ಚೇತನಾ ಎಂಬ ‘ಗಾನಾ ಜೋಯ್ಸ್

‘ ಕನಸುಗಾರ ವೆಂಕಟ್ರಮಣ ಗೌಡರು ‘ಹಂಗಾಮ’ ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ ‘ಉಫೀಟ್’ ಕವನ ಸಂಕಲನ, ‘ಭಾಮಿನಿ ಷಟ್ಪದಿ’ ಕಥಾ ಸಂಕಲನ ಮೂಲಕ ಹೆಸರಾದವರು.

ತಮ್ಮ ಪೂರ್ವ ನಾಮಕರಣದಲ್ಲಿ ಹೇಗೆ ಬರೆಯುತ್ತಿದ್ದರು ಎಂಬುದನ್ನು ಪರಿಚಯಿಸಲು ಹಂಗಾಮದ ಪುಟಗಳಿಂದ ಬಿಡಿಸಿದ ಈ ಬರಹ ನೀಡುತ್ತಿದ್ದೇವೆ-


ಎಲ್ಲಾ ಪಿಕ್ಚರುಗಳಲ್ಲಾ?

ಗಾನಾ ಜೋಯ್ಸ್

“ಕಳೆದಾರೂ ಜಲ್ಮದಲ್ಲಿ ಪಾಪ ಮಾಡಿದ್ದಕ್ಕೇ, ಈ ಜಲ್ಮದಲ್ಲಿ ಸಾಲು ಸಾಲು ಹೆಣ್ಣು ಹೆತ್ತಿರೋದು”. ಹಾಗ0ತ ತಕರಾರು ತೆಗೀತಾ ಗೂರಲು ಮುದುಕ ಕೆಮ್ಮಿ ಕ್ಯಾಕರಿಸಿ ಕಫ ಉಗೀಲಿಕ್ಕೆ ಬೌಲು ತಡಕ ಹತ್ತಿದ. ಮೂಕಿ ಹುಡುಗಿ ಬೌಲು ತ0ದು ಮುಸುಡಿಗೆ ಹಿಡಿದಳು. ಹಿತ್ತಿಲ ಕತ್ತಲಲ್ಲಿ ಸೂಲಗಿತ್ತಿ, ನಾಲ್ಕನೇ ಹೆಣ್ಣು ಹೆತ್ತು ಎಚ್ಚರ ತಪ್ಪಿದ್ದ ಮಹಾತಾಯಿಗೆ ಉಪಚಾರ ಮಾಡ್ತಾ ಕು0ತಿದ್ದಳು. ಅಪ್ಪ ಅನಿಸ್ಕೊ0ಡವ ನಾಲ್ಕು ವರ್ಷದ ಹಿ0ದೆ ಜಾತ್ರೇಲಿ “ಡಾಗ್ ಶೋ” ದ ಮಿಣುಕು ಅ0ಗಿಯ ಚಿನಾಲಿ ಹಿ0ದೆ ಹೋದವ, ಕಳೆದ ಜಾತ್ರೇಲಿ ಮತ್ತೆ ವಕ್ಕರಿಸಿ ಬೀಜ ಬಿತ್ತಿ, ಇನ್ನೆಲ್ಲಿಗೋ ಪೇರಿ ಕಿತ್ತಿದ್ದ.

“ಅಬ್ಬಾ ಹೆಣ್ಣು ಜಾತೀನೇ!” ನಿಟ್ಟುಸಿರಿಟ್ಟೂ ಇಟ್ಟೂ ಉಬ್ಬಸವಾಗಿ ಹೋಗಿತ್ತು ಅವಳಿಗೆ. ಒಡೇರ ಪೇಟೆ ಮನೇಲಿ ಕಸಮುಸುರೆಗೇ0ತ ಅಲ್ಲೇ ಝ0ಡಾ ಊರಿದ್ದ ಹದಿನಾರರ ಹಿರಿಮಗಳು – ಒಡತೀನೇ “ಹೋಗಿ ಬಾ” ಅ0ದ್ರೂ ಹೊರಟಿರಲಿಲ್ಲ. ಓರಗೆಯ “ಅಕ್ಕಾವ್ರು” ತಿ0ದುಳಿದ ಪಾನೀಪೂರಿ, ಗೋಬಿ ಮ0ಚೂರಿಗಳ ರುಚಿಗೆ; ತಿದ್ದಿ ತೀಡಿ ಬಿಸಾಡಿದ ಲಿಪ್ ಸ್ಟಿಕ್ ಗಳ ರ0ಗಿಗೆ, ಮನೆಗೆ ಬ0ದು ಹೋಗುವ ಕುಡಿ ಮೀಸೆ ಹುಡುಗರ ತುದಿಗಣ್ಣ ಇಶಾರೆಗೆ – ಚಿತ್ತಾಗಿ ಹೋಗಿದ್ದಳು

 ಎರಡನೆಯದ್ದೋ – ದೇವರೂ ದೇವರೂ0ತ ಉಳ್ಳುಸೇವೆ ಮಾಡಿದ್ದಕ್ಕೆ ಸವಾಲಾಗಿ ಹುಟ್ಟಿತ್ತು. ಕಿವಿ – ಬಾವಿ….. ಹಾ! ದೇವರ ಹಾಗೇ…. ಎಲ್ಲಾ ಇದ್ದೂ ಕಲ್ಲು ಕಲ್ಲು. ಮೂಕ ಮಗಳನ್ನು ಜಾನುವಾರಿನ ಹಾಗೇ ತೋಟದ ಕೆಲಸಕ್ಕೆ ಹಚ್ಚಿದ್ದಳು ಅಮ್ಮ.

ಮೂರನೆಯದ್ದು – ಗೊ0ಬೆ ಗೊ0ಬೆ. ಕೈ ತೊಳೆದು ಮುಟ್ಟುವ0ತಾ ರೂಪ, ಬಿಳುಪು. ಗೂರಲು ಮುದುಕ “ಅದ್ಯಾರ ತು0ಡೋ” ಅ0ತ ಗೇಲಿ ಮಾಡುವಷ್ಟು ಚ0ದ! ಅದರ ಬಸಿರಿಗೆ ಮು0ಚೆ ಒ0ದಷ್ಟು ದಿನ ಮನೇಲಿ ಸುಕ ಸೂರೆ ಹೋಗಿದ್ದ0ತೂ ಸುಳ್ಳಲ್ಲ.

ಇದೀಗ ನಾಲ್ಕನೆಯದ್ದು….. ಮತ್ತೂ ಹೆಣ್ಣು. ಎಚ್ಚರವಾಯಿತು. ಮತ್ತೆ ಹೆಣ್ಣು! ಎದ್ದವಳೇ ಸೂಲಗಿತ್ತಿ ಹಾ0ಗೆ ತಿರುಗೋದ್ರೊಳಗೇ ಇಟ್ಟಿದ್ದ ಕುದಿ ನೀರು ಎಳೆಗೂಸಿನ ಮೇಲೆ ಸುರ್ದುಬಿಟ್ಟಳು. ಮುದುಕ – “ಪೀಡೆ ಕಳೀತು” ಅ0ದ. ಹಸೀ ಬಾಣ0ತಿ ಸನ್ನಿ ಹಿಡಿಸ್ಕೊ0ಡು ಕೂದಲು ಬಿರಿಹೊಯ್ಕ0ಡು ರ0ಪಾಟಕ್ಕೆ ಶುರುವಿಟ್ಟಳು. ಭಯಬಿದ್ದ ಸೂಲಗಿತ್ತಿ ಬಿಳೀ ಪೋರೀನ ಹೊತ್ತು ಓಡಿದಳು. ಮೂಕಿ ಮಗಳು, ಮನೆ ತು0ಬಾ ತೊಣಚಾಡಿದಳು. ಮುದುಕ ಬಿದ್ದಕೊ0ಡಲ್ಲೇ ತೆವಳ ಹತ್ತಿದ.

ಐದೇ ನಿಮಿಷ….. ಮೂಕಿಯ ಕಳೆ ಸವರೋ ಕತ್ತಿ ಒಲೆ ಸ0ದೀಲಿ ಠಣಾರನೆ ಬಿತ್ತು. ಅದಕ್ಕೊ0ದಷ್ಟು ಮುದುಕನ ರಕ್ತ, ಮಗಳ ಮಾ0ಸ ಮೆತ್ತಿತ್ತಷ್ಟೆ….. ಮಗು ಹೆತ್ತ ಮನೆ ತು0ಬಾ ಸೂತಕವಾಗಿ ಹೋಯ್ತು. ಸನ್ನಿ ಬಾಣ0ತಿ ರಕ್ತ ಮೊಗೆಮೊಗೆದು ಕುಡಿದಳು. ಕುಣಿದಳು. ಬೀದಿಗೋಡಿದಳು. ಕ0ಡ ಕ0ಡ ಹೆಣ್ಣು ಮಕ್ಕಳ ಕುತ್ತಿಗೆ ಹಿಡಿಯತೊಡಗಿದಳು.

ಊರ ಜನ ನಿ0ತು ನೋಡಿದರು. ಕು0ತು ನೋಡಿದರು. ಕೂಗಾಡಿದರು. ಕೊನೆಗೊ0ದು ದಿನ ಕಲ್ಲು ಹೊಡೆದೇ ಕೊ0ದರು. ಪಿ0ಡ ಕಟ್ಟಿ ಹೋಗಿದ್ದ ಗ0ಡ, ಅ0ತೂ ಚಟ ಕಟ್ಟಲು ಬ0ದ. ಸತ್ತವಳ ಕಿವಿಯಲ್ಲಿ ಕೆ0ಪು ಕಲ್ಲಿನ ಓಲೆ ಇನ್ನೂ ಜೀವ0ತವಿರೋದು ಅವ0ಗೆ ನೆನಪಿತ್ತು!

ಸಾಲು ಹೆಣ್ಣು ಹೊತ್ತು, ಗೂರಲು ಮುದುಕನ ಹೊತ್ತು, ಕೆಡುಕ ಗ0ಡನ ಸಹಿಸಿ, ಸ0ಸಾರ ನಿಭಾಯಿಸೋದು; ನಾಲ್ವರಿಗೂ ದಿಢೀರು ಅಮೀರರ ಹುಡುಗ ಬ0ದು “ಮದುವೆಯಾಗ್ತೀನಿ” ಅನ್ನೋದು; “ದತ್ತು ತಗೊಳ್ತೀನಿ” ಅನ್ನೋದು ಎಲ್ಲಾ ಪಿಕ್ಚರುಗಳಲ್ಲಿ ಮಾತ್ರವೇನೇ?

‘ಹಂಗಾಮ’ದ ನೆನಪಲ್ಲಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ

ಈಗ ಅದೆಲ್ಲ ಮಜಾ ಅನಿಸತ್ತೆ.
ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ ಬರೆದಿರಲಿಲ್ಲ! ( ಆಮೇಲೆ ಬರ್ದೆ ಅಂದ್ಕೊಳ್ಬೇಡಿ… ನಾನು ಓದು ನಿಲ್ಲಿಸಿದ್ದು ಆಗಲೇ. ಮದ್ವೆ ಆಯ್ತಲ್ಲ, ಅದ್ಕೆ…) ಆದ್ರೂ ನಾನು ಮೊದಲ ಮೂರು ಪ್ಲೇಸಲ್ಲಿ ಇರ್ತಿದ್ದೆ ಅನ್ನೋದು ನಾನು ಕೊಟ್ಕೊಳೋ ಸಮಜಾಯಿಶಿ! (ನೀವು ನನ್ನ ಶತದಡ್ಡಿ ಅಂದ್ಕೋಬಾರದಲ್ಲ, ಅದ್ಕೆ!!)
ಹಾಗಾದ್ರೆ, ದಪ್ಪ ದಪ್ಪ ರಟ್ಟಿನ ನೂರು- ಇನ್ನೂರು ಪುಟಗಳ ‘ಲೇಖಕ್’ ನೋಟ್ ಬುಕ್ ಗಳನ್ನ ನಾನೇನು ಮಾಡ್ತಿದ್ದೆ?
ಕೊನೆ ಪುಟದಿಂದ ಹಿಡಿದು ಉಲ್ಟಾ ಮಾಡ್ಕೊಂಡು ಚಿತ್ರ, ಕವನ ಬರೀತಿದ್ದೆ! ರಾಮಾಯಣ, ಮಹಾಭಾರತದ ಕಥೆಗಳ್ನ ಗೀಚಿಟ್ಕೊಳ್ತಿದ್ದೆ!!

ಹೀಗೊಮ್ಮೆ ಕಂಬಳಿ ಹುಳದ ಕವನ ಬರೆದಾಗಲೆ ನಾನು ಸಿಕ್ಕಿಬಿದ್ದಿದ್ದು. ಐದನೇ ಕ್ಲಾಸಲ್ಲಿ ಟೀಚರ್ರು ‘ಚಿಟ್ಟೆಯ ಜೀವನ ಚರಿತ್ರೆ’ ಪಾಠದ ನೋಟ್ಸು ಕೊಡ್ತಿದ್ದರೆ, ನಾನು ತಲೆ ತಗ್ಗಿಸ್ಕೊಂಡು ನೆಲ್ಲಿಕಾಯಿ ತಿನ್ನುತ್ತ ಕವಿತೆ ಬರೆಯುತ್ತಿದ್ದೆ!
ಆವರೆಗೂ ನೋಟ್ಸು ನೋಡುವ ದಿನ ಊರುಕೇರಿಯದೆಲ್ಲಾ ಬುದ್ಧಿ ಉಪಯೋಗಿಸಿ ಪಾರಾಗಿಬರ್ತಿದ್ದ ನಾನು ಅವತ್ತು ಸಿಕ್ಕಿಬಿದ್ದಿದ್ದೆ. ಕ್ಲಾಸ್ ಮೇಟುಗಳೆಲ್ಲ ಶೇಮ್ ಶೇಮ್ ಅಂದುಬಿಟ್ಟರು! ಇನ್ನೊಂದು ತಿಂಗಳಲ್ಲಿ ಆವರೆಗಿನ ಎಲ್ಲ ನೋಟ್ಸು ಬರೆದು ತೋರಿಸುವವರೆಗೂ ಯಾರೂ ನನ್ನ ಹತ್ರ ಮಾತಾಡಬಾರದು ಅಂತ ಟೀಚರ್ ತಾಕೀತು ಮಾಡಿದರು. ಅಮ್ಮನಿಗೆ ಬುಲಾವು ಹೋಯಿತು.
ನನಗೆ ಅದ್ಯಾವುದೂ ದೊಡ್ಡ ಶಿಕ್ಷೆ ಅನಿಸಲೇ ಇಲ್ಲ! ಯಾಕೆಂದರೆ, ನಾನಂತೂ ನೋಟ್ಸು ಬರೆಯುವುದೇ ಇಲ್ಲ ಅಂತ ನಿರ್ಧಾರ ಮಾಡಿಬಿಟ್ಟಿದ್ದೆ!!
ಈಗಲೂ ನನ್ನದದೊಂದು ಮೊಂಡು ವಾದವಿದೆ. ಫಲಿತಾಂಶ ಮುಖ್ಯವೇ ಹೊರತು ಪ್ರೊಸೀಜರ್ ಅಲ್ಲ ಅನ್ನೋದು!
ಆದ್ರೆ ಗಣಿತದಲ್ಲಿ ಪ್ರತಿ ಪ್ರಕ್ರಿಯೆಗೂ ಮಾರ್ಕ್ಸ್ ಇದೆ, ಫಲಿತಾಂಶ ತಪ್ಪಿದ್ರೂ ಒಂದಷ್ಟು ಮಾರ್ಕ್ಸು ಸಿಗತ್ತೆ… ಬಹುಶಃ ಫಲಿತಾಂಶಕ್ಕೆ ಮೊರೆ ಹೋಗುವ ನಾನು ಲೆಕ್ಕಾಚಾರ ತಪ್ಪೋದು ಅಲ್ಲಿಯೇ ಅನಿಸುತ್ತೆ…

ಸರಿ… ನನಗೆ ಹೀಗಾಯ್ತಲ್ಲ ಅಂತ ಬೇಜಾರಿರಲಿಲ್ಲ. ನಾಳೆ ನನ್ನಮ್ಮ ಬರ್ತಾಳಲ್ಲ, ಈ ಟೀಚರ್ ಅದೇನೇನು ಹೇಳ್ತಾರೋ ನನ್ ಬಗ್ಗೆ ಅಂತೆಲ್ಲ ಚಿಂತೆ ಕಾಡತೊಡಗಿತು. ಅಮ್ಮನೂ ಬಂದೇಬಂದಳು. ಟೀಚರ್ ಹೇಳಿದ್ದನ್ನೆಲ್ಲ ಕೇಳಿಕೊಂಡು ನನ್ನ ಕಡೆಗೊಮ್ಮೆ ತಿರುಗಿ,  ‘ಮನೆಗ್ ಬಾ, ಮಾಡ್ತೀನಿ’ ಅನ್ನೋ ಥರ ನೋಡ್ಕೊಂಡು ಹೋದಳು.
ಕೆಂಪು ಕೆಂಪು ಅಮ್ಮನನ್ನ ಊಹಿಸ್ಕೊಂಡು ಹೋಗಿದ್ದ ನಂಗೆ ಒಂದು ಥರ ನಿರಾಶೆಯೇ ಆಯ್ತು! ಅವಳು ನನ್ನ ದೊಡ್ಡಮ್ಮನಿಗೆಲ್ಲ ಕಥೆ ಹೇಳಿ ನಗ್ತಿದ್ದಳು!! ಕೊನೆಗೆ, ಅಪ್ಪ ಬರಲಿ ತಾಳು, ಅಂದು ಸುಮ್ಮಗಾದಳು.
ಅಪ್ಪನೂ ಬಂದಿದ್ದಾಯ್ತು. ನನ್ನ ನೋಟ್ಸುಗಳನ್ನ ನೋಡಿ ಅದರೊಳಗಿದ್ದ ಚಿತ್ರಗಳನ್ನ ನೋಡಿ ಅವರು ತಲೆ ಮೇಲೊಂದು ಕುಟ್ಟಿದ್ದು, ನಾನು ನೋವಿಗಿಂತ ಹೆಚ್ಚಾಗಿ ಸಿಟ್ಟು- ಅಸಹಾಯಕತೆಗಳಿಂದ ಅತ್ತಿದ್ದು, ಎಲ್ಲಾ ಮುಗೀತು. ಆದರೂ ಅವರು ಹೆಚ್ಚು ದಂಡಿಸುವ ಹಾಗಿರಲಿಲ್ಲ. ಯಾಕಂದರೆ ನನ್ನ ಮಾರ್ಕುಗಳು ನನಗೆ ಬೆಂಬಲವಾಗಿದ್ದವಲ್ಲ!?.
ಹಾಳೆ ತಿರುಗಿಸ್ತ, ತಿರುಗಿಸ್ತ ಅಪ್ಪ ‘ಚಿಂತೆ’ ಅನ್ನುವ ಕವಿತೆ ಓದಿದರು. ಏಕ್ ದಂ ಇಡಿಯ ಮನೆ ತಣ್ಣಗಾಗಿ ಹೋಯ್ತು. ಅಪ್ಪನ ಮುಖ ಪೂರ್ತಿ ಬದಲಾಯ್ತು. “ಇದನ್ಯಾವಾಗ ಬರೆದೆ ಮಗಳೇ?’ ಅಂದರು.
ಅದನ್ನ ನಾನು, ಅಪ್ಪ ಮನೆ ರಿಪೇರಿಗೆ ದುಡ್ಡು ಹೊಂಚುವುದು ಹೇಗೆ ಅಂತ ಚಿಂತಿಸ್ತಿದ್ದನ್ನ ನೋಡಿ ಬರೆದಿದ್ದೆ!

ಮುಗಿಯಿತು. ಅಪ್ಪ ಮತ್ತೆಂದೂ ಕವಿತೆ ಬರೆದಿದ್ದಕ್ಕೆ ನನಗೆ ಹೊಡಿಯಲಿಲ್ಲ! ಶಿಸ್ತು ಕಲಿ ಅಂತ ಆಗಾಗ ರೇಗಿದರೂ ಒತ್ತಡ ಹೇರಲಿಲ್ಲ. ನಾನು ಏನೊಂದೇ ಬರೆದರೂ ಅದನ್ನ ತಾವೇ ಟೈಪ್ ಮಾಡಿಕೊಂಡು ಬಂದು ಅವರಿವರಿಗೆ ಹಂಚತೊಡಗಿದರು. ಮೊದಲೇ ಸಂಕೋಚದ ಮುದ್ದೆಯಾಗಿದ್ದ, ಒಂಟಿಬಡಕಿಯಾಗಿದ್ದ ನಾನಂತೂ ನಾಚಿಕೆಯಿಂದ ಮುದ್ದೆಯಾಗಿಹೋಗ್ತಿದ್ದೆ. ಹೀಗೆಲ್ಲ ತಮ್ಮ ಮಗಳ ಬಗ್ಗೆ ತಾವೇ ಹೇಳ್ಕೊಂಡ್ರೆ ಜನ ಏನಂದ್ಕೊಳ್ತಾರೆ? ಅಂತ ಮುಜುಗರಪಡ್ತಿದ್ದೆ. ಅಡುಗೆ ಮನೇಲಿ ಅಮ್ಮನ ಜತೆ ಪಿಸುಗುಟ್ಟುತ್ತ ಬಯ್ಕೊಳ್ತಿದ್ದೆ…

ಈಗ ನನ್ನ ಬಗ್ಗೆ ನಾನೇ ಹೇಳ್ಕೊಳ್ತಿದೀನಲ್ಲ? ನೀವು ಕೇಳಬಹುದು… ಇದನ್ನೆಲ್ಲ ಹೇಳಿಕೊಳ್ಳಲೇಬೇಕೆಂಬ ಬಯಕೆಯಲ್ಲಿ, ನೀವೇನೆಂದುಕೊಳ್ತೀರೋ ಅನ್ನೋ ಮುಜುಗರದಲ್ಲೇ ಈಗ ಇದನ್ನ ಬರೀತಿದೇನೆ. ( ಮತ್ತೆ ಸಮಜಾಯಿಷಿ!) ಮತ್ತಿದು, ಬಹುತೇಕರ ಬಾಲ್ಯದಲ್ಲಿ ನಡೆದಿರಬಹುದಾದ ಘಟನೆಯೇ ಅಲ್ಲವೇ?

ಬಹುಶಃ ನನ್ನ ವಿಧಿಗೆ ಗೊತ್ತಿತ್ತು, ನನಗೆ ಶಾಲೆಯ ಓದು, ನೋಟ್ಸಿಗಿಂತ ಈ ರೀತಿಯ ಬರೆಯುವ ತೆವಲೇ ಬದುಕು ನೀಡೋದು ಅಂತ.  ಬೆಂಗಳೂರಿಗೆ ಕಾಲಿಟ್ಟ ಮೂರು ವರ್ಷದಿಂದ ನಾಲ್ಕು ಕೆಲಸ ಬದಲಿಸಿದ್ದೇನೆ. ಪ್ರತಿ ಸಾರ್ತಿಯೂ ವಿದ್ಯಾರ್ಹತೆ ಎದುರಿಗೆ ‘ಸೆಕೆಂಡ್ ಪಿಯುಸಿ’ ಅಂತ ಬರೆಯುವಾಗೆಲ್ಲ ಮುಖ ಸಣ್ಣ ಮಾಡ್ಕೊಂಡಿದ್ದೇನೆ. ಆದರೂ ಅದಕ್ಕಿಂತ ಹೆಚ್ಚಾಗಿ ಅಕ್ಷರಗಳ ಕರುಣೆಯಲ್ಲೇ ಇವತ್ತು ನೆಮ್ಮದಿಯಾಗಿ ಉಳಿದಿದ್ದೇನೆ. ತಲೆಯಲ್ಲಿ ಇಂಥದೊಂದು ಮೆದುಳಿಟ್ಟು ಕಳಿಸಿದ ದೇವಿಗೆ ಥ್ಯಾಂಕ್ಸ್ ಹೇಳುವುದಷ್ಟೆ ನಾನು ಮಾಡಬಹುದಾದ ಕೆಲಸ ಅನಿಸುತ್ತೆ…

ಇವತ್ತಿದನ್ನೆಲ್ಲ ನಾನ್ಯಾಕೆ ಹೇಳ್ಕೊಳ್ತಿದೇನೆ? ಕಾರಣವಿದೆ…
ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ, ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ. ಅದಕ್ಕೇ, ಇದೊಂದು ಪುಟ್ಟ ಫ್ಲ್ಯಾಶ್ ಬ್ಯಾಕು!

ನಾನೇ ಪ್ರಕಾಶನದ ಹೊಣೆ ಹೊತ್ತುಕೊಂಡಿದ್ದರೆ ಖಂಡಿತ ಇಷ್ಟು ಒಳ್ಳೆಯ ಪುಸ್ತಕ ಹೊರಬರ್ತಿರಲಿಲ್ಲ.ಅಪಾರ ಸೊಗಸಾದ ಮುಖ ಪುಟ- ಪುಟ ವಿನ್ಯಾಸಗಳನ್ನು ಮಾಡಿಕೊಟ್ಟಿದ್ದಾರೆ. ಪ.ಸ ಕುಮಾರ್ ರೇಖೆಗಳು ಅರ್ಥಪೂರ್ಣವೂ ಆಪ್ತವೂ ಆಗಿವೆ.
ಜೋಗಿಯವರು ಮುನ್ನುಡಿ ಬರೆದು ಪ್ರೋತ್ಸಾಹಿಸಿದರೆ, ನಟರಾಜ್ ಹುಳಿಯಾರ್ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ.
‘ಭಾಮಿನಿ ಷಟ್ಪದಿ’ಗೆ ಮೂಲ  ಕಾರಣರಾದ ವೆಂಕಟ್ರಮಣ ಗೌಡರು ‘ಉಫೀಟ್’ ಕವನ ಸಂಕಲನಕ್ಕೆ ಬರೆದುಕೊಟ್ಟ ನಲ್ನುಡಿಗಳು ಇಲ್ಲಿಯೂ ಇವೆ.

ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.

ನಿಮ್ಮಲ್ಲಿ ಶೇ.೯೦ ಮಂದಿಯನ್ನು ನಾನು ನೋಡಿಲ್ಲ. ಆದರೆ ನಿಮ್ಮೆಲ್ಲರ ಸ್ನೇಹ- ಪ್ರೀತಿಗಳ ಸವಿಯನ್ನು ಈ ಒಂದು ವರ್ಷದಿಂದ ಉಣ್ಣುತ್ತಲೇ ಬಂದಿದ್ದೇನೆ. ನಿಮಗೆಲ್ಲರಿಗೂ ನಾನು ಋಣಿ.
ನೀವು ‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ. ನೀವೆಲ್ಲರೂ ಖಂಡಿತ ಬರಲೇಬೇಕು.

ನಿಮಗಾಗಿ ಕಾದಿರುತ್ತೇನೆ.

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್

‘ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ’ನ ಸ್ಥಿತಿಯನ್ನು ನಿಷ್ಠುರ
ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ ತೀರ್ಥಹಳ್ಳಿಯವರ  ಥರ ಹೇಳಿದವರು
ಕನ್ನಡದಲ್ಲಿ ತೀರಾ ತೀರಾ ಕಡಿಮೆ. ಮಾನವ ಸಂಬಂಧಗಳಲ್ಲಿನ ಸಣ್ಣಪುಟ್ಟ ಯಾತನೆಗಳಿಂದ
ಹಿಡಿದು ಎಲ್ಲ ಬಗೆಯ ಯಾತನೆಗಳೂ ಕ್ರಮೇಣ ಹೆಣ್ಣನ್ನು ಹಿಂಡಿ, ಅವಳ ಜೀವದ್ರವ್ಯವನ್ನೇ
ಹಿಂಗಿಸಿಬಿಡುವ ರೀತಿಯನ್ನು ಚೇತನಾ ಗಂಭೀರವಾಗಿ, ವ್ಯಂಗ್ಯವಾಗಿ ಅಥವಾ ಪ್ರತಿಭಟನೆಯ
ದನಿಯಲ್ಲಿ ಹೇಳಬಲ್ಲರು; ಹಾಗೆ ಹೇಳಲು ಪುರಾಣ, ದಂತಕಥೆ, ರೂಪಕ ಮುಂತಾಗಿ ಬಗೆಬಗೆಯ
ಭಾಷೆಗಳನ್ನೆಲ್ಲಾ ಬಳಸಬಲ್ಲರು. ಲೇಖಕಿಯೊಬ್ಬಳು ಯಾರ ಹಂಗೂ ಇಲ್ಲದೆ ನಿಜ
ನುಡಿಯತೊಡಗಿದಾಗ, ಇಂಡಿಯಾದ ಕುಟುಂಬಗಳಲ್ಲಿ ಕಂಡೂ ಕಾಣದಂತಿರುವ ಸೂಕ್ಷ್ಮ ಹಿಂಸೆಗಳ
ಲೋಕ ಹೇಗೆ ಸ್ಫೋಟಗೊಳ್ಳುತ್ತದೆ ಎಂಬುದನ್ನು  “ಅಂಕಣ ಕಾದಂಬರಿ”
ಸೂಚಿಸುತ್ತದೆ; ಅಂಕಣ ಪ್ರಕಾರದ ಮೂಲಕ ಚೇತನಾ ಮಂಡಿಸಿದ ಬಿಡಿ ಬಿಡಿ ಅಧ್ಯಾಯಗಳ ಒಳಗೆ
ಪ್ರತಿಧ್ವನಿ ಪಡೆಯುತ್ತಿರುವ ತೀವ್ರ ದನಿಯೊಂದು ಈ ವಿಶಿಷ್ಟ ಸ್ತ್ರೀವಾದಿ
ಕಾದಂಬರಿಯನ್ನು ಕಡೆದಂತಿದೆ.

ಹೆಣ್ಣು ಗಂಡುಗಳಿಬ್ಬರ ಕಣ್ಣನ್ನೂ ತೆರೆಸಬಲ್ಲಂತೆ ಬರೆಯುವ, ತಮ್ಮ ಬರಹ ಚಿಮ್ಮಿಸಿದ
ಸ್ಫೂರ್ತಿಯಿಂದಲೇ ದಿಟ್ಟವಾಗಿ ಬದುಕುವ ಶಕ್ತಿ ಪಡೆದಂತಿರುವ ಚೇತನಾ ತೀರ್ಥಹಳ್ಳಿ
ಕನ್ನಡದ ಹೊಸ ತಲೆಮಾರಿನ ಅತ್ಯಂತ ಅರ್ಥಪೂರ್ಣ ಲೇಖಕಿ.

ಚೇತನಾ ತೀರ್ಥಹಳ್ಳಿ ಅವರ ‘ಭಾಮಿನಿ ಷಟ್ಪದಿ’ ಸಂಕಲನಕ್ಕೆ ಬರೆದ ಹಿನ್ನುಡಿ

ಜನ ಕಾರಣ ಹುಡುಕುತ್ತಲೇ ಇದ್ದಾರೆ…

ಭಾಮಿನಿ ಷಟ್ಪದಿ

ಚೇತನಾ ತೀರ್ಥಹಳ್ಳಿ
ಅವಳು ಸತ್ತು ಹೋಗಿದ್ದಾಳೆ. ಯಾಕಂದರೆ, ಯಾಕೋ… ಅಂತೂ ಅವಳು ಹೊರಟು ಹೋಗಿದ್ದಾಳೆ.
ಹೊಸಿಲು ದಾಟಿದ ದಿನದಿಂದ ಗಾಳಿ ಮಾತು ಕೇಳಿ ಕೇಳಿ ಸಾಕಾಗಿಯೇ ಹಾಗೆ ಮಾಡಿದಳೇನೋ?
ಆದರೂ, ಅವಳು ಹಾಗೆ ಸತ್ತುಬಿಡಬಾರದಿತ್ತು.
ಅಥವಾ,
ಬದುಕಿದ್ದರೂ ಅವಳನ್ನ ಬದುಕಲಿಕ್ಕೆ ಬಿಡುತ್ತಿದ್ದರೇನು?
ನಿಜವೇ ಸರಿ. ಹೆಣ್ಣುಗಳು ಬದುಕಲಿಕ್ಕೆ ಗಂಡುಗಳು ‘ಬಿಡ’ಬೇಕು!

ಇಷ್ಟೂ ವರ್ಷ ಯಾರು ಯಾರೋ ಸತ್ತುಹೋದರು. ‘ಬದುಕಲು ಬಾರದ ಹೇಡಿ’ ಅಂದುಕೊಂಡೇ ವಾರೆ
ನಕ್ಕಿದ್ದೆ ನಾನು. ಈಗ ಮಾತ್ರ….
ಅವಳು ತನ್ನ ತಾನೇ ಕೊಂದುಕೊಂಡಳು ಅಂತ ಹೇಳಲಾಗ್ತಲೇ ಇಲ್ಲ ನನಗೆ! ದೇಹ ಕತ್ತರಿಸಿ
ಕತ್ತರಿಸಿ ಮೆಡಿಕಲ್ ರಿಪೋರ್ಟು ಬರೆದರೂ, ಅದನ್ನ ಆತ್ಮ ಹತ್ಯೆ ಅನ್ನಲಿಕ್ಕೆ ಬಾಯಿ
ಬರ್ತಲೇ ಇಲ್ಲ….

ಹೌದಲ್ಲ?
ಅವಳ ಆಸೆಗಳನ್ನ, ಮನಸನ್ನ, ವ್ಯಕ್ತಿತ್ವವನ್ನ, ಜೀವನವನ್ನ, ನಂಬಿಕೆಯನ್ನೂ ಯಾರೋ
ಯಾವಾಗಲೋ ಕೊಂದು ಬಿಸಾಡಿದ್ದರು. ಈಗ ನೇಣಿಗೆ ಶರಣಾಗಿದ್ದು ದೇಹ ಮಾತ್ರ.

ಆದರೂ ಜನ ಕಾರಣ ಹುಡುಕುತ್ತಲೇ ಇದ್ದಾರೆ… ಅವಳು ಸತ್ತಿದ್ದು ಯಾಕೆ? ಕೇಳುತ್ತಲೇ ಇದ್ದಾರೆ…

ಇಷ್ಟಕ್ಕೂ,
ಕಾರಣ ಏನು ಅಂತ ಹೇಳುವುದು?
ಅಸಲು ಸಂಗತಿಗೆ ಹಣದ ಹೆಣ ಅಡ್ಡಿ. ಅಧಿಕಾರ ಅಡ್ಡಿ.

ಹಾಗೆ ನೋಡಿದರೆ ಅವಳಿಗೆ ಬೇಕಾದುದೆಲ್ಲವೂ ಇತ್ತು.
ಮನೆ ಇತ್ತು. ದೊಡ್ಡದೇ ಇತ್ತು.
ಹಣವಿತ್ತು. ಸಾಕಷ್ಟಿತ್ತು. ಕೊಂಚ ಕೂದಲು ಉದುರಿದ್ದರೂ ಗಂಡ ಗಟ್ಟಿಯೇ ಇದ್ದ. ಮುದ್ದಾದ
ಮಕ್ಕಳಿಬ್ಬರೂ ಗಂಡೇ…
ಮನೆ ತುಂಬ ಆಳು ಕಾಳು, ಮಾಡಲು ತನಗೂ ಒಂದಷ್ಟು ಅಧಿಕಾರದ ಕೆಲಸ, ಹೆಸರು-
ಹೆಚ್ಚುಗಾರಿಕೆ… ಎಲ್ಲ… ಎಲ್ಲವೂ ಇದ್ದವು.

ಆದರೂ….
ಸತ್ತಿದ್ದು ಯಾಕೆ?

ಕೆಲವರು ಹಾಗೇ… ನಾನೂ ಕೂಡ. ಜೀವನ ಅಂದರೆ ಬರಿ ಮೆದ್ದು, ಹೊದ್ದು ಮಲಗೋದಲ್ಲ
ಅಂದುಕೊಂಡವರೆಲ್ಲ ಹಾಗೇ…
ಅವಳಿಗೂ ಬಹುಶಃ ಹಾಗೇ…

ಅಥವಾ ಆ ಅಧಿಕಾರದವನ ಚಿಲಿಪಿಲಿ ಅವಳ ಕಿವಿ ಹೊಕ್ಕಿತ್ತೇನೋ? ಅವನ ಡೈರಿಯ ಪುಟಗಳ
ಜತೆಜತೆಗೇ ತನ್ನ ಬದುಕೂ ಮುಗಿದು ಹೋಗೋದನ್ನ ಅವಳು ಸಹಿಸದೆ ಹೋಗಿದ್ದಿರಬೇಕು.
ಹೆಣ್ಣು ಜೀವದ ಬೇಕು ಬೇಡಗಳನ್ನ ಕೇಳುತ್ತ ಕೂರುವವರಾದರೂ ಯಾರಿದ್ದಾರೆ?
ಹಾಗೆಂದೇ ಅವಳು ತನ್ನ ಬೇಕುಗಳನ್ನ ಪಟ್ಟಿ ಮಾಡಿಕೊಂಡಳು. ಹುಡುಕುತ್ತ ಹೊರಟಳು.

ಅವಳು ಹೊರಟುಹೋದಳು… ಅವನ ಮನೆಯ ನಾಯಿ ಊಳಿಟ್ಟಿತು. ಹೊಸ ಖುರ್ಚಿಗೆ ಹೊಡೆದ ಪೇಂಟಿನ
ವಾಸನೆಯೇ ಆರಿಲ್ಲ ಇನ್ನೂ! ಮತ್ತೀಗ ಇವಳದ್ದೇನು ಕಾರುಬಾರು? ಗುಂಡಿಗೆ
ಧಡಲ್ಲೆಂದಿರಬೇಕು ಬಹುಶಃ! ಉಸಿರಾಡಬೇಕೆಂದವಳಿಗೆ ಹಳೆಗೆಳೆಯ ಕಿಟಕಿ
ತೆರೆದುಕೊಟ್ಟಿದ್ದು ಹೊಟ್ಟೆ ಉರಿಸಿರಬೇಕು. ಹಗಲು ಇರುಳಾಗುವುದರೊಳಗೆ ಅವಳ ಚಿತ್ರಕ್ಕೆ
ಮಸಿ ಚೆಲ್ಲಿತ್ತು. ಛೇ!! ಹಾಗೆಲ್ಲ ಬದುಕಬೇಕೆಂದು ಆಸೆ ಪಡಬಹುದೇ ಹೆಣ್ಣು?
ಅವಳದೇನಿದ್ದರೂ ಗೌರವದ ಸ್ಥಾನ. ಗೌರವ, ಗಾಳಿಗೆ ತೆರೆದುಕೊಳ್ಳೋದಿಲ್ಲ.

ದಿನಗಟ್ಟಲೆ ಅವಳು ಇಲ್ಲವಾದ ಸುದ್ದಿಯದೇ ಗುಲ್ಲು. ಒಣ ಒಣ ಸಂಗತಿಗಳಿಗೆ ನೀರು
ಹನಿಹನಿಸಿ ಬೋರು ಹೊಡೆದಿದ್ದ ಮಂದಿಗೀಗ ಸುಗ್ಗಿ! ಹೆಸರಿನ ಮನೆ ಹೆಂಗಸು ಹಾಗೆ
ಇಲ್ಲವಾಗಿದ್ದು ವಿಶ್ವದ ಅತಿ ಘೋರ ದುರಂತವಲ್ಲವೇ? ಅಲ್ಲದಿದ್ದರೆ ಬಿಡಿ. ಸುದ್ದಿ
ಮಂದಿಗೆ ಅದು ಶತಮಾನದ ಸಂಭ್ರಮವೇ ಸರಿ…

ನಿಜ… ಹೆಸರಿನ ಮಂದಿಯ ಹೆಂಡತಿಯರಾಗೋದು ಎಷ್ಟು ಕಷ್ಟ!!

ಮಹಿಳಾ ಸಹಾಯವಾಣಿ ನಂಬರು ಅಣಕಿಸ್ತಲೇ ಇತ್ತು.

ಭಾಮಿನಿ ಷಟ್ಪದಿ

ಚೇತನಾ ತೀರ್ಥಹಳ್ಳಿ
ಅಂವ ಅವತ್ತೂ ಕುಡಿದುಬಂದ.
ಹೊಸತೇನಲ್ಲ. ಮೊದಮೊದಲು ವಾಂತಿ ತರಿಸ್ತಿದ್ದ ಗಬ್ಬು ವಾಸನೆ ಆಮೇಲಾಮೇಲೆ ಅಭ್ಯಾಸವಾಗಿಹೋಗಿ ಈಗೀಗ ಹಿತವೆನಿಸತೊಡಗಿದೆ. ಈಗೊಂಥರಾ ಹೆಂಡದ ವಾಸನೆಯ ಅಡಿಕ್ಷನ್ ನಂಗೆ. ಇಂವ ಊರಲ್ಲಿ ಇಲ್ಲದಾಗ ನಿದ್ದೆಯೇ ಬರೋಲ್ಲ ಕಣೇ!
 
ಅವಳು ಕೂಲಾಗಿಯೇ ಹೇಳ್ತಿದ್ದಳು.
ಮುಖದಲ್ಲಿ ಹುಡುಕಿದರೂ ನೋವಿನೆಳೆಯಿಲ್ಲ. “ಇವತ್ತಿನ ತಿಂಡಿಗೆ ಚಪಾತಿ ಮಾಡಿದ್ದೆ” ಅನ್ನುವಷ್ಟೇ ಸಹಜವಾಗಿತ್ತು ಅವಳ ಮಾತು.
ಹಾಗವಳು ಹೇಳಹೊರಟಿದ್ದು ಅವತ್ತಿನ ಬಗ್ಗೆ. ಅಂವ ಕುಡಿದು ಹೆಚ್ಚಾಗಿ ಅವಳ ಮುಖ ಮೂತಿ ನೋಡದೆ ಜಪ್ಪಿದನಲ್ಲ ಅವತ್ತಿನ ಬಗ್ಗೆ.
ಯಾವುದೋ ಸಣ್ಣ ಮಾತಿಗೆ ಅಂವ ತೀರಾ ಅವಳ ಮುಖಕ್ಕೆ ದಿಂಬು ಒತ್ತಿ ಹಿಡಿದುಬಿಟ್ಟಿದ್ದ.
“ನಂಗೆ ಬದುಕೋ ಆಸೆ ಇದೆ ಕಣೇ…. ನಾನು ಬದುಕ್ಬೇಕು…” ಅವಳ ಬಿಕ್ಕಳಿಕೆಗೆ ನನ್ನ ಗಂಟಲೊತ್ತಿ ಬಂದಿತ್ತು.
 
~
ಅವಳ ಮನೆಯ ಸಂಸ್ಕಾರ ದೊಡ್ಡದು. ಸಂಸ್ಕರವೆಂದರೆ, ಮಡಿ ಮೈಲಿಗೆ ಇತ್ಯಾದಿ…
ಮಡಿಯ ಜನಗಳಿಗೆ ಪ್ರಾಣಕ್ಕಿಂತ ಮಾನ ದೊಡ್ಡದಾಗಿರೋದು ಸಹಜ. ಮೈ ತುಂಬ ಬರೆ ಹೊತ್ತ ಮಗಳನ್ನ ಕಂಡು ಅವಳಮ್ಮ ಬಿಕ್ಕಿದರು. “ಜನಕ್ಕೆ ಏನಂತ ಹೇಳೋದು?”
ಅತ್ತೆಯೂ ಹೇಳ್ತಾಳೆ… “ಕುಡಿದಾಗ ಹಾಗಾಡೋದು ಬಿಟ್ರೆ ಮಗ ಒಳ್ಳೆಯವ್ನು ಕಣೇ, ಅಡ್ಜಸ್ಟ್ ಮಾಡ್ಕೋ!”
ಇರುಳು ಕಂಠಮಟ್ಟ ಕುಡಿದವನ ನಷೆ ದಿನಾ ಬೆಳಗ್ಗೆ ಹೊರಡುವಾಗಲೂ ಇಳಿದಿರೋಲ್ಲ… ಮತ್ತೆ ಸಂಜೆ ಕಂಠಮಟ್ಟ….
ಇನ್ನು, ಅಡ್ಜಸ್ಟ್ ಮಾಡ್ಕೊಳೋದು ಯಾವಾಗ?
 
~
ಒಮ್ಮೆಯಂತೂ ವಿಪರೀತಕ್ಕೆ ಹೋಯ್ತು.
ಅಂವ ಹುಚ್ಚು ನಾಯಿ ಕಡಿದವರ ಹಾಗೆ ಮುಗಿಬಿದ್ದಿದ್ದ.
ಹೆಂಡತಿಯನ್ನ ಸುಖಾಸುಮ್ಮನೆ ಬಡಿಯುವ ಗಂಡಸರು ಒಂದೋ ಸೋಲನ್ನ ಸಹಿಸಲಾಗದವರಾಗಿತರ್ಾರೆ. ಇಲ್ಲಾ ಕೀಳರಿಮೆಯವರಾಗಿತರ್ಾರೆ. ಇನ್ನೂ ಸರಿಯಾಗಿ ಹೇಳಬೇಕಂದರೆ ಕೈಲಾಗದ ದುರಹಂಕಾರಿಗಳಾಗಿತರ್ಾರೆ!
ಈ ಇಷ್ಟರಲ್ಲಿ ಅಂವ ಎಂಥದೋ ಒಂದು, ಅಂತೂ ಆಗಿದ್ದ. ಒಟ್ಟು ಕುಂತು ಉಣ್ಣಲು ಕಾಯ್ತಿದ್ದವಳನ್ನ ಮನೆಗೆ ಬಂದವನೆ ಧಬ ಧಬ ಬಡಿದು ಬಿಸಾಕಿದ.
 
ಯಾವತ್ತಿನಂತೆ ಫೋನು ಮಾಡಿ ಅತ್ತವಳಿಗೆ ನಾನು `ಕುಟುಂಬ ದೌರ್ಜನ್ಯ ಕಾಯಿದೆ’ ಇತ್ಯಾದಿ ಭಾಷಣ ಬಿಗಿದು ಸಹಾಯವಾಣಿಗಳ ನಂಬರು ಕೊಟ್ಟೆ.
ಇನ್ನೇನು, ಎಲ್ಲ ಮುಗಿಯಿತಂತಲೇ ಅಂದುಕೊಂಡು ಅವಳು ಸುಖವಾಗಿರಲಿ ಅನ್ನುತ್ತ ದೀಪ ಹಚ್ಚಿಟ್ಟೆ.
 
~
ಇವೆಲ್ಲ ಆಗಿ ನಾಲ್ಕನೇ ದಿನಕ್ಕೆ ಸೀರೆಯುಟ್ಟು ಮನೆಗೆ ಬಂದಳು ಅವಳು. ಜತೆಗೆ ಕವರಲ್ಲಿ ಮೈಮೇಲೆ ಬರುವ ದೇವರೊಂದರ ಪ್ರಸಾದ!
“ಯಾರೋ ಎನೋ ಮಾಡ್ಸಿ ಹಾಕಿದಾರೆ ಕಣೇ. ದೇವ್ರು ಹೇಳ್ತು. ದಿನಾ ಚಿಟಿಕೆ ಕುಂಕುಮ ನೀರಲ್ಲಿ ಹಾಕಿ ಕುಡಿಸೋಕೆ ಹೇಳಿದಾರೆ. ಮೂರನೇ ಅಮವಾಸ್ಯೆಗೆ ಹೋಗಬೇಕಂತೆ!” ಅಂದವಳ ಮುಖದಲ್ಲಿ ಸಂಭ್ರಮ.
ನನ್ನ ಎದೆಹಿಂಡಿ ಅಯ್ಯೋ ಅನಿಸುತ್ತಿತ್ತು. ತಲೆ ಕೆಟ್ಟು ಅಂವ ಇಡಿ ಕುಂಕುಮದ ಪೊಟ್ಟಣವನ್ನೇ ಬೀರಲ್ಲಿ ಹಾಕಿ ಕುಡಿದುಬಿಟ್ಟರೆ?
ಕೇಳೋಣವೆಂದುಕೊಂಡೆ.
ಅಪರೂಪಕ್ಕೆ ನಗುತ್ತಿದ್ದಳು ಹುಡುಗಿ, ಸುಮ್ಮನಾದೆ.
 
~
ಇವತ್ತು ಬೆಳಗ್ಗೆ ಮತ್ತೆ ಅವಳ ಫೋನು ಬಂತು.
ದೇವರ ಮನೆಯಲ್ಲಿಟ್ಟಿದ್ದ ನಿಂಬೆ ಹಣ್ಣು ಕಾಣ್ತಿಲ್ಲವಂತೆ.
ಅಂವ ನಿನ್ನೆ ರಾತ್ರಿ ಮತ್ತೆ ಸಮಾ ಕುಡಿದು ಬಂದಿದ್ದನಂತೆ.
“ಏನಿಲ್ಲ, ಮೂಗಲ್ಲಿ ರಕ್ತ ಬರೋ ಹಾಗೆ ಹೊಡೆದ ಅಷ್ಟೆ. ಮೂರನೇ ಅಮವಾಸ್ಯೆಗೆ ಕಾಯ್ತಿರುವೆ. ಆಮೇಲೆ ಎಲ್ಲ ಸರಿ ಹೋಗತ್ತೆ.
ಆದ್ರೆ, ಈ ನಿಂಬೆ ಹಣ್ಣು ಎಲ್ಲಿ ಹೋಯ್ತಂತಲೇ ಗೊತ್ತಾಗ್ತಿಲ್ಲ….”
ಅವಳು ಹೇಳ್ತಲೇ ಇದ್ದಳು.
ಮೇಜಿನ ಮೇಲಿಟ್ಟಿದ್ದ ಮಹಿಳಾ ಸಹಯವಾಣಿ ನಂಬರು, ನನ್ನ ಅಣಕಿಸ್ತಲೇ ಇತ್ತು.

 

 

 

 

 

ಗಾನಾ ಬದಲಿಗೆ ಒಬ್ಬ ‘ಚೇತನಾ’

‘ಹಂಗಾಮಾ’ ಎನ್ನುವ ಪತ್ರಿಕೆ ಇತ್ತು. ವೆಂಕಟರಮಣ ಗೌಡರು ತಮ್ಮ ಎಲ್ಲಾ ಕನಸುಗಳನ್ನು ಒಟ್ಟುಗೂಡಿಸಿ ಹುಟ್ಟುಹಾಕಿದ ಮಿನಿ ‘ಭಾವನಾ’ ಅದು. ಅಲ್ಲಿ ಕಾಣಿಸಿಕೊಂಡ ಕನಸುಗಂಗಳ ಹುಡುಗಿ ‘ಗಾನಾ’. ಆ ನಂತರ ಬದುಕಿನ ಬಂಡಿ ಸಾಕಷ್ಟು ದೂರ ನಡೆದು ಬಂತು. ಹಂಗಾಮಾ ಬದಲಿಗೆ ಒಂದು ‘ಅವಧಿ’ ಮೂಡಿ ಬಂತು. ಆಶ್ಚರ್ಯ ಎಂಬಂತೆ ಗಾನಾ ಬದಲಿಗೆ ಒಬ್ಬ ‘ಚೇತನಾ’ ಮೂಡಿಬಂದರು.

ಗಾನಾ, ಚೇತನಾ ಹೀಗೆ ದ್ವಿಪಾತ್ರದ ಹುಡುಗಿಯ ಸಂಕಲನ ಈಗ ಬೆಳಕು ಕಾಣುತ್ತಿದೆ. ನೇರ ಮಾತು, ಬೇಕಾದಷ್ಟೇ ಮಾತು ಚೇತನಾರ ಗುಣ.

ಪುಸ್ತಕದ ಹೆಸರು ಇನ್ನೇನಿದ್ದೀತು. ನೀವು ಪ್ರೀತಿಸಿದ ಭಾಮಿನಿ ಷಟ್ಪದಿಯೇ ಪುಸ್ತಕದ ಹೆಸರು. ಪ್ರತಿ ಕಾಯ್ದಿರಿಸಿ ಎಂದು ಘೋಷಿಸಿದ್ದೆ ತಡ ಸಾಕಷ್ಟು ಓದುಗರು ಮೈಲ್ ಮೂಲಕ ತಮ್ಮ ಪ್ರತಿ ಬುಕ್ ಮಾಡಿದ್ದಾರೆ. ನಿಮಗೂ ಬೇಕಾದಲ್ಲಿ ಆದಷ್ಟೂ ಬೇಗ avadhi.pusthaka@gmail.com ಮೈಲ್ ಮಾಡಿ.

ಗುಡ್ ನ್ಯೂಸ್


‘ಅವಧಿ’ ಓದುಗರ ಹಾಟ್ ಫೇವರೈಟ್

ಚೇತನಾ ತೀರ್ಥಹಳ್ಳಿ ಅವರ

 

‘ಭಾಮಿನಿ ಷಟ್ಪದಿ’

ಈಗ ಪುಸ್ತಕ ರೂಪದಲ್ಲಿ

ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಕೈಯಲ್ಲಿ-

ಪ ಸ ಕುಮಾರ್ ರೇಖೆಗಳು
ಅಪಾರ ಅವರ ವಿನ್ಯಾಸ
ಜೋಗಿ ಮುನ್ನುಡಿ

ವೆಂಕಟ್ರಮಣ ಗೌಡ ಮರುನೋಟ
ನಟರಾಜ್ ಹುಳಿಯಾರ್ ಬೆನ್ನುಡಿ

ಪ್ರತಿಗಳನ್ನು ಕಾಯ್ದಿರಿಸಿ;
ನಿಮ್ಮ ಪ್ರತಿಗಳಿಗಾಗಿ
avadhi.pusthaka@gmail.com ಗೆ ಮೈಲ್ ಮಾಡಿ

 

ಅಹಂಕಾರಗಳ ಎದುರು ಒಂದು ಗೆಲುವು

chetana.jpg

ಭಾಮಿನಿ ಷಟ್ಪದಿ

ಚೇತನಾ ತೀರ್ಥಹಳ್ಳಿ

ದು ಅವನಿಗೆ ತೀರ ಸುಲಭವಾಗಿತ್ತು.
ಹಾಗೆ `ಬೇಡ’ ಅಂದು ಮುಖ ತಿರುವಿಬಿಡುವುದು ಗಂಡಸರಿಗೆ ತೀರ ಸುಲಭ!
ಕನ್ನಡಿಯೆದುರು ನಿಂತು ಮುಂಗುರುಳು ತೀಡಿಕೊಳ್ಳುವಾಗ ಒಳಗೆಲ್ಲ `ಝುಮ್’ಗುಡುತ್ತಿತ್ತು. ಇಡಿಯ ಮೈಯಲ್ಲಿ ಏನಿದೆ ಕೊರತೆ? ನೋಡಿಕೊಂಡಳು. “ಜಗವೆಲ್ಲ ನನ್ನ ಹಿಂದೆ, ನಾನು ಅವನ ಹಿಂದೆ!” ಹಾಗಂತ ಹಾಡಿದೆಯಾ? ಮಾಡು ನೋಡಿ ನಕ್ಕಳು. ಖುಶಿ ಜಾಸ್ತಿಯಾದಾಗ ಅಳು ಬರುತ್ತೆ, ಗೊತ್ತು. ದುಃಖ ಜಾಸ್ತಿಯಾದಾಗ ನಗು ಬರೋದು ಗೊತ್ತಾ!?

ಅವಳಿಗೆ ಚೆನ್ನಾಗಿ ಗೊತ್ತು. ಅಂವ ಬೇಡ ಅಂದಿದ್ದಕ್ಕೆ ಕಾರಣ ತನ್ನ ರೂಪವಂತೂ ಅಲ್ಲ. ಗುಣವಲ್ಲ, ಬುದ್ಧಿವಂತಿಕೆ ಕೊರತೆಯಲ್ಲ, ಯಾವುದೂ ಅಲ್ಲ.
ಅದೇ, ತಾನು ಕಾರಣಗಳೇ ಇಲ್ಲದೆ ಅಂವನ್ನ ಬೇಡವೆಂದಿದ್ದರೆ, ಜನದ ಮಾತು ಹೇಗಿರುತ್ತಿತ್ತು?
ತುಟಿ ಕಚ್ಚಿ ನೋಯಿಸ್ಕೊಂಡಳು. ಇನ್ಯಾರನ್ನ ನೋಯಿಸಿ ಸಿಟ್ಟು ತಣಿಸಿಕೊಳ್ಳಬಹುದಿತ್ತು ಅವಳು?

ಅಂವ ವಿನಾಕಾರಣ ಅವಳನ್ನ ನಿರಾಕರಿಸಿಬಿಟ್ಟಾಗಿನಿಂದ ಅಪ್ಪ ಮಾತುಮಾತಿಗೆ ಸಿಡುಕತೊಡಗಿದ್ದ.
ಸದಾ ಹಾಡು ಗುನುಗುತ್ತ ಓಡಾಡುತ್ತಿದ್ದ ಹುಡುಗಿ. ಅವಳನ್ನ `ನೀ ಏನು ಸೂಳೆಗೆ ಕೆಟ್ಟುಹೋದೆಯೇನೇ?’ ಅಂತ ಗದರಿಬಿಟ್ಟ. ಪ್ರಭಾವೀ ಗಂಡೊಂದು ಕೈಬಿಟ್ಟ ಉರಿ ಅವನಿಗೆ!
ಅಮ್ಮ ಅಡುಗೆ ಮನೆಯಲ್ಲಿ `ಮಂಗಳವಾರ ಹುಟ್ಟಿದ ಅನಿಷ್ಟ ಅಂತ ಒಗ್ಗರಣೆ ಹಾಕಿದಳು. ಅವಳು ಹಾಗೆ ಮಗಳ ಮೇಲೆ ಉರಿಹಾಯಲಿಕ್ಕೆ ಅಸಹಾಯಕತೆಯೇ ಕಾರಣವೇನೋ? ಪಾಪ. ಹುಡುಗಿಗೆ ಅದೆಲ್ಲ ಹೇಗೆ ತಿಳಿಯಬೇಕು?
ತಂಗಿ ಬೇರೆ ಸುಖಾಸುಮ್ಮನೆ ಮುಖ ಊದಿಸ್ಕೊಂಡು `ಅಕ್ಕ ಅಶೋಕ ಪಿಲ್ಲರಿನ ಹತ್ತಿರ ಯಾವನೋ ಸಾಬಿಯ ಜತೆ ಹರಟುತ್ತ ನಿಂತಿದ್ದಳು’ ಅಂತ ಪುಕಾರುಮಾಡತೊಡಗಿದ್ದಳು. ಅವಳ ಮನಸಲ್ಲಿ ಏನಿತ್ತು?

ಹಾಗಂತ, ಹುಡುಗಿ ಅಶೋಕ ಪಿಲ್ಲರಿನ ಬಳಿ ಆ ಚೆಂದದ ಹುಡುಗನೊಟ್ಟಿಗೆ ಮಾತಾಡಿದ್ದೇನೋ ಹೌದು. ಹಾಗವಳು ಪಿಲ್ಲರಿನ ಕೆಳಗೆ ನಿಂತು ಹುಡುಗನ ಪ್ರಪೋಸಲ್ಲನ್ನ ನಿರಾಕರಿಸ್ತಿದ್ದಳು. ಅಪ್ಪ- ಅಮ್ಮನಿಗೆ ಆಘಾತ ಮಾಡಲಾರೆ ಅಂತ ತನ್ನ ಬಯಕೆ ನಿಂಗುತ್ತಿದ್ದಳು. ಇರುವೊಬ್ಬ ತಂಗಿಯ ಮದುವೆಗೆ ಅಡ್ಡಿಯಾದರೆ? ಬೆಚ್ಚಿದ್ದಳು. ಹುಡುಗ ಹೃದಯ ಮುರಕೊಂಡು ತಲೆ ತಗ್ಗಿಸಿ ನಡೆದುಬಿಟ್ಟಿದ್ದ.

ಯಾಕೋ ಅನುಮಾನವಾಯ್ತು. ಅಂವ ಏನಾದರೂ ತನ್ನ ಬಗ್ಗೆ ಇಲ್ಲಸಲ್ಲದ….
ಥೂ..! ತನ್ನ ಯೋಚನೆಗೆ ತಾನೇ ಉಗಿದು ಉಪ್ಪು ಹಾಕಿದಳು. ಇವಳು ಒಲ್ಲೆನೆಂದ ಮರುದಿನದಿಂದ ಅಂವ ತನ್ನಪಾಡಿಗೆ ತಾನು ಇದ್ದುಕೊಂಡಿದ್ದ. ಮತ್ತೆ… ಈ ಅವಮಾನದ ಕಾರಣ?
ಅಂವ ಯಾರನ್ನಾದರೂ ಪ್ರೀತಿಸ್ತಿರಬಹುದು. ಅಥವಾ, ಅವನಿಗೆ ಮದುವೆಯೇ ಬೇಡವಿರಬಹುದು. ಇಲ್ಲಾ,  ಅದನ್ಯಾವುದನ್ನೂ ಬಾಯ್ಬಿಟ್ಟು ಹೇಳದೆ ಮುಷಂಡಿಯ ಹಾಗೆ ಮುಖತಿರುವಿದ ಅಂವ…. ನಾಮರ್ದನಿರಬಹುದು!?

ಹೀಗೆ ಅನಿಸಿದ್ದೇ, ಅವಳು ಗೆಲುವಾದಳು. ಅವತ್ತಿನ ಸಂಜೆ ಹುಡುಗಿ ತಾನುತಾನೇ ಮನೆಮಂದಿ ಮೈಮೇಲೆ ಬಿದ್ದು ಬಾಯ್ತುಂಬ ಮಾತಾಡಿದಳು. ಸುಳ್ಳುಸುಳ್ಳೆ ನಕ್ಕಳು. “ಅಮ್ಮಾ ತಲೆಗೆ ಎಣ್ಣೆ ಹಾಕೇ” ನುಲಿದಳು. ತಂಗಿಯೊಟ್ಟಿಗೆ ಪಗಡೆ ಆಡಿ ಬೇಕೆಂದೇ ಸೋತಳು.
ಮನೆ ಮಂದಿಯ ಪ್ರತಿ ಉದಾಸೀನಕ್ಕೂ ಅವನ ನಾಮರ್ದತನವನ್ನ ನೆನೆದು ನಕ್ಕು ಸಹಿಸಿಕೊಂಡಳು.
ತನ್ನ ತಲೆಪ್ರತಿಷ್ಠೆಗೆ ಅವಳನ್ನ ಬೇಡ ಅಂದವನ ಅಹಂಕಾರವನ್ನ ಹೀಗೆ ನೀವಾಳಿಸಿದಳು ಹುಡುಗಿ, ತನ್ನ ಅವಮಾನಕ್ಕೆ ಸೇಡು ತೀರಿಸ್ಕೊಂಡಳು!

ನೋವಿನ ಮುಂದೆ ನಿರಂತರ ಯುದ್ಧ

 chetana.jpg

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ

ತ್ತೆ ಮತ್ತೆ ಕ್ಲಿಪ್ಪು ಟಪಟಪಾರೆನಿಸಿ ಜುಟ್ಟು ಬಿಗಿದಳು.

ಊಹೂಂ… ಅವೆರಡು ಕೂದಲು ಒಳಸೇರ್ತಲೇ ಇಲ್ಲ. ತುದಿ ಬೇರೆ ಮಾವಿನ ಕಾಯಿ ಮೂತಿಯಾಗಿದೆ!
ಐ ಲೈನರು ತೀಡಿ, ಲಿಪ್ ಸ್ಟಿಕ್ಕು ಮೆತ್ತಿ, ಅಂತೂ ರೆಡಿ! ಟೈಮ್ ಟೇಬಲಿನಲ್ಲಿ ಅದಕ್ಕಂತಲೇ ಅರ್ಧ ಗಂಟೆ ನಿಗದಿಯಾಗಿದೆ.
ಹೀಗೆ ದಿನಕ್ಕೊಂದು ರೀತಿ ಡ್ರೆಸ್ಸು ಮಾಡ್ಕೊಂಡು ಛಿಲ್ಲನೆ ನಗುತ್ತ ಹುಡುಹುಡುಗಿಯಾಗಿ ಸಂತೂರ್ ಅಡ್ವರ್ಟೈಸಿನ ಮಾಡೆಲಾಗೋದು ಅವಳಿಗೆ ಖುಶಿ.

ಆದರೆ,
ಆದರೆ ಅದರಲ್ಲಿ ಬರುವ ಹಾಗೆ ‘ಮಮ್ಮೀ…’ ಅನ್ನುತ್ತ ಓಡಿ ಬರಲು ಮಗುವೊಂದು ಬಳಿಯಿಲ್ಲ.
ಇದು “ಅಷ್ಟೇ” ಅಂದು ಸುಮ್ಮನಾಗುವ ವಿಷಯವಲ್ಲ.

*

“ಹೆಣ್ಣಲ್ಲ, ಹೆಣ್ಣು ಹುಟ್ಟಲ್ಲ. ಮಗೂನ ಇಲ್ಲೇ ಬಿಟ್ಟು ರಾಜ್ಯ ಆಳೋಕೆ ಹೋಗಿದಾಳ್ನೋಡು ಹೆಮ್ಮಾರಿ!” “ಪಾಪ ಮಗು, ಅದಕ್ಕೆ ‘ನೀನೇ’ ಅನ್ನೋರು ಗತಿಯಿಲ್ಲ, ಅವಳ ತೆವಲಿಗಷ್ಟು!”

– ಹೀಗೆಲ್ಲ ಪುಕಾರು ಮಾಡಿ ಬಾಯಿ ಬೇಸರ ಬಂದ ಜನ ಈಗ ಸುಮ್ಮನಿದ್ದಾರೆ. ಜನ ಸುಮ್ಮನಾಗಿಬಿಟ್ಟ ತಲೆಬಿಸಿಗೆ ಅಂವ ಹೊಸತೇನಾದರೂ ಸ್ಕ್ರಿಪ್ಟು ರೆಡಿ ಮಾಡಿ ನಾಟಕವಾಡ್ತಲೇ ಇರುತ್ತಾನೆ. ಅವನ ಮನೆ ಮಂದಿ ಊರು ತುಂಬಾ “ಕೆಟ್ಟ ಮಕ್ಕಳಿರಬಹುದು, ಕೆಟ್ಟ ತಾಯಿ ಇರೋಲ್ಲ ಅನ್ನೋದು ಅದೆಷ್ಟು ಸುಳ್ಳು ನೋಡಿ! ಇವಳಿಗಿಂತ ಉದಾಹರಣೆ ಬೇಕೇ?” ಅಂದುಕೊಂಡು ತಿರುಗುತ್ತಾರೆ.

ಸರಿ- ತಪ್ಪು ಅರಿಯದ ಮಗು, ಅವರ ಪಾಲಿನ ಶಿಖಂಡಿ! ಅದನ್ನ ಎದುರಿಟ್ಟುಕೊಂಡು ಅವರ ಕಾಳಗ!!

*

ಅವಳಿನ್ನೂ ಈಗ ತಾನೆ ಹದಿಹರೆಯ ಕಳೆದವಳಂತೆ ಇದ್ದಾಳೆ. ಪ್ರಪೋಸು ಮಾಡಬರುವ ಹುಡುಗರಿಗೆ “ಎಂಟು ವರ್ಷದ ಮಗು ಫ್ರೀ” ಅಂದು ಕೆಣಕುತ್ತ ಬೇಸ್ತುಬೀಳಿಸುತ್ತಾಳೆ.

ಹೀಗೇ ಅಲೆಯುತ್ತಿರುತ್ತಾಳೆ ದಿನವೆಲ್ಲ. ದುಡಿತ ಮುಗಿದರೂ ಮನೆ ಸೇರದೆ ನಾಟಕ, ಉಪನ್ಯಾಸ, ಸೆಮಿನಾರುಗಳಲ್ಲಿ ಕಳೆದುಹೋಗುತ್ತಾಳೆ.

ಅವಳ ವ್ಯಾನಿಟಿ ಬ್ಯಾಗಲ್ಲಿ ಸೇಫ್ಟಿ ಪಿನ್ನಿನ ಗೊಂಚಲು. ಕಾಲಿಗೆ ಬೆಲ್ಟಿಲ್ಲದ ಚಪ್ಪಲಿ. ಒಂಟಿಹೆಣ್ಣಿನ ‘ಬೆಲೆ’ ಅವಳಿಗೆ ಗೊತ್ತಿದೆ.
ಅವಳ ರಾತ್ರಿಗಳೆಲ್ಲ ಬಾಲ್ಕನಿಯಲ್ಲಿ ಕುಂತೇ ಕಳೆಯುತ್ತದೆ.

ಅಲ್ಲಿ ರಾಜಕೀಯಕ್ಕೆ, ವ್ಯಾಪಾರಕ್ಕೆ, ಕೂಲಿಗೆ ಜನರನ್ನ ಸೆಳೆಯೋದಿಕ್ಕೆ- ಎಲ್ಲದಕ್ಕೂ ಅಮ್ಮ ಬಿಟ್ಟ ಮಗು ಚಲಾವಣೆಯಾಗುತ್ತಿರುತ್ತದೆ.

ತೊಳೆದ ಮುಖ ನೋಡುತ್ತ ಕನ್ನಡಿ ಎದುರು ಕುಂತ ಇವಳು ತುಟಿಯ ನಡುಕ ಕಾಣದ ಹಾಗೆ ಇರುಳಲ್ಲೂ ಲಿಪ್ ಸ್ಟಿಕ್ಕು ಮೆತ್ತಿಕೊಳ್ಳುತ್ತಾಳೆ. ಸೋತ ಕಣ್ಣಿನ ಕುರುಹು ಮುಚ್ಚಲು ಕಾಡಿಗೆ ತುಂಬುತ್ತಾಳೆ. ಮುಖದ ನೋವು ಮರೆಮಾಡಲು ಮತ್ತೆ ಮತ್ತೆ ಕಾಂಪ್ಯಾಕ್ಟು….

“ಅಮ್ಮಾ…” ಆಳದಿಂದೆದ್ದ ದನಿ ಎಲ್ಲವನ್ನೂ ಕೊಚ್ಚಿಹೋಗುತ್ತದೆ.
ಮುಖದ ರಂಗು ಕಳೆಯುತ್ತದೆ.

ಸಂಸಾರವೆಂಬ ಹೆಣ!

chetana.jpg

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ

ನಿನ್ನನ್ನ ಏನೂ ಅಂತ ಪರಿಚಯ ಮಾಡಿಸ್ಬೇಕಿತ್ತು ನಾನು?
ಅವನು ಕೇಳಿದ್ದ.
 
ಕೈಲಿದ್ದ ಮೊಬೈಲು ಬಿಸಾಕಿ ನೆಲಕ್ಕೆ ಹೆಜ್ಜೆ ಬಡಿಯುತ್ತ ರೂಮೊಳಗೆ ಹೋಗಿ ಬಾಗಿಲು ಬಡಚಿಕೊಂಡಳು.

*

ಎರಡು ವರ್ಷವಾಗಿತ್ತು ಅವರ ಸ್ನೇಹಕ್ಕೆ. ಅದು ಪ್ರೇಮವೂ ಆಗಿತ್ತು. ಮದುವೆ – ಸಂಸಾರ ಇತ್ಯಾದಿಯಲ್ಲಿ ನಂಬಿಕೆ ಇರದೆ ಒಂದೇ ಗೂಡಲ್ಲಿ ಒಟ್ಟೊಟ್ಟಿಗೆ ಕಿತ್ತಾಡಿಕೊಂಡು ಉಳಿದಿದ್ದರು.

ಅವಳು ದಿಟ್ಟ ಹುಡುಗಿ. ದಿನದಿನವೂ ಅಪ್ಪ ಅಮ್ಮನಿಗೆ ಝಾಡಿಸಿ ಒದೆಯೋದನ್ನ ನೋಡುತ್ತಲೇ ಬೆಳೆದಿದ್ದಳು. ಉಪ್ಪಿಟ್ಟು ಮಾಡಿದ ಹಸಿ ಬಾಣಂತಿ ಚಿಕ್ಕಮ್ಮನನ್ನ ಚಿಕ್ಕಪ್ಪ ಕುತ್ತಿಗೆ ಹಿಡಿದು ನೂಕಿದಾಗ ಅವಳು ಸತ್ತೇ ಹೋಗಿದ್ದಳು. ಹಾಡುಹಗಲೇ ಅಪ್ಪನೊಟ್ಟಿಗೆ ಸೇರಿ ಅಂವ ಹೆಣವನ್ನ ಬಾವಿಗೆ ನೂಕಿ, ‘ಬಾಣಂತಿ ಸನ್ನಿ ಹಿಡಿದು ಸತ್ತಳು’ ಅಂತ ಮಾವನ ಮನೆಗೆ ತಾರು ಕಳಿಸಿದ್ದ.
ಇದೆಲ್ಲ ನೋಡುತ್ತ ಬೆಳೆದ ಪರಿಣಾಮವೋ ಏನೋ, ಅವಳೊಟ್ಟಿಗೆ ಗಂಡಸಿನೆಡೆಗೆ ಅರಿವಿಲ್ಲದ ಹಾಗೊಂದು ತಾತ್ಸಾರ ಕೂಡ ಬೆಳೆಯುತ್ತಿತ್ತು. ಅದೇ, ಅವಳು ಮದುವೆಯಾಗದೆ ಉಳಿಯುವ ಹಾಗೆ ಪ್ರೇರೇಪಿಸಿತ್ತು.

ಆದರೇನು? ಕಾಮ ಗಂಡಸಾದರೂ ಅವನನ್ನ ದ್ವೇಷಿಸಿ ಗೆಲ್ಲೋದು ಸುಲಭವಲ್ಲವಲ್ಲ!? ಹಾಗಂತ ಅವಳದು ಕಚ್ಚಾ ಹರೆಯದ ಸೆಳೆತವೇನೂ ಆಗಿರಲಿಲ್ಲ. ಜತೆಯಲ್ಲಿ ಕ್ಯಾಮೆರಾ ನೇತುಹಾಕಿಕೊಂಡು ಊರೂರು ಅಲೆಯಲು ಬರುತ್ತಿದ್ದ ಅವನು ತನಗೆ ಎಲ್ಲ ರೀತಿಯಲ್ಲೂ ಸರಿಹೊಂದುವ ಹಾಗೆ ಕಂಡ.

ಅಂವ ಕೂಡ ಮೂವತ್ತು ದಾಟಿದ್ದರೂ ಮದುವೆಯಾಗದೆ ಇದ್ದುಬಿಟ್ಟಿದ್ದ. ಅಲೆಮಾರಿ ಬದುಕಿನ ತನ್ನನ್ನ ಹೆಂಡತಿಯಾಗಿ ಬರುವವಳು ಕಣ್ಣೀರಲ್ಲಿ ಕಟ್ಟಿಹಾಕುವಳೆಂಬ ಹೆದರಿಕೆಯಿತ್ತಂತ ಅವನಿಗೆ!

ಹೀಗೆ ಕಟ್ಟಿಸಿಕೊಳ್ಳಲು ಇಷ್ಟವಿರದ ಅವರಿಬ್ಬರೂ ಎರಡು ಮನೆಯಿಂದ ಒಂದಕ್ಕೆ ಶಿಫ್ಟಾದರು. ಯಾವ ಕರಾರು- ತಕರಾರುಗಳೂ ಇಲ್ಲದೆ ಒಟ್ಟಿಗೆ ಇರಲು ಶುರುವಿಟ್ಟಿದ್ದರು.

ಮೊದಮೊದಲು ಎಲ್ಲ ಚೆಂದವಿತ್ತು. ಅವಳು ಮೊಟ್ಟೆ ಒಡೆದರೆ ಅಂವ ಆಮ್ಲೆಟ್ ಬೇಯಿಸುವನು. ಅಂವ ವಾಶಿಂಗ್ ಮೆಶೀನು ಚಾಲೂ ಮಾಡಿದರೆ ಅವಳು ಬಟ್ಟೆ ಒಣಗಿಸುವಳು. ಹೀಗೇ, ಕೆಲಸ- ಖರ್ಚುಗಳೆರಡೂ ಸಮ ಸಮ ಹಂಚಿಕೆಯಾಗಿತ್ತು.
 
ಹಾಳು ಹೆಣ್ತನ ಸುಮ್ಮನಿರಬೇಕಲ್ಲ?  ಅಂವ ಪಾತ್ರೆ ತೊಳೆಯೋದು, ಕಸ ಗುಡಿಸೋದು ಇವೆಲ್ಲ ಅವಳನ್ನ ಕಲಕಿ ‘ಪಾಪ’ ಅನಿಸುವ ಹಾಗಾಗಿಬಿಡುತ್ತಿತ್ತು. ಬರಬರುತ್ತ ಅವೆಲ್ಲ ಕೆಲಸಗಳಿಂದ ಅಂವನ್ನ ಆಚೆ ಹಾಕಿದಳು.
 
523893785_d815ac670a.jpg

ಅಂವ ಅದನ್ನ ಹೇಗೆ ಅರ್ಥೈಸಿಕೊಂಡನೋ? ಮನೆಯಲ್ಲಿ ಸರಿ ತಪ್ಪು ಶುರುಮಾಡಿದ. ಅಂತೂ ಮದುವೆಯಿಲ್ಲದ ಸಂಸಾರ ಅಧಿಕೃತವಾಗಿ ಆರಂಭವಾಯಿತು!
ಜತೆಯಿರಲು ಶುರು ಮಾಡಿದಾಗಿಂದಲೂ, ಅದಕ್ಕೆ ಮೊದಲೂ ಅವರು ಒಟ್ಟೊಟ್ಟಿಗೆ ಊರೂರು ಅಲೆಯೋದಿತ್ತು. ಅವರ ಕೆಲಸವೇ ಅಂಥದ್ದು. ಆಗೆಲ್ಲ ಎದುರು ಸಿಕ್ಕವರಿಗೆ ‘ಇಂವ ನನ್ನ ಗೆಳೆಯ’, ‘ಇವಳು ನನ್ನ ಗೆಳತಿ’ ಅಂತೆಲ್ಲ ಪರಿಚಯ ಮಾಡಿಸೋದಿತ್ತು. ಆಗ ಅದೊಂದು ಹೆಮ್ಮೆಯ ಸಂಗತಿ.
ಆದರೆ, ಇತ್ತೀಚೆಗೆ ಎಲ್ಲವೂ ಹಾಗೇ ಉಳಿದಿಲ್ಲ! ಅದನ್ನವಳು ಗಮನಿಸ್ತಿದಾಳೆ.

ಅದೊಮ್ಮೆ, ಅವಳ ಮೆಚ್ಚಿನ ತಾಣಕ್ಕೆ ಅಂವ ಹೊರಟಿದ್ದ. ಓಹ್! ಕೆಲಸ ಮುಗಿಸಿ ಒಂದಿನ ಹಾಯಾಗಿದ್ದು ಬರಬಹುದು!! ಖುಶಿಯಾದಳು. 
ರೆಡಿಯಾಗಿ ನಿಂತಿದ್ದ ಅವಳ ಸೂಟ್ ಕೇಸು ನೋಡಿದ ಅಂವ. ನಾಲ್ಕು ದಿನ ನಾನೆಲ್ಲೋ ಹೋಗಿಬರುವುದಿದೆ ಅಂದು ಹೊರಟುಬಿಟ್ಟ. ಅವಳ ಪಾಡಿಗೆ ಅವಳೂ ಹೊರಡಲು ಯಾವುದರ ಅಡ್ಡಿಯಿರಲಿಲ್ಲ. ಆದರೆ, ಹಾಗೆ ಅವನೊಟ್ಟಿಗೆ ಕರೆಯದೆ ಹೋಗುವುದು ಸ್ವಾಭಿಮಾನಕ್ಕೆ ಕೇಡು!
ಕೂದಲು ತಿರುವುತ್ತ ತನ್ನ ಯೋಚನೆಗಳಿಗೆ ತಾನೇ ಸಿಟ್ಟಾಗಿ ಉಗಿದುಕೊಂಡಳು. “ಬೇರೇನೋ ಕೆಲಸವಿದ್ದೀತು, ಇದಕ್ಯಾಕೆ ಹೊಸತೊಂದು ಅರ್ಥ ಹುಡುಕಿ ಮೂಲೆ ತಡಕಬೇಕು? ಶುದ್ಧ ಹೆಂಗಸರ ಹಾಗೆ!!” ಅಂತ ನಕ್ಕು ಹಗುರಾಗಲು ಹೆಣಗಿದಳು.
 
ಅಂವ ಕೆಲಸ ಮುಗಿಸಿ ಬಂದ ದಿನ ಇವಳು ತನ್ನ ಕೆಲಸಕ್ಕೆ ಹೋಗಿದ್ದಳು. ಅವಳು ಬರುವ ಹೊತ್ತಿಗೆ ಇಂವ ಮತ್ತೆಲ್ಲಿಗೋ ಹೊರಡುವ ತಯಾರಿ ನಡೆಸಿದ್ದ. ಬರಬರುತ್ತ ಹಾಗೆ ಅವಳನ್ನ ಬಿಟ್ಟು ತಾನೊಬ್ಬನೆ ಹೊರಡುವುದು ಆದತ್ತಾಗಿಬಿಟ್ಟಿತು ಅವನಿಗೆ. ಹಾಗೆಲ್ಲ ಹೋಗುವ ಮುನ್ನ, ಬಂದಮೇಲೆ ಅವನ ಒಲವು ನೂರು ಪಟ್ಟಾಗುತ್ತಿತ್ತು ಅವಳಮೇಲೆ. ಅಂವ ಈಗ ಕೊಂಚ ಪಾಪ್ಯುಲರ್ ಕೂಡ ಆಗಿದ್ದ.  ಅಂವ ತೆಗೆಯುವ ಫೋಟೋಗಳು, ಅವನ ಬರವಣಿಗೆ- ಇವೆಲ್ಲ  ಭಾರೀ ಸುದ್ದಿ ಮಾಡಿದ್ದವು. ಜನ ಅಂವನ್ನ ಗುರುತಿಸತೊಡಗಿದ್ದರು. ಅವನ ದುಡಿಮೆಯೂ ಹೆಚ್ಚಾಗತೊಡಗಿತು. ಅವಳು ಮನೆ ಮುದ್ದಾಗಿರಲಿ ಅಂತ ಅಂವ ಆಶಿಸತೊಡಗಿದ. ಬೋರು ಅನ್ನುತ್ತಿದ್ದ ಅವಳಿಗೆ ತನ್ನ ಕೆಲಸಗಳಲ್ಲಿ ಪಾಲು ಕೊಟ್ಟು ಮನೇಲಿ ಕುಂತು ಮಾಡು ಅನ್ನತೊಡಗಿದ! ಇವಳ ಹೆಜ್ಜೆ ತಿರುಗಾಟಕ್ಕೆ ತುಡಿಯತೊಡಗಿತು!

ಅದೆಂಥ ಕಮಿಟ್ ಮೆಂಟೋ ಹೆಣ್ಣುಮಕ್ಕಳದು! ಮನೆ- ಮದುವೆ ಬೇಡವೆನ್ನುತ್ತಲೆ ಅವನಿಗೆ ತಾನು ಬದ್ಧಳಾಗಿ ಉಳಿದುಬಿಟ್ಟಳು ಅವಳು. ತನ್ನೆಲ್ಲ ಪ್ರೀತಿಯನ್ನ ಅವನ ಮೇಲೆ ಸುರಿಸುತ್ತ, ತನ್ನ ಆಸೆಗಳನ್ನ ಹಾಗೇ ಬಲಿ ಕೊಡುತ್ತ…
ಅಷ್ಟಾದರೂ ಅವಳಿಗೆ ತನಗೇನಾಗುತ್ತಿದೆ ಅನ್ನುವ ಖಬರಿರಲಿಲ್ಲ. ಅವಳು ತೀರ ಆಸೆ ಪಟ್ಟಿದ್ದ ಮಹತ್ವದ ಶೂಟಿಂಗಿಗೆ ಹೋಗುವಾಗ ಅಂವ ಅವಳನ್ನ ಬೇಡ ಅಂದುಬಿಟ್ಟಿದ್ದ. ಅದು ಅವನ ಅಪ್ಪ ಅಮ್ಮ ಇರುವ ಊರಾಗಿತ್ತು. ಅಲ್ಲಿಗೆ ಹೋಗಲೆಂತಲೇ ಅವಳು ಹೊಸ ಸೀರೆ ಕೊಂಡಿಟ್ಟಿದ್ದಳು! ಯಾಕೆ? ಅಂಥದೊಂದು ತಯಾರಿಗೆ ಅವಳನ್ನು ಹಚ್ಚಿದ್ದ ಒಳಗಿನ ಸಂಭ್ರಮ ಯಾವುದಿತ್ತು?
ಅದಲ್ಲ ವಿಷಯ, ಅಂವನ್ನ ಅವಳು ಬೇಡವನ್ನುವ ಹಾಗೆ ಮಾಡಿದ್ದ ಒತ್ತಡ ಎಂಥದ್ದು?

*

ಇನ್ನು ಸಹಿಸದಾದಳು. ‘ಇನ್ನೆಷ್ಟು ದಿನ ಒಳಗೊಳಗೆ ನಾನೊಬ್ಬಳೆ ಗುದ್ದಾಡಿಕೊಳ್ಳಲಿ?’ ಅವಡುಗಚ್ಚಿದಳು. ನೇರಾನೇರ ತರಾಟೆಗೆ ನಿಂತಳು, “ಹೇಳು ಯಾಕೆ ನನ್ನ ಜತೆ ತಪ್ಪಿಸಿ ತಿರುಗಾಡುತ್ತೀ ಇತ್ತೀಚೆಗೆ?”
ಅಂವ ತಡವರಿಸಿದ. “ಜನ ಈಗ ನನ್ನ ಗುರುತು ಹಿಡೀತಾರೆ… ಜತೆಯಲ್ಲಿ ನೀನಿದ್ದರೆ… ” ಅವನ ದನಿಯಲ್ಲಿ ಗಿಲ್ಟಿನ ವಾಸನೆ.

“ಇದ್ದರೆ? ಏನೀಗ? ಮೊದಲೂ ಇರ್ತಿದ್ದೆನಲ್ಲ!?”

“ಆಗಿನದು ಬೇರೆ ಮಾತು. ಈಗ, ನಿನ್ನನ್ನ ನಾನು ಏನಂತ ಪರಿಚಯ ಮಾಡಿಕೊಡಲಿ? ನಾಳೆ ಪೇಪರಲ್ಲಿ ಬರೆದರೆ…”
ಅಂವ ಇನ್ನೂ ಏನೇನು ಹೇಳ್ತಿದ್ದನೋ?

ಅವಳೆಸೆದ ಮೊಬೈಲು ಹಾಲ್ ನಲ್ಲಿ ಬಿದ್ದಿತ್ತು. ರೂಮಿನ ಕದ ಧಬಾರನೆ ಮುಚ್ಚಿತ್ತು.

Previous Older Entries

%d bloggers like this: