ತೆನಾಲಿ ರಾಮನೂ… ಬಿ ಟಿ ಬದನೆಯೂ..

-ಜರ್ಮನಿಯಿಂದ ವಿವೇಕ ರೈ

ಇತ್ತೀಚೆಗೆ ಹಂಪಿಯಲ್ಲಿ ಕೃಷ್ಣದೇವರಾಯನ ೫೦೦ನೆಯ ಪಟ್ಟಾಭಿಷೇಕ ಉತ್ಸವವನ್ನು ವೈಭವಯುತವಾಗಿ ಆಚರಿಸಿದ್ದನ್ನು ಇಂಟರ್ನೆಟ್ ನಲ್ಲಿ ಕನ್ನಡ ಪತ್ರಿಕೆಗಳಲ್ಲಿ ಓದಿದೆ.ನಾನೂ ಮೂರು ವರ್ಷ ಹಂಪಿಯಲ್ಲಿ ಇದ್ದವನಾದ್ದರಿಂದ ಸಹಜವಾಗಿಯೇ ಕುತೂಹಲದಿಂದ ಅವಲೋಕಿಸಿದೆ.ಹಂಪಿಯ ಬೀದಿಗಳಲ್ಲಿ ಮುತ್ತುರತ್ನಗಳನ್ನು ಮಾರಿದರೋ ಗೊತ್ತಾಗಲಿಲ್ಲ.ನನಗೆ ಕೃಷ್ಣ ದೇವರಾಯನಿಗಿಂತ  ಅವನ ಆಸ್ಥಾನದಲ್ಲಿದ್ದ  ತೆನಾಲಿರಾಮ  ಇಷ್ಟ. ನಾನು ಹುಡುಗನಾಗಿದ್ದಾಗಲೇ  ತೆನಾಲಿರಾಮನ  ಕಥೆಗಳನ್ನು ಓದಿ ಸಂತೋಷ ಪಟ್ಟವನು.  ಅಂತಹ   ತೆನಾಲಿರಾಮನನ್ನು ಈ ಉತ್ಸವದಲ್ಲಿ ಯಾರಾದರೂ  ನೆನಪುಮಾಡಿಕೊಂಡರೋ ತಿಳಿಯಲಿಲ್ಲ.

ತೆನಾಲಿರಾಮ  ಬದನೆ  ಕದ್ದ  ಕಥೆ ಸ್ವಾರಸ್ಯವಾದುದು.

ಒಂದು ದಿನ ಕೃಷ್ಣದೇವರಾಯ ಏರ್ಪಡಿಸಿದ ಭೋಜನಕೂಟದಲ್ಲಿ , ತನ್ನ ತೋಟದ ಬದನೆಯ ಪಲ್ಯ ಮಾಡಿಸಿದ.  ಆ ಬದನೆಯ ಪಲ್ಯ  ಎಷ್ಟು  ರುಚಿಕಟ್ಟು ಆಗಿತ್ತೆಂದರೆ ಎಲ್ಲರೂ ಮತ್ತೆ ಮತ್ತೆ ಹಾಕಿಸಿಕೊಂಡು ಅದನ್ನು ತಿಂದರು.  ಊಟದ ಬಳಿಕ ಎಲ್ಲರ ಬಾಯಲ್ಲೂ ರಾಯನ ತೋಟದ ಬದನೆಯದ್ದೆ ಗುಣಗಾನ.  ಮನೆಗೆ ಬಂದವನೇ ತೆನಾಲಿ ರಾಮ ಹೆಂಡತಿಯಲ್ಲಿ ಆ ಬದನೆಯ ಸ್ವಾದದ ವರ್ಣನೆಯನ್ನು ಬಾಯಲ್ಲಿ ನೀರೂರುವಷ್ಟು ಮಾಡಿದ. ಇದನ್ನು ಕೇಳಿದವಳೇ   ಅವನ ಹೆಂಡತಿ , ಅದೇ ತೋಟದಿಂದ ಬದನೆ ತಂದು ತಮ್ಮಲ್ಲೂ ಅದನ್ನು ಅಡುಗೆಮಾಡಿ ತಿನ್ನಬೇಕೆಂದು ಹಠ ಹಿಡಿದಳು.  ಆದರೆ ಕೃಷ್ಣ ದೇವರಾಯನಿಗೆ ಆ ಬದನೆಯ ಬಗ್ಗೆ ಎಷ್ಟೊಂದು ಮೋಹ ಇತ್ತೆಂದರೆ ,ಆ ತೋಟದ ಬದನೆ ಕಾಯಲು ವಿಶೇಷ  ವ್ಯವಸ್ಥೆ ಮಾಡಿದ್ದಷ್ಟೇ ಅಲ್ಲ, ಒಂದು  ಬದನೆ ಕಾಣೆ ಆದರೂ  ಕದ್ದವರ ತಲೆ ಕಡಿಯುವ  ಆಜ್ಞೆ ಮಾಡಿದ್ದ. ಆದ್ದರಿಂದ ಈ ಎಲ್ಲ ಸಂಗತಿಯನ್ನು ಹೆಂಡತಿಗೆ ಬಗೆಬಗೆಯಾಗಿ ತೋಡಿಕೊಂಡ ತೆನಾಲಿ ರಾಮ.  ಆದರೂ ಹೆಂಡತಿ ಹಠ ಬಿಡಲಿಲ್ಲ. ಕೊನೆಗೆ ತೆನಾಲಿರಾಮ ತನ್ನೆಲ್ಲಾ ಜಾಣ್ಮೆ ಬಳಸಿ,  ಕಾವಲುಗಾರರ ಕಣ್ಣು ತಪ್ಪಿಸಿ, ರಾಯನ ತೋಟದಿಂದ ಒಂದು ಬದನೆ ಕದ್ದು ತಂದು ಹೆಂಡತಿಗೆ ಕೊಟ್ಟ. ಅವಳು ಅದರ ಅಡುಗೆ ಮಾಡಿ ,ಅದರ ರುಚಿ ಸವಿದು ಪರವಶಳಾಗಿಬಿಟ್ಟಳು.  ಅವರಿಗೆ ಒಬ್ಬನೇ ಮಗ, ಆರು ವರ್ಷದ ಹುಡುಗ ಮನೆಯ ಮೇಲ್ಗಡೆ ಮಲಗಿದ್ದ.  ಅವನಿಗೆ ಇಷ್ಟು ರುಚಿಯ ಬದನೆಯ ಪಲ್ಯ ಕೊಡದಿದ್ದರೆ ಹೇಗೆ ಎನ್ನುವ ಒತ್ತಾಯ ಅವಳದ್ದು. ತೆನಾಲಿ ರಾಮನಿಗೆ ಅಂಜಿಕೆ.  ‘ಈ ಹುಡುಗ ಎಲ್ಲಿಯಾದರೂ ಬಾಯಿ ಬಿಟ್ಟರೆ ನಮ್ಮ ಗತಿ ಏನು’ ಎಂದು. ಆದರೆ ಹೆಂಡತಿ ಒತ್ತಡ ತಡೆಯಲಾಗಲಿಲ್ಲ . ಕೊನೆಗೆ ತೆನಾಲಿ ರಾಮ ಒಂದು ಉಪಾಯ ಮಾಡಿದ.  ಒಂದು ಬಾಲ್ಡಿ ನೀರು ತೆಗೆದುಕೊಂಡು, ಮೇಲಕ್ಕೆ ಮಗ ಮಲಗಿದ್ದಲ್ಲಿಗೆ ಹೋಗಿ,  ಮಗನ ಮೇಲೆ ಚೆಲ್ಲಿ,’ನೋಡು ಮಳೆ ಬರುತ್ತಿದೇ , ಏಳು,  ಊಟ ಮಾಡು’ ಎಂದು  ಎಬ್ಬಿಸಿ ಕೆಳಗೆ ಕರೆದುಕೊಂಡು ಹೋಗಿ, ಒದ್ದೆಬಟ್ಟೆ ತೆಗೆಸಿ, ಬೇರೆ ಬಟ್ಟೆ ಹಾಕಿಸಿ,  ಬದನೆ ಪಲ್ಯ ಬಡಿಸಿ ಊಟ  ಮಾಡಿಸಿದ.  ಹುಡುಗ ತುಂಬಾ ಖುಷಿಯಿಂದ ಊಟ ಮಾಡಿದ. ತೆನಾಲಿರಾಮ ಮತ್ತೆ ಮಗನಲ್ಲಿ , ‘ಹೊರಗೆ ಮಳೆ ಬರುತ್ತಿದೆ, ನೀನು ಒಳಗೆ ಮಲಗು ‘ ಎಂದು ಒಳಗೆ ಮಲಗಿಸಿದ.

ಮರುದಿನ ಸುದ್ದಿ ಆಯಿತು. ಕೃಷ್ಣ ದೇವರಾಯನ ತೋಟದ ಬದನೆ ಕದ್ದ ವಿಚಾರ. ಚಾಣಾಕ್ಷನಾದ  ತೆನಾಲಿರಾಮ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯ ಇಲ್ಲ ಎಂದು ನಿರ್ಧರಿಸಿದರು.ಆದರೆ ಆತ  ನಿಜ ಹೇಳಲಾರ .ಆತನ ಮಗ ಸತ್ಯ ಹೇಳಿಯಾನು’ಹೀಗೆ ಭಾವಿಸಿ ಮಗನನ್ನು ಕರೆಸಿದರು.ಮಗ ನಿಜ ಹೇಳಿದ.ನಿನ್ನೆ ರಾತ್ರಿ ಬದನೆ ಪಲ್ಯ  ಊಟ ಮಾಡಿದೆ  ಎಂದು.ಇನ್ನೇನು  ತೆನಾಲಿರಾಮನ ತಲೆ ಕಡಿಯುವುದಷ್ಟೇ  ಬಾಕಿ.ಆಗ ತೆನಾಲಿ ರಾಮ ಹೇಳಿದ,’ಸ್ವಾಮೀ,ಈ ಹುಡುಗ ಕನಸಿನಲ್ಲಿ ಏನೇನೋ ಕನವರಿಸುತ್ತಾನೆ.ಅವನ್ನೆಲ್ಲ ನಿಜ ಎಂದು ಹೇಳಲಿಕ್ಕಾಗುತ್ತದೆಯೇ ?ಬೇಕಾದರೆ ನೀವೇ ಕೇಳಿ ನಿನ್ನೆ ಮಳೆ ಬಂದಿತ್ತೋ’ಎಂದು.ಹುಡುಗನನ್ನು ಕೇಳಲಾಯಿತು ,’ನಿನ್ನೆ ರಾತ್ರಿ ಮಳೆ ಬಂದಿತ್ತಾ?’ಎಂದು.ಹುಡುಗ ‘ಹೌದು,ಜೋರು ಮಳೆ ಬಂದಿತ್ತು,ನಾನು ಬಟ್ಟೆ  ಬದಲಿಸಿ ,ಆಮೇಲೆ ಒಳಗೆ ಮಲಗಿದೆ’ಎಂದ.ನಿಜವಾಗಿ ಮಳೆ ಬಂದೆ ಇರಲಿಲ್ಲ.ಹುಡುಗ ಏನೋ ಭ್ರಮೆಯಿಂದ ಮಾತಾಡುತ್ತಾನೆ ಎಂದು ಭಾವಿಸಿ ತೆನಾಲಿ ರಾಮನನ್ನು ನಿರ್ದೋಷಿ ಎಂದು  ಸಾರಿದರು.

ಈಗ ನನಗಿರುವ ಕುತೂಹಲ, ಮೊನ್ನೆ ಕೃಷ್ಣದೇವರಾಯ ಉತ್ಸವದಲ್ಲಿ ಊಟಕ್ಕೆ ಬದನೆ ಪಲ್ಯ ಮಾಡಿದ್ದರೆ ಎಂದು.ನಾನು ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇದ್ದ ಮೂರು ವರ್ಷದ ಅವಧಿಯಲ್ಲಿ (೨೦೦೪-೦೭) ನಮ್ಮ ಮನೆಯಲ್ಲಿ ಅಡುಗೆಗೆ ಸಹಾಯಕರಾಗಿ  ಸುಭದ್ರಮ್ಮ ಇದ್ದರು.ಅವರು ಹಂಪಿಯ ಪಕ್ಕದ ಕಮಲಾಪುರದವರು .ಅವರು ಎಣ್ಣೆಗಾಯಿ ಚೆನ್ನಾಗಿ ಮಾಡುತ್ತಿದ್ದರು.ನನಗೆ ವಾರದಲ್ಲಿ ಮೂರುಬಾರಿಯಾದರೂ ಜೋಳದರೊಟ್ಟಿ ಎಣ್ಣೆಗಾಯಿ ಊಟಕ್ಕೆ ದೊರೆಯುತ್ತಿತ್ತು.ಧಾರವಾಡದ ಸಂಪರ್ಕ ಬಂದ ಬಳಿಕ ಎಣ್ಣೆಗಾಯಿ ನನಗೆ ಇಷ್ಟ ಆಗಿತ್ತು.ಕೃಷ್ಣದೇವರಾಯನಿಗೆ ಬದನೆ  ಇಷ್ಟ ಎಂದು ನನಗೆ  ಗೊತ್ತಾದದ್ದು ತಡವಾಗಿ.

ಕೃಷ್ಣದೇವರಾಯ ಬದನೆ ಇಷ್ಟ ಪಟ್ಟದ್ದಕ್ಕೆ  ಒಂದು ಹೊಸ ಕಾರಣ ಈಗ ನನಗೆ ಹೊಳೆಯುತ್ತದೆ.ಬದನೆಯನ್ನು ‘ತರಕಾರಿಗಳ ಚಕ್ರವರ್ತಿ’ಎಂದು ಕರೆದಿದ್ದಾರೆ.ತಮಿಳು ಜನಪದ ಕಥೆಯೊಂದರಲ್ಲಿ  ,ಒಬ್ಬ ರಾಜ ಇರುತ್ತಾನೆ.ಅವನಿಗೆ ಬದನೆ ಬಹಳ ಇಷ್ಟ .ದಿನಾ ಬದನೆಯ ಅಡುಗೆ.ಕೊಳಮ್ಬೋ ಸಾಂಬಾರೋ  ಇರಬೇಕು.ರಾಜ ತನ್ನ ಮಂತ್ರಿಯೊಡನೆ ಬದನೆಯ ಶ್ರೇಷ್ಟತೆಯನ್ನು ಕೊಂಡಾಡುತ್ತಾನೆ .’ನೋಡು ಬದನೆಯ ತಲೆಯಲ್ಲಿ ಕಿರೀಟ ಇದೆ.ಅದು ದೇವರು ಕೊಟ್ಟ ಕಿರೀಟ.ಬದನೆ ತರಕಾರಿಗಳ ರಾಜ.’ ದಿನಾಲೂ ಬದನೆ ತಿಂದು ಆ ರಾಜನಿಗೆ ಅಜೀರ್ಣ ಆಗುತ್ತದೆ.ಆಗ ಆತ ಮಂತ್ರಿಯಲ್ಲಿ ಹೇಳುತ್ತಾನೆ,’ಬದನೆ ಕೆಟ್ಟದ್ದು,ಅದರ ತಲೆಯಲ್ಲಿ ಮುಳ್ಳು ಇದೆ’ ಎಂದು.

ಬದನೆ ಮನುಷ್ಯರಿಗೆ ಇಷ್ಟವಾದ ಕಾರಣ  ಅದು  ದೇವರಿಗೂ ಇಷ್ಟ ಆಯಿತು.ಉಡುಪಿಯ ‘ಮಟ್ಟು ಗುಳ್ಳ’ತುಂಬಾ ಪ್ರಸಿದ್ಧವಾದುದು.ವಾದಿರಾಜರು ಹಯಗ್ರೀವನಿಗೆ ಇಡುತ್ತಿದ್ದ ನೈವೇದ್ಯ ,ಅದರ ಬಗ್ಗೆ ಬ್ರಾಹ್ಮಣರು ಸಂಶಯ ಪಟ್ಟು ವಿಷ  ಸೇರಿಸುವುದು,ವಾದಿರಾಜರು ಅದನ್ನು ನೈವೇದ್ಯವಾಗಿ ಅರ್ಪಿಸುವುದು,ಮತ್ತೆ ಆ ಬ್ರಾಹ್ಮಣರಿಗೆ ಈ ವಿಶಿಷ್ಟ ಬದನೆಯ ಬೀಜಗಳನ್ನು ಕೊಡುವುದು,ಅವನ್ನು ಸಮುದ್ರ ಬದಿಯ ಮಟ್ಟು ಎಂಬ ಊರಿನಲ್ಲಿ ಬಿತ್ತಿ, ಬದನೆ ಬೆಳೆಸುವುದು.ಅದಕ್ಕೆ ‘ಮಟ್ಟು ಗುಳ್ಳ’ಎಂಬ ನಾಮಕರಣ ಮಾಡುವುದು.. ಹೀಗೆ ಐತಿಹ್ಯ ಇದೆ.ಮಟ್ಟು ಗುಳ್ಳದ ಬಗ್ಗೆ ಸಾಕಷ್ಟು ವೈಜ್ಞಾನಿಕ ಅಧ್ಯಯನಗಳು ನಡೆದಿವೆ.ಪ್ರೊ.ಕು.ಶಿ.ಹರಿದಾಸ ಭಟ್ಟರು ಇದ್ದ ಅವಧಿಯಲ್ಲಿ ಉಡುಪಿಯ ಸಭೆ ಸೆಮಿನಾರ್ ಗಳ ಒಂದು ಆಕರ್ಷಣೆ ಅಲ್ಲಿನ ರುಚಿಕಟ್ಟಾದ ಭೋಜನ .ಅದರಲ್ಲಿ ಮಟ್ಟು ಗುಳ್ಳ ರಸರಾಜ.ಕುಶಿ ಅವರ  ಮನೆಯಲ್ಲೂ ಸಾಕಷ್ಟು ಬಾರಿ ಊಟ ಮಾಡಿದ ನನಗೆ ಈಗ ಮಟ್ಟು ಗುಳ್ಳ ಒಂದು ಪುರಾಣದ ಕಥೆಯಾಗಿದೆ .

ನಮ್ಮ ಹಳ್ಳಿಯಲ್ಲಿ ನಮ್ಮ ಮನೆಯ ಬಳಿ ಮತ್ತು ಗದ್ದೆಯಲ್ಲಿ ನೆಟ್ಟು ಬೆಳೆಸುತ್ತಿದ್ದ ತರಕಾರಿಗಳಲ್ಲಿ ಬದನೆಯೂ ಒಂದು.ಅಲಸಂದೆ,ಸೌತೆ,ಮುಳ್ಳುಸೌತೆ,ಹರಿವೆ ,ಹೀರೆ,ದಾರಹೀರೆ ,ಬೆಂಡೆ..ಹೀಗೆ ನಮ್ಮ ತರಕಾರಿ ಬೆಳೆಗಳಲ್ಲಿ ಹೆಚ್ಚು ಸಮೃದ್ಧ ವಾದವುಗಳಲ್ಲಿ ಬದನೆ ಒಂದು ರೀತಿ ಭೋಜರಾಜ. ರೆಸ ,ಗಸಿ , ಹುಳಿ,ಚಟ್ನಿ ..ಇನ್ನೂ ಮರೆತ ಅನೇಕ  ,ಬದನೆಯ ದಶಾವತಾರಗಳು ನನ್ನ ಅಮ್ಮನ ಪಾಕದಿಂದ ಹೊರಬರುತ್ತಿದ್ದುವು.ಸ್ವಲ್ಪ ನಂಜು  ಎಂದರೂ ಸ್ವಲ್ಪ ಹೆಚ್ಚು ಹುಣಸೆಹುಳಿ ಹಾಕಿದರೆ ಅಲ್ಲಿಗೆ ಮತ್ತೆ ತಕರಾರಿಲ್ಲ.

‘ಪುರಾಣದ ಬದನೇಕಾಯಿ ತಿನ್ನಲಿಕ್ಕೆ ಆಗುವುದಿಲ್ಲ’ ಎನ್ನುವ ಗಾದೆ ಮಾತು ಒಂದಿದೆ.ಹಾಗಾದರೆ ಯಾಕೆ ಈ ಬದನೆಕ್ಕಾಯಿ ಪುರಾಣ ಎಂದು ಕೇಳಬಹುದು.ನಾನು ಇಲ್ಲಿ ಜರ್ಮನಿಗೆ ಬಂದ  ಮೇಲೆ ಇಲ್ಲಿ ಬದನೆ ಸಿಗುವುದಿಲ್ಲ.ಟೊಮೇಟೊ,ನ

ಬಟಾಟೆ,ಕೋಸು,ಕ್ಯಾರೆಟ್ ಹೀಗೆ ತರಕಾರಿ ನಾನೇ ಅಡುಗೆಮಾಡಿ ತಿಂದು ,ಬದನೆಯೇ ನೆನಪೇ ಇರಲಿಲ.  ಈಗ ಸಂಜೆ ಇಂಟರ್ನೆಟ್ ನಲ್ಲಿ ಕರ್ನಾಟಕದ ಇಂದಿನ ಬಿಸಿ ಸುದ್ದಿ ಓದೋಣ ಎಂದು ಈ ಪೇಪರ್ ಗಳನ್ನು  ಹುಡುಕಿದರೆ ಎಲ್ಲೆಲ್ಲೂ ಬದನೆಯದ್ದೆ ಸುದ್ದಿ.ಮತ್ತೆ ಬದನೆಗೆ ರಾಜಯೋಗ ಬಂತಲ್ಲ ಎಂದು ಖುಷಿಯಿಂದ ಓದಿದರೆ  ಇದು ನಮ್ಮ ಬದನೆ ಅಲ್ಲ.ಬಿಟಿ ಬದನೆ.ನಮ್ಮಲ್ಲಿ ಮನುಷ್ಯರ ಹೆಸರುಗಳಿಗೆ ಅವುಗಳ ಮುಂದೆ ಇನಿಶಿಯಲ್ ಸೇರಿಸುವ ಕ್ರಮ ಇದೆ.ನನ್ನ ಹೆಸರಿನ ಮುಂದೆ’ ಬಿಎ’ ಇದೆ.ಈಗ ತರಕಾರಿಗಳಿಗೂ ಇನಿಶಿಯಲ್ ಬಂತಾ ಎಂದು ನೋಡಿದೆ.ಈದಿನ ಬೆಂಗಳೂರಿನ ಸಂವಾದದಲ್ಲಿ ಕೇಂದ್ರದ ಪರಿಸರ ಸಚಿವ ಜೈ ರಾಮರಮೇಶ್ ಅವರು ಬಿಟಿ ಬದನೆಗೆ ಪರ ವಿರೋಧ ಇರುವವರ ಪ್ರಮಾಣ ೫೦:೫೦ ಎಂದು ಕರಾರುವಾಕ್ಕಾಗಿ ಹೇಳಿದ್ದು ಗಮನಿಸಿದೆ.ನನ್ನ ಹಾಗೆ ಅನೇಕ ಮಂದಿ ಈ ೫೦ರಲ್ಲಿ ಸೇರಿಲ್ಲ ಎಂದು ಭಾವಿಸುತ್ತೇನೆ.

ನನಗೆ ಸೋಜಿಗವೆಂದರೆ ಇನೀಶಿಯಲ್ ಹಚ್ಚಲು ಮತ್ತು ಇಂಜಕ್ಷನ ಚುಚ್ಚಲು ಬದನೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂದು.ಬದನೆ ಹುಟ್ಟಿದ್ದು ಭಾರತದಲ್ಲಿ.ಅಲ್ಲಿಂದ ಅದು ಮೊದಲು ಚೀನಾಕ್ಕೆ,ಮತ್ತೆ ಅರೇಬಿಕ್ ದೇಶಗಳಿಗೆ ಮತ್ತೆ ಪಶ್ಚಿಮದ  ಇತರ ದೇಶಗಳಿಗೆ ಹೋಯಿತು.ಈಗಲೂ ಬದನೆ ಬೆಳೆಯುವ ದೇಶಗಳಲ್ಲಿ ಚೀನಾದ ಬಳಿಕ ಭಾರತ ಇದೆ.ಬಳಿಕದ  ಸ್ಥಾನದಲ್ಲಿ  ಟರ್ಕಿ,ಇಂಡೋನೇಷ್ಯ ,ಇರಾಕ್,ಜಪಾನ್ ಬರುತ್ತವೆ.ಈ ಎಲ್ಲ ದೇಶಗಳೂ ತಮ್ಮ ಸ್ವಾಭಿಮಾನ ಇಟ್ಟುಕೊಂಡು ಸ್ವತಂತ್ರವಾಗಿ ಬೆಳೆಯುತ್ತಿರುವ ದೇಶಗಳು.೧೫೦೦ ವರ್ಷಗಳ  ಹಿಂದೆ ನಮ್ಮ ಬದನೆ ಪಶ್ಚಿಮಕ್ಕೆ  ಹೋದಾಗ ಅವರಿಗೆ ಅದು ಮೊಟ್ಟೆಯಂತೆ ಕಾಣಿಸಿತು.ಅದಕ್ಕಾಗಿ ಇದನ್ನು ‘ಎಗ್ ಪ್ಲಾಂಟ್’ಎಂದು ಕರೆದರು. ಬ್ರೆಜಿಲಿನಲ್ಲಿ   ಇದನ್ನು ‘ತರಕಾರಿಗಳ ರಾಜ’ಎಂದು ಹೆಸರಿಸುತ್ತಾರೆ .

ಇಂತಹ ಭಾರತದ ಬದನೆಯ ಸ್ಥಾನದಲ್ಲಿ ಇದರ’ ದೊಡ್ಡಣ್ಣ ಬದನೆ’ಯನ್ನು ತಂದರೆ ,ಇದರ ಮೂಲ ಹೂತುಹೋಗುತ್ತದೆ  ಮತ್ತು ಈಗ ಬದನೆಯ ಬೆಳೆಯಲ್ಲಿ ಭಾರತಕ್ಕೆ ಇರುವ ಹಿರಿತನದ ಪಟ್ಟದಿಂದ ರಾಜನನ್ನು ಇಳಿಸುವ ಹುನ್ನಾರ ಮೊದಲನೆಯದು.ಬದನೆಯ ಸಾಂಸ್ಕೃತಿಕ ಪಾವಿತ್ರ್ಯವನ್ನು,ದೇಸಿ ರುಚಿ ಮತ್ತು ಬಳಕೆಯ ಬಹು ರೂಪಗಳನ್ನು ನಾಶ ಮಾಡುವುದು ಮೂಲಭೂತ ಉದ್ದೇಶ.ಉಳಿದವು ಎಲ್ಲರಿಗೂ ಗೊತ್ತಿರುವವು.ಸಾಕಷ್ಟು ಬರಹಗಳು,ಬ್ಲಾಗ್ ಗಳು,ಚಳವಳಗಳು  ಎಲ್ಲವನ್ನೂ ಬಹಿರಂಗಗೊಳಿಸಿವೆ .

ಅಮೆರಿಕದದ ಕೃಷಿ- ಕಂಪೆನಿ ಮೊನ್ ಸಂತೋದಿಂದ  ತೊಡಗಿ ಡುಪಾಂಟ್,ಸಿನ್ಗೆಂತ ,ದೌ- ಇವೆಲ್ಲ ಪ್ರಾಯೋಜಕ ಕಂಪನಿಗಳು .ಯೂರೋಪಿನ ಬಹುತೇಕ ದೇಶಗಳು ಜೈವಿಕ ಆಹಾರ ಗಳನ್ನುನಿಷೇಧಿಸಿವೆ.ಜರ್ಮನಿಯ ಸರಕಾರವು ಬಿಟಿ ಜೋಳವನ್ನು ಬಹಿಷ್ಕರಿಸಿದೆ .ಬಿಟಿ ಬದನೆಯನ್ನು ಪ್ರವೇಶಿಸಲು ಬಿಟ್ಟಿಲ್ಲ.ಬದನೆಯನ್ನೇ ಬೆಳೆಯದ ಯೂರೋಪಿನ ದೇಶಗಳೇ ಬಿಟಿ ಬದನೆಯನ್ನು ನಿಷೇಧಿಸುವಾಗ ಬದನೆಯ ಹುಟ್ಟೂರು ಮತ್ತು ಜಾಗತಿಕವಾಗಿ  ಬದನೆ ಬೆಳೆಯುವ  ಮುಖ್ಯ ದೇಶ ಭಾರತಕ್ಕೆ ಏನು ಅವಸರ?ಯುರೋಪಿಯನ್ ಯೂನಿಯನ್ ಕಟ್ಟಿಕೊಂಡ ಪ್ರಬಲ ದೇಶಗಳೇ ಹೇಳುತ್ತಿವೆ,’ಕೈಗಾರಿಕೆಗಳು,ಸಂಪರ್ಕ,ಸಾರಿಗೆ ,ವಿದ್ಯುಚ್ಚಕ್ತಿ -ಇಲ್ಲೆಲ್ಲಾ ನಾವು ಸಮಾನ ಮಾರುಕಟ್ಟೆಯನ್ನು ಬಯಸುತ್ತೇವೆ. ಆದರೆ ಕೃಷಿಗೆ ಬಂದಾಗ ನಾವು ಸ್ಥಳೀಯರಾಗಿ ಉಳಿಯಬಯಸುತ್ತೇವೆ.’ ಬೆಂಗಳೂರಿನ ಈದಿನದ ಸಂವಾದಲ್ಲಿ ಒಬ್ಬ ವಿಜ್ಞಾನಿ  ಹೇಳಿದ್ದನ್ನು ಈಗತಾನೆ ಓದಿದೆ.’ನಾವು ಮೊಬೈಲ್ ಗಳನ್ನು ಬಳಸುವವರು  ಬಿಟಿ ಬದನೆಗೆ ಯಾಕೆ ವಿರೋಧಿಸಬೇಕು?’ನಮ್ಮ ಅನೇಕ ವಿಜ್ಞಾನಿಗಳ  ಬೌದ್ಧಿಕ ಬಾಲಿಶತನದ   ಬಗ್ಗೆ ಸಂತಾಪ ಪ್ರಕಟಿಸಬೇಕು .

ದಕ್ಷಿಣ ಕನ್ನಡದ ಭತ್ತದ ಬೇಸಾಯದಲ್ಲಿ ನೇಜಿ (ನಾಟಿ) ನೆಡುವಾಗ ಹೆಂಗುಸರು ಸಾಮೂಹಿಕವಾಗಿ ಹಾಡುವ ಹಾಡುಗಳೇ ಕಬಿತಗಳು. ಅಂತಹ  ಒಂದು ಕಬಿತ ‘ಗೋವಿಂದ ಬದನೆ’. ಬದನೆಯನ್ನು ಮಾರುವ ಬಾಯಿ(ಕ್ರೈಸ್ತ ಹೆಂಗುಸು) ಒಬ್ಬಳು ಮಣ್ಣಿನಲ್ಲಿ ಬದನೆಯ  ಬೀಜಗಳನ್ನು ಹಾಕುವುದು,ಅದಕ್ಕೆ ಗೊಬ್ಬರ ಹಾಕಿ ಬೆಳೆಸುವುಅದು, ಬೆಳೆದ ಬದನೆಗಳನ್ನು ಊರೂರು ಸುತ್ತುತ್ತಾ ಮಾರಾಟಮಾಡುವುದು -ಈ ಕಬಿತದ  ವಸ್ತು.ಇದರಲ್ಲಿ ಪಲ್ಲವಿ ‘ಗೋವಿಂದ ಬದನೆ , ಗೋವಿಂದ ಬದನೆ ‘ಕೊನೆಗೆ ಬದನೆ ಮಾರಾಟ ಮಾಡಿ ಮುಗಿದಾಗ ಎಲ್ಲರೂ ಜೋರಾಗಿ ‘ಗೋವಿಂದ ಬದನೆ’ಎನ್ನುತ್ತಾರೆ.’ಗೋವಿಂದ’ಎಂದರೆ ವ್ಯಂಗ್ಯ ಅರ್ಥದಲ್ಲಿ ‘ಪೂರ್ತಿ  ಮುಗಿಯುವುದು ,ಖಾಲಿ ಆಗುವುದು ‘ಎಂದು ಅರ್ಥ.

ಈಗ ಬಿಟಿ ಬದನೆ ಬಂದರೆ  ನಮ್ಮ ಬದನೆ ‘ಗೋವಿಂದ’. ತೆನಾಲಿರಾಮ ಹೆಂಡತಿಗಾಗಿ ಕೃಷ್ಣದೇವರಾಯನ ತೋಟದಿಂದ ಒಂದು ಬದನೆ ಕದ್ದರೆ ,ಈಗ ಬಿಟಿ ಬದನೆಯ ಕಂಪೆನಿಗಳು ನಮ ಬದನೆಯ ತೋಟ ತೋಟಗಳನ್ನೇ ಹಾಡುಹಗಲೇ ದರೋಡೆ ಮಾಡುತ್ತವೆ.ಈಗ ನಮ್ಮ ಬದನೆಯ  ತಲೆಯ ಕಿರೀಟ ಹೋಗಿ,ಅದರ  ಜಾಗದಲ್ಲಿ  ಬಿಟಿ ಬದನೆಯ ಮುಳ್ಳು ಕಾಣಿಸುತ್ತದೆ .ಇನ್ನು ಮಟ್ಟು ಗುಳ್ಳದ ಬದಲು’ ಬಿಟಿ ನೈವೇದ್ಯ’ ಮಾದಬೇಕಾಗುತದೆ.ಇನ್ನು ಮೇಲೆ ಬದನೆಯ ಗಸಿ, ಹುಳಿ,ಸಾಂಬಾರ್,ಚಟ್ನಿ,ಉಪ್ಪಿನಕ್ಕಾಯಿ,ಎಣ್ಣೆ ಕಾಯಿ  ಬದಲು’ ಬಿಟಿ ಬ್ರಿಂಜಾಲ್ ಮೊಂಸಂತೋ ರೆಸಿಪಿ’ ಸೂಪರ್ ಮಾರ್ಕೆಟ್ ಗಳಲ್ಲಿ ಮಾರಾಟಕ್ಕೆ ಸಿಗುತ್ತದೆ.ಈಗ ಈ ಕಬಿತದ ಈ ಪಲ್ಲವಿಯನ್ನು ಹಾದಬೇಕಾದವರು ಯಾರು?  ‘ಗೋವಿಂದ ಬದನೆ,  ಗೋವಿಂದ ಬದನೆ ‘

10 ಟಿಪ್ಪಣಿಗಳು (+add yours?)

  1. hemalatha murthy
    ಫೆಬ್ರ 09, 2010 @ 13:01:17

    your article is an eye opener,I really oppose the bt badane. Namma janakke swalpanaadaru swabhemaana eddare bt badaneyannu baheskaara maadabeku.

    ಉತ್ತರ

  2. CHENNU S MATHAD
    ಫೆಬ್ರ 08, 2010 @ 17:33:29

    Tumba santoshavayitu ee lekhana oodi.
    Hechchina janakke idu talupali. BT badane
    namma deshakke baradirali. Namma badane naavu
    ulisikollona.
    Jai Badane Raja…..

    ಉತ್ತರ

  3. channa basappa
    ಫೆಬ್ರ 08, 2010 @ 16:30:34

    nijakku puranada bagge gottiralilla, lekhana sakalika haagu vichara poorna

    ಉತ್ತರ

  4. channa basappa
    ಫೆಬ್ರ 08, 2010 @ 16:27:55

    thumba artha garbhitha, mattu sakalika barediddakke rai avarige dany vadagalu

    ಉತ್ತರ

  5. ರೇಣುಕಾ
    ಫೆಬ್ರ 08, 2010 @ 11:59:37

    ಸರ್, ದಿನಾ ಬಿಟಿ ಬದನೇ ಬಗ್ಗೆ ಓದಿ ಓದಿ ತಳಮಳಗೊಳ್ಳುತ್ತಿರುವ ಮನಸ್ಸಿಗೆ ನಿಮ್ಮ
    ಲೇಖನ ಚಿಂತನೆಗೆ ಬೇರೆ ಆಯಾಮ ನೀಡುತ್ತದೆ. ಆದರೆ ಬದನೇ ಹಣೇ ಬರಹ ಏನಾಗುತ್ತದೋ ಎಂಬ ಆತಂಕ ಇದ್ದೇ ಇದೆ. ಬದನೆಯನ್ನೇ ಬೆಳೆಯದ ಯುರೋಪ್ ದೇಶಗಳೇ ಬಿಟಿ ಬದನೆಯನ್ನು
    ನಿಷೇಧಿಸುತ್ತಿರುವಾಗ ನಮ್ಮ ಜನರಿಗೆ ಬುದ್ಧಿ ಹೇಳುವರಾರು ? ಭಾರತದ ರಾಜಪಟ್ಟ್ವನ್ನೂ
    ಬದನೆಯ ದೇಸೀ ರುಚಿ, ಮತು ಸಾಂಸ್ಕೃತಿಕ ಪಾವಿತ್ರ್ಯವನ್ನು ನಾವೇ ಕೈಯ್ಯಾರೇ ಹಾಳು ಮಾಡಿದಂತಾಗುವುದಿಲ್ಲವೇ? ಬಿಟಿ ಬದನೆ ಆಹ್ವಾನಿಸಿ ನಮ್ಮ ದೇಸಿ ಬೆಳೆ ’ಗೋವಿಂದ’
    ಆಗುವುದು ಖಂಡಿತ.

    ಉತ್ತರ

  6. Rajesh
    ಫೆಬ್ರ 07, 2010 @ 23:42:18

    Brinjal is available in Germany & they are one of the favourite dish of Europeans (esp. Spanish & Italy). Italy is one the highest Brinjal grower in Europe.

    ಉತ್ತರ

  7. ಆನಂದ ಕೋಡಿಂಬಳ
    ಫೆಬ್ರ 07, 2010 @ 23:04:15

    This article is very much informative and analytical. Every one should think about this.

    ಉತ್ತರ

  8. ಆನಂದತೀರ್ಥ ಪ್ಯಾಟಿ
    ಫೆಬ್ರ 07, 2010 @ 19:54:34

    ಬದನೆ ಕುರಿತ ಲೇಖನವಷ್ಟೇ ಅಲ್ಲ; ಒಂದೊಳ್ಳೆ ‘ಲಹರಿ’ ಕೂಡ…
    ಬೆಂಗಳೂರಿನಲ್ಲಿ ನಡೆದ ಸಂವಾದದಲ್ಲಿ, ವಿಜ್ಞಾನಿಯೊಬ್ಬರ ವಾದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ವಿವೇಕ್್ ರೈ ನೀಡಿದ್ದಾರೆ. ಅಂದ ಹಾಗೆ, ಆ ವಿಜ್ಞಾನಿಯ ಹೇಳಿಕೆಗೆ ಸ್ವತಃ ಸಚಿವ ಜೈರಾಂ ರಮೇಶ್್ ಆಕ್ಷೇಪ ವ್ಯಕ್ತಪಡಿಸಿ, ಕ್ಷಮೆ ಯಾಚಿಸಿದರು.

    ಉತ್ತರ

    • ಗಾಣಧಾಳು ಶ್ರೀಕಂಠ
      ಫೆಬ್ರ 08, 2010 @ 17:32:46

      ಮಟ್ಟುಗುಳ್ಳದ ಹಿಂದಿನ ಕಥೆ ಗೊತ್ತಿತ್ತು. ಮೊನ್ನೆ ಅನಂತ ಮೂರ್ತಿಯವರು ಬಿ.ಟಿ. ಬದನೆ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ನೀವು ಹೇಳಿದ ಕಥೆ ಪ್ರಸ್ತಾಪಿಸಿದ್ದರು. ಅದೆಲ್ಲದಕ್ಕಿಂತ ತೆನಾಲಿ ಕಥೆ ಒಂಥರಾ ಮಜವಾಗಿದೆ.
      ನೀವು ಪ್ರಸ್ತಾಪಿಸಿದ ವಿಜ್ಞಾನಿಯ ಮಾತಿಗೆ ಇಡೀ ಸಭೆ ರಣರಂಗವಾಗುವತ್ತ ಹೊರಟಿತ್ತು. ಸಚಿವರು ಕ್ಷಮೆಕೇಳದಿದ್ದರೆ ಅನಾಹುತವಾಗುತ್ತಿತ್ತೋ ಏನೋ ?

      ಉತ್ತರ

      • bavivekrai
        ಫೆಬ್ರ 09, 2010 @ 01:50:23

        ಪ್ರತಿಕ್ರಿಯೆ ಕೊಟ್ಟ ಎಲ್ಲರಿಗೂ ಥ್ಯಾಂಕ್ಸ್.ಬದನೆ ಬಗ್ಗೆ ಯೋಚನೆ ಮಾಡುತ್ತಾ ನಮ್ಮಲ್ಲಿನ ಸಮಯ ಬೆಳಗ್ಗೆ ೩ ಗಂಟೆಗೆ ಟೈಪಿಂಗ್ ಮುಗಿಸಿ ಪೋಸ್ಟ್ ಮಾಡಿದೆ.ಲಹರಿ ರೂಪದಲ್ಲಿ ಎಲ್ಲರಿಗೂ ಓದಲು ಸಾಧ್ಯಆಗಬೇಕು ಎನ್ನುವ ನನ್ನ ಉದ್ದೇಶ ನಿಮ್ಮ ಮಾತುಗಳಿಂದ ನಿಜವಾಗಿದೆ.ಬದನೆ ಬಗ್ಗೆ ನೂರಾರು ವಿಷಯಗಳಿವೆ.ಆದರೆ ಬಿಟಿ ಬದನೆಯ ಅನಾಹುತದ ಬಗ್ಗೆ ರೂಪಕದ ಕತೆಗಳಮೂಲಕ ಗಮನ ಸೆಳೆಯುವುದು ನನ್ನ ಧೋರಣೆ.ಬದನೆ ಸೂಪರ್ ಮಾರ್ಕೆಟ್ ಗಳಲ್ಲಿ ಜರ್ಮನಿಯಲ್ಲಿ ಅಪರೂಪಕ್ಕೆ ಮಾತ್ರ ದೊರೆಯುತ್ತದೆ.ಅದೂ ಬೇರೆ ದೇಶಗಳಿಂದ ಇಲ್ಲಿಗೆ ಬರುವುದು.ಸ್ಪೇನ್ ,ಇಟಲಿ ಅಂತಹ ದೇಶಗಳಲ್ಲಿ ಬದನೆಯ ಸಹಿತ ತರಕಾರಿಯನ್ನು ಹೆಚ್ಚಾಗಿ ಬೆಳೆಸುತ್ತಾರೆ.ಆದರೆ ಅವು ಬಳಿಕದ ಬೆಳವಣಿಗೆಗಳು ಮತ್ತು ಬದನೆ ಇಲ್ಲಿನ ಜನರ ಬಳಕೆಯ ತರಕಾರಿ ಅಲ್ಲ.ಇವತ್ತೂ ಇಲ್ಲಿ ವೂರ್ಜಬರ್ಗಿನಲ್ಲಿ ಅನೇಕರಲ್ಲಿ ಬದನೆಯ ಬಗ್ಗೆ ವಿಚಾರಿಸಿದೆ.ಬಿಟಿ ಬದನೆಯಂತೂ ಪ್ರವೇಶ ಪಡೆದಿಲ್ಲ. ವಿವೇಕ ರೈ

        ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ