ಸೋನಿಯಾ ಔರ್ ಸಾನಿಯಾ

-ಚೇತನಾ ತೀರ್ಥಹಳ್ಳಿ

 

ಮೊನ್ನೆ ಟೀವಿ ನೋಡುತ್ತ ಕುಂತಾಗ ಗೆಳೆಯ ಅಂದ. ಸೋನಿಯಾ ಚೆಂದ ಇದ್ದಿದ್ಕೇ ಆಕೆಗೆ ಅಷ್ಟು ಮನ್ನಣೆ ಸಿಕ್ಕಿದ್ದು. ರಾಜೀವ್ ಗಾಂಧಿ ಹೆಂಡ್ತೀನೇ ಆಗಿದ್ರೂ ಕೆಟ್ಟದಾಗಿದ್ದು, ಭಾರತದ ಯಾವ್ದೋ ಹಳ್ಳಿಯೋಳಾಗಿದ್ದಿದ್ರೆ ಆಕೆಗೆ ಇಷ್ಟೆಲ್ಲ ಮಣೆ ಹಾಕ್ತಿರಲಿಲ್ಲ!
ಒಲಿಂಪಿಕ್ಕಿನಲ್ಲಿ ಕಾಲು ಮೂಳೆ ಹೊಳಕಿಯೂ ಓಡಿ ಗೆಲುವಿನ ಸಮೀಪದವರೆಗೂ ಸಾಗಿದ್ದ ಶೋಭಾಳನ್ನು ಒಮ್ಮೆಯೂ ಕ್ಯಾರೆ ಅನ್ನದ ನಮ್ಮ ಜನಗಳು ಸಾನಿಯಾ ಕಂಡೊಡನೆ ನಾ ಮುಂದು ತಾ ಮುಂದು ಅನ್ನುತ್ತ ಗುಲಾಬಿ ಕೊಟ್ಟು ಕೈ ಕುಲುಕ್ತಾರಲ್ಲ, ಇದಕ್ಕಿಂತ ಸಾಕ್ಷಿ ಬೇಕಾ?  ಅಂತೆಲ್ಲ ವಕೀಲಿಗಿಳಿದ. ಎಷ್ಟೆಲ್ಲ ಟ್ಯಾಲೆಂಟ್ ಇರುವ ಹೆಣ್ ಮಕ್ಕಳು ಕುರೂಪಿಯಾಗಿದ್ದರೆ ಅದೊಂದೇ ಅವರೆಲ್ಲ ಸಾಧನೆಗೂ ಹೇಗೆ ಅಡ್ಡಿಯಾಗ್ಬಿಡತ್ತೆ ಅಂತ ಭಾಷಣ ಬಿಗಿದ. ನಮ್ಮಲ್ಲಿ (ಗಂಡಸರಲ್ಲಿ) ಹಾಗಿಲ್ಲವಪ್ಪ! ಅಂತ ಬೀಗಿದ. ಅವನು ಅದನ್ನೆಲ್ಲ ಯಾಕೆ ಹೇಳ್ತಿದಾನೋ ಗೊತ್ತಾಗಲಿಲ್ಲ.
ಮಿಕಮಿಕ ನೋಡಿದೆ.

ಅವನ ಗೆಳೆಯನ ತಂಗಿಯೊಬ್ಬಳಿಗೆ ನೋಡೋಕೆ ಚೆಂದ ಇಲ್ಲ ಅನ್ನೋ ಕಾರಣಕ್ಕೇ ಹಾಡಿನಲ್ಲಿ ಪ್ರೈಜು ಮಿಸ್ಸಾದ ಕಥೆ ಹೇಳಿದ. ಆ ಸ್ಪರ್ಧೆಯಲ್ಲಿ ಗೆದ್ದವರು ಮುಂದಿನ ರೌಂಡಿಗೆ ಹೋಗಿ, ನಂತರ ಟೀವಿಯಲ್ಲಿ  ಬರೋದಿತ್ತು. ಅಷ್ಟಕ್ಕೂ ಅದು ಹಾಡಿನ ಸ್ಪರ್ಧೆಯ ಪ್ರೋಗ್ರಾಮೇ. ಚೆಂದ ಹಾಡುವವರಿಗೆ ಮಾತ್ರ ಮನ್ನಣೆ ಸಿಗಬೇಕಿದ್ದ ಸ್ಪರ್ಧೆ ಅದು. ಆದರೂ ಟೀವೀಲಿ ಚೆಂದ ಕಾಣಲ್ಲ ಅನ್ನೋ ಕಾರಣಕ್ಕೆ ಗೆಲುವು ತಪ್ಪಿಹೋಗಿತ್ತು. ಅಲ್ಲಿದ್ದವರೆಲ್ಲರೂ ಅವಳ ಹಾಡಿಗೆ ಮೆಚ್ಚುಗೆ ಸೂಚಿಸಿ, ಪ್ರೈಜು ಘೋಷಣೆಯಾದಾಗ ‘ಮೋಸ, ಶುದ್ಧ ಮೋಸ’ ಅಂತ ಗೊಣಗಿದ್ದರು.
ಪಾಪ. ಆ ಹುಡುಗಿ ಮಿತಿಮೀರಿದ ಹತಾಶೆ, ಕೀಳರಿಮೆಗಳಿಂದ ಖಿನ್ನತೆ ಖಾಯಿಲೆಗೆ ಒಳಗಾಗಿಬಿಟ್ಟಳು. 
ಆಗ ತಾನೇ ಅವಳನ್ನು ನೋಡಿ ಸಮಾಧಾನ ಮಾಡಿಬಂದಿದ್ದ ಅಂವ ಚೆಂದಕ್ಕೆ ಮಣೆ ಹಾಕುವ ಕೆಟ್ಟ ಸಂಪ್ರದಾಯವನ್ನ ಬಯ್ಯುತ್ತ ಕುಂತಿದ್ದ.

ಮಾತು ಎಲ್ಲೆಲ್ಲೋ ಹೊರಳಿತು. ಮ್ಯಾಗಜಿನ್ನಿನ ಹಿಂಬದಿ ಪುಟದಲ್ಲಿ ಅರ್ಧದವರೆಗೆ ಎದೆ ತೆರೆದ ಹುಡುಗಿಯೊಬ್ಬಳು ನೆಕ್ಲೇಸು ಹಾಕ್ಕೊಂಡು ಪೋಸು ಕೊಟ್ಟಿದ್ದಳು. ಎಷ್ಟೇ ಕಣ್ ತಪ್ಪಿಸಿದರೂ ದೃಷ್ಟಿ ಅವಳ ಎದೆಯತ್ತ ಹರಿಯುತ್ತಿತ್ತೇ ಹೊರತು, ನೆಕ್ಲೇಸು ಮುಖ್ಯ ಅನಿಸ್ತಲೇ ಇರಲಿಲ್ಲ. ಮತ್ತು, ಅದು ಬಂಗಾರದಂಗಡಿಯ ಜಾಹೀರಾತಾಗಿತ್ತು!
ಅದನ್ನು ನೋಡ್ತಿದ್ದವನಿಗೆ ಅದೇನು ನೆನಪಾಯ್ತೋ, “ಮಹಿಳಾ ಆಯೋಗದ ಅಧ್ಯಕ್ಷೆ ಒಂದಷ್ಟು ತಿಂಗಳ ಹಿಂದೆ ಹೇಳಿಕೆ ಕೊಟ್ಟಿದ್ರು. ‘ಇಂದಿನ ಕಾರ್ಪೊರೇಟ್ ಸಂಸ್ಥೆಗಳಿಗೆ ಹೆಣ್ಣಿನ ಮಧುರ ದನಿ, ಕಿಲಕಿಲ ನಗು ಬೇಕಾಗಿದೆ. ಹೆಣ್ಣನ್ನ ಅವು ಎನ್ ಕ್ಯಾಶ್ ಮಾಡ್ಕೊಳ್ತಿವೆ. ಇದರ ಅರಿವಿಲ್ಲದ ಹೆಣ್ಮಕ್ಕಳು ಉದ್ಯೋಗಾವಕಾಶ ಹೆಚ್ಚಿದೆ ಎನ್ನುತ್ತ ತಮ್ಮ ಮಾಧುರ್ಯವನ್ನು ಮಾರಿಕೊಳ್ತಿದಾರೆ. ಈ ಭರದಲ್ಲಿ ಕೌಶಲ್ಯಕ್ಕೆ, ಬುದ್ಧಿವಂತಿಕೆಗೆ ಬೆಲೆಯೇ ಇಲ್ಲವಾಗ್ತಿದೆ!’ ಅಂತ. ಅದೆಷ್ಟು ಸರಿಯಾದ ಮಾತು ನೋಡು!!” ಅಂದ. ಒಪ್ಪದಿರಲಾಗಲಿಲ್ಲ. ಆದರೂ ಒಪ್ಪಿಕೊಳ್ಳೋದು ಕಸಿವಿಸಿ ಅನಿಸ್ತು.

ಹೀಗೊಮ್ಮೆ ಅವಳೊಬ್ಬಳು ಹಂಗಿಸಿದ್ದಳು. ಎಲ್ಲ ಕಡೆಯೂ ನೀನು  ಐದು ವರ್ಷದ ಹಿಂದಿನ ಫೋಟೋನೇ ಕೊಟ್ತೀಯಲ್ಲ! ಮುಖ ನೋಡೇ ನಿನ್ನ ಆರ್ಟಿಕಲ್ ಚೆನಾಗಿದೆ ಅನ್ಲಿ ಅಂತಾನಾ? ಇಷ್ಟಕ್ಕೂ ನಿನ್ ಆರ್ಟಿಕಲ್ಲು ಓದೋರ್ಯಾರು ಹೇಳು!?
ಜೀವದನಿ ಬ್ಲಾಗಿನ ಗೆಳತಿ ಕೂಡ ಹೇಳಿಕೊಂಡಿದ್ದಳು. ಕಾಲೇಜು ಹುಡುಗಿಯೊಬ್ಬಳ ಕವಿತೆ- ಜತೆಗವಳ ಫೋಟೋ ಬ್ಲಾಗಲ್ಲಿ ಹಾಕಿದ್ದಾಗ ಕೆಟ್ಟ ಕಮೆಂಟ್ ಬಂದಿತ್ತಂತೆ. ‘ನಿನ್ನ ಕವಿತೆಗಿಂತ ನೀನೇ ಚೆಂದ. ನಿನ್ನಷ್ಟಕ್ಕೆ ನೀನು ಸುಂದರ ಕಾವ್ಯ…’ ಅಂತೆಲ್ಲ.
ಟೀನಾ ಕೂಡ ಇಂಥದ್ದೇ ಒಂದು ಘಟನೆ ಹೇಳಿಕೊಂಡಿದ್ದಳು ಅಂತ ನೆನಪು.

ಎಲ್ಲ ಏನೋ ಕನ್ಫ್ಯೂಷನ್ನು. ಗೆಳೆಯನ ಗೊಣಗಾಟವನ್ನ ಒಪ್ಕೊಳೋಕೂ ಆಗ್ತಿಲ್ಲ, ಬಿಡೋಕೂ ಆಗ್ತಿಲ್ಲ. ಯೋಗ್ಯತೆಗಿಂತ ಶ್ರೀಮಂತಿಕೆಗೆ, ರೂಪಕ್ಕೆ ಹೆಚ್ಚಿನ ಬೆಲೆ ಸಿಗೋದು ನಿಜವೇನೋ ಹೌದು. ಆದ್ರೂ, ಹಾಗಂದ್ಕೊಳೋಕೆ ಕಷ್ಟವಾಗ್ತಿದೆ. ಹೇಗೆ ಚೆಂದವಿಲ್ಲದವರಿಗೆ (ಚೆಂದವನ್ನ ಅಳೆಯೋದು ಹೆಗೆ? ನಂಗಂತೂ ಗೊತ್ತಿಲ್ಲ) ಅವಕಾಶಗಳು ಕಡಿಮೆಯಾಗಿ ಅನ್ಯಾಯವಾಗತ್ತೋ, ಹಾಗೆ ಚೆಂದವಿರುವವರಿಗೂ ಕೂಡ ಅವರೆಷ್ಟೇ ಸ್ವಂತಿಕೆಯಿಂದ ಸಾಧನೆ ಮಾಡಿದರೂ ಅದೆಲ್ಲ ಗೌಣವಾಗಿ, ಅದು ರೂಪಕ್ಕೆ ಸಿಕ್ಕ ಬೆಲೆ ಅನಿಸಿಕೊಂಡು ಮತ್ತೊಂದು ಬಗೆಯ ಅನ್ಯಾಯವಾಗಿಬಿಡುವ ಅಪಾಯವಿದೆ. ಹಾಗಾದರೆ ಈ ಸಂಗತಿಯನ್ನ ಹೇಗೆ ಗ್ರಹಿಸ್ಬೇಕು?

ಹೆಲೋ… ಈ ಬರಹವನ್ನ ಓದ್ತಿರುವ ನೀವು…
ನೀವು ನನ್ನ ಗೊಂದಲವನ್ನ ನಿವಾರಿಸಿ ಏನಾದ್ರೊಂದು ಉತ್ತರವನ್ನ ಹುಡುಕಿಕೊಡ್ತೀರಾ ಪ್ಲೀಸ್… ಪ್ಲೀಸ್?

6 ಟಿಪ್ಪಣಿಗಳು (+add yours?)

  1. hemapowar123
    ಜನ 16, 2009 @ 22:09:03

    ಮನಸ್ಸು ಒಪ್ಪದಿದ್ದರೂ ಇದು ಕಟು ವಾಸ್ತವವಲ್ವೇ? ಸುಂದರವಾಗಿರುವುದಕ್ಕೆ ತಕ್ಷಣ ಆಕರ್ಷಿತರಾಗುವ ನಾವು, ಸೌಂದರ್ಯ ತಾತ್ಕಾಲಿಕವಾದದ್ದೆಂದು ಯೋಚಿಸುವುದೇ ಇಲ್ಲ. ನಿಜವಾದ ಸೌಂದರ್ಯವಿರುವುದು ಮನಸ್ಸಿನಲ್ಲಿ ಹಾಗೆ ಹೀಗೆ ಎಂದು ಎಷ್ಟು ವಾದಿಸಿದರೂ, ಟಿ.ವಿ.ಯಲ್ಲಿ ಬರುವ ಹೆಚ್ಚು ಮೇಕಪ್ಪಿನ ನಿರೂಪಕಿಯ ಮುದ್ದು ನಗುವಿಗೆ ಬದಲಾಗಿ ಮೇಕಪ್ಪಿಲ್ಲದ ಸಾಮಾನ್ಯ ರೂಪಿನ ಹೆಣ್ಣುಮಗಳನ್ನು ಕಲ್ಪಿಸಿಕೊಳ್ಳಲಾರೆವು. ಇದು ಮಾರ್ಕೆಟಿಂಗ್ ಯುಗ ಚೇತನಕ್ಕ, quality ಗಿಂತ appearance ಗೆ ಜಾಸ್ತಿ ಬೆಲೆ!!!

    ಉತ್ತರ

  2. ಲಕ್ಷ್ಮೀನರಸಿಂಹ ಕೆ
    ಏಪ್ರಿಲ್ 22, 2008 @ 13:09:52

    ಈ ವಾದವನ್ನು ಒಪ್ಪಿಕೊಳ್ಳುವುದು ಕಷ್ಟ. ಒಮ್ಮೆ ನಮ್ಮ ಪಿ ಟಿ ಉಷಾಳನ್ನು ನೆನೆಯಿರಿ. ಅವಳು ಸಾಂಪ್ರದಾಯಿಕ ಸುಂದರಿಯಂತೂ ಅಲ್ಲ; ಆದರೂ ಕಳೆದ ಒಂದೂವರೆ ದಶಕದುದ್ದಕ್ಕೂ ಅವಳನ್ನು icon ಆಗಿಯೇ ನೋಡಲಾಯಿತು. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು. ಪ್ರತಿಭೆಯು ರೂಪದೊಂದಿಗೆ ಬೆರೆತರೆ ಆಕೆಯ image ಬೇರೆಯದೇ ಲೆವೆಲ್ ಗೆ ಹೋಗುತ್ತದೆ. ಆಕೆಯ ಪ್ರತಿಭೆಯ ಅರಿವಿರದವರೂ, ಆಕೆಯ ರೂಪಕ್ಕೆ ಮಾರುಹೋಗಿರುವುದನ್ನು ಅರಿತ ಮಾಧ್ಯಮಗಳು ಅದನ್ನೇ ಪ್ರಮುಖಗೊಳಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇದನ್ನೆಲ್ಲ ನಾಜೂಕಾಗಿ ನಿಭಾಯಿಸುವ ಸ್ಥೈರ್ಯ ಹಾಗು ಸಮಚಿತ್ತದ ಮನೋಧರ್ಮ, ಚೆಲುವುಳ್ಳ ಪ್ರತಿಭಾವಂತರಿಗೆ ಅವಶ್ಯವಾಗಿ ಬೇಕು. ಚಲುವನ್ನೇ ಗುರುತಿಸುವವರನ್ನೂ, ಚಲುವಿನೊಂದಿಗೆ ಪ್ರತಿಭೆಯನ್ನೂ ಗುರುತಿಸುವವರನ್ನೂ, ಚಲುವನ್ನು ಕಡೆಗಣಿಸಿ(?) ಪ್ರತಿಭೆಯನ್ನು ಮಾತ್ರ ಗುರುತಿಸುವವರನ್ನೂ manage ಮಾಡಲು “ಕಲಿತರೆ” ಈ ಬಗೆಯ ಗೊಂದಲ, ಗೊಣಗಾಟ ಬಗೆಹರಿಸಬಹುದೇನೋ.

    ಉತ್ತರ

  3. Trackback: ಮುಖ ಬಾಡಿದವರಲ್ಲಿ ನಾನೂ ಒಬ್ಬನಾಗಿದ್ದೆ. « ಅವಧಿ
  4. chetana chaitanya
    ಏಪ್ರಿಲ್ 19, 2008 @ 09:46:01

    ನಮಸ್ತೇ ರಾಧಿಕಾ,
    ನೀವು ಹೆಳ್ತಿರೋದು ನಿಜ. ಬಹುಶಃ ಇದು ಮಾನವನ ಮೂಲಭೂತ ಗುಣ. ಇದರ ಸರಿ ತಪ್ಪು ನಿರ್ಧರಿಸಲಾಗುವುದಿಲ್ಲವೇನೋ? zee ಟೀವಿ, ಬಹುಮಾನ, ಪ್ರತಾಪರ ಗಲಾಟೆ ಇತ್ಯಾದಿಗಳು ಗೊತ್ತಿರಲಿಲ್ಲ. ಚೆಂದದವಳಿಗಿಂತ ಚೆಂದ ಹಾಡಿದವಳನ್ನು ಆಯ್ಕೆ ಮಾಡಿದರೆಂದು ಕೇಳಿ ಖುಶಿಯಾಯ್ತು.
    ವಂದೇ,
    ಚೆತನಾ

    ಉತ್ತರ

  5. Radhika
    ಏಪ್ರಿಲ್ 18, 2008 @ 14:06:20

    Hard to accept it but very true. It’s human tendency to appreciate good looks be it a vegetable, a fruit or a fellow human being.
    Appearance is the first criteria that’s looked for and other measures of quality would be secondary. Exceptions do exist but this is the common tendency
    Some time back there was an article in ‘The Hindu’ which said that some US university conducted a research and found that human beings are prejudiced and believe that good looking things are GOOD . The study says that if a white and a black with same credentials go for an interview, in all likelihood the white would be selected – this not do with racism but the prejudiced human mind which feels fair skin is good. If you are a bit observant you can notice different treatment for people based on their skin color.
    If you happened to watch Rajesh Krishnan in Zee TV’s Little Champ program – you would have observed how his eyes would light up whenever the little beauty Sahana Hegde was singing. One of the upcoming heroes even asked her if she would marry him! But glad that he did a justice by selecting a good singer and not singer with good looks. But column writer Pratap Simha is making a hue and cry that Sahana did not win though she sang well. That’s the prejudice this society thrives on.

    ಉತ್ತರ

  6. ಸುಧೀಂದ್ರ
    ಏಪ್ರಿಲ್ 17, 2008 @ 19:50:00

    ಹೌದು. ಇತ್ತೀಚಿನ ಟಿವಿ ವಾಹಿನಿಯಲ್ಲಿ ಬರೋ “so called talent hunt” ಕಾರ್ಯಕ್ರಮಗಳನ್ನು ನೋಡಿದರೆ, ಬರೀ ಪ್ರತಿಭೆ, ಯೋಗ್ಯತೆ, ರೂಪ ಇಷ್ಟೇ ಅಲ್ಲದೇ ರಾಜಕೀಯ ಪ್ರವೃತ್ತಿಯೂ ಇರಬೇಕು ಅನಿಸುತ್ತಿದೆ.

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ