ಕರೆಂಟ್ ತೆಗೀಬೇಕಾ, ಬೇಡವಾ??

earth hour ಬಂದಿದೆ. ಒಂದು ಗಂಟೆ ಕಾಲ ನಿಮ್ಮ ನಿಮ್ಮ ಮನೆಯ ವಿದ್ಯುತ್ ಸಂಪರ್ಕ ತೆಗೆದು, ಮೊಂಬತ್ತಿ ಬೆಳಕಲ್ಲಿದ್ದು ಒಂದು ಪುಟ್ಟ ಸಂದೇಶ ನೀಡಿ ಎಂದು ಕೇಳಲಾಗಿತ್ತು. ಅದನ್ನು ‘ಅವಧಿ’ಯೂ ಪ್ರಚಾರ ಮಾಡಿತ್ತು. ಓ ಕೆ ಮಾಡೋಣ ಅಂದರು ಕೆಲವರು. ಆದರೆ ಜಿ ಎನ್ ಅಶೋಕವರ್ಧನ ಮತ್ತು ಕಿರಣ್ ಆಚಾರ್ಯ ಎರಡು ಭಿನ್ನ ಸ್ವರ ಹೊರಡಿಸಿದ್ದಾರೆ. ಜಗ ಮಗಿಸುವ ಜಾಹೀರಾತುಗಳೂ, ಅದಕ್ಕೆ ಬೇಕಾದಷ್ಟು ವಿದ್ಯುತ್ ವೇಸ್ಟ್ ಮಾಡುತ್ತಾ ಅದರ ಮಧ್ಯೆ ಒಂದು ಗಂಟೆ ಕತ್ತಲಲ್ಲಿ ಕೂಡುವ ಅಗತ್ಯವೇನಿಲ್ಲ ಅಂತ ಹೇಳಿದ್ದಾರೆ.

ಡಾ. ಕಿರಣ್ ಆಚಾರ್ಯ ಪರಿಸರವಾದಿಗ ಳಿಂದಲೇ ನೂರೆಂಟು ಪ್ರಾಬ್ಲಂ ಇದೆ ಎನ್ನುವ ಸೊಲ್ಲು ಹೊರಡಿಸಿದ್ದಾರೆ.

ಹೌದಾ ಅಶೋಕವರ್ಧನ್, ಕಿರಣ್ ಆಚಾರ್ಯ ಹೇಳುತ್ತಿರುವುದರಲ್ಲಿ ಅರ್ಥವಿದೆಯಾ?? ನಿಮ್ಮ ಅಭಿಪ್ರಾಯ ಏನು??

ಮೊನ್ನೆ ನೆಹರೂ ಮೈದಾನದಲ್ಲಿ ರಾವಣನ ಭಾರೀ ಬೊಂಬೆ ನಿಲ್ಲಿಸಿದ್ದರು. ರಾತ್ರಿ ಯಾವುದೋ ಜಗದ್ಗುರುವಿನ ಮತ್ತದೇ ಧುಷ್ಟ ಶಿಕ್ಷಣ, ಶಿಷ್ಟರಕ್ಷಣದ ‘ಅದ್ಭುತ’ ಸಾಂಕೇತಿಕತೆಯ ಭಾಷಣದ ಕೊನೆಯಲ್ಲಿ ರಾವಣನಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದರು. ಗೋರಿಗಳ ನಗರ ದಿಲ್ಲಿಯಲ್ಲಂತೂ ಸಾವಿರದೊಂದು ಸಾಂಕೇತಿಕ ಆಚರಣೆಗಳು ಸತ್ತ ಎಲ್ಲರ ಬಗ್ಗೆ ನಡೆಯುತ್ತಲೇ ಇರುವುದನ್ನು ನಾವು ನೋಡಿ ನೋಡಿಯೇ ಬಳಲುತ್ತಿರುತ್ತೇವೆ.

ಮೂವತ್ತು ಮೀಟರಿಗೊಂದು ಹೈಮಾಸ್ಟ್ ದೀಪ ಹಚ್ಚಿ, ಬಸ್ ನಿಲ್ಲದ ‘ಸ್ಟಾಪು’ಗಳಲ್ಲೆಲ್ಲ ಝಗಮಗಿಸುವ ಜಾಹೀರಾತು ಇಟ್ಟು ಎಲ್ಲೋ ಚೂರುಪಾರು ಮಂದಿ ಒಂದು ಗಂಟೆ ಕತ್ತಲಲ್ಲಿ ಕೂರುವ ಸಾಂಕೇತಿಕತೆ ಒಂದು ವಾರ್ಷಿಕ ವಿಧಿಯಾಗುತ್ತಿರುವುದು ನನಗೆ ಒಪ್ಪಿಗೆಯಿಲ್ಲ. ನಾನು ಎಂದಿನಂತೆ ನನ್ನ ಕೋಣೆಯ ದೀಪ, ಫ್ಯಾನ್ ಹಾಕಿ ಗಣಕ ಕಾರ್ಯ ನಿರತನಾಗಿದ್ದೆ. ಹೆಂಡತಿ ಎಂದಿನಂತೆ ಅವಳ ಕಾರ್ಯರಂಗದ ಜಾಗದ ದೀಪ ಮಾತ್ರ ಹಚ್ಚಿಕೊಂಡು ಅವಳ ಕಾರ್ಯನಿರತಳಾಗಿದ್ದಳು.

-ಜಿ ಎನ್ ಅಶೋಕವರ್ಧನ

++

ನಾವಿರುವುದು ಬನಶಂಕರಿಯ ಸೋಕಾಲ್ಡ್ ಎಜುಕೇಟೆಡ್ ಬೀದಿಯಲ್ಲಿ. ಆದರೆ ದುರಂತ, ನಮ್ಮ ಬೀದಿಯಲ್ಲಿ ಲೈಟ್ ಸ್ವಿಚ್ ಮಾಡಿದ್ದು ಕೇವಲ ನಾವು ಹಾಗೂ ನಮ್ಮ ಮುಂದಿನ ಮನೆಯವರು ಮಾತ್ರ. ಆದರೆ ಲೈಟ್ ಸ್ವಿಚ್ ಮಾಡಿ ಅರ್ತ್ ಅವರ್ ಆಚರಿಸಿದುದರ ಬಗ್ಗೆ ನನಗೆ ಹೆಮ್ಮೆಯಿದೆ

-ಸುಘೋಷ್ ಎಸ್ ನಿಗಳೆ

++

ನಾವಿರುವ ಹಳ್ಳಿಮನೆಯಲ್ಲಿ ಸಂಜೆ ಏಳೂವರೆಗೇ ಕರೆಂಟ್ ಹೋಗಿತ್ತು. ದೂರ ದಿಗಂತದಲ್ಲಿ ಕಾಣುತ್ತಿದ್ದ ಬೆಂಗಳೂರಿನ ಧ್ರುವಪ್ರಭೆ ಕೂಡ ಮಂಕಾಗಿತ್ತು. ಬೆಸ್ಕಾಮ್ ಖುದ್ದಾಗಿ ಎಲ್ಲೆಡೆ ‘ಅರ್ಥ್ ಅವರ್’ ಆಚರಿಸುತ್ತಿದೆ ಎಂದು ಅಂದುಕೊಂಡು ರೇಡಿಯೊ ಕೇಳುತ್ತ ಕೂತಿದ್ದಾಗ ಏನಚ್ಚರಿ, ಸರಿಯಾಗಿ ಎಂಟೂವರೆಗೆ ಕರೆಂಟ್ ಬಂತು! ಇದಪ್ಪಾ ಚಮತ್ಕಾರ ಎಂದುಕೊಂಡು ನನ್ನ ಪತ್ನಿ ಸ್ವಿಚಾಫ್ ಮಾಡಿದಳು. ನಮ್ಮ ಕರೆಂಟ್ ಬಿಲ್ ತಿಂಗಳಿಗೆ ಯಾವತ್ತೂ ನೂರು ರೂಪಾಯಿ ತಲುಪದಂತೆ ಮಿತವಾಗಿ ಬಳಸುತ್ತಲೇ ಬಂದಿರುವ ನಮಗೆ ಮತ್ತೆ ಒಂದು ಗಂಟೆ ಕತ್ತಲಲ್ಲಿ ಕೂತಿರಬೇಕಾದ ನೈತಿಕ ಹರ್ಕತ್ತೇನೂ ಇರಲಿಲ್ಲ. ಆದರೆ ಕತ್ತಲನ್ನು ಆವಾಹಿಸುವ ಮೂಲಕ ವಿದ್ಯುತ್ ದುಂದುಗಾರರಿಗೆ ತುಸು ಬೆಳಕು ತೋರುವ ಈ ಅಭಿಯಾನಕ್ಕೆ ನಮ್ಮ ಬೆಂಬಲವಿದೆ.
-ನಾಗೇಶ ಹೆಗಡೆ

++

We switched off power yesterday evening for an hour from 8.30 to 9.30. tried to do our bit for the environment
:-)
malathi S

++

With the periodic power cuts+ unscheduled power cuts, theis earth hour does not make much sense to us! Moreover the self proclaimed environmentalists have caused enough damage to our country than all the industries put together!

Dr Kiran Acharya

++

ನಾನು ಇಲ್ಲಿ ಬೆಂಗಳೂರಿನಲ್ಲಿ ಶೇವಿಂಗ್ ಮಾಡಿಕೊಳ್ಳಲು ಲೈಟ್ ಹಾಕಿಕೊಳ್ಳದಿದ್ದರೆ

ಅಲ್ಲಿ ನನ್ನಣ್ಣನಿಗೆ ಥ್ರೀ ಫೇಸ್ ವಿದ್ಯುತ್ ಸ್ಪಲ್ಪ ಹೆಚ್ಚು ಸಿಕ್ಕುತ್ತದೆ

ನಾನು ಇಲ್ಲಿ ರೂಮಿನಿಂದ ಹೊರಬರುವಾಗ ಲೈಟ್ ಆಫ್ ಮಾಡಿದರೆ

ಅಲ್ಲಿ ನನ್ನಣ್ಣನ ಇರಿಗೇಷನ್ ಪಂಪ್ ಸೆಟ್ ಧಡ ಧಡ ಸದ್ದು ಮಾಡುತ್ತದೆ

ನಾನು ಇಲ್ಲಿ ಕೊಂಚ ಹೊತ್ತು ಟಿವಿ ಆಫ್ ಮಾಡಿದರೆ

ಅಲ್ಲಿ ನನ್ನಣ್ಣನ ಹೊಲದಲ್ಲಿ ಸ್ಪ್ರಿಂಕ್ಲರ್ ನೀರು ಚಿಮ್ಮಿಸುತ್ತದೆ

ನಾನು ಇಲ್ಲಿ ಒಂದು ರಾತ್ರಿ ಫ್ಯಾನ್ ಇಲ್ಲದೆ ಮಲಗಿದರೆ

ಅಲ್ಲಿ ನನ್ನಣ್ಣ ಸುಖವಾಗಿ ಮಲಗಬಹುದು…….

-ಸುಘೋಷ್ ಎಸ್ ನಿಗಳೆ

ಕಾಯ್ಕಿಣಿ ನೆಪದಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸೋಣ ಬನ್ನಿ

ಜಯಂತ ಕಾಯ್ಕಿಣಿ ತಮ್ಮ ಇಷ್ಟು ವರ್ಷಗಳ ವಿಶೇಷಾಂಕ ನೆನಪುಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ. ವಿಶೇಷಾಂಕ ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲೂ ತನ್ನದೇ ಒಂದು ಗುರುತು, ಹಸಿರು ನೆನಪು ಮೂಡಿಸಿರುತ್ತದೆ.

ನೀವು ಓದಿದ, ಮೆಚ್ಚಿದ , ಇಲ್ಲವೇ ಬೇಜಾರು ಮಾಡಿಕೊಂಡ, ಇಲ್ಲಾ ಹೀಗಿರಲಿ ಎಂದುಕೊಂಡ ವಿಶೇಷಾಂಕಗಳ ಬಗ್ಗೆ ಇಲ್ಲಿ ಹಂಚಿಕೊಳ್ಳಿ. ಜಯಂತ ಕಾಯ್ಕಿಣಿ ಅವರ ಈ ಬರಹವನ್ನೂ ನೆಪವಾಗಿಟ್ಟುಕೊಂಡು ಮತ್ತೊಂದು ಸುತ್ತಿನ ಚರ್ಚೆ ನಡೆಸೋಣ ಬನ್ನಿ-

ಕೃಪೆ: ‘ಅಪಾರ’ ಬ್ಲಾಗ್

‘ವಿಶೇಷಾಂಕ’ – ಎಂಬ ಶಬ್ದ ಉಚ್ಚರಿಸುವಾಗಲೇ ಅದರಲ್ಲೊಂದು ಹಬ್ಬದ ಸಡಗರ ತಂತಾನೇ ಹೊಮ್ಮುತ್ತದಲ್ಲ – ಅದರಲ್ಲೇ ಒಂದು ಸಾಮಾಜಿಕ, ಸಾಂಸ್ಕೃತಿಕ ಲಕ್ಷಣವಿದೆ. ಹಬ್ಬ, ಉತ್ಸವ ಎನ್ನುವುದೊಂದು ಸಾಮೂಹಿಕ, ಸಾಮುದಾಯಿಕ ಚಟುವಟಿಕೆಯಾಗಿದ್ದರೂ, ಅದರ ಸರಭರದ ನಡುವೆಯೇ ಖಾಸಗಿಯಾದ ಪುಟವನ್ನೊಂದು ತೆರೆದು ಓದುವ ಅಪ್ಪಟ ಸ್ವಂತ ಆವರಣ ವಿಶೇಷಾಂಕದ್ದು.

ದೀಪಾವಳಿ/ಯುಗಾದಿ ಅಂದರೆ ಬರೇ ವರುಷಕ್ಕೊಂದೇ ಬಾರಿ ಲಭಿಸುವ ಹೊಸ ಬಟ್ಟೆ, ನಕ್ಷತ್ರ ಕಡ್ಡಿ ಪೆಟ್ಟಿಗೆ, ಸಿಹಿತಿಂಡಿಯಲ್ಲ. ಬದಲಿಗೆ ಗರಿಗರಿಯಾಗಿ ಬಂದ ವಿಶೇಷಾಂಕ ಕೂಡ ಹೌದು. ಮನೆಯಲ್ಲಿ ಅದನ್ನು ಮೊದಲು ತೆರೆದು ಓದುವವನೇ ಮಹಾ ಭಾಗ್ಯಶಾಲಿ. ಇತರರ ಕಣ್ತಪ್ಪಿಸಿ ಅದನ್ನು ಅಡಗಿಸಿಡುವವನು ಮಹಾದುಷ್ಟ. ‘ಈಗ ತಂದು ಕೊಟ್ಟೆ’ ಎಂದು ತೆಗೆದುಕೊಂಡು ಹೋಗಿ ನಾಪತ್ತೆಯಾದ ನೆರೆಮನೆಯ ಅಕ್ಕ ಮಹಾ ದಗಾಖೋರಳು. ‘ಜನಪ್ರಗತಿ’, ‘ಕರ್ಮವೀರ’, ‘ಗೋಕುಲ’, ಪ್ರಜಾವಾಣಿ’, ‘ಉದಯವಾಣಿ’, ‘ಕನ್ನಡ ಪ್ರಭ’, ‘ವಿಜಯ ಕರ್ನಾಟಕ’, ‘ಸುಧಾ’, ‘ತರಂಗ’, ‘ಕಸ್ತೂರಿ’ ಎಷ್ಟೆಲ್ಲ ವಿಶೇಷಾಂಕಗಳು ಎಷ್ಟೋ ದಶಕಗಳಿಂದ ಅಗಣಿತ ಕನ್ನಡ ಮನೆಗಳಲ್ಲಿ ಹಬ್ಬಗಳನ್ನು ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ಆಚರಣೆಗಳನ್ನಾಗಿಸುತ್ತ ಬಂದಿವೆ.

‘ಈ ಸಲ ನಿಮ್ಮ ಮನೆಯಲ್ಲಿ ಯಾವುದು ತಗೊತೀರಿ? ನಾವು ಇದನ್ನು ತಗೋತೇವೆ ’ ಎಂಬ ಮಾತು, ವೆಹಿಕಲ್ ಬಗೆಗಿನದಲ್ಲ, ಫ್ರಿಜ್, ಟೀವಿ ಬಗೆಗಿನದಲ್ಲ, ವಿಶೇಷಾಂಕಗಳ ಕುರಿತಾದದ್ದು. ಕನ್ನಡದಲ್ಲಂತೂ ಸಾಹಿತ್ಯ, ಕತೆ, ರಂಗಭೂಮಿ, ಸಾಮಾಜಿಕ ವಿದ್ಯಮಾನಗಳ ವಾರ್ಷಿಕ ಖಾನೆಸುಮಾರಿಯಂತೆ ವಿಶೇಷಾಂಕಗಳು ರೂಪುಗೊಂಡು ಬಂದಿವೆ. ಲಂಕೇಶ್, ಅನುಪಮಾ ನಿರಂಜನ, ಬಸವರಾಜ ಕಟ್ಟೀಮನಿ… ಇವರೆಲ್ಲರ ಹೆಸರುಗಳನ್ನು ಮೊದಲು ಕಂಡಿದ್ದು ವಿಶೇಷಾಂಕಗಳಲ್ಲೆ. ಬಿಸ್ಮಿಲ್ಲಾ ಖಾನ್, ಸತ್ಯಜಿತ್ ರೇ, ಪು.ತಿ.ನ, ಶಿವರಾಮ ಕಾರಂತರಂಥ ಮಹನೀಯರ ಅಪರೂಪದ ಸಂದರ್ಶನಗಳನ್ನು ಅವರ ಮಾತಿನ ವಿವಿಧ ಭಂಗಿಗಳ ಭಾವಚಿತ್ರಗಳೊಂದಿಗೆ ಓದಿದ್ದ್ದು ವಿಶೇಷಾಂಕಗಳಲ್ಲಿ. ದೇವನೂರರ ‘ಒಡಲಾಳ’, ತೇಜಸ್ವಿಯವರ ‘ನಿಗೂಢ ಮನುಷ್ಯರು’, ಭಾರತೀಸುತರ ‘ಎಡಕಲ್ಲು ಗುಡ್ಡದ ಮೇಲೆ’, ಚಂದ್ರಶೇಖರ ಪಾಟೀಲರ ‘ಗುರ್ತಿನವರು’ – ಸಿಕ್ಕಿದ್ದು ವಿಶೇಷಾಂಕಗಳಲ್ಲಿ.

ಆಯಾ ವರುಷದ ಸಾಹಿತ್ಯಿಕ ಸಂದರ್ಭಗಳ ಕುರಿತ ವಿಚಾರ ಮಂಥನಗಳು, ಸಂಗೀತ-ಕಲೆ ಇತ್ಯಾದಿಗಳ ಕುರಿತ ವಿಚಾರ ಮಂಥನಗಳು, ಸಂಗೀತ-ಕಲೆ ಇತ್ಯಾದಿಗಳ ಕುರಿತ ಆಸ್ವಾದಕ ಲೇಖನ ಮಾಲೆಗಳು, ಜತೆ ಹೊಸ ಚಿಗುರು-ಹಳೆ ಬೇರುಗಳ ಕತೆ, ಕವಿತೆಗಳು. ಕನ್ನಡ ನವ್ಯೋತ್ತರ ಪೀಳಿಗೆಯ ಬಹುತೇಕ ಕತೆಗಾರರ ಆರಂಭದ ಆಡುಂಬೊಲ – ಈ ವಿಶೇಷಾಂಕದ ಕಥಾಸ್ಪರ್ಧೆಗಳು. ಬೊಳುವಾರು, ಕುಂ.ವೀ, ಅಶೋಕ ಹೆಗಡೆ, ವಿವೇಕ ಶಾನಭಾಗ, ಮೊಗಳ್ಳಿ ಗಣೇಶ್, ಎಂ.ಎಸ್. ಶ್ರೀರಾಮ್, ಅಮರೇಶ ನುಗಡೋಣಿ, ಎಚ್. ನಾಗವೇಣಿ, ಕೃಷ್ಣಮೂರ್ತಿ ಹನೂರು, ಕಾಳೇಗೌಡ ನಾಗವಾರ, ಎಸ್. ದಿವಾಕರ್, ರಾಘವೇಂದ್ರ ಪಾಟೀಲ, ಮಿತ್ರಾ ವೆಂಕಟರಾಜ, ಶ್ರೀಧರ ಬಳಗಾರ ಮುಂತಾದ ಪ್ರಚಲಿತ ಲೇಖಕರೆಲ್ಲರೂ ಒಂದಲ್ಲಾ ಒಂದು ಹಂತಲ್ಲಿ ವಿಶೇಷಾಂಕಗಳ ಕಥಾಸ್ಪರ್ಧೆಗಳ ವಿಜೇತರೇ.

ಕಳೆದ ಮೂರ‍್ನಾಲ್ಕು ದಶಕಗಳ ಈ ವಿಶೇಷಾಂಕಗಳ ಸ್ಪರ್ಧೆಗಳ ಕಥೆಗಳನ್ನು ಸಂಕಲಿಸಿ, ತೀರ್ಪುಗಾರರ ಟಿಪ್ಪಣಿಗಳೊಂದಿಗೆ ಓದಿಕೊಂಡರೆ ಅದೊಂದು ನಮ್ಮ ಕಥನ ವಿನ್ಯಾಸದ ವಿಕಾಸದ ವಿಶಿಷ್ಟ ದಾಖಲೆಯಾದೀತು. ಮತ್ತು ವಿಶೇಷಾಂಕಗಳ ಸ್ಪರ್ಧೆಗಳೇ ಹೇಗೆ ಕನ್ನಡದ ಕಳೆದೆರಡು ದಶಕಗಳ ಕಥನ ಕಲೆಯನ್ನು ನಿರ್ದೇಶಿಸುತ್ತ ಬಂದಿವೆ ಎಂಬುದು ಮನವರಿಕೆಯಾದೀತು. ಸಾಕ್ಷಿ, ಸಂಕ್ರಮಣ, ಕವಿತಾ, ರುಜುವಾತು, ಶೂದ್ರ, ಸಂವಾದ, ಸಂಚಯ, ಸೃಜನವೇದಿಯಂಥ ಸಾಹಿತ್ಯಿಕ ಪತ್ರಿಕೆಗಳು ರೂಪಿಸಿದ ಸಂವೇದನೆಗಳಿಗೆ ಒಂದು ಬಗೆಯ ಸಾರ್ವಜನಿಕ ಅಧಿಕೃತತೆಯನ್ನು ಕೊಡುವ ಪಾತ್ರವನ್ನು ಕನ್ನಡ ವಿಶೇಷಾಂಕಗಳು ನಿರ್ವಹಿಸಿದವು. ಜತೆಗೆ ಚಿತ್ರಲೇಖನ, ಹವ್ಯಾಸಿ ಛಾಯಾಗ್ರಹಣ, ಪ್ರವಾಸ ಲೇಖನಗಳನ್ನು ಇವು ಪೋಷಿಸಿದವು.

ಇನ್ನಷ್ಟು

ಆಲ್ ಈಸ್ ವೆಲ್, ಆಲ್ ಈಸ್ ವೆಲ್, ಆಲ್ ಈಸ್ ವೆಲ್

ಇಂದು ರಾತ್ರಿ ನನ್ನ ಮನೆಯ ಎಲ್ಲಾ ವಿದ್ಯುತ್ ಸಂಪರ್ಕ ಇಲ್ಲವಾಗುತ್ತದೆ.

ಸ್ವಿಚ್ ಗಳನ್ನು ನಾನೇ ಖುದ್ದಾಗಿ ಆರಿಸುತ್ತಿದ್ದೇನೆ

ಈ ಮೇಣದ ಬತ್ತಿ ಒಂದು ದಿನವಾದರೂ ಮನೆಯನ್ನು ಬೆಳಗಲಿ

ಜಗತ್ತಿನ ತಾಪವನ್ನು ನಿವಾರಿಸಲಿ

ನೀವೂ ಹಾಗೇ ಮಾಡಿದರೆ

ಆಲ್ ಈಸ್ ವೆಲ್, ಆಲ್ ಈಸ್ ವೆಲ್, ಆಲ್ ಈಸ್ ವೆಲ್

ಬನ್ನಿ ಒಂದಿಷ್ಟು ಕುಬ್ಜರಾಗೋಣ..

ಇಂದು, 27.03.10 ರಂದು ಜಾಗತಿಕ ತಾಪಮಾನ ಕುರಿತಂತೆ ಜಗತ್ತಿನಾದ್ಯಂತ

“Earth Hour” ಆಚರಿಸಲಾಗುತ್ತಿದೆ..ಇಂದು ಜಗತ್ತಿನಲ್ಲೆಡೆ ರಾತ್ರಿ 8.30 ರಿಂದ 9.30 ರ ವರೆಗೆ

ಎಲ್ಲ ರೀತಿಯ electricity dependents ಗಳನ್ನು switchoff ಮಾಡಲಾಗುತ್ತಿದೆ.

ನಾವೂ ಕೂಡ ಇಂಥದೊಂದು ಚಳುವಳಿಯಲ್ಲಿ ಭಾಗವಹಿಸಬಹುದು;

ನಮ್ಮ ನಮ್ಮ ಅವಶ್ಯಕತೆಗಳನ್ನು ಕೊಂಚ ಕುಬ್ಜವಾಗಿಸುವದರ ಮೂಲಕ!

ಬನ್ನಿ,ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳೋಣ..

-ಟಿ ಜಿ ಬಾಲಕೃಷ್ಣ

-ರಾಘವೇಂದ್ರ ಜೋಶಿ

%d bloggers like this: