ಕರುಣಾಳು ಬಾ ಬೆಳಕೆ…

ಅವಧಿ ನಿತ್ಯವೂ ಹೊಸ ಬರಹಗಳನ್ನು ಒಳಗೊಳ್ಳುವ ಬ್ಲಾಗ್. ಅಕಸ್ಮಾತ್ ಆಗಿಲ್ಲವೆಂದರೆ, “ಕರುಣಾಳು” ಕೈಕೊಟ್ಟಿದ್ದಾನೆ ಎಂದರ್ಥ. ಈ ಮಳೆಯ ಸೀಸನ್ನಿನಲ್ಲಿ ಗಾಳಿ ಸ್ವಲ್ಪ ಜೋರಾಗಿ ಬೀಸಿದರೂ ಶುರುವಾಗುತ್ತದೆ ವಿದ್ಯುತ್ ಕಣ್ಣಾಮುಚ್ಚಾಲೆಯಾಟದ ಶಾಕ್. ಗಾಳಿಗೆ ಆರಿ ಹೋಗೋದು ಬುಡ್ಡಿದೀಪ ಮಾತ್ರವಲ್ಲ ಅನ್ನೋದು ಈಗ ಗೊತ್ತಾಗಿದೆ. ಈ ತಾಂತ್ರಿಕ ಅಡಚಣೆಗಳ ಮಧ್ಯೆಯೇ ನಮ್ಮ ನಿಮ್ಮ ಭೇಟಿಯಾಗಬೇಕು. ಕತ್ತಲೆ ಸ್ವಲ್ಪ ಹೊತ್ತು ಇದ್ದೀತು. ಬೆಳಕು ಬರುವವರೆಗೆ ಕಾಯೋಣ. ಕಡೆಗೂ ಬೆಳಕಿಗಾಗಿಯೇ ಅಲ್ಲವೆ, ನಮ್ಮೆಲ್ಲರ ಧ್ಯಾನ?

ಅಮೆರಿಕೆಯ ನೆಲದಲ್ಲಿ ಕನ್ನಡದ ದಾರ

book2.jpgನೆಲ ಬದಲಾಗಬಹುದು. ಆದರೆ ಅದು ಕೊಟ್ಟ ಗಂಧಕ್ಕಿರುವ ಆಯಸ್ಸು ದೊಡ್ಡದು. ಹಾಗಾಗಿ ಕನಸುವ ಪರಿ, ತವಕಿಸುವ book1.jpgಪರಿ ಮೂಲದಲ್ಲಿ ಒಂದೇ ಆಗಿರುತ್ತದೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಕಳೆದುಕೊಂಡು ತೇಲುತ್ತಿರುವಾಗಲೂ ಮತ್ತೆ ಭೂಮಿಯನ್ನು ಮುಟ್ಟುವ ಕಾತುರ ಸುನಿತಾ ವಿಲಿಯಮ್ಸಳೊಳಗೆ ತೀವ್ರವಾಗೇ ಇರುತ್ತದೆ. ಅಮೆರಿಕಾದಲ್ಲಿ ನೆಲೆ ಹುಡುಕಿಕೊಂಡ ಕನ್ನಡಿಗರ ಮನಸ್ಸೊಳಗಿನ ಚಡಪಡಿಕೆಯ ತೀವ್ರತೆ ಕೂಡ ಇದೇ ತೆರನಾದದ್ದು. ಈ ಚಡಪಡಿಕೆಯೇ ಅವರೊಳಗೆ ಕನ್ನಡತನವನ್ನು, ಕನ್ನಡದ “ತನನಂ”ನ್ನು ಕಾಯುತ್ತಿದೆ. ಅದಕ್ಕೆ ಸಾಕ್ಷಿಗಳು ಬೇಕಾದಷ್ಟು ಸಿಗುತ್ತವೆ.

book3.jpgಅಂಥ ಮೂರು ಸಾಕ್ಷಿಗಳ ಕುರಿತು ಈ ಟಿಪ್ಪಣಿ.

ಅಮೆರಿಕನ್ನಡಿಗರ ಈ ಮೂರೂ ಕೆಲಸಗಳು ವ್ಯಕ್ತವಾಗಿರುವುದು ಅಕ್ಷರಗಳಲ್ಲಿ. ಮೊದಲನೆಯದು, “ಆಚೀಚೆಯ ಕಥೆಗಳು” ಎಂಬ ಹೆಸರಲ್ಲಿ ಪ್ರಕಟವಾಗಿರುವ ಕಡಲಾಚೆಯ ಕನ್ನಡ ಕಥೆಗಳ ಸಂಕಲನ. ಕಥೆಗಾರ ಕಾಗಿನೆಲೆ ಗುರುಪ್ರಸಾದ್ ಸಂಪಾದಕತ್ವದ ಈ ಪುಸ್ತಕದಲ್ಲಿ ಪ್ರಮುಖವಾಗಿ ಎರಡು ಬಗೆಯ ಕಥೆಗಳಿವೆ. ಒಂದು, ಅಮೆರಿಕೆಯನ್ನು ಅರಗಿಸಿಕೊಂಡು ಬರೆದವುಗಳು. ಎರಡು, ಕನ್ನಡ ನೆಲದ ನೀರು, ಗಾಳಿಯ ತೇವ ಲೇಪಿಸಿಕೊಂಡವುಗಳು. ಈ ಪುಸ್ತಕ ಪ್ರಕಟಣೆ ನ್ಯೂಜೆರ್ಸಿಯ ಕನ್ನಡ ಸಾಹಿತ್ಯ ರಂಗದ ಸಾಹಸ.

ಇನ್ನೊಂದು ಪುಸ್ತಕ ಕನ್ನಡದ ಆಸ್ತಿ ಮಾಸ್ತಿಯವರನ್ನು ಕುರಿತದ್ದು. ಕ್ಯಾಲಿಫೋರ್ನಿಯಾದ ಸಾಹಿತ್ಯಾಂಜಲಿ ಪ್ರಕಟಣೆಯಾಗಿರುವ ಈ ಕೃತಿಯ ಹೆಸರು “ಕನ್ನಡದಮರ ಚೇತನ”. ಅಮೆರಿಕದಲ್ಲಿದ್ದು ಮಾಸ್ತಿಯವರನ್ನು, ಅವರ ದೇಶಕಾಲವನ್ನು ಅಕ್ಷರದಲ್ಲಿ ಬೆಳಗಿಸಿರುವ ಈ ಪ್ರಯತ್ನದ ಹಿಂದಿನ ಮನಸ್ಸುಗಳನ್ನು ನೆನೆಯಲೇಬೇಕು.

ಮೇಲಿನ ಎರಡೂ ಕೃತಿಗಳ ಪ್ರಕಟಣೆಯಲ್ಲಿ ಕೈಜೋಡಿಸಿರುವುದು ಬೆಂಗಳೂರಿನ ಅಭಿನವ.

ಮತ್ತೊಂದು ಕೃತಿಯ ಹಿಂದೆ ದುಡಿದಿರುವುದು, ಅಮೆರಿಕೆಯಲ್ಲಿದ್ದೂ ಇಲ್ಲಿನ ಬರಹಗಾರರಿಗಾಗಿ ಕಥಾ ಸ್ಪರ್ಧೆ ಏರ್ಪಡಿಸಿದ ಕಥನ ಎಂಬ ಜಾಗತಿಕ ಕನ್ನಡಿಗರ ಕೂಟ. ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಥೆಗಳನ್ನು ಅದು “ನೀವೂ ದಾರ ಕಟ್ಟಿ” ಎಂಬ ಹೆಸರಲ್ಲಿ ಪ್ರಕಟಿಸಿದೆ. ಅಂಕೋಲೆಯ ರಾಘವೇಂದ್ರ ಪ್ರಕಾಶನ ಇದರ ಪ್ರಕಟಣೆಯ ಕೆಲಸ ನಿರ್ವಹಿಸಿದೆ.

ಕನ್ನಡದ ವಾತಾವರಣವೇ ಇಲ್ಲದ ನೆಲದಲ್ಲಿ ಅಂಥ ವಾತಾವರಣ ಮೂಡಿಸಿ, ಹೀಗೆ ದಾರ ಕಟ್ಟುತ್ತಿರುವ ಎಲ್ಲರಿಗೂ ಅವಧಿ ಅಭಿಮಾನ ತಿಳಿಸುತ್ತಿದೆ. ಇದಲ್ಲದೆ ಇಂಥ ಇತರ ಪ್ರಯತ್ನಗಳು ಗಮನಕ್ಕೆ ಬಂದಲ್ಲಿ ಯಾರೇ ಆದರೂ ಅವಧಿಗೆ ತಿಳಿಸಬಹುದು. ಅಮೆರಿಕೆಗೂ ಕನ್ನಡದ ನೆಲಕ್ಕೂ ಮಧ್ಯೆ ಸೇತುವೆ ಕಟ್ಟುವ ಕೆಲಸದಲ್ಲಿ ಎಲ್ಲ ಜೊತೆಗಿರೋಣ.

——————————————

ಕನ್ನಡದ ದಾರ-೧

ನಿಮ್ಮ ಲೇಖನ ನೋಡಿ ಬಹಳ ಖುಷಿಯಾಯಿತು. ಅಮೆರಿಕದಲ್ಲಿ ಕನ್ನಡ ಸಾಹಿತ್ಯ ರಂಗ ಯು ಎಸ್ ಎ ಎಂಬ ಒಂದು ಸಾಹಿತ್ಯಕ್ಕೆಂದೇ ಮೀಸಲಾದ ಒಂದು ಸಂಸ್ಥೆ ಇದೆ. ಈ ಸಂಸ್ಥೆಯ ವತಿಯಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಒಂದು ಸಾಹಿತ್ಯ ಸಮ್ಮೇಳನ ನಡೆಯುತ್ತದೆ. ಪ್ರತಿ ಸಮ್ಮೇಳನದಲ್ಲೂ ಒಂದು ಪುಸ್ತಕ ಪ್ರಕಟಿಸಿ ಬಿಡುಗಡೆ ಮಾಡುತ್ತದೆ. ಈವರೆವಿಗೆ “ಕುವೆಂಪು ಸಾಹಿತ್ಯ ಸಮೀಕ್ಷೆ”, “ಆಚೀಚೆಯ ಕಥೆಗಳು”, “ನಗೆ ಗನ್ನಡಂ ಗೆಲ್ಗೆ” ಪ್ರಕಟಿಸಿವೆ. ಪ್ರತಿ ಸಮ್ಮೇಳನದಲ್ಲೂ ಒಬ್ಬರು ಸಾಹಿತಿಯನ್ನು ಕರ್ನಾಟಕದಿಂದ ಕರೆಸುತ್ತದೆ. ಡಾ| ಪ್ರಭುಶಂಕರ್ , ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಅ ರಾ ಮಿತ್ರ ಇವರುಗಳು ತಮ್ಮ ವಿಶೇಷ ಭಾಷಣಗಳನ್ನು ನೀಡಿದ್ದಾರೆ. ಕಳೆದ ವರ್ಷ ಡಾ||ಲಕ್ಷ್ಮಿನಾರಾಯಣ ಭಟ್ ಅವರು ದೇಶದಾಂತ್ಯ ೧೦ಕ್ಕೂ ಹೆಚ್ಚು ನಗರಗಳಲ್ಲಿ ಕನ್ನಡ ಸಾಹಿತ್ಯ ಶಿಬಿರವನ್ನು ನಡೆಸಿಕೊಟ್ಟಿದ್ದಾರೆ.

-ವಲ್ಲೀಶ ಶಾಸ್ತ್ರಿ, ಕ್ಯಾಲಿಫೋರ್ನಿಯಾ