ಲ. ಅಷ್ಟಕ್ಕೂ ಸುಬ್ಬಣ್ಣನವರು ಕತೆ, ಕಾದಂಬರಿ ಬರೆಯಲಿಲ್ಲ.

  ಉತ್ತರ

 4. ಡಿ.ವಿ.ಶ್ರೀಧರ
  ಏಪ್ರಿಲ್ 05, 2010 @ 22:29:50

  ಒಂದು ಪುಟ್ಟ ಊರನ್ನು…… ಪಟ್ಟಿಯಲ್ಲಿ ಕೆ.ವಿ. ಸುಬ್ಬಣ್ಣ ಮರೆತಿರುವುದು ಆಕಸ್ಮಿಕ ಎನ್ನೋಣವೆ?

  ಉತ್ತರ

 5. Chandru NB
  ಏಪ್ರಿಲ್ 05, 2010 @ 20:05:32

  ಮತ್ತೆ ಮತ್ತೆ ತೇಜಸ್ವಿ ತಮ್ಮ ಬರಹಗಳ ತೇಜಸ್ಸಿನಿಂದ ನೆನಪಾಗಿ ಕಾಡುತ್ತಾರೆ. ಅವರ ಬರಹಗಳ ತೇಜಸ್ಸು ಅವರು ನಮ್ಮೊಂದಿಗಿಲ್ಲ ಎಂಬ ಭಾವನೆಯನ್ನು ದೂರ ಮಾಡಿದೆ.
  ಆದರೆ…!
  ತೇಜಸ್ವಿ ನಿಮ್ಮ ನೋಡುವ ಆಸೆಯನ್ನು ಆಸೆಯಾಗೆ ಬಿಟ್ಟು ಹೋದಿರಲ್ಲ .
  ನಿಮ್ಮ
  ಚಂದ್ರು ಎನ್ ಬಿ

  ಉತ್ತರ

 6. ಕುಮಾರ ರೈತ
  ಏಪ್ರಿಲ್ 05, 2010 @ 14:18:36

  ಜೋಗಿ,ಪುಟ್ಟ ಬರಹದಲ್ಲಿ ತೇಜಸ್ವೀನ ಚೆನ್ನಾಗಿ ಹಿಡಿದಿಟ್ಟಿದ್ದೀರಿ.ತೇಜಸ್ವೀ ನಿಮ್ಮಂಥವರ ನನ್ನಂಥವರ ಮನಗಳಲ್ಲಿ ಅಮರ.ಮೂರು ವರ್ಷದ ಹಿಂದೆ
  ಕೊಟ್ಟಿಗೆಹಾರದಿಂದ ಚಾರ್ಮಾಡಿ ತನಕ ಚಾರಣ ಹೋಗಿ ವಾಪ್ಪಸ್ಸು ಬಂದು ತೇಜಸ್ವೀ ಮುಂದೆ ಕುಳಿತಿದ್ವಿ.ನಮ್ಮ ಅನುಭವ ಕೇಳಿಸ್ಕಂಡವ್ರು ಸೋಮನಕಾಡಿಗೆ ಚಾರಣ ಹೋಗ್ಬೇಕಿತ್ತು ಕಣಯ್ಯ ಅಂದು ಅದ್ರ ಬಗ್ಗೆ ಒಂದಷ್ಟು ವಿಷ್ಯ ಹೇಳಿದ್ರು.ಸೋಮನಕಾಡಿಗೆ ಹೋಗ್ಬೇಕೆನ್ನುವ ಗುಂಗು ಹತ್ತಿಸಿದ್ರು.
  ಬೆಂಗಳೂರಿಗೆ ಬರುವುದೆಂದ್ರೆ ಅವ್ರಿಗೆ ಬೋರು.ಒಮ್ಮೆ ಮುಂಗಾರು ಮಳೆ ಹಬ್ಬ ಮಾಡಿದಾಗ ತೇಜಸ್ವೀ ಇರಬೇಕೆನ್ನಿಸಿತ್ತು.ಪೋನ್ ಮಾಡಿದ್ರೆ ಏಯ್ಯ ಎಂಥದ್ರಯ್ಯ ನಿಮ್ ಕಥೆ. ಮಳೆಗಾಲ ಮುಗಿತಿದೆ.ಹೀಗೆಂಥ ಮುಂಗಾರು ಮಳೆ ಹಬ್ಬ ಅಂದು ಜೋರಾಗಿ ನಕ್ಕು,”ಬೆಂಗಳೂರಿಗೆ ಬರೋದಂದ್ರೆ ಬೋರು.ಅಲ್ದೇ ನನ್ನ ಕೆಲ್ಸ ನಿಲ್ಲುತ್ತೆ” ಅಂದಿದ್ರು.ಮನಸಿನಲ್ಲಿದ್ದ ಮಾತ್ನ ಹೇಳೋ ಎದೆಗಾರಿಕೆಯಿದ್ದ ತೇಜಸ್ವಿ ಅಮರ…..

  ಉತ್ತರ

 7. geetha bilinele
  ಏಪ್ರಿಲ್ 05, 2010 @ 10:56:49

  poorna chandira mareyagiddare…… thumba miss madkoltha idivi thejasvi nimma

  ಉತ್ತರ

 8. sunil
  ಏಪ್ರಿಲ್ 07, 2009 @ 11:40:36

  Tumba chennagide….
  nijakkoo manassige novaagutte..tajasviyavranna tum,ba niss maadkotideeni…:( omme avara manege hogi avranna nodi barbekanno aase haage uliduhoyitu.

  ಉತ್ತರ

 9. minchulli
  ಏಪ್ರಿಲ್ 05, 2009 @ 11:32:29

  thumba chenda barediruviri…

  ಉತ್ತರ

 10. Agnihothri
  ಏಪ್ರಿಲ್ 05, 2009 @ 10:18:50

  ಜೋಗಿ ಸರ್…
  ತೇಜಸ್ವಿ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ. ತೇಜಸ್ವಿ ಅವರನ್ನ ಬಹಳ ವರ್ಷ ನೋಡಿ, ಅವರೂಂದಿಗೆ ಬಹುಕಾಲ ಒಡನಾಡಿದವ ನಾನಲ್ಲದಿದ್ದರೂ… ಅವರನ್ನು ತುಂಬಾ ಇಷ್ಟ ಪಡುವ ಎಲ್ಲರಂತೆ ನಾನು ಒಬ್ಬ. ಅವರನ್ನು ಮೊದಲು ಭೇಟಿ ಆಗಿದ್ದು ಒಂಬತ್ತು ವರ್ಷಗಳ ಹಿಂದೆ. ಆಬಳಿಕ ಹಲವು ಬಾರಿ ಭೇಟಿ ಮಾಡಿದ್ದೇನೆ. ಆದರೆ ಅವರ ಸಂಪೂರ್ಣ ವ್ಯಕ್ತಿತ್ವ ಅರಿಯುವಸ್ಟರಲ್ಲಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಈಗ ನೆನಪು ಮಾತ್ರ.
  ತಾವು ಅವರನ್ನು ಚೆನ್ನಾಗಿ ಬಲ್ಲವರು… ನಿಮ್ಮ ಭಂಡಾರದಲ್ಲಿ ಅವರ ಬಗ್ಗೆ ಸಾಕಸ್ಟು ಸಾಲುಗಳಿವೆ… ಬರೆದು ನಮಗೂ ತಿಳಿಸುವಿರೇ…?

  ಉತ್ತರ

 11. Dr. BR. Satyanarayana
  ಏಪ್ರಿಲ್ 04, 2009 @ 11:40:59

  ಹೌದು! ಇತ್ತೀಚಿನ ಕೆಲವು ವಿದ್ಯಮಾನಗಳ ವಿಷಯದಲ್ಲಿ ನಾನಂತೂ ತೇಜಸ್ವಿಯವರನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇನೆ. ಅವರಿದ್ದರೆ ಇವಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂದು ಅನ್ನಿಸಿದ್ದಿದೆ.

  ಉತ್ತರ

 12. kaviswara shikaripura
  ಏಪ್ರಿಲ್ 04, 2009 @ 11:20:04

  Tejaswi-yavara vishishtatheye Mudigere-yantha’Mafusil’ pradesha-gala chitrana.. kannada saahithyada mattige inthaha pradeshagala jana-jeevanavannu baravanige-gala moolaka thredittavaru tejaswiyobbare… namma yella nagaragalu bengalurina thunukugalaagutthiruva prasaktha sandharba-dalli mafusile pradesha-gala jeevanthike hecchu prasthutha-venisutthade…

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: